ವಿವಿಧ ತರಕಾರಿ ಪಲ್ಯಗಳು

ಸರಳವಾಗಿ ತಯಾರಿಸಿ ಆಸ್ವಾದಿಸುವ ತರಕಾರಿ ಪಲ್ಯಗಳ ಬಗ್ಗೆ ವಿವರಿಸಿದ್ದೇವೆ. ಇವು ಪೌಷ್ಟಿಕಾಂಶ ಉಳ್ಳದ್ದು; ಅತ್ಯಂತ ಸ್ವಾದಿಷ್ಟವಾದದ್ದು. ಚಪಾತಿ, ಪೂರಿ, ರೊಟ್ಟಿಗಳಲ್ಲದೆ ಅನ್ನದ ಜೊತೆಗೂ ಹೊಂದುತ್ತದೆ. ಇದನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿಗೆ ತಿನ್ನಲು ಕೊಡಿ.

ಪಾಲಕ್‌ ಛೋಲೆ

ಬೇಕಾಗುವ ಪದಾರ್ಥಗಳು

ಕಾಬೂಲ್‌ ಕಡಲೆ – 1 ಬಟ್ಟಲು

ಪಾಲಕ್‌ ಸೊಪ್ಪು – 2 ಕಟ್ಟು

ಕತ್ತರಿಸಿದ ಹಸಿರು ಮೆಣಸಿನ ಕಾಯಿ – 3-4

ತುರಿದ ಶುಂಠಿ – 1 ಇಂಚಿನ ಚೂರು

ತುಪ್ಪ – 2 ಟೇಬಲ್‌ ಚಮಚ

ಜೀರಿಗೆ – 1 ಟೀ ಚಮಚ

ಟೊಮ್ಯಾಟೋ ಪ್ಯೂರೆ – 1 ಬಟ್ಟಲು

ಕೆಂಪು ಮೆಣಸಿನಕಾಯಿ ಪುಡಿ – 1 ಟೀ ಚಮಚ

ಗರಂ ಮಸಾಲ ಪುಡಿ – 1 ಟೀ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಕಾಬೂಲ್‌ ಕಡಲೆಯನ್ನು ಚೆನ್ನಾಗಿ ತೊಳೆದು 4-5 ಬಟ್ಟಲು ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಸಿಡಿ. ಅನಂತರ ಆ ನೀರನ್ನು ಬಸಿದು ಮೂರು ಬಟ್ಟಲು ಬೇರೆ ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ಪಾಲಕ್‌ ಸೊಪ್ಪನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿನಲ್ಲಿ 2-3 ನಿಮಿಷ ಬೇಯಿಸಿ. ಅನಂತರ ಆ ನೀರನ್ನು ಬಸಿದು ನುಣ್ಣಗೆ ರುಬ್ಬಿಕೊಳ್ಳಿ. ಹಸಿರು ಮೆಣಸಿನ ಕಾಯಿ ಮತ್ತು ಶುಂಠಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಪ್ಯಾನ್‌ನಲ್ಲಿ ತುಪ್ಪವನ್ನು ಕಾಯಿಸಿ ಅದಕ್ಕೆ ಜೀರಿಗೆ ಹಾಕಿ ಸಿಡಿಸಿ. ಅದಕ್ಕೆ ರುಬ್ಬಿದ ಹಸಿ ಮೆಣಸಿನಕಾಯಿ ಮತ್ತು ಶುಂಠಿಯನ್ನು ಹಾಕಿ ಚೆನ್ನಾಗಿ ಕಲಸಿ. ಒಂದು ನಿಮಿಷ ಕರಿಯಿರಿ. ಅನಂತರ ಟೊಮ್ಯಾಟೋ ಪ್ಯೂರೆ, ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಪುಡಿ ಮತ್ತು ಉಪ್ಪು ಹಾಕಿ ಕಲಸಿ. ಕೆಲವು ನಿಮಿಷಗಳ ಅನಂತರ ರುಬ್ಬಿದ ಸೊಪ್ಪು ಮತ್ತು ಕಡಲೆಯನ್ನು ಹಾಕಿ ನಿಧಾನವಾಗಿ ಕಲಸಿ. ಮುಚ್ಚಿ 5-6 ನಿಮಿಷ ಬೇಯಲು ಬಿಡಿ. ಬಿಸಿ ಬಿಸಿಯಾಗಿ ನೀಡಿ.

ಕಾಶ್ಮೀರಿ ದಂ ಆಲೂ

ಬೇಕಾಗುವ ಪದಾರ್ಥಗಳು

ಸಣ್ಣ ಆಲೂಗಡ್ಡೆ – 18-20

ಎಣ್ಣೆ – ಕರಿಯಲು

ಕಾಶ್ಮೀರಿ ಕೆಂಪು ಮೆಣಸಿನಕಾಯಿ – 5-6

ಏಲಕ್ಕಿ ಪುಡಿ – 1/2 ಟೀ ಚಮಚ

ಒಣ ಶುಂಠಿ ಪುಡಿ – 1 ಟೀ ಚಮಚ

ಸೋಂಪು ಪುಡಿ – 2 ಟೇಬಲ್‌ ಚಮಚ

ಸಾಸಿವೆ ಎಣ್ಣೆ – 1/4 ಬಟ್ಟಲು

ಲವಂಗ ಪುಡಿ – ಚಿಟಿಕೆ

ಮೊಸರು – 2 ಬಟ್ಟಲು

ಉಪ್ಪು – ರುಚಿಗೆ ತಕ್ಕಷ್ಟು

ಹುರಿದ ಜೀರಿಗೆ ಪುಡಿ – 1/2 ಟೀ ಚಮಚ

ಗರಂ ಮಸಾಲ ಪುಡಿ – 1/2 ಟೀ ಚಮಚ

ಮಾಡುವ ವಿಧಾನ : ಆಲೂಗಡ್ಡೆ ಸಿಪ್ಪೆ ತೆಗೆದು ತೊಳೆದು 15 ನಿಮಿಷ ಉಪ್ಪಿನ ನೀರಿನಲ್ಲಿ ಇಡಿ. ನೀರು ಬಸಿದು ಆಲೂಗಡ್ಡೆಯನ್ನು ಒರೆಸಿ ಇಡಿ. ಪ್ಯಾನ್‌ನಲ್ಲಿ ಸಾಕಷ್ಟು ಎಣ್ಣೆ ಹಾಕಿ ಕಾಯಿಸಿ. ಮಧ್ಯಮ ಉರಿಯಲ್ಲಿ ಆಲೂಗಡ್ಡೆಯನ್ನು ಚಿನ್ನದ ಕಂದು ಬಣ್ಣ ಬರುವವರೆಗೂ ಕರಿಯಿರಿ. ಕಾಗದದ ಮೇಲೆ ಹಾಕಿ ಎಣ್ಣೆ ಹೀರುವಂತೆ ಮಾಡಿ. ಸ್ವಲ್ಪ ನೀರು ಬಳಸಿಕೊಂಡು ಕಾಶ್ಮೀರಿ ಕೆಂಪು ಮೆಣಸಿನ ಕಾಯಿಯನ್ನು ರುಬ್ಬಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ, ಒಣ ಶುಂಠಿ ಪುಡಿ ಮತ್ತು ಸೋಂಪು ಪುಡಿಗಳನ್ನು ಹಾಕಿ ಕಲಸಿ. ಇದನ್ನು ಮೊಸರಿನಲ್ಲಿ ಹಾಕಿ ಕಲಸಿ. ಪ್ಯಾನ್‌ನಲ್ಲಿ ಸಾಸಿವೆ ಎಣ್ಣೆಯನ್ನು ಕಾಯಿಸಿ. ಅದಕ್ಕೆ ಲವಂಗದ ಪುಡಿ ಮತ್ತು ಇಂಗು ಹಾಕಿ. ಅರ್ಧ ಬಟ್ಟಲಿನಷ್ಟು ನೀರು ಹಾಕಿ. ಅನಂತರ ಉಪ್ಪು ಹಾಕಿ ಕಲಸಿ. ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿ. ಮೊಸರಿನ ಮಿಶ್ರಣದಲ್ಲಿ ಇದನ್ನು ಹಾಕಿ ಕಲಸಿ ಮತ್ತು ಕುದಿಸಿ. ಇದಕ್ಕೆ ಕರಿದ ಆಲೂಗಡ್ಡೆಯನ್ನು ಹಾಕಿ ಅದು ಗ್ರೇವಿಯನ್ನು ಹೀರಿಕೊಳ್ಳುವವರೆಗೂ ಬೇಯಿಸಿ. ಹುರಿದ ಜೀರಿಗೆ ಪುಡಿ ಮತ್ತು ಗರಂ ಮಸಾಲ ಪುಡಿ ಹಾಕಿ. ಬಿಸಿ ಇರುವಾಗಲೇ ತಿನ್ನಲು ಕೊಡಿ.

ಬೈಗನ್‌ ಭರ್ತ

ಬೇಕಾಗುವ ಪದಾರ್ಥಗಳು

ಬದನೆಕಾಯಿ – 1 ಕಿಲೋ

ಕತ್ತರಿಸಿದ ಶುಂಠಿ – 1 1/2 ಇಂಚು ಚೂರು

ಟೊಮ್ಯಾಟೋ – 4

ಕತ್ತರಿಸಿದ ಹಸಿರು ಮೆಣಸಿನಕಾಯಿ – 2

ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು – ಒಂದೆರಡು ಎಸಳು

ಎಣ್ಣೆ – 3 ಟೇಬಲ್‌ ಚಮಚ

ಜೀರಿಗೆ – 1 ಟೀ ಚಮಚ

ಕೆಂಪು ಮೆಣಸಿನ ಕಾಯಿ ಪುಡಿ – 2 ಟೀಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ. ಬೆಂಕಿಯ ಮೇಲೆ ಅಥವಾ ತಂದೂರ್‌ / ಮೊದಲೇ ಬಿಸಿ ಮಾಡಿದ ಓವನ್‌ನಲ್ಲಿ ಹುರಿಯಿರಿ. ಬದನೆಕಾಯಿ ಸಿಪ್ಪೆ ಸುಲಿದು ಮುದುಡುವಂತೆ ಆಗುವವರೆಗೂ ಹುರಿಯಬೇಕು. ಅದು ತಣ್ಣಗಾಗಲಿ. ಅಗತ್ಯವಿದ್ದರೆ ನೀರಿನಲ್ಲಿ ಹಾಕಿ ತಣ್ಣಗಾಗಿಸಬಹುದು. ಈ ಬದನೆಕಾಯಿಯ ಸಿಪ್ಪೆ ತೆಗೆದು ಪೂರ್ಣವಾಗಿ ಹಿಸುಕಿ ಜಜ್ಜಿ. ಪ್ಯಾನ್‌ನಲ್ಲಿ ಎಣ್ಣೆಯನ್ನು ಕಾಯಿಸಿ. ಜೀರಿಗೆ ಹಾಕಿ ಸಿಡಿಸಿ. ಶುಂಠಿ ಮತ್ತು ಹಸಿರು ಮೆಣಸಿನ ಕಾಯಿ ಹಾಕಿ ಒಂದು ನಿಮಿಷ ಬೇಯಿಸಿ. ಅನಂತರ ಕೆಂಪು ಮೆಣಸಿನ ಕಾಯಿ ಪುಡಿ ಮತ್ತು ಜಜ್ಜಿದ ಬದನೆಕಾಯಿಯನ್ನು ಹಾಕಿ ಕಲಸಿ. ಸೌಟಿನಲ್ಲಿ ಅಲ್ಲಾಡಿಸುತ್ತ ಏಳೆಂಟು ನಿಮಿಷ ಬೇಯಿಸಿ. ಅನಂತರ ಉಪ್ಪು ಹಾಕಿ ಕಲಸಿ. ಆಮೇಲೆ ಟೊಮ್ಯಾಟೋ ಹಾಕಿ ಏಳೆಂಟು ನಿಮಿಷ ಬೇಯಿಸಿ. ಬೆಂಕಿ ನಂದಿಸಿ. ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ತಿನ್ನಲು ಕೊಡಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi