ಮನುಷ್ಯರು ಪ್ರಾಣಿಗಳಾದಾಗ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು, ಸಿಯಾಟ್ಸ್‌ನ ವಾಷಿಂಗ್‌ಟನ್‌ ವಿಶ್ವವಿದ್ಯಾನಿಲಯದಲ್ಲಿ 1968ರ ಅಕ್ಟೋಬರ್‌ ತಿಂಗಳಿನಲ್ಲಿ ನೀಡಿದ ಉಪನ್ಯಾಸ.

ಓಂ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ

ಚಕ್ಷುರ್‌ ಉನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ

“ನಾನು  ಅಜ್ಞಾನದ  ಗಾಢಾಂಧಕಾರದಲ್ಲಿ  ಹುಟ್ಟಿದ್ದೆ. ನನ್ನ  ಗುರುವು  ಜ್ಞಾನದ ದೀವಟಿಗೆಯಿಂದ ನನ್ನ ಕಣ್ಣುಗಳನ್ನು ತೆರೆಸಿದರು. ಅವರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.”

ಈ ಐಹಿಕ ಜಗತ್ತಿನಲ್ಲಿ ಪ್ರತಿಯೊಬ್ಬನೂ ಅಜ್ಞಾನ ಅಥವಾ ಕತ್ತಲಲ್ಲಿ ಜನಿಸಿರುತ್ತಾನೆ. ವಾಸ್ತವದಲ್ಲಿ ಈ ಐಹಿಕ ಜಗತ್ತಿನ ಸ್ವಭಾವವೇ ಕತ್ತಲೆ. ಅದನ್ನು ಬಿಸಿಲು, ಬೆಳದಿಂಗಳು, ಬೆಂಕಿ ಅಥವಾ ವಿದ್ಯುಚ್ಛಕ್ತಿಯಿಂದ ಬೆಳಗಿಸಬಹುದು. ಆದರೆ ಅದರ ಸ್ವಭಾವವು ಕತ್ತಲೆ. ಅದು ವೈಜ್ಞಾನಿಕವಾದ ಸತ್ಯಸಂಗತಿ. ಆದ್ದರಿಂದ ಈ ಬ್ರಹ್ಮಾಂಡದ ಸರ್ವೋನ್ನತ ಲೋಕದಲ್ಲಿರುವ ಮುಖ್ಯ ಪುರುಷ ಬ್ರಹ್ಮನಿಂದ ಹಿಡಿದು ಒಂದು ಸಣ್ಣ ಇರುವೆಯವರೆಗೆ ಪ್ರತಿಯೊಬ್ಬನೂ ಅಜ್ಞಾನವೆಂಬ ಕತ್ತಲೆಯಲ್ಲಿ ಜನಿಸಿದ್ದಾನೆ.

ಈಗ, ವೈದಿಕ ಕಟ್ಟಳೆಯೆಂದರೆ ತಮಸಿ ಮಾ ಜ್ಯೋತಿರ್‌ ಗಮಃ “ಕತ್ತಲಲ್ಲೇ ಉಳಿಯಬೇಡ: ಬೆಳಕಿಗೆ ಬಾ.” ಇದಕ್ಕೆ ಒಬ್ಬರು ಗುರುಗಳ ಅಗತ್ಯವಿದೆ. ಕತ್ತಲೆಯಲ್ಲಿರುವ ಮನುಷ್ಯನ ಕಣ್ಣುಗಳನ್ನು ಜ್ಞಾನವೆಂಬ ಪಂಜಿನಿಂದ ತೆರೆಸುವುದು ಗುರುಗಳ ಕರ್ತವ್ಯ. ಅಂತಹ ಗುರುಗಳಿಗೆ ಗೌರವಪೂರ್ವಕವಾದ ಪ್ರಣಾಮಗಳನ್ನು ನಾವು ಸಲ್ಲಿಸಬೇಕು.

ಜನರನ್ನು ಕತ್ತಲಲ್ಲಿ ಇರಿಸಬಾರದು. ಅವರನ್ನು ಬೆಳಕಿಗೆ ಕರೆದುಕೊಂಡು ಬರಬೇಕು. ಆದ್ದರಿಂದ ಪ್ರತಿಯೊಂದು ಮಾನವ ಸಮಾಜದಲ್ಲೂ ಯಾವುದಾದರೊಂದು ಬಗೆಯ ಒಂದು ಧಾರ್ಮಿಕ ಸಂಸ್ಥೆ ಇರುತ್ತದೆ. ಹಿಂದೂಧರ್ಮ, ಮಹಮದೀಯ ಧರ್ಮ, ಕ್ರೈಸ್ತಧರ್ಮ ಅಥವಾ ಬೌದ್ಧಧರ್ಮದ ಉದ್ದೇಶವೇನು? ಜನರನ್ನು ಬೆಳಕಿಗೆ ಕರೆದುಕೊಂಡು ಬರುವುದೇ ಅದರ ಉದ್ದೇಶ. ಧರ್ಮದ ಉದ್ದೇಶ ಅದೇ.

ಹಾಗಾದರೆ ಆ ಬೆಳಕು ಎನ್ನುವುದು ಏನು? ಆ ಬೆಳಕೇ ದೇವೋತ್ತಮ ಪರಮ ಪುರುಷ. ಶ್ರೀಮದ್‌ ಭಾಗವತವು ಹೇಳುತ್ತದೆ, ಧರ್ಮಂ ತು ಸಾಕ್ಷಾದ್‌ ಭಗವತ್‌ ಪ್ರಣೀತಮ್‌: “ಧರ್ಮದ ಕಟ್ಟು ಕಟ್ಟಳೆಗಳನ್ನು ದೇವೋತ್ತಮ ಪರಮಪುರುಷನೇ ನೇರವಾಗಿ ನೀಡಿದ್ದಾನೆ.” ದೇಶದಲ್ಲಿ ಕಾನೂನುಗಳಿರುತ್ತವೆ. ನಾವು ಅವುಗಳನ್ನು ಅನುಸರಿಸಲೇಬೇಕು. ನಾವು ಉತ್ತಮ ನಾಗರಿಕರಾಗಿದ್ದರೆ ಆ ಕಾನೂನುಗಳಿಗೆ ವಿಧೇಯರಾಗಿದ್ದು ಶಾಂತಿಯುತವಾದ ಜೀವನವನ್ನು ನಡೆಸುತ್ತೇವೆ. ಈ ಕಾನೂನುಗಳು ಕಾಲಕಾಲಕ್ಕೆ, ಸನ್ನಿವೇಶಗಳಿಗೆ ಅಥವಾ ಜನಗಳಿಗೆ ಅನುಸಾರವಾಗಿ ಬೇರೆ ಬೇರೆಯಾಗಿರಬಹುದು. ಭಾರತ ದೇಶದ ಕಾನೂನುಗಳು ಅಮೆರಿಕದ ಕಾನೂನುಗಳಿಗೆ ನೂರಕ್ಕೆ ನೂರು ಸಂವಾದಿಯಾಗಿ ಇರಲಾರವು. ಆದರೆ ಪ್ರತಿಯೊಂದು ದೇಶದಲ್ಲಿಯೂ ನಾವು ವಿಧೇಯರಾಗಿರಬೇಕಾದ ಕಾನೂನುಗಳಿವೆ. ಯಾವುದೇ ವ್ಯಕ್ತಿಯು ಕಾನೂನಿಗೆ ಬದ್ಧನಾಗಿರಬೇಕು. ಇಲ್ಲದಿದ್ದರೆ ಅವನನ್ನು ಅತ್ಯಂತ ಕೆಳದರ್ಜೆಯವನು, ಒಬ್ಬ ಪಾತಕಿ ಎಂದು ಕರೆಯಲಾಗುತ್ತದೆ. ಅವನನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇದು ಸಾಮಾನ್ಯವಾಗಿ ಅನುಸರಿಸುವ ಸೂತ್ರ.

ಅದೇ ರೀತಿಯಲ್ಲಿ ಧರ್ಮವೆಂದರೆ ದೇವರ ಕಾನೂನುಗಳಿಗೆ ವಿಧೇಯನಾಗಿರುವುದು. ಅಷ್ಟೆ. ಒಬ್ಬ ಮಾನವ ಜೀವಿಯು ದೇವರ ಕಾನೂನುಗಳಿಗೆ ವಿಧೇಯನಾಗಿಲ್ಲದಿದ್ದರೆ ಅವನು ಒಂದು ಪ್ರಾಣಿಗಿಂತ ಉತ್ತಮನೇನಲ್ಲ. ಎಲ್ಲ ಧರ್ಮಗ್ರಂಥಗಳು ಮತ್ತು ಎಲ್ಲ ಧರ್ಮಸೂತ್ರಗಳು ಮನುಷ್ಯನನ್ನು ಪ್ರಾಣಿಯ ನೆಲೆಯಿಂದ ಮಾನವನ ನೆಲೆಗೆ ಉನ್ನತೀಕರಿಸಲು ಉದ್ದಿಷ್ಟವಾಗಿವೆ. ಆದ್ದರಿಂದ ಧರ್ಮ ಸೂತ್ರಗಳಿಲ್ಲದ, ದೈವ ಪ್ರಜ್ಞೆಯಿಲ್ಲದ ಒಬ್ಬ ವ್ಯಕ್ತಿಯು ಒಂದು ಪ್ರಾಣಿಗಿಂತ ಉತ್ತಮನೇನಲ್ಲ. ಇದು ವೈದಿಕ ಸಾಹಿತ್ಯದ ತೀರ್ಪು.

ಆಹಾರ ನಿದ್ರಾ ಭಯ ಮೈಥುನಂ ಚ

ಸಾಮಾನ್ಯಮ್‌ ಏತತ್‌ ಪಶುಭಿರ್‌ ನರಾಣಾಮ್‌

ಧರ್ಮೋ ಹಿ ತೇಷಾಮ್‌ ಅಧಿಕೋ ವಿಶೇಷೋ

ಧರ್ಮೇಣ ಹೀನಾಃ ಪಶುಭಿಃ ಸಮಾನಾಃ

ತಿನ್ನುವುದು, ಮಲಗುವುದು, ಕಾಮೋಪಭೋಗ ಮತ್ತು ರಕ್ಷಣೆ – ಈ ನಾಲ್ಕು ಅಂಶಗಳು ಪ್ರಾಣಿಗಳು ಮತ್ತು ಮನುಷ್ಯರು ಇಬ್ಬರಿಗೂ ಸಮಾನವಾಗಿವೆ. ಮನುಷ್ಯ ಜೀವನ ಮತ್ತು ಪ್ರಾಣಿಜೀವನಗಳ ನಡುವಣ ವ್ಯತ್ಯಾಸವೆಂದರೆ, ಮನುಷ್ಯ ದೇವರನ್ನು ಹುಡುಕಬಲ್ಲ, ಆದರೆ ಪ್ರಾಣಿಯು ಹಾಗೆ ಮಾಡಲಾಗದು. ಅದೇ ವ್ಯತ್ಯಾಸ. ಆದ್ದರಿಂದ ದೇವರನ್ನು ಕುರಿತು ಹುಡುಕುವ ತುಡಿತವಿಲ್ಲದ ಮನುಷ್ಯನು ಒಂದು ಪ್ರಾಣಿಗಿಂತ ಉತ್ತಮನೇನಲ್ಲ.

ದುರದೃಷ್ಟವಶಾತ್‌, ಪ್ರಸ್ತುತ ಸಮಯದಲ್ಲಿ ಪ್ರತಿಯೊಂದು ದೇಶದಲ್ಲಿಯೂ ಮತ್ತು ಪ್ರತಿಯೊಂದು ಸಮಾಜದಲ್ಲಿಯೂ ಜನರು ದೇವರನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ಸಾರ್ವಜನಿಕವಾಗಿಯೇ ದೇವರು ಇಲ್ಲ ಎಂದು ಹೇಳುತ್ತಿದ್ದಾರೆ. ಒಂದು ಪಕ್ಷ ದೇವರು ಇದ್ದರೆ, ಅವನು ಸತ್ತಿದ್ದಾನೆ ಎಂದು ಇತರರು ಹೇಳುತ್ತಾರೆ; ಇತ್ಯಾದಿ. ಇಷ್ಟೆಲ್ಲ ಗಗನಚುಂಬಿ ಕಟ್ಟಡಗಳಿಂದ ಕೂಡಿದ ತಥಾಕಥಿತ ಮುಂದುವರಿದ ನಾಗರಿಕತೆಯನ್ನು ಅವರು ಕಟ್ಟಿದ್ದಾರೆ. ಆದರೆ ಅವರ ಎಲ್ಲ ಪ್ರಗತಿಯೂ ದೇವರ ಮೇಲೆ, ಕೃಷ್ಣನ ಮೇಲೆ ಅವಲಂಬಿಸಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಇದು ಮಾನವ ಸಮಾಜಕ್ಕೆ ಬಹಳ ಅಭದ್ರವಾದ ಒಂದು ಪರಿಸ್ಥಿತಿ.

ದೇವೋತ್ತಮ ಪರಮ ಪುರುಷನನ್ನು ಮರೆತ ಸಮಾಜಕ್ಕೆ ಏನಾಗುತ್ತದೆ ಎಂದು ಬಣ್ಣಿಸುವ ಒಂದು ಸೊಗಸಾದ ಕಥೆ ಇದೆ.

ಒಂದು ಇಲಿಗೆ ಬೆಕ್ಕಿನಿಂದ ಬಹಳ ತೊಂದರೆಯಾಗುತ್ತಿತ್ತು. ಅದು ಒಬ್ಬ ಯೋಗಶಕ್ತಿಯಿರುವ ಮುನಿಯ ಬಳಿಗೆ ಹೋಗಿ, “ಮಹಾಸ್ವಾಮಿ ನನಗೆ ಬಹಳ ತೊಂದರೆಯಾಗುತ್ತಿದೆ” ಎಂದು ವಿನಂತಿಸಿಕೊಂಡಿತು.

“ಏನು ತೊಂದರೆ?”

“ಒಂದು ಬೆಕ್ಕು ಸದಾ ನನ್ನನ್ನು ಅಟ್ಟಿಸಿಕೊಂಡು ಬರುತ್ತದೆ. ಆದ್ದರಿಂದ ನನಗೆ ಮನಃಶಾಂತಿ ಎನ್ನುವುದೇ ಇಲ್ಲವಾಗಿದೆ” ಎಂದು ಹೇಳಿತು ಇಲಿ.

“ಹಾಗಾದರೆ ನಿನಗೇನು ಬೇಕು?”

“ದಯವಿಟ್ಟು ನನ್ನನ್ನು ಒಂದು ಬೆಕ್ಕನ್ನಾಗಿ ಮಾಡಿ.”

“ಆಗಲಿ, ನೀನು ಬೆಕ್ಕಾಗು.”

ಕೆಲವು ದಿನಗಳ ಅನಂತರ ಬೆಕ್ಕು ಆ ಮುನಿಯ ಬಳಿಗೆ ಬಂದು ಹೇಳಿತು, “ಮಹಾಸ್ವಾಮಿ, ಮತ್ತೆ ನಾನು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ.”

“ಏನು ತೊಂದರೆ?”

“ನಾಯಿಗಳು ನನ್ನನ್ನು ಅಟ್ಟಿಸಿಕೊಂಡು ಬರುತ್ತವೆ.”

“ಹಾಗಾದರೆ ನಿನಗೇನು ಬೇಕು?”

“ನನ್ನನ್ನು ಒಂದು ನಾಯಿಯನ್ನಾಗಿ ಮಾಡಿ.”

“ಆಗಲಿ, ನೀನು ನಾಯಿಯಾಗು.”

ಕೆಲವು ದಿನಗಳ ಅನಂತರ ನಾಯಿಯು ಆ ಮುನಿಯ ಬಳಿಗೆ ಬಂದು ಹೇಳಿತು, “ಮಹಾಸ್ವಾಮಿ, ಮತ್ತೆ ನಾನು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ.”

“ಏನು ತೊಂದರೆ?”

“ನರಿಗಳು ನನ್ನನ್ನು ಅಟ್ಟಿಸಿಕೊಂಡು ಬರುತ್ತವೆ.”

“ಹಾಗಾದರೆ ನಿನಗೇನು ಬೇಕು?”

“ನಾನು ಒಂದು ನರಿಯಾಗಬೇಕು.”

“ಆಗಲಿ, ನೀನು ನರಿಯಾಗು.”

ಅನಂತರ ನರಿಯು ಬಂದು ಹೇಳಿತು, “ಓಹ್‌, ಹುಲಿಗಳು ನನ್ನನ್ನು ಅಟ್ಟಿಸಿಕೊಂಡು ಬರುತ್ತವೆ.”

“ಹಾಗಾದರೆ ನಿನಗೇನು ಬೇಕು?”

“ನಾನು ಒಂದು ಹುಲಿಯಾಗಬೇಕು.”

“ಆಗಲಿ, ನೀನು ಹುಲಿಯಾಗು.”

ಈಗ ಹುಲಿಯು ಮುನಿಯನ್ನು ದುರುಗುಟ್ಟಿಕೊಂಡು ನೋಡಲಾರಂಭಿಸಿತು. “ನಾನು ನಿಮ್ಮನ್ನು ತಿನ್ನುತ್ತೇನೆ,” ಎಂದಿತು.

“ಓಹ್‌, ನೀನು ನನ್ನನ್ನು ತಿನ್ನಬೇಕಾ? ನಾನು ನಿನ್ನನ್ನು ಒಂದು ಹುಲಿಯನ್ನಾಗಿ ಮಾಡಿದೆ. ಈಗ ನೀನು ನನ್ನನ್ನೇ ತಿನ್ನಲು ಬಯಸುತ್ತೀಯಾ?”

“ಹೌದು. ನಾನು ಈಗ ಒಂದು ಹುಲಿ. ನಾನು ನಿಮ್ಮನ್ನು ತಿನ್ನುತ್ತೇನೆ.”

ಆಗ ಮುನಿಯು ಅದಕ್ಕೆ ಶಾಪ ನೀಡಿದನು, “ಮತ್ತೆ ನೀನು ಇಲಿಯಾಗು!”

ಹುಲಿಯು ಒಂದು ಇಲಿಯಾಯಿತು.

ನಮ್ಮ ಮಾನವ ನಾಗರಿಕತೆಯು ಹೀಗೆಯೇ ಇದೆ. ಕೆಲವು ದಿನಗಳ ಹಿಂದೆ ನಾನು ವರ್ಲ್ಡ್‌ ಆಲ್ಮನ್ಯಾಕ್‌ (ಜಗತ್ತಿನ ಪ್ರಮುಖ ವ್ಯಕ್ತಿ, ಘಟನೆ ಮೊದಲಾದ ವಿವರಗಳನ್ನು ಪ್ರಕಟಿಸುವ ಪತ್ರಿಕೆ) ಓದುತ್ತಿದ್ದೆ. ಮುಂದಿನ ನೂರು ವರ್ಷಗಳ ಅವಧಿಯಲ್ಲಿ ಮನುಷ್ಯರು ಇಲಿಗಳಂತೆ ಭೂಗರ್ಭದಲ್ಲಿ ವಾಸ ಮಾಡುತ್ತಾರೆ ಎಂದು ಅದರಲ್ಲಿ ಬರೆದಿತ್ತು. ವಿಜ್ಞಾನದ ಪ್ರಗತಿಯು ಮನುಷ್ಯರನ್ನು ಕೊಲ್ಲಲು ಪರಮಾಣು ಬಾಂಬನ್ನು ಕಂಡು ಹಿಡಿದಿದೆ. ಅದನ್ನು ಪ್ರಯೋಗಿಸಿದಾಗ ಮನುಷ್ಯರು ಭೂಗರ್ಭದೊಳಗೆ ಹೋಗಿ ಇಲಿಗಳಂತೆ ಇರಬೇಕಾಗುತ್ತದೆ. ಹುಲಿಯಿಂದ ಇಲಿಗೆ. ಅದು ಸಂಭವಿಸಲಿದೆ. ಅದು ಪ್ರಕೃತಿಯ ನಿಯಮ.

ನಿಮ್ಮ ದೇಶದ ಕಾನೂನುಗಳನ್ನು ನೀವು ಉಲ್ಲಂಘಿಸಿದರೆ, ನಿಮಗೆ ಸಂಕಷ್ಟಗಳು ಎದುರಾಗುತ್ತವೆ. ಅದೇ ರೀತಿಯಲ್ಲಿ ಪರಮ ಪ್ರಭುವಿನ ಪರಮಾಧಿಕಾರವನ್ನು ಉಲ್ಲಂಘಿಸುವುದನ್ನು ನೀವು ಮುಂದುವರಿಸಿದರೆ ಯಾತನೆಗೊಳಗಾಗುತ್ತೀರಿ. ಮತ್ತೆ ನೀವು ಇಲಿಗಳಾಗುತ್ತೀರಿ. ಪರಮಾಣು ಬಾಂಬುಗಳು ಸ್ಫೋಟಿಸುತ್ತಿದ್ದಂತೆಯೇ ಜಗತ್ತಿನ ಮೇಲ್ಮೈಯಲ್ಲಿರುವ ಎಲ್ಲ ನಾಗರಿಕತೆಯೂ ನಾಮಾವಶೇಷವಾಗುತ್ತದೆ. ಈ ವಿಚಾರಗಳನ್ನು ಕುರಿತು ಚಿಂತಿಸಲು ನೀವು ಇಷ್ಟಪಡದೇ ಇರಬಹುದು. ಅವು ನಿಮಗೆ ಬಹಳ ಅಪಥ್ಯವಾಗಿ ತೋರಬಹುದು. ಆದರೆ ಇವು ಸತ್ಯ ಸಂಗತಿಗಳು.

ಸತ್ಯಂ ಬ್ರೂಯಾತ್‌ ಪ್ರಿಯಂ ಬ್ರೂಯಾತ್‌ ಮಾ ಬ್ರೂಯಾತ್‌ ಸತ್ಯಮಪ್ರಿಯಂ. ನೀವು ಸತ್ಯವನ್ನು ಹೇಳಬೇಕೆಂದರೆ ಅತ್ಯಂತ ಪಥ್ಯವಾಗುವ ರೀತಿಯಲ್ಲಿ ಹೇಳಬೇಕು ಎನ್ನುವುದು ಒಂದು ಸಾಮಾಜಿಕ ವಾಡಿಕೆ. ಆದರೆ ನಾವು ಸಾಮಾಜಿಕ ಪದ್ಧತಿಗೆ ಬದ್ಧರಾದವರಲ್ಲ. ನಾವು ಬೋಧಕರು. ದೇವರ ಸೇವಕರು. ನೀವು ಇಷ್ಟಪಡಿ ಅಥವಾ ಬಿಡಿ ನಾವು ವಾಸ್ತವ ಸತ್ಯವನ್ನೇ ಹೇಳಬೇಕು.

ದೇವರಿಲ್ಲದ ಒಂದು ನಾಗರಿಕತೆಯು ಸಂತೋಷವಾಗಿರಲಾಗದು. ಅದು ಸತ್ಯ ಸಂಗತಿ. ಆದ್ದರಿಂದ ಈ ದೈವರಹಿತ ನಾಗರಿಕತೆಯನ್ನು ಜಾಗೃತಗೊಳಿಸಲು ನಾವು ಈ ಕೃಷ್ಣಪ್ರಜ್ಞಾ ಆಂದೋಲನವನ್ನು ಆರಂಭಿಸಿದ್ದೇವೆ. ದೇವರನ್ನು ಪ್ರೀತಿಸಲು ಪ್ರಯತ್ನ ಮಾಡಿ ಅಷ್ಟೆ; ಇದು ನಮ್ಮ ಚಿಕ್ಕದಾದ ಪ್ರಾರ್ಥನೆ. ನಿಮ್ಮ ಅಂತರಂಗದಲ್ಲಿ ಪ್ರೀತಿ ಇದೆ – ನೀವು ಯಾರಾದರೊಬ್ಬರನ್ನು ಪ್ರೀತಿಸಲು ಇಷ್ಟಪಡುತ್ತೀರಿ. ತರುಣನೊಬ್ಬ ತರುಣಿಯೊಬ್ಬಳನ್ನು ಪ್ರೀತಿಸಲು ಪ್ರಯತ್ನಿಸುತ್ತಾನೆ; ತರುಣಿಯೊಬ್ಬಳು ತರುಣನೊಬ್ಬನನ್ನು ಪ್ರೀತಿಸಲು ಪ್ರಯತ್ನಿಸುತ್ತಾಳೆ. ಇದು ಸಹಜವಾದದ್ದು. ಏಕೆಂದರೆ ಈ ಪ್ರೀತಿಸುವ ಪ್ರವೃತ್ತಿ ಎಲ್ಲರ ಆಂತರ್ಯದಲ್ಲೂ ಇರುತ್ತದೆ. ಆದರೆ ನಮ್ಮ ಪ್ರೀತಿಯು ಹತಾಶೆಗೆ ಒಳಗಾಗುವಂತಹ ಸನ್ನಿವೇಶಗಳನ್ನು ನಾವು ಸೃಷ್ಟಿಸಿದ್ದೇವೆ. ಪ್ರತಿಯೊಬ್ಬನೂ ಹತಾಶನಾಗಿದ್ದಾನೆ – ಪತಿಯಂದಿರು, ಪತ್ನಿಯರು, ತರುಣರು, ತರುಣಿಯರು, ಎಲ್ಲೆಲ್ಲೂ ಹತಾಶೆಯೇ ಕಾಣುತ್ತಿದೆ. ಏಕೆಂದರೆ ನಮ್ಮ ಪ್ರೀತಿಸುವ ಪ್ರವೃತ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗುತ್ತಿಲ್ಲ. ಏಕೆ? ಏಕೆಂದರೆ ನಾವು ಪರಮಪುರುಷನನ್ನು ಪ್ರೀತಿಸುವುದನ್ನು ಮರೆತುಬಿಟ್ಟಿದ್ದೇವೆ. ಅದೇ ನಮ್ಮ ವ್ಯಾಧಿ.

ಆದ್ದರಿಂದ ಧರ್ಮದ ಉದ್ದೇಶವೆಂದರೆ ದೇವರನ್ನು ಪ್ರೀತಿಸುವುದು ಹೇಗೆಂದು ಜನರಿಗೆ ತರಬೇತಿ ಕೊಡುವುದು. ಎಲ್ಲ ಧರ್ಮಗಳ ಉದ್ದೇಶವೂ ಅದೇ. ನಿಮ್ಮ ಧರ್ಮ ಕ್ರೈಸ್ತಧರ್ಮವಾಗಿರಲಿ ಅಥವಾ ಹಿಂದೂ ಧರ್ಮವಾಗಿರಲಿ ಅಥವಾ ಮಹಮದೀಯ ಧರ್ಮವಾಗಿರಲಿ, ನಿಮ್ಮ ಧರ್ಮದ ಉದ್ದೇಶವು ದೇವರನ್ನು ಪ್ರೀತಿಸುವುದು ಹೇಗೆ ಎಂದು ತರಬೇತಿ ಕೊಡುವುದು. ಏಕೆಂದರೆ ಅದು ನಿಮ್ಮ ಸಹಜ ಸ್ವರೂಪ.

ಶ್ರೀಮದ್‌ ಭಾಗವತದಲ್ಲಿ (1.2.6) ಹೀಗೆ ಹೇಳಿದೆ: ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರ್‌ ಅಧೋಕ್ಷಜೇ. ಇಂಗ್ಲಿಷ್‌ ನಿಘಂಟುಗಳಲ್ಲಿ ಈ ಧರ್ಮ ಎಂಬ ಶಬ್ದವನ್ನು ಸಾಮಾನ್ಯವಾಗಿ “ರಿಲಿಜನ್‌” ಎಂದು ಅನುವಾದಿಸಲಾಗಿದೆ. ಅಂದರೆ ಒಂದು ಬಗೆಯ ಶ್ರದ್ಧೆ. ಆದರೆ ಧರ್ಮದ ನಿಜವಾದ ಅರ್ಥವೇನೆಂದರೆ “ಅವಶ್ಯವಾದ ವಿಶಿಷ್ಟಗುಣ”. ಉದಾಹರಣೆಗೆ ಸಕ್ಕರೆಯ ಧರ್ಮ ಅಥವಾ ಅವಶ್ಯವಾದ ವಿಶಿಷ್ಟಗುಣವು ಸಿಹಿ. ನಿಮಗೆ ಒಂದು ಬಿಳಿಯಪುಡಿಯನ್ನು ಕೊಟ್ಟಾಗ ಅದು ಸಿಹಿಯಾಗಿಲ್ಲ ಎಂದು ನಿಮಗೆ ಗೊತ್ತಾಗುತ್ತಿದ್ದಂತೆಯೇ, ಕೂಡಲೇ ನೀವು ಹೇಳುತ್ತೀರಿ, “ಓಹ್‌ ಇದು ಸಕ್ಕರೆಯಲ್ಲ; ಇದು ಬೇರೆ ಏನೋ ಇರಬೇಕು.” ಆದ್ದರಿಂದ ಸಕ್ಕರೆಯ ಧರ್ಮ ಸಿಹಿ. ಅದೇ ರೀತಿಯಲ್ಲಿ ಕ್ಷಾರ ರುಚಿಯು ಉಪ್ಪಿನ ಅವಶ್ಯವಾದ ವಿಶಿಷ್ಟ ಗುಣ, ಮತ್ತು ಖಾರವು ಮೆಣಸಿನಕಾಯಿಯ ಅವಶ್ಯವಾದ ವಿಶಿಷ್ಟ ಗುಣ.

ಈಗ, ನಿಮ್ಮ ಅವಶ್ಯವಾದ ವಿಶಿಷ್ಟಗುಣ ಯಾವುದು? ನೀವು ಒಬ್ಬರು ಜೀವಿ. ನೀವು ನಿಮ್ಮ ಅವಶ್ಯವಾದ ವಿಶಿಷ್ಟ ಗುಣವನ್ನು ಅರ್ಥಮಾಡಿಕೊಳ್ಳಬೇಕು. ಆ ವಿಶಿಷ್ಟಗುಣವೇ ನಿಮ್ಮ ಧರ್ಮ ಅಥವಾ ರಿಲಿಜನ್‌ – ಕ್ರೈಸ್ತಧರ್ಮವಲ್ಲ, ಹಿಂದೂ ಧರ್ಮವಲ್ಲ, ಈ ಧರ್ಮವಲ್ಲ, ಆ ಧರ್ಮವಲ್ಲ. ನಿಮ್ಮ ಶಾಶ್ವತವಾದ, ಅವಶ್ಯವಾದ ವಿಶಿಷ್ಟಗುಣ – ಅದೇ ನಿಮ್ಮ ಧರ್ಮ.

ಹಾಗಾದರೆ ಆ ವಿಶಿಷ್ಟಗುಣ ಯಾವುದು? ನಿಮ್ಮ ಅವಶ್ಯವಾದ ವಿಶಿಷ್ಟಗುಣವೆಂದರೆ ನೀವು ಯಾರಾದರೊಬ್ಬರನ್ನು ಪ್ರೀತಿಸಲು ಬಯಸುವುದು. ಆದ್ದರಿಂದ ನೀವು ಅವರಿಗೆ ಸೇವೆ ಸಲ್ಲಿಸಲು ಬಯಸುವುದು. ಅದೇ ನಿಮ್ಮ ಅವಶ್ಯವಾದ ವಿಶಿಷ್ಟಗುಣ. ನೀವು ನಿಮ್ಮ ಕುಟುಂಬವನ್ನು ಪ್ರೀತಿಸುತ್ತೀರಿ. ನೀವು ನಿಮ್ಮ ಸಮಾಜವನ್ನು ಪ್ರೀತಿಸುತ್ತೀರಿ. ನೀವು ನಿಮ್ಮ ಜನಾಂಗವನ್ನು ಪ್ರೀತಿಸುತ್ತೀರಿ. ನೀವು ನಿಮ್ಮ ದೇಶವನ್ನು ಪ್ರೀತಿಸುತ್ತೀರಿ. ಅವುಗಳನ್ನು ಪ್ರೀತಿಸುವುದರಿಂದ ನೀವು ಅವುಗಳಿಗೆ ಸೇವೆ ಸಲ್ಲಿಸಲು ಬಯಸುತ್ತೀರಿ. ಆ ರೀತಿಯಲ್ಲಿ ಪ್ರೇಮಸೇವೆಯಲ್ಲಿ ಮಗ್ನವಾಗುವುದು ನಿಮ್ಮ ಅವಶ್ಯವಾದ ವಿಶಿಷ್ಟಗುಣ, ನಿಮ್ಮ ಧರ್ಮ. ನೀವು ಕ್ರೈಸ್ತರಾಗಿರಲಿ, ಮಹಮದೀಯರಾಗಿರಲಿ, ಅಥವಾ ಹಿಂದೂ ಆಗಿರಲಿ, ಈ ವಿಶಿಷ್ಟ ಗುಣ ಉಳಿದಿರುತ್ತದೆ. ಉದಾಹರಣೆಗೆ, ಇಂದು ನೀವು ಕ್ರೈಸ್ತರಾಗಿರಬಹುದು, ನಾಳೆ ನೀವು ಒಬ್ಬ ಹಿಂದೂ ಆಗಬಹುದು. ಆದರೆ ನಿಮ್ಮ ಸೇವಾ ಮನೋಭಾವ, ಆ ಪ್ರೀತಿಯ ಚೇತನ, ನಿಮ್ಮೊಡನೆ ಉಳಿದಿರುತ್ತದೆ. ಆದ್ದರಿಂದ ಬೇರೆಯವರನ್ನು ಪ್ರೀತಿಸುವ ಮತ್ತು ಅವರಿಗೆ ಸೇವೆ ಸಲ್ಲಿಸುವ ಪ್ರವೃತ್ತಿಯು ನಿಮ್ಮ ಧರ್ಮ, ಅಥವಾ ನಿಮ್ಮ ರಿಲಿಜನ್‌. ಇದು ಧರ್ಮದ ಜಾಗತಿಕ ಸ್ವರೂಪ.

ಈಗ, ನೀವು ನಿಮಗೆ ಸಂಪೂರ್ಣ ತೃಪ್ತಿಯಾಗುವಂತೆ ನಿಮ್ಮ ಪ್ರೇಮ ಸೇವೆಯನ್ನು ಅನ್ವಯಿಸಬೇಕಾಗುತ್ತದೆ. ಏಕೆಂದರೆ ನಿಮ್ಮ ಪ್ರೇಮ ಚೇತನವು ಈಗ ತಪ್ಪು ಸ್ಥಳದಲ್ಲಿದೆ. ನೀವು ಅಸುಖಿಗಳಾಗಿದ್ದೀರಿ. ನೀವು ಹತಾಶರಾಗಿದ್ದೀರಿ ಮತ್ತು ಗೊಂದಲದಲ್ಲಿ ಸಿಲುಕಿಕೊಂಡಿದ್ದೀರಿ. ನಮ್ಮ ಪ್ರೇಮಪೂರ್ವಕ ಭಕ್ತಿಯ ಚೇತನವನ್ನು ಪರಿಪೂರ್ಣವಾಗಿ ಅನ್ವಯಿಸುವುದು ಹೇಗೆ ಎಂದು ಶ್ರೀಮದ್‌ ಭಾಗವತವು ನಮಗೆ ತಿಳಿಸುತ್ತದೆ:

ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರ್‌ ಅಧೋಕ್ಷಜೇ

ಅಹೈತುಕಿ ಅಪ್ರತಿಹತಾ ಯಯಾತ್ಮಾ ಸುಪ್ರಸೀದತಿ

ಯಾವ ಧರ್ಮವು ದೇವರನ್ನು ಪ್ರೀತಿಸಲು ನಿಮಗೆ ತರಬೇತಿ ಕೊಡುತ್ತದೆಯೋ ಅದೇ ಶ್ರೇಷ್ಠವಾದದ್ದು. ಇಂತಹ ಧರ್ಮದಿಂದ ನೀವು ಸಂಪೂರ್ಣವಾಗಿ ತೃಪ್ತರಾಗುತ್ತೀರಿ.

ದೇವರನ್ನು ಕುರಿತ ಪ್ರೀತಿಯನ್ನು ನೀವು ಸಂಪೂರ್ಣವಾಗಿ ಬೆಳೆಸಿಕೊಂಡರೆ, ನೀವೊಬ್ಬರು ಪರಿಪೂರ್ಣ ವ್ಯಕ್ತಿ ಆಗುತ್ತೀರಿ. ನಿಮ್ಮ ಆಂತರ್ಯದಲ್ಲಿಯೇ ಪರಿಪೂರ್ಣತೆಯು ಅನುಭವಕ್ಕೆ ಬರುತ್ತದೆ. ನೀವು ತೃಪ್ತಿಗಾಗಿ, ಸಂಪೂರ್ಣ ತೃಪ್ತಿಗಾಗಿ ಹಾತೊರೆಯುತ್ತಿದ್ದೀರಿ. ಆದರೆ ನೀವು ದೇವರನ್ನು ಪ್ರೀತಿಸಿದಾಗ ಮಾತ್ರ ಆ ಸಂಪೂರ್ಣ ತೃಪ್ತಿಯನ್ನು ಪಡೆದುಕೊಳ್ಳಬಹುದು. ದೇವರನ್ನು ಪ್ರೀತಿಸುವುದು ಪ್ರತಿಯೊಂದು ಜೀವಿಯ ನೈಸರ್ಗಿಕ ಕ್ರಿಯೆ. ನೀವು ಕ್ರೈಸ್ತನಾಗಿರಲಿ, ಅಥವಾ ಹಿಂದೂ ಆಗಿರಲಿ ಅಥವಾ ಮಹಮದೀಯನಾಗಿರಲಿ ಅದು ಮುಖ್ಯವಲ್ಲ. ದೇವರೆಡೆಗೆ ನಿಮ್ಮ ಪ್ರೀತಿಯನ್ನು ಬೆಳೆಸಿಕೊಳ್ಳಲು ಸುಮ್ಮನೆ ಪ್ರಯತ್ನಿಸಿ. ಆಗ ನಿಮ್ಮ ಧರ್ಮವು ಬಹಳ ಸೊಗಸಾಗುತ್ತದೆ. ಇಲ್ಲದಿದ್ದರೆ ಅದು ವೃಥಾ ಕಾಲಹರಣ (ಶ್ರಮ ಏವ ಹಿ ಕೇವಲಮ್‌). ಯಾವುದೋ ಒಂದು ನಿರ್ದಿಷ್ಟವಾದ ಧರ್ಮದಲ್ಲಿ ದೇವರ ಬಗೆಗೆ ಪ್ರೀತಿಯಿಲ್ಲದೆ ಮತಕ್ರಿಯಾ ವಿಧಿಗಳನ್ನು ಆಚರಿಸುತ್ತಿದ್ದರೆ, ಆಗ ನೀವು ನಿಮ್ಮ ಸಮಯವನ್ನು ಸುಮ್ಮನೆ ವ್ಯರ್ಥಮಾಡಿದಂತೆಯೇ ಸರಿ.

ಎಲ್ಲ ಬಗೆಯ ಧರ್ಮಗಳಿಗೂ ಕೃಷ್ಣಪ್ರಜ್ಞಾ ಆಂದೋಲನವು ಒಂದು ಸ್ನಾತಕೋತ್ತರ ಆಂದೋಲನ. ನಾವು ಕ್ರೈಸ್ತರು, ಮುಸ್ಲಿಮರು, ಹಿಂದೂಗಳು – ಹೀಗೆ ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತೇವೆ: ದಯವಿಟ್ಟು ಬನ್ನಿ. ನಮ್ಮೊಡನೆ ಸೇರಿ. ದೇವರನ್ನು ಪ್ರೀತಿಸಲು ಪ್ರಯತ್ನಿಸಿ. ಅದಕ್ಕೆ ಅನುಸರಿಸಬೇಕಾದ ವಿಧಾನ ಬಹಳ ಸರಳ: ಅವನ ಪವಿತ್ರ ನಾಮಗಳನ್ನು ಜಪಿಸಿದರೆ ಸಾಕು – ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ / ಹರೇರಾಮ ಹರೇರಾಮ ರಾಮರಾಮ ಹರೇಹರೇ.

ನನ್ನ ವಿದ್ಯಾರ್ಥಿಗಳೆಲ್ಲ ಅಮೆರಿಕನ್ನರು, ಅವರೆಲ್ಲ ಕ್ರೈಸ್ತ ಅಥವಾ ಯೆಹೂದ್ಯ ಕುಟುಂಬಗಳಿಂದ ಬಂದಿದ್ದಾರೆ. ಹಿಂದೂ ಕುಟುಂಬಗಳಿಂದ ಬಂದವರು ಅವರಲ್ಲಿ ಯಾರೂ ಇಲ್ಲ. ಹೀಗೆ ನಾನು ಅವರಿಗೆ ನೀಡಿರುವ ಪ್ರಕ್ರಿಯೆಯು – ಹರೇಕೃಷ್ಣ ಮಂತ್ರವನ್ನು ಜಪಿಸುವ ಪ್ರಕ್ರಿಯೆ – ಜಾಗತಿಕವಾದದ್ದು . ಅದು ಹಿಂದೂ ಪ್ರಕ್ರಿಯೆಯಲ್ಲ ಅಥವಾ ಭಾರತೀಯ ಪ್ರಕ್ರಿಯೆಯಲ್ಲ.

ಸಂಸ್ಕೃತ ಶಬ್ದ `ಮಂತ್ರ’ವು ಎರಡು ಅಕ್ಷರಗಳಿಂದ ಕೂಡಿದೆ – ಮನ್‌ ಮತ್ತು ತ್ರ. ಮನ್‌ ಎಂದರೆ “ಮನಸ್ಸು” ಮತ್ತು ತ್ರ ಎಂದರೆ “ವಿಮೋಚನೆ”. ಆದ್ದರಿಂದ ಮಾನಸಿಕ ಊಹಾಪೋಹದಿಂದ, ಮಾನಸಿಕ ನೆಲೆಯಲ್ಲಿಯೇ ಅನಿಶ್ಚಿತ ಸ್ಥಿತಿಯಲ್ಲಿ ತೂಗಾಡುತ್ತಿರುವುದರಿಂದ ಯಾವುದು ನಿಮ್ಮನ್ನು ವಿಮೋಚನೆಗೊಳಿಸುತ್ತದೆಯೋ ಅದೇ `ಮಂತ್ರ.’ ಆದ್ದರಿಂದ ನೀವು ಈ ಮಂತ್ರವನ್ನು – ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ / ಹರೇರಾಮ ಹರೇರಾಮ ರಾಮರಾಮ ಹರೇಹರೇ – ಜಪಿಸಿದರೆ ಅನತಿಕಾಲದಲ್ಲಿಯೇ ಕತ್ತಲೆಯಿಂದ ಬೆಳಕಿನ ಕಡೆಗೆ ಬರುತ್ತಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ.

ನಾನು ನಿಮ್ಮ ಹೆಚ್ಚು ಸಮಯ ತೆಗೆದುಕೊಳ್ಳಲು ಬಯಸುವುದಿಲ್ಲ. ಆದರೆ ಈ ಹರೇಕೃಷ್ಣ ಮಂತ್ರದ ಮಹತ್ವವನ್ನು ನಿಮಗೆ ಮನದಟ್ಟು ಮಾಡಿಕೊಡುವುದಷ್ಟೇ ನನ್ನ ಉದ್ದೇಶ. ಒಂದು ಪ್ರಯೋಗ ಮಾಡಿನೋಡಿ: ಒಂದು ವಾರದ ಕಾಲ ಹರೇಕೃಷ್ಣ ಮಂತ್ರವನ್ನು ಜಪಿಸಿ. ಎಷ್ಟು ಆಧ್ಯಾತ್ಮಿಕ ಪ್ರಗತಿಯನ್ನು ನೀವು ಸಾಧಿಸುತ್ತೀರಿ ಎನ್ನುವುದನ್ನು ನೀವೇ ನೋಡಿ. ನಾವು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆದ್ದರಿಂದ ನಿಮಗೆ ಯಾವ ನಷ್ಟವೂ ಇಲ್ಲ. ಬದಲಿಗೆ ದೊಡ್ಡ ಲಾಭವೇ ಸಿಗಲಿದೆ. ಅದನ್ನು ಖಾತರಿ ಕೊಡುತ್ತೇನೆ. ಆದ್ದರಿಂದ ದಯವಿಟ್ಟು ಜಪಿಸಿ: ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ / ಹರೇರಾಮ ಹರೇರಾಮ ರಾಮರಾಮ ಹರೇಹರೇ. 

ವಂದನೆಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi