ಶಿಕ್ಷಣ ಮತ್ತು ಒಳ್ಳೆಯ ಜೀವನ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಹೊಸ ಭಕ್ತನ ತಾಯಿ ಮತ್ತು ಪಾದ್ರಿಯೊಬ್ಬರು – ಇವರ ನಡುವೆ ಲಂಡನ್ನಿನ ರಾಧಾ-ಕೃಷ್ಣ ಮಂದಿರದಲ್ಲಿ, ಜುಲೈ 1973ರಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ (ತಾಯಿಗೆ): ನಮ್ಮ ವೈದಿಕ ಗ್ರಹಿಕೆಯ ಪ್ರಕಾರ, ಪಾಪದ ಬದುಕಿನ ನಾಲ್ಕು ಸ್ತಂಭಗಳಿವೆ – ಅಕ್ರಮ ಲೈಂಗಿಕ ಸಂಪರ್ಕ, ಪ್ರಾಣಿಗಳ ಅನಗತ್ಯ ವಧೆ, ಮದ್ಯಪಾನ ಮತ್ತು ಜೂಜು. ಇವನ್ನೆಲ್ಲ ಬಿಟ್ಟು ಬಿಡಲು ನಮ್ಮ ಶಿಷ್ಯರಿಗೆ ತರಬೇತಿ ನೀಡಲಾಗಿದೆ. ನೀವೇ ನೋಡುವಂತೆ ನಿಮ್ಮ ಮಗ ಸಂತೋಷದಿಂದ ಇದ್ದಾನೆ. ಆ ಮೂಲಕ ಇಲ್ಲಿ ಶಿಷ್ಯರು ಪರಸ್ಪರ ಸಂತಸದಿಂದ ಇರುವುದು ನಿಮಗೆ ಅರಿವಾಗಿರಬೇಕು. ತರಕಾರಿಯಿಂದ ತಯಾರಿಸಿದ ಆಹಾರ, ಹಾಲು ಸೇವಿಸಿ ಮತ್ತು ಹರೇಕೃಷ್ಣ ಮಂತ್ರ ಪಠಿಸಿ ಅವರು ಸಂತೃಪ್ತರಾಗಿದ್ದಾರೆ.

ತಾಯಿ: ಹೌದು, ಅವನು ಸಂತೋಷವಾಗಿದ್ದಾನೆ. ಆದರೆ, ನಿಮಗೇ ತಿಳಿದಿರುವಂತೆ ಅವನು ಒಂದು ಸಂತಸ ವಾತಾವರಣದ ಕುಟುಂಬದಿಂದ ಬಂದಿದ್ದಾನೆ. ಆದುದರಿಂದ ಅವನು ಸಂತೋಷದಿಂದ ಇರಬೇಕಲ್ಲವೇ?

ಶ್ರೀಲ ಪ್ರಭುಪಾದ: ಹೌದು. ಆದರೆ ಅವನು ಈಗ ಇನ್ನೂ ಹೆಚ್ಚು ಖುಷಿಯಿಂದ ಇದ್ದಾನೆ. ಅವನು ಸಂತೋಷವಾಗಿದ್ದ, ಆದರೆ ಈಗ ಇನ್ನಷ್ಟು.

ತಾಯಿ: ಮೈಕೇಲ್‌ ಸಂತೋಷದಿಂದ ಇರುವುದು ನನಗೆ ಸಂತಸ ಉಂಟುಮಾಡಿದೆ. ಆದರೆ ಅವನು ತನ್ನ ವಿಶ್ವವಿದ್ಯಾಲಯ ಶಿಕ್ಷಣವನ್ನು ಮುಂದುವರಿಸಲಿಲ್ಲ ಎಂಬ ನಿರಾಶೆ ನನ್ನನ್ನು ಕಾಡುತ್ತಿದೆ.

ಶ್ರೀಲ ಪ್ರಭುಪಾದ: ನಮ್ಮ ಕೃಷ್ಣ ಪ್ರಜ್ಞೆಯು ಯಾರಿಗೂ ಶಿಕ್ಷಣ ವಂಚಿತರನ್ನಾಗಿ ಮಾಡುವುದಿಲ್ಲ. ನಾವು ಅವರಿಗೆ ಹೇಳುವುದೇನೆಂದರೆ, `ನಿಮ್ಮ ಶಿಕ್ಷಣ ಪೂರೈಸಲು ಮುಂದಾಗಿ. ಅದರೊಂದಿಗೆ ಭಗವಂತನನ್ನು ಅರಿಯುವ ಮತ್ತು ಪ್ರೀತಿಸುವ ಸಾಮರ್ಥ್ಯ ಪಡೆದುಕೊಳ್ಳಿ. ಆಗ ನಿಮ್ಮ ಬದುಕು ಪರಿಪೂರ್ಣ, ಪರಿಪಕ್ವವಾಗುತ್ತದೆ.’

ಅದೇನೇ ಇರಲಿ, ಶಿಕ್ಷಣದ  ಉದ್ದೇಶವಾದರೂ ಏನು? ನಮ್ಮ ವೈದಿಕ ಸಂಸ್ಕೃತಿ  ಬೋಧಿಸಿರುವುದನ್ನು ಗಮನಿಸಿ. ಅದರಂತೆ   ಶಿಕ್ಷಣದ  ಪರಾಕಾಷ್ಠೆಯು ಪರಮಾತ್ಮನನ್ನು ಅರ್ಥ ಮಾಡಿಕೊಳ್ಳುವುದೇ ಆಗಿದೆ. ಅದೇ  ನಿಜವಾದ   ಶಿಕ್ಷಣ. ತಿನ್ನುವುದು ಹೇಗೆ, ಚೆನ್ನಾಗಿ ಮಲಗುವುದು ಹೇಗೆ, ಲೈಂಗಿಕ ಪ್ರಕ್ರಿಯೆ ಹೇಗೆ, ಚೆನ್ನಾಗಿ ರಕ್ಷಿಸಿಕೊಳ್ಳುವುದು ಹೇಗೆ ಎಂಬದನ್ನು ಅರಿಯುವ ಶಿಕ್ಷಣ  ಪ್ರಾಣಿಗಳಲ್ಲಿಯೂ ಇದೆ. ಪ್ರಾಣಿಗಳಿಗೂ ಹೇಗೆ ತಿನ್ನುವುದು, ಮಲಗುವುದು, ಲೈಂಗಿಕ ಕ್ರಿಯೆ ಮತ್ತು ರಕ್ಷಿಸಿಕೊಳ್ಳುವುದು ಎಲ್ಲಾ ಗೊತ್ತು. ಮಾನವರಿಗೆ ಈ ನಾಲ್ಕು ಅಂಶಗಳ ಶಿಕ್ಷಣ ಸಾಲದು. ದೇವರನ್ನು ಹೇಗೆ ಪ್ರೀತಿಸಬೇಕು ಎಂಬುವುದನ್ನು ಮಾನವರು ಅರಿಯುವುದು ಅತ್ಯಾವಶ್ಯಕ. ಅದೇ ಪರಿಪೂರ್ಣತೆ.

ತಾಯಿ: ಹೌದು, ನಾನು ನಿಮ್ಮ ಮಾತನ್ನು ಸಂಪೂರ್ಣವಾಗಿ ಒಪ್ಪುವೆ. ಈ ಸಂದರ್ಭದಲ್ಲಿ ಒಂದು ವಿಷಯ ಹೇಳಬೇಕೆನಿಸಿದೆ. ಅನೇಕ ಪ್ರತಿಭಾವಂತ ವಿಜ್ಞಾನಿಗಳಿದ್ದಾರೆ, ಅವರು ಭಗವಂತನಿಗೂ ನಿಕಟ ಕೂಡ. ವಿಜ್ಞಾನಿಗಳಿಲ್ಲದೆ, ವೈದ್ಯರಿಲ್ಲದೆ ನಾವೇನಾಗಿಬಿಡುತ್ತಿದ್ದೆವೋ…

ಶ್ರೀಲ ಪ್ರಭುಪಾದ: ಆದರೆ ವೈದ್ಯ ವಿಜ್ಞಾನದಲ್ಲಿ ಸುಮ್ಮನೆ ಡಾಕ್ಟರ್‌ ಆಗಿಬಿಟ್ಟರೆ ವ್ಯಕ್ತಿಯನ್ನು ಕಾಪಾಡುವುದು ಸಾಧ್ಯವಿಲ್ಲ. ವಿಷಾದನೀಯವೆಂದರೆ, ಬಹುತೇಕ ವೈದ್ಯರು ಪುನರ್‌ ಜನ್ಮದಲ್ಲಿ ನಂಬಿಕೆ ಹೊಂದಿಲ್ಲ.

ತಾಯಿ: ಓ! ಅವರಿಗೆ ನಂಬಿಕೆ ಉಂಟು. ಪ್ರತಿ ಭಾನುವಾರ ಚರ್ಚ್‌ಗೆ ಬರುವ ಡಾಕ್ಟರ್‌ ಒಬ್ಬರು ನನಗೆ ಗೊತ್ತು. ಮೈಕೇಲ್‌ಗೂ ಗೊತ್ತು. ಅವರಿಗೆ ಮುಂದಿನ ಜನ್ಮದಲ್ಲಿ ನಂಬಿಕೆ ಇದೆ. ತುಂಬಾ ಒಳ್ಳೆಯ ಮನುಷ್ಯ.

ಶ್ರೀಲ ಪ್ರಭುಪಾದ: ಸಾಮಾನ್ಯವಾಗಿ ಪಾಶ್ಚಾತ್ಯರಲ್ಲಿ ಮುಂದಿನ ಜನ್ಮದ ಬಗ್ಗೆ ಗಂಭೀರವಾದ ನಂಬಿಕೆ ಇರುವುದಿಲ್ಲ. ಅವರಿಗೆ ನಿಜವಾಗಿಯೂ ನಂಬಿಕೆ ಇದ್ದರೆ, ಅವರು ಮುಂದಿನ ಬದುಕು ಯಾವ ರೀತಿಯದ್ದಾದೀತೆಂದು ಆತಂಕ ಪಟ್ಟುಕೊಳ್ಳುತ್ತಿದ್ದರು. ಬದುಕಿನ ಎಷ್ಟು ರೂಪಗಳಿವೆ, ಗೊತ್ತೇ?  84,00,000 ರೂಪಗಳಿವೆ. ಮರಗಳೂ ಬದುಕಿನ ಒಂದು ರೂಪ, ಬೆಕ್ಕು ಮತ್ತು ನಾಯಿಗಳೂ ಬದುಕಿನ ರೂಪಗಳೇ. ಮಲದಲ್ಲಿರುವ ಕೀಟ ಕೂಡ ಒಂದು – ಇವೆಲ್ಲ ಸೇರಿ 84,00,000 ವಿವಿಧ ಜಾತಿ, ವರ್ಗಗಳು. ನಮಗೆ ಮುಂದಿನ ಜನ್ಮ ಇರುತ್ತದೆ. ನಾವು ನಮ್ಮ ಈಗಿನ ದೇಹ ಬಿಟ್ಟು ಮತ್ತೊಂದು ದೇಹ ಪಡೆಯುತ್ತೇವೆ. ಆದುದರಿಂದ ಮುಂದಿನ ಜನ್ಮದಲ್ಲಿ ಯಾವ ರೀತಿಯ ದೇಹ ನಮಗೆ ಸಿಗುತ್ತದೆ ಎಂಬುವುದೇ ನಮಗಿರಬೇಕಾದ ಮುಖ್ಯ ಆತಂಕ. ಆದರೆ ತಮ್ಮ ಮುಂದಿನ ಬದುಕಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ, ಅವರಿಗೆ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳೆಲ್ಲಿವೆ?

ಪಾದ್ರಿ: ಕ್ಯಾಥೊಲಿಕ್‌ ವಿಶ್ವವಿದ್ಯಾಲಯಗಳು ಜಗತ್ತಿನಾದ್ಯಂತ ಅದೇ ಕೆಲಸ ಮಾಡುತ್ತಿವೆ. ನಮ್ಮ ಮುಖ್ಯ ಉದ್ದೇಶ ಸ್ಪಷ್ಟ. ನಮ್ಮ ಯುವಜನರಿಗೆ ಈ ಪ್ರಪಂಚದಲ್ಲಿ ಯಶಸ್ಸು ಪಡೆಯುವುದು ಹೇಗೆಂದು ಬೋಧಿಸುವುದು ನಮ್ಮ ಗುರಿ. ಅಷ್ಟೇ ಅಲ್ಲ, ಮುಂದಿನ ಬದುಕಿನಲ್ಲೂ ಯಶಸ್ಸು ಪಡೆಯುವುದು ಹೇಗೆ ಎಂಬ ಅರಿವು ಮೂಡಿಸುವುದೂ ನಮಗೆ ಮುಖ್ಯವಾದುದಾಗಿದೆ. ಅಂದರೆ ಶಾಶ್ವತವಾಗಿ ಪರಮಾತ್ಮನ ಜೊತೆಗೂಡುವುದು ಎಂದು ಅರ್ಥ. ಅದಕ್ಕೇ ಆದ್ಯತೆ.

ಶ್ರೀಲ ಪ್ರಭುಪಾದ: ಹಾಗಾದರೆ, ಮುಂದಿನ ಜನ್ಮದಲ್ಲಿ ಎಂತಹ ದೇಹ ನಮಗೆ ಸಿಗುತ್ತದೆ ಎಂಬುವುದನ್ನು ನಾವು ಅರಿಯುವುದು ಹೇಗೆ?

ಪಾದ್ರಿ: ನನಗೆ ಗೊತ್ತಿರುವುದೇನೆಂದರೆ, ದೇಹಾತ್ಮ ವಿನಾಶ ಎಂಬುದಿಲ್ಲ. ನಾನು ಭಗವಂತನನ್ನು ಸೇರಿಕೊಳ್ಳುತ್ತೇನೆ.

ತಾಯಿ: ನಾವು ಪರಮಾತ್ಮನನ್ನು ಸೇರುತ್ತೇವೆ, ಅಷ್ಟೆ. ನಾವು  ಸತ್ತಾಗ ದೇವರ ಬಳಿಗೆ ಹೋಗುತ್ತೇವೆ. ನಾವು ಏನೂ ಚಿಂತಿಸಬೇಕಾಗಿಲ್ಲ.

ಶ್ರೀಲ ಪ್ರಭುಪಾದ: ಆದರೆ ದೇವರ ಬಳಿಗೆ ಹೋಗಲು  ಅರ್ಹತೆ  ಏನು? ಎಲ್ಲರೂ ಪರಮಾತ್ಮನ ಬಳಿಗೆ ಹೋಗುತ್ತಾರಾ?

ತಾಯಿ ಮತ್ತು ಪಾದ್ರಿ: ಹೌದು, ಹೋಗುತ್ತಾರೆ.

ಪಾದ್ರಿ: ಅಂದರೆ ದೇವರಲ್ಲಿ ನಂಬಿಕೆ ಉಳ್ಳವರು. ಯಾರು ಒಳ್ಳೆಯ ಜೀವನ ನಡೆಸುತ್ತಿರುವರೋ ಅವರು. ಮತ್ತು ಈ ಜಗತ್ತಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವವರು. ಇವರೆಲ್ಲ ಭಗವಂತನ ಬಳಿಗೆ ಹೋಗುತ್ತಾರೆ.

ಶ್ರೀಲ ಪ್ರಭುಪಾದ: ಮುಂದಿನ ಪ್ರಶ್ನೆ, ಒಳ್ಳೆಯ ಬದುಕು ಎಂದರೆ ಏನು?

ಪಾದ್ರಿ: ದೈವಾಜ್ಞೆಯನ್ನು ಪಾಲಿಸುವುದು.

ಶ್ರೀಲ ಪ್ರಭುಪಾದ: ಒಂದು ಆಜ್ಞೆ ಇದೆಯಲ್ಲ – `ನೀವು ಕೊಲ್ಲಬಾರದು’ ಎಂದು. ಆದುದರಿಂದ ಯಾರಾದರೂ ಮುಗ್ಧ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದರೆ, ಅವರು ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಎನ್ನಬಹುದೇ?

ಪಾದ್ರಿ: ಫಾದರ್‌, ನಿಮ್ಮದು ಸ್ವಲ್ಪ ಅನ್ಯಾಯದ ಮಾತಾಯಿತು. ನೀವು ಕೊಲ್ಲಬಾರದು ಎಂದರೆ ಅರ್ಥವೇನು? `ನೀವು  ಅನಗತ್ಯವಾಗಿ ಜೀವ ತೆಗೆಯಬಾರದು’ ಎಂದೇ ಅರ್ಥೈಸಬೇಕು. ಮಾಂಸ ತಿನ್ನದೆ ನಾವು ಹೇಗೆ ಬದುಕುವುದು?

ಶ್ರೀಲ ಪ್ರಭುಪಾದ: ನಾವು ಹೇಗೆ ಬದುಕುತ್ತಿದ್ದೀವಿ? ತರಕಾರಿ, ಧಾನ್ಯ, ಹಣ್ಣು ಮತ್ತು ಹಾಲಿನ ಆಹಾರ ಪದಾರ್ಥಗಳನ್ನು ನಾವು ಸೇವಿಸುತ್ತಿದ್ದೇವೆ. ನಮಗೆ ಮಾಂಸದ ಅಗತ್ಯವೇ ಕಾಣದು.

ಪಾದ್ರಿ: ಈ ರೀತಿ ಯೋಚಿಸಿ ನೋಡಿ –  80 ಲಕ್ಷಕ್ಕೂ ಹೆಚ್ಚು ಜೀವಿಗಳ ರೂಪವಿದೆ ಎಂದು ನೀವು ಈಗಷ್ಟೇ ಹೇಳಿದಿರಿ. ಅಂದರೆ ಆಲೂಗಡ್ಡೆ, ಕೋಸು ಮತ್ತಿತರ ತರಕಾರಿಗಳಿಗೂ ಜೀವವಿದೆ ಎಂದು ಒಪ್ಪುವಿರಾ?

ಶ್ರೀಲ ಪ್ರಭುಪಾದ: ಹಾಂ, ಒಪ್ಪುವೆ.

ಪಾದ್ರಿ: ಹಾಗಾದರೆ ಈ ತರಕಾರಿಗಳನ್ನು ಬೇಯಿಸುವಾಗ ನೀವು ಅದರ ಜೀವವನ್ನು ತೆಗೆಯುತ್ತೀರ…

ಶ್ರೀಲ ಪ್ರಭುಪಾದ: ನಿಮ್ಮ ಸಿದ್ಧಾಂತ ಏನು? ಆಲೂಗಡ್ಡೆಯನ್ನು ಕೊಲ್ಲುವುದು ಮತ್ತು ಮುಗ್ಧ ಪ್ರಾಣಿಗಳ ಹತ್ಯೆ ಎರಡೂ ಒಂದೆಯೇ?

ಪಾದ್ರಿ: ನೀವು ಕೊಲ್ಲಬಾರದು ಎಂದು ನೀವು ಹೇಳಿದಿರಿ, ಆದರೆ ನೀವು ಆಲೂಗೆಡ್ಡೆಯನ್ನು ಕೊಲ್ಲುತ್ತೀರ.

ಶ್ರೀಲ ಪ್ರಭುಪಾದ: ಅನ್ಯ ಜೀವಿಗಳನ್ನು ತಿನ್ನುತ್ತಲೇ ನಾವೆಲ್ಲ ಬದುಕಬೇಕಾಗಿದೆ – ಜೀವೋ ಜೀವಸ್ಯ ಜೀವನಂ. ಆದರೆ ಆಲೂಗಡ್ಡೆ ತಿನ್ನುವುದು ಮತ್ತು ಯಾವುದೋ ಪ್ರಾಣಿಯನ್ನು ತಿನ್ನುವುದು ಒಂದೇ ಅಲ್ಲ. ಅದು ಒಂದೇ ತೆರನಾದುದು ಎನ್ನಿಸುತ್ತದಾ?

ಪಾದ್ರಿ: ಹೌದು.

ಶ್ರೀಲ ಪ್ರಭುಪಾದ: ಹಾಗಾದರೆ ನೀವು ಮಗುವೊಂದನ್ನು ಕೊಂದು ತಿನ್ನಬಾರದೇಕೆ?

ಪಾದ್ರಿ: ಒಂದು ಕ್ಷಣವೂ ಅಂತಹುದನ್ನು ಯೋಚಿಸಲಾರೆ.

ಶ್ರೀಲ ಪ್ರಭುಪಾದ: ಆದರೆ ಪ್ರಾಣಿಗಳು ಮತ್ತು ಮಕ್ಕಳು ಒಂದೇ ರೀತಿ.  ಇಬ್ಬರೂ ಮುಗ್ಧರು, ಅಸಹಾಯಕರು. ಮಗು ಮುಗ್ಧ ನಿಜ. ಆದರೆ ಹಾಗೆಂದು ನಾವು ಅದನ್ನು ಕೊಲ್ಲಬಹುದೆಂದು ಅರ್ಥವೇ? ಅದೇ ರೀತಿ,  ಪ್ರಾಣಿಗಳು ಮುಗ್ಧವಾಗಿರಬಹುದು ಮತ್ತು ಅವುಗಳಿಗೆ ಬುದ್ಧಿ ಇಲ್ಲದಿರಬಹುದು. ಹಾಗೆಂದು ನಾವು ಅವುಗಳನ್ನು ಅನಗತ್ಯವಾಗಿ ಕೊಲ್ಲಬಾರದು. ಒಬ್ಬ  ನ್ಯಾಯೋಚಿತ ಮನುಷ್ಯ, ಒಬ್ಬ ಧಾರ್ಮಿಕ ಮನುಷ್ಯ ವ್ಯತ್ಯಾಸ ಗುರುತಿಸಬೇಕು. `ತರಕಾರಿ, ಹಣ್ಣು, ಮತ್ತು ಹಾಲಿನಿಂದ ನಮಗೆ ಆಹಾರ ಸಿಕ್ಕರೆ ನಾನು ಯಾಕೆ ಪ್ರಾಣಿಗಳನ್ನು ಕೊಂದು ತಿನ್ನಬೇಕು’ ಎಂದು ಅವನು ಯೋಚಿಸಬೇಕು. ಅಲ್ಲದೆ, ಮರದಿಂದ ನಿಮಗೆ ಹಣ್ಣು ಸಿಗುವಾಗ ಅಲ್ಲಿ ಕೊಲ್ಲುವ ಪ್ರಶ್ನೆಯೇ ಇಲ್ಲ. ಅದೇ ರೀತಿ ಹಸುವಿನಿಂದ ಹಾಲು ಕರೆಯುವಾಗ ಹತ್ಯೆ ವಿಷಯವೇ ಬರುವುದಿಲ್ಲ. ಆದುದರಿಂದ ಹತ್ಯೆ ಇಲ್ಲದಂತೆ ಬದುಕುವುದು ಸಾಧ್ಯವಿರುವಾಗ ನಾವು ಪ್ರಾಣಿ ವಧೆ ಯಾಕೆ ಮಾಡಬೇಕು?

ಪಾದ್ರಿ: ಮಾಂಸ, ಹಂದಿ ಮಾಂಸ ಇದನ್ನೆಲ್ಲ ತಿನ್ನುವುದರಿಂದ ನಾನು ಪಾಪಿಯಾಗುತ್ತೇನೆ ಎಂಬುವುದೇ ನಿಮ್ಮ ವಾದ? ಮತ್ತು ನಾನು ಅವುಗಳನ್ನು ತಿನ್ನದಿದ್ದರೆ ಪಾಪಿಯಾಗುವುದಿಲ್ಲ?

ಶ್ರೀಲ ಪ್ರಭುಪಾದ: ಹೌದು.

ಪಾದ್ರಿ: ಮಾಂಸ, ಹಂದಿ ಮಾಂಸ ಮತ್ತು ಮಾಂಸದ ಭಕ್ಷ್ಯಗಳನ್ನು ಸೇವಿಸುವುದನ್ನು ಬಿಟ್ಟುಬಿಟ್ಟರೆ ನಾನು ಭಿನ್ನ ವ್ಯಕ್ತಿಯಾಗುತ್ತೇನೆಯೇ?

ಶ್ರೀಲ ಪ್ರಭುಪಾದ: ನೀವು ಪರಿಶುದ್ಧರಾಗುವಿರಿ.

ಪಾದ್ರಿ:  ಓ! ಇದು ಕುತೂಹಲದಾಯಕವಾಗಿದೆ.

ಶ್ರೀಲ ಪ್ರಭುಪಾದ: ಪ್ರಾಣಿ ಹಂತಕರು ಪರಮಾತ್ಮನನ್ನು ಅರ್ಥಮಾಡಿಕೊಳ್ಳಲಾರರು. ನಾನು ಇದನ್ನು ನೋಡಿದ್ದೇನೆ. ಇದು ವಾಸ್ತವಾಂಶ. ಅವರಿಗೆ ದೇವರನ್ನು ಅರ್ಥ ಮಾಡಿಕೊಳ್ಳುವ ಮಿದುಳು ಇರುವುದಿಲ್ಲ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi