ಪರಿಶುದ್ಧತೆ ಮತ್ತು ಸ್ವಾತಂತ್ರ್ಯ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಪಾದ್ರಿಯೊಬ್ಬರ ನಡುವೆ ಲಂಡನ್‌ನಲ್ಲಿ, 1973ರ ಜುಲೈನಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ: ನಮ್ಮ ದೇವಸ್ಥಾನಗಳಲ್ಲಿ ಕ್ರಮಬದ್ಧವಾಗಿ ಕೃಷ್ಣಪ್ರಜ್ಞೆ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇದರಿಂದ ಯಾರು ಬೇಕಾದರೂ ಕೂಡ ಆಂತರಿಕ ಮತ್ತು ಬಾಹ್ಯವಾಗಿ ಶುದ್ಧೀಕರಣಗೊಳ್ಳಬಹುದು. ಯಃ ಸ್ಮರೇತ್‌ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ  – ಕಮಲ ನಯನ ದೇವೋತ್ತಮ ಪರಮ ಪುರುಷನನ್ನು ನೀವು ಸತತವಾಗಿ ಸ್ಮರಿಸಿಕೊಂಡರೆ ಆಂತರಿಕ ಮತ್ತು ಬಾಹ್ಯವಾಗಿ ಶುದ್ಧವಾಗಿ ಬಿಡುತ್ತೀರಿ. ಏಕೆಂದರೆ ದೇವೋತ್ತಮನು ಪರತರ.

ದೇವರನ್ನು ನೆನಪು ಮಾಡಿಕೊಳ್ಳುವ ಅತ್ಯುತ್ತಮ ವಿಧಾನವೆಂದರೆ ಅವನ ಪವಿತ್ರ ನಾಮದ ಪಠಣೆ. ದೇವರು ಮತ್ತು ದೇವರ ಹೆಸರು ಒಂದೇ. ದೇವೋತ್ತಮನು ಪರಮ ಪುರುಷನಾಗಿರುವುದರಿಂದ, ನಾವು ಹರೇಕೃಷ್ಣ ಮಂತ್ರ ಪಠಿಸಿದರೆ ಕೃಷ್ಣ ಹೆಸರು ಮತ್ತು ವ್ಯಕ್ತಿ ಕೃಷ್ಣ ಇಬ್ಬರೂ ಒಂದೇ. ಲೌಕಿಕ ಪ್ರಪಂಚದಲ್ಲಿ, ದ್ವಿಮುಖಗಳಿರುತ್ತವೆ. ಹೆಸರು ಮತ್ತು ವಸ್ತು, ಸ್ವರೂಪ ಒಂದೇ ಅಲ್ಲ. ನಿಮಗೆ ನೀರು ಬೇಕೆಂದರೆ, ನೀರು, ನೀರು ಎಂದು ಜಪಿಸಿದರೆ ದಾಹ ಅಡಗದು. ನಿಮಗೆ ನೀರಿನ ದ್ರವರೂಪ ಬೇಕಾಗುತ್ತದೆ. ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿ ದೇವರು ಮತ್ತು ಅವನ ಹೆಸರು ಬೇರೆ ಬೇರೆಯಲ್ಲ, ಒಂದೇ. ನೀವು ಕೃಷ್ಣ ಅಥವಾ ದೇವೋತ್ತಮನ ಯಾವುದೇ ಹೆಸರು ಪಠಿಸಿದರೆ ಅದು ದೇವನೊಂದಿಗೆ ಒಂದೇ ರೀತಿ ಇರುತ್ತದೆ. ಆದುದರಿಂದ ನೀವು ದೇವರ ಹೆಸರನ್ನು ಪಠಿಸುವ ಮೂಲಕ ಅವನೊಂದಿಗೆ ಸಂಪರ್ಕ ಹೊಂದುವಿರಿ. ದೇವೋತ್ತಮನೊಂದಿಗೆ ಜೊತೆಗೂಡಿದಾಗ ನೀವು ಶುದ್ಧಗೊಳ್ಳುತ್ತೀರಿ. ಏಕೆಂದರೆ ದೇವರು ಪರಿಶುದ್ಧ. ಅಗ್ನಿ ಜೊತೆ ಸಂಪರ್ಕ ಹೊಂದಿದರೆ ಬೆಚ್ಚಗಾಗುತ್ತದೆ. ಅದೇ ರೀತಿ ನೀವು ಸತತವಾಗಿ ದೇವೋತ್ತಮನೊಂದಿಗೆ ಸಂಪರ್ಕದಲ್ಲಿದ್ದರೆ ನೀವು ಶುದ್ಧವಾಗಿ ಉಳಿಯುತ್ತೀರಿ. ಆದುದರಿಂದ ನಮ್ಮ ಭಕ್ತರು ಸದಾ ಪಠಿಸುತ್ತಿರುತ್ತಾರೆ (ನಾನೂ ಕೂಡ ಪಠಿಸುತ್ತಿರುವೆ) ಅಥವಾ ಕೃಷ್ಣನ ಕುರಿತ ಪುಸ್ತಕ ಓದುತ್ತಿರುತ್ತಾರೆ ಅಥವಾ ಕೃಷ್ಣನ ಕುರಿತು ಮಾತನಾಡುತ್ತಿರುತ್ತಾರೆ. ಈ ರೀತಿ ನಮ್ಮೆಲ್ಲ ಚಟುವಟಿಕೆಗಳಲ್ಲಿ ನಾವು ಕೃಷ್ಣ ಅಥವಾ ದೇವರೊಂದಿಗೆ ಸದಾ ಸಂಪರ್ಕದಲ್ಲಿರುತ್ತೇವೆ. ದೇವಸ್ಥಾನದಲ್ಲಿ ನೋಡಿ, ನಮ್ಮ ಶಿಷ್ಯರು ಕೃಷ್ಣನ ಜೊತೆಗೆ ಸಂಪರ್ಕವಿರುವಂತಹ ಏನಾದರೂ ಕೆಲಸದಲ್ಲಿ ತೊಡಗಿರುತ್ತಾರೆ. ಬೇರೆ ಏನೂ ಕೆಲಸವಿಲ್ಲ. ನಿರ್ಬಂಧಃ ಕೃಷ್ಣ ಸಂಬಂಧೇ. ದೇವರಿಗೆ ಸಂಬಂಧಪಟ್ಟ ಯಾವುದೇ ಆಗಲಿ ಅದು ದೈವಾಂಶ ಸಂಭೂತವೇ. ಧಾರ್ಮಿಕವೇ.

ಪಾದ್ರಿ: ನೋಡಿ, ಬಾಹ್ಯವಾದ ಆಧ್ಯಾತ್ಮಿಕ ಚಟುವಟಿಕೆಗಳು ಅವರೊಳಗೆ, ಆಂತರಿಕವಾಗಿ, ಬದಲಾವಣೆ ಮಾಡುವುದೆಂದು ನನಗನಿಸುವುದಿಲ್ಲ.

ಶ್ರೀಲ ಪ್ರಭುಪಾದ: ಹೌದು. ಒಬ್ಬರು ಆಂತರಿಕ ಮತ್ತು ಬಾಹ್ಯವಾಗಿ ಬದಲಾಗುತ್ತಾರೆ. ನೀವು ವಾಸ್ತವವಾಗಿ ನೋಡಬಹುದು. ಇಲ್ಲಿರುವ ನನ್ನ ಶಿಷ್ಯರು ಬದಲಾಗಿದ್ದಾರೆ.

ಪಾದ್ರಿ: ಆದರೆ ಯಾವುದೇ ವ್ಯಕ್ತಿಯು ಪ್ರತಿ ಭಾನುವಾರ ಚರ್ಚ್‌ಗೆ ಹೋಗಬಹುದು ಮತ್ತು ತಾನು ಶುದ್ಧ ಎಂದು ಹೇಳಬಹುದು.

ಶ್ರೀಲ ಪ್ರಭುಪಾದ: ಇಲ್ಲ.  ಏಳು ದಿನಕ್ಕೆ ಒಮ್ಮೆ – ನಮ್ಮ ಕಾರ್ಯಕ್ರಮ ಹಾಗಲ್ಲ. ನಾವು ದಿನದ ಇಪ್ಪತ್ತು  ನಾಲ್ಕು ಗಂಟೆ ಕಾಲವೂ ಕೃಷ್ಣನ ಸೇವೆಯಲ್ಲಿ ನಿರತರಾಗಿರುತ್ತೇವೆ. ನೀವು ದೇವಸ್ಥಾನದ ನೆಲ ಒರೆಸುತ್ತಿದ್ದೀರೆಂದು ಭಾವಿಸಿಕೊಳ್ಳಿ. ಅದು ಬಾಹ್ಯ ಚಟುವಟಿಕೆ ಮಾತ್ರವಲ್ಲ. ಏಕೆಂದರೆ ನೀವು ಕೃಷ್ಣನ ಬಗೆಗೆ ಯೋಚಿಸುತ್ತಿರುತ್ತೀರಿ, ನೀವು ಕೃಷ್ಣಪ್ರಜ್ಞೆಯಲ್ಲಿ ಇರುತ್ತೀರಿ. ಒಬ್ಬನು ನೆಲ ಒರೆಸುತ್ತಿರಬಹುದು, ಆದರೆ ಅವನು ಶುದ್ಧ ಕೃಷ್ಣಪ್ರಜ್ಞೆಯಲ್ಲಿರುತ್ತಾನೆ. ನಿಮ್ಮ ಪ್ರಜ್ಞೆಯು ಪೂರ್ಣವಾಗಿ ದೇವರನ್ನು ಕುರಿತೇ ಆಗಿದ್ದರೆ, ನೀವು ಸದಾ ಧರ್ಮನಿಷ್ಠರಾಗಿರುತ್ತೀರಿ ಅಥವಾ ಆಸ್ತಿಕರಾಗಿರುತ್ತೀರಿ. ಅದರ ಬಗೆಗೆ ಸಂಶಯವೇ ಬೇಡ. ಒಂದಷ್ಟು ಲೌಕಿಕ, ಮತ್ತೊಂದಷ್ಟು ದೇವರಿಗೆ ಎಂದು ನೀವು ವಿಭಾಗಿಸಿದರೆ, ಆಗ ನೀವು ಅಶುದ್ಧರಾಗಿಯೇ ಉಳಿಯುತ್ತೀರಿ. ಆದರೆ ನೀವು ಎಲ್ಲವನ್ನೂ ಕೃಷ್ಣನ ಸೇವೆಗೆಂದು ಇಟ್ಟರೆ, ಆಗ ಎಲ್ಲವೂ ಧರ್ಮನಿಷ್ಠವಾಗುತ್ತದೆ. ದೇವರ ಕೆಲಸವೆಂದಾಗುತ್ತದೆ.

ಪಾದ್ರಿ: ಭಕ್ತನೊಬ್ಬನಿಗೆ ದೇವರನ್ನು ದ್ವೇಷಿಸುವುದು ಸಾಧ್ಯವೇ?

ಶ್ರೀಲ ಪ್ರಭುಪಾದ:  ಕೃಷ್ಣನನ್ನು ದ್ವೇಷಿಸುವುದೇ?

ಪಾದ್ರಿ: ಇದು ಸಾಧ್ಯವೇ?

ಶ್ರೀಲ ಪ್ರಭುಪಾದ: ಇಲ್ಲ. ಭಕ್ತನೊಬ್ಬ ಕೃಷ್ಣನನ್ನು ದ್ವೇಷಿಸುವುದು ಸಾಧ್ಯವೇ ಇಲ್ಲ. ಹಾಗಾದರೆ ಅವನು ಕೃಷ್ಣನ ಸೇವೆ ಮಾಡುವುದು ಹೇಗೆ?

ಪಾದ್ರಿ:  ತನ್ನ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವಷ್ಟು ಕೃಷ್ಣ ಶಕ್ತಿವಂತ, ನಿಗ್ರಹಗಾರ ಎಂಬುದು ಅವನ ಅರಿವಿಗೆ ಬಂದು ಅವನು ದ್ವೇಷಿಸಬಹುದು.

ಶ್ರೀಲ ಪ್ರಭುಪಾದ: ಆಧ್ಯಾತ್ಮಿಕತೆ ಎಂದರೆ ದೇವೋತ್ತಮನಿಗೆ ನಿಮ್ಮ ಸ್ವಾತಂತ್ರ್ಯವನ್ನು ತ್ಯಾಗ ಮಾಡುವುದೇ ಆಗಿದೆ. ಅದೇ ಅಧ್ಯಾತ್ಮ.

ಪಾದ್ರಿ: ಹಾಗಾದರೆ ನಮ್ಮನ್ನು ಸ್ವತಂತ್ರವಾಗಿ ಎಂದು ಸೃಷ್ಟಿಸಿದ್ದು ಏಕೆ?

ಶ್ರೀಲ ಪ್ರಭುಪಾದ: ನೀವು ಸ್ವತಂತ್ರರಲ್ಲ. ಸ್ವತಂತ್ರರೆಂದು ನೀವು ಭಾವಿಸಬಹುದು. ಆದರೆ ನೀವು ಸ್ವತಂತ್ರರಲ್ಲ. ನೀವು ಪ್ರಕೃತಿಯ ನಿಯಮದಡಿ ಬದುಕಿರುತ್ತೀರಿ. 

ಆದರೂ ನೀವು ಸಂಪೂರ್ಣ ಮುಕ್ತನಾಗಿರುವ ಪರಮಾತ್ಮನ ಅವಿಭಾಜ್ಯ ಅಂಗವಾಗಿರುವುದರಿಂದ ಸ್ವಲ್ಪಮಟ್ಟಿಗೆ ಸ್ವತಂತ್ರರು. ಆದುದರಿಂದ ನಿಮಗೆ ಸ್ವಲ್ಪ ಸ್ವಾತಂತ್ರ್ಯವಿದೆ. ನೀವು ಪರಮಾತ್ಮನಿಗೆ ಸೇವೆ ಸಲ್ಲಿಸಬಹುದು ಅಥವಾ ಸಲ್ಲಿಸದೇ ಇರಬಹುದು – ಅದು ನಿಮ್ಮ ಇಷ್ಟ, ಅದಕ್ಕೆ ನೀವು ಸ್ವತಂತ್ರರು. ದೇವರ ಸೇವೆ ಮಾಡಿದರೆ ನೀವು ಸಂತೋಷ ಪಡುವಿರಿ.  ದೇವರ ಸೇವೆ ಮಾಡದಿದ್ದರೆ ನೀವು ಅಸಂತುಷ್ಟಗೊಳ್ಳುವಿರಿ.

ಪಾದ್ರಿ: ಆದರೆ, ದೇವರಿಗೆ ಸೇವೆ ಸಲ್ಲಿಸಿದರೆ ನಾನು ಆ ಅಲ್ಪ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವೆನೆ?

ಶ್ರೀಲ ಪ್ರಭುಪಾದ: ಇಲ್ಲ. ಪರಮಾತ್ಮನಿಗೆ ಸೇವೆ ಸಲ್ಲಿಸುವುದು ನಿಜವಾದ ಸ್ವಾತಂತ್ರ್ಯ. ಉದಾಹರಣೆಗೆ, ನನ್ನ ಬೆರಳು ನನ್ನ ದೇಹದ ಅವಿಭಾಜ್ಯ ಅಂಗ. ಅದು ಆರೋಗ್ಯ ಪೂರ್ಣವಾಗಿರುವವರೆಗೂ ಅದು ನನ್ನ ದೇಹಕ್ಕೆ ಸೇವೆ ಸಲ್ಲಿಸುತ್ತದೆ. ಆದರೆ, ಅದಕ್ಕೆ ನೋವಿದ್ದರೆ, ಅದು ಅನಾರೋಗ್ಯ ಪೀಡಿತವಾಗಿದ್ದರೆ ಅದಕ್ಕೆ ಸೇವೆ ಸಲ್ಲಿಸಲಾಗದು. ಅದೇ ರೀತಿ, ಜೀವಿಯು ದೇವರಿಗೆ ಸೇವೆ ಸಲ್ಲಿಸದಿದ್ದರೆ, ಅದು ಅವನ ಲೌಕಿಕ ಸ್ಥಿತಿ, ಅವನ ಅನಾರೋಗ್ಯಕರ ಸ್ಥಿತಿ. ಅವನು ಶ್ರೀಕೃಷ್ಣನಿಗೆ ಸೇವೆ ಸಲ್ಲಿಸಿದರೆ, ಅದು ಅವನ ಸ್ವಾಭಾವಿಕ, ಆರೋಗ್ಯಕರ ಸ್ಥಿತಿ. ಏಕೆಂದರೆ ಅವನು ಪರಮಾತ್ಮನ ಅವಿಭಾಜ್ಯ ಅಂಗ.

ಪಾದ್ರಿ: ಭಗವಂತನೊಂದಿಗೆ ನಾವು ಯಾವಾಗ ಸಂಪರ್ಕ ಕಳೆದುಕೊಂಡಿದ್ದೇವೆ?

ಶ್ರೀಲ ಪ್ರಭುಪಾದ: ನೀವು ನಿಮ್ಮ ಅಲ್ಪ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಾಗ. ಉದಾಹರಣೆಗೆ, ಒಂದು ಮಗುವು ತನ್ನ ತಂದೆಯಿಂದ ದೂರವಾಗಿ ಸ್ವತಂತ್ರವಾಗಿರಬೇಕೆಂದು ಆಶಿಸುತ್ತದೆ. ಅದು ರಸ್ತೆಯಲ್ಲಿ ಅಲೆಯುತ್ತದೆ. ಅದು ಸರಿಯಾದ ಆಹಾರವಿಲ್ಲದೆ ಮತ್ತು ಶುಚಿತ್ವ ಇಲ್ಲದೆ ಶೀಘ್ರ ರೋಗಪೀಡಿತವಾಗುತ್ತದೆ. ಅದು ಆರೋಗ್ಯದಿಂದ ಇರುವುದಿಲ್ಲ. ಅದೆ ರೀತಿ, ನಾವು ಪರಮಾತ್ಮನ ಮೇಲೆ ಅವಲಂಬಿತರಾಗಿರಬೇಕು. ನಿಮ್ಮ ಕ್ರಿಶ್ಚಿಯನ್‌ ಬೈಬಲ್‌ನಲ್ಲಿ ಕೂಡ ನೀವು `ಓ, ದೇವರೇ, ದಯೆಯಿಟ್ಟು  ನನ್ನ ದಿನದ ಊಟ ನೀಡು’ ಎಂದು ಪ್ರಾರ್ಥಿಸುವಿರಿ. ಅಂದರೆ, ದೇವರ ಮೇಲಿನ ನಿಮ್ಮ ಅವಲಂಬನೆಯನ್ನು ನೀವು ಒಪ್ಪಿಕೊಂಡಿರಿ ಎಂದು ಅರ್ಥ. ನಿಮಗೆ ಲಭ್ಯವಾಗುವ ಅಲ್ಪ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವುದಕ್ಕಿಂತ  ಪರಮಾತ್ಮನ ಮೇಲೆ ಅವಲಂಬಿತವಾಗಿರುವುದು ಲೇಸು. ದೇವರ ಮೇಲೆ ಅವಲಂಬಿತರಾಗಿ ಉಳಿಯುವುದು ನಮ್ಮ ಆರೋಗ್ಯಪೂರ್ಣ ಸ್ಥಿತಿ. ದೇವರಿಂದ ಮುಕ್ತರೆಂದು ಘೋಷಿಸಿಕೊಂಡರೆ  ಅದು ಅನಾರೋಗ್ಯ ಸ್ಥಿತಿ. ಇದು ನಮ್ಮ ಸಿದ್ಧಾಂತ, ಮತ್ತು ನಿಮ್ಮ ಸಿದ್ಧಾಂತ ಕೂಡ.

ಪಾದ್ರಿ: ಹಾಂ, ಹೌದು, ನಾನು ಅದನ್ನು ಒಪ್ಪುವೆ. ಆದರೆ, ಈ ಜಗತ್ತಿನ ಪರಿಯೊಳಗೆ, ಸೀಮಿತ ಕಾಲ ಮತ್ತು ಸ್ಥಳಾವಕಾಶದಲ್ಲಿ, ನಾವು ಭಗವಂತನ ಮೇಲಿನ ಅವಲಂಬನೆಯನ್ನು ಒಪ್ಪಿಕೊಳ್ಳದೆಯೇ ಆರೋಗ್ಯ ಸ್ಥಿತಿಯಲ್ಲಿರುವುದು ಸಾಧ್ಯವಿಲ್ಲವೇ?

ಶ್ರೀಲ ಪ್ರಭುಪಾದ: ನಮ್ಮ ಪ್ರಕಾರ ಆರೋಗ್ಯಕರವಾಗಿರುವುದೆಂದರೆ ದೈವಪ್ರಜ್ಞೆ ಹೊಂದಿರುವುದು. ಅದು ಆರೋಗ್ಯಕರ ಜೀವನ. ಇಲ್ಲವಾದರೆ, ಯಾರೋ ಕೆಲವರು, ಶಕ್ತಿಶಾಲಿಯಾಗಿದ್ದಾರೆಂದರೆ, ಅವರು ಆರೋಗ್ಯವಂತರು ಎಂದು ಅರ್ಥವೇ?

ಪಾದ್ರಿ: ಹೂಂ. ನಾನು ಹೇಳಬಯಸುವುದೇನೆಂದರೆ, ನನ್ನ ದೇಹವು ಆರೋಗ್ಯವಾಗಿರಬಹುದು.

ಶ್ರೀಲ ಪ್ರಭುಪಾದ: ಅದು ತಾತ್ಕಾಲಿಕ. ಪ್ರತಿಯೊಬ್ಬರಿಗೂ ಸಾವು ಅನಿವಾರ್ಯ. ನೀವು ಶಕ್ತಿಶಾಲಿಯಾಗಿರಬಹುದು, ಆರೋಗ್ಯವಂತರಿರಬಹುದು. ನೀವು ಸಾವನ್ನು ತಡೆಯಲಾಗದು.

ಪಾದ್ರಿ: ಇಲ್ಲ.

ಶ್ರೀಲ ಪ್ರಭುಪಾದ: ಆದುದರಿಂದ, ಅಂತಿಮವಾಗಿ, ನೀವು ಆರೋಗ್ಯವಂತರಾಗಿರುತ್ತೀರೋ ಇಲ್ಲವೋ, ನೀವು ಸಾಯುವಿರಿ. ಅದು ವಾಸ್ತವಾಂಶ. ನಮಗೆ ಅಂತಹ `ಆರೋಗ್ಯಕರ’ ಬದುಕು ಬೇಡ. ನಮ್ಮ ಉದ್ದೇಶವೆಂದರೆ, ಭಗವದ್ಧಾಮಕ್ಕೆ ಮರಳುವುದು, ಪರಮಾತ್ಮನೊಂದಿಗೆ ಶಾಶ್ವತವಾಗಿ ಇರುವುದು ಮತ್ತು ಪರಮಾನಂದವನ್ನು ಅನುಭವಿಸುವುದು. ಇದೇ ನಮ್ಮ ಆರೋಗ್ಯ ಜೀವನ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi