
ಬೆಂಡೆಕಾಯಿ ಅಡುಗೆ ಮನೆಯಲ್ಲಿನ ಮೆಚ್ಚಿನ ತರಕಾರಿಗಳಲ್ಲೊಂದು. ಹಲವಾರು ಬಗೆ ಬಗೆಯ ಖಾದ್ಯಗಳ ತಯಾರಿಕೆಯಲ್ಲಿ ಬೆಂಡೆಕಾಯಿ ಪ್ರಾಮುಖ್ಯ ಪಡೆದಿದೆ. ಬೆಂಡೆಕಾಯಿ ಪಲ್ಯವಂತೂ ಊಟದ ಜೊತೆಗೆ ಬಾಯಲ್ಲಿ ನೀರೂರಿಸುತ್ತದೆ. ಆದರೆ ಈ ತರಕಾರಿ ಕೇವಲ ಪಲ್ಯವಾಗಿ ಹೊಟ್ಟೆ ತುಂಬಿಸುವುದಕ್ಕೆ ಮಾತ್ರವಲ್ಲ ಅನೇಕ ಬಗೆಯ ಆರೋಗ್ಯಕರ ಗುಣಗಳು ಈ ಬೆಂಡೆಕಾಯಿಯಲ್ಲಿ ಅಡಗಿವೆ ಎನ್ನುವುದು ನಿಮಗೆ ತಿಳಿದಿರಲಿ. ಬೆಂಡೆಕಾಯಿಯಿಂದ ತಯಾರಿಸುವ ತಿನಿಸುಗಳನ್ನು ತಿಳಿಸಿದ್ದೇವೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಬೆಂಡೆಕಾಯಿ ಚೀಸ್ ಮಸಾಲ

ಬೇಕಾಗುವ ಪದಾರ್ಥಗಳು :
ಬೆಂಡಾಕಾಯಿ – 250 ಗ್ರಾಂ
ತೆಂಗಿನ ತುರಿ – 1/2 ಕಪ್
ಅಚ್ಚ ಖಾರದ ಪುಡಿ – 2 ಚಮಚ
ಗರಂ ಮಸಾಲ – 1 ಚಮಚ
ಚೀಸ್ – ಅಗತ್ಯವಿದ್ದಷ್ಟು
ಟೊಮೊಟೊ – 2
ಎಣ್ಣೆ – 4 ಚಮಚ
ಕರಿಬೇವು – 2 ಎಸಳು
ಅರಿಶಿನ – ಸ್ವಲ್ಪ
ಉಪ್ಪು – ರುಚಿಗೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ : ಮೊದಲು ಬೆಂಡೆಕಾಯಿಯನ್ನು ನೀರಿನಲ್ಲಿ ತೊಳೆದು ಚೆನ್ನಾಗಿ ಒರೆಸಿ. ಅನಂತರ ಇದನ್ನು ಉದ್ದವಾಗಿ ಹೆಚ್ಚಿಕೊಳ್ಳಿ. ಒಂದು ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಕಾದ ಅನಂತರ ಬೆಂಡೆಕಾಯಿ ಹೋಳುಗಳನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಅನಂತರ ಇದನ್ನು ತೆಗೆದು ಒಂದು ಕಡೆ ಇಟ್ಟುಕೊಳ್ಳಿ. ಟೊಮೊಟೊ ಬೇಯಿಸಿಕೊಂಡು ತಣ್ಣಗಾದ ಅನಂತರ ಮೇಲಿನ ಸಿಪ್ಪೆ ತೆಗೆದು ರುಬ್ಬಿಕೊಳ್ಳಿ. ಈಗ ಬೇರೆ ಬಾಣಲೆಗೆ ಎಣ್ಣೆ ಹಾಕಿ ಕಾದ ಅನಂತರ ಕರಿಬೇವು, ಅರಿಶಿನ, ಬೆಂಡೆಕಾಯಿ, ರುಬ್ಬಿದ ಟೊಮೊಟೊವನ್ನು ಸೇರಿಸಿ ಬೇಯಿಸಿ. ಇದಕ್ಕೆ ಗರಂ ಮಸಾಲ, ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ತುರಿದ ತೆಂಗಿನಕಾಯಿ ಸೇರಿಸಿ ಚೆನ್ನಾಗಿ ಕಲಸಿ. ಇಳಿಸುವ ಮೊದಲು ಚೀಸ್ ಸೇರಿಸಿ ಚೆನ್ನಾಗಿ ಕಲಸಿ. ಚೀಸ್ ಮಸಾಲ ಸವಿಯಲು ಸಿದ್ಧ. ಚೀಸ್ ಆರೋಗ್ಯಕ್ಕೆ ತುಂಬ ಒಳ್ಳೆಯದು. ಮಕ್ಕಳು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ರೋಟಿಯ ಜೊತೆ ತಿನ್ನಲು ತುಂಬ ರುಚಿಯಾಗಿ ಇರುವುದು.
ಬೆಂಡೆಕಾಯಿ ಗೊಜ್ಜು

