ಕೃಷ್ಣ ಪಾಕಶಾಲೆ

ವಿಶೇಷ ಗುಜರಾತಿ ಭಕ್ಷ್ಯಗಳು

-ಎಸ್.ವಿ. ಗಾಯತ್ರಿ ಶೆಣೈ

ದೂದಿ ಥೇಪ್ಲಾ

ಸುಮಾರು 15 ಥೇಪ್ಲಾಗಳನ್ನು ಮಾಡಲು ಬೇಕಾಗುವ ಪದಾರ್ಥಗಳು:

ಗೋಧಿಹಿಟ್ಟು – 2 ಬಟ್ಟಲು

ಸೋರೆಕಾಯಿ ತುರಿ – 3/4 ಬಟ್ಟಲು

ಗಟ್ಟಿ ಮೊಸರು – 1/2 ಬಟ್ಟಲು

ಅರಿಶಿನ ಪುಡಿ – 1/2 ಚಿಕ್ಕ ಚಮಚ

ಒಣಮೆಣಸಿನಕಾಯಿ ಪುಡಿ – 1 1/2 ಚಿಕ್ಕ ಚಮಚ ಅಥವಾ ರುಚಿಗೆ ತಕ್ಕಷ್ಟು

ಅಡಿಗೆ ಎಣ್ಣೆ – 1 ಚಿಕ್ಕ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಸೋರೆಕಾಯಿ ಸಿಪ್ಪೆತೆಗೆದು ತುರಿದಿಟ್ಟುಕೊಳ್ಳಿ. ಗೋಧಿಹಿಟ್ಟು ಜರಡಿ ಹಿಡಿದಿಟ್ಟುಕೊಳ್ಳಿ. ಆನಂತರ ಒಂದು ಅಗಲವಾದ ಪಾತ್ರೆಯಲ್ಲಿ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ನಾದಿ. ಅಗತ್ಯವಾದರೆ ಸ್ವಲ್ಪ ನೀರು ಬೆರೆಸಿ.

ಹಿಟ್ಟು ಕಲೆಸಿದಾಗ ಚಪಾತಿ ಹಿಟ್ಟಿನ ಹದದಲ್ಲಿರಬೇಕು. ಹಿಟ್ಟನ್ನು 10-15 ನಿಮಿಷ ಮುಚ್ಚಿಡಿ. ಅನಂತರ ಈ ಹಿಟ್ಟಿನ ಸುಮಾರು 15 ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ತೆಳುವಾಗಿ ಚಪಾತಿ ಮಣೆಯ ಮೇಲೆ ಲಟ್ಟಿಸಿ. ನಾನ್ ಸ್ಟಿಕ್ ತವಾ ಮೇಲೆ ಎರಡೂ ಬದಿಗೂ ಎಣ್ಣೆ ಹಚ್ಚದೆ ಹುರಿಯಿರಿ. ನಾನ್‌ ಸ್ಟಿಕ್ ತವಾ ಬದಲು ಚಪಾತಿ ತವೆಯನ್ನು ಸಹಾ ಬಳಸಬಹುದು. ಬಿಸಿಯಿರುವಾಗಲೇ ಭಗವಂತನಿಗರ್ಪಿಸಿ ಸೇವಿಸಿ.

ಗೋಲ್‌ ಪಾಪ್‌ ಡಿ

(ತಯಾರಿಸಲು ಬಹು ಸುಲಭ)

ಬೇಕಾಗುವ ಪದಾರ್ಥಗಳು :

ಗೋಧಿಹಿಟ್ಟು – 1 ಬಟ್ಟಲು

ಅಚ್ಚು ಬೆಲ್ಲದ ಪುಡಿ – 3/4 ಬಟ್ಟಲು

ಗಸಗಸೆ – 1 ಚಿಕ್ಕ ಚಮಚ

ಏಲಕ್ಕಿ ಪುಡಿ – 1/4 ಚಿಕ್ಕ ಚಮಚ

ಒಣಕೊಬ್ಬರಿ ತುರಿ – 1 ದೊಡ್ಡ ಚಮಚ

ತುಪ್ಪ – 5 ದೊಡ್ಡ ಚಮಚ

ಮಾಡುವ ವಿಧಾನ : ಅಗಲವಾದ ತಟ್ಟೆಗೆ ಸ್ವಲ್ಪ ಬಿಸಿತುಪ್ಪ ಹಚ್ಚಿ. ಗಸಗಸೆಯನ್ನು ತುಪ್ಪ ಹಚ್ಚಿದ ತಟ್ಟೆಯ ಮೇಲೆ  ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಮಾಡಿ, ಗೋಧಿ ಹಿಟ್ಟು ಹಾಕಿ. ಗೋಧಿಹಿಟ್ಟು ನಸುಗೆಂಪು ಬಣ್ಣಕ್ಕೆ ತಿರುಗಿ ಪರಿಮಳ ಬರುವವರೆಗೂ ಹುರಿಯಿರಿ.

ಒಲೆಯಿಂದ ಗೋಧಿಹಿಟ್ಟಿನ ಬಾಣಲೆಯನ್ನು ಕೆಳಗಿಳಿಸಿ, ಬೆಲ್ಲದಪುಡಿ, ಏಲಕ್ಕಿಪುಡಿ, ಮತ್ತು ಒಣಕೊಬ್ಬರಿ ತುರಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಹಿಟ್ಟಿನ ಬಿಸಿಗೆ ಬೆಲ್ಲವೆಲ್ಲ ಕರಗುತ್ತದೆ, ಮತ್ತೊಮ್ಮೆ ಈ ಮಿಶ್ರಣವನ್ನು ಸರಿಯಾಗಿ ಬೆರೆಸಿ ಅನಂತರ ಮೊದಲೇ ಗಸಗಸೆ ಹರಡಿಟ್ಟಿರುವ ತುಪ್ಪದ ತಟ್ಟೆಗೆ ಈ ಮಿಶ್ರಣವನ್ನು ಹಾಕಿ.

ಒಂದು ಬಟ್ಟಲನ್ನು ತೆಗೆದುಕೊಂಡು ಅದರ ತಳದಿಂದ ನಯವಾಗಿ ತಟ್ಟಿ, ಬಿಸಿಯಿರುವಾಗಲೇ ಬೇಕಾದ ಆಕಾರಕ್ಕೆ (ಅಥವಾ ಚೌಕಾಕೃತಿಯಲ್ಲಿ) ಕತ್ತರಿಸಿ. ಆರಿದ ಅನಂತರ ಕರಂಡಿಗೆಯಲ್ಲಿ ಸಂಗ್ರಹಿಸಿ, ಬೇಕಾದಾಗ ತಿನ್ನಬಹುದು. ಶ್ರೀಕೃಷ್ಣನಿಗರ್ಪಿಸಿ ಸ್ವೀಕರಿಸುವುದನ್ನು ಮರೆಯದಿರಿ.

ಬಿಂಡನಿ ಕಡಿ

ಬೇಕಾಗುವ ಪದಾರ್ಥಗಳು:

ಬೆಂಡೆಕಾಯಿ ತುಂಡು – 1 1/2 ಬಟ್ಟಲು

ಗಟ್ಟಿಮೊಸರು – 2 ಬಟ್ಟಲು

ಕಡಲೆಹಿಟ್ಟು – 2 ದೊಡ್ಡ ಚಮಚ

ಲವಂಗ – 2

ಚಕ್ಕೆ – 1 ಚಿಕ್ಕ ಚೂರು

ಜೀರಿಗೆ – 1 ಚಿಕ್ಕ ಚಮಚ

ಹಸಿಮೆಣಸಿನಕಾಯಿ – 2

ಹಸಿಶುಂಠಿ ತುರಿ – 1 ಚಿಕ್ಕ ಚಮಚ

ಕರಿಬೇವು – 2 ಎಸಳು

ಇಂಗಿನಪುಡಿ – 2 ಚಿಟಿಕೆ

ಅಡಿಗೆ ಎಣ್ಣೆ – 2 ದೊಡ್ಡ ಚಮಚ

ಸಕ್ಕರೆ – ರುಚಿಗೆ ತಕ್ಕಷ್ಟು

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಮೊದಲು ಬೆಂಡೆಕಾಯಿಯನ್ನು ಶುಭ್ರವಾದ ತೆಳುಬಟ್ಟೆಯಿಂದ ಒರೆಸಿಟ್ಟುಕೊಂಡು ಸುಮಾರು 1 ಇಂಚು ಉದ್ದದಷ್ಟು ಕತ್ತರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ 1 ದೊಡ್ಡ ಚಮಚ ಅಡಿಗೆ ಎಣ್ಣೆ ಕಾಯಿಸಿ, ಬೆಂಡೆ ಚೂರುಗಳನ್ನು ಹಾಕಿ ತುಸು ಕೆಂಪು ಬಣ್ಣಕ್ಕೆ ಬರುವವರೆಗೂ ಹುರಿಯಿರಿ.

ಮತ್ತೊಂದು ಪಾತ್ರೆಯಲ್ಲಿ ಜರಡಿಹಿಡಿದ ಕಡಲೆಹಿಟ್ಟು ಮತ್ತು ಗಟ್ಟಿಮೊಸರು ಬೆರೆಸಿ, ಯಾವುದೇ ಗಂಟಿಲ್ಲದಂತೆ ಚೆನ್ನಾಗಿ ಕಲೆಸಿ. ಬಾಣಲೆಯಲ್ಲಿ 1 ದೊಡ್ಡ ಚಮಚ ಅಡಿಗೆ ಎಣ್ಣೆ ಕಾಯಿಸಿ, ಲವಂಗ, ಚಕ್ಕೆ ಮತ್ತು ಜೀರಿಗೆ ಒಗ್ಗರಣೆ ಮಾಡಿ.ಜೀರಿಗೆ ಒಗ್ಗರಣೆಯಾದ ಅನಂತರ ಅದಕ್ಕೆ ತುರಿದ ಹಸಿಶುಂಠಿ ಚೂರು, ಕರಿಬೇವು ಮತ್ತು ಇಂಗಿನಪುಡಿ ಸೇರಿಸಿ ಹದವಾಗಿ ಹುರಿಯಿರಿ.

ಅನ೦ತರ ಮೊಸರಿನೊಂದಿಗೆ ಬೆರೆಸಿದಕಡಲೇಹಿಟ್ಟಿನ ಮಿಶ್ರಣವನ್ನು ಹಾಕಿ, ಸುಮಾರು 1 1/2 ಬಟ್ಟಲಿನಷ್ಟು ನೀರು ಸೇರಿಸಿ, ಕುದಿಬರುವವರೆಗೂ ಬಿಡದೇ ಮಗುಚುತ್ತಿರಿ. ಇದಾದಮೇಲೆ ಎಣ್ಣೆಯಲ್ಲಿ ಬಾಡಿಸಿದ ಬೆಂಡೆಕಾಯಿ ಚೂರುಗಳನ್ನು ಈ ಮಿಶ್ರಣದಲ್ಲಿ ಸೇರಿಸಿ ಸಣ್ಣ ಉರಿಯಲ್ಲಿ ಸುಮಾರು 15 ರಿಂದ20 ನಿಮಿಷ ಬೇಯಿಸಿ.ಕೊನೆಯಲ್ಲಿ ಉಪ್ಪು ಹಾಗೂ ಸಕ್ಕರೆ ಸೇರಿಸಿ ಮತ್ತೆ 10-12 ನಿಮಿಷ ಸಣ್ಣ ಉರಿಯಲ್ಲಿ ಬಿಂಡನಿ ಕಡಿಯನ್ನು ಕುದಿಸಿ.

ಇದನ್ನು ಬಿಸಿಯಿರುವಾಗಲೇ ಕಿಚಡಿಯೊಂದಿಗೆ ತಿನ್ನಬಹುದು. ಇಲ್ಲದಿದ್ದಲ್ಲಿ ಚಪಾತಿ ಅಥವಾ ಪರೋಟದೊಂದಿಗೆ ಸೇವಿಸಬಹುದು. ತಿನ್ನುವುದಕ್ಕೆ ಮೊದಲು ಶ್ರೀರಾಧಾಕೃಷ್ಣರಿಗರ್ಪಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi