ಶ್ರೀ ಶ್ರೀಮದ್ ಭಕ್ತಿವೇದಾಂತಸ್ವಾಮಿ ಪ್ರಭುಪಾದ ಮತ್ತು ಅವರ ಕೆಲವು ಶಿಷ್ಯರ ನಡುವೆ ಹವಾಯ್‌ನಲ್ಲಿ, 1974ರ ಜನವರಿಯಲ್ಲಿ ನಡೆದ ಸಂವಾದ.
ಭಕ್ತ : ಪ್ರಕೃತಿಯಲ್ಲಿರುವ ಪ್ರತಿಯೊಂದೂ ಸ್ವಲಾಭ ಮತ್ತು ಸಂತೋಷಕ್ಕಾಗಿ ಎಂದು ಐಹಿಕವಾದಿಗಳು ಯೋಚಿಸುತ್ತಾರೆ.
ಶ್ರೀಲ ಪ್ರಭುಪಾದ : ಆದರೆ, ಏನಾದರೂ ವ್ಯವಸ್ಥೆ ಇದ್ದರೆ ಅಲ್ಲಿ ಉನ್ನತ ಮೇಲುಸ್ತುವಾರಿ ಇರಬೇಕು. ನೀವು ಅದನ್ನು ಪ್ರಕೃತಿ ಎಂದು ಕರೆಯಿರಿ, ನಾವು ಒಪ್ಪುತ್ತೇವೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, (3.27) ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ – `ಪ್ರಕೃತಿಯ ನಿರ್ದೇಶನದಿಂದ ಎಲ್ಲವೂ ಮಾಡಲ್ಪಡುತ್ತಿದೆ.’ ಆದುದರಿಂದ ಪ್ರಕೃತಿಯು ನಿಮಗಿಂತ ಶ್ರೇಷ್ಠ. ಇದನ್ನು ನೀವು ಒಪ್ಪಿಕೊಳ್ಳಬೇಕು, ಏಕೆಂದರೆ ನೀವು ಪ್ರಕೃತಿಯ ನಿರ್ದೇಶನಕ್ಕೆ ಒಳಪಟ್ಟಿದ್ದೀರಿ.

ಭಕ್ತ : ಐಹಿಕವಾದಿಗಳು ಪ್ರಕೃತಿಗಿಂತ ತಾವೇ ಶ್ರೇಷ್ಠರಾಗಬೇಕೆಂದು ಆಶಿಸುತ್ತಾರೆ.
ಶ್ರೀಲ ಪ್ರಭುಪಾದ : ಅದು ಮೂರ್ಖತನ. ಕೃಷ್ಣ ಹೇಳುತ್ತಾನೆ.
ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ ।
ಅಹಂಕಾರ-ವಿಮೂಢಾತ್ಮಾ ಕರ್ತಾಹಂ ಇತಿ ಮನ್ಯತೇ ॥
ಈ ಮೂರ್ಖನ ಕ್ರಿಯೆಗಳೆಲ್ಲವೂ ಪ್ರಕೃತಿಯ ಆಜ್ಞೆಯಂತೆ ನಡೆಯುತ್ತಿರುವುದು. ಆದರೆ `ನಾನೇ ದೇವರು’ ಎಂದು ಅವನು ಯೋಚಿಸುತ್ತಿದ್ದಾನೆ. `ನಾನು ಪ್ರಕೃತಿಯನ್ನು ನಿಯಂತ್ರಿಸುತ್ತಿರುವೆ’ ಅಥವಾ ಮುಂದೆ, ಭವಿಷ್ಯದಲ್ಲಿ ಪ್ರಕೃತಿಯನ್ನು ನಿಯಂತ್ರಿಸಲು ನಾನು ಸಮರ್ಥನಾಗುವೆ’ ಎಂದು ಅವನು ಅಹಂಕಾರದಿಂದ ತಪ್ಪಾಗಿ ಯೋಚಿಸುತ್ತಿದ್ದಾನೆ. ಇದು ಮೂರ್ಖತನ.
ಭಕ್ತ : ವಿಜ್ಞಾನಿಗಳು ಈಗಾಗಲೇ ಪ್ರಕೃತಿಯ ಮೇಲೆ ಭಾಗಶಃ ನಿಯಂತ್ರಣ ಸಾಧಿಸಿಬಿಟ್ಟಿರುವುದಕ್ಕೆ ಎಷ್ಟೊಂದು ಪುರಾವೆಗಳನ್ನು ನೀಡುತ್ತಾರೆ. ನಾವು ಈಗ ಇಡೀ ಜಗತ್ತಿನ ಮೇಲೆ ಹಾರಾಡಬಹುದು…
ಶ್ರೀಲ ಪ್ರಭುಪಾದ : ಭಾಗಶಃ ನಿಯಂತ್ರಣವೆಂದರೆ ಹತೋಟಿಯೇ ಅಲ್ಲ. ನಾವು ಪ್ರಕೃತಿಯಿಂದ ನಿಯಂತ್ರಿಸಲ್ಪಟ್ಟದ್ದೇವೆ, ಇದನ್ನು ನೀವು ತಿರಸ್ಕರಿಸಲಾಗದು. ಇನ್ನು, ಮುಂದಿನ ಪ್ರಶ್ನೆ – ಪ್ರಕೃತಿ ಹೇಗೆ ಕಾರ್ಯನಿರ್ವಹಿಸುತ್ತಿದೆ? ಇದನ್ನೂ ಕೃಷ್ಣ ಭಗವದ್ಗೀತೆಯಲ್ಲಿ ವಿವರಿಸಿದ್ದಾನೆ, (9.10), ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಂ – `ಐಹಿಕ ಪ್ರಕೃತಿಯು ನನ್ನ ಅಪ್ಪಣೆಯಂತೆ ಸೃಷ್ಟಿಗೊಂಡು ನನ್ನ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತದೆ.’ ಸ್ವಲ್ಪಮಟ್ಟಿಗೆ ನಾವೂ ಕೂಡ ಲೌಕಿಕ ಪ್ರಕೃತಿಯ ಉಸ್ತುವಾರಿ ಕೈಗೊಂಡಿದ್ದೇವೆ. ಉದಾಹರಣೆಗೆ, ಸ್ವಲ್ಪ ಮಣ್ಣು. ಈ ಮಣ್ಣಿನಿಂದ ನಾವು ಇಟ್ಟಿಗೆ ಮಾಡಿ ಬಹು ಮಹಡಿ ಕಟ್ಟಡ ಕಟ್ಟಬಹುದು. ಮಣ್ಣು ತಾನೇ ಸ್ವತಃ ಕಟ್ಟಡವಾಗಿಬಿಡುವುದಿಲ್ಲ. ಜೀವಿಯು ಮಣ್ಣನ್ನು ಬಳಸಿ ಇಟ್ಟಿಗೆ ಮಾಡಬೇಕು. ಅನಂತರ ಅದನ್ನು ಕಟ್ಟಡ ನಿರ್ಮಿಸಲು ಬಳಸಬೇಕು. ಮತ್ತೊಂದು ಉದಾಹರಣೆ ವಿಮಾನ. ಇದು ಅನೇಕ ವಸ್ತುಗಳಿಂದ ತಯಾರಾಗಿದೆ. ಆದರೆ ಇದನ್ನು ತಯಾರಕರು ನಿರ್ಮಿಸಬೇಕು ಮತ್ತು ಪೈಲಟ್ ಹಾರಿಸಬೇಕು. ಆದುದರಿಂದ, ವಿಮಾನದ ಚಾಲಕ ಅಥವಾ ತಯಾರಕ ವಿಮಾನಕ್ಕಿಂತ ಶ್ರೇಷ್ಠ.

ಒಂದು ದೊಡ್ಡ ಯಂತ್ರದಂತೆ ಐಹಿಕ ಪ್ರಕೃತಿಯ ಅಂಶಗಳು (ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂ) ಸೇರಿಕೊಂಡು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿವೆಯೆಂದರೆ, ಯಾವುದೋ ಜೀವಿಯ ಕೌಶಲ್ಯಕ್ಕೆ ಅವು ಒಳಪಟ್ಟಿರುವುದನ್ನು ಯಾರೂ ನೋಡಬಹುದಾಗಿದೆ. ಮತ್ತು ಆ ಜೀವಿಯು ಭಗವಂತ ಅಥವಾ ಕೃಷ್ಣ. ಆದುದರಿಂದ ನಮ್ಮ ನೆಲೆ ಏನೆಂದರೆ, ನಾವು ಲೌಕಿಕ ಪ್ರಕೃತಿಯ ನಿಯಂತ್ರಣಕ್ಕೆ ಒಳಪಟ್ಟಿದ್ದರೆ, ಪ್ರಕೃತಿಯು ಕೃಷ್ಣನ ನಿಯಂತ್ರಣದಲ್ಲಿದೆ. ಪ್ರಜ್ಞಾವಂತರಾದವರು ಯೋಚಿಸುವುದು, ಎಷ್ಟಾದರೂ ಪರಮ ನಿಯಂತ್ರಕನು ಕೃಷ್ಣ. ಆದುದರಿಂದ ನೇರವಾಗಿ ಅವನ ನಿಯಂತ್ರಣಕ್ಕೆ ಏಕೆ ಬರಬಾರದು? ನೇರವಾಗಿ ಅವನಿಗೇ ಸೇವೆ ಸಲ್ಲಿಸಬಾರದೇಕೆ? ಅದು ಒಳ್ಳೆಯ ರೀತಿ.
ಭಕ್ತ : ಕೃಷ್ಣನ ನಿಯಂತ್ರಣ ಮತ್ತು ಐಹಿಕ ಪ್ರಕೃತಿಯ ನಡುವಣ ವ್ಯತ್ಯಾಸವು ಕೃಷ್ಣನು ದಯಾಳು ಆಗಿದ್ದರೆ, ಲೌಕಿಕ ಪ್ರಕೃತಿ ಅಲ್ಲ ಎಂದು ಕಾಣುತ್ತದೆ. ಜೈಲ್ ಅಧಿಕಾರಿಯಂತೆ.
ಶ್ರೀಲ ಪ್ರಭುಪಾದ : ಹೌದು. ಐಹಿಕ ಪ್ರಕೃತಿಯು ಒಬ್ಬ ಜೈಲ್ ಸೂಪರಿಂಟೆಂಡೆಂಟ್ ಇದ್ದಂತೆ. ನೀವು ಸರಕಾರದ ನಿಯಮಗಳಿಗೆ, ಭಗವಂತನ ಕಟ್ಟಳೆಗಳಿಗೆ ಗೌರವಕೊಡದಿದ್ದರೆ, ನೀವು ಜೈಲ್ ಸೂಪರಿಂಟೆಂಡೆಂಟ್ ಅವರಿಂದ ನಿಯಂತ್ರಿಸಲ್ಪಡುತ್ತೀರಿ. ಅಷ್ಟೇ, ಅದು. ನೀವು ನಿಯಂತ್ರಿಸಲ್ಪಡುತ್ತೀರ, ನೀವು ಮುಕ್ತರಾಗಿರುವುದು ಸಾಧ್ಯವಿಲ್ಲ. ಇದು ನಿಮ್ಮ ಸಹಜ ರೂಪ, ನಿಜ ಸ್ಥಿತಿ.
ಭಕ್ತ : ಪ್ರೀತಿ ಅಥವಾ ಬಲದಿಂದ ನಿಯಂತ್ರಿಸಲ್ಪಡುವ ಎರಡು ಆಯ್ಕೆಗಳು ನಮಗಿವೆ.
ಶ್ರೀಲ ಪ್ರಭುಪಾದ : ಹೌದು. ಕೃಷ್ಣನ ನಿಯಂತ್ರಣಕ್ಕೆ ಒಳಪಡಬೇಕೆಂದು ನಾವು ನಿರ್ಧರಿಸಿದರೆ, ಇದು ಅವನ ಮೇಲಿನ ಪ್ರೀತಿಯಿಂದ. ಅದೇ ರೀತಿ, ನೀವು ನನ್ನಿಂದ ನಿಯಂತ್ರಿಸಲ್ಪಟ್ಟಿದ್ದೀರ, ಆದರೆ ಬಲವಂತ ಇಲ್ಲ. ನೀವು ಸ್ವಯಂ ಪ್ರೇರಿತರಾಗಿ ನನ್ನ ಸೇವೆ ಕೈಗೊಳ್ಳುವಿರಿ, ಪ್ರೀತಿಯಿಂದ. ನಿಮಗೆ ನಾನು ಯಾವುದೇ ಸಂಬಳ ನೀಡುತ್ತಿಲ್ಲ. ಆದರೂ ಏನಾದರೂ ಮಾಡಬೇಕೆಂದು ನಾನು ಹೇಳಿದರೆ ನೀವು ತತ್‌ಕ್ಷಣ ಮಾಡುವಿರಿ. ಏಕೆ? ನಮ್ಮಿಬ್ಬರ ನಡುವೆ ಪ್ರೀತಿ ಇದೆ.

ಭಕ್ತ : ಕೃಷ್ಣನ ನಿಯಂತ್ರಣ ಮತ್ತು ಐಹಿಕ ಪ್ರಕೃತಿಯ ನಡುವಣ ವ್ಯತ್ಯಾಸವನ್ನು ವ್ಯಕ್ತಿಯೊಬ್ಬ ಅರ್ಥಮಾಡಿಕೊಂಡರೂ ಅವನು ಲೌಕಿಕ ಪ್ರಕೃತಿಯಿಂದ ನಿಯಂತ್ರಿಸಲ್ಪಡಲು ಆಶಿಸುವ ಸಾಧ್ಯತೆ ಇದೆಯೇ?
ಶ್ರೀಲ ಪ್ರಭುಪಾದ : ಹೌದು. ಅವನು ಆಗಲೇ ಆ ಆಯ್ಕೆ ಮಾಡಿಕೊಂಡಿದ್ದಾನೆ. `ನಾನು ಈಗ ದೇವೋತ್ತಮನಿಂದ ಸ್ವತಂತ್ರ’ ಎಂದು ಯೋಚಿಸುತ್ತ ಮೂರ್ಖನಾಗಿದ್ದಾನೆ. ಹೀಗಾಗಿ
ಅವನು ಭಗವಂತನ ಪ್ರತಿನಿಧಿ ಲೌಕಿಕ ಪ್ರಕೃತಿಯಿಂದ ನಿಯಂತ್ರಿಸಲ್ಪಟ್ಟಿರುವುದನ್ನು ಅರ್ಥಮಾಡಿಕೊಳ್ಳಲಾರ. ಪ್ರತಿ ಕ್ಷಣವೂ ನಿಯಂತ್ರಣದಲ್ಲಿದ್ದರೂ `ನಾನು ಸ್ವತಂತ್ರ’ ಎಂದೆ ಯೋಚಿಸುತ್ತಾನೆ. ಆದುದರಿಂದ ಅವನು ಭ್ರಮೆಯಲ್ಲಿದ್ದಾನೆ. ಭ್ರಮೆ, ಮಾಯೆ ಎಂದರೆ `ವಾಸ್ತವ ಅಲ್ಲದ ಯಾವುದನ್ನೋ ನಂಬುವುದು’ ಎಂದು ಅರ್ಥ. ಹೀಗಾಗಿ, `ದೇವರಿಲ್ಲ, ನಾವು ಸ್ವತಂತ್ರರು’ಎಂದು ಯೋಚಿಸುವ ಐಹಿಕವಾದಿಗಳು ಮತ್ತು ವಿಜ್ಞಾನಿಗಳೆನಿಸಿಕೊಳ್ಳುವವರು ಮೂರ್ಖರು ಮತ್ತು ಅವರ ಆಲೋಚನೆ ಬಾಲಿಶ. ಆದುದರಿಂದ ಕೃಷ್ಣನು ಅವುಗಳನ್ನು ವಿವರಿಸಲು ವಿಮೂಢಾತ್ಮಾ ಎಂಬ ಪದ ಬಳಸಿದ್ದಾನೆ. ವಿಮೂಢಾತ್ಮಾ ಎಂದರೆ ಮೂರ್ಖ ಎಂದು ಅರ್ಥ.
ಭಕ್ತ : ಲೌಕಿಕ ಪ್ರಕೃತಿಯಲ್ಲಿ ಬದುಕು ಅಷ್ಟೇನೂ ಕೆಟ್ಟದಲ್ಲ ಎಂದು ಭಾವಿಸುತ್ತಾರೆ. ಇದು ಆನಂದಮಯ ಎಂದು ಅವರು ಭಾವಿಸುತ್ತಾರೆ. ತಮಗೆ ತಮಾಷೆಯಾಗಿದೆ ಎನ್ನುತ್ತಾರೆ, ಅವರು.
ಶ್ರೀಲ ಪ್ರಭುಪಾದ : ಹೌದು. ಅದು ಮತ್ತೊಂದು ಭ್ರಮೆ. ಲೌಕಿಕ ಬದುಕು ಸಂತೋಷವಲ್ಲ ಎಂದು ಭಾವಿಸಿದರೆ ಅವನು ಅದನ್ನು ಹೇಗೆ ಸಹಿಸಬಲ್ಲ? ಹಂದಿಯು ಮಲವನ್ನು ಸೇವಿಸುವುದನ್ನು ನೋಡಿದಾಗ ನಾವು ಜಿಗುಪ್ಸೆಪಡುತ್ತೇವೆ. `ಇದು ಖುಷಿಯಾದದ್ದು’ ಎಂದು ಹಂದಿ ಯೋಚಿಸುವವರೆಗೂ ಅದು ಹೇಗೆ ಮಲವನ್ನು ತಿನ್ನುತ್ತದೆ? ಅತ್ಯಂತ ಹೊಲಸನ್ನು ಅದು ತಿನ್ನುತ್ತಿದೆ. ಆದರೆ ಅದು ಯೋಚಿಸುತ್ತೆ, `ನಾನು ಆನಂದಿಸುತ್ತಿರುವೆ’ ಇದು ಮಾಯೆ, ಭ್ರಮೆ.
ಭಕ್ತ : ಈ ಬದುಕು ಪೂರಾ ಸಂಕಷ್ಟದ್ದು ಎಂದು ನಾವು ಜನರಿಗೆ ಹೇಳಿದರೆ ಅವರು, `ಏನು ಹಾಗೆಂದರೆ?’ ಎಂದು ಕೇಳುತ್ತಾರೆ.
ಶ್ರೀಲ ಪ್ರಭುಪಾದ : ಅದು ಅವರ ಮೂರ್ಖತನ. ಸಂಕಷ್ಟ, ಸಂತೋಷದ ವ್ಯತ್ಯಾಸ ತಿಳಿಯದವರು. ಕೃಷ್ಣನ ಪ್ರತಿನಿಧಿ ಲೌಕಿಕ ಪ್ರಕೃತಿಯಿಂದ ಒದೆಯಲ್ಪಟ್ಟಿದ್ದಾರೆ. ನಿಯಂತ್ರಕ ಅಥವಾ ಮೋಜುಮಾಡುವವರಾಗಲು ಅವರು ನಾನಾ ವಿಧಗಳಲ್ಲಿ ಅಪೇಕ್ಷಿಸುತ್ತಿರುವುದರಿಂದ ಅವರಿಗೆ ಅನೇಕ ರೀತಿಯ ದೇಹ ಮತ್ತು ಸಂಕಷ್ಟಗಳನ್ನು ಜನ್ಮದಿಂದ ಜನ್ಮಗಳಿಗೆ ನೀಡಲಾಗುತ್ತಿದೆ. ಜನರಿಗೆ ಬುದ್ಧಿಯೇ ಇಲ್ಲದಿರುವುದರಿಂದ ಅವರು ಈ ಐಹಿಕ ಬದುಕು ಆನಂದಮಯ ಎಂದು ಯೋಚಿಸುತ್ತಾರೆ. ನಿಮಗೆ, ಅಮೆರಿಕನ್ನರಿಗೆ ಒಳ್ಳೆಯ ಸೌಲಭ್ಯಗಳಿರಬಹುದು, ಆದರೆ ನಿಮಗೆ ಅದನ್ನು ಅನುಭವಿಸಲಾಗದು. ಪ್ರಕೃತಿಯ ಒತ್ತಡದಿಂದ ನೀವೂ ನಿಮ್ಮ ಸ್ಥಾನವನ್ನು ಬದಲಿಸಬೇಕು. ನೀವೇನು ಮಾಡುವಿರಿ? ನೀವು ಇಂದು ಗಗನಚುಂಬಿ ಕಟ್ಟಡದ 24ನೇ ಮಹಡಿಯಲ್ಲಿ ವಾಸಿಸುತ್ತಿರಬಹುದು. ಮತ್ತು ನಾಳೆ ನೀವು ಅದೇ ನಿವಾಸದಲ್ಲಿ ಇಲಿಯಾಗಿರಬಹುದು. ಪ್ರಕೃತಿ ನಿಯಮಗಳನ್ನು ಬದಲಿಸುವ ಶಕ್ತಿ ನಿಮ್ಮ ಕೈಯಲ್ಲಿ ಇಲ್ಲ.

ವಾಸ್ತವವಾಗಿ ಪ್ರತಿಯೊಬ್ಬರೂ ಪ್ರತಿಕ್ಷಣವೂ ಐಹಿಕ ಪ್ರಕೃತಿಯಿಂದ ನಿಯಂತ್ರಿಸಲ್ಪಟ್ಟಿದ್ದಾರೆ. ಈ ಲೌಕಿಕ ಪ್ರಕೃತಿಯಿಂದ, ಪುನರಪಿ ಮರಣಂ ಪುರಪಿ ಜನನಂನ ಸಂಕಷ್ಟದಿಂದ ಪಾರಾಗುವುದು ಹೇಗೆ ಎಂದು ಬುದ್ಧಿವಂತರು ಕೇಳುತ್ತಾರೆ. ಈ ಸಂಕಷ್ಟವನ್ನು ಅಂತ್ಯಗೊಳಿಸುವುದು ಹೇಗೆ ಎಂಬುದರ ಬಗೆಗೆ ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸಿದ್ದಾನೆ, (7.14) ಮಾಮ್ ಏವ ಯೇ ಪ್ರಪದ್ಯಂತೇ ಮಾಯಾಂ ಏತಾಂ ತರನ್ತಿ ತೇ. `ಆ ಮೂರ್ಖನು ನನಗೆ ಶರಣಾದ ಕೂಡಲೇ ಅವನು ನನ್ನ ಈ ಲೌಕಿಕ ಪ್ರಕೃತಿ ನಿಯಂತ್ರಣದಿಂದ ಹೊರಬರುತ್ತಾನೆ.’ ಕೃಷ್ಣನಿಗೆ ಶರಣಾಗುವುದೇ ನಿಜವಾದ ಬುದ್ಧಿವಂತಿಕೆ.






Leave a Reply