ಸಾಲಿಗ್ರಾಮಗಳು

– ಮೂಲ ಲೇಖನ ಆಕರ ಕೃಪೆ: ಶ್ರೀ ಭಕ್ತಿ ಗೌರವ ನರಸಿಂಗಸ್ವಾಮಿ ಗೋಸಾಯಿ ಘಾಟ್, ಶ್ರೀರಂಗಪಟ್ಟಣ

ಪರಮ ವೈಷ್ಣವ ಶಿವನು ಪದ್ಮಪುರಾಣದಲ್ಲಿ ಸಾಲಿಗ್ರಾಮದ ಬಗ್ಗೆ ಹೀಗೆ ಹೇಳಿದ್ದಾನೆ.

ಮಲ್ಲಿಂಗ ಕೋಟಿಭಿ: ದೃಷ್ಟಿ ಯದ್ ಫಲಮ್ ಪೂಜತಿ |

ಸಾಲಿಗ್ರಾಮ ಶಿಲಾ ಯಾಂತು ಏಕಸ್ಯಮ್ ಇವ ತದ್ ಭವೇತ್ ||

ಶಿವಲಿಂಗವನ್ನು ಕೋಟಿಬಾರಿ ನೋಡಿ, ಪೂಜಿಸಿದರೆ ದೊರೆಯುವ ಫಲವು ಸಾಲಿಗ್ರಾಮವನ್ನು ಒಂದು ಬಾರಿ ಪೂಜಿಸುವುದರಿಂದಲೇ ದೊರೆತುಬಿಡುತ್ತದೆ.

ಇದು ಸಾಲಿಗ್ರಾಮದ ಮಹಿಮೆ. ಸಾಲಿಗ್ರಾಮ ಸಾಕ್ಷಾತ್ ಶ್ರೀವಿಷ್ಣುವಿನ ರೂಪ. ಪೂಜೆಗೊಳ್ಳುವ ಸಾಲಿಗ್ರಾಮ ಇರುವ ಸ್ಥಳವೇ ವೈಕುಂಠ. ಸಾಲಿಗ್ರಾಮದ ಪೂಜೆ ಸಹಸ್ರಮಾನಗಳಿಗೂ ಹಿಂದಿನಿಂದ ಪರಂಪರಾನುಗತವಾಗಿ ನಡೆದುಬಂದಿದೆ.

ಸಾಲಿಗ್ರಾಮಗಳೆಂಬ ಪವಿತ್ರ ಶಿಲೆಗಳು ದೊರೆಯುವುದು ಗಂಡಕೀ ನದಿಯಲ್ಲಿ. ಹಿಮಾಲಯದ ತಪ್ಪಲಿನಲ್ಲಿರುವ ಈ ನದಿ ಕಣಿವೆಯ ಪ್ರತಿಯೊಂದು ಕಲ್ಲೂ ಸಾಲಿಗ್ರಾಮವೇ ಎನ್ನುವಷ್ಟು ಹೇರಳವಾಗಿವೆ ಅಲ್ಲಿ. ಧವಳಗಿರಿ ಮತ್ತು ಅನ್ನಪೂರ್ಣ ಪರ್ವತಾವಳಿಗಳ ನಡುವಿನಲ್ಲಿ ಸಾಲಿಗ್ರಾಮವೆಂಬ ಗ್ರಾಮ ಮತ್ತು ಪುಲಹಾಶ್ರಮದ ಉದ್ದಕ್ಕೂ ಗಂಡಕೀ ನದಿಯ ಪಾತ್ರವಿದೆ.

ಈ ಗ್ರಾಮವು ಸಾಲವೃಕ್ಷಗಳಿಂದ ಆವೃತವಾಗಿರುವುದರಿಂದ ಅದಕ್ಕೆ “ಸಾಲಿಗ್ರಾಮ” ಎಂಬ ಹೆಸರು ಬಂದಿತು. ಈ ಪವಿತ್ರ ಶಿಲೆಗಳು ಸಾಲಿಗ್ರಾಮ ಪ್ರದೇಶದ ಗಂಡಕೀ ಪಾತ್ರದಲ್ಲಿ ಮಾತ್ರ ದೊರೆಯುತ್ತವೆಯಾದ್ದರಿಂದ, ಅದಕ್ಕೆ “ಸಾಲಿಗ್ರಾಮಶಿಲಾ” ಎಂಬ ಹೆಸರು.

ನಮ್ಮ ಪರಂಪರೆಯು ಸಾಲಿಗ್ರಾಮ ಶಿಲೆಯನ್ನು ಮಹಾವಿಷ್ಣುವಿನ ನೇರ ಅವತಾರ ಎಂದು ಪೂಜಿಸುತ್ತದೆ. ಸರ್ವಕಾರಣ ಕಾರಣನಾದ ಶ್ರೀ ಕೃಷ್ಣನು ತನ್ನ ಭಕ್ತರ ಪೂಜೆಗೆ ಸುಲಭವಾಗಿ ಒದಗಲು ತಾನೇ ಶಾಪ ಪಡೆದು ಕಲ್ಲಾಗುವ ಲೀಲೆಯನ್ನು ಏರ್ಪಡಿಸಿಕೊಂಡ ಪ್ರಸಂಗವು ಬ್ರಹ್ಮ ವೈವರ್ತ ಪುರಾಣದಲ್ಲಿ ಉಲ್ಲೇಖಗೊಂಡಿದೆ.

ಭಕ್ತರಿಗೆ ಸುಲಭ ಗ್ರಾಹ್ಯವಾಗಿ ಒದಗಿಬಂದ ಭಗವಂತನ ಲೀಲೆಗೆ ಸಹಚಾರಿಗಳಾಗಿ ಆತನ ಭಕ್ತರೂ ತಮ್ಮ ಪಾಲು ಸಲ್ಲಿಸಿದರು. ಭಗವಂತನ ಹ್ಲಾದಿನೀ ಶಕ್ತಿಯಾದ ರಾಧಾರಾಣಿಯು ರಾಜಾ ಧರ್ಮಧ್ವಜ ಮತ್ತು ಮಾಧವಿಯವರ ಪುತ್ರಿಯಾಗಿ ಜನ್ಮತಳೆದಳು. ಸರ್ವಾಂಗ ಸುಂದರಿಯೂ ಮನಮೋಹಕಳೂ ಆಗಿ ಬೆಳೆದ ಅವಳು ತನ್ನ ಗುಣಲಕ್ಷಣಗಳಿಂದ, ಅತುಲ್ಯ ಸೌಂದರ್ಯದಿಂದ ‘ತುಳಸಿ’ ಎಂದು ಕರೆಸಿಕೊಂಡಳು.

ಶ್ರೀ ಅದೈತ ಆಚಾರ್ಯರು ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವಕ್ಕಾಗಿ, ಭಗವಂತನನ್ನು ಸಾಲಿಗ್ರಾಮ ರೂಪದಲ್ಲಿ ತುಳಸಿ ಗಂಗೆಗಳಿಂದ ಪೂಜಿಸಿ ಸಂಪ್ರೀತಗೊಳಿಸಿದ್ದರು. ಶ್ರೀ ಚೈತನ್ಯ ಮಹಾಪ್ರಭುಗಳ ಪ್ರಮುಖ ಶಿಷ್ಯರಾದ ಶ್ರೀಲ ಗೋಪಾಲ ಭಟ್ಟ ಗೋಸ್ವಾಮಿಯವರು 12 ಬಗೆಯ ಸಾಲಿಗ್ರಾಮಗಳನ್ನು ಪೂಜಿಸುತ್ತಿದ್ದರು.

ಅವುಗಳಲ್ಲಿ ದಾಮೋದರ ಶಿಲೆಯಲ್ಲಿ ತ್ರಿಭಂಗ ಸ್ವರೂಪನಾಗಿ ಶ್ರೀ ಕೃಷ್ಣನು ಆವಿರ್ಭವಿಸಿದನು. ಹಿರಿಯ ಭಕ್ತರ ಮಾರ್ಗದರ್ಶನದಂತೆ, ಗೋಪಾಲಭಟ್ಟರು ಅದನ್ನು ‘ರಾಧಾರಮಣದೇವ’ ನೆಂದು ಹೆಸರಿಸಿ, ಪೂಜಿಸಿದರು.

ಮಹಾವಿಷ್ಣುವು ಭೂಮಿಯಲ್ಲಿ ತನ್ನ ಲೀಲೆ ನೋಡಲು ಬಯಸಿದಾಗಲೆಲ್ಲ ತನ್ನ ಅ೦ತರ೦ಗದ ಶಕ್ತಿಯನ್ನು ಜೊತೆಗೆ ಕರೆತರುತ್ತಾನೆ. ಗೋಲೋಕವಾಸಿ ಶ್ರೀ ಕೃಷ್ಣನ ಹ್ಲಾದಿನೀ ಶಕ್ತಿಯು ರಾಧಾರಾಣಿಯ ರೂಪದಲ್ಲಿ ಭಗವಂತನಿಗೆ ಸೇವೆಯನ್ನು ಅರ್ಪಿಸುತ್ತಾಳೆ.

ಲೀಲಾವತರಣದ ಅಪೇಕ್ಷೆಯಿಂದ ಕೃಷ್ಣನು ವಿಷ್ಣು ಅವತಾರ ತಳೆದಾಗ, ರಾಧಾರಾಣಿಯು ಭಾಗ್ಯದೇವತೆ ಲಕ್ಷ್ಮಿಯಾಗಿ ವಿಸ್ತರಣೆಗೊಳ್ಳುತ್ತಾಳೆ. ಹೀಗೆ ಧರ್ಮಧ್ವಜ – ಮಾಧವಿಯರ ಪುತ್ರಿಯಾಗಿ ಅವತರಿಸಿದ ರಾಜಕುಮಾರಿ ಭಾಗ್ಯದೇವತೆ ಲಕ್ಷ್ಮಿಯ ವಿಸ್ತರಣೆಯೇ ಆಗಿದ್ದಳು.

ಪ್ರಾಪ್ತ ವಯಸ್ಕಳಾದ ತುಳಸಿಯ ವಿವಾಹ ಶಂಖಚೂಡನೆಂಬ ದಾನವನೊಡನೆ ನಡೆಯುತ್ತದೆ. ಶಂಖಚೂಡನು ಬ್ರಹ್ಮನಿಂದ, ತುಳಸಿಯನ್ನು ಮದುವೆಯಾಗುವ ಮತ್ತು ಆಕೆ ಎಲ್ಲಿಯವರೆಗೆ ಪ್ರತಿವ್ರತೆಯಾಗಿ ಉಳಿದಿರುತ್ತಾಳೋ ಅಲ್ಲಿಯವರೆಗೂ ಅಜೇಯನಾಗುಳಿಯುವ ವರವನ್ನು ಪಡೆದಿರುತ್ತಾನೆ. ಇದರಿಂದಾಗಿಯೇ ಆ ದಾನವನಿಗೆ ತುಳಸಿಯನ್ನು ವಿವಾಹವಾಗುವ ಭಾಗ್ಯ ಲಭಿಸಿರುತ್ತದೆ.

ಬ್ರಹ್ಮನು ನೀಡಿದ ವರಗಳನ್ನು ದುರುಪಯೋಗಿಸಿಕೊಂಡ ಶಂಖಚೂಡ, ದೇವತೆಗಳ ಮೇಲೆರಗಿ ಹೋಗುತ್ತಾನೆ. ಅವನ ದಾಳಿಯಿಂದ ಭೀತರಾದ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ಶಿವನು ದೇವತೆಗಳ ಸೇನಾಧಿಪತ್ಯ ವಹಿಸಿ ಶಂಖಚೂಡನೊಡನೆ ಕಾದಾಡುತ್ತಾನೆ. ಆದರೆ, ತುಳಸಿಯ ಪಾತಿವ್ರತ್ಯದ ಬಲದಿಂದ ಶಿವನಿಗೆ ಆತನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ.

ದೇವತೆಗಳು ವಿಷ್ಣುವಿನ ರಕ್ಷಣೆ ಕೋರುತ್ತಾರೆ. ಆಗ ವಿಷ್ಣುವು ತುಳಸಿಯ ಪಾವಿತ್ರ್ಯದಿಂದ ಶಂಖಚೂಡ ಹೊಂದಿರುವ ಬಲವನ್ನು ಮುರಿಯುವ ಉಪಾಯ ಹೆಣೆಯುತ್ತಾನೆ. ಅಂತೆಯೇ ತಾನು ಬ್ರಾಹ್ಮಣ ವೇಷ ಧರಿಸಿ, ಶಿವನೊಂದಿಗೆ ಕಾದಾಡುತ್ತಿದ್ದ ಶಂಖಚೂಡನಲ್ಲಿ ಆತನ ಕವಚವನ್ನು ದಾನವಾಗಿ ಬೇಡುತ್ತಾನೆ. ತುಳಸಿಯ ಪಾತಿವ್ರತ್ಯದ ಮೇಲಿನ ಭರವಸೆಯಿಂದ ಶಂಖಚೂಡ ತನ್ನ ಕವಚವನ್ನು ನಿರ್ಲಕ್ಷ್ಯದಿಂದ ಬಿಚ್ಚಿಕೊಡುತ್ತಾನೆ, ಮತ್ತೆ ಶಿವನೊಂದಿಗೆ ಯುದ್ಧದಲ್ಲಿ ತಲ್ಲೀನನಾಗುತ್ತಾನೆ.

ಇತ್ತ, ಶಂಖಚೂಡನ ಕವಚ ಧರಿಸಿದ ವಿಷ್ಣು ಆತನಂತೆಯೇ ರೂಪಧಾರಣೆ ಮಾಡಿಕೊಂಡು ತುಳಸಿಯ ಅಂತಃಪುರಕ್ಕೆ ಬರುತ್ತಾನೆ. ಯುದ್ಧದಲ್ಲಿ ವಿಜಯಿಯಾದ ಪತಿಯು ಮರಳಿದನೆಂದು ಸಂತೋಷದಿಂದ, ಆತನನ್ನು ವಿಶ್ರಮಿಸಿಕೊಳ್ಳುವಂತೆ ತುಳಸಿ ಕೋಣೆಗೆ ಕರೆದೊಯ್ಯುತ್ತಾಳೆ, ರಾತ್ರಿ ಕಳೆಯುತ್ತದೆ.

ನಡುರಾತ್ರಿಯ ಹೊತ್ತಿಗೆ ಶಂಖಚೂಡನನ್ನು ಕೊಲ್ಲುವಲ್ಲಿ ಶಿವನು ಯಶಸ್ವಿಯಾಗುತ್ತಾನೆ. ಮರು ಮುಂಜಾನೆ, ತುಳಸಿಗೆ ತನ್ನ ಜೊತೆಯಲ್ಲಿ ಇರುವಾತ ತನ್ನ ಪತಿಯಲ್ಲದೆ, ವಿಷ್ಣುವೆಂದು ತಿಳಿದು ಹೋಗುತ್ತದೆ. ಅತ್ತ, ಶಂಖಚೂಡನ ಮರಣದ ಸುದ್ದಿಯೂ ಬರುತ್ತದೆ.

ಮನನೊಂದ ತುಳಸಿ, “ನನ್ನ ಪಾತಿವ್ರತ್ಯವನ್ನು ಕೆಡಿಸಿ, ಮೋಸದಿಂದ ನನ್ನ ಪತಿಯನ್ನು ಹತ್ಯೆ ಮಾಡಿರುವಿರಲ್ಲವೇ? ಕಲ್ಲು ಹೃದಯದವರಿಗೆ ಮಾತ್ರ ಇಂತಹ ಕೆಲಸಗಳನ್ನು ಮಾಡಲು ಸಾಧ್ಯ. ನೀನು ಕಲ್ಲಾಗಿಯೇ ಭೂಮಿಯ ಮೇಲೆ ಬಿದ್ದಿರುವಂತೆ ನಾನು ಶಪಿಸುತ್ತೇನೆ’ ಎಂದು ಹೇಳುತ್ತ ವಿಷ್ಣುವಿಗೆ ಶಾಪನೀಡುತ್ತಾಳೆ.

ನಸುನಗುತ್ತ ಶಾಪ ಸ್ವೀಕರಿಸುವ ವಿಷ್ಣುವು ತುಳಸಿಯನ್ನು ಕುರಿತು, ” ನನ್ನನ್ನು ಪತಿಯಾಗಿ ಹೊಂದಬೇಕೆಂದು ನೀನು ಅನೇಕ ಕಠಿಣ ವ್ರತಗಳನ್ನು ಕೈಗೊಂಡಿದ್ದೆ, ನಿನ್ನನ್ನು ಪಡೆಯುವ ಬಯಕೆಯಿಂದ ಶಂಖಚೂಡ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸು ಆಚರಿಸಿದ್ದ.

ಅವನ ಮನೋರಥದಂತೆ ನಿನ್ನನ್ನು ಪತ್ನಿಯನ್ನಾಗಿ ಪಡೆದ. ಈಗ ಶಂಖಚೂಡನ ಜೀವಿತ ಮುಗಿದು, ಭಗವದ್ಧಾಮಕ್ಕೆ ಮರಳಿದ್ದಾನೆ. ಇನ್ನು ನಿನ್ನ ಬಯಕೆಯಂತೆ ನಾನು ನಿನ್ನ ಪತಿಯಾಗುವೆ. ನಿನ್ನ ದೇಹ ಗಂಡಕೀ ನದಿಯಾಗಿ ಭೂಲೋಕದಲ್ಲಿ

ಆವಿರ್ಭವಿಸಲಿ.

ನಿನ್ನ ಕೇಶರಾಶಿಯಿಂದ ಲಕ್ಷೋಪಲಕ್ಷ ಪೊದೆಯಂಥ ಗಿಡಗಳು ಹುಟ್ಟುವವು. ಅವನ್ನು ‘ತುಳಸಿ’ ಎಂದು ಕರೆಯಲಾಗುವುದು. ನಾನು ನಿನ್ನ ಶಾಪದಂತೆ ಅನೇಕಾನೇಕ ಕಲ್ಲುಗಳ ರೂಪದಿಂದ ಗಂಡಕಿ ನದಿಯ ತೀರದಲ್ಲಿ ಹರಡಿಕೊಳ್ಳುತ್ತೇನೆ’ ಎಂದು ಹೇಳುತ್ತ, ಆಕೆಯನ್ನು ಸಂತೈಸುತ್ತಾನೆ.

ಹೀಗೆ ಭೂಮಿಯ ಮೇಲೆ ಸಾಲಿಗ್ರಾಮ ಶಿಲೆಯು ಅವತರಣವಾಗುತ್ತದೆ. ಈ ಲೀಲೆಯಲ್ಲಿ ಶಂಖಚೂಡನಾಗಿ ಭಗವಂತನ ಜೊತೆ ಸಹಕರಿಸಿದವನು, ಕೃಷ್ಣಾವತಾರದ ಸಹಚಾರಿ ‘ಸುದಾಮ’ ಎಂದು ಬ್ರಹ್ಮವೈವರ್ತ ಪುರಾಣ ಹೇಳುತ್ತದೆ. ಅಂದಿನಿಂದ ಮೊದಲ್ಗೊಂಡು ಇಂದಿಗೂ ಕೂಡ ಶ್ರೀ ಕೃಷ್ಣನನ್ನು ಕೃಷ್ಣಾವತಾರಗಳನ್ನು ಪ್ರಮುಖವಾಗಿ ತುಳಸಿಯಿಂದ ಅರ್ಚಿಸುವ ಸಂಪ್ರದಾಯ ಬೆಳೆದುಬಂದಿದೆ.

ಸ್ವತಃ ಶ್ರೀ ವಿಷ್ಣುವೇ, ”ತುಳಸಿ ಇಲ್ಲದೆ ನನಗರ್ಪಿಸುವ ಅಭಿಷೇಕ, ಅರ್ಘ್ಯ, ನೈವೇದ್ಯ, ಇವು ಯಾವುವೂ ಕೂಡ ಅರ್ಪಣೆಯೆನಿಸಿಕೊಳ್ಳುವುದಿಲ್ಲ. ತುಳಸಿ ಇಲ್ಲದೆ ನನಗೆ ಮಾಡುವ ಪೂಜೆ ಪೂಜೆಯೇ ಅಲ್ಲ” ಎಂದು ಹೇಳಿದ್ದಾನೆ. (ಬ್ರಹ್ಮ – ನಾರದೀಯ ಪುರಾಣ)

ಸಾಲಿಗ್ರಾಮ ಬಗೆಗಳು

ಶ್ರೇಷ್ಠ ಪ್ರಮಾಣೀಕೃತ ಕೃತಿಗಳಾದ ಪುರಾಣಗಳಲ್ಲಿ ವಿವಿಧ ಬಗೆಯ ಸಾಲಿಗ್ರಾಮಗಳ ಉಲ್ಲೇಖವಿದೆ. ಶಿಲೆಯ ಮೇಲಿನ ಚಕ್ರದ ಗುರುತು ಮತ್ತು ಅವುಗಳ ವರ್ಣ ವ್ಯತ್ಯಾಸದಿಂದ ಸಾಲಿಗ್ರಾಮಗಳನ್ನು ವರ್ಗೀಕರಿಸಲಾಗಿದೆ. ಅವುಗಳಲ್ಲಿ ಕೆಲವು ಹೀಗಿವೆ:

ವಾಸುದೇವ ಶಿಲೆ : ಇದು ಬಿಳಿಬಣ್ಣದ್ದಾಗಿದ್ದು, ಅತ್ಯಾಕರ್ಷಕವಾಗಿ ತೋರುತ್ತದೆ. ಇದು ಎರಡು ಸಮಗಾತ್ರದ ಚಕ್ರಗಳನ್ನು ಹೊಂದಿರುತ್ತದೆ.

ಸಂಕರ್ಷಣ ಶಿಲೆ : ಇದರ ಬಣ್ಣ ಕೆಂಪು. ಮುಂಭಾಗದಲ್ಲಿ ಒಂದಕ್ಕೊಂದು ಜೋಡಿಸಿಕೊಂಡಂತಿರುವ ಎರಡು ಚಕ್ರಗಳನ್ನು ಸಂಕರ್ಷಣ ಶಿಲೆಯು ಹೊಂದಿರುತ್ತದೆ.

ಪ್ರದ್ಯುಮ್ನ ಶಿಲೆ : ಇದೊಂದು ಹಳದಿಬಣ್ಣದ ಶಿಲೆ. ಸಣ್ಣ ಎರಡು ಚಕ್ರಗಳು, ಚಿಕ್ಕ ಚಿಕ್ಕ ರಂಧ್ರಗಳಿರುವ ದೊಡ್ಡ ಬಾಯಿ – ಈ ಶಿಲೆಯ ವಿಶೇಷತೆ.

ಅನಿರುದ್ಧ ಶಿಲೆ : ಇದು ನೋಡುಗರ ಮನಸೂರೆಗೊಳ್ಳುವಷ್ಟು ಮೋಹಕವಾದ ಶಿಲೆ. ಇದರ ಬಣ್ಣ ನೀಲಿಯಾಗಿದ್ದು, ದುಂಡನೆಯ ಆಕಾರ ಹೊಂದಿರುತ್ತದೆ. ಮುಂಭಾಗದಲ್ಲಿ ಮೂರು ಗೆರೆಗಳು (ತಿಲಕ), ಹಿಂಭಾಗದಲ್ಲಿ ಕಮಲದ ಹೂವಿನ ಮುದ್ರೆಯೂ ಇರುತ್ತದೆ.

ನಾರಾಯಣ ಶಿಲೆ : ಇದರ ಬಣ್ಣ ಕಡುಗಪ್ಪು. ಮೇಲ್ಭಾಗದಲ್ಲಿ ಒಂದು ಚಕ್ರವಿರುತ್ತದೆ.

ನರಸಿಂಹ ಶಿಲೆ : ಇದೂ ಕೂಡ ಕಪ್ಪು ಬಣ್ಣದ್ದು. ಅಗಲವಾದ ಬಾಯಿ ಇದ್ದು, ಅದರೊಳಗೆ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಎರಡು ಚಕ್ರಗಳಿರುತ್ತವೆ.

ಪುರಾಣದಲ್ಲಿ ನೀಡಿರುವ ವಿವರಣೆಗಳನ್ನು ಅನುಸರಿಸಿ ಭಕ್ತರು ನೂರಾರು ವಿವಿಧ ರೀತಿಯ ಸಾಲಿಗ್ರಾಮ ಶಿಲೆಗಳನ್ನು ಗುರುತಿಸಬಹುದಾಗಿದೆ. ಇಂತಹಾ ಸಾಲಿಗ್ರಾಮಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತವೆ. ನಿರ್ದಿಷ್ಟ ಸಾಲಿಗ್ರಾಮವನ್ನು ಪೂಜಿಸುವುದರಿಂದ ನಿರ್ದಿಷ್ಟ ಫಲಗಳನ್ನು ಪಡೆಯಬಹುದಾಗಿದೆ.

ಉದಾಹರಣೆಗೆ ನರಸಿಂಹ ಸಾಲಿಗ್ರಾಮವನ್ನು ಪೂಜಿಸುವುದರಿಂದ ಯುದ್ಧದಲ್ಲಿ ಜಯ ಲಭಿಸುತ್ತದೆ ಮತ್ತು ಮುಕ್ತಿ ಸಿದ್ಧಿಸುತ್ತದೆ. ವರಾಹ ಸಾಲಿಗ್ರಾಮವನ್ನು ಪೂಜಿಸುವುದರಿಂದ ಭೌತಿಕ ಸುಖಗಳನ್ನೂ ಸಾವಿನನಂತರ ಮೋಕ್ಷವನ್ನೂ ಪಡೆಯಬಹುದಾಗಿದೆ. ಲಕ್ಷ್ಮೀನಾರಾಯಣ ಶಿಲೆಯನ್ನು ಪೂಜಿಸುವುದರಿಂದ ಸ್ವರ್ಗದ ಆಧಿಪತ್ಯ ಲಭಿಸುತ್ತದೆ.

ವೈದಿಕ ಸಂಸ್ಕೃತಿಯ ಪ್ರಥಮ ಗುರಿ ‘ಧರ್ಮ’ ವಾಗಿದೆ. ಅನಂತರದ ಮೂರು ಹಂತಗಳು – ಅರ್ಥ, ಕಾಮ, ಮತ್ತು ಮೋಕ್ಷ. ಸಾಲಿಗ್ರಾಮ ಶಿಲೆಯ ಆರಾಧನೆಯನ್ನು ಧಾರ್ಮಿಕ ಕಾರಣಗಳಿಗಾಗಿಯೇ ನಿರ್ದೇಶಿಸಿದ್ದರೂ ಸಾಮಾನ್ಯವಾಗಿ ಜನರು ಅವುಗಳನ್ನು ಸಂಪದಭಿವೃದ್ಧಿಗಾಗಿ ಇಲ್ಲವೇ ಭೌತಿಕ ಸುಖ ಲಾಭಕ್ಕಾಗಿ ಪೂಜಿಸುತ್ತಾರೆ.

ಈ ಬಗೆಯ ಪೂಜಕರನ್ನು “ಕರ್ಮ ಕಾಂಡೀ”ಯರು ಎನ್ನುವರು. ಆದ್ದರಿಂದ ನಿರ್ದಿಷ್ಟ ಫಲಗಳಿಗಾಗಿ ಸಾಲಿಗ್ರಾಮ ಶಿಲೆಯನ್ನು ಪೂಜಿಸುವುದು ಒಳ್ಳೆಯ ಲಕ್ಷಣವಲ್ಲ.

ಸಾಮಾನ್ಯವಾಗಿ ಎಲ್ಲ ಪ೦ಥದ ಅನುಯಾಯಿಗಳೂ ಸಾಲಿಗ್ರಾಮವನ್ನು ಮೋಕ್ಷಾರ್ಥವಾಗಿ ಪೂಜಿಸುತ್ತಾರೆ ‘ಹೃಷಿಕೇಣ ಹೃಷಿಕೇಶ ಸೇವನಮ್। ಭಕ್ತಿರ್‌‌ ಉಚ್ಯತೇ’ – ಪ್ರತಿಯೊಂದು ಪೂಜೆಯೂ ಇಂದ್ರಿಯಗಳ ಒಡೆಯನಾದ ಕೃಷ್ಣನನ್ನು ಸಂತೋಷ ಪಡಿಸುವುದಕ್ಕೆ ಆಗಿದೆ” ಎಂಬುದು ವೈಷ್ಣವರ ಆದರ್ಶ. ಅದರಂತೆ ಶುದ್ಧ ಭಕ್ತರು ಮಾತ್ರ ಭೌತಿಕ ಸುಖ, ಮೋಕ್ಷ ಸಾಧನೆ, ಈ ಯಾವ ಅಪೇಕ್ಷೆಯನ್ನೂ ಹೊಂದದೆ, ಅಪರಿಮಿತ ಪ್ರೇಮದಿ೦ದ ಶಿಲೆಯನ್ನು ಆರಾಧಿಸುತ್ತಾರೆ.

ಭೂಶಾಸ್ತ್ರಜ್ಞರು, ಗಂಡಕೀತೀರದಲ್ಲಿ ಮಾತ್ರ ಕಂಡುಬರುವ ಸಾಲಿಗ್ರಾಮ ಶಿಲೆಗಳ ಬಗ್ಗೆ ತಮ್ಮದೇ ವಾದ ಮಂಡಿಸುತ್ತಾರೆ. ಅವರ ಪ್ರಕಾರ, ಸಾಲಿಗ್ರಾಮ ಶಿಲೆಗಳು, ಪೂರ್ವೇತಿಹಾಸ ಕಾಲದಲ್ಲಿ ಜೀವಿಸಿದ್ದ ಒಂದು ಬಗೆಯ ಕೀಟಗಳ ಪಳೆಯುಳಿಕೆಗಳು, ಈ ಕೀಟಗಳ ಬಗ್ಗೆ ಭವಿಷ್ಯ ಪುರಾಣದಲ್ಲಿ ವಿವರಗಳಿವೆ.

ತುಳಸೀದೇವಿಯು ವಿಷ್ಣುವಿಗೆ ‘ಕಲ್ಲಾಗು’ ಎಂದು ಶಾಪವಿತ್ತಾಗ, ಸಂತೋಷದಿಂದ ಸ್ವೀಕರಿಸಿದ ವಿಷ್ಣು, “ನಿನ್ನ ಶಾಪವನ್ನು ಈಡೇರಿಸುವ ಸಲುವಾಗಿ ನಾನು ಸಾಲಿಗ್ರಾಮ ಶಿಲೆಯಾಗುತ್ತೇನೆ ಮತ್ತು ಗಂಡಕೀ ನದಿಯ ತೀರದಲ್ಲಿ ನೆಲೆಸುತ್ತೇನೆ. ಆ ಸ್ಥಳದಲ್ಲಿ ವಾಸಿಸುವ ಲಕ್ಷಾಂತರ ವಜ್ರಕೀಟ ತಮ್ಮ ಚೂಪಾದ ಹಲ್ಲುಗಳಿಂದ ಶಿಲೆಗಳ ಮೇಲೆ ನನ್ನ ಚಿಹ್ನೆಗಳಾದ ಚಕ್ರ ಇತ್ಯಾದಿಗಳನ್ನು ಕೆತ್ತುತ್ತವೆ ಎಂದನು.

ಹೀಗೆ ವಿಜ್ಞಾನಿಗಳು ಅದನ್ನು ‘ಕೀಟ’ಪಳೆಯುಳಿಕೆ ಎಂದರೂ ಸರಿಯೇ. ಅವರ ಗ್ರಹಣ ಸಾಮರ್ಥ್ಯದ ಮೇಲೆ ಅವರ ಅರಿವು ನಿಂತಿರುತ್ತದೆ. ಸ್ವತಃ ಭಗವಂತನೇ ವಜ್ರಕೀಟಗಳ ಬಗ್ಗೆ ಹೇಳಿದ್ದಾನೆಂದರೆ, ಅದು ಆಗಿರಲೇಬೇಕಲ್ಲವೆ !

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi