ಚಳಿಗಾಲದಲ್ಲಿ ತಾಜಾ ತರಕಾರಿಗಳು ಸುಲಭವಾಗಿ ದೊರೆಯುವುದರಿಂದ ಅವುಗಳನ್ನು ಬಳಸಿ ಖಾದ್ಯ ತಯಾರಿಸಿದರೆ ರುಚಿ ಹೆಚ್ಚು. ಇದರಿಂದ ಶಾಲೆಗೆ ಹೋಗುವ ಮಕ್ಕಳ ಹಾಗೂ ಕಚೇರಿಗೆ ತೆರಳುವವರ ಊಟದ ಡಬ್ಬಿಗೆ ವೈವಿಧ್ಯಮಯವಾದ ಪಲ್ಯ / ಕರ್ರಿಗಳನ್ನು ತಯಾರಿಸಬಹುದು. ಈ ಬಾರಿ ಚಪಾತಿ, ಪೂರಿ, ರೋಟಿಗಳಿಗಾಗಿ ವಿವಿಧ ಸಬ್ಜಿಗಳನ್ನು ಮಾಡುವ ಸುಲಭ ವಿಧಾನಗಳನ್ನು ನೀಡಲಾಗಿದೆ. ಇವುಗಳನ್ನು ಮಾಡಿ ಶ್ರೀ ಕೃಷ್ಣನಿಗೆ ಅರ್ಪಿಸಿ ಸವಿದು ನೋಡಿ.
ಪನೀರ್ ಬಟಾಣಿ

ಬೇಕಾಗುವ ಸಾಮಾನು
ಪನೀರ್ – 1/4 ಕೆಜಿ
ಹಸಿರು ಬಟಾಣಿ (ನೀರಿನಲ್ಲಿ ನೆನೆಸಿಡಿ) – 1 ಕಪ್
ಗೋಡಂಬಿ ಬೀಜ (ನೀರಿನಲ್ಲಿ ನೆನೆಸಿಡಿ) ಅಥವಾ ಎಳ್ಳು – 10-15/2-3 ಟೇಬಲ್ ಚಮಚ
ಟೊಮ್ಯಾಟೋ – 2
ಕೊತ್ತಂಬರಿ ಪುಡಿ – 1 ಟೇಬಲ್ ಚಮಚ
ಅರಿಶಿನ ಪುಡಿ – 1 ಟೇಬಲ್ ಚಮಚ
ಅಚ್ಚ ಮೆಣಸಿನ ಪುಡಿ – 2 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಗರಂ ಮಸಾಲ ಪುಡಿ – 1 ಟೇಬಲ್ ಚಮಚ
ಜೀರಿಗೆ – 1 ಟೇಬಲ್ ಚಮಚ
ಮಸಾಲೆ ಎಲೆ – 1
ಒಣಗಿದ ಮೆಂತೆ ಸೊಪ್ಪು – 2 ಟೇಬಲ್ ಚಮಚ
ಕರಿಯಲು ಎಣ್ಣೆ / ಬೆಣ್ಣೆ – 2 ಟೇಬಲ್ ಚಮಚ
ಮಾಡುವ ವಿಧಾನ : ಪ್ಯಾನ್‌ನಲ್ಲಿ 1 ಟೇಬಲ್ ಚಮಚ ಎಣ್ಣೆ ಅಥವಾ ಬೆಣ್ಣೆಯನ್ನು ಕಾಯಿಸಿರಿ. ಕತ್ತರಿಸಿದ ಪನೀರ್ ತುಣುಕುಗಳನ್ನು ಅದರಲ್ಲಿ ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ಅನಂತರ ಅದನ್ನು ತಟ್ಟೆಗೆ ಹಾಕಿಡಿ. ಟೊಮ್ಯಾಟೋವನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಗೋಡಂಬಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ಪ್ಯಾನ್‌ಗೆ ಉಳಿದ ಎಣ್ಣೆ ಅಥವಾ ಬೆಣ್ಣೆಯನ್ನು ಹಾಕಿ ಕಾಯಿಸಿರಿ. ಅದಕ್ಕೆ ಜೀರಿಗೆ ಮತ್ತು ಮಸಾಲ ಎಲೆಯನ್ನು ಹಾಕಿ. ಜೀರಿಗೆ ಸಿಡಿದ ಮೇಲೆ ಟೊಮ್ಯಾಟೋ ಮಿಶ್ರಣ ಹಾಕಿ ಕಲಸಿ. ನಾಲ್ಕು ನಿಮಿಷದ ನಂತರ ಅದಕ್ಕೆ ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಅಚ್ಚ ಮೆಣಸಿನ ಪುಡಿ ಹಾಗೂ ಬಟಾಣಿಯನ್ನು ಸೇರಿಸಿ. ಐದು ನಿಮಿಷ ಬೇಯಲು ಬಿಡಿ. ಗೋಡಂಬಿ ಅಥವಾ ಎಳ್ಳಿನ ಪೇಸ್ಟ್ ಅನ್ನು ಅದಕ್ಕೆ ಹಾಕಿ. ಈ ಮಿಶ್ರಣ ಐದಾರು ನಿಮಿಷ ಬೇಯಲಿ. ಒಣಗಿದ ಮೆಂತೆ ಸೊಪ್ಪನ್ನು ಕೈಗಳಿಂದಲೇ ಪುಡಿ ಮಾಡಿ ಈ ಮಿಶ್ರಣದ ಮೇಲೆ ಉದುರಿಸಿ. ಹುರಿದಿಟ್ಟುಕೊಂಡಿರುವ ಪನ್ನೀರ್ ಚೂರುಗಳಿಗೆ ಒಂದು ಕಪ್ ನೀರು ಸೇರಿಸಿ ಮಿಶ್ರಣಕ್ಕೆ ಸೇರಿಸಿ, ಕಲಸಿ. ಸಣ್ಣ ಉರಿಯಲ್ಲಿ 5 ನಿಮಿಷ ಬೇಯಲಿ. ಈ ಗ್ರೇವಿಗೆ ಗರಂ ಮಸಾಲ ಪುಡಿ ಸಿಂಪಡಿಸಿ. ಉರಿ ನಂದಿಸಿ. ರೋಟಿ, ಚಪಾತಿ, ಪೂರಿ ಅಲ್ಲದೆ ಪುಲಾವ್, ಘೀ ರೈಸ್ ಮುಂತಾದುವುಗಳ ಜೊತೆ ಸವಿಯಿರಿ.
ಮಲಾಯ್ ಪಾಲಕ್

ಬೇಕಾಗುವ ಸಾಮಾನು
ಪಾಲಕ್ – 4 ಕಟ್ಟು
ಸ್ವೀಟ್ ಕಾರ್ನ್ (ಬೇಯಿಸಿರುವುದು) – 1 ಕಪ್
ಕೆನೆ (ಕ್ರೀಮ್) – ಅರ್ಧ ಕಪ್
ಶುಂಠಿ ಪೇಸ್ಟ್ – 1 ಟೀ ಚಮಚ
ಹಸಿ ಮೆಣಸಿನ ಕಾಯಿ – 3
ಒಣಗಿದ ಮೆಂತೆ – 1 ಟೇಬಲ್ ಚಮಚ
ಮಾವಿನ ಕಾಯಿ ಒಣ ಪುಡಿ – 1 ಟೀ ಚಮಚ
ಜೀರಿಗೆ ಪುಡಿ – 1 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ / ಎಣ್ಣೆ – 2 ಟೀ ಚಮಚ
ಮಾಡುವ ವಿಧಾನ : ಪಾಲಕ್ ಸೊಪ್ಪನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ. ಅನಂತರ ತಣ್ಣೀರಿನಲ್ಲಿ ತೊಳೆಯಿರಿ. ಅದನ್ನು ಸಣ್ಣಗೆ ಹಚ್ಚಿಕೊಂಡು ರುಬ್ಬಿಕೊಳ್ಳಿ. ಪ್ಯಾನ್‌ಗೆ ತುಪ್ಪ ಅಥವಾ ಎಣ್ಣೆ ಹಾಕಿ ಕಾಯಿಸಿರಿ. ಜೀರಿಗೆ ಹುರಿಯಿರಿ. ಅನಂತರ ಶುಂಠಿ ಪೇಸ್ಟ್, ಚೂರು ಮಾಡಿದ ಹಸಿ ಮೆಣಸಿನ ಕಾಯಿ ಹಾಕಿ ಬೆರೆಸಿ. ಈ ಮಿಶ್ರಣಕ್ಕೆ ಬೇಯಿಸಿದ ಕಾರ್ನ್, ರುಬ್ಬಿದ ಪಾಲಕ್, ಉಪ್ಪು ಮತ್ತು ಮಾವಿನ ಕಾಯಿ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಗ್ರೇವಿ ಹದಕ್ಕೆ ಬರುವವರೆಗೆ ಬೇಯಿಸಿ. ಅನಂತರ ಕೆನೆಯನ್ನು ಹಾಕಿ ಕಲಸಿ. ಉರಿ ಸಣ್ಣದಿರಲಿ. ನಿಮ್ಮ ಅಗತ್ಯಕ್ಕೆ ತಕ್ಕ ರೀತಿಯಲ್ಲಿ ಗ್ರೇವಿಯ ಹದ ಗಟ್ಟಿ ಅಥವಾ ತೆಳ್ಳಗಿರಲಿ. ಉರಿಯನ್ನು ಆರಿಸಿ ಈ ಮಿಶ್ರಣಕ್ಕೆ ಮೆಂತೆ ಪುಡಿ ಉದುರಿಸಿ ಮತ್ತು ನಿಂಬೆ ಹಣ್ಣು ಹಿಂಡಿ. ಚಪಾತಿ, ಪೂರಿ, ರೊಟ್ಟಿ ಮುಂತಾದುವುಗಳ ಜೊತೆ ಸವಿಯಿರಿ.
ಆಲೂ, ಹುರುಳಿಕಾಯಿ ಪಲ್ಯ

ಬೇಕಾಗುವ ಸಾಮಾನು
ಕತ್ತರಿಸಿ ಬೇಯಿಸಿದ ಆಲೂಗಡ್ಡೆ – 3
ಚೂರು ಮಾಡಿದ ಹಸಿಹುರುಳಿಕಾಯಿ (ಹಸಿರು ಬೀನ್ಸ್) – 10
ಹಸಿ ಮೆಣಸಿನ ಕಾಯಿ – 2
ಜೀರಿಗೆ – ಅರ್ಧ ಟೀ ಚಮಚ
ಖಾರದ ಪುಡಿ – ಅರ್ಧ ಟೀ ಚಮಚ
ಅರಿಶಿಣ ಪುಡಿ – ಕಾಲು ಟೀ ಚಮಚ
ಗರಂ ಮಸಾಲ ಪುಡಿ – ಅರ್ಧ ಟೀ ಚಮಚ
ಕೊತ್ತಂಬರಿ ಪುಡಿ – ಅರ್ಧ ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯವಾದಷ್ಟು
ಮಾಡುವ ವಿಧಾನ : ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾಯಿಸಿ. ಜೀರಿಗೆ ಹಾಕಿ ಅದು ಸಿಡಿದ ಮೇಲೆ ಚೂರು ಮಾಡಿದ ಹಸಿಮೆಣಸಿನ ಕಾಯಿಯನ್ನು ಹಾಕಿ. ಅದಕ್ಕೆ ಆಲೂಗಡ್ಡೆ ಮತ್ತು ಹುರುಳಿಕಾಯಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಎರಡು ನಿಮಿಷ ಬೇಯಲಿ. ಅನಂತರ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ ಮತ್ತು ಕೊತ್ತಂಬರಿ ಪುಡಿಯನ್ನು ಹಾಕಿ. ಇದು ಚೆನ್ನಾಗಿ ಮಿಶ್ರಣಗೊಳ್ಳುವಂತೆ ಕಲಸಿ. ಪ್ಯಾನ್ ಅನ್ನು ಮುಚ್ಚಿ ಬೇಯಲು ಬಿಡಿ. ಮಧ್ಯಮ ಗಾತ್ರದ ಉರಿಯಲ್ಲಿ 10-15 ನಿಮಿಷ ಬೇಯಿಸಿ. ಅನಂತರ ಉರಿ ಆರಿಸಿ. ಇಷ್ಟವಿದ್ದವರು ನಿಂಬೆ ರಸವನ್ನು ಸೇರಿಸಿಕೊಳ್ಳಬಹುದು. ಚಪಾತಿ, ಪೂರಿಯಲ್ಲದೆ ಊಟದ ಜೊತೆಗೂ ಹೊಂದುವ ಪಲ್ಯವಿದು.
ಗೋಬಿ, ಬಟಾಣಿ ಕರ್ರಿ

ಬೇಕಾಗುವ ಸಾಮಾನು
ಗೋಬಿ / ಕಾಲಿ ಫ್ಲವರ್ ಎಸಳು – 1/4 ಕೆಜಿ
ಬಟಾಣಿ – 100 ಗ್ರಾಂ
ಹಸಿ ಮೆಣಸಿನ ಕಾಯಿ – 2-3
ಅರಿಶಿಣ – 1 ಟೇಬಲ್ ಸ್ಪೂನ್
ಮೆಣಸಿನ ಪುಡಿ – 1 ಟೇಬಲ್ ಸ್ಪೂನ್
ಕೊತ್ತಂಬರಿ ಪುಡಿ – ಅರ್ಧ ಟೇಬಲ್ ಸ್ಪೂನ್
ಗರಂ ಮಸಾಲ – 1 ಟೇಬಲ್ ಸ್ಪೂನ್
ಜೀರಿಗೆ – 1 ಟೇಬಲ್ ಸ್ಪೂನ್
ಮಸಾಲೆ ಎಲೆ – 1
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಟೇಬಲ್ ಸ್ಪೂನ್
ಮಾಡುವ ವಿಧಾನ : ಕಾಲಿ ಫ್ಲವರ್ ಎಸಳುಗಳನ್ನು ಬಿಸಿ ನೀರಿನಲ್ಲಿ 25 ನಿಮಿಷ ನೆನೆಸಿಡಿ. ಪ್ಯಾನ್‌ಗೆ ಎಣ್ಣೆ ಹಾಕಿ ಕಾಯಿಸಿರಿ. ಜೀರಿಗೆ ಮತ್ತು ಮಸಾಲೆ ಎಲೆಯನ್ನು ಹಾಕಿ. ಜೀರಿಗೆ ಸಿಡಿದ ಮೇಲೆ ಗೋಬಿಯನ್ನು ಹಾಕಿ ಚೆನ್ನಾಗಿ ಕಲಸಿ. ಸಣ್ಣ ಉರಿಯಲ್ಲಿ 3-4 ನಿಮಿಷ ಬೇಯಿಸಿ. ಅರಿಶಿನ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಗೋಬಿ ಚೆನ್ನಾಗಿ ಬೇಯುವವರೆಗೂ (ಕಂದು ಬಣ್ಣಕ್ಕೆ ಬರುವವರೆಗೂ) ಅಂದರೆ ಸುಮಾರು 10 ನಿಮಿಷ ಬೇಯಿಸಿ. ಬಟಾಣಿ, ಚೂರು ಮಾಡಿದ ಹಸಿರು ಮೆಣಸಿನ ಕಾಯಿಯನ್ನು ಹಾಕಿ ಕಲಸಿ. 3 ನಿಮಿಷ ಬೇಯಲಿ. ಅನಂತರ ಮೆಣಸಿನ ಪುಡಿ, ಗರಂ ಮಸಾಲ ಮತ್ತು ಕೊತ್ತಂಬರಿ ಪುಡಿಯನ್ನು ಹಾಕಿ ಕಲಸಿ. ಸ್ವಲ್ಪ ಸಮಯ ಬೆಂದ ಮೇಲೆ ಸ್ಟೌವ್ ಆರಿಸಿ. ಚಪಾತಿ, ಪೂರಿ, ನಾನ್, ರೋಟಿಯಲ್ಲದೆ ಅನ್ನದೊಂದಿಗೂ ಈ ಗೋಬಿ ಸಬ್ಜಿ ಬಲು ರುಚಿ.






Leave a Reply