ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು
ಸಿಯೆಟಲ್ನಲ್ಲಿ ಇಸ್ಕಾನ್ ಕೇಂದ್ರದಲ್ಲಿ ನೀಡಿದ ಉಪನ್ಯಾಸ
ಗೋವಿಂದಮ್ ಆದಿ ಪುರುಷಂ ತಮ್ ಅಹಂ ಭಜಾಮಿ. ನಾವು ಆದಿಪುರುಷನಾದ ಗೋವಿಂದ ಅಥವಾ ಕೃಷ್ಣನನ್ನು ಅರಿತುಕೊಳ್ಳಲು ಆಸಕ್ತರಾಗಿದ್ದೇವೆ. ಒಬ್ಬ ವ್ಯಕ್ತಿಯು ಆದಿಪುರುಷನನ್ನು ಅರಿತುಕೊಳ್ಳಬಲ್ಲವನಾದರೆ, ಅವನು ಎಲ್ಲವನ್ನೂ ಅರಿತುಕೊಳ್ಳುತ್ತಾನೆ. ಇದನ್ನೇ ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ: ಯಸ್ಮಿನ್ ವಿಜ್ಞಾತೇ ಸರ್ವಮ್ ಏವಂ ವಿಜ್ಞಾತಂ ಭವತಿ. “ನೀವು ದೇವೋತ್ತಮ ಪರಮ ಪುರುಷನನ್ನು ಅಥವಾ ಪರಮ ಸತ್ಯವನ್ನು ಅರಿತುಕೊಳ್ಳಬಲ್ಲವರಾದರೆ, ಎಲ್ಲವನ್ನೂ ಅರಿತುಕೊಳ್ಳುತ್ತೀರಿ.”

ಅದೇ ರೀತಿ, ಭಗವದ್ಗೀತೆ (6.22) ಹೇಳುತ್ತದೆ, ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಕಂ ತತಃ – “ಕೃಷ್ಣನನ್ನು ಅರಿತುಕೊಂಡವನು ಅದಕ್ಕಿಂತ ಶ್ರೇಷ್ಠ ಸಂಪಾದನೆಯೇ ಇಲ್ಲವೆಂದು ಯೋಚಿಸುತ್ತಾನೆ.” ಪ್ರತಿಯೊಬ್ಬನೂ ತನ್ನ ಸ್ಥಾನಮಾನ ಅಥವಾ ವಿಚಾರಕ್ಕನುಗುಣವಾಗಿ ಏನನ್ನಾದರೂ ಗಳಿಸಲು ನೋಡುತ್ತಿದ್ದಾನೆ. ಎಲ್ಲರೂ ಒಂದನ್ನೇ ಪಡೆಯಲು ಪ್ರಯತ್ನಿಸುತ್ತಿಲ್ಲ. ಯಾರೋ ಒಬ್ಬ ಮಾದಕತೆಯನ್ನು ಹುಡುಕುತ್ತಿದ್ದಾನೆ, ಯಾರೋ ಒಬ್ಬ ಕಾಮವನ್ನು ಹುಡುಕುತ್ತಿದ್ದಾನೆ, ಇನ್ನಾರೋ ಹಣವನ್ನು ಹುಡುಕುತ್ತಿದ್ದಾನೆ ಮತ್ತು ಯಾರೋ ಒಬ್ಬ ಜ್ಞಾನವನ್ನು ಹುಡುಕುತ್ತಿದ್ದಾನೆ – ಹೀಗೆ ಜನರು ಅನೇಕ ವಸ್ತುಗಳನ್ನು ಹುಡುಕುತ್ತಿದ್ದಾರೆ. ಆದರೆ ಹೀಗೊಂದು ವಸ್ತುವು ಅಸ್ತಿತ್ವದಲ್ಲಿದ್ದು, ಅದನ್ನು ಪಡೆದ ಅನಂತರ ನಮಗೆ ಇನ್ನೇನು ಬೇಡವೆಂದು ಹೇಳುವಂತಾಗುವುದು. ಅದೇ ಕೃಷ್ಣನ ಪರಿಪೂರ್ಣ ಅರಿವು.
ನೀವು ಕೃಷ್ಣನನ್ನು ಅರಿತುಕೊಂಡರೆ ಸಾಕು, ನಿಮ್ಮ ಜ್ಞಾನವು ಪರಿಪೂರ್ಣವಾಗುತ್ತದೆ: ನೀವು ಎಲ್ಲವನ್ನೂ ಅರಿತುಕೊಳ್ಳುತ್ತೀರಿ. ನಿಮಗೆ ವಿಜ್ಞಾನ ತಿಳಿಯುತ್ತದೆ, ಗಣಿತ ತಿಳಿಯುತ್ತದೆ, ರಸಾಯನ ವಿಜ್ಞಾನ, ಭೌತಶಾಸ್ತ್ರ, ಖಗೋಳವಿಜ್ಞಾನ, ತತ್ತ್ವಜ್ಞಾನ, ಸಾಹಿತ್ಯ – ಎಲ್ಲ ತಿಳಿಯುತ್ತವೆ. ನೀವು ಜ್ಞಾನದ ಯಾವ ವಿಭಾಗದಲ್ಲಿ ಅಥವಾ ಎಂತಹ ಚಟುವಟಿಕೆಯಲ್ಲಿ ತೊಡಗಿದ್ದೀರಿ ಎಂಬುದು ಮುಖ್ಯವಲ್ಲ. ನೀವು ನಿಮ್ಮ ಚಟುವಟಿಕೆ ಅಥವಾ ಜ್ಞಾನಾನ್ವೇಷಣೆಯ ಮೂಲಕ ಪರಮಾತ್ಮನನ್ನು ಕಂಡುಕೊಳ್ಳಲು ಸಾಧ್ಯವಾದರೆ, ಅದು ನಿಮ್ಮ ಪರಿಪೂರ್ಣತೆಯಾಗುತ್ತದೆ. ನೀವು ವಿಜ್ಞಾನಿಯೇ? ಸರಿ: ನಿಮ್ಮ ವೈಜ್ಞಾನಿಕ ಸಂಶೋಧನೆಯ ಮೂಲಕ ಭಗವಂತನನ್ನು ಹುಡುಕಿ. ಆಗ ನಿಮ್ಮ ವಿಜ್ಞಾನ ಪರಿಪೂರ್ಣವಾಗುತ್ತದೆ. ನೀವು ವ್ಯಾಪಾರಿಯೇ? ನಿಮ್ಮ ಹಣದ ಮೂಲಕ ಭಗವಂತನನ್ನು ಹುಡುಕಿ. ನೀವು ಪ್ರೇಮಿಯೇ? ಪರಮಪ್ರೇಮಿಯಾದ ಕೃಷ್ಣನನ್ನು ಹುಡುಕಿ, ಸಾಕು. ನಿಮ್ಮಲ್ಲಿ ಸೌಂದರ್ಯ ಪ್ರಜ್ಞೆಯಿರುವುದೇ? ನೀವು ಸೌಂದರ್ಯಕ್ಕಾಗಿ ಹುಡುಕುತ್ತಿದ್ದೀರಾ? ನೀವು ಕೃಷ್ಣನನ್ನು ಹುಡುಕಿಬಿಟ್ಟರೆ, ಸೌಂದರ್ಯಕ್ಕಾಗಿ ನಿಮ್ಮಲ್ಲಿರುವ ಆಸೆಯು ಈಡೇರುವುದು.

“ಕೃಷ್ಣ” ಈ ಹೆಸರಿನ ಅರ್ಥ “ಸರ್ವಾಕರ್ಷಕನಾದವನು.” ಅವನು ಪ್ರೇಮಿಗಳಿಗೆ, ಬುದ್ಧಿಜೀವಿಗಳಿಗೆ, ರಾಜಕಾರಣಿಗಳಿಗೆ, ವಿಜ್ಞಾನಿಗಳಿಗೆ, ಅಷ್ಟೇ ಅಲ್ಲದೇ ಠಕ್ಕರಿಗೂ ಆಕರ್ಷಕನಾಗಿದ್ದಾನೆ. ಕೃಷ್ಣನು ಕಂಸನ ಕುಸ್ತಿ ಅಖಾಡಕ್ಕಿಳಿದಾಗ ಅಲ್ಲಿ ನೆರೆದಿದ್ದ ವಿವಿಧ ಪ್ರಕಾರದ ಜನರು ಕೃಷ್ಣನನ್ನು ಬೇರೆ ಬೇರೆ ರೀತಿಯಲ್ಲಿ ಕಂಡರು. ಅವರಲ್ಲಿ ವೃಂದಾವನದಿಂದ ಬಂದಿದ್ದ ಬಾಲೆಯರು ಕೃಷ್ಣನನ್ನು ಸುಂದರ ಪುರುಷನನ್ನಾಗಿ ಕಂಡರು ಮತ್ತು ವೃದ್ಧ ಮಹಿಳೆಯರು ಅವನನ್ನು ಮುದ್ದುಮಗುವಾಗಿ ಕಂಡರು. ಆದರೆ ದುಷ್ಟ ಕುಸ್ತಿಪಟುಗಳು ಅವನನ್ನು ಮಾರಣಾಂತಿಕ ಸಿಡಿಲಾಗಿ ಕಂಡರು. ಅವರು ನೋಡಿದ್ದು ಅದೇ ಕೃಷ್ಣನನ್ನು. ಆದರೆ ಅವರು ಯೋಚಿಸಿದರು, “ಓಹ್, ಈ ಸಿಡಿಲು ನಮ್ಮನ್ನು ಸಂಹರಿಸಿಬಿಡುವುದು!” ನೀವು ಎಷ್ಟೇ ಬಲಿಷ್ಠರಾಗಿದ್ದರೂ, ನಿಮಗೆ ಸಿಡಿಲು ಬಡಿಯಿತೆಂದರೆ, ನಿಮ್ಮ ಕಥೆ ಮುಗಿದಂತೆಯೇ. ಕಂಸನ ಕುಸ್ತಿಪಟುಗಳು ಕೃಷ್ಣನನ್ನು ಕಂಡದ್ದು ಅಂಥದೇ ಮಾರಣಾಂತಿಕ ಸಿಡಿಲಿನ ರೂಪದಲ್ಲಿ.
ನೀವು ಹನ್ನೆರಡು ಪ್ರಕಾರದ ರಸಗಳು ಅಥವಾ ವಿನೋದಗಳಲ್ಲಿ ಯಾವುದಾದರೂ ಒಂದರ ಮೂಲಕ ಕೃಷ್ಣನೊಂದಿಗೆ ಸಂಬಂಧ ಸ್ಥಾಪಿಸಿಕೊಳ್ಳಬಹುದು. ಉದಾಹರಣೆಗಾಗಿ, ಕೆಲವೊಮ್ಮೆ ನೀವು ನಾಟಕದಲ್ಲಿ ರೌದ್ರ ದೃಶ್ಯವನ್ನು ನೋಡಲು ಇಚ್ಛಿಸಬಹುದು. ಒಬ್ಬ ಇನ್ನೊಬ್ಬನನ್ನು ಕೊಲ್ಲುವುದನ್ನು ನೋಡಿ ನಿಮಗೆ ಸಂತೋಷವಾಗಬಹುದು. ಮಾಂಟ್ರಿಯಾಲ್ನಲ್ಲಿರುವ ನನ್ನ ವಿದ್ಯಾರ್ಥಿಯೊಬ್ಬರು ಹೇಳಿದಂತೆ, ಅವರ ತಂದೆ ಸ್ಪೇನಿನಲ್ಲಿ ನಡೆಯುವ ಗೂಳಿ ಕಾಳಗವನ್ನು ಕಂಡು ಸಂತೋಷಪಡುತ್ತಿದ್ದರಂತೆ. ಒಬ್ಬ ವ್ಯಕ್ತಿಗೆ ಇದೆಲ್ಲ ಕ್ರೂರವಾಗಿ ಕಂಡರೆ, ಇನ್ನೊಬ್ಬನು ಇದನ್ನೇ ಆನಂದಿಸುತ್ತಾನೆ: “ಓಹ್, ತುಂಬ ಚೆನ್ನಾಗಿದೆ.” ಕೃಷ್ಣನು ಇಬ್ಬರಿಗೂ ಆಶ್ರಯ ನೀಡಬಲ್ಲನು. ನೀವು ಭಯಂಕರವಾದುದನ್ನೇ ಇಷ್ಟಪಟ್ಟರೆ ಕೃಷ್ಣನು ನರಸಿಂಹನ ರೂಪದಲ್ಲಿ ನಿಮ್ಮೆದುರು ಪ್ರಕಟವಾಗುವನು. ಅದೇ ನೀವು ಕೃಷ್ಣನನ್ನು ನಿಮ್ಮ ಪ್ರೀತಿಯ ಸ್ನೇಹಿತನಾಗಿ ಕಾಣಬಯಸಿದರೆ, ಅವನು ವಂಶೀಧಾರೀ (ಕೊಳಲು ಹಿಡಿದವನು) ಅಥವಾ ವೃಂದಾವನ ವಿಹಾರೀ (ವೃಂದಾವನದ ವಿಲಾಸಿ) ರೂಪದಲ್ಲಿ ನಿಮ್ಮೆದುರು ಪ್ರಕಟಗೊಳ್ಳುವನು. ನೀವು ಕೃಷ್ಣನನ್ನು ಮುದ್ದು ಮಗುವಾಗಿ ನೋಡಲು ಬಯಸಿದರೆ, ಅವನು ಗೋಪಾಲನಾಗಿ ಪ್ರಕಟಗೊಳ್ಳುವನು.

ಹೀಗೆ ಹನ್ನೆರಡು ರಸಗಳಿದ್ದು, ಕೃಷ್ಣನು ಅವೆಲ್ಲವನ್ನೂ ಪ್ರಸ್ತುತಪಡಿಸಬಲ್ಲನು. ಆದ್ದರಿಂದಲೇ ಅವನನ್ನು “ಅಖಿಲ ರಸಾಮೃತ ಸಿಂಧು” ಅಂದರೆ, “ವಿವಿಧ ರಸಗಳ ರಸಾಮೃತ ಸಾಗರ” ಎನ್ನುತ್ತಾರೆ. ನೀವು ನೀರನ್ನು ಹುಡುಕುತ್ತ ಪೆಸಿಫಿಕ್ ಸಮುದ್ರಕ್ಕೆ ಹೋದರೆ, ಓಹ್, ನಿಮಗೆ ಮಿತಿಯೇ ಇಲ್ಲದಷ್ಟು ನೀರು ಸಿಗುವುದು. ಅಲ್ಲಿರುವ ನೀರಿನ ಪ್ರಮಾಣವು ಸಾಟಿಯಿಲ್ಲದ್ದು. ಅದೇ ರೀತಿ, ನೀವು ಏನನ್ನೇ ಬಯಸಿದರೂ ಕೃಷ್ಣನನ್ನು ಬೇಡಿಕೊಂಡಾಗ, ಅವನೂ ಕೂಡ ಪೆಸಿಫಿಕ್ ಸಮುದ್ರದ ಹಾಗೆ ಎಲ್ಲವನ್ನೂ ಮಿತಿಯಿಲ್ಲದಂತೆ ಪೂರೈಸುತ್ತಾನೆ. ಅದಕ್ಕೆ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಕಂ ತತಃ. ಒಬ್ಬ ವ್ಯಕ್ತಿಯು ಪರಮ ಪರಿಪೂರ್ಣನನ್ನು ಸಮೀಪಿಸಲು ಅಥವಾ ಪಡೆಯಲು ಸಫಲನಾದಲ್ಲಿ, ಆ ವ್ಯಕ್ತಿಗೆ ಸಂಪೂರ್ಣ ತೃಪ್ತಿ ಸಿಗುವುದು. ಅನಂತರ ಅವನು ಹೇಳುವನು, “ನನಗೆ ಯಾವುದೇ ಹಂಬಲಗಳಿಲ್ಲ. ಈಗ ನನ್ನ ಬಳಿಯಿರುವುದೆಲ್ಲವೂ ನನಗೆ ಸಂಪೂರ್ಣ ತೃಪ್ತಿ ತಂದಿದೆ.”
ಹಾಗಾದರೆ, ಒಬ್ಬ ವ್ಯಕ್ತಿಯನ್ನು ಅಂತಹ ಅಲೌಕಿಕ ಸ್ಥಿತಿಯಲ್ಲಿರಿಸಿದರೆ ಏನಾಗುತ್ತದೆ? ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ – “ತನ್ನ ಜೀವನದಲ್ಲಿ ಅತಿ ಬೇಗುದಿಯಿದ್ದರೂ, ಅವನು ವಿಚಲಿತಗೊಳ್ಳುವುದಿಲ್ಲ.” ವೈದಿಕ ಗ್ರಂಥಗಳಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ಉದಾಹರಣೆಗಳಿವೆ. ಉದಾಹರಣೆಗಾಗಿ, ಪಾಂಡವರನ್ನು ಅನೇಕ ಯಾತನಾಮಯ ಪರಿಸ್ಥಿತಿಗೆ ದೂಡಲಾಯಿತಾದರೂ ಅವರು ಎಂದಿಗೂ ಎದೆಗೆಡಲಿಲ್ಲ. “ಪ್ರಿಯ ಕೃಷ್ಣ, ನಾವು ನಿನ್ನ ಸ್ನೇಹಿತರು. ನಮಗೇಕೆ ಈ ರೀತಿಯ ಕಠೋರ ಪರಿಸ್ಥಿತಿಗಳು ಎದುರಾಗುತ್ತಿವೆ?” ಎಂದು ಅವರು ಕೃಷ್ಣನನ್ನು ಎಂದಿಗೂ ಪ್ರಶ್ನಿಸಲಿಲ್ಲ. ಕೃಷ್ಣನು ಅವರ ಸ್ನೇಹಿತನಾಗಿದ್ದರಿಂದ, ಅವರಿಗೆ ಎಂತಹ ಕಷ್ಟಗಳು ಬಂದರೂ ಅವರು ವಿಜಯಶಾಲಿಗಳಾಗುವರೆಂದು ಅವರಲ್ಲಿ ಗಾಢ ಭರವಸೆಯಿತ್ತು.

ಈ ಗಾಢ ಭರವಸೆಯನ್ನೇ ಸಂಪೂರ್ಣ ಶರಣಾಗತಿ ಎನ್ನುತ್ತಾರೆ. ಕೃಷ್ಣನಿಗೆ ಶರಣಾಗತರಾಗಲು ಆರು ಅಂಶಗಳಿವೆ. ಅವುಗಳಲ್ಲಿ ಒಂದು, ಕೃಷ್ಣ ನಮ್ಮನ್ನು ರಕ್ಷಿಸುವನು ಎಂಬ ಸಂಪೂರ್ಣ ನಂಬಿಕೆ ಹೊಂದುವುದು. ಇದು ಮಗುವೊಂದು ತನ್ನ ತಂದೆ ಅಥವಾ ತಾಯಿಯಲ್ಲಿ ಹೊಂದಿರುವ ನಂಬಿಕೆಯಂತೆಯೇ. ಆ ಮಗುವು, “ನನ್ನ ತಾಯಿ ನನ್ನ ಹತ್ತಿರ ಇರುವಾಗ ಅಪಾಯಕ್ಕೆ ಅವಕಾಶವಿಲ್ಲ” ಎಂದು ಯೋಚಿಸುತ್ತದೆ. ನನಗಾದ ಇಂಥದೊಂದು ನಿಜವಾದ ಅನುಭವವನ್ನೇ ನಿರೂಪಿಸುವೆ. ಕಲ್ಕತ್ತಾದಲ್ಲಿ, ನನ್ನ ಯೌವನದ ದಿನಗಳಲ್ಲಿ, ಒಮ್ಮೆ ನಾನು ನನ್ನ ಚಿಕ್ಕ ಮಗನೊಂದಿಗೆ ಟ್ರ್ಯಾಮ್ನಲ್ಲಿ ಪ್ರಯಾಣಿಸುತ್ತಿದ್ದೆ. ಆಗಿನ್ನೂ ಅವನಿಗೆ 2-3 ವರ್ಷ. ಕಂಡಕ್ಟರ್ ಬಂದು, “ಎಲ್ಲಿ, ಟಿಕೆಟ್ಗೆ ದುಡ್ಡು ಕೊಡು” ಎಂದು ಹಾಸ್ಯ ಮಾಡಿದನು.
ನನ್ನ ಮಗ ಹೇಳಿದ, “ನನ್ನ ಹತ್ತಿರ ದುಡ್ಡಿಲ್ಲ.”
ಅದಕ್ಕೆ ಕಂಡಕ್ಟರ್, “ಹಾಗಾದರೆ, ಕೆಳಗಿಳಿಯಪ್ಪ” ಎಂದನು.
ತತ್ಕ್ಷಣ ನನ್ನ ಮಗನು ಕಂಡಕ್ಟರ್ಗೆ ಹೇಳಿದನು, “ಆಹ್, ನನ್ನ ತಂದೆ ನನ್ನ ಜೊತೆಗಿರುವರು. ನನ್ನ ತಂದೆ ನನ್ನೊಂದಿಗಿರುವುದರಿಂದ ನೀವು ನನ್ನನ್ನು ಕೆಳಗಿಳಿಯುವಂತೆ ಕೇಳಲಾಗದು.” ಇದು ಶರಣಾಗತಿಯ ಪ್ರವೃತ್ತಿ. ಶ್ರೇಷ್ಠತಮ ವ್ಯಕ್ತಿಯ ರಕ್ಷಣೆಯಲ್ಲಿ ಸಂಪೂರ್ಣ ನಂಬಿಕೆ. ಕೃಷ್ಣನು ಭಗವದ್ಗೀತೆ (9.31) ಯಲ್ಲಿ ನಮಗೆ ಸಂಪೂರ್ಣ ಸಂರಕ್ಷಣೆಯ ಭರವಸೆ ನೀಡುತ್ತಾನೆ. ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ “ಕುಂತೀಪುತ್ರ ಅರ್ಜುನ, ನನ್ನ ಭಕ್ತನಾದವನು ಎಂದಿಗೂ ಪರಾಭವಗೊಳ್ಳುವುದಿಲ್ಲ ಎಂಬುದನ್ನು ಈ ಜಗತ್ತಿಗೆ ತಿಳಿಸು.” ನೀವು ಕೃಷ್ಣನಿಗೆ ಶರಣಾಗತರಾದರೆ, ಎಂತಹ ದೊಡ್ಡ ಅಪಾಯವೂ ನಿಮ್ಮನ್ನು ಕ್ಷೋಭೆಗೊಳಿಸದು. ಅದು ಸತ್ಯ. ಅಂತಹ ವ್ಯಕ್ತಿತ್ವ ಕೃಷ್ಣನದು! ಕೃಷ್ಣ ಅನ್ನೋ ಈ ಸರ್ವಶ್ರೇಷ್ಠ ವರವನ್ನು ಪಡೆಯಲು ಪ್ರಯತ್ನಿಸಿ.
ಯಾರು ಕೃಷ್ಣನನ್ನು ಪೂಜಿಸುತ್ತಾರೋ ಅವರು ಬುದ್ಧಿವಂತರು. ಕೃಷ್ಣನು ಭಗವದ್ಗೀತೆ (10.8) ಯಲ್ಲಿ ಹೇಳುವಂತೆ,
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।
ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವ ಸಮನ್ವಿತಾಃ ॥
“ಸಕಲ ಲೌಕಿಕ ಮತ್ತು ಅಲೌಕಿಕ ಜಗತ್ತುಗಳ ಮೂಲ ನಾನೇ. ಎಲ್ಲವೂ ನನ್ನಿಂದ ಹೊರಹೊಮ್ಮುತ್ತದೆ. ಈ ಸತ್ಯವನ್ನು ಸಂಪೂರ್ಣವಾಗಿ ಅರಿತುಕೊಂಡಿರುವ ಜ್ಞಾನಿಗಳು ನನ್ನನ್ನು ಅತ್ಯಂತ ಆನಂದಪರವಶತೆಯೊಂದಿಗೆ ಪೂಜಿಸುತ್ತಾರೆ.” ಕೃಷ್ಣನನ್ನು ಪೂಜಿಸುವವರು ಯಾರು? ಅದಕ್ಕೆ ಉತ್ತರ ಇಲ್ಲಿದೆ: ಬುಧಾಃ ಅಂದರೆ, ಬುದ್ಧಿವಂತನು. ಬುದ್ಧ ಅಂದರೆ “ಜ್ಞಾನಿ.” ಬುಧ ಎಂದರೆ “ಜ್ಞಾನಿಯಾದವನು ಅಥವಾ ಜ್ಞಾನ ತುಂಬಿರುವಂಥವನು.” ಅನೇಕ ಜನರು ಜ್ಞಾನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಇಲ್ಲಿ, ಸಿಯೆಟಲ್ನಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯವಿದೆ. ಅಲ್ಲಿ ಅನೇಕ ವಿದ್ಯಾರ್ಥಿಗಳು ಜ್ಞಾನ ಪಡೆಯುವುದಕ್ಕಾಗಿ ಬಂದಿದ್ದಾರೆ. ಆದರೆ ಜ್ಞಾನದ ಪರಿಪೂರ್ಣತೆಯನ್ನು ಅಥವಾ ಜ್ಞಾನದ ಅತ್ಯುನ್ನತ ಹಂತವನ್ನು ಸಾಧಿಸಿರುವವನನ್ನು ಬುಧ ಎನ್ನುತ್ತಾರೆ. ಅಂದರೆ, ಕೃಷ್ಣನನ್ನು ಪೂಜಿಸುವವನು ದೊಡ್ಡ ಪಂಡಿತ ಮತ್ತು ಅತಿ ಜ್ಞಾನಿಯಾಗಿರುತ್ತಾನೆ. ಅಲ್ಲದೇ ಅವನು ಆಧ್ಯಾತ್ಮಿಕ ಆನಂದಪರವಶತೆಯನ್ನೂ ಅನುಭವಿಸುತ್ತಾನೆ (ಭಾವ ಸಮನ್ವಿತಾಃ). ಕೃಷ್ಣ ಹೇಳುತ್ತಾನೆ, “ಅಂತಹ ವ್ಯಕ್ತಿಯು ನನ್ನನ್ನು ಪೂಜಿಸುತ್ತಾನೆ ಅಥವಾ ಪ್ರೇಮಿಸುತ್ತಾನೆ.” ಏಕೆ? ಏಕೆಂದರೆ ಕೃಷ್ಣನೇ ಎಲ್ಲದರ ಮೂಲ ಎಂಬುದನ್ನು ಅವನು ಅರಿತಿರುತ್ತಾನೆ (ಅಹಂ ಸರ್ವಸ್ಯ ಪ್ರಭವೋ). ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕೃಷ್ಣನು ಪರಮ ಪರಿಪೂರ್ಣ ಸತ್ಯ ಅಂದರೆ ಎಲ್ಲದರ ಅಂತಿಮ ಮೂಲ ಎಂಬುದನ್ನು ಅರಿತಿರುತ್ತಾನೆ.

ವೇದಾಂತ ಸೂತ್ರವು ಹೇಳುವಂತೆ, ಮಾನವ ಜನ್ಮವಿರುವುದೇ ಈ ಪರಮ ಸತ್ಯ ಅಥವಾ ಬ್ರಹ್ಮನ್ ಅನ್ನು ಹುಡುಕುವುದಕ್ಕಾಗಿ (ಅಥಾತೋ ಬ್ರಹ್ಮ ಜಿಜ್ಞಾಸಾ). ಇತರ ಜನ್ಮಗಳಲ್ಲಿ ನಾವು ಅತ್ಯಧಿಕ ಪ್ರಮಾಣದಲ್ಲಿ ಇಂದ್ರಿಯ ಸುಖವನ್ನನುಭವಿಸಿದ್ದೇವೆ. ಡಾರ್ವಿನ್ ಸಿದ್ಧಾಂತದ ಪ್ರಕಾರ, ಮನುಷ್ಯರು ಮಂಗಗಳಿಂದ ವಿಕಸನಗೊಂಡರು. ಭಾರತದಲ್ಲಿ ಅನೇಕ ಮಂಗಗಳಿದ್ದು, ಅವುಗಳಲ್ಲಿ ಪ್ರತಿಯೊಂದು ಮಂಗವೂ ಕನಿಷ್ಠ ಇಪ್ಪತ್ತೈದು ಗೆಳತಿಯರನ್ನು ಹೊಂದಿರುವುದನ್ನು ನಾವು ಕಂಡಿದ್ದೇವೆ. ಮಾನವ ಜೀವಿಗಳಾಗಿ ಇನ್ನೆಷ್ಟು ಲೈಂಗಿಕ ಸುಖ ಅನುಭವಿಸುವವರಿದ್ದೇವೆ? ಹಂದಿಗಳು ಸಹ ಡಜನ್ಗಳಷ್ಟು ಲೈಂಗಿಕ ಜೊತೆಗಾರರನ್ನು ಹೊಂದಿರುತ್ತವೆ. ಅವುಗಳಲ್ಲಿ ತಾಯಿ, ಸಹೋದರಿ, ಮಗಳು ಎಂಬ ವ್ಯತ್ಯಾಸವೇ ಇರುವುದಿಲ್ಲ. ಅವು ಅವ್ಯವಸ್ಥಿತವಾಗಿ ಲೈಂಗಿಕ ಸುಖ ಅನುಭವಿಸುತ್ತವೆ ಅಷ್ಟೆ. ಈಗ, ಮಾನವರು ಕೂಡ ಮಂಗಗಳಂತೆ, ಹಂದಿಗಳಂತೆ, ನಾಯಿಗಳು ಮತ್ತು ಬೆಕ್ಕುಗಳಂತೆ ಜೀವಿಸಬೇಕೆಂದು ಹೇಳುತ್ತೀರಾ? ಇಂದ್ರಿಯ ಸುಖವನ್ನು ಅನುಭವಿಸುವುದೇ ಮಾನವ ಜೀವನದ ಪರಿಪೂರ್ಣತೆಯೇ?
ಅಲ್ಲ. ನಾವು ಬೇರೆ ಬೇರೆ ರೂಪಗಳಲ್ಲಿ ಇಂದ್ರಿಯ ಸುಖವನ್ನು ಆನಂದಿಸಿದ್ದೇವೆ. ವೇದಾಂತ ಸೂತ್ರ ಹೇಳುವಂತೆ, ಇನ್ನು ಮುಂದೆ ನಾವು ಪರಮ ಸತ್ಯನಾದ ಬ್ರಹ್ಮನ್ ಬಗ್ಗೆ ಪ್ರಶ್ನಿಸಬೇಕು. ಹಾಗಾದರೆ, ಏನದು ಬ್ರಹ್ಮನ್ ಅಂದರೆ? ಬ್ರಹ್ಮನ್ ಅಂದರೆ ಆತ್ಮ. ಕೃಷ್ಣನು ಪರಬ್ರಹ್ಮ ಅಂದರೆ ಪರಮಾತ್ಮ (ಈಶ್ವರಃ ಪರಮಃ ಕೃಷ್ಣಃ). ಉದಾಹರಣೆ ಕೊಡುವುದಾದರೆ, ನೀವೆಲ್ಲರೂ ಅಮೆರಿಕನ್ನರು, ಆದರೆ ಅಧ್ಯಕ್ಷರಾದ ಜಾನ್ಸನ್ ಅವರು ಸರ್ವೋಚ್ಚ ಅಮೆರಿಕನ್. ಅದೇ ರೀತಿ, ಕಠೋಪನಿಷದ್ (2.2.13) ಹೇಳುವಂತೆ, ನಿತ್ಯೋ ನಿತ್ಯಾನಾಂ ಚೇತನಃ ಚೇತನಾನಾಮ್ : “ಸಕಲ ಜೀವಾತ್ಮಗಳಲ್ಲಿ ಒಬ್ಬನು ಮಾತ್ರ ಪರಮೋಚ್ಚನಾಗಿರುವನು.” ಅವನೇ ಭಗವಂತ; ಅತ್ಯಂತ ಪರಿಪೂರ್ಣ ಪುರುಷ ಮತ್ತು ಜೀವಂತ ಶಕ್ತಿ.
ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್ : “ಏಕೈಕ ಜೀವಂತ ಶಕ್ತಿಯಾಗಿರುವ ಪರಮಾತ್ಮನು ಸಕಲ ಜೀವಿಗಳ ಎಲ್ಲ ಬೇಡಿಕೆಗಳನ್ನೂ ಪೂರೈಸುತ್ತಿರುವನು.” ಉದಾಹರಣೆಗಾಗಿ, ಒಂದು ಕುಟುಂಬದಲ್ಲಿ ತಂದೆಯು ಹೆಂಡತಿ, ಮಕ್ಕಳು, ಮನೆಕೆಲಸದವರು ಮತ್ತಿತರರ ಆವಶ್ಯಕತೆಗಳನ್ನು ಪೂರೈಸುತ್ತಾನೆ. ಅದೇ ರೀತಿ, ಸರ್ಕಾರವು ತನ್ನ ಎಲ್ಲ ನಾಗರಿಕರ ಆವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ. ಆದರೆ ನೀವು ಒಂದು ಸಣ್ಣ ಕುಟುಂಬದ ತಂದೆಯಾಗಿರಲಿ ಅಥವಾ ದೊಡ್ಡ ಸರ್ಕಾರದ ಮುಖ್ಯಸ್ಥರಾಗಿರಲಿ, ನಿಮ್ಮ ಪೂರೈಕೆಯ ಸಾಮರ್ಥ್ಯ ಮಿತಿಯುಳ್ಳದ್ದು. ನೀವು ನಿಮ್ಮ ಕುಟುಂಬ, ಸಮಾಜ, ದೇಶದ ನಾಗರಿಕರಿಗೆ ಆಹಾರ ಪೂರೈಸಬಹುದು. ಆದರೆ ಪ್ರತಿಯೊಬ್ಬರಿಗೂ ಆಹಾರವನ್ನು ಪೂರೈಸುವುದು ಅಸಾಧ್ಯ. ಅಸಂಖ್ಯಾತ ಜೀವಿಗಳು ಅಸ್ತಿತ್ವದಲ್ಲಿವೆ. ಅವುಗಳಿಗೆಲ್ಲ ಆಹಾರ ಪೂರೈಸುತ್ತಿರುವವರು ಯಾರು? ನಿಮ್ಮ ಕೋಣೆಯಲ್ಲಿರುವ ರಂಧ್ರದೊಳಗಿನ ಸಾವಿರಾರು ಇರುವೆಗಳಿಗೆ ಆಹಾರ ಪೂರೈಸುತ್ತಿರುವವರು ಯಾರು? ನಾವು ಗ್ರೀನ್ ಲೇಕ್ಗೆ ಹೋದಾಗ ಅಲ್ಲಿ ನೂರಾರು ಬಾತುಕೋಳಿಗಳನ್ನು ನೋಡುತ್ತೇವೆ. ಅವುಗಳನ್ನು ನೋಡಿಕೊಳ್ಳುತ್ತಿರುವವರು ಯಾರು? ಕೇವಲ ಈ ಗ್ರಹದಲ್ಲಿರುವ ಜೀವಿಗಳು ಮಾತ್ರವಲ್ಲದೇ ಕೋಟ್ಯಂತರ ಬ್ರಹ್ಮಾಂಡಗಳಲ್ಲಿರುವ ಕೋಟ್ಯಂತರ ಗ್ರಹಗಳಲ್ಲಿರುವ ಜೀವಿಗಳಿಗೂ ಆಹಾರ ಪೂರೈಕೆಯಾಗುತ್ತಿದೆ. ಯಾರು ಅವುಗಳಿಗೆಲ್ಲ ಆಹಾರ ನೀಡುತ್ತಿರುವವರು? ಭಗವಂತ. ಎಲ್ಲರೂ ಅವನ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ಎಲ್ಲರ ಬೇಡಿಕೆಗಳನ್ನೂ ಅವನೇ ಈಡೇರಿಸುತ್ತಿದ್ದಾನೆ.
ಭಗವಂತನ ವ್ಯವಸ್ಥೆಯು ಪರಿಪೂರ್ಣವಾಗಿದೆ (ಓಂ ಪೂರ್ಣಮ್ ಅದಃ ಪೂರ್ಣಮ್ ಇದಮ್). ಉದಾಹರಣೆಗಾಗಿ, ಈ ಭೂಮಿಯ ಮೇಲೆ ಎಲ್ಲವೂ ಪರಿಪೂರ್ಣವಾಗಿದೆ. ಸಮುದ್ರ ಮತ್ತು ಮಹಾಸಾಗರಗಳಲ್ಲಿರುವ ನೀರನ್ನು ಸೂರ್ಯನ ಬೆಳಕು ಮೇಲಕ್ಕೆ ತೆಗೆದುಕೊಂಡು ಹೋಗಿ, ಅದನ್ನು ಮೋಡಗಳಾಗಿ ಪರಿವರ್ತಿಸುತ್ತದೆ. ಅನಂತರ ಅದನ್ನು ಎಲ್ಲೆಡೆ ವಿತರಿಸಲಾಗಿ, ತರಕಾರಿಗಳು ಮತ್ತು ಆಹಾರ ಧಾನ್ಯಗಳು ಬೆಳೆಯುತ್ತವೆ. ಅದೊಂದು ಪರಿಪೂರ್ಣ ವ್ಯವಸ್ಥೆಯಾಗಿದೆ.

ಈಗ, ಒಬ್ಬ ಬುದ್ಧಿವಂತ ವ್ಯಕ್ತಿಯು ಕೇಳುತ್ತಾನೆ, “ಈ ಪರಿಪೂರ್ಣ ವ್ಯವಸ್ಥೆಯನ್ನು ಮಾಡಿದವರಾರು?” ಸರಿಯಾದ ಸಮಯಕ್ಕೆ ಸೂರ್ಯ-ಚಂದ್ರರು ಉದಯಿಸುತ್ತಿದ್ದಾರೆ ಮತ್ತು ಋತುಗಳು ಬದಲಾಗುತ್ತಿವೆ. ಅಂದಮೇಲೆ, ಭಗವಂತನಿಲ್ಲ ಎಂದು ಹೇಗೆ ತಾನೇ ಹೇಳಲು ಸಾಧ್ಯ? ವೇದಗಳಲ್ಲಿ ಮತ್ತು ಪವಿತ್ರ ಗ್ರಂಥಗಳಲ್ಲಿ ಭಗವಂತನನ್ನು ಕುರಿತು ಸಾಕ್ಷಿಗಳಿವೆಯಲ್ಲದೇ, ಭಗವಂತನ ಪ್ರತಿನಿಧಿಗಳಲ್ಲೊಬ್ಬರಾದ ಏಸುಕ್ರಿಸ್ತರು ಸಹ ಭಗವಂತನ ಬಗ್ಗೆ ಮಾಹಿತಿ ನೀಡಿದ್ದಾರೆ. ಏಸುವನ್ನು ಶಿಲುಬೆಗೇರಿಸಿದರೂ ಅವರು ಭಗವಂತನ ಬಗ್ಗೆ ತಮ್ಮ ನಿಲುವನ್ನು ಬದಲಿಸಲಿಲ್ಲ. ಹಾಗಾಗಿ ನಮ್ಮಲ್ಲಿ ಭಗವಂತನ ಬಗ್ಗೆ ನಿಸರ್ಗ, ಪವಿತ್ರಗ್ರಂಥಗಳು ಮತ್ತು ಮಹಾನ್ ವ್ಯಕ್ತಿಗಳಿಂದ ದೊರೆತಿರುವ ಸಾಕ್ಷಿಗಳಿವೆ. ಇಷ್ಟೆಲ್ಲ ಸಾಕ್ಷಿಗಳಿದ್ದರೂ, “ಭಗವಂತ ಅಸುನೀಗಿದ್ದಾನೆ, ಭಗವಂತನೆಂಬುವನೇ ಇಲ್ಲ” ಎಂದು ಹೇಳುವಂಥವನು ಅದೆಂತಹ ಮನುಷ್ಯನವನು? ಅವನೊಬ್ಬ ರಾಕ್ಷಸ. ಅವನು ಎಂದಿಗೂ ಭಗವಂತನನ್ನು ಅರಿತುಕೊಳ್ಳುವುದಿಲ್ಲ.
ಈ ರಾಕ್ಷಸನಿಗೆ ತದ್ವಿರುದ್ಧವಾದವನೆಂದರೆ ಬುಧ ಅಂದರೆ ಜ್ಞಾನಿ. ಜ್ಞಾನಿಯಾದವರಿಗೆ, ಬುದ್ಧಿವಂತರಿಗೆ ಕೃಷ್ಣನೇ ಸರ್ವಕಾರಣಗಳ ಕಾರಣನೆಂದು ಗೊತ್ತಿರುತ್ತದೆ (ಸರ್ವ ಕಾರಣ ಕಾರಣಮ್). ಕಾರಣ ಮತ್ತು ಪರಿಣಾಮ ನಿಯಮದ ಪ್ರಕಾರ, ಎಲ್ಲದಕ್ಕೂ ಕಾರಣವುಂಟು. ಅಂದರೆ, ನೀವು ಮೂಲ ಕಾರಣ ಅಂದರೆ ಎಲ್ಲ ಕಾರಣಗಳ ಕಾರಣವನ್ನು ಹುಡುಕುತ್ತ ಹೋದರೆ ನಿಮಗೆ ಸಿಗುವುದು ಕೃಷ್ಣ. ವೇದಾಂತ ಸೂತ್ರ ಹೇಳುವಂತೆ, ಜನ್ಮಾದಿ ಅಸ್ಯ ಯತಃ – “ಯಾರಿಂದ ಎಲ್ಲವೂ ಹೊರಹೊಮ್ಮಿರುವುದೋ ಅವನೇ ಪರಮಾತ್ಮನು.”
ಎಲ್ಲವೂ ತಂತಾನೇ ಹುಟ್ಟಿದೆಯೆಂದು ನೀವು ಹೇಳಲಾಗದು. ಅದು ಮೂರ್ಖತನ. ಆಧುನಿಕ ವಿಜ್ಞಾನಿಗಳು ಹೇಳುತ್ತಾರೆ, “ಪ್ರಾರಂಭದಲ್ಲಿ, ಬಹುಶಃ ದೊಡ್ಡ ರಾಶಿಯೊಂದಿತ್ತು. ಆಮೇಲೆ ಮಹಾಸ್ಫೋಟ, ಅನಂತರ ಸೃಷ್ಟಿ.” ಆದರೆ ಇದೆಲ್ಲ “ಬಹುಶಃ”. ಈ ರೀತಿಯ ಜ್ಞಾನವು ನಿಷ್ಪ್ರಯೋಜಕ. ವಿಜ್ಞಾನಿಗಳಿಗೆ ನನ್ನ ಪ್ರಶ್ನೆ, “ಆ ದೊಡ್ಡ ರಾಶಿಯ ಉದ್ಭವಕ್ಕೆ ಕಾರಣರಾರು?” ಅವರಿಂದ ಉತ್ತರ ನೀಡುವುದು ಅಸಾಧ್ಯ.
ಹಾಗಾಗಿ, ನಾವು ನಿಜವಾದ ಕಾರಣ, ಅಂದರೆ ಭಗವಂತನನ್ನು ಹುಡುಕಬೇಕು. ಒಂದು ವೇಳೆ ಅವನನ್ನು ಹುಡುಕಲು ವಿಫಲರಾದರೆ, ಭಗವತ್ಸಾಕ್ಷಾತ್ಕಾರ ಮಾಡಿರುವ ಮಹಾತ್ಮರನ್ನು ಅನುಸರಿಸಬೇಕು (ಮಹಾಜನೋ ಯೇನ ಗತಃ ಸ ಪಂಥಾಃ). ಅಧಿಕೃತ ವ್ಯಕ್ತಿಗಳನ್ನು ನಾವು ಅನುಸರಿಸಬೇಕು. ನೀವು ಕ್ರಿಶ್ಚಿಯನ್ ಆಗಿದ್ದಲ್ಲಿ ಏಸುವನ್ನು ಅನುಸರಿಸಿ. ಅವರ ಪ್ರಕಾರ ಭಗವಂತನಿದ್ದಾನೆ. ಅಂದರೆ ನೀವೂ ಕೂಡ ಭಗವಂತನಿದ್ದಾನೆಂದು ಒಪ್ಪಿಕೊಳ್ಳಬೇಕು. ಈ ಬ್ರಹ್ಮಾಂಡವನ್ನು ಭಗವಂತನು ಸೃಷ್ಟಿಸಿದನೆಂದು ಅವರು ಹೇಳುತ್ತಾರೆ. ಇದನ್ನು ನೀವು ಒಪ್ಪಿಕೊಳ್ಳಬೇಕು.
ಅದೇ ರೀತಿ, ಭಗವಂತನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ಅಹಂ ಸರ್ವಸ್ಯ ಪ್ರಭವಃ – “ನಾನೇ ಎಲ್ಲದರ ಮೂಲ.” ಈ ಹೇಳಿಕೆಯನ್ನು ನಾವು ಒಪ್ಪಿಕೊಳ್ಳಬೇಕು. ನಾವು ಅಧಿಕೃತ ಗ್ರಂಥಗಳನ್ನು ಅಭ್ಯಸಿಸಬೇಕು ಮತ್ತು ಮಹಾತ್ಮರ ಮಾತುಗಳನ್ನು ಒಪ್ಪಿಕೊಂಡು ಅವರ ಹೆಜ್ಜೆಗುರುತುಗಳನ್ನು ಅನುಸರಿಸಬೇಕು. ಆಗ ಕೃಷ್ಣಪ್ರಜ್ಞೆ ಅಥವಾ ಭಗವತ್ಸಾಕ್ಷಾತ್ಕಾರ ತುಂಬ ಸುಲಭವಾಗುತ್ತದೆ. ಭಗವಂತನನ್ನು ಅರಿತುಕೊಳ್ಳುವ ನಮ್ಮ ಮಾರ್ಗದಲ್ಲಿ ಯಾವ ಅಡೆತಡೆಗಳೂ ಬರುವುದಿಲ್ಲ.
ಭಗವದ್ಗೀತೆ, ಶ್ರೀಮದ್ಭಾಗವತ, ಬೈಬಲ್, ಕುರಾನ್ – ಹೀಗೆ ಅನೇಕ ಪವಿತ್ರಗ್ರಂಥಗಳಿವೆ. ಪ್ರತಿಯೊಂದು ಮಾನವ ಸಮಾಜದಲ್ಲಿ ಸ್ಥಿತಿಗತಿಗಳು ಮತ್ತು ಜನರಿಗೆ ಅನುಗುಣವಾಗಿ ಸ್ವಲ್ಪ ಮಟ್ಟಿಗೆ ಭಗವಂತನ ಪರಿಕಲ್ಪನೆ ಇರುತ್ತದೆ. ನೀವು ಪವಿತ್ರಗ್ರಂಥಗಳ ಮೂಲಕ ಭಗವಂತನನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು. ಆದ್ದರಿಂದ ವೇದಾಂತ ಸೂತ್ರ ಹೇಳುತ್ತದೆ, ಅಥಾತೋ ಬ್ರಹ್ಮ ಜಿಜ್ಞಾಸಾ – “ಶೋಧನೆಯ ಮೂಲಕ ಭಗವಂತನನ್ನು ಅರಿತುಕೊಳ್ಳಲು ಪ್ರಯತ್ನಿಸು.” ಈ ರೀತಿಯ ಶೋಧನೆ ಬಹು ಮುಖ್ಯವಾದುದು. ನಮ್ಮ ಕೃಷ್ಣಪ್ರಜ್ಞೆಯಲ್ಲಿ ಹೇಳುವಂತೆ, ಆದೌ ಗುರ್ವಾಶ್ರಯಂ ಸದ್ ಧರ್ಮ ಪೃಚ್ಛಾ – “ಒಬ್ಬ ವ್ಯಕ್ತಿಯು ಅಧಿಕೃತ ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸಬೇಕು ಮತ್ತು ಭಗವಂತನ ಬಗ್ಗೆ ಅವರನ್ನು ಕೇಳಿ ತಿಳಿದುಕೊಳ್ಳಬೇಕು.”

ನಾವು ಬುದ್ಧಿವಂತರಾಗಿರಬೇಕು ಮತ್ತು ಪರಮ ಸತ್ಯವಾದ ಬ್ರಹ್ಮನ್ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು. ಮಾನವ ಜೀವನವಿರುವುದೇ ಈ ಶೋಧನೆಗಾಗಿ. ಶೋಧಿಸಿ, ಶೋಧಿಸಿ, ಶೋಧಿಸಿ ಅನಂತರ ದೊರೆಯುವ ಫಲಿತಾಂಶವೇನು? ಅದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ, ಬಹುನಾಂ ಜನ್ಮನಾಮ್ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ – “ಶೋಧನೆಯ ಅನೇಕ ಜನ್ಮಗಳ ಅನಂತರ, ಒಬ್ಬ ವ್ಯಕ್ತಿಯು ನಿಜವಾಗಿಯೂ ಬುದ್ಧಿವಂತನಾದಾಗ, ಜ್ಞಾನಿಯಾದಾಗ, ಅವನು ನನಗೆ ಅಂದರೆ ಕೃಷ್ಣನಿಗೆ ಶರಣಾಗತನಾಗುತ್ತಾನೆ.” ಏಕೆ? ವಾಸುದೇವಃ ಸರ್ವಮ್ ಇತಿ – ಆ ವ್ಯಕ್ತಿಯು ವಾಸುದೇವ ಅಂದರೆ ಕೃಷ್ಣನೇ ಸರ್ವಕಾರಣಗಳ ಕಾರಣನೆಂದು ಅರಿತುಕೊಳ್ಳುತ್ತಾನೆ.
ಹಾಗಾಗಿ, ನಾವು ಜ್ಞಾನಿಗಳಾಗಬಯಸಿದ್ದಲ್ಲಿ, ನಾವು ಪರಮ ಸತ್ಯನನ್ನು ಕುರಿತು ಶೋಧಿಸುವ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬಹುದು. ಇನ್ನೊಂದೆಡೆ, ನಾವು ನಿಜವಾಗಿಯೂ ಬುದ್ಧಿವಂತರಾಗಿದ್ದಲ್ಲಿ, ತತ್ಕ್ಷಣ ಕೃಷ್ಣಪ್ರಜ್ಞೆಯನ್ನು ಅನುಸರಿಸುತ್ತೇವೆ. ಕೃಷ್ಣಪ್ರಜ್ಞೆಯನ್ನು ನಮಗೆ ಕರುಣಿಸಿದವರೆಂದರೆ, ಅತ್ಯಂತ ಉದಾರ ಹೃದಯದ ಅವತಾರವಾದ ಶ್ರೀ ಚೈತನ್ಯ ಮಹಾಪ್ರಭುಗಳು. ಜೀವನದ ಅತ್ಯುನ್ನತ ಗುರಿಯಾದ ಕೃಷ್ಣಪ್ರೇಮವನ್ನು ಅವರು ನಮಗೆ ಕರುಣಿಸುತ್ತಿದ್ದಾರೆ. ಆದ್ದರಿಂದಲೇ ಶ್ರೀಲ ರೂಪ ಗೋಸ್ವಾಮಿಗಳು ಚೈತನ್ಯರಿಗೆ ಹೀಗೆ ಪ್ರಾರ್ಥನೆ ಸಲ್ಲಿಸುತ್ತಾರೆ, ನಮೋ ಮಹಾ ವದಾನ್ಯಾಯ ಕೃಷ್ಣಪ್ರೇಮ ಪ್ರದಾಯ ತೇ – “ಓ ನನ್ನ ಚೈತನ್ಯ ಮಹಾಪ್ರಭುವೇ, ನೀನು ಕೃಷ್ಣಪ್ರೇಮವನ್ನು ನೇರವಾಗಿ ನೀಡುತ್ತಿರುವುದರಿಂದ, ಎಲ್ಲ ಅವತಾರಗಳಲ್ಲೇ ನೀನು ಅತ್ಯಂತ ಉದಾರ ಹೃದಯವುಳ್ಳ ಅವತಾರವಾಗಿರುವೆ.” ಸಾಮಾನ್ಯವಾಗಿ, ಅನೇಕ ಜನ್ಮಗಳ ಅನಂತರವೂ ಕೃಷ್ಣಪ್ರೇಮವನ್ನು ಗಳಿಸಲು ಸಾಧ್ಯವಿಲ್ಲ. ಆದರೆ ಚೈತನ್ಯರು ಅದನ್ನು ಅಗ್ಗವಾಗಿ ನೀಡಿದರು. “ತೆಗೆದುಕೊ ಅದನ್ನು” ಎಂದರು. ಕೃಷ್ಣಪ್ರೇಮವನ್ನು ಅಷ್ಟೊಂದು ಅಗ್ಗವಾಗಿ ನೀಡುವುದು ಬೇರೆ ಯಾರಿಂದಲೂ ಸಾಧ್ಯವಿಲ್ಲವೆಂದೂ, ಆದ್ದರಿಂದ ಚೈತನ್ಯರೇ ಕೃಷ್ಣನೆಂದೂ ಶ್ರೀಲ ರೂಪ ಗೋಸ್ವಾಮಿಯವರಿಗೆ ಗೊತ್ತಿತ್ತು.

ನಿಜವಾಗಿಯೂ ಶ್ರೀ ಚೈತನ್ಯರೇ ಕೃಷ್ಣನಾಗಿದ್ದಾರೆ. ಐದು ಸಾವಿರ ವರ್ಷಗಳ ಹಿಂದೆ, ಸ್ವತಃ ಕೃಷ್ಣನೇ ಬಂದು ಭಗವದ್ಗೀತೆಯನ್ನು ಬೋಧಿಸಿದನು. ಅವನು ಹೇಳಿದ್ದಿಷ್ಟೆ, ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ – “ಎಲ್ಲವನ್ನೂ ತ್ಯಜಿಸಿ ನನಗೆ ಶರಣಾಗತನಾಗು.” ಆದರೆ ಜನರು ಅವನನ್ನು ತಪ್ಪಾಗಿ ತಿಳಿದುಕೊಂಡರು. ಆದ್ದರಿಂದ, ಐದು ಶತಮಾನಗಳ ಹಿಂದೆ, ಕೃಷ್ಣನು ಭಕ್ತನ ರೂಪದಲ್ಲಿ, ಅಂದರೆ ಶ್ರೀ ಚೈತನ್ಯರ ರೂಪದಲ್ಲಿ ಆವಿರ್ಭವಿಸಿದನು ಮತ್ತು ಎಲ್ಲರಿಗೂ ಕೃಷ್ಣಪ್ರೇಮವನ್ನು ಹಂಚಿದನು.
ಆದ ಕಾರಣ, ಪ್ರತಿಯೊಬ್ಬರೂ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇವೆ. ನಿಮಗೆ “ನನಗೆ ಹೆಚ್ಚಿನದೇನೂ ಬೇಡ. ನಾನು ಸಂತೃಪ್ತನಾಗಿರುವೆ – ಪೂರ್ಣ ಸಂತೃಪ್ತನಾಗಿರುವೆ” ಎಂದೆನಿಸದಿರದು.
ತುಂಬ ಧನ್ಯವಾದಗಳು ತಮಗೆ. ಪ್ರಶ್ನೆಗಳೇನಾದರೂ ಇವೆಯೇ?
ಭಕ್ತ: ನಾವು ಕೃಷ್ಣನಿಗೆ ಪರಿಪೂರ್ಣ ಸೇವೆಯನ್ನು ಹೇಗೆ ಸಲ್ಲಿಸಬಹುದು?
ಶ್ರೀಲ ಪ್ರಭುಪಾದ: ಅವನನ್ನು ಸೇವಿಸಬೇಕೆಂಬ ಹಂಬಲವನ್ನು ಹೆಚ್ಚಿಸಿಕೊಳ್ಳುವ ಮೂಲಕ. ಕೃಷ್ಣನನ್ನು ಸೇವಿಸಬೇಕೆಂದು ನಿಮ್ಮಲ್ಲಿ ಹಂಬಲವಿದ್ದರೆ, ಅದೇ ನಿಜವಾದ ಸಂಪತ್ತು. ಎಷ್ಟೇ ಆದರೂ ಕೃಷ್ಣ ಅಮಿತ. ಹಾಗಾದರೆ, ನಾವು ಅವನಿಗೆ ಎಂತಹ ಸೇವೆಯನ್ನು ಸಲ್ಲಿಸಬಹುದು? ಈಗಾಗಲೇ ಅವನು ಅನೇಕ ಸೇವಕರನ್ನು ಹೊಂದಿದ್ದಾನೆ. ಹಾಗಾದರೆ ಅವನು ನನ್ನಿಂದ ಮತ್ತು ನಿಮ್ಮಿಂದ ಎಂತಹ ಸೇವೆಯನ್ನು ಬಯಸುತ್ತಾನೆ? ಅವನು ತನ್ನಷ್ಟಕ್ಕೇ ತಾನೇ ಪರಿಪೂರ್ಣನಾಗಿರುವುದರಿಂದ, ಅವನಿಗೆ ಯಾರ ಸೇವೆಯ ಅಗತ್ಯವೂ ಇಲ್ಲ. ಆದರೆ, ನೀವು ಅವನನ್ನು ಸೇವಿಸಬಯಸಿದರೆ, ಅವನು ನಿಮ್ಮ ಸೇವೆಯನ್ನು ತಿರಸ್ಕರಿಸುವುದಿಲ್ಲ. ಅದು ಅವನ ಕರುಣೆ, ಅವನ ಹೃದಯ ವೈಶಾಲ್ಯ.

ಹೀಗೆ ನೀವು ಅವನನ್ನು ಸೇವಿಸುವ ಹಂಬಲವನ್ನು ಹೆಚ್ಚಿಸಿಕೊಂಡಂತೆಲ್ಲ, ಭಕ್ತಿ ಸೇವೆಯಲ್ಲಿ ಅತಿ ಹೆಚ್ಚು ಪರಿಪೂರ್ಣತೆಯನ್ನು ಹೊಂದುತ್ತೀರಿ. ಕೃಷ್ಣನು ಅಮಿತನಾಗಿರುವುದರಿಂದ ಅವನನ್ನು ಸೇವಿಸುವ ನಿಮ್ಮ ಹಂಬಲವೂ ಅಮಿತವಾಗುವುದು. ಆಗ ಅಲ್ಲೊಂದು ಸ್ಪರ್ಧೆ ಏರ್ಪಡುತ್ತದೆ: ನೀವು ಎಷ್ಟು ಹೆಚ್ಚು ಕೃಷ್ಣನ ಸೇವೆ ಮಾಡುತ್ತೀರೋ, ಅವನು ನಿಮ್ಮ ಸೇವೆಯನ್ನು ಅಷ್ಟು ಹೆಚ್ಚು ಸ್ವೀಕರಿಸುವನು ಮತ್ತು ಅವನನ್ನು ಇನ್ನೂ ಉತ್ತಮವಾಗಿ ಸೇವಿಸಲು ನಿಮಗೆ ಅಧಿಕ ಜ್ಞಾನವನ್ನು ನೀಡುತ್ತಾನೆ. ಆಧ್ಯಾತ್ಮಿಕ ಜಗತ್ತು ಅಮಿತವಾಗಿದೆ. ಅಲ್ಲಿ ಸೇವೆಗಾಗಲೀ ಸೇವೆಯನ್ನು ಸ್ವೀಕರಿಸುವುದಕ್ಕಾಗಲೀ ಕೊನೆಯೆಂಬುದೇ ಇಲ್ಲ.
ನಮ್ಮ ಪೂರ್ವ ಆಧ್ಯಾತ್ಮಿಕ ಗುರುಗಳಾದ ಶ್ರೀಲ ರೂಪ ಗೋಸ್ವಾಮಿಯವರು ಕೊಟ್ಟ ನಿದರ್ಶನವೊಂದನ್ನು ನಾನು ನಿಮ್ಮ ಮುಂದಿಡುತ್ತೇನೆ. ಅವರು ಹೇಳುವಂತೆ, ಕೃಷ್ಣ ಭಕ್ತಿ ರಸ ಭಾವಿತಾ ಮತಿಃ ಕ್ರೀಯತಾಂ ಯದಿ ಕುತೋ ಅಪಿ ಲಭ್ಯತೇ – “ನನ್ನ ಆತ್ಮೀಯ ಮಹನೀಯರೆ, ಕೃಷ್ಣನನ್ನು ಪ್ರೇಮಿಸುವ ಭಾವವನ್ನು – ಕೃಷ್ಣನನ್ನು ಅತಿ ಹೆಚ್ಚು ಪ್ರೇಮಿಸುವ ಹಂಬಲ – ಕೊಂಡುಕೊಳ್ಳಲು ನಿಮ್ಮಿಂದ ಸಾಧ್ಯವಿದ್ದರೆ ದಯವಿಟ್ಟು ತಡಮಾಡದೇ ಕೊಂಡುಕೊಳ್ಳಿ.”
ಆಗ ನೀವು ಹೇಳಬಹುದು, “ಸರಿ. ನಾನು ಕೊಂಡುಕೊಳ್ಳುವೆ. ಆದರೆ ಅದರ ಬೆಲೆ ಎಷ್ಟು?”
ರೂಪ ಗೋಸ್ವಾಮಿಗಳು ಹೇಳುತ್ತಾರೆ, “ಲೌಲ್ಯಮ್, ಅಂದರೆ ನಿಮ್ಮ ಹಂಬಲ, ಅಷ್ಟೆ ಸಾಕು.”
ಅನೇಕ ಜನ್ಮಗಳವರೆಗೆ ಪುಣ್ಯದ ಚಟುವಟಿಕೆಗಳನ್ನು ಮಾಡಿದರೂ ಕೃಷ್ಣನನ್ನು ಪ್ರೇಮಿಸುವ ಈ ಹಂಬಲವು ದೊರೆಯುವುದಿಲ್ಲ. ನಿಮ್ಮಲ್ಲಿ ಕೃಷ್ಣನನ್ನು ಸೇವಿಸಬೇಕೆಂಬ ಹಂಬಲವು ಚಿಟಿಕೆಯಷ್ಟಿದ್ದರೂ ಸಾಕು, ನೀವು ಅತ್ಯಂತ ಭಾಗ್ಯಶಾಲಿಗಳೆಂದು ತಿಳಿದುಕೊಳ್ಳಬೇಕು. ಕೃಷ್ಣನು ತನ್ನನ್ನು ಇನ್ನೂ ಅಧಿಕವಾಗಿ ಸೇವಿಸಲು ಬೇಕಾದ ಜ್ಞಾನವನ್ನು ನಿಮಗೆ ಕರುಣಿಸುವನು. ಕೃಷ್ಣನಿಗೆ ಎಲ್ಲವೂ ತಿಳಿಯುತ್ತದೆ. ಅವನು ನನ್ನೊಳಗೆ, ನಿಮ್ಮೊಳಗೆ ಇರುವನು. ಅವನು ಭಗವದ್ಗೀತೆಯಲ್ಲಿ (10.10) ಹೇಳುತ್ತಾನೆ,
ತೇಷಾಂ ಸತತ ಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ ।
ದದಾಮಿ ಬುದ್ಧಿ ಯೋಗಂ ತಂ ಯೇನ ಮಾಮ್ ಉಪಯಾಂತಿ ತೇ ॥

“ಯಾರು ಪ್ರೇಮ ಮತ್ತು ಒಲವಿನಿಂದ ಯಾವ ಕಾಪಟ್ಯವೂ ಇಲ್ಲದೆ ನನ್ನ ಸೇವೆಯಲ್ಲಿ ತೊಡಗಿದ್ದಾರೋ, ಅಂಥವರು ನನ್ನೆಡೆಗೆ ಮರಳಿ ಬರಲು ಬೇಕಾಗಿರುವಂತಹ ಜ್ಞಾನವನ್ನು ನಾನು ಕರುಣಿಸುತ್ತೇನೆ.” ನೀವು ಕೃಷ್ಣನೆಡೆಗೆ ಮರಳುವ ಮೂಲಕ ಗಳಿಸುವ ಲಾಭವಾದರೂ ಏನು? ಯದ್ ಗತ್ವಾ ನ ನಿವರ್ತಂತೇ – ಒಮ್ಮೆ ನೀವು ಕೃಷ್ಣನ ಧಾಮಕ್ಕೆ ತೆರಳಿದರೆ ಸಾಕು, ಮತ್ತೆ ಈ ದುಃಖಾರ್ತ ಲೌಕಿಕ ಜಗತ್ತಿಗೆ ಮರಳುವುದಿಲ್ಲ. ದಯವಿಟ್ಟು, `ಭಗವದ್ಗೀತೆ ಯಥಾರೂಪ’ ವನ್ನು ಓದಿ. ಮಾನವ ಜೀವಿಗಳು ಅಭ್ಯಸಿಸಬೇಕಾದ ಏಕೈಕ ವಿಷಯವಾದ ಭಗವತ್ವಿಜ್ಞಾನದ ಪರಿಪೂರ್ಣ ಜ್ಞಾನವು ನಿಮಗೆ ದೊರೆಯುವುದು.
ಆದ್ದರಿಂದ, ಕೃಷ್ಣನನ್ನು ಸೇವಿಸುವ ಅತ್ಯಧಿಕ ಹಂಬಲವೇ ಕೃಷ್ಣಪ್ರಜ್ಞೆಯ ಪರಿಪೂರ್ಣತೆಯಾಗಿದೆ. ಆ ಹಂಬಲವನ್ನು ಹೆಚ್ಚಿಸಿಕೊಳ್ಳಿ, ಕೃಷ್ಣ ನಿಮಗೆ ಜ್ಞಾನೋದಯ ಉಂಟುಮಾಡುವನು. ಕೃಷ್ಣಪ್ರಜ್ಞೆಯಲ್ಲಿ ನೀವು ಅಭಿವೃದ್ಧಿ ಸಾಧಿಸುವಂತೆ ಅವನು ನಿಮಗೆ ಸಹಾಯ ಮಾಡುತ್ತಾನೆ. ಆಗ ನಿಮ್ಮ ಜೀವನವು ಸಫಲಗೊಳ್ಳುವುದು.






Leave a Reply