ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ
ವರ್ಣ ವ್ಯವಸ್ಥೆಗೂ, ಜಾತಿ ಪದ್ಧತಿಗೂ ವ್ಯತ್ಯಾಸವಿದೆ. ಅವೆರಡೂ ಒಂದೇ ಅಲ್ಲ. ವರ್ಣಾಶ್ರಮ ವ್ಯವಸ್ಥೆಯು ವೇದ ಧರ್ಮ ಪದ್ಧತಿಯನ್ನು ಅನುಸರಿಸುತ್ತದೆ. ಗುಣ ಮತ್ತು ಕರ್ಮಗಳಿಗೆ ಅನುಸಾರವಾಗಿ ವಿಂಗಡಿಸಿರುವ ನಾಲ್ಕು ಸಾಮಾಜಿಕ ವಿಭಾಗಗಳು ಇಡೀ ಒಂದು ಸಮಾಜದ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುತ್ತವೆ. ಅದು ಅವರವರ ಅರ್ಹತೆಯ ಆಧಾರದ ಮೇಲೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವಿಭಾಗಗಳಾಗಿವೆ.

ಶಾಂತತೆ, ಶುದ್ಧತೆ, ಸಹನೆ, ಆತ್ಮನಿಯಂತ್ರಣ, ತಪಸ್ಸು ಪ್ರಾಮಾಣಿಕತೆ, ಜ್ಞಾನ, ಧಾರ್ಮಿಕತೆ ಇವು ಬ್ರಾಹ್ಮಣನ ಗುಣಗಳು. ಒಂದು ಸಮಾಜದ ರೂಪುರೇಷೆಗಳನ್ನು ತಿದ್ದಿ ಸುಸಂಸ್ಕೃತದ ಕಡೆ, ಸತ್ಯದ ಕಡೆ ಜ್ಞಾನದ ಮಾರ್ಗದರ್ಶನ ಮಾಡುವುದು ಈ ವರ್ಣದವರ ಬಹು ಮುಖ್ಯ ಕರ್ತವ್ಯವಾಗಿದೆ.
ಧೈರ್ಯ, ಶೌರ್ಯ, ಪರಾಕ್ರಮ, ಸಂರಕ್ಷಣೆಯ ಕರ್ತವ್ಯಗಳು ಕ್ಷತ್ರಿಯನದು. ಹಾಗೆಯೇ ಇಡೀ ಸಮಾಜದ ಅವಶ್ಯಕತೆಗಳನ್ನು ಪೂರೈಸಿ ಎಲ್ಲರಿಗೂ ಆಹಾರದ ಕೊರತೆಯಾಗದಂತೆ ನೋಡಿಕೊಳ್ಳುವುದು ವೈಶ್ಯನ ಕರ್ತವ್ಯವಾದರೆ, ಈ ಮೇಲಿನ ವರ್ಣಗಳನ್ನು ಶ್ರದ್ಧೆ ಪ್ರಾಮಾಣಿಕತೆ, ಸೇವೆಯಿಂದ ಸೇವಿಸುವುದು ಶೂದ್ರನ ಕಾರ್ಯವಾಗಿದೆ. ಮೆದುಳು, ಕೈಗಳು, ಹೊಟ್ಟೆ, ಪಾದಗಳು ಎಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಒಂದು ಶರೀರ ಆರೋಗ್ಯವಾಗಿ, ಸುಭಿಕ್ಷವಾಗಿ ಇರುತ್ತದೆ.
ಇದರಲ್ಲಿ ಒಂದು ಅಂಗ ಊನವಾದರೂ ಇಡೀ ದೇಹದಲ್ಲಿ ಏನೋ ಕೊರತೆಯೆನಿಸುತ್ತದೆ. ಅದು ಇದ್ದರೂ ಇಲ್ಲದಂತಾಗುತ್ತದೆ. ಹಾಗೆಯೇ ಒಂದು ಸಮಾಜದ ಸಮರ್ಪಕ ಶಕ್ತಿಈ ನಾಲ್ಕು ವರ್ಣಗಳಿಂದ ಆಧಾರಗೊಂಡಿದೆ. ಅದೇ ಅದರ ಪ್ರಯೋಜನ. ಗೀತೆಯಲ್ಲೂ ಕೂಡ ಈ ನಾಲ್ಕು ವರ್ಣಗಳ ಬಗ್ಗೆ ಉಲ್ಲೇಖವಿದೆ.
ಆದರೆ ಜಾತಿ ಪದ್ಧತಿಯೆಂಬುದು ಅವರ ಹುಟ್ಟಿಗೆ ಅನುಸಾರವಾಗಿ ಬಂದದ್ದು. ಬ್ರಾಹ್ಮಣನಾಗಬೇಕಾದರೆ ಬ್ರಾಹ್ಮಣ ಪುತ್ರನಾಗಿರಬೇಕು ಎಂಬಂತಹ ತಪ್ಪು ವಿಚಾರದಿಂದ ಈ ಜಾತಿಯನ್ನು ಗುರುತಿಸುವಂತಾಗಿದೆ. ಭಗವಾನ್ ಕೃಷ್ಣನು ಗೀತೆಯಲ್ಲಿ ಈ ನಾಲ್ಕು ವರ್ಣಗಳು ಗುಣಕರ್ಮಗಳಿಗೆ ಅನುಸಾರವಾಗಿ ಹೇಳುತ್ತಾನೆಯೇ ಹೊರತು ಹುಟ್ಟಿಗೆ ಅನುಸಾರವಾಗಿ ಎಂದು ಎಂದಿಗೂ ಹೇಳುವುದಿಲ್ಲ. ಮೊದಲನೆಯದು ಶ್ರಮ ವಿಭಜನೆಯಾದರೆ ಇನ್ನೊಂದು ಕೇವಲ ಹುಟ್ಟಿನಿಂದ ಬಂದ ಹಣೆ ಪಟ್ಟಿ.

ಈ ವರ್ಣಾಶ್ರಮ ಧರ್ಮ ಪದ್ಧತಿಯನ್ನೇ ಜಾತಿ ಪದ್ಧತಿ ಎಂದು ಕೆಲವರು ಹುಸಿ ಪ್ರಚಾರ ಮಾಡಿಕೊಂಡು ಬಾಳುತ್ತಿದ್ದಾರೆ. ಈ ಜಾತಿ ಪದ್ಧತಿಯನ್ನು ತೊಡೆದುಹಾಕಲು ಎಲ್ಲ ಮಟ್ಟಗಳಲ್ಲೂ ಏಕ ಪ್ರಕಾರ ಪ್ರಯತ್ನ ನಡೆಯುತ್ತಿದ್ದರೂ ವೇದಗಳ ಮೌಲ್ಯಗಳಿಗೆ ಧಕ್ಕೆ ತರುವಂತಹ ಅವಹೇಳನಕಾರಿ ಕಾರ್ಯಕ್ರಮಗಳು ನಡೆಯುತ್ತಿವೆ ನಿಜ.
ಇದೊಂದು ಮೂರ್ಖತನದ ಪ್ರಯತ್ನ ಎನ್ನದೇ ವಿಧಿಯಿಲ್ಲ. ಏನೇ ಆಗಲಿ, ಸ್ವಾಭಾವಿಕವಾಗಿ ಉದ್ಭವಿಸಿರುವ ವಿವಿಧ ಸಾಮಾಜಿಕ ವಿಭಾಗಗಳನ್ನು ವರ್ಜಿಸಲು ಸಾಧ್ಯವೇ ಇಲ್ಲ. ಮನುಷ್ಯ ನಿರ್ಮಿತ ಜಾತಿ ಪದ್ಧತಿಯು ಕೂಡ ಇಂದು ಪ್ರಬಲವಾಗಿ ಬೆಳೆಯುತ್ತಿದೆ. ಹುಟ್ಟಿನಿಂದ ಎಲ್ಲ ಮನುಷ್ಯರೇ. ಅವರವರ ಕರ್ಮಗಳು, ಗುಣ ಸ್ವಭಾವಗಳಿಂದ ಒಂದು ಸ್ಥಾನವನ್ನು ಗಳಿಸಿಕೊಳ್ಳಬಹುದೇ ಹೊರತು ಬ್ರಾಹ್ಮಣನ ಮಗ ಬ್ರಾಹ್ಮಣನಾಗಿರಬೇಕಿಲ್ಲ.
ಶೂದ್ರನ ಮಗ ಶೂದ್ರನಂತೆ ಇರಬೇಕಿಲ್ಲ. ಅವರವರ ಸಂಸ್ಕಾರಗಳ ಉದ್ದೀಪನದ ಪ್ರಯತ್ನ ಮತ್ತು ಸಾಧನೆಯ ಸ್ವರೂಪ ಇಲ್ಲಿ ಮುಖ್ಯವಾದುದು. ಹರಿದ್ವೇಷಿ ಹಿರಣ್ಯಕಶಿಪುವಿನ ಮಗ ಪ್ರಹ್ಲಾದ ಪರಮ ಭಾಗವತನಾಗಿದ್ದನು. ಹಾಗೆಯೇ ತಂದೆಯಂತೆಯೇ ಮಗನಾಗಿರುತ್ತಾನೆ ಎಂಬ ಅನಿವಾರ್ಯ ನಿಯಮವೇನೂ ಇಲ್ಲ. ಆಗಲೂಬಹುದು, ಆಗದೇ ಇರಲೂಬಹುದು.
ವ್ಯಕ್ತಿಯೊಬ್ಬ ಜೂಜುಕೋರ ಮಾಂಸಾಹಾರಿ, ಅನೈತಿಕ ಸಂಬಂಧಗಳನ್ನು ಇಟ್ಟು ಕೊಂಡಾಗ ಅವನು ಯಾವುದೇ ವರ್ಣಕ್ಕೂ ಸೇರಿದರೂ ಅವನದು ಕೀಳು ಜನ್ಮ. ಹಾಗೆಯೇ ಅಂತಹವರ ಒಂದು ಕುಲದಲ್ಲಿ ಧರ್ಮ, ಸತ್ಯ ಪ್ರಾಮಾಣಿಕತೆ, ಭಕ್ತಿ ಇದ್ದಾಗ ಅವನು ಬ್ರಾಹ್ಮಣ ಜೀವನಕ್ಕೆ ಒಪ್ಪುವವನಾಗುತ್ತಾನೆ.

ಅಂತಹವನನ್ನೂ ಸ್ವಾಗತಿಸುವುದರಲ್ಲಿ ತಪ್ಪೇನೂ ಇಲ್ಲ. ಹೀಗಾಗಿಯೇ ಈ ಜಗತ್ತಿನಲ್ಲಿ ಸತ್ಯವಂತರು, ಧಾರ್ಮಿಕರು, ಪ್ರಾಮಾಣಿಕರು, ಪರಾಕ್ರಮಿಗಳು, ರಾಜಸಿಕರು, ವ್ಯಾಪಾರಗಾರರು, ಶ್ರೀಮಂತರು, ರಾಜಕೀಯ ವ್ಯಕ್ತಿಗಳು ಇವರೆಲ್ಲರಿಗೂ ಸಹಾಯಕಾರರಾಗಿ ಗುಮಾಸ್ತರು, ಸೇವಕರು ಎಲ್ಲರೂ ಇದ್ದಾರೆ.
ಇಂತಹ ಒಂದು ವರ್ಣ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಣದ ಹುಚ್ಚು ಕೀಳು ಅಭಿರುಚಿಗಳು, ಇಂದ್ರಿಯ ತೃಪ್ತಿ ಇದೇ ನಿಜವೆಂದುಕೊಂಡು ಸಾಮಾಜಿಕ ಮೌಲ್ಯಗಳನ್ನು ಗಾಳಿಗೆ ತೂರಿ ಬದುಕುವ ಕೆಲವು ಮಂದಿಗಳು ಶೂದ್ರನಿಗಿಂತಲೂ ಅತ್ಯಂತ ಹೀನ ಸ್ಥಿತಿಯವರು ಎ೦ದು ಹೇಳಲೇಬೇಕಾಗಿದೆ. ಜಾತಿ ನಿರ್ಮೂಲನೆಯ ಹೆಸರಲ್ಲಿ ಈ ಸಮಾಜ ಪೀಡಕರೇ ಹೆಚ್ಚು ಸೃಷ್ಟಿಯಾಗುತ್ತಿದ್ದಾರೆ. ಇದೇ ಸಾಮಾಜಿಕ ಅವ್ಯವಸ್ಥೆ.
ಒಬ್ಬನಾಗರಿಕ ಮನುಷ್ಯ ಎಂದ ಮೇಲೆ ಅವನಿಗೆ ಧರ್ಮ ಎಂಬುದು ಇದ್ದೇ ಇರುತ್ತದೆ. ದೈವ ವಾಕ್ಯವೇ ಧರ್ಮದ ಮೂಲತತ್ತ್ವ. ವೇದ ಪದ್ಧತಿಯೇ ಆ ದೈವ ವಾಕ್ಯ. ಆ ವಾಕ್ಯದ ಪರಿಪಾಲನೆಯೇ ಸಮಾಜದ ಪರಿಪೂರ್ಣ ವ್ಯವಸ್ಥೆ. ಅದು ಕೃಷ್ಣಪ್ರಜ್ಞೆಯ ಆಂದೋಲನದಲ್ಲಿ ಪ್ರತ್ಯಕ್ಷವಾಗಿ ಸಾಧಿತವಾಗುತ್ತದೆ.
ಸಂಗ್ರಹಾನುವಾದ: ಡಾ.ಕೆ. ವೈ. ಬಾಲರಾಜ್, ಆಧಾರ : ಸನಾತನ ಧರ್ಮ ಏಕೆ? ಏನು? (ಅಧ್ಯಾಯ : ಜಾತಿ ಪದ್ಧತಿ ನಿರ್ಮೂಲನೆ)






Leave a Reply