ಎಲೆಕೋಸಿನ ಪಕೋಡ

ಸಾಮಾನ್ಯವಾಗಿ ಈರುಳ್ಳಿ ಇದರ ಅವಿಭಾಜ್ಯ ಭಾಗ. ಇಸ್ಕಾನ್‌ನ ಪಾಕತಜ್ಞರು, ಪಕೋಡದ ರುಚಿ ಉಳಿಸಿಕೊಂಡು, ಈರುಳ್ಳಿ ಇಲ್ಲದೆ, ತಯಾರಿಸುವ ಹೊಸ ವಿಧಾನ ಪತ್ತೆ ಮಾಡಿದ್ದಾರೆ. ಈರುಳ್ಳಿ ಬದಲಿಗೆ, ಎಲೆಕೋಸನ್ನು ಉಪಯೋಗಿಸುತ್ತಾರೆ.

ಇಸ್ಕಾನ್‌ ದೇವಾಲಯದ ಪ್ರಸಾದದ ಅಂಗಣದಲ್ಲಿ ಈರುಳ್ಳಿ ರಹಿತ ಪಕೋಡ ತಿಂದವರು, ಇದರ ರುಚಿಗೆ ಮಾರುಹೋಗಿ ಪದೇ ಪದೇ, ಬಂದು ಕೊಂಡೊಯ್ಯುತ್ತಿದ್ದಾರೆ. ಅದರ ತಯಾರಿಕೆಯನ್ನು ಕೇಳಿ, ಅಪಾರ ಪತ್ರಗಳು ನಮ್ಮಲ್ಲಿಗೆ ಬಂದಿದ್ದವು. ಇದೋ ನಿಮಗಾಗಿ… ಎಲೆಕೋಸಿನ ಪಕೋಡ.

ಮೈದಾ ಮತ್ತು ಕಡಲೇ ಹಿಟ್ಟನ್ನು ಜರಡಿ ಆಡಿ, ಶುದ್ಧ ಮಾಡಿಟ್ಟುಕೊಳ್ಳಿ. ಕೊತ್ತಂಬರಿ, ಕರಿಬೇವು, ಪುದಿನ ಸೊಪ್ಪನ್ನು ಕಡ್ಡಿಯಿಂದ ಬೇರ್ಪಡಿಸಿ, ತೊಳೆದು ಸಣ್ಣಗೆ ಹಚ್ಚಿಟ್ಟುಕೊಳ್ಳಿ. ಸಣ್ಣಗೆ ಕತ್ತರಿಸಿರುವ ಮೆಣಸಿನಕಾಯಿ, ಓಮ್‌ಕಾಳು, ಕೊತ್ತಂಬರಿ ಬೀಜ, ಜೀರಿಗೆ, ಸೋಂಪು, ಇಂಗಿನ ಪುಡಿ, ಈ ಸೊಪ್ಪಿನ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಬೆರಸಿ. ಪಕೋಡದ ಮಸಾಲೆ ರೆಡಿ.

ಮೈದಾ ಹಾಗೂ ಕಡಲೆ ಹಿಟ್ಟನ್ನು ನೀರು ಮತ್ತು ಉಪ್ಪನ್ನು ಹಾಕಿ ಹದವಾಗಿ ಪ್ರತ್ಯೇಕವಾಗಿ ಕಲಸಿ, ಗಂಟುಗಳಾಗದಂತೆ ಎಚ್ಚರವಹಿಸಿ. ಇದಕ್ಕೆ ಪಕೋಡದ ಮಸಾಲೆ ಸೇರಿಸಿ. ಈಗ ಪಕೋಡ ಮಿಶ್ರಣ ರೆಡಿ. ಎಣ್ಣೆಯನ್ನು ಕಡಾಯಿಯಲ್ಲಿ, ಎಳೆಕಾವಿನಲ್ಲಿ ಕಾಯಲು ಇಡಿ. ಸಣ್ಣಗೆ ಕತ್ತರಿಸಿದ ಎಲೆಕೋಸನ್ನು ಪಕೋಡ ಮಿಶ್ರಣದಲ್ಲಿ ಅದ್ದಿ, ಎಳೆ ಕಾವಿನಲ್ಲಿ ಕರಿಯಿರಿ. ಎಣ್ಣೆ ಸೇರಿಸಿ. ನಂತರ ತಿನ್ನಲು ಕೊಡಿ.

ಎಣ್ಣೆ ತುಂಬಾ ಬಿಸಿ ಬೇಡ. ಬಿಸಿ ಹೆಚ್ಚಾದರೆ ಪಕೋಡ ಸೀದು ಕಪ್ಪಾಗಿ, ರುಚಿ ಹಾಳಾಗುತ್ತದೆ. ಹಾಗೆಯೆ ಕಾವು ಹೆಚ್ಚಾದರೆ ಎಲೆಕೋಸು ಬೇಯುವುದಿಲ್ಲ ಬದಲಾಗಿ, ಹಿಟ್ಟಿನ ಹೊರ ಕವಚ ಸೀದು ಹೋಗುತ್ತದೆ.

-ಚಿತ್ರಾಂಗ ಚೈತನ್ಯ ದಾಸ, ಇಸ್ಕಾನ್‌ ಅನ್ನಕೂಟ, ಬೆಂಗಳೂರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi