
ಕುಂಬಳಕಾಯಿಯಲ್ಲಿ ಅಧಿಕ ಪ್ರಮಾಣದ ಪೌಷ್ಟಿಕಾಂಶಗಳಿದ್ದು ಅನೇಕ ರೀತಿಯಲ್ಲಿ ಆರೋಗ್ಯ ಲಾಭವನ್ನು ನೀಡುವುದು ನಿಜ. ಈ ಅತ್ಯುತ್ತಮ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲೇ ಬೇಕು ಏಕೆ? ಇಲ್ಲಿದೆ ಕೆಲವು ಕಾರಣಗಳು. ಕುಂಬಳಕಾಯಿಯಿಂದ ಮಾಡುವ ಕೆಲವು ತಿನಿಸುಗಳನ್ನು ಇಲ್ಲಿವೆ. ಈ ಎಲ್ಲವನ್ನು ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಸೇಬು, ಕುಂಬಳಕಾಯಿ ಸೂಪ್

ಸೇಬು ಮತ್ತು ಕುಂಬಳಕಾಯಿ ಮಿಶ್ರಣ ನಿಮಗೆ ಅಚ್ಚರಿ ಉಂಟು ಮಾಡಬಹುದು. ಆದರೆ ಇದು ಸ್ವಾದಿಷ್ಟವಾದ ಸೂಪ್. ಈ ಎರಡೂ ಪದಾರ್ಥಗಳಲ್ಲಿ ಅನೇಕ ಆರೋಗ್ಯ ಲಾಭಗಳಿವೆ. ಸೇಬು ನಿಮಗೆ ಕಾಂತಿಯುಕ್ತ ಚರ್ಮ ನೀಡುತ್ತದೆಯಲ್ಲವೆ? ಇದರೊಂದಿಗೆ ಸೇಬು ಕ್ಯಾನ್ಸರ್‌ನೊಂದಿಗೆ ಹೋರಾಡಲು ಸಹಾಯ ಮಾಡುತ್ತದೆ. ಸ್ಟ್ರೋಕ್ ಅಪಾಯವನ್ನು ತಪ್ಪಿಸುತ್ತದೆ, ತೂಕ ಇಳಿಸಲು ನೆರವಾಗುತ್ತದೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಇನ್ನು ಕುಂಬಳಕಾಯಿಯ ಲಾಭ ಕೂಡ ಅಪಾರ. ವಿಟಮಿನ್ `ಎ’ ಮತ್ತು ಆಂಟಿ ಆಕ್ಸಿಡೆಂಟ್ಸ್, ನಾರು ಸಂಪದ್ಭರಿತವಾಗಿರುವ ಕುಂಬಳವು ಕ್ಯಾಲೊರಿಯಲ್ಲಿ ನಗಣ್ಯವಾಗಿದೆ. ತೂಕ ಇಳಿಸಿಕೊಳ್ಳುವುದರಲ್ಲಿ ನಿರತರಾಗಿರುವವರಿಗೆ ಈ ಸೂಪ್ ವರದಾನ.
ಬೇಕಾಗುವ ಸಾಮಾನುಗಳು:
ಆಲಿವ್ ಆಯಿಲ್ – 1 ದೊಡ್ಡ ಚಮಚ
ಶುಂಠಿ ತುರಿ – 1 ಚಮಚ
ಕೆಂಪು ಮೆಣಸಿನಕಾಯಿ ಪುಡಿ – 1 1/2 ಚಮಚ
ಕತ್ತರಿಸಿದ ಸೇಬು – 1 ಕಪ್
ತುರಿದ ಕುಂಬಳಕಾಯಿ – 1 ಕಪ್
ಓಟ್ಸ್ – 2 ಚಮಚ
ಅರಿಶಿನ – 1 ಚಿಟಿಕೆ
ಧನಿಯಾ ಪುಡಿ – 1/2 ಚಮಚ
ಕರಿ ಮೆಣಸಿನ ಪುಡಿ – 1/4 ಚಮಚ
ಉಪ್ಪು – ರುಚಿಗೆ
ಅಲಂಕರಿಸಲು :
ಚೂರಾಗಿ ಹೆಚ್ಚಿದ ತರಕಾರಿಗಳು – 2 ಚಮಚ
ಚೀಸ್ – ಅಗತ್ಯವಿದ್ದಷ್ಟು
ಮಾಡುವ ವಿಧಾನ : ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿದ ಸೇಬು, ತುರಿದ ಕುಂಬಳಕಾಯಿ, ಶುಂಠಿ, ಆರಿಶಿನ, ಕೆಂಪು ಮೆಣಸಿನಕಾಯಿ ಪುಡಿ, ಧನಿಯಾಪುಡಿ, ಕರಿ ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿ. ಅನಂತರ ಇದನ್ನು ಚೆನ್ನಾಗಿ ಮಸೆದು ಸೋಸಿ ಅಗತ್ಯವಿದ್ದಷ್ಟು ನೀರನ್ನು ಸೇರಿಸಿ ಸ್ವಲ್ಪ ಸಮಯ ಕುದಿಯಲು ಬಿಡಿ. ಆಮೇಲೆ ಇದನ್ನು ಬಟ್ಟಲಿಗೆ ಹಾಕಿ ಮೇಲೆ ಕತ್ತರಿಸಿದ ತರಕಾರಿ, ಚೀಸ್, ಮತ್ತು ಸ್ವಲ್ಪ ಮೆಣಸಿನ ಪುಡಿ ಹಾಕಿ ಕುಡಿಯಲು ಕೊಡಿ.
ಜೋಳ ಮತ್ತು ಕದ್ದು ರೋಟಿ

ಜೋಳ ಮತ್ತು ಕುಂಬಳಕಾಯಿಯಿಂದ ಮಾಡಿದ ಈ ರೋಟಿಯು ನಿಮಗೆ ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ ಮತ್ತು ನಾರಿನಂಶವನ್ನು ಅಪಾರ ಪ್ರಮಾಣದಲ್ಲಿ ಒದಗಿಸುತ್ತದೆ.
ಬೇಕಾಗುವ ಪದಾರ್ಥಗಳು :
ಜೋಳದ ಹಿಟ್ಟು – 1/2 ಕಪ್
ಗೋಧಿ ಹಿಟ್ಟು – 1/2 ಕಪ್
ತುರಿದ ಕೆಂಪು ಕುಂಬಳಕಾಯಿ – 1 ಕಪ್
ತುರಿದ ಶುಂಠಿ – 1/2 ಚಮಚ
ಹಸಿ ಮೆಣಸಿನಕಾಯಿ ಪೇಸ್ಟ್ – 1 ಚಮಚ
ಅರಿಶಿನ – 1 ಚಿಟಿಕೆ
ಇಂಗು – ಸ್ವಲ್ಪ
ನಿಂಬೆರಸ – 1 ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ
ಎಣ್ಣೆ – ಅಗತ್ಯವಿದ್ದಷ್ಟು
ಮಾಡುವ ವಿಧಾನ : ಮೊದಲು ಒಂದು ಬಟ್ಟಲಿಗೆ ಹಿಟ್ಟು, ಕುಂಬಳಕಾಯಿ ತುರಿ, ಶುಂಠಿ, ಮೆಣಸಿನ ಕಾಯಿ ಪೇಸ್ಟ್, ಅರಿಶಿನ, ಇಂಗು, ನಿಂಬೆರಸ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯವಿದ್ದಷ್ಟು ನೀರನ್ನು ಸೇರಿಸಿ ಹಿಟ್ಟು ಕಲಸಿ. ಇದನ್ನು 15 ನಿಮಿಷ ಮುಚ್ಚಿಡಿ. ಅನಂತರ ಇದನ್ನು ಚಪಾತಿಯಂತೆ ಲಟ್ಟಿಸಿ. ನಾನ್‌ಸ್ಟಿಕ್ ತವಾದಲ್ಲಿ ಬೇಯಿಸಿ. ಸ್ವಲ್ಪವೆ ಎಣ್ಣೆಯನ್ನು ಬಳಸಿ ತಯಾರಿಸಿದರೆ ರುಚಿಯಾದ ಜೋಳದ ರೊಟ್ಟಿ ಸವಿಯಲು ಸಿದ್ಧ. ಇದನ್ನು ಮೊಸರಿನೊಂದಿಗೆ ಕೊಡಿ.
ಕುಂಬಳಕಾಯಿಯಿಂದ ಆಗುವ ಉಪಯೋಗಗಳು

1. ನಿಮ್ಮ ಜೀರ್ಣಕ್ರಿಯೆಗೆ ಸಹಕಾರಿ : ಒಂದು ಕಪ್ ಬೇಯಿಸಿದ ಕುಂಬಳಕಾಯಿಯು ನಿಮಗೆ ಪ್ರತಿ ದಿನ ಅಗತ್ಯವಾದ ನಾರಿನ ಅಂಶದಲ್ಲಿ ಶೇಕಡ 11 ರಷ್ಟನ್ನು ಪೂರೈಸುತ್ತದೆ. ಇದರಿಂದ ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಹಾಯ ಮಾಡುತ್ತದೆ.
2. ರಕ್ತದೊತ್ತಡ ನಿಯಂತ್ರಣ : ಕುಂಬಳಕಾಯಿಯನ್ನು ಆಹಾರದಲ್ಲಿ ಉಪಯೋಗಿಸುತ್ತಾ ಬಂದರೆ ರಕ್ತದೊತ್ತಡ ನಿಯಂತ್ರಣಗೊಳ್ಳುತ್ತದೆ.
3. ಹೊಟ್ಟೆ ಉರಿ ಶಮನ : ಕುಂಬಳಕಾಯಿ ಸುಲಭವಾಗಿ ಜೀರ್ಣವಾಗುವುದರಿಂದ ಪದೇ ಪದೇ ಬರುವ ಹೊಟ್ಟೆ ಉರಿಯನ್ನು ಶಮನ ಮಾಡುತ್ತದೆ.
4. ಬೊಜ್ಜು : ಕುಂಬಳಕಾಯಿಯನ್ನು ಸೇವಿಸುವುದರಿಂದ ವಿಶೇಷವಾಗಿ ಬೊಜ್ಜು ಬರದಂತೆ ತಡೆಯುವ ಅಪಾರ ಶಕ್ತಿ ಇದಕ್ಕಿದೆ.
5. ಲಿವರ್ ಸಮಸ್ಯೆಗಳು ದೂರ : ಲಿವರ್ ಸಮಸ್ಯೆಗಳಿಗೆ ಕುಂಬಳಕಾಯಿ ಸೇವನೆಯು ರಾಮಬಾಣವಾಗಿದೆ. ಇದನ್ನು ಕ್ರಮಬದ್ಧವಾಗಿ ಸೇವಿಸುತ್ತಾ ಬಂದರೆ ಲಿವರ್ ಸಮಸ್ಯೆಗಳು ದೂರವಾಗುತ್ತವೆ.
6. ಮೂತ್ರದ ತೊಂದರೆ : ಕುಂಬಳಕಾಯಿಯನ್ನು ಕ್ರಮಬದ್ಧವಾಗಿ ಸೇವಿಸುತ್ತಾ ಇದ್ದರೆ ಮೂತ್ರದಲ್ಲಿನ ಸಮಸ್ಯೆಗಳನ್ನು ನಿವಾರಿಸಬಹುದು.
7. ಮಧುಮೇಹಿಗಳಿಗೆ ಉತ್ತಮ ಆಹಾರ : ಮಧುಮೇಹದಿಂದ ಬಳಲುತ್ತಿರುವವರು ಪ್ರತಿದಿನ ಇದನ್ನು ಆಹಾರದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.






Leave a Reply