ಏಕಾದಶಿಯ ವಿಶೇಷ ಭಕ್ಷ್ಯಗಳು
ಏಕಾದಶಿಯನ್ನು ಆಚರಿಸುವ ವೇಳೆ ಸ್ವೀಕರಿಸಬಹುದಾದ ಕೆಲವು ಭಕ್ಷ್ಯಗಳನ್ನು ಶ್ರೀಕೃಷ್ಣಭಕ್ತರಿಂದ ಶ್ರೀಮತಿ ಪದ್ಮಿನಿಯವರು ಬರೆದು ಕಳುಹಿಸಿದ್ದಾರೆ. ತಾವೂ ಏಕಾದಶಿ ವೇಳೆ ಮನೆಯಲ್ಲಿ ತಯಾರಿಸಿ ಶ್ರೀ ರಾಧಾಕೃಷ್ಣನಿಗರ್ಪಿಸಿ ಸೇವಿಸಿ ನೋಡಿ…
ವರೈ ಚಿತ್ರಾನ್ನ

ಬೇಕಾಗುವ ಪದಾರ್ಥ :
ವರೈ – 1 ಬಟ್ಟಲು
ತೆಂಗಿನ ತುರಿ – ಅರ್ಧ ಬಟ್ಟಲು
ಅರಿಶಿನ ಪುಡಿ – 1/4 ಟೀ ಚಮಚ
ಶೇಂಗಾ (ಕಡಲೆಕಾಯಿ) ಬೀಜ – 2 ದೊಡ್ಡ ಚಮಚ
ಜೀರಿಗೆ – 1/2 ಟೀ ಚಮಚ
ನಿಂಬೆಹಣ್ಣು – 1 ಹದಗಾತ್ರದ್ದು
ಹಸಿಮೆಣಸಿಕಾಯಿ – 2
ಒಣ ಮೆಣಸಿನಕಾಯಿ – 2
ಖಾದ್ಯ ತೈಲ – 2 ದೊಡ್ಡ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – ಸ್ವಲ್ಪ
ಇಂಗು ಪುಡಿ – 1/2 ಚಿಟಿಕೆ
ಮಾಡುವ ವಿಧಾನ: ಮೊದಲು ವರೈಯನ್ನು ಶುಭ್ರಗೊಳಿಸಿ, ಒಂದು ದಪ್ಪ ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ತುಸು ಪರಿಮಳ ಬರುವವರೆಗೆ ಹುರಿಯಿರಿ. ಅನಂತರ ಒಂದು ಪಾತ್ರೆಯಲ್ಲಿ 2 ಬಟ್ಟಲು ನೀರು ಹಾಕಿ ಅದಕ್ಕೆ ಅರ್ಧ ಚಮಚ ಖಾದ್ಯತೈಲ ಹಾಗೂ ವರೈಗೆ, ಬೇಕಾಗುವಷ್ಟು ಉಪ್ಪು ಹಾಕಿ ಕುದಿಯಲು ಬಿಡಿ.
ನೀರು ಕುದಿಯುತ್ತಿರುವಾಗ ವರೈ ಹಾಕಿ. ತಳ ಹತ್ತದಂತೆ ನೋಡಿಕೊಳ್ಳುತ್ತಿರಿ. ವರೈ ಚೆನ್ನಾಗಿ ಬೆಂದು ನೀರೆಲ್ಲಾ ಇಂಗಿದ ಬಳಿಕ ಒಂದು ದೊಡ್ಡ ತಟ್ಟೆಯಲ್ಲಿ ಹಾಕಿ ಆರಲು ಬಿಡಿ.
ಅನಂತರ ಉಳಿದ ಖಾದ್ಯ ತೈಲವನ್ನು ಬಾಣಲೆಯಲ್ಲಿ ಬಿಸಿ ಮಾಡಿ ಅದರಲ್ಲಿ ಜೀರಿಗೆ, ಕರಿಬೇವು, ಮೆಣಸಿನಕಾಯಿ ಚೂರು, ಇಂಗು ಪುಡಿಯನ್ನು ಹಾಕಿ ಒಗ್ಗರಣೆ ಮಾಡಿ. ಅನಂತರ ಅರಿಶಿನಪುಡಿ, ಕಡಲೇಕಾಯಿ ಬೀಜ ಹಾಕಿ ತುಸು ಪರಿಮಳ ಬರುವವರಿಗೆ ಹುರಿಯಿರಿ.
ಸಣ್ಣ ಉರಿಯಲ್ಲಿಟ್ಟು ತೆಂಗಿನತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಮಾಡಿ. ಕೊನೆಯಲ್ಲಿ ನಿಂಬೆರಸ ಹಿಂಡಿ. ಈ ಚಿತ್ರಾನ್ನದ ಮಸಾಲೆಗೆ ಬೆಂದು ಆರಿದ ವರೈಯನ್ನು ಬೆರಸಿ (ಸ್ವಲ್ಪ ಮುದ್ದೆಗಟ್ಟಿದ್ದರೆ, ಅದನ್ನು ಕೈಯಿಂದ ಉದುರು ಉದುರಾಗಿ ವಿಂಗಡಿಸಿ ಹಾಕಿ) ಚೆನ್ನಾಗಿ ಬಿಸಿ ಮಾಡಿ ಈಗ ವರೈ ಚಿತ್ರಾನ್ನ ಸಿದ್ಧ.
ವರೈ ವಾಂಗೀಬಾತ್

ಬೇಕಾಗುವ ಪದಾರ್ಥ :
ವರೈ – 1 ದೊಡ್ಡ ಬಟ್ಟಲು
ಹಸಿರು ಬದನೆಕಾಯಿ – 200 ಗ್ರಾಂ
ಚಕ್ಕೆ – 1/2 ಇಂಚು
ಅರಿಶಿನ ಪುಡಿ – 2 ಚಿಟಿಕೆ
ಕೆಂಪು ಮೆಣಸಿನಕಾಯಿ ಪುಡಿ – 1/2 ಟೀ ಚಮಚ
ಖಾದ್ಯ ತೈಲ – 3 ದೊಡ್ಡ ಚಮಚ
ಕರಿಬೇವು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಇಂಗು ಪುಡಿ – 1/2 ಚಿಟಿಕೆ
ಮಾಡುವ ವಿಧಾನ : ವರೈ ಚಿತ್ರಾನ್ನ ಮಾಡುವಂತೆ (ಮೇಲೆ ತಿಳಿಸಿದಂತೆ) ವರೈಯನ್ನು ಬೇಯಿಸಿಟ್ಟುಕೊಳ್ಳಿ. ದಪ್ಪ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಜೀರಿಗೆ, ಚಕ್ಕೆ, ಕರಿಬೇವು, ಅರಿಶಿನಪುಡಿ ಹಾಕಿ ಒಗ್ಗರಣೆ ಕೊಡಿ. ಅನಂತರ ಚಿಕ್ಕ ಚಿಕ್ಕದಾಗಿ ಹೆಚ್ಚಿದ ಬದನೆಕಾಯಿ ಚೂರುಗಳನ್ನು ಇದಕ್ಕೆ ಹಾಕಿ ಎಣ್ಣೆಯಲ್ಲಿ ಬಾಡಿಸಿ. ಬದನೆಕಾಯಿ ಚೆನ್ನಾಗಿ ಬೆಂದನಂತರ ಅದಕ್ಕೆ ಅಗತ್ಯವಿರುವ ಉಪ್ಪನ್ನು ಹಾಕಿ. ಜೊತೆಗೆ ಕೆಂಪು ಮೆಣಸಿನಕಾಯಿ ಪುಡಿ ಸೇರಿಸಿ.
ಅನಂತರ ಆರಿದ ವರೈಯನ್ನು ಈ ಮಸಾಲೆಯೊಂದಿಗೆ ಚೆನ್ನಾಗಿ ಬೆರೆಸಿ ಬಿಸಿ ಮಾಡಿ. ವರೈ ವಾಂಗೀಬಾತ್ನಂತೆಯೇ ಪಲಾವ್ ಮಾಡಬಹುದು.
ಅದಕ್ಕೂ ವರೈಯನ್ನು ಮೇಲೆ ತಿಳಿಸಿದಂತೆ ಬೇಯಿಸಿಟ್ಟುಕೊಳ್ಳುವುದು, ಮತ್ತೊಂದು ಪಾತ್ರೆಯಲ್ಲಿ ನಿಮಗಿಷ್ಟವಿರುವ ತರಕಾರಿ ಅಥವಾ ಕ್ಯಾರೆಟ್, ಬೀನ್ಸ್, ಕಾಲಿಫ್ಲವರ್, ಆಲೂಗಡ್ಡೆ, ಎಲ್ಲವನ್ನೂ ತಲಾ 50 ಗ್ರಾಂ ಪ್ರಮಾಣದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಟ್ಟುಕೊಂಡು, ಮಸಾಲೆಗೆ ಅರ್ಧ ಇಂಚು ಚಕ್ಕೆಯೊಂದಿಗೆ, ಒಂದು ಲವಂಗ, ಒಂದು ಏಲಕ್ಕಿಯನ್ನು ಹದವಾಗಿ ಕುಟ್ಟಿ ಹಾಕಿ ಎಣ್ಣೆಯಲ್ಲಿ ಬಾಡಿಸಿ.
ಕೆಂಪು ಮೆಣಸಿನಕಾಯಿ ಪುಡಿ ಜೊತೆಗೆ ಸ್ವಲ್ಪ ರುಬ್ಬಿದ ಪುದಿನ ಸೊಪ್ಪು ಕೊತ್ತಂಬರಿಸೊಪ್ಪು, ಎರಡು ಹಸಿ ಮೆಣಸಿನಕಾಯಿ, ಅರ್ಧ ಇಂಚು ಶುಂಠಿ ಮಸಾಲೆಯನ್ನು ಬೆರೆಸಿ ಎಣ್ಣೆಯಲ್ಲೇ ಹುರಿದುಕೊಳ್ಳಿ, ಅದಕ್ಕೆ ವರೈಯನ್ನು ಬೆರೆಸಿ ಬಿಸಿಮಾಡಿದರೆ ಪಲಾವ್ ತಯಾರಾಗುವುದು.
ಕಡಲೆಕಾಯಿ ಬೀಜದ ಉಸ್ಲಿ

ಬೇಕಾಗುವ ಪದಾರ್ಥ :
ಕಡಲೆಕಾಯಿ ಬೀಜ – 1 ಬಟ್ಟಲು
ಹಸಿ ಮೆಣಸಿನಕಾಯಿ – 4-5
ಹಸಿ ಶುಂಠಿ – ಚಿಕ್ಕ ಚೂರು
ತೆಂಗಿನ ತುರಿ – ಮುಕ್ಕಾಲು ಬಟ್ಟಲು
ಕರಿಬೇವು – ಸ್ವಲ್ಪ
ಇಂಗು ಪುಡಿ – 1 ಚಿಟಿಕೆ
ಖಾದ್ಯ ತೈಲ – 2 ದೊಡ್ಡ ಚಮಚ
ಮಾಡುವ ವಿಧಾನ: ಕಡಲೇಕಾಯಿ ಬೀಜವನ್ನು ಚೆನ್ನಾಗಿ ತೊಳೆದುಕೊಳ್ಳಿ. ಹಸಿಶುಂಠಿ ಮತ್ತು ಹಸಿ ಮೆಣಸಿನಕಾಯಿ ಚಿಕ್ಕ ಚೂರು ಮಾಡಿಡಿ. ಬಾಣಲೆಗೆ ಎಣ್ಣೆ ಹಾಕಿ. ಸ್ವಲ್ಪ ಬಿಸಿಯಾದ ಅನಂತರ ಜೀರಿಗೆ ಕರಿಬೇವಿನ ಒಗ್ಗರಣೆ ಮಾಡಿ.
ಅದರಲ್ಲಿ ಹಸಿ ಶುಂಠಿ ಮತ್ತು ಹಸಿ ಮೆಣಸಿನಕಾಯಿ ಚೂರುಗಳನ್ನು ಹಾಕಿ ಬಾಡಿಸಿ. ಇದಕ್ಕೆ 2 ಬಟ್ಟಲು ನೀರು ಹಾಕಿ ಕುದಿಯಲು ಬಿಡಿ. ಈಗ ಕಡಲೆಕಾಯಿಬೀಜವನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ತಳ ಹತ್ತದಂತೆ ಆಗಾಗ ನೋಡಿಕೊಳ್ಳಿ. ಕಡಲೇಕಾಯಿ ಬೀಜಬೆಂದನಂತರ ತೆಂಗಿನ ತುರಿ, ಇಂಗು ನೀರನ್ನು ಹಾಕಿ ಬಿಸಿ ಮಾಡಿ. ಉಸ್ಲಿ ಸಿದ್ಧ.
ಬೇಕಿದ್ದಲ್ಲಿ ಕಡಲೇಕಾಯಿ ಬೀಜವನ್ನು ಕುಕ್ಕರಿನಲ್ಲಿ ಪ್ರತ್ಯೇಕವಾಗಿ ಉಪ್ಪು ಹಾಕಿ ಬೇಯಿಸಿಟ್ಟುಕೊಂಡು ಅನಂತರ ಒಗ್ಗರಣೆಯೊಂದಿಗೆ ಬೆರೆಸಿ ಬಿಸಿ ಮಾಡಬಹುದು.
ಸಬ್ಬಕ್ಕಿ ಆಲೂರೊಟ್ಟಿ

ಬೇಕಾಗುವ ಪದಾರ್ಥ :
ದೊಡ್ಡ (ನೈಲಾನ್) ಸಬಕ್ಕಿ – 2 ಬಟ್ಟಲು
ಆಲೂಗಡ್ಡೆ (ಚಿಕ್ಕದು) – 2
ಹಸಿ ಮೆಣಸಿನಕಾಯಿ – 2 (ಒಣ ಮೆಣಸಿನಕಾಯಿ ಪುಡಿ)
ಜೀರಿಗೆ – 1/2 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಇಂಗು ಪುಡಿ – 1 ಚಿಟಿಕೆ
ಖಾದ್ಯತೈಲ – ಹುರಿಯಲು ಬೇಕಾಗುವಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ : ಮೊದಲು ಸಬ್ಬಕ್ಕಿಯನ್ನು ತೊಳೆದು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ 4 ಬಟ್ಟಲು ನೀರು ಹಾಕಿ ಚೆನ್ನಾಗಿ 4 ಗಂಟೆಕಾಲ ನೆನಸಿಡಿ. ಅನಂತರ ನೆನೆದ ಸಬ್ಬಕ್ಕಿಯನ್ನು ಬಸಿದು ನೀರೆಲ್ಲ ತೆಗೆದ ಬಳಿಕ, ಒಂದು ಜರಡಿಯಲ್ಲಿ ನೀರು ಇಳಿಯುವಂತೆ ಮತ್ತೊಮ್ಮೆ 10-15 ನಿಮಿಷ ಹಾಕಿ.
ಇದಕ್ಕೆ ಸಿಪ್ಪೆ ತೆಗೆದು ಬೇಯಿಸಿಟ್ಟುಕೊಂಡ ಆಲೂಗಡ್ಡೆಯನ್ನು ಪುಡಿಮಾಡಿ ಚೆನ್ನಾಗಿ ಬೆರಸಿ. ಜೊತೆಗೆ ರುಚಿಗೆ ಉಪ್ಪು, ಇ೦ಗುಪುಡಿ, ಹಸಿಮೆಣಸಿನಕಾಯಿ ಅಥವಾ ಮೆಣಸಿನಕಾಯಿ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹದವಾಗಿ ಹುರಿದ ಜೀರಿಗೆ ಹಾಕಿ ಕಲೆಸಿ.
ಇದು ರೊಟ್ಟಿ ಹಿಟ್ಟಿನ ಹದಕ್ಕೆ ಬರುವಂತೆ ಕಲೆಸಿ. ಗಟ್ಟಿಯಾಗಿದ್ದಲ್ಲಿ ಸ್ವಲ್ಪ ನೀರು ಬೆರೆಸಿ ಹಿಟ್ಟನ್ನು ರೊಟ್ಟಿ ಹಿಟ್ಟಿನಂತೆ ತುಸು ಗಟ್ಟಿಯು ಅಲ್ಲದೇ ತೆಳುವು ಅಲ್ಲದಂತೆ ನೋಡಿಕೊಳ್ಳಿ.
ಚಪಾತಿ ಹುರಿಯುವ ಬಾಣಲೆಗೆ ಎಣ್ಣೆ ಸವರಿ ಈ ರೊಟ್ಟಿ ಹಿಟ್ಟನ್ನು ಅದರ ಮೇಲೆ ತಟ್ಟೆ ಅನಂತರ 1-2 ಚಮಚ ಎಣ್ಣೆ ಹಾಕಿ ಮೇಲ್ಭಾಗ ಬೆಂದನಂತರ ಮಗುಚಿ (ಬೇಕಿದ್ದಲ್ಲಿ ಎಣ್ಣೆ ಹಾಕಿ) ಮತ್ತೊಂದು ಬದಿಯನ್ನು ಹುರಿಯಿರಿ. ಬಿಸಿ ಬಿಸಿ ಸಬ್ಬಕ್ಕಿ ಆಲೂರೊಟ್ಟಿ ಸಿದ್ಧ.
ಇದರೊಂದಿಗೆ ಬೇಕಿದ್ದಲ್ಲಿ ಹಚ್ಚಿಕೊಳ್ಳಲು ಅರ್ಧ ಬಟ್ಟಲು ತೆಂಗಿನ ಕಾಯಿ ತುರಿ, ಹಸಿಮೆಣಸಿನಕಾಯಿ 2-3, ಸ್ವಲ್ಪ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಚಟ್ನಿ ತಯಾರಿಸಿ, ಜೀರಿಗೆ ಒಗ್ಗರಣೆ ಕೊಟ್ಟು ಸೇವಿಸಬಹುದು.






Leave a Reply