ಬೇಕಾಗುವ ಪದಾರ್ಥಗಳು:
ಬೆಂಡೆಕಾಯಿ – 250 ಗ್ರಾಂ
ಹಸಿ ಮೆಣಸಿನಕಾಯಿ – 4
ಹಸಿ ತೆಂಗಿನ ತುರಿ – 1/2 ಕಪ್
ಹುಣಸೇಹಣ್ಣು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 3 ಚಮಚ
ಸಾಸಿವೆ – 1 ಚಮಚ
ಕರಿಬೇವು – 1 ಎಸಳು
ಉಪ್ಪು – ರುಚಿಗೆ
ಮಾಡುವ ವಿಧಾನ : ಬೆಂಡೆಕಾಯಿಯನ್ನು ತೊಳೆದು ಚೆನ್ನಾಗಿ ಒರೆಸಿ ಸ್ವಲ್ಪ ದೊಡ್ಡದಾಗಿ ಕತ್ತರಿಸಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಹುರಿದಿಡಿ. ತೆಂಗಿನ ತುರಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಸಾಸಿವೆ ಇವನ್ನು ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದನಂತರ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿ. ಅನಂತರ ಇದಕ್ಕೆ ರುಬ್ಬಿಕೊಂಡ ಮಸಾಲೆ, ಹುಣಿಸೆರಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಇದಕ್ಕೆ ಎಣ್ಣೆಯಲ್ಲಿ ಹುರಿದ ಬೆಂಡೆಕಾಯಿ ಹೋಳು ಅಗತ್ಯವಿದ್ದಷ್ಟು ನೀರು ಸೇರಿಸಿ ಬೇಯಿಸಿದರೆ ರುಚಿಯಾದ ಬೆಂಡೆಕಾಯಿ ಗೊಜ್ಜು ತಿನ್ನಲು ಸಿದ್ಧ.
ಬೆಂಡೆಕಾಯಿ ಮೊಸರು ಬಜ್ಜಿ

ಬೇಕಾಗುವ ಪದಾರ್ಥಗಳು:
ಬೆಂಡೆಕಾಯಿ – 250 ಗ್ರಾಂ
ಗಟ್ಟಿ ಮೊಸರು – 500 ಗ್ರಾಂ
ಕೊತ್ತಂಬರಿ ಬೀಜ – 1 ದೊಡ್ಡ ಚಮಚ
ಜೀರಿಗೆ – 1 ಚಮಚ
ಕೆಂಪು ಮೆಣಸಿನಕಾಯಿ – 3
ಸಾಸಿವೆ – 1 ಚಮಚ
ಕರಿಬೇವು – 2 ಎಸಳು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – ಕರಿಯಲು
ಉಪ್ಪು – ರುಚಿಗೆ
ಸಕ್ಕರೆ – 1 ಚಮಚ
ಮಾಡುವ ವಿಧಾನ : ಬೆಂಡೆಕಾಯಿಯನ್ನು ನೀರಿನಲ್ಲಿ ತೊಳೆದು ಚೆನ್ನಾಗಿ ಒರೆಸಿ. ಇದನ್ನು ಅರ್ಧ ಅಂಗುಲದ ಚೂರುಗಳಾಗಿ ಕತ್ತರಿಸಿ. ಇದಕ್ಕೆ ಉಪ್ಪು ಹಚ್ಚಿ 20 ನಿಮಿಷ ಇಡಿ. ಅನಂತರ ಇದನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಕೊತ್ತಂಬರಿ ಬೀಜ, ಜೀರಿಗೆ, ಕೆಂಪು ಮೆಣಸಿನಕಾಯಿ, ಹುರಿದು ನುಣ್ಣಗೆ ಪುಡಿಮಾಡಿ. ಇದಕ್ಕೆ ಮೊಸರು, ಉಪ್ಪು, ಸಕ್ಕರೆ, ಎಣ್ಣೆಯಲ್ಲಿ ಕರಿದ ಬೆಂಡೆಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯದಾಗಿ ಇದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಸೇರಿಸಿದರೆ ಬೆಂಡೆಕಾಯಿ ಮೊಸರು ಬಜ್ಜಿ ಸವಿಯಲು ಸಿದ್ಧ. ಇದು ಅನ್ನದೊಂದಿಗೆ ತಿನ್ನಲು ತುಂಬ ರುಚಿಯಾಗಿರುತ್ತದೆ.
ಬೆಂಡೆಕಾಯಿಯಿಂದ ಆಗುವ ಉಪಯೋಗಗಳು :

1. ಬೆಂಡೆಕಾಯಿಯಲ್ಲಿ ನಾರಿನಂಶ ಅಧಿಕವಾಗಿದ್ದು ರಕ್ತ ಪರಿಚಲನೆಯನ್ನು ಸುಧಾರಿಸಲು ಇದು ನೆರವಾಗುತ್ತದೆ.
2. ಅರ್ಧ ಬೇಯಿಸಿದ ಬೆಂಡೆಕಾಯಿಗೆ ಸ್ವಲ್ಪ ಉಪ್ಪು ಹಾಗೂ ನಿಂಬೆರಸದೊಂದಿಗೆ ಸೇವಿಸಿದರೆ ದೇಹಕ್ಕೆ ಆರೋಗ್ಯಕರವಾದ ಪೋಷಕಾಂಶಗಳು ಸಮೃದ್ಧವಾಗಿ ದೊರೆಯುತ್ತವೆ.
3. ಮಧುಮೇಹಿಗಳು ಬೆಂಡೆಕಾಯಿಯನ್ನು ಭಯವಿಲ್ಲದೆ ಉಪಯೋಗಿಸಬಹುದು. ಎರಡು ತುಂಡು ಹಸಿ ಬೆಂಡೆಕಾಯಿಯನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ಹಾಕಿಟ್ಟು ಬೆಳಗ್ಗೆ ಎದ್ದು ಆ ನೀರು ಕುಡಿಯುತ್ತಿದ್ದರೆ ಎರಡು ವಾರಗಳಲ್ಲಿ ದಯಾಬಿಟಿಸ್ನಲ್ಲಿ ಉತ್ತಮ ಪರಿಣಾಮ ಕಾಣಬಹುದು.
4. ಬೆಂಡೆಕಾಯಿ ಕತ್ತರಿಸಿ ಬಿಸಿನೀರಿನಲ್ಲಿ ನೆನೆಸಿ. ಆ ನೀರಿಗೆ ನಿಂಬೆರಸ ಸೇರಿಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಮೆಯಾಗುತ್ತದೆ.
5. ಪಿತ್ತಜನಕಾಂಗದ ತೊಂದರೆಗಳಿಂದ ಬಳಲುವವರಿಗೆ ಬೆಂಡೆಕಾಯಿ ಉತ್ತಮ ಔಷಧ. ವಿಷಕಾರಿ ಅಂಶಗಳನ್ನು ಹೊರಹಾಕಿ ಕೊಲೆಸ್ಟ್ರಾಲ್ ನಿಯಂತ್ರಿಸಲು ಬೆಂಡೆಕಾಯಿ ಸಹಕರಿಸುತ್ತದೆ.
6. ಬೆಂಡೆಕಾಯಿಯ ನಾರಿನಂಶ ಜೀರ್ಣಾಂಗ ವ್ಯೂಹದ ತೊಂದರೆಗಳನ್ನು ನಿಯಂತ್ರಿಸಿ, ಕರುಳಿನ ಬೇನೆಯನ್ನು ತಡೆಗಟ್ಟುತ್ತದೆ. ಬೆಂಡೆಕಾಯಿಯಲ್ಲಿರುವ ಫೈಬರ್ಗಳು ಪ್ರೋ ಬ್ಯಾಕ್ಟಿರಿಯಾಗಳಾಗಿ ಕಾರ್ಯ ನಿರ್ವಹಿಸುತ್ತವೆ.






Leave a Reply