ದೇವೋತ್ತಮ ಪರಮ ಪುರುಷನ ಸ್ತ್ರೀ ಪ್ರತಿರೂಪ
ದೇವೀ ಕೃಷ್ಣಮಯಿ ಪ್ರೋಕ್ತಾ ರಾಧಿಕಾ ಪರದೇವತಾ।
ಸರ್ವಲಕ್ಷ್ಮೀಮಯಿ ಸರ್ವ ಕಾಂತಿಃ ಸಮ್ಮೋಹಿನೀಪರಾ ||
(ಬೃಹದ್ ಗೌತಮೀಯ ತಂತ್ರ)

”ದೇವಿಯರಲ್ಲೇ ಪರಮೋನ್ನತಳಾದ ಶ್ರೀಮತಿ ರಾಧಾರಾಣಿ, ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ನೇರ ಅಂಶವೇ ಆಗಿದ್ದಾಳೆ. ಆಕೆಯೇ ಎಲ್ಲ ಭಾಗ್ಯದೇವತೆಯರ ಕೇಂದ್ರಬಿಂದು. ಸರ್ವಾಕರ್ಷಕನಾದ ಪರಮ ಪುರುಷನನ್ನೇ ಆಕರ್ಷಿಸಬಲ್ಲ ಆಕರ್ಷಣೆಯನ್ನು ಅವಳು ಹೊಂದಿದ್ದಾಳೆ. ಅವಳು ಭಗವಂತನ ಆದ್ಯಶಕ್ತಿಯಾಗಿದ್ದಾಳೆ.”
ಶ್ರೀಮತಿ ರಾಧಾರಾಣಿ ಶ್ರೀಕೃಷ್ಣನ ಪ್ರಿಯಸಖಿಯಾಗಿ ನಮಗೆಲ್ಲ ಸುಪರಿಚಿತಳು. ಆದರೆ ರಾಧೆಯ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರದೆ, ಆಕೆಯನ್ನು ಕೇವಲ ವ್ರಜಭೂಮಿಯ ಒಬ್ಬಗೋಪಿಯಾಗಿ, ಕೃಷ್ಣನ ಪ್ರೇಯಸಿಯರಲ್ಲಿ ಒಬ್ಬಳಾಗಿ ಅಪಾರ್ಥ ಮಾಡಿಕೊಂಡುಬಿಡುತ್ತೇವೆ.
ರಾಧಾಕೃಷ್ಣರ ಪರಮೋನ್ನತ ಪ್ರೇಮಲೀಲೆಯನ್ನು ಲೌಕಿಕ ಬುದ್ಧಿಯ ಸಾಮಾನ್ಯ ಜನರು ತಪ್ಪಾಗಿ ಭಾವಿಸಿ, ತಮಗೆ ತೋಚಿದ ಅರ್ಥಗಳನ್ನು ನೀಡುವರೆಂಬುದನ್ನು ಮುಂಗ೦ಡಿದ್ದ ನಮ್ಮ ಪೂರ್ವದ ಆಚಾರ್ಯರು ಬೇಕೆಂದೇ ಈ ಲೀಲೆಯನ್ನು ಹೆಚ್ಚು ಸಾರ್ವಜನಿಕವಾಗಿ ವಿವರಿಸದೆ ಬಿಟ್ಟಿದ್ದಾರೆ.
ರಾಧಾಕೃಷ್ಣರ ನೈಜ ಸ್ವರೂಪವನ್ನು ಅರಿತುಕೊಳ್ಳಲು ಕೃಷ್ಣಪಜ್ಜೆಯನ್ನು ಹೊಂದುವುದು ಅತ್ಯವಶ್ಯ. ಕೃಷ್ಣಪ್ರಜ್ಞಾವಂತರು ಮಾತ್ರವೇ ಈ ದಿವ್ಯಲೀಲೆಯನ್ನು ಕೆಲಮಟ್ಟಿಗೆ ಅರ್ಥೈಸಿಕೊಳ್ಳಬಲ್ಲರು. ಶುದ್ಧ ವೈಷ್ಣವ ಭಕ್ತರು ಈ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದಿರುವರು.
ರಾಧಾರಾಣಿ, ದೇವೋತ್ತಮ ಪರಮ ಪುರುಷನ ಹ್ಲಾದಿನೀ ಶಕ್ತಿ. ಸೂರ್ಯನ ಕಿರಣವು ಸೂರ್ಯನಿಗಿಂತ ಹೇಗೆ ಬೇರೆಯಲ್ಲವೋ, ಶಕ್ತಿವಂತನಿಗಿಂತ ಶಕ್ತಿಯು ಹೇಗೆ ಬೇರೆಯೆನಿಸದೋ ಹಾಗೆಯೇ ರಾಧಾಕೃಷ್ಣರು ಅಭಿನ್ನರಾಗಿದ್ದಾರೆ. ರಾಧೆಯಿಲ್ಲದೆ ಕೃಷ್ಣನಿಲ್ಲ, ಕೃಷ್ಣನಿಲ್ಲದೆ ರಾಧೆಯಿಲ್ಲ.
ಇದರಿಂದಾಗಿಯೇ ಗೌಡೀಯ ವೈಷ್ಣವ ಸಂಪ್ರದಾಯದಲ್ಲಿ, ಮೊದಲು ರಾಧಾರಾಣಿಗೆ ನಮನ ಸಲ್ಲಿಸಿ, ಅನಂತರ ಶ್ರೀ ಕೃಷ್ಣನನ್ನು ಪೂಜಿಸುವ ಪರಿಪಾಠವಿದೆ. ಶಕ್ತಿ ಮೊದಲು, ಅನಂತರ ಶಕ್ತಿವಂತ. ಆದ್ದರಿಂದಲೇ ಅವರು “ರಾಧಾಕೃಷ್ಣ” ಎಂದು ಕರೆಯಲ್ಪಡುವುದು. ಸೀತಾರಾಮ, ಲಕ್ಷ್ಮೀನಾರಾಯಣ, ಹೀಗೆ… ಎಲ್ಲೆಡೆಯಲ್ಲಿಯೂ ಶಕ್ತಿ – ಅಂದರೆ ರಾಧೆಯೇ ಮೊದಲು.
ಶಕ್ತಿ, ಶಕ್ತಿವಂತನ ಅಂತರ್ಯದಲ್ಲಿರುತ್ತದೆ. ಶ್ರೀಕೃಷ್ಣನಲ್ಲಿಯೇ ರಾಧೆಯೂ ಇದ್ದಾಳೆ. ಯಾವಾಗ ಕೃಷ್ಣನು ಸಂತೋಷವನ್ನು ಅನುಭವಿಸಲು ಬಯಸುತ್ತಾನೋ, ಆಗ ಅವನು ರಾಧಾರಾಣಿಯಾಗಿ ಆವಿರ್ಭವಿಸುತ್ತಾನೆ. ಸ್ವತಃ ತನ್ನ ಹೊರತಾಗಿ, ಭಗವಾನ್ ಶ್ರೀಕೃಷ್ಣನಿಗೆ ಆನಂದ ನೀಡಬಲ್ಲ ಹೊರಗಿನ ಶಕ್ತಿಯಾದರೂ ಯಾವುದಿದೆ?
ಈ ಹ್ಲಾದಿನೀ ಶಕ್ತಿ ಅಥವಾ ರಾಧೆಯ ಮುಖಾಂತರ ತನ್ನನ್ನು ತಾನು ಅರಿಯುವ ಸಲುವಾಗಿ ಭಗವಂತನು ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಆವಿರ್ಭವಿಸಿದರು. ಶ್ರೀಕೃಷ್ಣನೆಡೆಗೆ ಅತ್ಯುನ್ನತ ಪ್ರೇಮಭಾವ ಹೊಂದಿದ ರಾಧಾರಾಣಿಯ ಭಾವ ವಿಶೇಷಗಳು ಮತ್ತು ಉಜ್ವಲ ಸುವರ್ಣ ದೇಹಕಾಂತಿಯನ್ನೊಳಗೊಂಡು, ಸ್ವಯಂ ಶ್ರೀಕೃಷ್ಣನೇ ಚೈತನ್ಯನಾಗಿ ಅವತರಿಸಿದನು. ಹೀಗಾಗಿ ಶ್ರೀಚೈತನ್ಯ ಮಹಾಪ್ರಭುಗಳು ಶ್ರೀ ಶ್ರೀ ರಾಧಾಕೃಷ್ಣರ ಸಂಯುಕ್ತ ಅವರತಾರವೆನಿಸಿದ್ದಾರೆ.
ಪರಮ ಪುರುಷನ ಆದ್ಯಶಕ್ತಿಯಾದ ರಾಧಾರಾಣಿಯೇ ಇನ್ನಿತರ ದೇವಿಯರ ಮೂಲ ಸ್ರೋತವಾಗಿದ್ದಾಳೆ. ರಾಮ, ವಿಷ್ಣು ಶಿವ ಇತ್ಯಾದಿ ಅವತಾರಗಳು ಮತ್ತು ದೇವತೆಗಳು ಭಗವಾನ್ ಶ್ರೀಕೃಷ್ಣನ ವಿಸ್ತರಣೆಗಳಾಗಿರುವಂತೆ; ಸೀತಾ, ಲಕ್ಷ್ಮಿ, ಪಾರ್ವತಿ – ಹೀಗೆ ಉಳಿದ ಭಾಗ್ಯದೇವತೆಯರು ರಾಧಾರಾಣಿಯ ವಿಸ್ತರಣೆಗಳೇ ಆಗಿದ್ದಾರೆ.
”ಎಲ್ಲ ಲಕ್ಷ್ಮಿಯರು ರಾಧೆಯ ಉಜ್ವಲ ಶರೀರದಿಂದಲೇ ಸೌಂದರ್ಯವನ್ನು ಪಡೆಯುತ್ತಾರೆ. ಶ್ರೀಕೃಷ್ಣನ ಎಲ್ಲ ಕಾಮನೆಗಳೂ ರಾಧಾರಾಣಿಯ ರೂಪದಲ್ಲಿ ಸುಪ್ತವಾಗಿವೆ. ಭಗವಂತನು ತನ್ನ ಸೌಂದರ್ಯ ಮತ್ತು ತೇಜಸ್ಸಿನಿಂದ ಜಗತ್ತನ್ನು ಮೋಹಗೊಳಿಸಿದರೆ, ರಾಧಾರಾಣಿಯು ಅಂತಹಾ ಕೃಷ್ಣನನ್ನೇ ತನ್ನ ರೂಪದಿಂದ ಮೋಹಗೊಳಿಸುತ್ತಾಳೆ. ಆದ್ದರಿಂದ ರಾಧಾರಾಣಿಯೇ ಪರಮೋನ್ನತ ದೇವಿಯಾಗಿದ್ದಾಳೆ. ರಾಧೆಯೇ ಪರಮಶಕ್ತಿ, ಕೃಷ್ಣ- ಪರಮಶಕ್ತಿವಂತನಾಗಿದ್ದಾನೆ. (ಚೈತನ್ಯಚರಿತಾಮೃತ ಆದಿಲೀಲಾ, 4.82,84,87,96)

ವ್ರಜಭೂಮಿಯಲ್ಲಿ ರಾಧಾರಾಣಿ …
ಐದು ಸಾವಿರ ವರ್ಷಗಳ ಹಿಂದೆ ಭಗವಾನ್ ಶ್ರೀಕೃಷ್ಣನು ಭೂಮಿಯಲ್ಲಿ ಅವತರಿಸಿದಾಗ, ಅವನ ಆಧ್ಯಾತ್ಮಿಕ ಧಾಮ ಗೋಲೋಕ ವೃಂದಾವನದ ನಿರಂತರ ಸಂಗಾತಿಗಳೆಲ್ಲರೂ ಭೂಮಿಯಲ್ಲಿ ಜನ್ಮವೆತ್ತಿದರು. ಹೀಗೆ ರಾಧಾರಾಣಿಯೂ ಭಾದ್ರಪದ ಶುಕ್ಲ ಅಷ್ಟಮಿಯಂದು ಗೋಕುಲದ ಸಮೀಪವಿರುವ ವರಸಾನದಲ್ಲಿ ಆವಿರ್ಭವಿಸಿದಳು.
ಮಕ್ಕಳಿಲ್ಲದ ವೃಷಭಾನು ರಾಜನು ಬಂಗಾರದ ಹೊಳಪಿನ ಸುಂದರ ದೇಹದ ಈ ದಿವ್ಯ ಸುಂದರ ಶಿಶುವನ್ನು ತನ್ನ ಪತ್ನಿ ಕೀರ್ತಿದಾ ಸುಂದರಿಗೆ ಕೊಟ್ಟನು. ಅಂದಿನಿಂದ ರಾಧಾರಾಣಿ, ಈ ದಂಪತಿಯ ಕಣ್ಮಣಿಯಾಗಿ ಬೆಳೆದಳು.
ಅಲೌಕಿಕ ಪಾರಮಾರ್ಥಿಕ ಸೌಂದರ್ಯದಿಂದ ವ್ರಜವಾಸಿಗಳ ನೆಚ್ಚಿನ ಗೋಪಿಕೆಯಾದ ರಾಧಾರಾಣಿ, ಸರ್ವಾಕರ್ಷಕ ಶ್ರೀಕೃಷ್ಣನನ್ನೇ ತನ್ನೆಡೆಗೆ ಆಕರ್ಷಿಸಿದಳು. ಕೃಷ್ಣನು ಆಕೆಯ ಆಜ್ಞಾನುಧಾರಕನಾಗಿರುತ್ತಿದ್ದುದರಿಂದ ಗೋಪಜನರೆಲ್ಲರೂ ಆಕೆಯು ಸರ್ವಶ್ರೇಷ್ಠಳೆಂದು ಮನ್ನಿಸಿ, ಆಕೆಯನ್ನೇ ಕೃಷ್ಣನಿಗಿಂತ ಹೆಚ್ಚಾಗಿ ಓಲೈಸುತ್ತಿದ್ದರಂತೆ.
ನೇರವಾಗಿ ಕೃಷ್ಣನನ್ನು ಪಡೆಯುವುದು ಕಷ್ಟ. ರಾಧೆಯನ್ನು ಒಲಿಸಿಕೊಳ್ಳುವುದು ಸುಲಭ. ರಾಧೆಯ ಮೂಲಕ ಶ್ರೀ ಕೃಷ್ಣನನ್ನು ಹೊಂದುವುದು ಇನ್ನು ಸುಲಭ ಏಕೆಂದರೆ, ರಾಧಾರಾಣಿಯು ಶ್ರೀಕೃಷ್ಣನ ದಯಾವಂತ ಪ್ರಕೃತಿಯೂ ಆಗಿದ್ದಾಳೆ.
ರಾಧಾರಾಣಿಯ ಈ ಕೆಲವು ವರ್ಣನೆಗಳನ್ನು ಓದುವುದರಿಂದ, ವ್ರಜವಾಸಿಗಳು ಆಕೆಯೆಡೆ ಏಕೆ ಅಷ್ಟೊಂದು ಆಕರ್ಷಿತರಾಗಿದ್ದರೆಂಬುದು ಸ್ಪಷ್ಟವಾಗುತ್ತದೆ.
ರಾಧೆಯು ಅಗಣಿತ ಗುಣಸಾಗರಿಯಾಗಿದ್ದಾಳೆ. ಆದರೂ ಅವುಗಳಲ್ಲಿ ಈ ಇಪ್ಪತ್ತೈದು ಗುಣಗಳು ಪ್ರಮುಖವೆನಿಸಿವೆ.
ಮಾಧುರ್ಯ, ತಾರುಣ್ಯ, ಚಂಚಲ, ಮಂದಹಾಸ ಮಂಗಳಕರ ರೇಖೆಗಳು, ಸೌಗಂಧ, ಇನಿದನಿ, ಮಾತುಗಾರಿಕೆ, ತಿಳಿಹಾಸ್ಯ, ಸಾತ್ತ್ವಿಕತೆ, ಕಾರುಣ್ಯ, ಚಾತುರ್ಯ, ಕರ್ತವ್ಯಪರತೆ, ಲಜ್ಜೆ, ಗೌರವಾದರ, ಶಾಂತತೆ, ಆಪ್ತತೆ, ಆನಂದಾನುಭೂತಿ, ಅತ್ಯುನ್ನತ
ಪ್ರೇಮ, ಗೋಕುಲದ ಪ್ರೇಮ ವ್ಯವಹಾರಗಳ ಖನಿ, ಭಕ್ತಾಗ್ರಣಿ, ವಿನಮ್ರತೆ, ಸ್ನೇಹಮಯಿ, ಪ್ರಮುಖಗೋಪಿ, ಶ್ರೀಕೃಷ್ಣನನ್ನು ನಿಯಂತ್ರಿಸಬಲ್ಲಾಕೆ.
ಇವಿಷ್ಟೇ ಅಲ್ಲದೆ, ರಾಧಾರಾಣಿಯು ಶ್ರೀಕೃಷ್ಣನಂತೆ ಅನಿಯಮಿತ ಅಲೌಕಿಕ ಗುಣಗಳನ್ನು ಹೊಂದಿದ್ದಾಳೆ. (ಉಜ್ವಲ ನೀಲಮಣಿ, ಶ್ರೀರಾಧಾಪ್ರಕರಣ, 11-15)
ಶ್ರೀಕೃಷ್ಣನ ಆಪ್ತ ಸಂಗಾತಿಗಳಲ್ಲಿ ಮೂರು ಬಗೆಯೆಂದು ಹೇಳಲಾಗಿದೆ. ಅವರು ಭಾಗ್ಯದೇವತೆಯರಾದ ಲಕ್ಷ್ಮಿಯರು, ದ್ವಾರಕೆಯ ರಾಣಿಯರು ಮತ್ತು ವೃಂದಾವನದ ಗೋಪಿಯರು. ಇವರೆಲ್ಲರೂ ಅಸ್ತಿತ್ವ ಪಡೆದಿರುವುದು ರಾಧಾರಾಣಿಯಿಂದ. ಲಕ್ಷ್ಮಿಯರು ರಾಧೆಯ ಆಂಶಿಕ ಅವತಾರಗಳಾಗಿದ್ದರೆ, ವೈಕುಂಠ ಮತ್ತು ದ್ವಾರಕೆಯ ರಾಣಿಯರು ಆಕೆಯ ಪ್ರತಿಬಿಂಬಗಳಾಗಿದ್ದಾರೆ.
ವ್ರಜಭೂಮಿಯ ಗೋಪಿಯರು ರಾಧೆಯ ವಿಸ್ತರಣೆಗಳಾಗಿದ್ದು, ರಾಧಾಕೃಷ್ಣರ ದಿವ್ಯ ಪ್ರೇಮಲೀಲೆಯಲ್ಲಿ ಸಹಕಾರಿಗಳಾಗಲು ಅವತರಿಸಿದವರಾಗಿದ್ದಾರೆ. ಅವರೆಲ್ಲರೂ ಭಿನ್ನ ರಸ-ಭಾವಗಳನ್ನು ಬಿಂಬಿಸುತ್ತ, ಶ್ರೀಕೃಷ್ಣನಿಗೆ ರಾಸ ನೃತ್ಯ ಮತ್ತಿತರ ಲೀಲೆಗಳ ರಸಸ್ವಾದ ಮಾಡಿಸಲೆಂದೇ ಜನ್ಮವೆತ್ತಿ ಬಂದವರಾಗಿದ್ದಾರೆ. (ಚೈತನ್ಯ ಚರಿತಾಮೃತ ಆದಿಲೀಲಾ, 4.75-81)
ಈ ಎಲ್ಲ ಗೋಪಿಕೆಯರಲ್ಲಿ ರಾಧಾರಾಣಿ ಮುಕುಟಮಣಿಯಂತೆ ಕಂಗೊಳಿಸುತ್ತಿದ್ದಳು, ಅವಳ ಲೋಕೋತ್ತರ ರೂಪ ಲಾವಣ್ಯಗಳು, ಭಾವ- ಭಂಗಿಗಳು, ಆರಾಧನೆ – ಸಮರ್ಪಣೆಗಳು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾಗಿದ್ದವು. ಆದ್ದರಿಂದಲೇ ಅವನು ಸದಾ ಆಕೆಯ ಆಜ್ಞಾನುಧಾರಕನಾಗಿರುತ್ತಿದ್ದನು.

ರಾಧಾರಾಣಿ ಮತ್ತು ಮಹಾಮಂತ್ರ
ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇಹರೇ
ಹರೇ ರಾಮ ಹರೇರಾಮ ರಾಮರಾಮ ಹರೇ ಹರೇ
ಈ ಮಹಾಮಂತ್ರವೂ ಕೂಡ ರಾಧಾರಾಣಿಯ ಪ್ರಾಮುಖ್ಯವನ್ನು ಬಿಂಬಿಸುತ್ತದೆ. ರಾಧೆಗೆ ‘ಹರಾ’ ಎನ್ನುವ ಹೆಸರೂ ಇದೆ.
ಶ್ರೀ ರೂಪಾ ಶ್ರೀಹರಾ ಶ್ರೀದಾ
ಶ್ರೀ ಕಾಮಾ ಶ್ರೀ ಸ್ವರೂಪಿಣಿ
ಶ್ರೀ ಧಾಮಾನಂದ ಧಾತ್ರೀ ಚ
ಶ್ರೀ ಧಾಮೇಶ್ವರ ವಲ್ಲಭಾ
(ರಾಧಾ ಸಹಸ್ರನಾಮ ಸ್ತೋತ್ರ, 59)
ಆದ್ದರಿಂದ, ಮಹಾಮಂತ್ರವನ್ನು ಜಪಿಸುವಾಗ ಕೂಡ ನಾವು ಕೃಷ್ಣನಿಗೆ ಮೊದಲು ರಾಧಾರಾಣಿಯ ಹೆಸರು ಹೇಳಿದಂತಾಗುತ್ತದೆ. ಏಕೆಂದರೆ, ‘ಹರೇʼ ಶಬ್ದವು ‘ಹರಾ’ ಶಬ್ದದ ವ್ಯುತ್ಪತ್ತಿಯಾಗಿದೆ. ಭಗವಂತನ ಆಂತರಿಕ ಶಕ್ತಿಯನ್ನು ಸ್ತುತಿಸುವ ಮೂಲಕ, ನಮ್ಮನ್ನು ಶ್ರೀಕೃಷ್ಣ ಸೇವೆಯಲ್ಲಿ ತೊಡಗಿಸುವಂತೆ ಕೇಳಿಕೊಳ್ಳುತ್ತೇವೆ.
ನಾಮಸ್ಮರಣೆಯ ಮೂಲಕ ಶ್ರೀಕೃಷ್ಣನ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಕೂಡ ಸೇವೆಯ ವಿಧಗಳಲ್ಲೊಂದಾಗಿದೆ. ರಾಧಾರಾಣಿಯ ಮೂಲಕ ಕೃಷ್ಣನನ್ನು, ಕೃಷ್ಣಸೇವೆಯ ಭಾಗ್ಯವನ್ನು ಅತ್ಯಂತ ಸುಲಭವಾಗಿ ಹೊಂದಬಹುದು.
ಶ್ರೀಮದ್ಭಾಗವತದಲ್ಲಿ ರಾಧಾರಾಣಿಯ ಪ್ರಸ್ತಾಪ
ಶ್ರೀಕೃಷ್ಣನ ಲೀಲಾವತಾರದ ಬಗ್ಗೆ ಸಂಪೂರ್ಣ ಚಿತ್ರಣ ನೀಡುವ ಪ್ರಮುಖ ವೈದಿಕ ಗ್ರಂಥ ಶ್ರೀಮದ್ಭಾಗವತದಲ್ಲಿ ಶ್ರೀಮತಿ ರಾಧಾರಾಣಿಯ ಬಗ್ಗೆ ಸ್ಪಷ್ಟ ಉಲ್ಲೇಖವೇ ಇಲ್ಲದಿರುವುದು ಅಚ್ಚರಿಯ ಸಂಗತಿ. ಆದರೆ, ಅದಕ್ಕೆ ಕಾರಣವಿಲ್ಲದಿಲ್ಲ. ಶ್ರೀಮದ್ಭಾಗವತವನ್ನು ಪರೀಕ್ಷಿತ ಮಹಾರಾಜನಿಗೆ ಉಪದೇಶಿಸಿದವರು ಶ್ರೀಲ ಶುಕದೇವ ಗೋಸ್ವಾಮಿಗಳು.
ಶುಕದೇವರ ಇಷ್ಟದೇವಿ -ಶ್ರೀಮತಿ ರಾಧಾರಾಣಿ. ಅವರು ರಾಧಾರಾಣಿಯ ಹೆಸರನ್ನು ಉಚ್ಚರಿಸುತ್ತಲೇ, ಭಕ್ತಿ ಭಾವೋನ್ಮತ್ತರಾಗಿ ಆರು ತಿಂಗಳಷ್ಟು ದೀರ್ಘಕಾಲ ಮೂರ್ಛಾವಸ್ಥೆಗೆ ಹೋಗಿಬಿಡುತ್ತಿದ್ದರು.
ಆದರೆ, ಪರೀಕ್ಷಿತ ಮಹಾರಾಜನಿಗಿದ್ದ ಕಾಲಾವಕಾಶ ಕೇವಲ ಒಂದು ವಾರದ ಅವಧಿ. ಅದನ್ನು ಗಮನದಲ್ಲಿಟ್ಟುಕೊಂಡ ಗೋಸ್ವಾಮಿಗಳು, ತಮ್ಮ ಇಷ್ಟದೇವಿ ರಾಧಾರಾಣಿಯ ಹೆಸರು ಪ್ರಸ್ತಾಪವಾಗದಂತೆ ಎಚ್ಚರ ವಹಿಸಿದರು.
ಭಾಗವತದ ಹದಿನೆಂಟು ಸಾವಿರ ಶ್ಲೋಕಗಳಲ್ಲಿ ಒಂದೆಡೆ ರಾಧೆಯ ಉಲ್ಲೇಖವನ್ನು ಸ್ಪಷ್ಟವಾಗಿ ಗುರುತಿಸಬಹುದು. ಶ್ರೀಲ ರಾಮಾನಂದ ರಾಯರು ಶ್ರೀಮದ್ಭಾಗವತದ ದಶಮಸ್ಕಂಧ, 30ನೇ ಅಧ್ಯಾಯ, 28ನೇ ಶ್ಲೋಕದಲ್ಲಿ ರಾಧಾರಾಣಿಯ ಪ್ರಸ್ತಾಪವನ್ನು ಶ್ರೀಚೈತನ್ಯ ಮಹಾಪ್ರಭುಗಳೆದುರು ನಿರೂಪಿಸಿರುವುದು ಶ್ರೀಚೈತನ್ಯ ಚರಿತಾಮೃತದಲ್ಲಿ ( ಮಧ್ಯಲೀಲಾ 8.10) ದಾಖಲಾಗಿದೆ.
ಅನಯಾರಾಧಿತೋ ನೂನಮ್
ಭಗವಾನ್ ಹರೀಶ್ವರಃ
ಯನ್ ನೋವಿಹಾಯ ಗೋವಿಂದಃ
ಪ್ರೀತೋಯಮ್ ಅನಯಾದ್ ರಹಃ
“ಪ್ರಿಯ ಸಖಿಯರೇ, ಕೃಷ್ಣನಿಂದ ಏಕಾಂತದ ಸ್ಥಳಕ್ಕೆ ಕರೆದೊಯ್ಯಲ್ಪಟ್ಟವಳು. ಉಳಿದವರೆಲ್ಲರಿಗಿಂತ ಹೆಚ್ಚು ಪ್ರೇಮದಿಂದ ಭಗವಂತನನ್ನು ಆರಾಧಿಸಿರಬೇಕು. (ಅದಕ್ಕೆ ಆ ಭಾಗ್ಯವು ಅವಳದಾಗಿದೆ)”

ಶ್ರೀಲ ಪ್ರಭುಪಾದರ ಭಾವಾನುವಾದ
” ‘ರಾಧಾ’ ಎನ್ನುವ ಹೆಸರನ್ನು ಭಾಗವತದ ಈ ಶ್ಲೋಕ (10.30.28)ದಿಂದ ಗ್ರಹಿಸಲಾಗಿದೆ. ‘ಅನಯಾರಾಧಿತ’ ಅಂದರೆ – ‘ಆಕೆಯಿಂದ ಆರಾಧಿಸಲ್ಪಟ್ಟ ಭಗವಂತ’ ಎಂದು. ಕೆಲವೊಮ್ಮೆ ಟೀಕಾಕಾರರು ಶ್ರೀಮದ್ಭಾಗವತದಲ್ಲಿ ರಾಧಾರಾಣಿಯ ಪವಿತ್ರನಾಮವನ್ನು ಕಾಣಲು ಕಷ್ಟಪಡುತ್ತಾರೆ. ಆದರೆ, ಆ ರಹಸ್ಯವು ಇಲ್ಲಿಯೇ – ‘ಆರಾಧಿತಾ’ ಎಂಬ ಪದದಲ್ಲಿದೆ.
ಬ್ರಹ್ಮ ವೈವರ್ತ ಪುರಾಣ, ಪದ್ಮ ಪುರಾಣಗಳಲ್ಲಿ ರಾಧಾರಾಣಿಯ ಹೆಸರು ನೇರವಾಗಿಯೇ ಪ್ರಸ್ತಾಪಿತವಾಗಿದೆ.
