ಶ್ರೀಲ ಪ್ರಭುಪಾದರು ದಿನಾಂಕ 26ನೇ ಮಾರ್ಚ್, 1975ರಲ್ಲಿ ಮಾಯಾಪುರ, ಭಾರತದಲ್ಲಿ ನೀಡಿದ ಪ್ರವಚನ.
– ಅನುವಾದ – ಡಾ|| ಕೆ.ವೈ. ಬಾಲರಾಜ್
ಈ ಯುಗದಲ್ಲಿ ಜನರು ದುಃಖವನ್ನು ಸುಖವಾಗಿ ಸ್ವೀಕರಿಸಿದ್ದಾರೆ. ಆದರೆ ಪ್ರಭು ಚೈತನ್ಯ ಮತ್ತು ಪ್ರಭು ನಿತ್ಯಾನಂದರು ಅಜ್ಞಾನದ ಅಂಧಕಾರವನ್ನು ಓಡಿಸಲು ಬಂದಿದ್ದಾರೆ.

ವನ್ದೇ ಶ್ರೀ ಕೃಷ್ಣ ಚೈತನ್ಯ ನಿತ್ಯಾನನ್ದೌ ಸಹೋದಿತೌ|
ಗೌಡೋದಯೇ ಪುಷ್ಪವನ್ತೌ ಚಿತ್ರಾಶನ್ – ದೌ-ತಮೋ-ನುದೌ ||
‘ಸೂರ್ಯಚಂದ್ರರಂತೆ ಇರುವ ಶ್ರೀ ಕೃಷ್ಣ ಚೈತನ್ಯ ಮತ್ತು ಪ್ರಭು ನಿತ್ಯಾನಂದರಿಗೆ ನಾನು ಗೌರವಪೂರ್ವಕವಾಗಿ ನಮಿಸುತ್ತೇನೆ. ಅವರು ಅಜ್ಞಾನದ ಅಂಧಕಾರವನ್ನು ಚದುರಿಸಲು ಮತ್ತು ಎಲ್ಲರಿಗೂ ಅದ್ಭುತವಾದ ರೀತಿಯಲ್ಲಿ ಆಶೀರ್ವಾದ ಮಾಡಲು ಗೌಡವೆಂಬ ಪ್ರದೇಶದ ದಿಗಂತದಲ್ಲಿ ಏಕಕಾಲದಲ್ಲಿ ಹುಟ್ಟಿದರು.” (ಶ್ರೀ ಚೈತನ್ಯ ಚರಿತಾಮೃತ, ಆದಿಲೀಲಾ 1.2)
ಶ್ರೀ ಕೃಷ್ಣ ಚೈತನ್ಯರಿಗೆ ಅನೇಕ ವಿಸ್ತರಣೆಗಳಿವೆ ಮತ್ತು ಪ್ರಭು ನಿತ್ಯಾನಂದರು ಮೊದಲನೆಯವರು, ಅವರು ಕೃಷ್ಣನ ಸಹೋದರ ಬಲರಾಮರಾಗಿದ್ದಾರೆ. ಕೃಷ್ಣಪ್ರಜ್ಞೆಯ ವಿಜ್ಞಾನವನ್ನು ತಿಳಿದಿರುವಂಥ ಶ್ರೇಷ್ಠ ಋಷಿಗಳಾದ ಮಹಾಜನರಿಂದ ಇವೆಲ್ಲವನ್ನೂ ತಿಳಿದುಕೊಳ್ಳಬೇಕು.
ನರೋತ್ತಮದಾಸ ಠಾಕುರ ಮಹಾಜನ ಹೇಳುತ್ತಾರೆ. ವ್ರಜೇಂದ್ರ- ನಂದನ ಯೈ, ಶಚೀ-ಸೂತ ಹೋಯ್‌ಲೋ ಸೇಇ, ಬಲರಾಮ ಹೋಯ್‌ಲೋ ನಿತಾಯ್: “ಶ್ರೀ ಚೈತನ್ಯ ಮಹಾಪ್ರಭುಗಳು ನಂದ ಮಹಾರಾಜನ ಮಗನಾದ ಪ್ರಭು ಶ್ರೀ ಕೃಷ್ಣನಾಗಿದ್ದಾರೆ ಮತ್ತು ನಿತ್ಯಾನಂದ ಪ್ರಭು ಬಲರಾಮರಾಗಿದ್ದಾರೆ.”
ಕೆಲವು ಸಲ ಮೂರ್ಖ ಜನರು ಶ್ರೀ ನಿತ್ಯಾನಂದ ಪ್ರಭುಗಳು ಶ್ರೀಮತಿ ರಾಧಾರಾಣಿಯ ವಿಸ್ತರಣೆ ಎಂದು ಹೇಳುತ್ತಾರೆ. ಇದು ಸತ್ಯವಲ್ಲ. ಶ್ರೀ ನಿತ್ಯಾನಂದರು ಬಲರಾಮರಾಗಿದ್ದಾರೆ. ನಾವು ಇದನ್ನು ಮಹಾಜನರಿಂದ ತಿಳಿದುಕೊಳ್ಳಬೇಕು. ನಮ್ಮದೇ ಸ್ವಂತ ವಿಚಾರಗಳನ್ನು ಸೃಷ್ಟಿಸುವುದಲ್ಲ. ಅದು ದೂಷಣೆಯಾಗುತ್ತದೆ.
ಮಹಾಜನನಾದವನು ಪೂರ್ವ ಮಹಾಜನರನ್ನು ಅನುಸರಿಸುವಂಥವನಾಗಿರುತ್ತಾನೆ. ಇದು ಪದ್ಧತಿ. ಶ್ರೀ ಚೈತನ್ಯ ಮಹಾಪ್ರಭು ಕಠಿಣವಾಗಿ ಈ ಸಿದ್ಧಾಂತವನ್ನು ಅನುಸರಿಸಿದರು ಮತ್ತು ಶ್ರೀ ಕೃಷ್ಣ ಕೂಡ ಭಗವದ್ಗೀತೆಯಲ್ಲಿ ಇದನ್ನು ಪ್ರತಿಪಾದಿಸಿದ್ದಾನೆ: ಏವಮ್ ಪರಂಪರಾ – ಪ್ರಾಪ್ತಮ್. ನಾವು ಗುರುಶಿಷ್ಯಪರಂಪರೆಯ ಮೂಲಕ ಈ ಜ್ಞಾನವನ್ನು ಪಡೆಯಬೇಕು.
ನಾವೇ ಅದನ್ನು ಸೃಷ್ಟಿಸುವುದಲ್ಲ. ಆಧ್ಯಾತ್ಮಿಕ ಸಿದ್ಧಾಂತಗಳು ಎನಿಸಿಕೊಂಡಿರುವುದರ ಕಟ್ಟು ಕಥೆಗಳು ಭಾರತದ ಆಧ್ಯಾತ್ಮಿಕ ಜೀವನವನ್ನೇ ಸಾಯಿಸಿವೆ. ‘ನೀವು ನಿಮ್ಮದಾರಿಯಲ್ಲಿ ಯೋಚಿಸಬಹುದು ಮತ್ತು ನಾನು ನನ್ನ ರೀತಿಯಲ್ಲಿ ಯೋಚಿಸಬಹುದು” – ಈ ವಿಚಾರ ವೈಜ್ಞಾನಿಕವಲ್ಲ. ಒಂದು ವೇಳೆ 2ಕ್ಕೆ 2 ಕೂಡಿದರೆ 3 ಅಥವಾ 5 ಎ೦ದು ಹೇಳಿದರೆ ಅದನ್ನು ಸ್ವೀಕರಿಸಲಾಗುತ್ತದೆಯೇ? ಇಲ್ಲ. 2+2=4 ಆಗುತ್ತದೆ ಮತ್ತು ನೀವು ಇದನ್ನು ಬೇರೆ ರೀತಿಯಾಗಿ ಹೇಳಲು ಸಾಧ್ಯವಿಲ್ಲ.
ಆದ್ದರಿಂದ ಬಲರಾಮರು ಕೃಷ್ಣನನ್ನು ಪ್ರತಿಪಾದಿಸಿದ್ದಾರೆ, ಅವರೇ ಮೂಲ ಗುರು. ಯಾವುದೇ ಸದ್ಗುರು ಬಲರಾಮ ಅಥವಾ ನಿತ್ಯಾನಂದರ ಪ್ರತಿನಿಧಿಯಾಗಿರಬೇಕು. ಬಲರಾಮ ಕೃಷ್ಣನನ್ನು ಪ್ರತಿಪಾದಿಸುತ್ತಿದ್ದರಿಂದ ಅವರನ್ನು ಪ್ರಕಾಶವೆಂದು ಕರೆಯಲಾಗುತ್ತದೆ.
ಸೂರ್ಯ ಪ್ರಕಾಶಿಸಿದರೆ ನೀವು ಎಲ್ಲವನ್ನೂ ಸ್ಪಷ್ಟವಾಗಿ ಕಾಣಬಹುದು. ಅದನ್ನು ಪ್ರಕಾಶವೆ೦ದು ಕರೆಯಲಾಗುತ್ತದೆ. ರಾತ್ರಿ ಅಂಧಕಾರದಲ್ಲಿ ಎಲ್ಲವೂ ಮುಚ್ಚಿಹೋಗಿರುತ್ತದೆ ಮತ್ತು ನಮಗೆ ಏನೂ ಕಾಣುವುದಿಲ್ಲ. ಆದರೆ ಹಗಲಿನಲ್ಲಿ ಪ್ರಕಾಶವಿದ್ದಾಗ ನಾವು ಎಲ್ಲವನ್ನು ನೋಡಬಹುದು.
ಆದ್ದರಿಂದ ನಿತ್ಯಾನಂದ ಪ್ರಭು ಬಲರಾಮ, ಪ್ರಕಾಶತತ್ತ್ವರಾಗಿದ್ದಾರೆ. ಹೇಗೆ ಬಲರಾಮರು ಕೃಷ್ಣನನ್ನು ಪ್ರತಿನಿಧಿಸುತ್ತಿದ್ದರೋ, ಹಾಗೆ ನಿತ್ಯಾನಂದರು ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣ ಚೈತನ್ಯರನ್ನು ಪ್ರತಿನಿಧಿಸುತ್ತಿದ್ದಾರೆ.

ನಿತ್ಯಾನಂದ ಪ್ರಭುಗಳು ಬಂಗಾಳದಲ್ಲಿ ಬೋಧಿಸುತ್ತಿರುವಾಗ ಮೊದಲಿಗೆ ಅವರು ಜಗಾಯ್ ಮತ್ತು ಮಾಧಾಯ್‌ರನ್ನು ಉದ್ದರಿಸಿದರು. ಅವರನ್ನು ಉದ್ಧರಿಸುವ ಮೂಲಕ ಅವರು ಶ್ರೀಕೃಷ್ಣ ಚೈತನ್ಯ ಮಹಾಪ್ರಭುವಿಗೆ ಹೇಗೆ ಸೇವೆ ಮಾಡುವುದು ಎಂದು ತೋರಿಸಿಕೊಟ್ಟರು.
ಪ್ರಭು ಚೈತನ್ಯರು ಸ್ವತಃ ಕೃಷ್ಣರಾಗಿದ್ದಾರೆ;ಶ್ರೀ ಕೃಷ್ಣ ಚೈತನ್ಯ ರಾಧಾ – ಕೃಷ್ಣ ನಹೇ ಅನ್ಯಃ ”ಶ್ರೀ ಚೈತನ್ಯರು ರಾಧಾ ಮತ್ತು ಕೃಷ್ಣನ ಸಂಯುಕ್ತರಾಗಿದ್ದಾರೆ.” ಮತ್ತು ನಿತ್ಯಾನಂದ ಪ್ರಭುಗಳು ಪ್ರಭು ಚೈತನ್ಯರನ್ನು ಪ್ರತಿನಿಧಿಸುತ್ತಿದ್ದಾರೆ.
ಹೇಗೆ ಒಬ್ಬ ವ್ಯಕ್ತಿ ಶ್ರೀ ಕೃಷ್ಣ ಚೈತನ್ಯ ಮಹಾಪ್ರಭುವನ್ನು ಪ್ರತಿನಿಧಿಸುವುದು? ಸ್ವಂತ ಉದಾಹರಣೆಯಿಂದ ನಿತ್ಯಾನಂದ ಪ್ರಭು ನಮಗೆ ಪಾಠವನ್ನು ಕೊಟ್ಟಿದ್ದಾರೆ. ಚೈತನ್ಯ ಮಹಾಪ್ರಭುಗಳು ನಿತ್ಯಾನಂದ ಪ್ರಭು ಮತ್ತು ಹರಿದಾಸ ಠಾಕುರರನ್ನು ನವದ್ವೀಪದ ಬೀದಿ ಬೀದಿಗೆ, ಮನೆ ಮನೆಗೆ ಬೋಧಿಸಲು ಕಳುಹಿಸುತ್ತಿದ್ದರು.
ಒಂದು ಸಲ ಅವರು ಬೀದಿಯಲ್ಲಿ ಒಂದು ದೊಡ್ಡ ಗುಂಪು ನೋಡಿದರು ಮತ್ತು ನಿತ್ಯಾನಂದ ಪ್ರಭು ಜನರಿಗೆ ‘ಏಕೆ ಇಷ್ಟೊಂದು ಜನ ಸೇರಿಕೊಂಡಿದ್ದಾರೆ?” ಎಂದು ಕೇಳಿದರು. ಅವರಿಗೆ ಅಲ್ಲಿ ಏನೋ ತೊಂದರೆ ಉಂಟು ಮಾಡಿದ ಜಗಾಯ್ ಮತ್ತು ಮಾಧಾಯ್ ಎಂಬ ಇಬ್ಬರೂ ಗೂಂಡಾಗಳ ಬಗ್ಗೆ ಗೊತ್ತಾಯಿತು.
ಆ ಗೂಂಡಾಗಳು ನಿತ್ಯಾನಂದ ಪ್ರಭುವಿನ ಮೇಲೆ ಆಕ್ರಮಣ ಮಾಡಿದರೂ ಕೂಡ ನಿತ್ಯಾನಂದ ಪ್ರಭುಗಳು ಅವರಿಗೆ ಕೃಷ್ಣಪ್ರಜ್ಞೆಯನ್ನು ಬೋಧಿಸಿದರು ಮತ್ತು ಅವರನ್ನು ಉದ್ಧರಿಸಿದರು. ಇದೇ ಉತ್ತಮವಾದ ಮಾರ್ಗ. ಕೃಷ್ಣಪ್ರಜ್ಞೆಯನ್ನು ಬೋಧಿಸುತ್ತ ಶ್ರೀ ಕೃಷ್ಣ ಚೈತನ್ಯ ಮಹಾಪ್ರಭುವಿಗೆ ಸೇವೆ ಮಾಡುವುದು.
ಗೂಂಡಾಗಳ ಕೆಲಸ ತೊಂದರೆಯನ್ನು ಉಂಟುಮಾಡುವುದು. ವಿಶೇಷವಾಗಿ ಬಂಗಾಳದಲ್ಲಿ ಈಗಲೂ ತೊಂದರೆಯನ್ನು ಉಂಟುಮಾಡುವ ಅನೇಕ ಗೂಂಡಾಗಳಿದ್ದಾರೆ. ಸಾಕಷ್ಟು ಕೃಷ್ಣ ಪ್ರಜ್ಞೆಯ ಬೋಧನೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ನಿತ್ಯಾನಂದ ಪ್ರಭುಗಳಿಗೆ ಬೋಧಿಸಲು ಅವಕಾಶ ಕೊಡಲಾಗುತ್ತಿಲ್ಲ. ಅವರು ಕೃಷ್ಣಪ್ರಜ್ಞೆಯನ್ನು ಬೋಧಿಸಲು ಆಸಕ್ತರಿದ್ದರು, ಆದರೆ ಅವರಿಗೊಂದು ಅವಕಾಶ ಕೊಡಲಾಗುತ್ತಿಲ್ಲ.
ಬಂಗಾಳದಲ್ಲಿ ಒಂದು ಕುಟುಂಬವಿದೆ. ಅವರು ನಿತ್ಯಾನಂದ ಪ್ರಭುಗಳ ವಂಶಜರು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ಹಕ್ಕುಗಳಿಗೆ ಸಂಬಂಧಪಟ್ಟಂತೆ ಒಂದು ವಿವಾದವಿದೆ. ಈ ವಿವಾದವನ್ನು ಪಕ್ಕಕ್ಕಿಟ್ಟು ನೋಡಿ, ಇವರು ನಿತ್ಯಾನಂದ ಪ್ರಭುವಿನ ವಂಶಜರೇ ಆಗಿದ್ದರೆ ಅವರು ನಿತ್ಯಾನಂದ ಪ್ರಭುಗಳ ರೀತಿಯಲ್ಲಿಯೇ ಕಾರ್ಯ ಮಾಡಬೇಕಿತ್ತು.
ಏನು ಆ ಕಾರ್ಯ? ಅದನ್ನು ನರೋತ್ತಮದಾಸ ಠಾಕುರರು ವಿವರಿಸಿದ್ದಾರೆ. ದೀನ – ಹೀನ ಯತ ಚಿಲೋ, ಹರಿ – ನಾಮೇ ಉದ್ಧಾರಿಲೋ. ಅವರ ಕೆಲಸವೇನೆಂದರೆ ನಿತ್ಯಾನಂದ ಪ್ರಭುಗಳು `ಚೈತನ್ಯ ಮಹಾಪ್ರಭುಗಳೊಂದಿಗೆ ಕೂಡಿ ಏನು ಮಾಡಿದರೋ ಅವರು ಕೂಡ ಅದನ್ನೇ ಮಾಡಬೇಕು. ಮತ್ತು ಎಲ್ಲ ಪತಿತಾತ್ಮರಿಗೆ ಹರೇಕೃಷ್ಣ ವನ್ನು ಕಲಿಸಿ ಉದ್ಧಾರ ಮಾಡುವುದಾಗಿತ್ತು.
ಶ್ರೀ ಕೃಷ್ಣಚೈತನ್ಯರು ಮತ್ತು ನಿತ್ಯಾನಂದರು ಪ್ರಭು ಶ್ರೀಕೃಷ್ಣ ಮತ್ತು ಬಲರಾಮರು ಇದ್ದ ಹಾಗೆ – ಕೃಷ್ಣನು ಅವತಾರ ತಾಳಿದಾಗ ಈ ಇಬ್ಬರೂ ಸಹೋದರರು ಗೋಪಾಲಕರು, ಗೋಪಿಯರ ಸ್ನೇಹಿತರಾಗಿ ಮತ್ತು ಯಶೋದ ಹಾಗೂ ನಂದ ಮಹಾರಾಜನ ಮಕ್ಕಳಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವೃಂದಾವನ ಹಳ್ಳಿಯಲ್ಲಿಯೇ ಅವರ ಜೀವನವಾಗಿತ್ತು.
ಅನಂತರ ಅವರು ಮಥುರಾಗೆ ಹೋದ ಬಳಿಕ ಕಂಸ ಮತ್ತು ಮಲ್ಲರನ್ನು ಕೊಂದರು. ಮತ್ತು ಅವರು ದ್ವಾರಕೆಗೆ ಹೋದಾಗ ಅನೇಕ ಅಸುರರೊಂದಿಗೆ ಹೋರಾಡಬೇಕಾಯಿತು. ಕೃಷ್ಣ- ಬಲರಾಮರು ವೃಂದಾವನದಲ್ಲಿ 16 ವರುಷದ ತನಕ ತಮ್ಮ ಬಾಲ್ಯಜೀವನವನ್ನು ಸಂತೋಷದಿಂದ ಕಳೆದರು.

ಅಂದರೆ ತಮ್ಮ ಭಕ್ತರನ್ನು ಹುರಿದುಂಬಿಸಲು ಈ ಲೀಲೆಗಳನ್ನು ಅಭಿನಯಿಸಿದರು. (ಪರಿತ್ರಾಣಾಯ ಸಾಧೂನಾಮ್). ಭಕ್ತರು ಕೃಷ್ಣ ಮತ್ತು ಬಲರಾಮ ಮತ್ತು ಅವರ ಸಂಗಡಿಗರನ್ನು ಸದಾ ನೋಡಲು ಕಾತರರಾಗಿರುತ್ತಾರೆ. ಯಾವಾಗ ಅವರಿಂದ ಬೇರ್ಪಡುತ್ತಾರೋ ಆಗ ಅವರು ಬಹಳ ವ್ಯಥೆಪಡುತ್ತಾರೆ.
ಅವರ ಜೀವನವನ್ನು ಪುನರುಜ್ಜೀವನಗೊಳಿಸಲು ಕೃಷ್ಣ ಮತ್ತು ಬಲರಾಮರು ತಮ್ಮ ಬಾಲ್ಯದಿನಗಳನ್ನು ವೃಂದಾವನದಲ್ಲಿ ಕಳೆದರು. ಇದರೊಂದಿಗೆ ವೃಂದಾವನದ ಹೊರಗೆ, ಮಥುರಾ ಹಾಗೂ ದ್ವಾರಕಾ ಮತ್ತು ಇನ್ನಿತರ ಅನೇಕ ಸ್ಥಳಗಳಲ್ಲಿ ಅಸುರರನ್ನು ಕೊಲ್ಲುವುದು ಅವರ ಕೆಲಸವಾಗಿತ್ತು.
ಕೃಷ್ಣ ಮತ್ತು ಬಲರಾಮರಿಗೆ ಎರಡು ಕಾರ್ಯಗಳಿದ್ದವು – ಭಕ್ತರನ್ನು ಸಮಾಧಾನಗೊಳಿಸುವುದು ಮತ್ತು ಅಸುರರನ್ನು ಕೊಲ್ಲುವುದು. ಕೃಷ್ಣ ಮತ್ತು ಬಲರಾಮ ಪರಮಸತ್ಯವಾಗಿರುವುದರಿಂದ ಅವರು ಪ್ರೀತಿಸುವುದರಲ್ಲಿ ಮತ್ತು ಅಸುರರನ್ನು ಕೊಲ್ಲುವುದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಯಾರು ಕೊಲ್ಲಲ್ಪಟ್ಟಿದ್ದಾರೋ ಅವರು ಕೂಡ ಈ ಐಹಿಕ ಬಂಧನದಿಂದ ಬಿಡುಗಡೆಯನ್ನು ಹೊಂದಿದ್ದಾರೆ.
ಈಗ ಈ ಇಬ್ಬರೂ ಸಹೋದರರು ಶ್ರೀಕೃಷ್ಣಚೈತನ್ಯ ಮತ್ತು ಶ್ರೀನಿತ್ಯಾನಂದ ಪ್ರಭುವಾಗಿ ಅವತಾರವೆತ್ತಿದ್ದಾರೆ. ಅವರನ್ನು ಸೂರ್ಯ ಮತ್ತು ಚಂದ್ರರಿಗೆ ಹೋಲಿಸಲಾಗಿದೆ. ಸೂರ್ಯ, ಚಂದ್ರರ ಕೆಲಸ ಅಂಧಕಾರವನ್ನು ಓಡಿಸುವುದಾಗಿದೆ. ಸೂರ್ಯನು ಹಗಲಿನಲ್ಲಿ ಉದಯಿಸುತ್ತಾನೆ. ಚಂದ್ರನು ರಾತ್ರಿ ಹೊತ್ತು ಉದಯಿಸುತ್ತಾನೆ. ಆದರೆ ಪ್ರಭು ಚೈತನ್ಯ ಮತ್ತು ನಿತ್ಯಾನಂದರೆಂಬ ಸೂರ್ಯಚಂದ್ರರು ಅದ್ಭುತವಾಗಿದ್ದಾರೆ. ಏಕೆಂದರೆ ಅವರು ಏಕಕಾಲದಲ್ಲಿ ಪ್ರಕಟಗೊಂಡಿದ್ದಾರೆ.
ಆದರೂ ಅವರ ಕೆಲಸ ಸಾಮಾನ್ಯ ಸೂರ್ಯ ಚಂದ್ರರಂತೆಯೇ ಇದೆ: ತಮೋನುದೌ, ಅಂಧಕಾರವನ್ನು ಓಡಿಸುವುದು. ಈ ಭೌತಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಅಂಧಕಾರದಲ್ಲಿದ್ದಾರೆ. ಇನ್ನೊಂದು ರೀತಿಯಲ್ಲಿ ಪ್ರಾಣಿಗಳಂತೆ ಅಜ್ಞಾನಿಗಳಾಗಿದ್ದಾರೆ. ಏಕೆ ಅವರು ಪ್ರಾಣಿಗಳಾಗಿದ್ದಾರೆ?
ಸುಂದರವಾದ ಉಡುಪುಗಳನ್ನು ಧರಿಸಿದ್ದರೂ, ವಿಶ್ವವಿದ್ಯಾಲಯದ ಪದವಿಗಳನ್ನು ಪಡೆದಿದ್ದರೂ ಇಂತಹ ಮನುಷ್ಯರು ಅಂಧಕಾರದಲ್ಲಿದ್ದಾರೆಯೇ? ಹೌದು, ಅವರು ಅಂಧಕಾರದಲ್ಲಿದ್ದಾರೆ. ಇದಕ್ಕೆ ಆಧಾರ ಏನು? ಅವರಿಗೆ ಕೃಷ್ಣಪ್ರಜ್ಞೆ ಇಲ್ಲದಿರುವುದೇ ಆಧಾರ, ಅದೇ ಅವರ ಅಂಧಕಾರ. ಈಗ ಯಾರಾದರೂ ಕೇಳಬಹುದು?
“ನಾವು ಅಂಧಕಾರದಲ್ಲಿದ್ದೇವೆ ಎನ್ನುವುದಕ್ಕೆ ಆಧಾರವನ್ನು ಯಾರು ಹೇಳುತ್ತಿದ್ದಾರೆ?” ನಾವು ಇದನ್ನು ಹೇಳುತ್ತಿಲ್ಲ. ಕೃಷ್ಣನು ಹೇಳುತ್ತಿದ್ದಾನೆ; ನ ಮಾಮ್ ದುಷ್ಕ್ರಿತಿನೋ ಮೂಢಃ ಪ್ರಪದ್ಯಂತೇ ನರಾಧಮಃ ಮಾಯಯಾಪಹೃತಾ – ಜ್ಞಾನಾ.
ಮಾಯಯಾಪಹರ್ತಾ-ಜ್ಞಾನಾ ಎಂದರೆ ಒಬ್ಬ ವ್ಯಕ್ತಿ ಯೂನಿವರ್ಸಿಟಿ ಪದವಿಯನ್ನು ಪಡೆದರೂ, ಅವನನ್ನು ನಾಗರಿಕನೆಂದು ಕರೆದರೂ ಅವನ ಜ್ಞಾನವು ಮಾಯೆಯಿಂದ ಕದಿಯಲ್ಪಟ್ಟಿದೆ, ಅಂದರೆ ಅಪಹೃತವಾಗಿದೆ. ಆದುದರಿಂದ ಅವನು ಶರಣಾಗತನಾಗುವುದಿಲ್ಲ.
ಕೃಷ್ಣನು ವೈಯಕ್ತಿಕವಾಗಿ ಕೋರಿಕೊಳ್ಳುತ್ತಿದ್ದಾನೆ: ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ. “ಮೂರ್ಖತನವನ್ನು ಬಿಟ್ಟು ನನ್ನಲ್ಲಿ ಶರಣಾಗತರಾಗಿ.” ಆದರೆ ಈ ಮೂಢರು ಅಂಧಕಾರದಲ್ಲಿರುವುದರಿಂದ ಅವರಿಗೆ ಜೀವನದ ಉದ್ದೇಶವೇನೆಂಬುದೇ ಗೊತ್ತಿಲ್ಲ. ಆದುದರಿಂದ ಅವರು ಕೃಷ್ಣನಲ್ಲಿ ಶರಣಾಗತರಾಗಲು ಒಪ್ಪುತ್ತಿಲ್ಲ.
ಕೃಷ್ಣ ಈ ಮೂರ್ಖರನ್ನು ನರಾಧಮ, “ಮಾನವ ಜೀವಿಯಲ್ಲಿ ಕೀಳಾದವನು” ಎಂದು ವಿವರಿಸಿದ್ದಾನೆ. ಹೇಗೆ ಅವರು ನರಾಧಮರಾದರು? ಸದಾ ಪಾಪ ಜೀವನದಲ್ಲಿ ತೊಡಗಿಕೊಳ್ಳುವುದರಿಂದ. ಪಾಪ ಜೀವನವೆಂದರೇನು? ಅನೈತಿಕಕಾಮ, ಮಾಂಸಭಕ್ಷಣೆ, ಅಮಲು ಪದಾರ್ಥಸೇವನೆ ಮತ್ತು ಜೂಜು, ಯಾವ ಜನರು ಇವೆಲ್ಲಕ್ಕೂ ಅಂಟಿಕೊಂಡಿದ್ದಾರೆಯೋ ಅವರು ದುಷ್ಕೃತಿ.

‘ದುಷ್ಟರು” ಮತ್ತು ನರಾಧಮ, “ಮಾನವ ಜೀವಿಯಲ್ಲಿ ಕೀಳಾದವನು.” ಇವರು ಶಿಕ್ಷಣದಿಂದ ಜ್ಞಾನವನ್ನು ಪಡೆದಿದ್ದೇನೆ ಎಂದುಕೊಂಡಿರುವುದೆಲ್ಲ ಮಿಥ್ಯಾಜ್ಞಾನವಾಗಿದೆ (ಮಾಯಯಾಪಹೃತಾಜ್ಞಾನ) ಇದು ಇವರ ಸ್ಥಿತಿ.
ಆದ್ದರಿಂದ ಕರುಣಾಮಯಿಗಳಾದ ಕೃಷ್ಣ ಮತ್ತು ಬಲರಾಮರು ಪುನಃ ಶ್ರೀ ಕೃಷ್ಣ ಚೈತನ್ಯ ಮತ್ತು ನಿತ್ಯಾನಂದ ಪ್ರಭುವಾಗಿ ಅವತರಿಸಿದ್ದಾರೆ. ಅವರು ಅದೇ ತತ್ತ್ವವಾದ ‘ಸರ್ವಧರ್ಮಾನ್ ಪರಿತ್ಯಜ್ಯ’ಕ್ಕಾಗಿ ಕೋರಿಕೊಳ್ಳುತ್ತಿದ್ದಾರೆ. ಆದರೆ ಬೇರೆ ರೀತಿಯಲ್ಲಿ. ಶ್ರೀ ಚೈತನ್ಯ ಮಹಾಪ್ರಭು ಮತ್ತು ನಿತ್ಯಾನಂದ ಪ್ರಭು ಅಜ್ಞಾನದ ಅಂಧಕಾರವನ್ನು ಓಡಿಸಲು ಅವಿರ್ಭಾವಗೊಂಡಿದ್ದಾರೆ.
ನಿಜವಾಗಿಯೂ ಕೃಷ್ಣನ ಬೋಧನೆ ಮತ್ತು ಚೈತನ್ಯರ ಬೋಧನೆಯ ಮಧ್ಯೆ ವ್ಯತ್ಯಾಸವಿಲ್ಲ. ಒಂದೇ ವ್ಯತ್ಯಾಸವೇನೆಂದರೆ ಕೃಷ್ಣನು ಹೇಳುತ್ತಾನೆ ”ಮೂಢರೇ ನನ್ನಲ್ಲಿ ಶರಣಾಗತರಾಗಿ ನೀವು ನಿಮ್ಮ ದುಷ್ಕೃತಿ, ಪಾಪ ಚಟುವಟಿಕೆಗಳಿಂದ ನರಳುತ್ತಿರುವಿರಿ. ನಾನು ನಿಮ್ಮ ತಂದೆ, ನಾನು ನೀವು ಸಂತೋಷವಾಗಿರುವುದನ್ನು ನೋಡಲು ಬಯಸುತ್ತೇನೆ. ಆದುದರಿಂದ ನಾನು ಬ೦ದಿರುವೆನು. ನನ್ನಲ್ಲಿ ಶರಣಾಗತರಾಗಿ ಮತ್ತು ನಾನು ನಿಮಗೆ ಎಲ್ಲ ರಕ್ಷಣೆಯನ್ನು ಕೊಡುತ್ತೇನೆ.”
ಕೃಷ್ಣಪ್ರಜ್ಞೆಯ ಚಟುವಟಿಕೆಗಳನ್ನು ಹೊರತುಪಡಿಸಿ ನೀವು ಏನೇ ಮಾಡಿದರೂ ಅದು ಪಾಪಕರವಾದದ್ದು. ಇಡೀ ಜಗತ್ತು ಪಾಪ ಚಟುವಟಿಕೆಗಳಿಂದ ತುಂಬಿದೆ ಮತ್ತು ಅವುಗಳನ್ನು ಅನೈತಿಕ ಕಾಮ, ಮಾಂಸಾಹಾರ, ಅಮಲು ಪದಾರ್ಥಸೇವನೆ ಮತ್ತು ಜೂಜು ಎಂದು ನಾಲ್ಕು ವರ್ಗಗಳಾಗಿ ವಿಂಗಡಿಸಿ ವಿವರಿಸಲಾಗಿದೆ.
ಇದು ಸಾರಾಂಶ, ಆದರೆ ಈ ಚಟುವಟಿಕೆಗಳಿಗೆ ಅನೇಕ ಶಾಖೆಗಳಿವೆ. ಒಂದು ವೇಳೆ ನೀವು ಪಾಪ ಚಟುವಟಿಕೆಯ ಬೇರುಗಳಾದ ಅನೈತಿಕ ಕಾಮ, ಜೂಜು, ಮಾಂಸಾಹಾರ, ಅಮಲುಪದಾರ್ಥ ಸೇವನೆಯನ್ನು ತುಂಡರಿಸಿದರೆ ನಿಮ್ಮ ಎಲ್ಲ ಪಾಪ ಚಟುವಟಿಕೆಗಳು ಹೊರಟುಹೋಗುತ್ತವೆ.
ಆದ್ದರಿಂದ ನಾವು ಕೃಷ್ಣಪ್ರಜ್ಞೆ ಚಳವಳಿಯನ್ನು ಹರಡುತ್ತಿದ್ದೇವೆ ಮತ್ತು ಈ ಪಾಪಚಟುವಟಿಕೆಗಳನ್ನು ತೊರೆಯಿರೆಂದು ಕೋರಿಕೊಳ್ಳುತ್ತಿದ್ದೇವೆ. ಇಲ್ಲದಿದ್ದರೆ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತೀರಿ. ಏನು ಆ ತೊಂದರೆ? ಆ ತೊಂದರೆ ಏನೆಂದರೆ ನೀವು ನಿಮ್ಮ ಪಾಪದ ಜೀವನದಿಂದ ಇನ್ನೊಂದು ದೇಹವನ್ನು ಪಡೆಯುತ್ತೀರಿ.
ನೀವು ಪುನಃ ದುಃಖಿಗಳಾಗುತ್ತೀರಿ. ಭೌತಿಕ ದೇಹ ಸಿಕ್ಕ ಕೂಡಲೇ ದುಃಖಗಳಿವೆ. ಅದು ರಾಜನ ದೇಹವಾಗಿರಬಹುದು ಅಥವಾ ಚಪ್ಪಲಿ ಹೊಲಿಯುವ ಚಮ್ಮಾರನ ದೇಹವಾದರೂ ನಿಮಗೆ ದುಃಖ ತಪ್ಪಿದ್ದಲ್ಲ. ಜನರು ಮಾಯಾಯಾಪಹೃತಾ ಜ್ಞಾನದಿಂದ, ಅಜ್ಞಾನಿಗಳಾಗಿರುವುದರಿಂದ ಅವರು ದುಃಖವನ್ನು ಸುಖವೆಂದು ಭ್ರಮಿಸಿ ಸ್ವೀಕರಿಸುತ್ತಾರೆ. ಇದನ್ನು ಮಾಯೆ ಎಂದು ಕರೆಯಲಾಗುತ್ತದೆ.
ಹಂದಿಯು ಹೇಸಿಗೆಯನ್ನು ತಿನ್ನುತ್ತಿರುವಾಗ, ಅದು ತಾನು ಜೀವನವನ್ನು ಆನಂದಿಸುತ್ತಿರುವೆ ಎಂದು ತಿಳಿದುಕೊಳ್ಳುತ್ತದೆ. ಅದಕ್ಕೆ ತಾನು ದುಃಖಪಡುತ್ತಿದ್ದೇನೆ ಎನ್ನುವುದು ಗೊತ್ತಿಲ್ಲ. ಮಾಯೆಯು ಜೀವಿಗೆ ದುಃಖಪಡಲು ಹಂದಿಯ ದೇಹವನ್ನು ಕೊಟ್ಟಿದೆ. ಹಂದಿಯ ದೇಹದಲ್ಲಿ ಇದ್ದರೂ ತಾನು ಸುಖ ಪಡುತ್ತಿರುವೆ ಎಂದು ತಿಳಿದುಕೊಂಡರೆ ಅದು ಭ್ರಾಂತಿ.
ಐಹಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ದುಃಖಪಡುತ್ತಿದ್ದಾರೆ. ಆದರೆ ದುಃಖಗಳು ಕಾರಾಗೃಹದಲ್ಲಿ ಬೇರೆ ಬೇರೆ ವರ್ಗದ ಖೈದಿಗಳಂತೆ ಇವೆ. ಮೊದಲನೆಯ, ಎರಡನೆಯ ಮತ್ತು ಮೂರನೆಯ ವರ್ಗದ ಖೈದಿಗಳಿದ್ದಾರೆ. ಆದರೆ ಮೊದಲನೆಯ ವರ್ಗದ ಖೈದಿ ತಾನು ಸುಖದಿಂದ ಇರುವೆನು ಎಂದು ತಿಳಿದರೆ ಅದು ಅಜ್ಞಾನ. ಕಾರಾಗೃಹದಲ್ಲಿ ಎಲ್ಲಿ ಸುಖವಿದೆ? ಇವೆಲ್ಲವೂ ದುಃಖವೇ. ಅದು ಮೊದಲನೆಯ ವರ್ಗದ ದುಃಖವಾದರೂ ಅದು ದುಃಖವೇ.
ಆದ್ದರಿಂದ ಪೂರ್ಣ ಮಾನವ ಸಮಾಜವು ಅಂಧಕಾರದಲ್ಲಿದೆ ಮತ್ತು ಕರುಣಾಮಯಿಗಳಾದ ಶ್ರೀ ಚೈತನ್ಯ ಮಹಾಪ್ರಭು ಮತ್ತು ನಿತ್ಯಾನಂದ ಪ್ರಭುಗಳು ಈ ಅಜ್ಞಾನದ ಅಂಧಕಾರವನ್ನು ಓಡಿಸಲು ಅವಿರ್ಭಾವಗೊಂಡಿದ್ದಾರೆ.






Leave a Reply