ಬಗೆ ಬಗೆಯ ಮಾವಿನ ತಿನಿಸು

ಮೇ, ಜೂನ್‌ ತಿಂಗಳೆಂದರೆ ಮಾವಿನ ಕಾಯಿ, ಹಣ್ಣುಗಳ ಕಾಲ. ಮಾವು ನಮ್ಮ ಗೃಹಿಣಿಯ ಅಚ್ಚುಮೆಚ್ಚಿನ ಮಿತ್ರ. ಚಟ್ನಿ, ತೊಕ್ಕು, ಬರ್ಫಿ, ಗೊಜ್ಜು, ಚಿತ್ರಾನ್ನ ಸೇರಿದಂತೆ ಮಾವಿನ ಕಾಯಿ-ಹಣ್ಣಿನಿಂದ ರುಚಿರುಚಿಯಾದ ಪದಾರ್ಥಗಳನ್ನು ತಯಾರಿಸುವ ವಿಧಾನವನ್ನು ನಮ್ಮ ಗೃಹಲಕ್ಷ್ಮಿಯರಿಗಾಗಿ ಇಲ್ಲಿ ನೀಡಿದ್ದೇವೆ.

ಬೇಕಾಗುವ ಪದಾರ್ಥಗಳು:

  • ದೊಡ್ಡ ಸೈಜಿನ ಚೆನ್ನಾಗಿ ಕಳಿತ 6 ಮಾವಿನ ಹಣ್ಣು
  • 1 ಗ್ಲಾಸ್‌ ಸಕ್ಕರೆ
  • ಅರ್ಧ ಗ್ಲಾಸ್‌ ಮೈದಾ
  • 1 ಗ್ಲಾಸ್‌ ತೆಂಗಿನ ಕಾಯಿ ಹಾಲು
  • ಅರ್ಧ ಗ್ಲಾಸ್‌ ತುಪ್ಪ ಅಥವಾ ಡಾಲ್ಡಾ
  • 6 ಅಥವಾ 7 ಗೇರು ಬೀಜ
  • ನಾಲ್ಕು ಅಥವಾ ಐದು ಏಲಕ್ಕಿ

ತಯಾರಿಸುವ ವಿಧಾನ:

ಸಿಪ್ಪೆ ತೆಗೆದ ಮಾವಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ಹಿಂಡಿ. ಗೊರಟು ಬಿಸಾಡಿ. ತೆಂಗಿನ ಕಾಯಿ ತುರಿದು ಮಿಕ್ಸಿಯಲ್ಲಿ ರುಬ್ಬಿ. ಕಾಯಿ ತುರಿಯನ್ನು ಹಿಂಡಿ ಹಾಲು ತೆಗೆದಿಟ್ಟುಕೊಳ್ಳಿ. ಮೈದಾವನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ.

ಮಾವಿನ ಹಣ್ಣಿನ ರಸ, ಕಾಯಿ ಹಾಲು, ಸಕ್ಕರೆಯನ್ನು ಬಾಣಲೆಯಲ್ಲಿ ಮಗುಚಿ. ಮಿಶ್ರಣದ ಪಾಕ ಸ್ವಲ್ಪ ದಪ್ಪವಾಗುತ್ತಿರುವಾಗಲೇ ತುಪ್ಪದಲ್ಲಿ ಹುರಿದು ಮೈದಾವನ್ನು ಹಾಕಿ. ಮಿಶ್ರಣವನ್ನು ಮತ್ತೆ ಮಗುಚಿ. ಕಂದು ಬಣ್ಣಕ್ಕೆ ಬರುವಾಗ ಗೇರು ಬೀಜ, ಏಲಕ್ಕಿ ಪುಡಿ ಹಾಕಿ. ಈ ಮಿಶ್ರಣ ಗಟ್ಟಿಯಾಗುತ್ತ ಬರುತ್ತಿದ್ದಂತೆಯೇ ಸ್ಟೌವ್‌ ಆಫ್‌ ಮಾಡಿ. ಸ್ಟೀಲ್‌ ತಟ್ಟೆಗೆ ತುಪ್ಪ ಸವರಿ ಮಿಶ್ರಣವನ್ನು ಹೊಯ್ಯಿರಿ. ಬೇಕಾದ ಆಕಾರಕ್ಕೆ ಕಟ್‌ ಮಾಡಿ. ಬರ್ಫಿ ರೆಡಿ.

ಬೇಕಾಗುವ ಪದಾರ್ಥಗಳು:

  • ಚೆನ್ನಾಗಿ ಬೆಳೆದ, ಗೊರಟ ಬಲಿಯದ ಮಾವಿನ ಕಾಯಿ 1 ಕೆಜಿ
  • ಸಕ್ಕರೆ ಅರ್ಧ ಲೋಟ
  • ಒಣಶುಂಠಿ 2 ಕೊಂಬು
  • ಉಪ್ಪು 50 ಗ್ರಾಂ
  • ಏಲಕ್ಕಿ ಎರಡು ಚಮಚ
  • ದಾಲ್ಚಿನ್ನಿ ನಾಲ್ಕು ಕಡ್ಡಿಗಳು
  • ಕರಿಬೇವು ನಾಲ್ಕು ಎಸಳು
  • ಕಾಳು ಮೆಣಸು (ಪುಡಿ ಮಾಡಿದ್ದು) ಎರಡು ಚಮಚ
  • ಕೆಂಪು ಮೆಣಸಿನ ಪುಡಿ 3 ಚಮಚ
  • ಕೊಬ್ಬರಿ ತುರಿ ಕಾಲು ಕಪ್‌
  • ಒಣ ದ್ರಾಕ್ಷಿ ಕಾಲು ಕಪ್‌
  • ಗೋಡಂಬಿ ಕಾಲು ಕಪ್‌
  • ಬಾದಾಮಿ ಕಾಲು ಕಪ್‌
  • ವಿನೆಗರ್‌ 150 ಗ್ರಾಂ
  • ಜೀರಿಗೆ ಎರಡು ಚಮಚ
  • ಕಲ್ಲಂಗಡಿ ಹಣ್ಣಿನ ಬೀಜಗಳು ಕಾಲು ಕಪ್‌

ತಯಾರಿಸುವ ವಿಧಾನ:

ಬಾಣಲಿಯಲ್ಲಿ ಕಲ್ಲಂಗಡಿ ಬೀಜಗಳನ್ನು ಹುರಿದಿಟ್ಟುಕೊಳ್ಳಿ. ಬಾದಾಮಿ ಮತ್ತು ಗೋಡಂಬಿಯನ್ನೂ ಸ್ವಲ್ಪ ಬಣ್ಣ ಮಾಗುವಂತೆ ಹುರಿಯಿರಿ. ಮಾವಿನ ಕಾಯಿಯನ್ನು ಸಣ್ಣಗೆ ತುರಿಯಿರಿ. ಸ್ವಲ್ಪ ದಪ್ಪ ತಳವಿರುವ ಬಾಣಲೆಯಲ್ಲಿ ಮಾವಿನ ಕಾಯಿ ತುರಿ ಸಕ್ಕರೆ ಹಾಕಿ ಐದು ನಿಮಿಷ ಬೇಯಿಸಿ. ಶುಂಠಿ, ಏಲಕ್ಕಿ, ದಾಲ್ಚಿನ್ನಿ, ಕಾಳುಮೆಣಸು, ಕರಿಬೇವಿನ ಸೊಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಮತ್ತೊಮ್ಮೆ ಬೇಯಿಸಿ ನಂತರ ಉಪ್ಪು ಸೇರಿಸಿ.

ಮಿಶ್ರಣ 20 ನಿಮಿಷಕ್ಕೆಲ್ಲಾ ಸ್ವಲ್ಪ ದಪ್ಪವಾಗುತ್ತದೆ. ನಂತರ ವಿನೆಗರ್‌ ಬೆರೆಸಿ ಇನ್ನೈದು ನಿಮಿಷ ಬೇಯಿಸಿ. ಆಮೇಲೆ ಒಣ ದ್ರಾಕ್ಷಿ, ಗೋಡಂಬಿ ಮತ್ತು ತೆಂಗಿನ ತುರಿಯನ್ನು ಬೆರೆಸಿ. ಮತ್ತೈದು ನಿಮಿಷ ಬೇಯಿಸಿದರೆ ಸ್ಪೆಷಲ್‌ ಚಟ್ನಿ ಸಿದ್ಧ.

