ಕಾಗೆಯೊಂದು ವ್ಯಕ್ತಿಯ ಬದುಕಿನ ಚಿಂತನೆಯನ್ನು ಬದಲಿಸಿದ ಕಥೆ ಇದು.
ಈ ಕಥೆಯ ನಾಯಕನಿಗೆ ಮೊದಲ ಎಂ.ಬಿ.ಬಿ.ಎಸ್. ಪರೀಕ್ಷೆ ಸಮೀಪಿಸುತ್ತಿತ್ತು. ಆತಂಕ ಹೆಚ್ಚಾಗುತ್ತಿತ್ತು. ಅವನು ಹಾಸ್ಟೆಲ್ ಕೋಣೆಯ ಆಚೆ ನೋಡಿದ. ಅನೇಕ ವಿದ್ಯಾರ್ಥಿಗಳು ಅಲ್ಲಲ್ಲಿ ಕುಳಿತು ಓದುತ್ತಿದ್ದರು. ಕೆಲವರು ಏನೋ ತಮಾಶೆ ಮಾಡಿಕೊಳ್ಳುತ್ತಾ ನಗುತ್ತಿದ್ದರು. ಅವರನ್ನೆಲ್ಲಾ ನೋಡಿ ಅವನಿಗೆ “ಈ ಜಗತ್ತಿನಲ್ಲಿ ನನ್ನನ್ನು ಬಿಟ್ಟು ಉಳಿದವರೆಲ್ಲ ಸುಖಿಗಳು” ಎಂದೆನ್ನಿಸಿತು. ಸಮಾಲೋಚನೆ ಮಾಡಬೇಕೆನ್ನಿಸಿತು. ಆಗ ಅವನಿಗೆ ತನ್ನ ಸೋದರ ಮಾವನ ನೆನಪಾಯಿತು. ಅವರಿಗೆ ಅವನೆಂದರೆ ತುಂಬಾ ಪ್ರೀತಿ.
ಕಾಗೆಯ ಕಥೆ
ಅವರು ಬಂದರು. ಮೊದಲು ಅವನು ಹೇಳಿದ್ದನ್ನು ಕೇಳಿಸಿಕೊಂಡರು. ಆಗ ಅವರು ಕಾಗೆಯ ಕಥೆ ಹೇಳಿದರು. ಕಾಗೆಯೊಂದು ಕಾಡಿನಲ್ಲಿ ವಾಸವಾಗಿತ್ತು. ಅದರದು ಸಂತೃಪ್ತ ಜೀವನ. ಒಂದು ದಿನ ಅದು ಒಂದು ಹಂಸವನ್ನು ನೋಡಿತು. ಆಗ ಕಾಗೆ ಯೋಚಿಸಿತು, “ಈ ಹಂಸ ಅದೆಷ್ಟು ಬಿಳುಪಾಗಿದೆ. ನಾನು ಹೀಗೆ ಕಪ್ಪಾಗಿದ್ದೇನೆ. ಈ ಜಗತ್ತಿನಲ್ಲಿ ಅದೇ ಪರಮ ಸುಖಿಯಾದ ಪಕ್ಷಿಯಾಗಿರಬಹುದು.” ಅದು ಹಂಸದ ಬಳಿಗೆ ಹೋಗಿ ತನ್ನ ಭಾವನೆಯನ್ನು ವ್ಯಕ್ತಪಡಿಸಿತು. ಹಂಸ ಹೇಳಿತು, “ಹೌದು, ನಾನು ಅತ್ಯಂತ ಸುಖಿಯಾದ ಪಕ್ಷಿ ಎಂದೇ ಭಾವಿಸಿದ್ದೆ. ಆದರೆ ಎರಡು ಬಣ್ಣವಿರುವ ಗಿಳಿಯನ್ನು ನೋಡಿದಾಗ ನನ್ನ ಅಭಿಪ್ರಾಯ ಬದಲಾಯಿತು. ಗಿಳಿಯೇ ಅತ್ಯಂತ ಸುಖಿಯಾದ ಪಕ್ಷಿ ಎಂದು ನನಗನ್ನಿಸುತ್ತಿದೆ.” ಕಾಗೆಯು ಗಿಳಿಯ ಬಳಿಗೆ ಬಂದಿತು. ಗಿಳಿಯು ಹೇಳಿತು, “ನಾನು ತುಂಬಾ ಖುಷಿಯಾಗಿದ್ದೆ. ಆದರೆ ನವಿಲನ್ನು ನೋಡಿದ ಮೇಲೆ ನನ್ನ ಭಾವನೆ ತಪ್ಪೆನ್ನಿಸಿತು. ನನಗೆ ಎರಡೇ ಬಣ್ಣ, ನವಿಲಿಗೆ ನಾನಾ ವರ್ಣ. ಜಗತ್ತಿನಲ್ಲಿ ನವಿಲು ಅತ್ಯಂತ ಸುಖಿಯಾದ ಪಕ್ಷಿ ಎಂದು ಈಗ ಭಾವಿಸುತ್ತಿರುವೆ.”
ಕಾಗೆಯು ಮೃಗಾಲಯದಲ್ಲಿದ್ದ ನವಿಲಿನ ಬಳಿಗೆ ಹೋಯಿತು. ವರ್ಣಮಯ ನವಿಲನ್ನು ನೋಡಲು ಜನರು ಸೇರಿದ್ದರು. ಅವರೆಲ್ಲ ಹೊರಟುಹೋದ ಮೇಲೆ ಕಾಗೆಯು ನವಿಲಿನ ಬಳಿಗೆ ಬಂದು, “ನೀನೆಷ್ಟು ಜನಪ್ರಿಯ! ಎಲ್ಲರೂ ನಿನ್ನನ್ನು ನೋಡಲು ಬರುತ್ತಾರೆ. ಜನರು ನನ್ನನ್ನು ನೋಡಿದ ಕೂಡಲೇ ಓಡಿಸಿಬಿಡುತ್ತಾರೆ. ಜಗತ್ತಿನಲ್ಲಿ ನೀನೇ ಪರಮ ಸುಖಿಯಾದ ಪಕ್ಷಿ” ಎಂದು ಹೇಳಿತು. ನವಿಲು ಉತ್ತರಿಸಿತು, “ನಾನು ಅತ್ಯಂತ ಸುಂದರ ಹಾಗೂ ಸುಖಿಯಾದ ಪಕ್ಷಿ ಎನ್ನುವ ಗರ್ವ ನನಗಿತ್ತು. ನಾನು ಸುಂದರವಾಗಿದ್ದೇನೆ ಎಂದು ನನ್ನನ್ನು ಇಲ್ಲಿ ಪಂಜರ ಪಕ್ಷಿ ಮಾಡಿಟ್ಟಿದ್ದಾರೆ. ನಾನು ಮೃಗಾಲಯವನ್ನೆಲ್ಲ ನೋಡಿದೆ. ಪಂಜರದಲ್ಲಿ ಇಲ್ಲದ ಪಕ್ಷಿ ಎಂದರೆ ಕಾಗೆ ಮಾತ್ರ. ನಾನೂ ಕಾಗೆಯಾಗಿದ್ದರೆ ಎಲ್ಲ ಕಡೆ ಸ್ವತಂತ್ರವಾಗಿ, ಸಂತೋಷವಾಗಿ ಓಡಾಡಿಕೊಂಡಿರಬಹುದಿತ್ತು ಎಂದು ಯೋಚಿಸುತ್ತಿರುವೆ.”
ಈ ಕಥೆಯು ನಮ್ಮ ಸಮಸ್ಯೆಯ ಸಾರಾಂಶವನ್ನು ಹೇಳುತ್ತದೆ. ಹಂಸ ಸುಖವಾಗಿದೆ ಎಂದು ಕಾಗೆ ಭಾವಿಸುತ್ತದೆ. ಗಿಣಿ ಸುಖವಾಗಿದೆ ಎಂದು ಹಂಸ ಭಾವಿಸುತ್ತದೆ. ನವಿಲು ಸುಖವಾಗಿದೆ ಎಂದು ಗಿಣಿ ಭಾವಿಸುತ್ತದೆ. ಕಾಗೆ ಸುಖವಾಗಿದೆ ಎಂದು ನವಿಲು ಭಾವಿಸುತ್ತದೆ.
ನಮ್ಮ ಕಥೆ
ನಮ್ಮದೂ ಕಾಗೆಯ ಕಥೆಯಂತೆಯೇ. ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಬೇಗ ಪ್ರೌಢಶಾಲೆಗೆ ಹೋಗಬೇಕೆನ್ನಿಸುತ್ತಿತ್ತು. ಪ್ರೌಢಶಾಲೆಗೆ ಹೋದಾಗ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಶಿಸ್ತು ಪಾಲಿಸಬೇಕಾಗಿಲ್ಲ, ಅವರೇ ಸುಖಿಗಳು ಎಂದು ಭಾವಿಸುತ್ತಿದ್ದೆವು. ಕಾಲೇಜಿಗೆ ಹೋದಾಗ ವೃತ್ತಿಪರ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು ಸುಖಿಗಳು ಎಂದೆನ್ನಿಸುತ್ತಿತ್ತು. ಏಕೆಂದರೆ ವೈದ್ಯ, ಎಂಜನಿಯರಿಂಗ್ ಮತ್ತಿತರ ವೃತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದರು. ವೃತಿಪರ ಕಾಲೇಜು ಪ್ರವೇಶಿಸಿದ ಮೇಲೆ ಕೂಡ ನಾವು ಸುಖಿಗಳಲ್ಲ ಎನ್ನುವ ಭಾವನೆ ಉಂಟಾಗುತ್ತಿತ್ತು. ಪದವಿ ಪಡೆದವರು ಉತ್ತಮ ಉದ್ಯೋಗ, ಕಾರು, ಮನೆ, ಹೆಂಡತಿ ಎಲ್ಲಾ ಪಡೆದು ಅತ್ಯಂತ ಸುಖವಾಗಿದ್ದಾರೆನ್ನುವುದು ನಮ್ಮ ಅನಿಸಿಕೆಯಾಗಿತ್ತು. ಪದವಿ ಪಡೆದು ಒಳ್ಳೆಯ ಉದ್ಯೋಗ ಗಳಿಸಿದರೂ ನಾವು ಸುಖವಾಗಿರಲಿಲ್ಲ, ಏಕೆಂದರೆ ಅದನ್ನು ಕಾಪಾಡಿಕೊಳ್ಳಬೇಕಾಗಿತ್ತಲ್ಲ! ಅಸ್ತಿತ್ವದ ಈ ಹೋರಾಟದ ಸಂದರ್ಭದಲ್ಲಿ ಮುಗ್ಧ ಶಾಲಾ ಮಕ್ಕಳನ್ನು ನೋಡಿದಾಗ, “ಓ, ಅವರೆಷ್ಟು ಸಂತೋಷವಾಗಿದ್ದಾರೆ! ಅವರಿಗೆ ಏನೂ ಜವಾಬ್ದಾರಿ ಇಲ್ಲ. ಶಾಲೆಗೆ ಹೋಗುತ್ತಾರೆ, ಒಂದಷ್ಟು ಓದುತ್ತಾರೆ, ಆಟವಾಡುತ್ತಾರೆ. ಅವರ ಬದುಕು ಆನಂದಮಯ!”
ಇದರಿಂದ ನಾವು ಕಾಗೆಯ ಕಥೆಯನ್ನು ಕಾರ್ಯರೂಪದಲ್ಲಿ ನೋಡಬಹುದು : ಕಾಲೇಜು ವಿದ್ಯಾರ್ಥಿಗಳು ಸುಖಿಗಳೆಂದು ಶಾಲಾ ಮಕ್ಕಳು ಭಾವಿಸುತ್ತಾರೆ, ಯಶಸ್ವಿ ವೃತ್ತಿಪರರು ಸುಖಿಗಳೆಂದು ಕಾಲೇಜು ವಿದ್ಯಾರ್ಥಿಗಳು ಯೋಚಿಸುತ್ತಾರೆ ಮತ್ತು ಶಾಲಾ ಮಕ್ಕಳು ಅತ್ಯಂತ ಸುಖಿಗಳೆಂದು ವೃತ್ತಿಪರರು ಭಾವಿಸುತ್ತಾರೆ.
ಹಾಗಾದರೆ ಪರಿಹಾರವೇನು? ಆತ್ಮತೃಪ್ತಿಯ ಪರಮ ಸ್ಥಿತಿಯನ್ನು ತಲಪುವುದಾಗಿದೆ. ಹಾಗೆಂದು ಶಾಲಾ ವಿದ್ಯಾರ್ಥಿಯು ಯಶಸ್ವೀ ವೃತ್ತಿಪರನಾಗುವುದನ್ನು ವಿರೋಧಿಸಬೇಕೆಂದಲ್ಲ. ನಮ್ಮ ಪ್ರತಿಯೊಂದು ಪ್ರಯತ್ನವೂ ಯಶಸ್ವಿಯಾಗುವಂತೆ ನಾವು ಶ್ರಮಿಸಬೇಕು. ಆದರೆ ಅಂತಹ ಯಶಸ್ಸಿನಿಂದಲೇ ಸುಖ, ಸಂತೋಷ ಎನ್ನುವ ಕಲ್ಪಿತ ಭಾವನೆಯನ್ನು ನಾವು ತ್ಯಜಿಸಬೇಕು. ಯಶಸ್ಸಿನಿಂದ ಸ್ವಲ್ಪ ಸಂತೋಷ ಲಭಿಸಿದರೂ ಅದು ತಾತ್ಕಾಲಿಕ. ಆದುದರಿಂದ ನಾವು ಲೌಕಿಕ ಯಶಸ್ಸಿಗೆ ಪ್ರಯತ್ನಿಸುವುದರ ಜೊತೆಗೆ ಆಧ್ಯಾತ್ಮಿಕ ಆಚರಣೆಯ ಮೂಲಕ ಶಾಶ್ವತ ಆನಂದಕ್ಕೆ ಕೂಡ ಪ್ರಯತ್ನಿಸಬೇಕು. ದೀರ್ಘ ಕಾಲದ ಪರಮಾನಂದಕ್ಕೆ ಇದು ಒಳ್ಳೆಯ ಸೂತ್ರ.
ಸಂಪೂರ್ಣ ತೃಪ್ತಿ ಹೇಗೆ ಸಾಧ್ಯ? ಭಕ್ತಿಸೇವೆಯಲ್ಲಿ ತೊಡಗಿಸಿಕೊಳ್ಳುವುದು. ಪವಿತ್ರ ನಾಮಗಳ ಜಪವು ನಮ್ಮ ಇಂದ್ರಿಯಗಳನ್ನು ಪರಿಶುದ್ದಗೊಳಿಸುತ್ತದೆ. ಅಶುದ್ಧ ಮನಸ್ಸು ಮತ್ತು ಇಂದ್ರಿಯಗಳು ಈ ಜಗತ್ತನ್ನು ಶೋಷಿಸುವ ಪ್ರವೃತ್ತಿ ಹೊಂದಿರುತ್ತವೆ. ಈ ಲೋಕವು ಭಗವಂತನ ಸೊತ್ತು, ಇಂದ್ರಿಯ ಸುಖವೆಂದರೆ ಅವನ ಆಸ್ತಿಯನ್ನು ಆನಂದಿಸುವುದು ಎಂದು ಅರ್ಥ. ನಮ್ಮ ಲಾಭಕ್ಕಾಗಿ ಅವನ ಆಸ್ತಿಯನ್ನು ಕದ್ದು ನಾವು ಅದು ಹೇಗೆ ಸಂತೋಷವಾಗಿರುವುದು ಸಾಧ್ಯ? ಭಕ್ತಿಸೇವೆಯೆಂದರೆ ಭಗವಂತನ ಆಸ್ತಿಯನ್ನು ಅವನ ಸೇವೆಗೆ ಬಳಸುವುದು.
ಕಾಗೆಯ ಕಥೆಯು ನಾವು ತೃಪ್ತರಾಗಬೇಕೆನ್ನುವುದನ್ನು ಕಲಿಯಲು ನೆರವಾಯಿತು. ಹಾಗೆಯೇ ಪವಿತ್ರ ನಾಮಗಳನ್ನು ಜಪಿಸುತ್ತ ಭಗವಂತನಲ್ಲಿ ಆಶ್ರಯಪಡೆಯಬೇಕೆನ್ನುವ ಶ್ರೀಲ ಪ್ರಭುಪಾದರ ಬೋಧನೆಯು ನೆರವಾಯಿತು. ಇದರಿಂದ ಆ ವಿದ್ಯಾರ್ಥಿಗೆ ಪರೀಕ್ಷೆಗಳ ಬಗೆಗೆ ಆತಂಕ ಉಂಟಾಗಲಿಲ್ಲ. ಪರೀಕ್ಷೆ ಇರಲಿ, ಬಿಡಲಿ ಅಧ್ಯಯನವನ್ನೂ ಭಗವಂತನಿಗೆ ಅರ್ಪಿಸಿದ ಮೇಲೆ ಅವನಿಗೆ ತಾನೇ ಸುಖ ಜೀವಿ ಎನ್ನಿಸಿತು.