ಕೃಷ್ಣನಡೆಗೆ, ಗೋಪಿಯರ ಮುಕುಟಮಣಿಯಾದ ಈಕೆಯ ಆರಾಧನೆ ಅತ್ಯುನ್ನತವಾದುದು. ಆದ್ದರಿಂದಲೇ, ಆಕೆಯ ಹೆಸರು ‘ರಾಧಾ’ (ಶ್ರೇಷ್ಠ ಆರಾಧಕಿ) ಎಂದಿದೆ.”
ರಾಧಾರಾಣಿಯ ವರ್ಣನೆಗಳು
ರಾಧಾರಾಣಿಯು ಶ್ರೀಕೃಷ್ಣನನ್ನು ಮಾಧುರ್ಯ ಭಾವದಿಂದ ಆರಾಧಿಸಿದಳು. ಆಕೆಯ ಪ್ರೇಮಾಭಿವ್ಯಕ್ತಿಯನ್ನು ಶ್ರೀಲ ರೂಪ ಗೋಸ್ವಾಮಿಗಳು ಹೀಗೆ ವರ್ಣಿಸಿದ್ದಾರೆ:
“ವೃಂದಾವನದ ಗೋಪಿಯರಲ್ಲೆಲ್ಲ ಶ್ರೀಮತಿ ರಾಧಾರಾಣಿ ಮತ್ತು ಇನ್ನೊಬ್ಬ ಗೋಪಿ ಅತ್ಯಂತ ಪ್ರಮುಖರೆಂದು ಪರಿಗಣಿಸಲ್ಪಡುತ್ತಾರೆ. ಗೋಪಿಯರಲ್ಲಿ ಶ್ರೀಮತಿ ರಾಧಾರಾಣಿಯ ಸ್ಥಾನ ಅತ್ಯುನ್ನತವಾದುದು. ಏಕೆ೦ದರೆ, ಆಕೆಯ ಉನ್ನತ ಪ್ರೇಮದ ಅಭಿವ್ಯಕ್ತಿಗಳು ಅತ್ಯಂತ ನೈಜವಾದವು. ಇತರ ಗೋಪಿಯರು ಅನುಭವಿಸುವ ಪ್ರೇಮದ ಅನುಭೂತಿಯನ್ನು ರಾಧಾರಾಣಿಯ ಅಭಿವ್ಯಕ್ತಿಗೆ ಹೋಲಿಸಲಾಗುವುದಿಲ್ಲ” ( ಉಜ್ವಲ ನೀಲಮಣಿ, 4.3)
ಚೈತನ್ಯ ಚರಿತಾಮೃತದಲ್ಲಿ ರಾಧಾರಾಣಿಯ ಗುಣವಿಶೇಷಗಳಿಗೆ ಹೊಂದುವಂತೆ, ಆಕೆಯ ಅಸಂಖ್ಯಾತ ಹೆಸರುಗಳಲ್ಲಿ ಕೆಲವನ್ನು ನೀಡಲಾಗಿದೆ. ಅದರಂತೆ ರಾಧಾರಾಣಿಯು:
ಗೋವಿಂದನಿಗೆ ಆನಂದ ನೀಡುವವಳಾಗಿ ‘ಗೋವಿಂದ ಆನಂದಿ’ ಎಂದು ಕರೆಯಲ್ಪಡುತ್ತಾಳೆ. ಗೋವಿಂದನನ್ನು ದಿಗ್ಭ್ರಮೆಗೊಳಿಸುವ ರೂಪದಿಂದ ‘ಗೋವಿಂದ ಮೋಹಿನಿ’ ಎನಿಸಿಕೊಳ್ಳುತ್ತಾಳೆ. ಗೋವಿಂದನ ಸಕಲವೂ ಆಗಿ ‘ಗೋವಿಂದ ಸರ್ವಸ್ವ’ವಾಗಿದ್ದಾಳೆ.
ಭಗವಂತನ ಎಲ್ಲ ಸಂಗಾತಿಗಳಲ್ಲಿ ಪ್ರಮುಖಳಾಗಿದ್ದು ‘ಸರ್ವಕಾಂತಾ ಶಿರೋಮಣಿ’ ಯಾಗಿ ಕ೦ಗೊಳಿಸುತ್ತಾಳೆ. ಒಳಗೂ-ಹೊರಗೂ ಎಲ್ಲೆಲ್ಲೂ ಕೃಷ್ಣನನ್ನೇ ಅನುಭವಿಸುತ್ತಾ ‘ಕೃಷ್ಣ ಮಯಿ’ ಯಾಗಿದ್ದಾಳೆ. ತನ್ನ ಆರಾಧನಾ ವಿಶೇಷಗಳಿಂದ ಆಕೆಯನ್ನು ಪುರಾಣಿಕರು ‘ರಾಧಿಕಾ’ ಎಂದು ಕರೆದಿದ್ದಾರೆ.
ಎಲ್ಲ ಭಾಗ್ಯದೇವತೆಗಳ ಮೂಲವಾಗಿರುವ ಈಕೆಯೇ ‘ಸರ್ವಲಕ್ಷ್ಮಿ’, ಈಕೆ ಭಗವಾನ್ ಶ್ರೀಕೃಷ್ಣನ-ಕೀರ್ತಿ, ಅದೃಷ್ಟ, ಬಲ, ಸಂಪತ್ತು, ಜ್ಞಾನ ಮತ್ತು ವೈರಾಗ್ಯಗಳೊಡಗೂಡಿದ ಆರು ಭಾಗ್ಯ ವಿಶೇಷಗಳನ್ನು ಪ್ರತಿನಿಧಿಸುವ ಪರಮಶಕ್ತಿ ಎಂಬ ಅರ್ಥವನ್ನು ನೀಡುತ್ತದೆ. ತನ್ನೆಲ್ಲ ರೂಪ-ಲಾವಣ್ಯ, ಮೋಹಕತೆಗಳಿಂದಾಗಿ ಆಕೆ ‘ಸರ್ವಕಾಂತಿ’ ಎಂದೂ ಹೊಗಳಲ್ಪಡುತ್ತಾಳೆ.” (ಆದಿಲೀಲಾ, 4.82, 84, 87-96)
ರಾಧಾರಾಣಿಯ ವರ್ಣನೆಯೊಂದು ರಸಕಾವ್ಯ. ಆ ಆಲೌಕಿಕ ಸೌಂದರ್ಯವನ್ನು ವರ್ಣಿಸಲು ಶುದ್ಧ ವೈಷ್ಣವ ಭಕ್ತರು ಸಾಕಷ್ಟು ಶ್ರಮಿಸಿದ್ದಾರೆ. ಶ್ರೀ ರಾಧಾಕೃಷ್ಣರ ಲೀಲಾ ವಿನೋದವನ್ನು ಕೃಷ್ಣಪ್ರಜ್ಞೆಯ ಮೂಲಕ ಅರ್ಥೈಸಿಕೊಂಡು, ನಿರೂಪಿಸಿದ್ದಾರೆ. ಅಂತಹ ಕೆಲವು ಕೃತಿಗಳಲ್ಲಿ ‘ವಿದಗ್ಧ ಮಾಧವ’ ಕೃತಿಯೊ ಒಂದು. ಶ್ರೀಲ ರೂಪಗೋಸ್ವಾಮಿ ವಿರಚಿತ ಈ ಕೃತಿಯಲ್ಲಿನ ರಾಧಾರಾಣಿಯ ಈ ಎರಡು ವರ್ಣನೆಯೊಂದಿಗೆ ಲೇಖನ ಸಮಾಪ್ತಿಗೊಳಿಸೋಣ:
”ಶ್ರೀಮತಿ ರಾಧಾರಾಣಿಯ ಕ೦ಗಳ ಸೌಂದರ್ಯವು ಆಗ ತಾನೇ ಬಿರಿದ ನೀಲಕಮಲವನ್ನು ನಾಚಿಸುತ್ತದೆ. ಅವಳ ವದನದ ಸೌಂದರ್ಯವು ಪೂರ್ತಿಯಾಗಿ ಅರಳಿದ ಕಮಲಗಳಿಂದ ಕೂಡಿದ ವನವನ್ನೇ ಮೀರಿಸುವ೦ತಿದೆ. ಅವಳ ದೇಹಕಾಂತಿಯಿಂದ ಚಿನ್ನವು ಮಾನವದನವಾಗಿ ಬಿದ್ದುಕೊ೦ಡಿದೆ. ರಾಧಾರಾಣಿಯ ಈ ಚೇತೋಹಾರಿಯಾದ ಸೌಂದರ್ಯದಿಂದ ಇಡಿಯ ವೃಂದಾವನವೇ ಕಳೆತುಂಬಿಕೊಂಡಿದೆ!’ (ವಿದಗ್ಧ ಮಾಧವ-1.32)
“ಇರುಳಲ್ಲಿ ಚಂದ್ರನ ಕಾಂತಿ ಅತ್ಯಂತ ಪ್ರಖರವಾಗಿದ್ದರೂ ಹಗಲಲ್ಲಿ ಅದು ಕ್ಷೀಣಿಸುತ್ತದೆ. ಹಾಗೆಯೇ ಕಮಲವು ಹಗಲಲ್ಲಿ ಅರಳಿ ಇರುಳಲ್ಲಿ ಮುದುಡುತ್ತದೆ. ಸಖನೇ, ನನ್ನ ಅತ್ಯಂತ ಪ್ರೀತಿ ಪಾತ್ರಳಾದ ರಾಧಾರಾಣಿಯು ತನ್ನ ಉಜ್ವಲ ಸೌಂದರ್ಯದಿಂದ ಹಗಲಿರುಳೂ ಕಂಗೊಳಿಸುತ್ತಿರುತ್ತಾಳೆ. ಹೀಗಿರುವಾಗ ಆಕೆಯ ಮುಖವನ್ನು ಯಾವುದಕ್ಕೆ ತಾನೆ ಹೋಲಿಸಲಿ?” (5.20)






Leave a Reply