ಆಕರ್ಷಣೆಯ ಕೇಂದ್ರ ಬಿಂದು ಯಾರು?

ಸಂಗ್ರಹ: ಶುಕದೇವ ದಾಸ

ಈ ಜಗತ್ತಿನಲ್ಲಿ ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಕರ್ಷಕ ವ್ಯಕ್ತಿಗಳಾಗಲು ಪ್ರಯತ್ನಿಸುತ್ತಿದ್ದಾರೆ.  ಕುಟುಂಬದಲ್ಲಿ ಕೂಡ ಪ್ರತಿಯೊಬ್ಬರೂ ಆಕರ್ಷಕರಾಗಲು ಪ್ರಯತ್ನಿಸುತ್ತಾರೆ.  ತಾನೇ ಎಲ್ಲರನ್ನೂ ಕಾಪಾಡುವುದರಿಂದ ತನಗೆ ಎಲ್ಲ ಗೌರವ ಸಲ್ಲಬೇಕೆಂದು ಕುಟುಂಬ ಯಜಮಾನ ಯೋಚಿಸುತ್ತಾನೆ. ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುವ  ತನ್ನನ್ನು ಎಲ್ಲರೂ ಅನುಸರಿಸಬೇಕೆಂದು ಹೆಂಡತಿ ಚಿಂತಿಸುತ್ತಾಳೆ. ಮಕ್ಕಳಿಗೆ ಅವರದೇ ಆದ ಆಸೆ ಆಕಾಂಕ್ಷೆಗಳಿರುತ್ತವೆ, ಅವುಗಳನ್ನು ತಮ್ಮ ತಂದೆ ತಾಯಿ ಪೂರೈಸಬೇಕೆಂದು ಬಯಸುತ್ತಾರೆ. ಕುಟುಂಬದ ಸದಸ್ಯರಿಗೆ ಅವರ ಆಸೆಗಳು ಪೂರೈಕೆಯಾಗದಿದ್ದರೆ ಅವರಲ್ಲಿ ಹತಾಶೆ ಉಂಟಾಗುತ್ತದೆ. ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಮೂಡುತ್ತದೆ. ಏನೋ ಒಂದಿಷ್ಟು ಆಸೆ ಪಟ್ಟರೆ  ಅದೂ ಈಡೇರುವುದಿಲ್ಲವೆಂದು ಭಾವಿಸಿ ಕೊರಗುತ್ತಾರೆ. ಮನೆಯಲ್ಲಿ ತಮಗೆ ಅನ್ಯಾಯವಾಗಿದೆ, ಪಕ್ಷಪಾತವಿದೆ ಎಂದೆಲ್ಲ ಪ್ರತಿಯೊಬ್ಬರೂ ಯೋಚಿಸಲಾರಂಭಿಸುತ್ತಾರೆ. ಕೊನೆಗೆ ನೋವು ಅನುಭವಿಸುತ್ತಾರೆ.

ಜನರ ಅಗತ್ಯಗಳನ್ನು ಪೂರೈಸಲು ತಮಗೆ ಸಾಮರ್ಥ್ಯವಿರುವುದು ಎಂದು ಅನೇಕ ರಾಜಕೀಯ ಪಕ್ಷಗಳು ಹೇಳಿಕೊಳ್ಳುತ್ತವೆ. ಪ್ರಜೆಗಳ ವಿಶ್ವಾಸ ಗಳಿಸಲು ಅವರು ಸಮಾಜ ಕಲ್ಯಾಣ ಯೋಜನೆ ಮತ್ತು ಸುಧಾರಣೆ ಕ್ರಮಗಳನ್ನು ಸೂಚಿಸುತ್ತಾರೆ. ತಮ್ಮ ಪಕ್ಷವೇ ಅತ್ಯುತ್ತಮ, ಚುನಾವಣೆಯಲ್ಲಿ ಜಯಗಳಿಸಲು ಅರ್ಹ ಎಂದೂ ಈ ಪಕ್ಷಗಳು ಭಾವಿಸುತ್ತವೆ.  ಆರ್ಥಿಕತೆ, ಆರೋಗ್ಯ, ಪರಿಸರ, ಧರ್ಮ ಮುಂತಾದ ಕ್ಷೇತ್ರಗಳಲ್ಲಿ ತೀವ್ರ ಬದಲಾವಣೆ ತರಬಹುದಾದಂತಹ ಕೆಲ ಕ್ಲಿಷ್ಟ ನಿರ್ಧಾರಗಳನ್ನು ಆಡಳಿತ ಪಕ್ಷವು  ಕೈಗೊಂಡರೆ ಪ್ರತಿ ಪಕ್ಷಗಳು ವಿರೋಧ ವ್ಯಕ್ತಪಡಿಸಿ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸುತ್ತವೆ. ಸರ್ಕಾರವನ್ನು ಕೆಳಗಿಳಿಸಿ ತಾವೇ ಉತ್ತಮ ಎಂದು ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತವೆ. ತಮಗೆ ಉತ್ತಮ ಆಡಳಿತ ನಿರ್ವಹಣೆ ಗೊತ್ತು, ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವುದೂ ತಿಳಿದಿದೆ, ಆದುದರಿಂದ ತಮಗೇ ಅಧಿಕಾರ ಸಿಗಬೇಕು ಎಂದು ಪರಿತಪಿಸುತ್ತವೆ.

ಸಿನಿಮಾ ಕ್ಷೇತ್ರದಲ್ಲಿ ಪ್ರತಿಯೊಬ್ಬ ಚಿತ್ರ ತಾರೆಯೂ ತಾನೇ ಉತ್ತಮ ಕಲಾವಿದ ಎಂದು ಭಾವಿಸಿ ತನಗೇ ಸಿನಿಮಾ ಪ್ರಶಸ್ತಿಗಳು ಬರಬೇಕೆಂದು ಯೋಚಿಸುತ್ತಾನೆ. ಹೀಗೆ ಪ್ರತಿ ಕ್ಷೇತ್ರದಲ್ಲಿಯೂ ತಾವೇ ಉತ್ತಮ ಎಂಬ ಭಾವನೆ ಪ್ರತಿಯೊಬ್ಬರಿಗೂ ಇದೆ.

ವಾಸ್ತವವಾಗಿ ನಾವು ಯಾರೂ ಅತ್ಯುತ್ತಮರಲ್ಲ ಮತ್ತು ಉತ್ತಮ ನಟ, ಗಾಯಕ ಅಥವಾ ರಾಜಕಾರಣಿ ಎಂಬ ಮೆಚ್ಚುಗೆಗೆ ಅರ್ಹರೂ ಅಲ್ಲ. ಏಕೆಂದರೆ ಅವೆಲ್ಲ ಒಂದಕ್ಕೊಂದು ಪೂರಕ ಶಬ್ದಗಳು. ಯಾವುದರಲ್ಲಿಯಾದರೂ ಸರಿ, ಈ ಜಗತ್ತಿನಲ್ಲಿ ಯಾರೂ ಅತ್ಯುತ್ತಮರಲ್ಲ. ಪ್ರತಿಯೊಬ್ಬರೂ ಕೆಲ  ಸಮಯ ಅರ್ಹತೆ ಅಥವಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದಕ್ಕೆ  ಅವರ ಹಿಂದಿನ ಪುಣ್ಯ ಕರ್ಮವೇ ಆಧಾರ. ತಮ್ಮ  ಕ್ಷೇತ್ರಗಳಲ್ಲಿ ಅತ್ಯುತ್ತಮ ಎನಿಸಿಕೊಂಡಿದ್ದವರು ಈಗ ಹಾಗೇನೂ ಇಲ್ಲ ಎಂಬುದಕ್ಕೆ ಉದಾಹರಣೆಗಳಿವೆ. ತಾವು ಹೊಂದಿರುವ ಸಾವರ್ಥ್ಯ ತಮ್ಮದಲ್ಲವೆಂಬುದನ್ನು ಜನರು ಅರ್ಥ ಮಾಡಿಕೊಳ್ಳುವುದಿಲ್ಲ. ಹಾಗಾಗಿದ್ದರೆ, ಅದು ಯಾವುದೇ ಸಮಯದಲ್ಲಿ ಕಳೆದು ಹೋಗುತ್ತಿರಲಿಲ್ಲ. ಕೆಲ ಸಮಯ ನಾವು ಅಲ್ಪ ಪ್ರಮಾಣದ ಸಿರಿ ಸಂಪತ್ತು ಹೊಂದಿರುತ್ತೇವೆ. ಗಾಯನ, ನೃತ್ಯ, ಚಿತ್ರ ಕಲೆಯಲ್ಲಿ ಪರಿಣತಿ ಅಥವಾ ತೀಕ್ಷ್ಣ ಬುದ್ಧಿವಂತಿಕೆ, ಸುಂದರ ದೇಹ, ಸಂಪತ್ತು, ಪ್ರಸಿದ್ಧಿ ಇವನ್ನೆಲ್ಲ ಕೆಲ ಸಮಯಕ್ಕೆ ದೇವೋತ್ತಮ ಪರಮ ಪರುಷನು ನಮಗೆ ಕರುಣೆಯಿಂದ ನೀಡುತ್ತಾನೆ.  ಜಗತ್ತಿನಲ್ಲಿ ಆಕರ್ಷಣೆ ಕೇಂದ್ರವಾಗಬೇಕೆಂಬ ನಮ್ಮ ಆಸೆಯ ಭ್ರಮೆಯನ್ನು ಪೂರೈಸಲಷ್ಟೇ ಅವನು ಈ ಕೃಪೆ ತೋರುವುದು. ಯಾವಾಗ ಹೆಚ್ಚು ಜನರು ಆಕರ್ಷಣೆಯ ಕೇಂದ್ರವಾಗಬೇಕೆಂದು ಬಯಸುತ್ತಾರೋ ಆಗ ಯಾರು ಅತ್ಯುತ್ತಮರೆಂಬುದನ್ನು ನಿರ್ಧರಿಸಲು ಸ್ಪರ್ಧೆ ಉಂಟಾಗುತ್ತದೆ. ಲೌಕಿಕ ಸಾಮರ್ಥ್ಯದ ಆಧಾರದ ಮೇಲೆ ನಾವು ಸ್ಪರ್ಧೆಗೆ ಇಳಿದರೆ ಕುಟುಂಬ ಅಥವಾ ಸಮಾಜದಲ್ಲಿ ಸುಖ ಶಾಂತಿ ಎಂಬುದೇ ಇಲ್ಲವಾಗುತ್ತದೆ. ಅಲ್ಲಿ ಸದಾ ದ್ವೇಷ, ಅಸೂಯೆ, ವೈರತ್ವ ಮುಂತಾದವುಗಳು ಉಂಟಾಗಿ ವಾದ, ಜಗಳ, ಕೋಮು ಬಿಕ್ಕಟ್ಟಿಗೆ ಹಾದಿ ಹಾಕಿಕೊಡುತ್ತದೆ. ಅದು ಯುದ್ಧಕ್ಕೂ ಕಾರಣವಾಗಬಹುದು.

ಈ ಜಗತ್ತಿನಲ್ಲಿ ನಾವು ಸಂತೋಷ  ಮತ್ತು ನೆಮ್ಮದಿಯಿಂದ ಇರಬೇಕೆಂದರೆ ನಮ್ಮ ನಿಜವಾದ ಸ್ಥಾನವನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಜಗತ್ತಿನಲ್ಲಿ ನಾವು ಆಕರ್ಷಣೆಯ ಕೇಂದ್ರವಲ್ಲ. ಏಕೆಂದರೆ ನಾವು ಈ ವಿಶ್ವವನ್ನು  ಸೃಷ್ಟಿಸಿಲ್ಲ . ಜಗತ್ತು ಭಗವಂತನಿಗೆ – ಕೃಷ್ಣನಿಗೆ – ಸೇರಿದ್ದು.  ಈಶೋಪನಿಷದ್‌ ಮಂತ್ರ 1ರಲ್ಲಿ ಈ ರೀತಿ ಹೇಳಿದೆ:

`ಈ ಪ್ರಪಂಚದ  ಸಜೀವ ಅಥವಾ ನಿರ್ಜೀವ ಎಲ್ಲವೂ ಭಗವಂತನ  ಹತೋಟಿಯಲ್ಲಿದ್ದು ಅವನೇ ಅದರ ಮಾಲೀಕ. ಆದುದರಿಂದ  ಯಾರಾದರೂ ಸರಿ, ಅವನ ಪಾಲು ಎಂದು ಇಟ್ಟಿರುವುದನ್ನು, ಅವನಿಗೆ ಅಗತ್ಯವಾದುದನ್ನು ಮಾತ್ರ ಅಂಗೀಕರಿಸಬೇಕು. ಅವು ಯಾರಿಗೆ ಸೇರಿದ್ದೆಂದು ಚೆನ್ನಾಗಿ ತಿಳಿದಿರುವುದರಿಂದ ಬೇರೆ ಯಾವುದನ್ನೂ ಒಪ್ಪಿಕೊಳ್ಳಬಾರದು.’

ಭಗವಂತನು ಮಾಡಿರುವ ವ್ಯವಸ್ಥೆಯಂತೆ ನಮಗೆ ನೀಡಿರುವುದಕ್ಕೆ ನಾವು ತೃಪ್ತಿ ಪಟ್ಟುಕೊಳ್ಳಬೇಕು. ಭಗವಂತನ ಕೃಪೆಯಿಂದ ನಮಗೆಲ್ಲ ಒಂದಷ್ಟು  ಸ್ವತ್ತು, ಸೌಂದರ್ಯ, ಬುದ್ಧಿವಂತಿಕೆ, ಜೀವನ ಮಟ್ಟ ಎಲ್ಲವೂ ಇದೆ. ಅದರಿಂದ ನಾವು ತೃಪ್ತಿ ಪಡಬೇಕು. ಎಷ್ಟೇ ಕಠಿಣ ಶ್ರಮ ಪಟ್ಟರೂ ನಾವು ನಮ್ಮ ಲೌಕಿಕ ಸಂತೋಷ ಮತ್ತು ಸಂಕಷ್ಟಗಳನ್ನು ಬದಲಿಸಿಕೊಳ್ಳಲಾಗದು. ಏಕೆಂದರೆ ಅದು ಸಂಪೂರ್ಣವಾಗಿ ಭಗವಂತನ ಹತೋಟಿಯಲ್ಲಿದೆ. ಯಾವುದೇ ಲೌಕಿಕ ಫಲ ಪಡೆಯಬೇಕೆಂದರೆ ನಾವು ಅದಕ್ಕೆ ಯೋಗ್ಯರಾಗಿರಬೇಕು, ಅನಂತರ ಅಪೇಕ್ಷಿಸಬೇಕು. ನಮ್ಮ ಹಿಂದಿನ ಕರ್ಮಗಳ ಆಧಾರದ ಮೇಲೆ ಭಗವಂತನು ನಮಗೆ ಸಂತೋಷ ಮತ್ತು ಸಂಕಷ್ಟಗಳನ್ನು ನೀಡುತ್ತಾನೆ.

ನಮ್ಮ ಹಿಂದಿನ ಕ್ರಿಯೆಗಳ ಫಲವನ್ನು ನಾವು ಅನುಭವಿಸುತ್ತಿದ್ದೇವೆ ಎಂದು ನಾವು ಅರಿಯಬೇಕು. ಈ ಫಲವನ್ನು ಬದಲಿಸಲೇಬೇಕೆಂದಿದ್ದರೆ, ಅದು ಲೌಕಿಕ ಹೊಂದಾಣಿಕೆಯಿಂದ ಸಾಧ್ಯವಿಲ್ಲ. ಕೃಷ್ಣನಲ್ಲಿ ನಾವು ತೋರುವ ಭಕ್ತಿಯಿಂದ ಮಾತ್ರ ಸಾಧ್ಯ. ಬ್ರಹ್ಮನು ಬ್ರಹ್ಮ ಸಂಹಿತೆಯಲ್ಲಿ ವಿವರಿಸುತ್ತಾನೆ  (5.54) :

`ಭಕ್ತಿಯಿಂದ ತುಂಬಿರುವವರ  ಕಾಮ್ಯಕರ್ಮದ ಚಟುವಟಿಕೆಗಳನ್ನು ಮೂಲೋತ್ಪಾಟನೆ ಮಾಡುವ  ಆ ಪರಮಾತ್ಮ ಗೋವಿಂದನನ್ನು ಪೂಜಿಸುವೆ.’ ನಮ್ಮ ಕರ್ಮದ ಪ್ರತಿಕ್ರಿಯೆಗಳನ್ನು ಬದಲಿಸುವ ಶಕ್ತಿ ಭಗವಂತನಿಗಿದೆ.

ಶ್ರೀಕೃಷ್ಣ ಅಥವಾ ವಿಷ್ಣುವಿಗೆ ಭಕ್ತಿ ಸೇವೆ ಮಾಡಿದರೆ ಅದು ಎಲ್ಲ ಪಾಪ ಚಟುವಟಿಕೆಯ ಪರಿಣಾಮವನ್ನು ನಿರ್ಮೂಲನಗೊಳಿಸುತ್ತದೆ, ನಾಶಪಡಿಸುತ್ತದೆ. ಹಿಂದಿನ ಪಾಪದ ಪ್ರತಿಕ್ರಿಯೆಗಳನ್ನು ನಿರ್ಮೂಲನ ಮಾಡಿ ಪಾಪ ರಹಿತ ಬದುಕು ಬಾಳುವುದನ್ನು ಅರಿತರೆ ನಾವು ಸಂತೋಷದಿಂದಿರಬಹುದು. ಈ ಜಗತ್ತಿನ ಎಲ್ಲ ಜೀವಿಗಳೂ ಮಾಡುವ

ದೊಡ್ಡ ತಪ್ಪೆಂದರೆ ತಾವು ಆಕರ್ಷಣೆಯ ಕೇಂದ್ರವಾಗಬೇಕೆಂಬ ಆಸೆ ಹೊಂದಿರುವುದು. ಸ್ಪಷ್ಟವಾಗಿ ಹೇಳಬೇಕೆಂದರೆ, ನಾವೇ ಭಗವಂತನಾಗಬೇಕೆಂಬ ಆಸೆ, ಇದು ಜೀವಿಗಳಿಗೆ ಕೃತಕ ಸ್ಥಾನ. ನಾವೇ ದೇವರಾಗಬೇಕೆಂಬ ತಪ್ಪು ಆಸೆಯನ್ನು ಬದಲಿಸಿ ನಮ್ಮ ಪ್ರೀತಿ, ಭಕ್ತಿಯನ್ನು ನಿಜವಾದ ಭಗವಂತ ಶ್ರೀಕೃಷ್ಣನಿಗೆ ಅರ್ಪಿಸಿದರೆ ನಾವು ಎಲ್ಲ ಪಾಪಗಳಿಂದ ಮುಕ್ತರಾಗುತ್ತೇವೆ.

ದೇವರೊಬ್ಬನೇ ಮತ್ತು ನಾವೆಲ್ಲ ಅವನ ಭಾಗಗಳು. ನಾವು ಭಗವಂತನಿಗೆ ಸಮಾನರಲ್ಲ. ಕೃಷ್ಣನೇ ಭಗವಂತ ಮತ್ತು ಅವನೇ ನಮ್ಮ ಗುರು, ಮಾಲೀಕ. ಅವನೇ ನಮ್ಮ ಪಾಲಕ. ಅವನು ಪರಮ ವಿಲಾಸಿ.

ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೃಷ್ಣನೊಂದಿಗೆ ಬಾಂಧವ್ಯವಿದೆ ಮತ್ತು ನಾವು ನಮ್ಮ  ಮೂಲ ಸಂಬಂಧದಲ್ಲಿ ಕೃಷ್ಣನನ್ನು ಪ್ರೀತಿಸಲು ನಮ್ಮನ್ನು ನಾವು ತೊಡಗಿಸಿಕೊಂಡರೆ ನಾವು ಯಶಸ್ವಿಯಾದಂತೆ. ಕೃಷ್ಣನೊಂದಿಗೆ ಭಕ್ತಿಪೂರ್ವ ಚಟುವಟಿಕೆಯಲ್ಲಿ ನಾವು ಪರಮಾನಂದವನ್ನು  ಅನುಭವಿಸುತ್ತೇವೆ. ಹಾಗೆ ಮಾಡದಿದ್ದರೆ, ಆಕರ್ಷಣೆಯ ಕೆಂದ್ರವಾಗಬೇಕೆಂಬ ನಮ್ಮ ಹಾತೊರೆಯುವಿಕೆಯ ಜ್ವಾಲೆಯು ನಮ್ಮ ಹೃದಯಗಳಲ್ಲಿ  ಉರಿಯುವುದು ಮುಂದುವರಿಯುತ್ತದೆ. ಮತ್ತು ಈ ಜಗತ್ತಿನಲ್ಲಿ ಅನೇಕ ಲೌಕಿಕ ವಸ್ತುಗಳನ್ನು ಸ್ವೀಕರಿಸಿ ಜನ್ಮ ಜನ್ಮಾಂತರದಲ್ಲಿ ಇತರೆ ಜೀವಿಗಳೊಂದಿಗೆ ಹೋರಾಟ ನಡೆಸುವಂತಾಗುತ್ತದೆ. ಭಗವಂತನ ಪರಿಶುದ್ಧ ಭಕ್ತರೊಡಗೂಡಿ ನಾವು ಈ ಅಂಶಗಳನ್ನು ಅರಿತುಕೊಳ್ಳಬೇಕು ಮತ್ತು ಕೃಷ್ಣನ ಸೇವಕರಾಗುವ ಕಲೆಯನ್ನು ತಿಳಿದುಕೊಂಡು ದೇವರಾಗಬೇಕೆಂಬ ಆಸೆಯನ್ನು ತೊರೆಯಬೇಕು. ಆಗ ನಾವು ಕೃಷ್ಣನ ಜೊತೆಯಲ್ಲಿ ಶಾಶ್ವತ ಶಾಂತಿ ಪಡೆಯುವುದು ಸಾಧ್ಯ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi