ಸರಳವಾಗಿ, ಸುಲಭವಾಗಿ ತಯಾರಿಸುವ ಪಲ್ಯಗಳ ಬಗ್ಗೆ ವಿವರಿಸಿದ್ದೇವೆ. ಪೌಷ್ಟಿಕಾಂಶ ಉಳ್ಳ ಈ ತರಕಾರಿಗಳ ಪಲ್ಯಗಳನ್ನು ಚಪಾತಿ, ಪೂರಿಗಳಲ್ಲದೆ ದೋಸೆ ಜೊತೆಗೆ ಕೂಡ ಸವಿಯಬಹುದು. ಇದನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿಯೊಂದಿಗೆ ಸೇವಿಸಿ.
ಸೋರೆಕಾಯಿ ಮತ್ತು ಕಡಲೆ ಬೇಳೆ

ಬೇಕಾಗುವ ಪದಾರ್ಥಗಳು
ಕಡಲೆ ಬೇಳೆ – 1 ಬಟ್ಟಲು
ಸೋರೆಕಾಯಿ – 1 ದೊಡ್ಡದು ಅಥವಾ 2 ಚಿಕ್ಕದು
ತುಪ್ಪ – 45 ಎಂಎಲ್
ಸಾಸಿವೆ – 1 ಟೀ ಚಮಚ
ಇಂಗು – 1 ಟೀ ಚಮಚ
ಹಸಿರು ಮೆಣಸಿನಕಾಯಿ – 2
ತುರಿದ ಶುಂಠಿ – 2 ಟೇಬಲ್ ಚಮಚ
ಉಪ್ಪು – 2 ಟೀ ಚಮಚ
ಅರಿಶಿನ – 1 ಟೀ ಚಮಚ
ದನಾ ಜೀರ – 1 ಟೇಬಲ್ ಚಮಚ
ಬೆಲ್ಲ – 1 ಟೇಬಲ್ ಚಮಚ
ಟೊಮ್ಯಾಟೋ – 3, 4
ತಾಜಾ ಕೊತ್ತಂಬರಿ ಸೊಪ್ಪು – 1 ಗೊಂಚಲು
ನಿಂಬೆ ರಸ – 2 ಟೇಬಲ್ ಚಮಚ
ಕತ್ತರಿಸಿದ ಕೋಸು – 100 ಗ್ರಾಂ (ಕಡ್ಡಾಯವಲ್ಲ)
ಮಾಡುವ ವಿಧಾನ : ಪಾತ್ರೆಯೊಳಗೆ ಬೇಳೆಯನ್ನು ಹಾಕಿ ಅನೇಕ ಬಾರಿ ತೊಳೆಯಿರಿ. ಅನಂತರ ನಾಲ್ಕು ಬಟ್ಟಲು ನೀರು ಹಾಕಿ ನೆನೆಯಲು ಬಿಡಿ. ಸೋರೆಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ಕತ್ತರಿಸಿ ಒಂದು ಪಾತ್ರೆಯಲ್ಲಿ ಹಾಕಿಡಿ. ದೊಡ್ಡ ಪ್ಯಾನ್ ಅನ್ನು ಮಧ್ಯಮ ಉರಿಯ ಮೇಲೆ ಇಡಿ. ತುಪ್ಪ ಹಾಕಿ ಕರಗಿಸಿ. ಸಾಸಿವೆ ಹಾಕಿ. ಅದು ಸಿಡಿದ ಮೇಲೆ ಇಂಗು, ಹಸಿ ಮೆಣಸಿನ ಕಾಯಿ ಮತ್ತು ತುರಿದ ಶುಂಠಿಯನ್ನು ಹಾಕಿ ಬೆರಸಿ. ಇದಕ್ಕೆ ನೆನೆಸಿದ್ದ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸುಮಾರು 20 ನಿಮಿಷ ಅಥವಾ ಬೇಳೆಯು ಅರ್ಧ ಬೇಯುವವರೆಗೂ ಬೇಯಿಸಿ. ಈಗ ಕತ್ತರಿಸಿದ ಸೋರೆಕಾಯಿಯನ್ನು ಹಾಕಿ. ಅನಂತರ ಉಪ್ಪು, ಅರಿಶಿನ, ದನಾ ಜೀರ, ಬೆಲ್ಲ ಮತ್ತು ರುಬ್ಬಿದ ಟೊಮ್ಯಾಟೋವನ್ನು ಹಾಕಿ ಮಿಶ್ರಣ ಮಾಡಿ. ಸುಮಾರು 10 ನಿಮಿಷ ಬೇಯಿಸಿ. ನಿಂಬೆ ರಸವನ್ನು ಚಿಮುಕಿಸಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಮತ್ತೊಂದು ಆಯ್ಕೆಯಾಗಿ, ಟೊಮ್ಯಾಟೋ ರಸದ ಪ್ರಮಾಣವನ್ನು ಕಡಮೆ ಮಾಡಿ ಕೋಸನ್ನು ಹಾಕಿ ಬೇಯಿಸಿ.
ಆಲೂ-ಮೇಥಿ

ಬೇಕಾಗುವ ಪದಾರ್ಥಗಳು
ಆಲೂಗಡ್ಡೆ – 4-5
ತಾಜಾ ಮೆಂತ್ಯ ಸೊಪ್ಪು – ಒಂದು ಕಟ್ಟು (ಚಿಕ್ಕದು)
ತುಪ್ಪ – 45 ಎಂಎಲ್
ಸಾಸಿವೆ – 1 ಟೇಬಲ್ ಚಮಚ
ಹಸಿರು ಮೆಣಸಿನ ಕಾಯಿ – 2
ತುರಿದ ಶುಂಠಿ – 1 ಟೀ ಚಮಚ
ಇಂಗು – ಸ್ವಲ್ಪ
ಅರಿಶಿನ – 1/2 ಟೀ ಚಮಚ
ಗರಂ ಮಸಾಲ – 1 ಟೀ ಚಮಚ
ಉಪ್ಪು – ರುಚಿಗೆ
ನಿಂಬೆ ರಸ – 2 ಟೀ ಚಮಚ
ಮಾಡುವ ವಿಧಾನ : ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕತ್ತರಿಸಿ ಒಂದು ಪಾತ್ರೆಗೆ ಹಾಕಿಡಿ. ಅದಕ್ಕೆ ಅರಿಶಿನದ ನೀರನ್ನು ಹಾಕಿ ಮಿಶ್ರಣ ಮಾಡಿ 5 ನಿಮಿಷ ಇಡಿ. ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು ಕತ್ತರಿಸಿ. ನಾನ್ ಸ್ಟಿಕ್ ಪ್ಯಾನ್ ಅನ್ನು ಮಧ್ಯಮ ಉರಿಯ ಮೇಲೆ ಇಡಿ. ತುಪ್ಪವನ್ನು ಕರಗಿಸಿ ಸಾಸಿವೆ ಹಾಕಿ. ಅದು ಸಿಡಿದ ಮೇಲೆ ಕತ್ತರಿಸಿದ ಹಸಿರು ಮೆಣಸಿನ ಕಾಯಿ, ತುರಿದ ಶುಂಠಿ ಮತ್ತು ಇಂಗನ್ನು ಹಾಕಿ ಮಿಶ್ರಣ ಮಾಡಿ. ಅನಂತರ ಅರಿಶಿನ ನೀರನಲ್ಲಿ ನೆನೆದ ಆಲೂಗಡ್ಡೆಯನ್ನು ತೆಗೆದು ಹಾಕಿ. ಗರಂ ಮಸಾಲ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ. ಪುನಃ ನೀರು ಹಾಕದೆ 15 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಆಲೂಗಡ್ಡೆ ಬೇಯುತ್ತಿದ್ದಾಗ ಕತ್ತರಿಸಿದ ಮೆಂತ್ಯ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ. 5 ನಿಮಿಷ ಬೇಯಿಸಿ. ನಿಂಬೆ ರಸವನ್ನು ಚಿಮುಕಿಸಿ.
ಕರಿದ ಹೂ ಕೋಸು, ಆಲೂಗಡ್ಡೆ ಮತ್ತು ನೀಳ ಬದನೆ

ಬೇಕಾಗುವ ಪದಾರ್ಥಗಳು
ಮಧ್ಯಮ ಗಾತ್ರದ ಹೂ ಕೋಸು (ಅಂದಾಜು 800 ಗ್ರಾಂ) – 1
ಆಲೂಗಡ್ಡೆ – 5
ನೇರಳೆ ಬಣ್ಣದ ದೊಡ್ಡ ಬದನೆಕಾಯಿ – 1
ಹುಳಿಯಾದ ಕೆನೆ – 1 ಬಟ್ಟಲು
ಕೆಂಪು ಮೆಣಸು – 1-2
ಗೋಡಂಬಿ – 1/2-1 ಬಟ್ಟಲು
ಬಟಾಣಿ – 3/4 ಬಟ್ಟಲು
ಉಪ್ಪು – ರುಚಿಗೆ
ಇಂಗು – 3/4 ಟೀ ಚಮಚ
ಅರಿಶಿನ – 1 ಟೀ ಚಮಚ
ದನಾ ಜೀರಾ – 1-1 1/2 ಟೀ ಚಮಚ
ಕರಿ ಮೆಣಸು – 1-1 1/2 ಟೀ ಚಮಚ
ಮಾಡುವ ವಿಧಾನ : ಹೂ ಕೋಸನ್ನು ಚೆನ್ನಾಗಿ ತೊಳೆದು ಕತ್ತರಿಸಿ ಒಂದು ತಟ್ಟೆಯಲ್ಲಿ ಇಡಿ. ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಮಧ್ಯಮ ಗಾತ್ರದ ಚೂರುಗಳನ್ನಾಗಿ ಕತ್ತರಿಸಿ. ಬದನೆಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ. ಎಣ್ಣೆಯನ್ನು ಹೀರಿಕೊಳ್ಳಲು ತಟ್ಟೆಗೆ ಕಾಗದವನ್ನು ಹಾಕಿ. ಪ್ಯಾನ್ನಲ್ಲಿ ತುಪ್ಪವನ್ನು ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಲು ಇಡಿ. ಮೊದಲು ಹೂ ಕೋಸಿನ ಚೂರುಗಳನ್ನು ಹುರಿದು ಕಾಗದ ಹರಡಿರುವ ತಟ್ಟೆಗೆ ಹಾಕಿ. ತುಪ್ಪ ಹೀರಿದ ಮೇಲೆ ಕೋಸನ್ನು ಪಾತ್ರೆಗೆ ಹಾಕಿಡಿ. ಅನಂತರ ಆಲೂಗಡ್ಡೆ ಚೂರುಗಳನ್ನು ಕರಿದು ಕಾಗದ ಹರಡಿದ ತಟ್ಟೆಗೆ ಹಾಕಿ. ತುಪ್ಪ ಹೀರಿದ ಮೇಲೆ ಆಲೂಗಡ್ಡೆಯನ್ನು ಕೋಸು ಇರುವ ಪಾತ್ರೆಗೆ ಹಾಕಿ. ಸ್ವಲ್ಪ ದೊಡ್ಡ ಉರಿಯಲ್ಲಿ ಬದನೆಕಾಯಿ ಚೂರುಗಳನ್ನು ಹುರಿದು ಕಾಗದ ಇರುವ ತಟ್ಟೆಗೆ ಹಾಕಿ. ಅನಂತರ ಅದನ್ನು ಕೋಸು ಮತ್ತು ಆಲೂಗಡ್ಡೆ ಇರುವ ಪಾತ್ರೆಗೆ ಹಾಕಿ. ಪ್ರತಿಯೊಂದು ತರಕಾರಿಗೂ ಬೇರೆ ಬೇರೆ ಕಾಗದ ಹರಡುವುದನ್ನು ಮರೆಯಬೇಡಿ. ಮೆಣಸು ಮತ್ತು ಗೋಡಂಬಿಯನ್ನು ಹುರಿದು ಉಳಿದ ತರಕಾರಿಗಳೊಂದಿಗೆ ಸೇರಿಸಬಹುದು. ಜೊತೆಗೆ ಬೇಯಿಸಿದ ಬಟಾಣಿ ಹಾಕಿ. ಈಗ ಒಂದೇ ಸ್ಟೀಲ್ ಪಾತ್ರೆಯಲ್ಲಿ ಎಲ್ಲ ತರಕಾರಿಗಳೂ ಇದ್ದಂತಾಯಿತು. ಅದಕ್ಕೆ ಉಪ್ಪು, ಇಂಗು, ಅರಿಶಿನ, ದನಾ ಜೀರ ಮತ್ತು ಕರಿ ಮೆಣಸಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಹುಳಿ ಕೆನೆಯನ್ನು ಹಾಕಿ ಮಧ್ಯಮ ಉರಿಯಲ್ಲಿ 5 ನಿಮಿಷ ಬೇಯಿಸಿ.






Leave a Reply