ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತಸ್ವಾಮಿ ಪ್ರಭುಪಾದ ವಿರಚಿತ ಧರ್ಮ ಏಕೆ? ಏನು? ಎಂಬ ಕೃತಿಯಲ್ಲಿ ಹದಿನಾರು ಶಿರೋನಾಮಗಳಿವೆ. ಇವುಗಳಲ್ಲಿ ಧರ್ಮದ ಮೂಲ ಚೂಲಗಳನ್ನು ಸಮಗ್ರವಾಗಿ ವಿವೇಚಿಸಲಾಗಿದೆ. ಧರ್ಮ ವ್ಯಾಪಕಾರ್ಥಗಳುಳ್ಳ ಶಬ್ದ. ವೇದಾಗಮ ಪುರಾಣೋಪನಿಷತ್ತುಗಳಲ್ಲಿ ಧರ್ಮ ಹಾಸು ಹೊಕ್ಕಾಗಿದೆ. ಅದರ ವ್ಯಾಖ್ಯಾನ ಅಪಾರವಾಗಿದೆ. ಅನಂತವಾಗಿದೆ.

ಧಾರಣಾದ್ಧರ್ಮ ಇತ್ಯಾಹುಃ
ಧರ್ಮೋ ಧಾರಯತಿ ಪ್ರಜಾಃ ||
ಜನರನ್ನು ಹಿಡಿದು ನಿಲ್ಲಿಸಿರುವ ಒಗ್ಗೂಡಿಸಿ ಪರಸ್ಪರವಾಗಿ ಸಹಾನುಭೂತಿಯಿಂದ ಸಹಕರಿಸುವಂತೆ ಪ್ರೇರೇಪಿಸಿರುವ ತತ್ತ್ವ ಅಥವಾ ಶಕ್ತಿಗೆ ಧರ್ಮ ಎಂದು ಹೆಸರು ಬಂದಿದೆ. ಸತ್ಯಂವದ ಧರ್ಮಂಚರ. ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ. ಧರ್ಮೇಣ ಪಾಪಮಪನುದತಿ ಧರ್ಮೇ ಸರ್ವಂ ಪ್ರತಿಷ್ಠಿತಂ ತಸ್ಮಾತ್ ಧರ್ಮಂ ಪರಮಂ ವದಂತಿ. ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು.
ಧರ್ಮವು ಪ್ರಪಂಚವನ್ನೆಲ್ಲ ಹಿಡಿದು ನಿಲ್ಲಿಸಿರುತ್ತದೆ. ಅದು ಈ ಜಗತ್ತು ನಾಶವಾಗದಿರುವಂತೆ ವ್ಯವಸ್ಥೆಯಿಂದ ಮುಂದುವರೆಯುತ್ತಿರಲು ಸಹಾಯ ಮಾಡುತ್ತದೆ. ಈ ಲೋಕದಲ್ಲಿ ಸರ್ವತ್ರ ನೆಲಸಬೇಕಾಗಿರುವ ಸುಖಶಾಂತಿಗಳಿಗೆ ಧರ್ಮಾಚರಣೆಯೇ ಮುಖ್ಯವಾದ ಆಲಂಬನವಾಗಿರುವುದರಿಂದ ಅದನ್ನು ಕಾಪಾಡುತ್ತಿರುತ್ತದೆ. ಧರ್ಮವು ಈ ಎಲ್ಲ ಜಗತ್ತಿಗೂ ಆಧಾರ ನೆಲೆಯಾಗಿರುತ್ತದೆ.
ಪ್ರಸ್ತುತ ಕೃತಿಯಲ್ಲಿ ಶ್ರೀ ಮದ್ಭಾಗವತದಲ್ಲಿ ನಿರೂಪಿತವಾಗಿರುವ ಧರ್ಮದ ಎಲ್ಲ ಮುಖಗಳನ್ನೂ ತೆರೆದು ತೋರಿಸಲಾಗಿದೆ.
ಸ ವೈ ಪುಂಸಾಮ್ ಪರೋ
ಧರ್ಮೋಯತೋಭಕ್ತಿರ್ ಅಧೋಕ್ಷಜೋ |
ಅಹುತಕಿ ಅಪ್ರತಿಹತಾ
ಯಯಾತ್ಮಾ ಸುಪ್ರಸೀದತ ||
ಪರಮ ಪರುಷನ ಪ್ರೇಮಪೂರ್ಣ ಭಕ್ತಿಸೇವೆಯ ನೆಲೆಗೆ ಕೊಂಡೊಯ್ಯುವ ವೃತ್ತಿಯೇ ಧರ್ಮ ಎನ್ನಿಸಿಕೊಳ್ಳುತ್ತದೆ. ಆತ್ಮಕ್ಕೆ ಸಂಪೂರ್ಣ ತೃಪ್ತಿ ನೀಡಬೇಕಾದಲ್ಲಿ ಅಂತಹ ಭಕ್ತಿ ಸೇವೆಯು ಬೇರೆ ಯಾವುದರಿಂದಲೂ ಪ್ರೇರಿತವಲ್ಲದ ನಿರಂತರವಾದದ್ದು ಆಗಿರಬೇಕು, ಎಂದು ಧರ್ಮದ ವ್ಯಾಖ್ಯಾನವನ್ನು ಮಾಡಲಾಗಿದೆ. ಗಂಡು ಹೆಣ್ಣು ಹಿರಿಯ ಕಿರಿಯ ಎಂಬ ಭೇದ ಭಾವವಿಲ್ಲದೆ ಪ್ರತಿಯೊಬ್ಬರೂ ಮಾಡಬೇಕಾದ ಕೆಲಸವೇ ಧರ್ಮ.
ಭಗವದ್ಗೀತೆಯಲ್ಲಿ ನಿರೂಪಿತವಾಗಿರುವ ಧರ್ಮದ ಎಲ್ಲ ಪ್ರಸಂಗಗಳನ್ನೂ ಸಾರವತ್ತಾಗಿ ಸಮರ್ಪಕವಾಗಿ ಸಮಗ್ರವಾಗಿ ಶ್ರೀ ಪ್ರಭುಪಾದರು ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಅನೇಕ ಲೌಕಿಕ ದೃಷ್ಟಾಂತಗಳಿಂದ ವಿಶದೀಕರಿಸಿದ್ದಾರೆ.
ಇಂದಿನ ಜನತೆಯ ವಿದ್ಯಮಾನಗಳಿಗೆ ತಕ್ಕಂತೆ ಧರ್ಮದ ವ್ಯಾಖ್ಯಾನ ಮಾಡಿರುವುದು, ನಿತ್ಯ ಜೀವನದಲ್ಲಿನ ಉದಾಹರಣೆಗಳನ್ನು ನೀಡಿರುವುದು, ಸಮಾಜದ ಎಲ್ಲ ವರ್ಗದವರಲ್ಲಿ ಜೀವಂತವಾಗಿರುವ ಧರ್ಮದ ಸ್ವರೂಪವನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸುವುದು ಕೃತಿಯ ವೈಶಿಷ್ಟ್ಯವಾಗಿದೆ.
ಪಂಡಿತ ಪಾಮರರಿಗೂ ಗ್ರಾಹ್ಯವಾಗುವಂತೆ ಸರಳವಾಗಿ ನಿರೂಪಿಸಿರುವುದು ಈ ಕೃತಿಯ ಮಹತ್ವವಾಗಿದೆ. ಧರ್ಮದ ಸಾರ್ಥಕತೆಯನ್ನೂ ಉಪಯುಕ್ತತೆಯನ್ನೂ ಮಹತ್ವವನ್ನೂ ಮನದಟ್ಟು ಮಾಡಿಕೊಡುವ ಮಹತ್ತರ ಕೃತಿ ಧರ್ಮ ಏಕೆ? ಏನು? ಧರ್ಮಪ್ರವರ್ತನೆಯಿಂದಾಗಿ ಕೃಷ್ಣಪ್ರಜ್ಞೆ ಭಕ್ತರ ಮನೋಮಂದಿರದಲ್ಲಿ ಚಿರಂತನವಾಗಿ ನೆಲೆಗೊಳ್ಳುವ ಸಾರ್ಥಕ ಕಾರ್ಯವನ್ನು ಮಾಡುವಲ್ಲಿ ಈ ಕೃತಿ ಸಫಲತೆಯನ್ನು ಕಂಡುಕೊಳ್ಳುವಲ್ಲಿ ಎಳ್ಳಷ್ಟೂ ಸಂಶಯವಿಲ್ಲ.






Leave a Reply