ತಯಾರಿಸುವ ವಿಧಾನ:

ಮಾವಿನ ಹಣ್ಣುಗಳನ್ನು ಸಿಪ್ಪೆ ತೆಗೆದು ಹೆಚ್ಚಿ. ರಸಭರಿತ ಮಾವಿನ ತುಂಡುಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿದ ಆ ರಸವನ್ನು ಒಲೆ ಮೇಲೆ ಇಟ್ಟು ಕುದಿಸಿ. ಬೇಕೆನಿಸಿದಲ್ಲಿ ಸ್ವಲ್ಪ ಉಪ್ಪು ಸೇರಿಸಿ.

ಚೆನ್ನಾಗಿ ಕುದ್ದ ನಂತರ ಮಾವಿನ ಹಣ್ಣಿನ ರಸ ಮಂದವಾಗಿ ಅಂಟಂಟಾಗುತ್ತದೆ. ಆಗ ಇದನ್ನು ಸ್ವಚ್ಛವಾಗಿರುವ ಚಾಪೆ ಅಥವಾ ಅಡಕೆ ಹಾಳೆಯ ಮೇಲೆ ಹೊಯ್ಯಿರಿ. ನೆನಪಿಡಿ, ಇದನ್ನು ತೆಳ್ಳಗೆ ಹೊಯ್ಯಬಾರದು, ದಪ್ಪಗೆ ಹೊಯ್ಯಬೇಕು. ಇದನ್ನು ಎರಡು ಅಥವಾ ಮೂರು ದಿನಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಈಗ ಮಾಂಬಳ ಸಿದ್ಧ. ಚಾಪೆ ಅಥವಾ ಹಾಳೆಗೆ ಅಂಟಿಕೊಂಡಿರುವ ಮಾಂಬಳವನ್ನು ನಿಧಾನವಾಗಿ ಬಿಡಿಸಿ. ಸುರುಳಿ ಸುತ್ತಿ ಡಬ್ಬಿಯಲ್ಲಿ ಗಾಳಿಯಾಡದಂತೆ ಮುಚ್ಚಿಡಿ.

ಮನೆಗೆ ನೆಂಟರು ಬಂದಾಗ ಮಾಂಬಳವನ್ನು ತುಸು ಬೆಚ್ಚಗೆ ಮಾಡಿಕೊಂಡು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ತಿನ್ನಬಹುದು. ಅಥವಾ ನಾಲ್ಕು ತುಂಡು ಮಾಂಬಳ ಹಾಕಿ ಗೊಜ್ಜು ಮಾಡಬಹುದು. ಇದಲ್ಲದೇ ಮಾಂಬಳದ ಸಲಾಡ್‌ ತಯಾರಿಸಿದರೆ ಒಳ್ಳೆಯ ಸೈಡ್‌ ಡಿಶ್‌ ಕೂಡು ಆಗುತ್ತದೆ.

ಚಿಕ್ಕ ಚಿಕ್ಕ ಮಾಂಬಳದ ತುಂಡುಗಳ ಜೊತೆಗೆ ಕೊಬ್ಬರಿ ತುಂಡುಗಳನ್ನು ಬೆರೆಸಿದರೆ ಅದು ರುಚಿಯಾದ ಕುರುಕಲು ತಿಂಡಿ.

ಬೇಕಾಗುವ ಪದಾರ್ಥಗಳು:

  • ಒಂದು ಮಾವಿನ ಕಾಯಿ (ತೋತಾಪುರಿ ಒಳ್ಳೆಯದು)
  • ತುರಿದ ತೆಂಗಿನಕಾಯಿ 1 ಕಪ್‌
  • ಕಾಳುಮೆಣಸು 5 ಅಥವಾ 6
  • ಉಪ್ಪು ರುಚಿಗೆ ತಕ್ಕಷ್ಟು
  • ಒಗ್ಗರಣೆಯ ಸಾಮಗ್ರಿ (1/2 ಚಮಚ ಸಾಸಿವೆ, 2 ಚಮಚ ಎಣ್ಣೆ)

ತಯಾರಿಸುವ ವಿಧಾನ:

ಮಾವಿನಕಾಯಿಯನ್ನು ಚಿಕ್ಕ ಚೂರುಗಳಾಗಿ ಹೆಚ್ಚಿಕೊಳ್ಳಿ. ತೆಂಗಿನಕಾಯಿ ತುರಿ, ಕಾಳುಮೆಣಸು ಮತ್ತು ಮಾವಿನ ಚೂರುಗಳನ್ನು ಸೇರಿಸಿ ಸ್ವಲ್ಪವೇ ನೀರು ಬಳಸಿ ರುಬ್ಬಿ. ಉಪ್ಪು ಹಾಕಿ ಒಗ್ಗರಣೆ ಕೊಡಿ. ಇನ್ನೂ ನೀರು ಸೇರಿಸಿ ತೆಳುವಾಗಿ ಮಾಡಿದರೆ ಕುಡಿಯಲೂ ಬಳಸಬಹುದು.

ಬೇಕಾಗುವ ಪದಾರ್ಥಗಳು:

  • ಅಕ್ಕಿ ಎರಡು ಕಪ್‌ (ತೆಳುವಾದ ಉದ್ದನೆಯ ಅಕ್ಕಿ ಒಳ್ಳೆಯದು)
  • ಉಪ್ಪು ಎರಡು ಚಮಚ
  • ಅರಿಶಿನ ಅರ್ಧ ಚಮಚ
  • ಜೀರಿಗೆ ಒಂದು ಚಮಚ
  • ಕೆಂಪು ಮೆಣಸು 6, ಮಧ್ಯಮ ಗಾತ್ರದ್ದು. ಕತ್ತರಿಸಿಟ್ಟುಕೊಳ್ಳಿ
  • ತೆಂಗಿನ ಕಾಯಿ ತುರಿ ಎರಡು ಕಪ್‌
  • ಮಾವಿನಕಾಯಿ ಎರಡು, ಅರ್ಧ ಹಣ್ಣಾಗಿರಲಿ ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ
  • ತುಪ್ಪ 125 ಗ್ರಾಂ
  • ಕರಿಬೇವು 3 ಎಸಳು
  • ಸಾಸಿವೆ 2 ಚಮಚ
  • ಒಗ್ಗರಣೆಗೆ ಇಡಿಯಾದ 2 ಕೆಂಪು ಮೆಣಸು

ತಯಾರಿಸುವ ವಿಧಾನ:

ಅಕ್ಕಿಯನ್ನು ಚೆನ್ನಾಗಿ ತೊಳೆದು, ಉಪ್ಪು ಮತ್ತು ಅರಿಶಿನದೊಂದಿಗೆ ಬೇಯಿಸಿ. ಅಕ್ಕಿ ಬೇಯುತ್ತಿರುವಾಗಲೇ, ಇತ್ತ ಜೀರಿಗೆ, ಮೆಣಸು, ಕಾಯಿ ತುರಿಗಳನ್ನು ಸೇರಿಸಿ ರುಬ್ಬಿ. ಆ ಮಿಶ್ರಣವನ್ನು ಮಾವಿನ ಕಾಯಿ ಹೋಳಿನ ಜತೆ ಬೆರೆಸಿ. ಅನ್ನ ಬೆಂದ ನಂತರ, ಅರ್ಧ ಭಾಗ ತುಪ್ಪವನ್ನೂ ಇದಕ್ಕೆ ಸೇರಿಸಿ ಚೆನ್ನಾಗಿ ಕಲೆಸಿ ಪಕ್ಕಕ್ಕಿಡಿ.

ಉಳಿದ ತುಪ್ಪವನ್ನು ಬಿಸಿಮಾಡಿ, ಕರಿಬೇವು, ಸಾಸಿವೆ ಹಾಕಿ ಅದು ಹೊಟ್ಟಲಾರಂಭಿಸಿದ ತಕ್ಷಣ, ಕಾಯಿ ತುರಿ, ಮಾವಿನ ಕಾಯಿ ಮಿಶ್ರಣವನ್ನು ಬಾಣಲೆಯಲ್ಲಿ ಹಾಕಿ. ಅದು ಚೆನ್ನಾಗಿ ಮಿಶ್ರವಾದ ನಂತರ ಅನ್ನದ ಮಿಶ್ರಣದ ಜತೆ ಸೇರಿಸಿ ಚೆನ್ನಾಗಿ ಕಲಸಿ ಇಡಿ. ಮೆಣಸಿನ ಒಗ್ಗರಣೆ ಹಾಕಿ. ರುಚಿ ರುಚಿಯಾದ ಮಾವಿನಕಾಯಿ ಅನ್ನ ಸಿದ್ಧ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi