ಶಿವ ದಯಾಮಯಿ

ಸಾವಿರಾರು ವರ್ಷಗಳ ಹಿಂದೆ, ದೇವತೆಗಳು ಮತ್ತು ರಾಕ್ಷಸರು ಕ್ಷೀರ ಸಾಗರವನ್ನು ಕಡೆಯಲು ನಿರ್ಧರಿಸಿದರು. ಅದರಿಂದ ಅಮೃತ ಪಡೆಯುವುದು ಅವರ ಉದ್ದೇಶ. ಅಮೃತ ಕುಡಿದು ಅಮರತ್ವ ಪಡೆಯುವ ತವಕ, ಅವರದು. ಹೀಗಾಗಿ, ಅವರು ದೈವಿಕ ಸರ್ಪ ವಾಸುಕಿಯನ್ನು ಹಗ್ಗವಾಗಿ ಬಳಸಿದರು. ದೇವತೆಗಳು ವಾಸುಕಿಯ ಬಾಲ ಹಿಡಿದರೆ, ಅಸುರರು ತಲೆ ಭಾಗ ಹಿಡಿದುಕೊಂಡರು. ಮಂದಾರ ಪರ್ವತವನ್ನು ಕಡೆಗೋಲಾಗಿ ಬಳಸಿ ಸಾಗರವನ್ನು ಕಡೆಯಲು ಆರಂಭಿಸಿದರು. ಸ್ವಲ್ಪ ಸಮಯದಲ್ಲಿಯೇ ಪರ್ವತವು ವಾಸುಕಿಯ ಹಿಡಿತದಿಂದ ಜಾರಿ ಸಮುದ್ರದೊಳಗೆ ಬಿದ್ದಿತು. ಅದನ್ನು ಸ್ವಸ್ಥಾನದಲ್ಲಿ ಇಡಲು ಮಹಾವಿಷ್ಣು ಕೂರ್ಮಾವತಾರ ತಾಳಿದನು. ಬೃಹತ್‌ ಆಮೆ ರೂಪದಲ್ಲಿ ಆವಿರ್ಭವಿಸಿದ ಅವನು ಪರ್ವತವನ್ನು ತನ್ನ ಬೆನ್ನಿಗೆ ಹಾಕಿಕೊಂಡು ಅದರ ಸ್ಥಾನದಲ್ಲಿ ಇರಿಸಿದ. ಇದರಿಂದ ಸಾಗರ ಕಡೆಯುವ ಕಾರ್ಯ ಮುಂದುವರಿಯುವಂತಾಯಿತು.

ಕಡೆದೂ ಕಡೆದೂ ದೇವತೆಗಳೂ ಅಸುರರೂ ಸುಸ್ತಾದರು. ಏನೂ ಫಲ ಕಾಣುತ್ತಿರಲಿಲ್ಲ. ದೇವೋತ್ತಮ ಪರಮ ಪುರುಷನು ಮಳೆ ಸುರಿಸಿ ಅವರು ಒಂದಷ್ಟು ತಣ್ಣಗಾಗುವಂತೆ ಮಾಡಿದನು. ಅವರ ಕಡೆಯುವ ಕೆಲಸ ರಭಸದಿಂದ ಸಾಗಿತು. ಇದರಿಂದ ಸಾಗರ ಪ್ರಾಣಿಗಳಾದ ಮೀನು, ದೊಡ್ಡ ಕಡಲ ಮೀನು, ತಿಮಿಂಗಲ ಮತ್ತು ಮೊಸಳೆಗಳಿಗೆ ಅಲ್ಲಿ ಜೀವಿಸುವುದೇ ಕಷ್ಟವಾಯಿತು. ಈ ಎಲ್ಲದರ ಪರಿಣಾಮವಾಗಿ ಅಪಾಯಕಾರಿಯಾದ ವಿಷ ಅಲ್ಲಿ ಉತ್ಪತ್ತಿಯಾಯಿತು. ಹಾಲಾಹಲ ಎಂಬ ಈ ವಿಷ ಎಲ್ಲೆಡೆ ಹರಿಯತೊಡಗಿದಾಗ ದೇವತೆಗಳು ಗಾಬರಿಯಾದರು. ಭಯಭೀತರಾದ ಅವರಿಗೆ ದಿಕ್ಕೇ ತೋಚಲಿಲ್ಲ.

ಅನಂತರ ದೇವತೆಗಳು ಕೈಲಾಸಕ್ಕೆ ಹೋಗಿ ಶಿವನ ಮೊರೆ ಹೊಕ್ಕರು. ಹಾಲಾಹಲ ವಿಷವನ್ನು ತೆಗೆಯದಿದ್ದರೆ ಅಮೃತ ಸಿಗುವುದಿಲ್ಲ ಎಂದು ಗೋಳಾಡಿದರು. ಸಹಾಯ ಕೋರಿ ಬಂದವರಿಗೆ ಕೃಪೆ ತೋರುವವನು, ಶಿವ. ಅವನು ದಯಾಮಯಿ. ಅವನ ಅನೇಕ ನಾಮಧೇಯಗಳಲ್ಲಿ ಆಶುತೋಷ ಕೂಡ ಒಂದು. ಅದರರ್ಥ ಅವನನ್ನು ಸುಲಭವಾಗಿ ಸಂತುಷ್ಟಗೊಳಿಸಬಹುದು. ದೇವತೆಗಳಿಗೆ ನೆರವಾಗಲು ಅವನು ಒಪ್ಪಿದ.

ಶಿವ ಹೇಳಿದ. `ಸಂಕಷ್ಟದಲ್ಲಿರುವವರಿಗೆ ಮತ್ತು ಆಶ್ರಯ ಕೋರಿ ಬರುವವರಿಗೆ ರಕ್ಷಣೆ ನೀಡುವುದು ನನ್ನ ಕರ್ತವ್ಯ. ಜನರು ತಮ್ಮ ತಮ್ಮಲ್ಲೇ ಹೊಡೆದಾಡುತ್ತಿದ್ದರೂ ಸತ್ಪುರುಷ ಭಕ್ತರು ತಮ್ಮ ಸಂಕಷ್ಟ ಪರಿಸ್ಥಿತಿಯಿಂದ ಪಾರಾಗಲು ಜೀವವನ್ನೇ ಒಡ್ಡುತ್ತಾರೆ. ದೇವೋತ್ತಮ ಪರಮ ಪುರುಷ ಶ್ರೀ ಹರಿಯು ಇದನ್ನು ನೋಡಿದರೆ ಸಂತೃಪ್ತಗೊಳ್ಳುತ್ತಾನೆ. ಹರಿಗೆ ಸಂತೋಷವಾದರೆ ಅನ್ಯ ಜೀವಿಗಳ ಜೊತೆಗೆ ನನಗೂ ತೃಪ್ತಿ. ಈ ನೋವಿನಿಂದ ನಿಮ್ಮನ್ನು ಪಾರು ಮಾಡಲು ನಾನು ಈ ವಿಷವನ್ನು ಕುಡಿಯುವೆ.’

ಹಾಗೆ ಹೇಳುತ್ತ ಶಿವನು ವಿಷ ಸೇವಿಸಲು ಆರಂಭಿಸಿದ. ಅವನು ಅಷ್ಟೂ ಪ್ರಮಾಣದ ಹಾಲಾಹಲ ವಿಷವನ್ನು ತನ್ನ ಬೊಗಸೆಯಲ್ಲಿ ತೆಗೆದುಕೊಂಡು ಕುಡಿದುಬಿಟ್ಟ. ವಿಷವು ತನ್ನ ಶಕ್ತಿಯನ್ನು ತೋರಿಸಿತು. ಶಿವನ ಕತ್ತಿನ ಸುತ್ತ ನೀಲಿ ಗೆರೆ ಮೂಡಿತು. ಆದರೆ, ಈಗ ಆ ಗೆರೆಯನ್ನು ಆಭರಣವೆಂದು ಭಾವಿಸಲಾಗಿದೆ. ಬ್ರಹ್ಮ, ದುರ್ಗಾಮಾತೆಯಂತಹ ಶ್ರೇಷ್ಠರೆಲ್ಲ ಶಿವನ ಈ ನಿಸ್ವಾರ್ಥತೆಯನ್ನು ಕೊಂಡಾಡಿದರು. ಬೇರೆಯವರ ಸಂಕಷ್ಟ ನಿವಾರಣೆಗೆ ದೊಡ್ಡವರು ಆ ಕಷ್ಟವನ್ನು ತಾವೇ ಹೊರುತ್ತಾರೆ. ಈ ರೀತಿ, ಶಿವನಿಗೆ ಈಗ ನೀಲಕಂಠನೆಂದೂ ಹೆಸರು. ಅಂದರೆ `ನೀಲಿ ಕೊರಳಿನವ.’

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi