ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ನಡುವೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ, ಬೆಳಗಿನ ವಾಯುವಿಹಾರ ಸಂದರ್ಭದಲ್ಲಿ ನಡೆದ ಸಂವಾದ.

ಮೊದಲನೆಯ ಶಿಷ್ಯ: ಶ್ರೀಲ ಪ್ರಭುಪಾದ, ಇತ್ತೀಚೆಗೆ ಇಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ. ಇದು ದೇಶದ ಎಲ್ಲ ಕಡೆಯೂ ನಡೆಯುತ್ತಿದೆ.
ಶ್ರೀಲ ಪ್ರಭುಪಾದ: ಇದು ಹೇಗೆಂದರೆ, ಕೆಲವರು ಬಹಿರಂಗವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಇನ್ನೂ ಕೆಲವರು ಮೌನವಾಗಿ ಆತ್ಮಹತ್ಯೆಗೆ ಮೊರೆಹೋಗುತ್ತಿದ್ದಾರೆ. ನೋಡಿ, ಇಂದ್ರಿಯ ತೃಪ್ತಿಗೆ ಜೀವನವನ್ನು ವ್ಯರ್ಥಗೊಳಿಸಿದರೆ, ಅದು ಆತ್ಮಹತ್ಯೆ. ವಿವೇಚನೆ, ಜ್ಞಾನೋದಯಕ್ಕೆ ಅವಕಾಶವಿದ್ದರೂ ಜನರು ನಾಯಿ, ಬೆಕ್ಕಿನಂತೆ ಬದುಕುತ್ತಾರೆ. ಇದು ಆತ್ಮಹತ್ಯೆ.
ಎರಡನೆಯ ಶಿಷ್ಯ: ಸುಮಾರು ಒಂದು ತಿಂಗಳ ಹಿಂದೆ ಪತ್ರಿಕೆಗಳಲ್ಲಿ ರೋಚಕ ಸುದ್ದಿ ಪ್ರಕಟವಾಗಿತ್ತು. ವಿದ್ಯಾರ್ಥಿಯೊಬ್ಬ ಲೈಬ್ರರಿ ಆಫ್ ಕಾಂಗ್ರೆಸ್‌ನಲ್ಲಿ ಸಂಶೋಧನೆ ನಡೆಸಿ ಒಂದು ಅಣು ಬಾಂಬ್ ಅನ್ನು ನಿರ್ಮಿಸಲು ಬೇಕಾದ ಮಾಹಿತಿಯನ್ನು ಸಂಗ್ರಹಿಸಿದನು. ಯಾರು ಬೇಕಾದರೂ ತಾತ್ತ್ವಿಕವಾಗಿ, ಸಾರ್ವಜನಿಕ ಮೂಲಗಳಿಂದ, ಮಾಹಿತಿ ಸಂಗ್ರಹಿಸಿ ಅಣು ಬಾಂಬ್ ತಯಾರಿಸಬಹುದೆಂದು ಈ ಸುದ್ದಿಯನ್ನು ವಿಶ್ಲೇಷಿಸಲಾಗಿತ್ತು.
ಶ್ರೀಲ ಪ್ರಭುಪಾದ: ಇದೂ ಕೂಡ ಆತ್ಮಹತ್ಯೆಯೇ. ಅಣು ಬಾಂಬ್ ತಯಾರಕನು ತಾನು ಬಾಂಬ್ ತಯಾರಿಸಿಬಿಟ್ಟೆನೆಂದು ಸಂತೃಪ್ತಿಯ ನಗೆ ಬೀರಬಹುದು. ಇದು ತನ್ನ ಬದುಕಿನ ಯಶಸ್ಸೆಂದೂ ಅವನು ಭಾವಿಸಬಹುದು. ಆದರೆ ಅವನಿಗೆ ಸಾವಿನಿಂದ ತನ್ನ ಜೀವವನ್ನು ಉಳಿಸಿಕೊಳ್ಳುವುದು ಗೊತ್ತೆ? ಖಂಡಿತ ಇಲ್ಲ. ಅವನು ಮಾಡಿದ್ದು ಯಾವುದೂ ಕೂಡ ಅವನನ್ನು ಸಾವಿನಿಂದ ಪಾರು ಮಾಡುವುದಿಲ್ಲ. ಆದುದರಿಂದ ಅವನ ವೈಜ್ಞಾನಿಕ ಜ್ಞಾನದಿಂದ ಏನು ಪ್ರಯೋಜನಾ? ನಾಯಿಯೂ ಸಾಯುತ್ತದೆ, ಅವನೂ ಸಾಯುತ್ತಾನೆ. ವ್ಯತ್ಯಾಸವೆಲ್ಲಿದೆ?
ಮೊದಲನೆಯ ಶಿಷ್ಯ: ಪ್ರಾಸಂಗಿಕವಾಗಿ ಹೇಳಬೇಕೆಂದರೆ, ಅಣು ಬಾಂಬ್ ತಯಾರಿಸಲು ವಿಜ್ಞಾನಿಗಳ ಮೂಲ ಉದ್ದೇಶವೆಂದರೆ ಸಾವನ್ನು ತಡೆಯುವುದು! ಅಂದರೆ ಎರಡನೇ ಮಹಾ ಸಮರವನ್ನು ಆದಷ್ಟು ಬೇಗ ಅಂತ್ಯಗೊಳಿಸುವುದು. ಇದರಿಂದ ಸಾವಿಗೆ ಕಡಿವಾಣ ಹಾಕಬಹುದಲ್ಲ…
ಶ್ರೀಲ ಪ್ರಭುಪಾದ: ಅವರು ಅದ್ಹೇಗೆ ಸಾವನ್ನು ತಡೆಯಬಲ್ಲರು? ಸಾವನ್ನು ತಡೆಯುವುದು ಹೇಗೆಂದು ಅವರಿಗೆ ಗೊತ್ತಿಲ್ಲ. ಅವರು ಮಾಡಿದ್ದಾವುದೂ ಅವರನ್ನು ಸಾವಿನಿಂದ ಪಾರು ಮಾಡುವುದಿಲ್ಲ. ಅವರು ಅದನ್ನು ತ್ವರಿತಗೊಳಿಸಬಹುದು ಅಷ್ಟೇ. ನಿಜವಾದ ಸಮಸ್ಯೆಗಳು ಇಲ್ಲಿವೆ, ನೋಡಿ – ಜನ್ಮ ಮೃತ್ಯು ಜರಾ ವ್ಯಾಧಿ – ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗ. ವಿಜ್ಞಾನಿಗಳು ಇವುಗಳನ್ನು ಪರಿಹರಿಸಬಲ್ಲರೇ, ಹೇಳಿ. ಇವು ನಿಜವಾಗಿಯೂ ಭಯ ಮೂಡಿಸುವಂತಹ ಸಮಸ್ಯೆಗಳು. ಇದನ್ನು ಪರಿಹರಿಸುವ ಔಷಧ ತಜ್ಞ ಅಥವಾ ಮನೋವೈದ್ಯರು ಎಲ್ಲಿದ್ದಾರೆ, ತೋರಿಸಿ.

ಮೊದಲನೆಯ ಶಿಷ್ಯ: ಈಗ ಬೇರೆಯದೇ ಮಾತಿದೆ. ರಷ್ಯ ಮತ್ತು ಅಮೆರಿಕ ಇಬ್ಬರಲ್ಲೂ ವಿಪರೀತ ಅಣ್ವಸ್ತ್ರಗಳಿವೆ. ಈಗ ಇಬ್ಬರಿಗೂ ಅವುಗಳನ್ನು ಪರಸ್ಪರ ಬಳಸಲು ಭಯ.
ಶ್ರೀಲ ಪ್ರಭುಪಾದ: ಹೂಂ. ಇಲ್ಲ. ಅವರು ಅದನ್ನು ಬಳಸಲೇಬೇಕು. ಅದು ಪ್ರಕೃತಿಯ ವ್ಯವಸ್ಥೆ. ಇದೇನೂ ಜ್ಯೋತಿಶಾಸ್ತ್ರವಲ್ಲ. ಇದು ಸಹಜ ತೀರ್ಮಾನ. ಈ ಬಗ್ಗೆ ಸಂಶಯವೇ ಬೇಡ.
ಮೊದಲನೆಯ ಶಿಷ್ಯ: ಇಲ್ಲಿರುವ ಒಂದೇ ಸಮಸ್ಯೆ ಎಂದರೆ, ಅವರು ಅಣ್ವಸ್ತ್ರ ಬಳಸಿದರೆ, ಸಂಪೂರ್ಣ ವಿನಾಶ. ಹೀಗಾಗಿ ಅದನ್ನು ಬಳಸಲು ಹಿಂಜರಿಕೆ. ಎಲ್ಲರೂ ಭಯಭೀತರಾಗಿದ್ದಾರೆ.
ಶ್ರೀಲ ಪ್ರಭುಪಾದ: ಸಂಪೂರ್ಣವೋ ಭಾಗಶಃವೋ, ಅದನ್ನು ಆಮೇಲೆ ನೋಡೋಣ. ಆದರೆ ಅಣ್ವಸ್ತ್ರಗಳ ಬಳಕೆ ಆಗಿ ತೀರಲೇಬೇಕು. ಈ ನಾಯಕರಿಗೆ ನಿಜವಾಗಿಯೂ ಯುದ್ಧವನ್ನು ತಡೆಯಬೇಕೆಂದಿದ್ದರೆ ಅವರು ಮೂರು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು : ಪ್ರತಿಯೊಂದಕ್ಕೂ ಭಗವಂತನೇ ಮಾಲೀಕ, ಎಲ್ಲ ಕೆಲಸಗಳಿಗೂ ಅವನೇ ಭೋಕ್ತ, ಮತ್ತು ಅವನು ಪ್ರತಿಯೊಬ್ಬರ ಮಿತ್ರ. ಆದರೆ ನಾಯಕರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. `ನಾನೇ ಮಾಲೀಕ, ನಾನೇ ಭೋಕ್ತ, ಮತ್ತು ನಾನೇ ಎಲ್ಲರ ಗೆಳೆಯ, ಏಕೆಂದರೆ ನಾನೇ ದೇವರು’, ಎನ್ನುವುದು ಅವರ ಯೋಚನಾ ಲಹರಿ ಆಗಿರುತ್ತದೆ. ಇದು ಆಸುರೀ ಭಾವ. ನಿಕ್ಸನ್ ತಾನು ಎಲ್ಲರ ಮಿತ್ರ ಎಂದು ಹೇಳಿಕೊಂಡು ಅಧ್ಯಕ್ಷರಾದರು. ಆದರೆ ಅನಂತರ ಶತ್ರು ಎಂದು ಅವರು ಸಾಬೀತುಪಡಿಸಿದರು. ಕೃಷ್ಣ ಮಾತ್ರ ಎಲ್ಲರಿಗೂ ಮಿತ್ರನಾಗುವುದು ಸಾಧ್ಯ. ಇನ್ಯಾರಿಗೂ ಸಾಧ್ಯವಿಲ್ಲ.

ಮೂರನೆಯ ಶಿಷ್ಯ: ಆದರೆ ಪರಮಾತ್ಮನ ಪರಿಶುದ್ಧ ಭಕ್ತನು ಎಲ್ಲರಿಗೂ ಮಿತ್ರನಲ್ಲವೇ?
ಶ್ರೀಲ ಪ್ರಭುಪಾದ: ಹೌದು, ಏಕೆಂದರೆ ಅವನು ಕೃಷ್ಣನ ಸಂದೇಶ ಒಯ್ಯುತ್ತಾನೆ. ಸರ್ವಮಾನ್ಯ ಗೆಳೆಯ ಇದ್ದಾರೆಂದುಕೊಳ್ಳಿ. ಅವರ ಬಗೆಗೆ ಯಾರಾದರೂ ಮಾಹಿತಿ ಒದಗಿಸಿದರೆ, ಅವರೂ ಸರ್ವಮಾನ್ಯ ಮಿತ್ರರಾಗುತ್ತಾರೆ. ಕೃಷ್ಣನು ಎಲ್ಲರ ಮಿತ್ರ (ಸುಹೃದಂ ಸರ್ವ- ಭೂತಾನಾಂ), ಮತ್ತು ಒಬ್ಬ ಪರಿಶುದ್ಧ ಭಕ್ತನು ಎಲ್ಲರಿಗೂ ಕೃಷ್ಣ ತನ್ನ ಮಿತ್ರನೆಂದು ಹೇಳಬಲ್ಲ. ಆದುದರಿಂದ, ಕೃಷ್ಣನ ಪ್ರತಿನಿಧಿಯಲ್ಲದೆ ಬೇರಾರೂ ನಿಮ್ಮ ಮಿತ್ರನಾಗುವುದು ಸಾಧ್ಯವಿಲ್ಲ. ಲೌಕಿಕ ಜಗತ್ತಿನಲ್ಲಿ , `ನಾನು ನಿನ್ನ ಶತ್ರು , ನೀನು ನನ್ನ ಶತ್ರು’ ಇದೇ ಲೌಕಿಕ ಜಗತ್ತಿನ ಮೂಲ. ಆದರೆ ಆಧ್ಯಾತ್ಮಿಕ ಲೋಕವು ಇದಕ್ಕೆ ತದ್‌ವಿರುದ್ಧವಾದುದು. ನೋಡಿ, `ನಾನು ನಿನ್ನ ಸ್ನೇಹಿತ, ನೀನು ನನ್ನ ಗೆಳೆಯ. ಏಕೆಂದರೆ, ಕೃಷ್ಣನು ನಮ್ಮಿಬ್ಬರಿಗೂ ಅತ್ಯಂತ ಪ್ರಿಯನಾದ ಮಿತ್ರ’.
ಮೂರನೆಯ ಶಿಷ್ಯ: ಶ್ರೀಲ ಪ್ರಭುಪಾದ, ನಾವು ನಿಮ್ಮ ಪುಸ್ತಕಗಳನ್ನು ವಿತರಿಸುವಾಗ, ನಾವು ನಿಮ್ಮ ಮಿತ್ರರೆಂದು ಜನರಿಗೆ ತೋರಗೊಡುತ್ತಿದ್ದೇವೆಯೇ?

ಶ್ರೀಲ ಪ್ರಭುಪಾದ: ಓ! ಹೌದು. ಅದು ನಿಜವಾದ ಮೈತ್ರಿ. ಚೈತನ್ಯ ಮಹಾಪ್ರಭು ಹೇಳುವಂತೆ, ಕೋತಾ ನಿದ್ರಾ ಜಾವೋ ಮಾಯಾ ಪಿಶಾಚಿರ ಕೋಲೇ… ಎನೇಚಿ ಔಷಧಿ ಮಾಯಾ ನಾಶಿಬಾರೋ ಲಾಗಿ / ಹರಿ-ನಾಮ ಮಹಾ ಮಂತ್ರ ಲವೋ ತುಮಿ ಮಾಗಿ.
`ಜನರೇ, ನೀವು ಮಾಯೆಯ, ಭ್ರಮೆಯ ಪ್ರಭಾವದಿಂದ ಮಲಗಿರುವಿರಿ. ಈ ಲೌಕಿಕ ಜಗತ್ತಿನಲ್ಲಿ, ಹೀಗೆ ಎಷ್ಟು ಕಾಲ ನಿದ್ರೆಯಲ್ಲಿರುವಿರಿ, ಕಷ್ಟ ಪಡುವಿರಿ? ನನ್ನ ಬಳಿ ಒಳ್ಳೆಯ ಔಷಧಿ ಇದೆ – ಹರೇ ಕೃಷ್ಣ ಮಹಾಮಂತ್ರ – ಇದನ್ನು ತೆಗೆದುಕೊಳ್ಳಿ ಮತ್ತು ಇನ್ನು ಹೀಗೆ ಮಲಗಬೇಡಿ.’
ಮೊದಲನೆಯ ಶಿಷ್ಯ: ಈ ಅಣ್ವಸ್ತ್ರ ಸಮರ ಬೆದರಿಕೆಯು ಕೃಷ್ಣಪ್ರಜ್ಞೆ ಪಸರಿಸುವ ಕೆಲಸವನ್ನು ಸುಲಭ ಮಾಡುತ್ತದೆಯೇ?
ಶ್ರೀಲ ಪ್ರಭುಪಾದ: ಈ ಬೆದರಿಕೆ ಈಗಾಗಲೇ ಇದೆ. ಆದರೆ ಜನರು ಎಷ್ಟು ಮೂರ್ಖರೆಂದರೆ ಅವರಿಗೆ ಈ ಬೆದರಿಕೆಯ ಭಯವೇ ಇಲ್ಲ. ಎಲ್ಲರೂ ಸಾಯುತ್ತಾರೆ ಎಂಬ ಸಾವಿನ ಬೆದರಿಕೆ ಇದ್ದೇ ಇದೆ. ಅದೇ ನಿಜವಾದ ಸಮಸ್ಯೆ. ಆದರೆ ಯಾರು ಲಕ್ಷಿಸುತ್ತಾರೆ? ಜನರದ್ದು ಒಂದು ರೀತಿ ಪಲಾಯನವಾದ. ಅವರ ಬಳಿ ಪರ್ಯಾಯ ಕ್ರಮ ಇಲ್ಲದಿರುವುದರಿಂದ ಅವರು ಈ ಸಮಸ್ಯೆಯನ್ನು ದೂರವೇ ಇಡುತ್ತಾರೆ.
ನಾಲ್ಕನೆಯ ಶಿಷ್ಯ: ಶ್ರೀಲ ಪ್ರಭುಪಾದ, ನೀವೂ ಹೇಳುತ್ತೀರಿ, ನಿಮ್ಮ ಗ್ರಂಥಗಳೂ ಹೇಳುತ್ತವೆ, ನಾವು ಸಾಯುತ್ತೇವೆ, ಅದನ್ನು ಎದುರಿಸುವುದನ್ನು ನಾವು ಕಲಿಯಬೇಕು ಎಂದು ಪದೇ ಪದೆ ಹೇಳಿರುವಿರಿ. ಆದರೂ, ನಿಮ್ಮ ಶಿಷ್ಯರಾಗಿಯೂ ಕೂಡ, ನಮಗೆ ಸರಿಯಾಗಿ ಮನವರಿಕೆಯಾಗಿಲ್ಲ. ಸಾವನ್ನು ಮುಚ್ಚಿಡುವ ಸಂಸ್ಕೃತಿಯಲ್ಲಿ ನಾವು ಬೆಳೆದಿದ್ದೇವೆ. ಮುಖ್ಯವಾಗಿ, ಇಲ್ಲಿ, ಅಮರಿಕೆಯಲ್ಲಿ, ನಾವು ಸಾವನ್ನು ನೋಡುವುದು ಅಪರೂಪ.
ಶ್ರೀಲ ಪ್ರಭುಪಾದ: ಅಂದರೆ ನೀವು ಸಾಯುವುದಿಲ್ಲ ಎಂದೇ?
ನಾಲ್ಕನೆಯ ಶಿಷ್ಯ: ನಾನು ಸಾಯುವೆನೆಂದು ನನಗೆ ಗೊತ್ತು. ಆದರೆ ಅದನ್ನು ಗ್ರಹಿಸುವ ವೇದಿಕೆಗೆ ಹೇಗೆ ಬರುವುದು?

ಶ್ರೀಲ ಪ್ರಭುಪಾದ: ಪ್ರತಿಯೊಬ್ಬರೂ ಸಾಯುತ್ತಿದ್ದಾರೆ. ನಿಮ್ಮ ತಾಯಿ ಸಾಯುತ್ತಿದ್ದಾರೆ. ನಿಮ್ಮ ತಂದೆ ಸಾಯುತ್ತಿದ್ದಾರೆ. ನಿಮ್ಮ ಸ್ನೇಹಿತರು ಸಾಯುತ್ತಿದ್ದಾರೆ. ಆದರೂ ನಿಮಗೆ ಅರ್ಥವಾಗುವುದಿಲ್ಲ! ನಿಮಗೆ ಹೇಗೆ ಅರ್ಥ ಮಾಡಿಸುವುದು? ಪ್ರತಿ ದಿನ, ಪ್ರತಿ ಕ್ಷಣ ಎಷ್ಟೊಂದು ಜನ ಮತ್ತು ಪ್ರಾಣಿಗಳು ಸಾಯುವುದನ್ನು ನೋಡುತ್ತೇವೆ, ಕೇಳುತ್ತೇವೆ. ಸಾವು ಅನಿವಾರ್ಯ. ಆದರೂ `ನಾನು ಸಾಯುವುದಿಲ್ಲ’ ಎಂದು ನೀವು ಯೋಚಿಸುತ್ತೀರಿ. ಅದೇ ನಮ್ಮ ನಿಜವಾದ ಸಮಸ್ಯೆ. ಯಾರಿಗೂ ಸಾಯಲು ಇಷ್ಟವಿಲ್ಲ. ಆದರೂ ಪ್ರತಿಯೊಬ್ಬರೂ ಸಾಯುತ್ತಿದ್ದಾರೆ. ಈ ಸಮಸ್ಯೆಯನ್ನು ಬಿಡಿಸಲು ಆ ಮೂರ್ಖ ವಿಜ್ಞಾನಿಗಳಿಗೆ ಸಾಧ್ಯವಿಲ್ಲ.
ಇದನ್ನು ನೋಡಿ. ಪೆಸಿಫಿಕ್ ಮಹಾಸಾಗರದಲ್ಲಿ ನಾಯಿಯೊಂದು ಈಜಾಡುತ್ತಿರುತ್ತದೆ. ಆಗ ನಾವು ಯೋಚಿಸುತ್ತೇವೆ. `ಈ ನಾಯಿಯ ಬಾಲ ಹಿಡಿಯುವೆ, ಸಾಗರ ದಾಟುವೆ’ ಎಂದು. ಅದೇ ರೀತಿ ಈ ವಿಜ್ಞಾನಿಗಳನ್ನು ಮತ್ತು ತತ್ತ್ವಜ್ಞಾನಿಗಳನ್ನು ನಂಬುವವರ ಕತೆ. ಅಂದರೆ, ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗದ ಸಮಸ್ಯೆಗಳನ್ನು ಇವರು ಬಿಡಿಸಿಬಿಡುತ್ತಾರೆ ಎಂದುಕೊಳ್ಳುವವರ ಮನಃಸ್ಥಿತಿಯು ನಾಯಿ ಬಾಲ ಹಿಡಿದು ಸಾಗರ ದಾಟುವವರ ಮನಃಸ್ಥಿತಿಯಂತೆ. ವಿಜ್ಞಾನಿಗಳು ನಾಯಿಯಂತೆ, ಅವರ ಬಾಲ ಹಿಡಿಯುವುದು ನಿಷ್ಪ್ರಯೋಜಕ.
ಮೊದಲನೆಯ ಶಿಷ್ಯ: ಹಾಗಾದರೆ, ತತ್ತ್ವಶಾಸ್ತ್ರದ ಮೂಲಕವೇ ಸಾವಿನ ವಾಸ್ತವಿಕತೆಯನ್ನು ಅರಿತುಕೊಳ್ಳಬೇಕೇ?
ಶ್ರೀಲ ಪ್ರಭುಪಾದ: ಪ್ರಸ್ತುತದಲ್ಲಿ ತತ್ತ್ವಶಾಸ್ತ್ರವೆಂದರೆ `ಮಾನಸಿಕ ಕಲ್ಪನೆ’. ಆದರೆ ನಿಜವಾದ ತತ್ತ್ವಶಾಸ್ತ್ರವೆಂದರೆ, ವಾಸ್ತವಾಂಶವನ್ನು ಕಂಡುಹಿಡಿಯುವುದು. ಅದು ತತ್ತ್ವಶಾಸ್ತ್ರ . `ನಾನು ಹೀಗೆ ಯೋಚಿಸುವೆ, ಅವನು ಹಾಗೆ ಯೋಚಿಸುವ, ಇನ್ನೊಬ್ಬ ಹೀಗೆ ಯೋಚಿಸುತ್ತಾನೆ’ – ಎಂಬುದು ಮನಸ್ಸಿನ ಕಲ್ಪನೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವುದು ನಿಜವಾದ ತತ್ತ್ವಶಾಸ್ತ್ರ , ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷಾನುದರ್ಶನಂ – ಸದಾ ನೆನಪಿಡಿ, ಸಾವಿದೆ, ಹುಟ್ಟಿದೆ, ವೃದ್ಧಾಪ್ಯವಿದೆ ಮತ್ತು ರೋಗವಿದೆ. ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಂಡು ಇವುಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ’ ಇದೇ ತತ್ತ್ವಶಾಸ್ತ್ರ.







Leave a Reply