ಶ್ರೀಪಾದ ನಿಂಬಾರ್ಕಾಚಾರ್ಯ

ಶ್ರೀ ನಿಂಬಾರ್ಕ ಆಚಾರ್ಯರು ಕುಮಾರ ಸಂಪ್ರದಾಯದ ಸಾಲಿನಲ್ಲಿ ಬಂದವರು. ಇವರು ಸುಮಾರು 11 ಮತ್ತು 12ನೇ ಶತಮಾನದ ಮಧ್ಯೆ ಬಾಳಿ ಬದುಕಿದವರು. ದಕ್ಷಿಣ ಭಾರತದ ಇಂದಿನ ಮುರುಗರ ಪಟ್ಟಂ ಎಂಬ ಊರಿನಲ್ಲಿ ಅರುಣಿ ಮತ್ತು ಜಯಂತಿ ಎಂಬ ದ್ರಾವಿಡ ಶ್ರದ್ಧಾಭಕ್ತಿಗಳುಳ್ಳ ಬ್ರಾಹ್ಮಣ ದಂಪತಿಗೆ ಇವರು ಜನಿಸಿದರು. ಅವರು ತೈಲಾಂಗ ಜನಾಂಗದ ಕ್ರಮದಲ್ಲಿ ಬಂದವರಾಗಿದ್ದರು.

ನಿಂಬಾರ್ಕರು ತ್ರಿದಂಡಿ ಸಂಪ್ರದಾಯದ ಮಹಾ ತಪಸ್ವಿಯಾಗಿದ್ದರು. ಇವರು ದ್ವೈತಾದ್ವೈತವಾದಕ್ಕೆ ಅನುಗುಣವಾಗಿ ಬಹಳಷ್ಟು ಗ್ರಂಥಗಳನ್ನು ರಚಿಸಿದ್ದಾರೆ. ಇವರು ತಮ್ಮ ಭಕ್ತಿಯುತವಾದ ಜೀವನವನ್ನು ವೃಂದಾವನದ ಗೋವರ್ಧನ ಹತ್ತಿರವಿರುವ ನಿಂಬಾ ಗ್ರಾಮದಲ್ಲಿ ಹೆಚ್ಚಾಗಿ ಕಳೆದಿದ್ದಾರೆ.

ನಿಂಬಾ ಗ್ರಾಮದಲ್ಲಿರುವಾಗ ನಿಂಬಾರ್ಕರು ಒಬ್ಬ ಜೈನ ಮಹಾ ಪಂಡಿತರೊಬ್ಬರನ್ನು ವಾದದಲ್ಲಿ ಸೋಲಿಸಿದರು. ಅನಂತರ ಆ ಪಂಡಿತನನ್ನು ತನ್ನೊಡನೆ ಊಟ ಮಾಡಲು ಕರೆದರು. ಆದರೆ ಆ ಜೈನ ಪಂಡಿತ ಊಟ ಮಾಡಲು ನಿರಾಕರಿಸಿದನು. ಏಕೆಂದರೆ ಸಾಮಾನ್ಯವಾಗಿ ಜೈನರು ಸೂರ್ಯಾಸ್ತವಾದ ಮೇಲೆ ಊಟ ಮಾಡುವುದಿಲ್ಲ.

ಕತ್ತಲಾಗುತ್ತಾ ಬಂದಿದ್ದರಿಂದ ನಿಂಬಾರ್ಕರೊಂದಿಗೆ ಅವನು ಊಟ ಮಾಡಲು ನಿರಾಕರಿಸಿದನು. ಇದಾದ ನಂತರ ನಿಂಬಾರ್ಕರು ತಮ್ಮ ಶಕ್ತಿಯಿಂದ ಅಲ್ಲಿರುವ ನಿಂಬಾ ಮರದ ಮಧ್ಯದಿಂದ ಸೂರ್ಯನು ಉದಯಿಸುವಂತೆ ಮಾಡಿದರು. ಇದನ್ನು ಕಂಡ ಆ ಜೈನ ಪಂಡಿತನು ಆಶ್ಚರ್ಯಚಕಿತನಾಗಿ ಅವರ ಆತಿಥ್ಯವನ್ನು ಸ್ವೀಕರಿಸಿದನು.

ಹೀಗೆ ನಿಂಬಾರ್ಕರಿಗೆ ನಿಂಬಾರ್ಕ ಅಥವಾ ನಿಂಬಾದಿತ್ಯವೆಂಬ ಹೆಸರಿನಿಂದಲೇ ಪ್ರಸಿದ್ಧಿ ದೊರೆಯಿತು. ಸೂರ್ಯನನ್ನು (ಅರ್ಕ ಅಥವಾ ಆದಿತ್ಯ) ನಿಂಬಾ ಮರದಿಂದ ಉದಯಿಸುವಂತೆ ಮಾಡಿದ್ದರಿಂದ ಅವರಿಗೆ ಆ ಹೆಸರು ಬಂದಿತ್ತು.

ಬಿಲ್ವ ಪಕ್ಷ ಅರಣ್ಯದ ಹತ್ತಿರವಿರುವ ಒಂದು ಹಳ್ಳಿಯಲ್ಲಿ ಒಂದು ಸಲ ಬ್ರಾಹ್ಮಣರ ಗುಂಪೊಂದು ಶಿವನ ಪೂಜೆ ಮಾಡಲು ಬಂದಿತ್ತು. ಹೇಗೆ ಶ್ರೀ ವಿಷ್ಣು ಭಗವಾನ್‌ ನನ್ನು ತುಳಸಿಯ ಪತ್ರೆಗಳಿಂದ ಪೂಜಿಸಿ, ಅರ್ಪಿಸಿ ಸಂತೋಷಪಡಿಸಬಹುದೊ ಹಾಗೆಯೇ ಬಿಲ್ವ ಪತ್ರೆಗಳಿಂದ ಪ್ರಭು ಶಿವನನ್ನು ಪೂಜಿಸಿ ಸಂತೋಷಪಡಿಸಬಹುದು.

ಅಲ್ಲಿಗೆ ಬಂದಿದ್ದ ಬ್ರಾಹ್ಮಣರು ಬಿಲ್ವ ಪತ್ರೆಗಳಿಂದ ಪ್ರಭು ಶಿವನನ್ನು ಎರಡು ವಾರಗಳ ತನಕ ಅಂದರೆ ಒಂದು ಪಕ್ಷದವರೆಗೂ ಭಕ್ತಿಯಿಂದ ಪೂಜಿಸಿ ಅತ್ಯಂತವಾಗಿ ತೃಪ್ತಿಪಡಿಸಿದರು. ಆ ಬ್ರಾಹ್ಮಣರ ಗುಂಪಿನಲ್ಲಿ ಒಬ್ಬ ನಿಂಬಾರ್ಕ.

ಆತ ಎಚ್ಚರಿಕೆಯಿಂದ ವಿಶಿಷ್ಠ ಶ್ರದ್ಧಾಭಕ್ತಿಯಿಂದ ಶಿವನನ್ನು ಪೂಜಿಸುತ್ತಿದ್ದನು. ನಿಂಬಾರ್ಕನ ಪರಮ ಭಕ್ತಿಯಿಂದ ಸಂತೃಪ್ತನಾದ ಶಿವನು ಅವನ ಮುಂದೆ ಪ್ರತ್ಯಕ್ಷನಾದನು. ಪ್ರಭು ಶಿವನು ನಿಂಬಾರ್ಕನಿಗೆ ಹೀಗೆ ಹೇಳುತ್ತಾನೆ – ನಿಂಬಾರ್ಕ, ಈ ಹಳ್ಳಿಯ ಕೊನೆಯಲ್ಲಿ ಬಿಲ್ವ ಅರಣ್ಯವಿದೆ. ಅಲ್ಲಿ ನಾಲ್ಕು ಜನ ಕುಮಾರರು ಗಾಢವಾದ ತಪಸ್ಸಿನಲ್ಲಿ ಮುಳುಗಿದ್ದಾರೆ.

ನೀನು ಅಲ್ಲಿಗೆ ಹೋಗಿ ಭಕ್ತಿಯಿಂದ ಅವರ ಸೇವೆಯನ್ನು ಮಾಡು. ಅವರ ಅನುಗ್ರಹದಿಂದ ನಿನಗೆ ಪಾರಮಾರ್ಥಿಕ ಜ್ಞಾನ ಪ್ರಾಪ್ತವಾಗುತ್ತದೆ. ಅವರು ನಿನಗೆ ಆಧ್ಯಾತ್ಮಿಕ ಗುರುಗಳಾಗುತ್ತಾರೆ. ಅವರಿಂದ ಅತ್ಯಮೂಲ್ಯವಾದ ಆ ಜ್ಞಾನವನ್ನು ಪಡೆದುಕೋ ಎಂದು ಹೇಳಿ ಶಿವನು ಅಂತರ್ಧಾನನಾದನು.

ನಿಂಬಾರ್ಕನು ಕೂಡಲೇ ಶಿವನು ಹೇಳಿದ ಆ ಸ್ಥಳಕ್ಕೆ ಹೋದನು. ಅಲ್ಲಿನ ನಾಲ್ಕು ದಿಕ್ಕುಗಳಲ್ಲಿ ಆ ಕುಮಾರ ತಪಸ್ವಿಗಳನ್ನು ದೃಢ ಸಂಕಲ್ಪದಿಂದ ಹುಡುಕಾಡಿದನು. ಆದರೆ ಅವನಿಗೆ ಎಲ್ಲೂ ಅವರು ಕಂಡು ಬರಲಿಲ್ಲ. ಅವನು ಪ್ರಜ್ವಲಿಸುವ ಸೂರ್ಯ ಸದೃಶ ಕುಮಾರರನ್ನು ಕೊನೆಗೆ ಕಂಡನು. ಅವರೆಲ್ಲರೂ ಒಂದು ಮರದ ಕೆಳಗೆ ಕುಳಿತು ಧ್ಯಾನ ಮಗ್ನರಾಗಿದ್ದರು.

ಆ ಕುಮಾರರು ಅತ್ಯಂತ ಸುಂದರರಾಗಿ ಯಜ್ಞಕುಂಡದಲ್ಲಿ ಪ್ರಜ್ವಲಿಸುವ ದೀಪೋ ಜ್ವಾಲಮಾನದ ಪ್ರಕಾಶದಂತೆ ಹೊಳೆಯುತ್ತಿದ್ದರು. ಗುಣದಲ್ಲಿ ಅತ್ಯಂತ ಆದರ್ಶಮಯರಾಗಿದ್ದರು. ಐದು ವರ್ಷದವರಿಗಿಂತ ಹೆಚ್ಚು ವಯಸ್ಸಿನವರಾಗಿ ಕಾಣುತ್ತಿರಲಿಲ್ಲ. ಅವರೆಲ್ಲರೂ ನಗ್ನರಾಗಿಯೇ ಕುಳಿತು ಧ್ಯಾನ ಮಾಡುತ್ತಿದ್ದರು. ಈ ದೃಶ್ಯವನ್ನು ನೋಡುತ್ತಿದ್ದಂತೆಯೇ ನಿಂಬಾರ್ಕರು ಭಾವಾವೇಶದಿಂದ ‘ಹರೇಕೃಷ್ಣ’ ಎಂದು ಹೇಳಿದರು.

ಇವನ ಬಾಯಿಂದ ಮಂತ್ರದ ಶಬ್ದ ಕೇಳುತ್ತಿದ್ದಂತೆ ಆ ನಾಲ್ವರು ಬಾಲ ತಪಸ್ವಿಗಳು ಧ್ಯಾನದಿಂದ ಎಚ್ಚೆತ್ತರು. ತಮ್ಮ ಮುಂದೆ ನಿಂತಿರುವ ಒಬ್ಬ ಆದರ್ಶಪೂರ್ಣ, ಆನಂದಮಯಿ ಭಕ್ತನನ್ನು ನೋಡಿ ಇವರು ಅತ್ಯಂತ ಸಂತೋಷಗೊಂಡರು. ಒಬ್ಬರಾದ ನಂತರ ಒಬ್ಬರು ಅವನನ್ನು ತಬ್ಬಿಕೊಂಡರು. ಯಾರು ನೀನು? ಏತಕ್ಕಾಗಿ ಇಲ್ಲಿಗೆ ಬಂದಿರುವೆ? ಎಂದು ಅವರು ಈ ನಿಂಬಾರ್ಕನನ್ನು ಕೇಳಿದರು. ನಿನ್ನ ಎಲ್ಲ ಪ್ರಾರ್ಥನೆಗಳಿಗೆ ನಾವು ಖಂಡಿತವಾಗಿಯೂ ಉತ್ತರಿಸುತ್ತೇವೆ ಎಂದು ಹೇಳಿದರು.

ನಿಂಬಾರ್ಕ ಆ ನಾಲ್ಕು ಸಹೋದರರ ಕಾಲಿಗೆ ದೀರ್ಘದಂಡ ಪ್ರಣಾಮವನ್ನು ಮಾಡಿ ಅತ್ಯಂತ ವಿನಮ್ರನಾಗಿ ತನ್ನನ್ನು ಅವರಿಗೆ ಪರಿಚಯಿಸಿಕೊಂಡು.

ಮಂದಸ್ಮಿತನಾಗಿ ಆ ಸಹೋದರರಲ್ಲಿ ಒಬ್ಬ ಸನತ್‌ ಕುಮಾರ ಹೇಳುತ್ತಾನೆ, “ದಯಾಮಯನಾದ ದೇವೋತ್ತಮ ಆ ಭಗವಂತನಿಗೆ ಈ ಕಲಿಯುಗದಲ್ಲಿ ಜೀವಗಳಿಗೆ ಬಹಳ ಕಷ್ಟ ತೊಂದರೆಗಳು ಉಂಟಾಗುವುದೆಂದು ತಿಳಿದಿದೆ. ಆದುದರಿಂದ ಜೀವಗಳು ತನ್ನ ಭಕ್ತಿ ಸೇವೆಯನ್ನು ಮಾಡಿ ಈ ಸಂಕಟಗಳಿಂದ ಪಾರಾಗಲಿ ಎಂಬ ಈ ಒಂದು ಗುರಿಯನ್ನು ಇಟ್ಟುಕೊಂಡು ಭಗವಂತನು ತನ್ನ ಭಕ್ತಿ ಸೇವೆಯ ಮಹತ್ವವನ್ನು ಹರಡಲು ಭಕ್ತಿಯನ್ನು ತುಂಬಿ ನಾಲ್ಕು ಮಂದಿ ವ್ಯಕ್ತಿಗಳನ್ನು ಸೃಷ್ಟಿಸಿ ಈ ಜಗತ್ತಿಗೆ ಕಳುಹಿಸಿದ.

ಅವರೇ ಶ್ರೀರಾಮಾನುಜರು, ಶ್ರೀಮಧ್ವರು, ವಿಷ್ಣುಸ್ವಾಮಿ, ಇವರು ಮೂವರಾದರೆ ನಾಲ್ಕನೆಯವನು ನೀನೇ ಆಗಿದ್ದೀಯಾ. ಶ್ರೀ ಲಕ್ಷ್ಮಿಯು ರಾಮಾನುಜರನ್ನು ಭಕ್ತನನ್ನಾಗಿ, ಬ್ರಹ್ಮನು ಮಧ್ವನನ್ನು ಭಕ್ತನನ್ನಾಗಿ, ರುದ್ರನು ವಿಷ್ಣುಸ್ವಾಮಿಯನ್ನು ತನ್ನ ಭಕ್ತನನ್ನಾಗಿ ಸ್ವೀಕರಿಸಿದ್ದಾರೆ.

ಪುಣ್ಯವಶಾತ್‌ ನೀನು ಕೂಡ ನಮ್ಮಲಿಗೆ ಬಂದಿದ್ದೀಯೆ. ಈ ದಿನ ನಿನಗೆ ಬೋಧಿಸಲು ಅವಕಾಶ ದೊರಕಿದ್ದು ನಮ್ಮ ಭಾಗ್ಯ. ಇದೇ ನಾವು ಇಲ್ಲಿಗೆ ಬಂದಿರುವ ಧ್ಯೇಯ. ನಿನ್ನನ್ನು ಭಕ್ತನನ್ನಾಗಿ ಸ್ವೀಕರಿಸಿ ನಾವು ಬೋಧನೆ ಮಾಡಲು ಒಂದು ಅವಕಾಶ ದೊರಕಿದೆ. ನಾವು ಕೂಡ ನಿರಾಕಾರ ಬ್ರಹ್ಮನ್‌ನನ್ನು ಕುರಿತು ಚಿಂತಿಸುತ್ತಿದ್ದೆವು.

ಆದರೆ ಶ್ರೀವಿಷ್ಣುವಿನ ದಯೆಯಿಂದ ನಾವು ಆ ಪಾಪದಿಂದ ವಿಮುಕ್ತರಾಗಿದ್ದೇವೆ. ಇಂದು ನಾವು ಪವಿತ್ರ ಭಕ್ತಿಸೇವೆಯ ಪ್ರಚಾರದ ಅವಶ್ಯಕತೆಯನ್ನು ಅರಿತುಕೊಂಡಿರುವುದರಿಂದ ಜಗತ್ತಿಗೆ ಈ ತತ್ವವನ್ನು ಹರಡಲು ನಾನು “ಸನತ್‌ ಕುಮಾರ ಸಂಹಿತೆ” ಎಂಬ ಗ್ರಂಥವನ್ನು ರಚಿಸಿದ್ದೇನೆ. ನನ್ನಿಂದ ಉಪದೇಶವನ್ನು ಪಡೆದ ನಂತರ ನೀನು ಆ ತತ್ವವನ್ನು ಅನುಸರಿಸು ಎಂದನು.

ನಿಂಬಾರ್ಕ ಅವರ ಉಪದೇಶದಿಂದ ಅತ್ಯಂತ ಉತ್ಸುಕನಾಗಿ ನಂತರ ಸಂತೋಷದಿಂದ ಕೂಡಲೇ ಗಂಗಾನದಿಯಲ್ಲಿ ಸ್ನಾನಮಾಡಿ ಪುನಃ ಅವರ ಮುಂದೆ ದೀರ್ಘದಂಡ ಪ್ರಣಾಮವನ್ನು ಮಾಡಿದನು. ನಿಂಬಾರ್ಕನು ವಿನಮ್ರತೆಯಿಂದ ಬೇಡಿಕೊಂಡನು “ ಹೇ ಪತಿತಪಾವನರೇ ಈ ನೀಚಜಾತಿಯ ಮೂಢನನ್ನು ದಯವಿಟ್ಟು ಉದ್ಧರಿಸಿ.”

ಆನಂತರ ನಿಂಬಾರ್ಕನು ಆ ಬಿಲ್ವ ಅರಣ್ಯದಲ್ಲಿ “ಸನತ್‌ ಕುಮಾರ ಸಂಹಿತೆ”ಯ ಪ್ರಕಾರ ಶ್ರೀರಾಧಾಕೃಷ್ಣರ ಪೂಜೆಯನ್ನು ಮಾಡುತ್ತಿದ್ದನು ಮತ್ತು ಕುಮಾರರು ಹೇಳಿ ಕೊಟ್ಟಿದ್ದ ಮಂತ್ರವನ್ನು ಜಪಿಸುತ್ತಿದ್ದನು. ಅವನ ಭಕ್ತಿಗೆ ಒಲಿದು ರಾಧಾ‍ಕೃಷ್ಣರು ಬಹಳ ಬೇಗನೇ ಅವನ ಮುಂದೆ ಪ್ರಕಟವಾದರು.

ಅವರ ಪ್ರತಿಭೆಯು ಎಲ್ಲ ದಿಕ್ಕುಗಳನ್ನು ಪ್ರಕಾಶಿಸಿತು. ಅವರು ಬಹಳ ಮಧುರವಾದ ಧ್ವನಿಯಲ್ಲಿ ನಿಂಬಾರ್ಕ, ಈ ನವದ್ವೀಪದಲ್ಲಿ ನೀನು ಸಾಧನೆಯನ್ನು ಮಾಡಿದ್ದೀಯ. ನೀನು ಬಹಳ ಅದೃಷ್ಟವಂತ ಮುಂದೆ ನಾವಿಬ್ಬರೂ (ಕೃಷ್ಣ ಮತ್ತು ರಾಧ) ಸೇರಿ ಒಂದೇ ರೂಪವನ್ನು ಧರಿಸಿ ಶಚೀದೇವಿಯ ಮಗನಾಗಿ ಅವತರಿಸುತ್ತೇವೆ.

ಆ ರೂಪವನ್ನು ಕೂಡು ನೋಡು ಎಂದು ಹೇಳಿದರು. ಆ ಕ್ಷಣದಲ್ಲಿ ರಾಧಾಕೃಷ್ಣರು ಒಂದಾಗಿ “ಗೌರಾಂಗ”ನ ರೂಪದಲ್ಲಿ ಕಾಣಿಸಿಕೊಂಡರು. ಈ ಒಂದು ವಿಸ್ಮಯಕಾರಿಯಾದ ದೃಶ್ಯವನ್ನು ನೋಡಿ ನಿಂಬಾರ್ಕನು ಭಯಭೀತನಾಗಿ ನಡುಗುತ್ತಾ ಈ ತರಹದ ದಿವ್ಯರೂಪವನ್ನು ನಾನೆಂದೂ ಕಂಡೇ ಇರಲಿಲ್ಲ ಎಂದು ಹೇಳಿದನು.

ಆಗ ಗೌರಾಂಗ ಹೇಳುತ್ತಾನೆ; ನಾನೀಗ ನಿನ್ನ ಮುಂದೆ ಪ್ರಕಟಿಸಿರುವ ರೂಪವನ್ನು ಕೆಲವು ಸಮಯವರೆಗೂ ರಹಸ್ಯವಾಗಿಡು. ಸದ್ಯಕ್ಕೆ ಭಕ್ತಿಯ ಸೇವೆಯನ್ನು, ರಾಧಾಕೃಷ್ಣರ ಲೀಲೆಗಳನ್ನು ಪ್ರಚಾರ ಮಾಡುತ್ತಾ ಹೋಗು. ಅದರಿಂದ ನಾನು ಸಂತುಷ್ಟನಾಗುತ್ತೇನೆ. ನಾನು ಯಾವಾಗ ಈ ಭೂಮಿಯಲ್ಲಿ ಅವತರಿಸುತ್ತೇನೆಯೋ, ಯಾವಾಗ ಬಾಲಲೀಲೆಯನ್ನು ಮುಗಿಸುತ್ತೇನೆಯೋ ಆವಾಗ ನೀನು ಪ್ರಕಟವಾಗುತ್ತೀಯಾ.

ನೀನು ಕಾ‍ಶ್ಮೀರದಲ್ಲಿ ಒಬ್ಬ ದೊಡ್ಡ ಪಂಡಿತನಾಗಿ ಜನಿಸಿ ಭಾರತದಾದ್ಯಂತ ಪ್ರವಾಸ ಮಾಡಿ ನಿನ್ನ ವೈರಿಗಳನ್ನು ವಾದ ವಿವಾದಗಳಿಂದ ಸೋಲಿಸುತ್ತೀಯ. ನೀನು ಕೇಶವ ಕಾಶ್ಮೀರ ಎಂಬ ಹೆಸರಿನಿಂದ ಪ್ರಖ್ಯಾತಗೊಳ್ಳುತ್ತೀಯಾ. ನವದ್ವೀಪದಲ್ಲಿ ನೀನು ಅಲೆದಾಡುವಾಗ ಶ್ರೀ ಮಾಯಪುರಕ್ಕೆ ಬರುತ್ತೀಯ. ನಿನ್ನ ಹೆಸರು ಕೇಳುತ್ತಲೇ ನವದ್ವೀಪದ ಪಂಡಿತರು ಓಡಿ ಹೋಗುತ್ತಾರೆ.

ನೀನು ನಿನ್ನ ಪಾಂಡಿತ್ಯದ ಅಹಂಕಾರದಲ್ಲಿರುವಾಗ ನಾನು ಬಂದು ನಿನ್ನನ್ನು ವಾದದಲ್ಲಿ ಸೋಲಿಸುವ ಆನಂದವನ್ನು ಪಡೆಯುತ್ತೇನೆ. ತಾಯಿ ಮಹಾಸರಸ್ವತಿಯ ಕರುಣೆಯಿಂದ ನೀನು ನನ್ನ ನಿಜವಾದ ರೂಪವನ್ನು ಗುರುತಿಸುತ್ತೀಯ. ನೀನು ನಿನ್ನ ಅಹಂಕಾರವನ್ನು ತ್ಯಜಿಸಿ ನನ್ನಲ್ಲಿ ಭಕ್ತಿಯಿಂದ ಶರಣಾಗುತ್ತೀಯ.

ನಾನು ನಿನಗೆ ಪ್ರೇಮಮಯ ಭಕ್ತಿಯ ಸೇವೆಯ ಪರಮ ಕೊಡುಗೆಯನ್ನು ಕೊಡುತ್ತೇನೆ ಮತ್ತು ನೀನು ಅದನ್ನು ಪ್ರಚಾರ ಮಾಡಲು ಪ್ರಚೋದಿಸುತ್ತೇನೆ. ಈ ರೀತಿಯಾಗಿ ನೀನು ದ್ವೈತಾದ್ವೈತ ತತ್ವವನ್ನು ಹೇಳಿ ನನಗೆ ಸಂತೋಷ ಪಡಿಸುತ್ತೀಯ.

ಸಂಕೀರ್ತನ ಪಂಥವನ್ನು ಪ್ರಾರಂಭಿಸಿದಾಗ ನಾನು ನಿನಗೆ ಪುನಃ ಬೋಧಿಸುತ್ತೇನೆ. ನೀನು ಈ ವಿಚಾರಗಳನ್ನು ರಹಸ್ಯವಾಗಿಟ್ಟುಕೋ. ಮುಂದೆ ನಾನು ಸಂಕೀರ್ತನ ಪಂಥವನ್ನು ಪ್ರಾರಂಭಿಸಿದಾಗ ಪುನಃ ವೈಯಕ್ತಿಕವಾಗಿ ನಿನ್ನ ತತ್ವಜ್ಞಾನ ಮತ್ತು ಶ್ರೀರಾಮಾನುಜ, ಮಧ್ವ ಮತ್ತು ವಿಷ್ಣುಸ್ವಾಮಿಯ ತತ್ವಗಳ ಸಾರವನ್ನು ಪ್ರಚೋದಿಸುತ್ತೇನೆ.”

ಈ ರೀತಿಯಾಗಿ ನಿಂಬಾರ್ಕನಿಗೆ ಬೋಧನೆ ಮಾಡಿ ಪ್ರಭು ಗೌರಾಂಗ ಅಂತರ್ಧಾನನಾದನು. ನಿಂಬಾರ್ಕನು ಭಾವೋದ್ವೇಗದ ಪ್ರೀತಿಯಿಂದ ಕಣ್ಣೀರು ಸುರಿಸಿದನು. ಆನಂತರ ಅವನು ತಮ್ಮ ಗುರುಗಳ ಪಾದಕಮಲಗಳನ್ನು ಭಕ್ತಿಯಿಂದ ಪೂಜಿಸಿ ಅವರಿಂದ ಅನುಮತಿಯನ್ನು ಪಡೆದು ನವದ್ವೀಪದಿಂದ ತೆರಳಿ ಪ್ರಚಾರಕ್ಕೆ ಮುಂದಾದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi