– ಸುಬ್ರಹ್ಮಣ್ಯ.ಎಂ.ಕೆ
ಕಾರ್ತಿಕಮಾಸದ ಶುಕ್ಲ ಪಕ್ಷದ ಹನ್ನೆರಡನೆಯ (ದ್ವಾದಶಿ) ದಿನವನ್ನು ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ. ಆಷಾಡಮಾಸದ ಶುಕ್ಲಪಕ್ಷದ ಏಕಾದಶಿಯಂದು (ಇದನ್ನು ಶಯನೀ ಏಕಾದಶಿ ಅಥವಾ ಪ್ರಥಮ ಏಕಾದಶಿ ಎಂದೂ ಕರೆಯುತ್ತಾರೆ) ಶ್ರೀಮಹಾವಿಷ್ಣುವು ಕ್ಷೀರಸಾಗರದಲ್ಲಿ ಯೋಗನಿದ್ರೆಗೆ ಜಾರುತ್ತಾನೆ ಎಂಬ ನಂಬಿಕೆಯಿದೆ.

‘ಉತ್ಥಾನ’ ಎಂದರೆ “ಏಳುವುದು” ಅಥವಾ “ಎಚ್ಚರಗೊಳ್ಳುವುದು” ಎಂದರ್ಥ. ಚಾತುರ್ಮಾಸ್ಯದ (ಆಷಾಡಮಾಸದ ಶುಕ್ಲಪಕ್ಷದ ಏಕಾದಶಿಯಿಂದ ಕಾರ್ತೀಕಮಾಸದ ಶುಕ್ಲಪಕ್ಷದ ಏಕಾದಶಿ ವರೆಗೆ ನಾಲ್ಕು ಪವಿತ್ರ ತಿಂಗಳುಗಳು) ಅವಧಿಯಲ್ಲಿ ಶ್ರೀಮಹಾವಿಷ್ಣುವು ಯೋಗ ನಿದ್ರೆಯಲ್ಲಿರುತ್ತಾನೆ ಮತ್ತು ಈ ದಿನದಂದು ಅವನು ಎಚ್ಚರಗೊಳ್ಳುತ್ತಾನೆ ಎಂದೂ ನಂಬಿಕೆಯಿದೆ.
ಈ ದಿನದಂದು ಕ್ಷೀರಸಾಗರ ಮಥನವು ಪ್ರಾರಂಭವಾಯಿತು ಎಂದೂ ಶಾಸ್ತ್ರಗಳ ಪ್ರಕಾರ ತಿಳಿಯುತ್ತದೆ. ಅಮೃತಮಥನವು ಬ್ರಹ್ಮಾಂಡ ಚಟುವಟಿಕೆಗಳಾದ ಸೃಷ್ಟಿ, ಸ್ಥಿತಿ, ಲಯಗಳಲ್ಲಿ ಸೃಷ್ಟಿ ಕಾರ್ಯವನ್ನು ಸಂಕೇತಿಸುತ್ತದೆ.
ಉತ್ಥಾನ ದ್ವಾದಶಿಯನ್ನು ‘ತುಳಸಿ ವಿವಾಹ‘ ಎಂದೂ ಕರೆಯಲಾಗುತ್ತದೆ. ಇದು ಪವಿತ್ರ ತುಳಸಿ ಗಿಡಕ್ಕೂ ದಾಮೋದರ ರೂಪಿ ಶ್ರೀಕೃಷ್ಣ ಅಥವಾ ಮಹಾವಿಷ್ಣುವಿಗೂ ನಡೆಯುವ ದೈವಿಕ ವಿವಾಹವನ್ನು ಸೂಚಿಸುತ್ತದೆ.
ಕ್ಷೀರಸಾಗರ ಮಥನ ಕಾಲದಲ್ಲಿ ಅಮೃತದ ಕಲಶ ಹಿಡಿದು ಬಂದ ಧನ್ವಂತರಿರೂಪಿ ಪರಮಾತ್ಮನ ಆನಂದಾಶ್ರುವಿನಿಂದ (ಆನಂದದ ಕಣ್ಣೀರಿನಿಂದ) ಹುಟ್ಟಿದ ಗಿಡವೇ ತುಳಸಿ. ತುಳಸಿ ಗಿಡವನ್ನು ಶ್ರೀಮಹಾಲಕ್ಷ್ಮಿಯ ಅವತಾರವೆಂದೂ, ಅವಳು ಸದಾಕಾಲ ತುಳಸಿ ಗಿಡದಲ್ಲಿ ಸನ್ನಿಹಿತಳಾಗಿ ಇರುತ್ತಾಳೆಂದು ಪರಿಗಣಿಸಲಾಗುತ್ತದೆ ಮತ್ತು ಅದರ ಆಧ್ಯಾತ್ಮಿಕ ಹಾಗೂ ಔಷಧೀಯ ಗುಣಗಳಿಗಾಗಿ ಅದನ್ನು ಪೂಜಿಸಲಾಗುತ್ತದೆ.

“ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ।
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ ॥”
ಎಂದು ತುಳಸಿಯ ಸ್ತೋತ್ರದಲ್ಲಿ ಹೇಳಿರುವಂತೆ “ತುಳಸಿಯ ಬೇರುಗಳಲ್ಲಿ ಸರ್ವ ತೀರ್ಥಗಳೂ ಇರುತ್ತವೆ, ಅದರ ಕಾಂಡದಲ್ಲಿ ಎಲ್ಲಾ ದೇವತೆಗಳೂ ಇರುತ್ತಾರೆ ಹಾಗೂ ಅದರ ಎಲೆಗಳಲ್ಲಿ ಎಲ್ಲಾ ವೇದಗಳೂ ಇರುತ್ತವೆ”.
ಮನೆಗಳಲ್ಲಿ ತುಳಸಿ ಗಿಡವನ್ನು ಮಹಿಳೆಯರು ಪ್ರತಿದಿನ ಅದಕ್ಕೆ ನೀರು ಹಾಕಿ ಪೂಜಿಸುತ್ತಾರೆ. ದಾಸರ ಪದಗಳಲ್ಲಿ ಹೇಳಿರುವಂತೆ “ತುಳಸಿ ಇಲ್ಲದ ಪೂಜೆ ಒಲ್ಲನೋ ಹರಿ ಕೊಳ್ಳನೋ…” ಎಂಬಂತೆ ತುಳಸಿಗೆ ಬಹಳ ಪಾವಿತ್ರ್ಯ ಹಾಗೂ ಮಹತ್ವವಿದೆ.
ಕಾರ್ತೀಕಮಾಸದಲ್ಲಿ, ಶ್ರೀಮಹಾವಿಷ್ಣುವು “ದಾಮೋದರ” ರೂಪದಲ್ಲಿ ನೆಲ್ಲಿಕಾಯಿ ಗಿಡದಲ್ಲಿ ನೆಲೆಸಿರುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಆದ್ದರಿಂದ, ಉತ್ಥಾನ ದ್ವಾದಶಿ ಹಬ್ಬದ ಆಚರಣೆಯಲ್ಲಿ ನೆಲ್ಲಿಕಾಯಿ ಗಿಡವನ್ನು ತುಳಸಿಗಿಡದ ಒಟ್ಟಿಗೆ ನೆಟ್ಟು ಪೂಜಿಸಲಾಗುತ್ತದೆ.

‘ತುಳಸಿ ವಿವಾಹ’ವು ಒಂದು ಪ್ರಮುಖ ಹಬ್ಬವಾಗಿದ್ದು, ಇದನ್ನು ಅತ್ಯಂತ ಭಕ್ತಿ ಮತ್ತು ವೈಭವದಿಂದ ಗೋಧೂಳಿ ಸಮಯದಲ್ಲಿ ಅಂದರೆ ಸಾಯಂಕಾಲದಲ್ಲಿ, ನೆಲ್ಲಿಕಾಯಿ ಹಾಗೂ ತುಳಸಿಗಿಡಗಳನ್ನು ಅಲಂಕರಿಸಿ, ದೀಪಗಳನ್ನು ಹಚ್ಚಿ, ಪೂಜಿಸಿ, ನಾಮಸಂಕೀರ್ತನೆ ಮಾಡಿ, ನೃತ್ಯ ಮಾಡಿ ಸಾಂಕೇತಿಕವಾಗಿ ವಿವಾಹ ಮಹೋತ್ಸವ ಆಚರಿಸಲಾಗುತ್ತದೆ.
ನಂತರ ಸಂಭ್ರಮದ ಆಚರಣೆಗಾಗಿ ಪಟಾಕಿಗಳನ್ನೂ ಕೆಲವರು ಹೊಡೆಯುವುದುಂಟು. ದೀಪಾವಳಿಯ ಜಲಪೂರ್ಣ ತ್ರಯೋದಶಿಯಿಂದ ಉತ್ಥಾನ ದ್ವಾದಶಿವರೆಗೆ ಅಥವಾ ಕಾರ್ತೀಕಮಾಸದ ಹುಣ್ಣಿಮೆವರೆಗೆ (ಕಾರ್ತೀಕ ದೀಪೋತ್ಸವ) ಪ್ರತಿನಿತ್ಯ ಸಾಯಂಕಾಲ ಮನೆಯ ಮುಂದೆ ದೀಪಗಳನ್ನು ಹಚ್ಚುವ ಸಂಪ್ರದಾಯವೂ ಕೆಲವರಲ್ಲಿ ಇದೆ.
ಶ್ರದ್ದೆ, ಭಕ್ತಿಯಿಂದ ಈ ದಿನ ತುಳಸಿ-ದಾಮೋದರ ವಿವಾಹ ಮಾಡಿ ಉತ್ಥಾನ ದ್ವಾದಶಿಯನ್ನು ಸಂಭ್ರಮದಿಂದ ಆಚರಿಸುವ ಮೂಲಕ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಲು ಪ್ರಯತ್ನಿಸೋಣ.






Leave a Reply