ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ
ಆಧಾರ: ಸೀತಾರಾಮ್ ಗುರುಮೂರ್ತಿಯವರ
“The Ramayana Temples”
ಸಂಗ್ರಹಾನುವಾದ : ಚೇತನಾ ತೀರ್ಥಹಳ್ಳಿ
ವನವಾಸಕ್ಕೆ ಸೀತಾಲಕ್ಷ್ಮಣರ ಸಹಿತ ಹೊರಟ ಶ್ರೀರಾಮ ತನ್ನ ಪಾದಸ್ಪರ್ಶದಿಂದ ಪವಿತ್ರಗೊಳಿಸಿದ ಭೂಭಾಗಗಳಲ್ಲೆಲ್ಲ ಅದರ ಸ್ಮರಣಾರ್ಥ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳ ಪರಿಚಯ ಮಾಡಿಸುವ ಅಲ್ಪ ಪ್ರಯತ್ನವಿದು.
ಮಹಾರಾಷ್ಟ್ರ– ನಾಸಿಕ್

ರಾಮ, ಸೀತೆ, ಲಕ್ಷ್ಮಣರು ತಮ್ಮ ವನವಾಸದ 10 ವರ್ಷಗಳನ್ನು ‘ಪಂಚವೃಕ್ಷ’ ಎಂಬಲ್ಲಿ ಕಳೆದರು. ಅದೀಗ ‘ನಾಸಿಕ್’ ಎಂದು ಕರೆಯಲ್ಪಡುತ್ತಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿದೆ. ಕೃತಯುಗದಲ್ಲಿ ನಾಸಿಕವು ಪದ್ಮನಗರ ಎಂದು ಕರೆಯಲ್ಪಡುತ್ತಿತ್ತು. ತ್ರೇತಾಯುಗದಲ್ಲಿ ಇದನ್ನು ‘ತ್ರಿಕ೦ಡಗ’ ಎಂದು ಕರೆಯಲಾಯ್ತು. ಹಾಗೆಯೇ ದ್ವಾಪರದಲ್ಲಿ ಈ ಪ್ರದೇಶಕ್ಕೆ ಜನಸ್ಥಾನ ಎಂಬ ಹೆಸರು ಬಂತು.
ಗೋದಾವರಿ ತೀರದಲ್ಲಿ ಬಲದಂಡೆಯ ಮೇಲೆ ಶ್ರೀರಾಮ ಪರಿವಾರ ನೆಲೆನಿಂತಿದ್ದಂತೆ ಕಾಣುತ್ತದೆ. ಈ ಭಾಗದಲ್ಲಿ ರಾಮಾಯಣ ಸಂಬಂಧೀ ವಸ್ತುಗಳು ಕೆಲವು ದೊರಕಿರುವುದು ಇದಕ್ಕೆ ಪುಪ್ಟೀಕರಣ ನೀಡುತ್ತದೆ.
ಶ್ರೀರಾಮನು ಸೆಜ್ ಬೆಟ್ಟದ (ಈಗ ರಾಮಸೆಜ್ ಬೆಟ್ಟ ಎಂದಾಗಿದೆ) ತಪೋವನಗಳಲ್ಲಿ ನೆಲೆಸಿದ್ದ ಈ ಪ್ರದೇಶದಲ್ಲಿ ಅರಳಿ, ಅಶೋಕ, ಮಾವು, ಗುಲ್ ಮೋಹರ್ ಮತ್ತು ಸಾಲವೃಕ್ಷಗಳು ಇದ್ದುದರಿಂದ ಇದಕ್ಕೆ ‘ಪಂಚವೃಕ್ಷ’ ಎಂಬ ಹೆಸರು ಬಂದಿತ್ತು. ರಾಮ ಸೀತೆಯರ ಕುಟೀರವು ಈ ಪಂಚವೃಕ್ಷಗಳ ನೆರಳಲ್ಲಿ ನಿರ್ಮಿಸಲ್ಪಟ್ಟಿತ್ತು. ಲಕ್ಷ್ಮಣನ ಕುಟೀರ ಅದರದಕ್ಕಿಂತ ಕೊಂಚ ದೂರದಲ್ಲಿ, ಗೋದಾವರಿ ಬುಡದಲ್ಲಿತ್ತು.
ರಾಮ ಪರಿವಾರ ಈ ಪ್ರದೇಶದಲ್ಲಿ ದೀರ್ಘಕಾಲ ನೆಲೆಸಿದ್ದರಿಂದ ಇಲ್ಲಿ ಅವರ ದೈನಂದಿನ ಬದುಕಿಗೆ ಹೊಂದಿಕೊಂಡ ಸಾಕಷ್ಟು ಪುರಾವೆಗಳು ದೊರಕುತ್ತವೆ.
ರಾಮ ಸೀತೆಯರು ನಿತ್ಯ ಸ್ನಾನ ಮಾಡುತ್ತಿದ್ದ ಲಕ್ಷ್ಮಣನು ಸ್ನಾನ ಮಾಡುತ್ತಿದ್ದ ಲಕ್ಷ್ಮಣ ಕುಂಡ, ಸೀತೆಯ ಅಡುಗೆಮನೆ ಇತ್ಯಾದಿ ಪ್ರದೇಶಗಳು ಇಲ್ಲಿವೆ. ಲಕ್ಷ್ಮಣನು ಶೂರ್ಪನಖಿಯ ಮೂಗು ಕತ್ತರಿಸಿದ ಜಾಗವೂ ಕೂಡ ರಕ್ಷಿಸಲ್ಪಟ್ಟಿದೆ. ಲಕ್ಷ್ಮಣನು ತನ್ನ ಅಣ್ಣನಿಗೆ ಸೇವೆ ಸಲ್ಲಿಸುತ್ತಿದ್ದ ರಾಮಪರ್ಣಕುಟಿ, ಲಕ್ಷ್ಮಣನು ಶೇಷನಾಗನ ಅವತಾರದಲ್ಲಿ ಕಾಣಿಸಿಕೊಂಡ ಸ್ಥಳ, ಕಪ್ಪುಶಿಲೆಯ ಕಾಲಾರಾಮ ಮಂದಿರ, ಇತ್ಯಾದಿಗಳು ಸಂರಕ್ಷಿಸಲ್ಪಟ್ಟಿವೆ.

ನಾಸಿಕ್ ಮೂಲಕ ಹಾದುಹೋಗುವ ಗೋದಾವರಿ ನದಿಯಲ್ಲಿ ಮಿಂದರೆ ಸರ್ವಪಾಪಗಳೂ ಪರಿಹಾರಗೊಳ್ಳುವವೆಂಬ ಶ್ರದ್ಧೆ ಭಕ್ತರಲ್ಲಿದೆ. ರಾಮ ಲಕ್ಷ್ಮಣ ಸೀತೆ ಸೇವೆ ಸಲ್ಲಿಸಿ ಪುನೀತರಾಗಿ ಗೋದಾವರಿ, ಪಾಪನಾಶಿನಿಯಾಗುವುದರಲ್ಲಿ ಅಚ್ಚರಿಯಿಲ್ಲ.
ಆಂಧ್ರಪ್ರದೇಶ – ಭದ್ರಾಚಲಮ್
ಪಂಚವೃಕ್ಷ ಕ್ಷೇತ್ರದಲ್ಲಿ 10 ವರ್ಷಗಳನ್ನು ಕಳೆದ ಶ್ರೀರಾಮ, ತಮಿಳುನಾಡಿನಲ್ಲಿ ವಾಸಿಸುತ್ತಿದ್ದ ಅಗಸ್ತ್ಯ ಮಹರ್ಷಿಗಳನ್ನು ಭೇಟಿಯಾಗುವ ಬಯಕೆಯಿಂದ ದಕ್ಷಿಣ ದಿಕ್ಕಿನತ್ತ ಹೊರಟ. ಈ ಪ್ರಯಾಣದ ವೇಳೆಯಲ್ಲಿ ಆತ, ಭದ್ರಾಚಲಮ್ ಮತ್ತು ಅಂತರ್ವೇದಿಗಳ ಮೂಲಕ ಹಾದು ಹೋದ. ಭದ್ರಾಚಲದಲ್ಲಿ ರಾಮಪರಿವಾರ ಎರಡು ದಿನ ತಂಗಿತ್ತು.
ಬಹಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಅಕ್ಕಣ್ಣ – ಮಾದಣ್ಣ ಎನ್ನುವವನು ಹೈದರಾಬಾದ್ ನಿಜಾಮನ ಮಂತ್ರಿಯಾಗಿದ್ದನು. ಅಕ್ಕಣ್ಣನ ಅಳಿಯ ಗೋಪಣ್ಣ ಭದ್ರಾಲದ ತಹಸೀಲ್ದಾರನಾಗಿದ್ದ. ಅವನು ಸರ್ಕಾರ ಸಂಗ್ರಹಿಸಿದ ಕಂದಾಯದ ಹಣದಲ್ಲಿ ಶ್ರೀರಾಮನಿಗಾಗಿ ದೇವಾಲಯ ನಿರ್ಮಿಸಿದ.
ಶ್ರೀರಾಮ ಮೂರ್ತಿಗೆ ಆಭರಣಗಳನ್ನು ತೊಡಿಸಲು, ರಾಮೋತ್ಸವವನ್ನು ನಡೆಸಲು ಹಣ ನೀಡಿದ. ಇದರಿಂದ ಕೋಪಗೊಂಡ ನಿಜಾಮ ಅವನನ್ನು ಬಂಧಿಸಿ, ಗಲ್ಲಿಗೇರಿಸಲು ಆದೇಶಿಸಿದ.

ಆ ಹೊತ್ತಿಗೆ ಸ್ವತಃ ಶ್ರೀರಾಮ ಲಕ್ಷ್ಮಣರು ರಾಮ್ಸಿಂಗ್, ಲಕ್ಷ್ಮಣಸಿಂಗ್ ಎಂದುಕೊಂಡು, ಸಂದೇಶವಾಹಕರಂತೆ ವೇಷಧರಿಸಿ ನಿಜಾಮನಿಗೆ ಎದುರಾದರೆಂದೂ, ಗೋಪಣ್ಣ, ಶ್ರೀರಾಮ ಪೂಜೆಗೆ ವಿನಿಯೋಗಿಸಿದಷ್ಟು ಮೌಲ್ಯದ ಚಿನ್ನದ ವರಹಗಳನ್ನು ಕೊಟ್ಟು ವಧೆ ನಿಲ್ಲಿಸಿದರೆಂದೂ ಪ್ರತೀತಿ ಇದೆ. ನಿಜಾಮ ತಾನೇ ವಧಾಸ್ಥಳಕ್ಕೆ ಹೋಗಿ ಗೋಪಣ್ಣನಿಗೆ ವಿಧಿಸಿದ್ದ ಶಿಕ್ಷೆ ಹಿಂತೆಗೆದುಕೊಂಡ.
ಗೋಪಣ್ಣನಿಗೆ ಅಚ್ಚರಿಯಾಯಿತು, ಅವನು ಆ ಕುರಿತು ಯೋಚಿಸತೊಡಗಿದ ಅವನ ತಹಸೀಲ್ದಾರಿಕೆಯ ಕೆಲಸವನ್ನೂ ಅವನಿಗೆ ಮರಳಿ ವಹಿಸಲಾಗಿತ್ತು. ಇವೆಲ್ಲ ಶ್ರೀರಾಮನ ಕೈವಾಡವೇ ಎಂದರಿತ ಆತ, ಮೂಕವಿಸ್ಮಿತನಾಗಿ, ಭಕ್ತಿಯ ಕಣ್ಣೀರು ಸುರಿಸಿದ. ಆ ಚಿನ್ನದ ವರಹಗಳನ್ನು ಬೊಕ್ಕಸಕ್ಕೆ ಹಾಕುವಾಗ, ಅವುಗಳಲ್ಲಿ ಎರಡನ್ನು ರಾಮ ಪ್ರಸಾದವಾಗಿ ಇರಿಸಿಕೊಂಡ.
ಮುಂದಿನ ದಿನಗಳಲ್ಲಿ ಭದ್ರಾಚಲದ ರಾಮದೇಗುಲಕ್ಕೆ ಪ್ರತಿ ರಾಮನವಮಿಯಂದು ಮುತ್ತುಗಳನ್ನು ಕಳುಹಿಸುವಂತೆ ಆದೇಶಿಸಿ, ಅದನ್ನು ಜಾರಿಗೆ ತಂದ. ಶ್ರೀರಾಮ ಪಟ್ಟಾಭಿಷೇಕ ಮತ್ತು ಆಂಜನೇಯನ ಮುದ್ರೆಗಳುಳ್ಳ ಆ ವರಹಗಳನ್ನು ಭದ್ರಾಚಲದ ಬ್ಯಾಂಕ್ ಲಾಕರಿನಲ್ಲಿ ಇರಿಸಲಾಗಿದ್ದು, ಇಂದಿಗೂ ಶ್ರೀರಾಮ ನವಮಿಯಂದು ಅವನ್ನು ಹೊರತೆಗೆದು ಪೂಜಿಸಲಾಗುತ್ತದೆ. ʼರಾಮದಾಸ’ ಎಂದು ಹೆಸರು ಬದಲಿಸಿಕೊಂಡ ಗೋಪಣ್ಣನು ನಿಜಾಮನ ಸರ್ಕಾರದಲ್ಲಿ ಮುಂದುವರಿದ.
ಭದ್ರಾಚಲವು ವಿಜಯವಾಡ ಕಾಜಿಪೇಟೆ – ಹೈದರಾಬಾದ್ ರೈಲ್ವೇ ಲೈನಿನಲ್ಲಿ ಕಮ್ಮಮ್ ರೈಲ್ವೆ ನಿಲ್ದಾಣದಿಂದ ರಸ್ತೆಯ ಮುಖಾಂತರ 150 ಕಿ.ಮೀ. ದೂರದಲ್ಲಿದೆ.
ಅಂತರ್ವೇದಿ
ಅಂತರ್ವೇದಿ ಇರುವುದು, ಪೂರ್ವ ಗೋದಾವರಿ ತೀರದ, ಕಾಕಿನಾಡ ಬಳಿಯ ರಾಜೋಳಿ ತಾಲ್ಲೂಕಿನಲ್ಲಿ. ಗೋದಾವರಿಯು ಬಂಗಾಳಕೊಲ್ಲಿಯನ್ನು ಸೇರುವಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ಈ ಪ್ರದೇಶದ ಪೂರ್ವ ಮತ್ತು ದಕ್ಷಿಣದಲ್ಲಿ ಸಮುದ್ರವಿದ್ದರೆ, ಉತ್ತರದಲ್ಲಿ ರಕ್ತಕುಲ್ಯ ನದಿಯಿದೆ.
ಅಂತರ್ವೇದಿಯನ್ನು ಎರಡನೆಯ ವಾರಣಾಸಿ ಎಂದೇ ಕರೆಯಲಾಗುತ್ತದೆ. ಶ್ರೀರಾಮ, ಸೀತೆ, ಲಕ್ಷ್ಮಣರು ಭದ್ರಾಚಲಮ್ನಿಂದ 30 ಕಿ.ಮೀ. ದೂರದಲ್ಲಿರುವ ಪರ್ಣಶಾಲೆಯನ್ನು ತಲಪುವ ಮುನ್ನ ಈ ಪ್ರದೇಶದಲ್ಲಿ ಒಂದು ರಾತ್ರಿ ಕಳೆದಿದ್ದರೆಂದು ಪ್ರತೀತಿ.
ಅಂತರ್ವೇದಿ ದೇವಾಲಯಕ್ಕೆ ಭವ್ಯ ಸ್ಥಳ ಪುರಾಣದ ಹಿನ್ನೆಲೆಯಿದೆ. ಮಹರ್ಷಿ ವಸಿಷ್ಠರು ಗೋದಾವರಿಯ ಗೌತಮಿ ಶಾಖೆಯು ಸಮುದ್ರದೊಡನೆ ಸೇರುವ ಈ ಪ್ರದೇಶದಲ್ಲಿ ಆಶ್ರಮವನ್ನು ನಿರ್ಮಿಸಿದ್ದರು.

ಶಂಕರನ ಮೇಲೆಸಗಿದ ಪಾಪದ ಪರಿಹಾರಾರ್ಥವಾಗಿ ಬ್ರಹ್ಮದೇವನು ಈ ಸ್ಥಳದಲ್ಲಿ ರುದ್ರಯಾಗ ನಡೆಸಿ, ನೀಲಕಂಠೇಶ್ವರನನ್ನು ಪ್ರತಿಪ್ಠಾಪಿಸಿದ. ಇಲ್ಲಿ ಯಜ್ಞವೇದಿಕೆಯನ್ನು ಸ್ಥಾಪಿಸಿದ ಕಾರಣದಿಂದ, ಈ ಸ್ಥಳವನ್ನು “ಅಂತರ್ವೇದಿ” ಎಂದು ಕರೆಯಲಾಯಿತು.
ಹಿರಣ್ಯಾಕ್ಷನ ಮಗ ರಕ್ತವಿಲೋಚನ, ಶಿವನನ್ನು ಕುರಿತು ಹತ್ತುಸಾವಿರ ವರ್ಷ ಕಾಲ ಉಗ್ರ ತಪಸ್ಸು ನಡೆಸಿದ್ದೂ ಇಲ್ಲಿಯೇ.
ಅಂತರ್ವೇದಿಯಲ್ಲಿ ಶ್ರೀನರಹರಿಯನ್ನು ಪ್ರತಿಷ್ಠಾಪಿಸಿದ್ದು ವಸಿಷ್ಠ ಮಹರ್ಷಿಗಳು, ಅಂತರ್ವೇದಿಯು ನರಸಿಂಹ ಕ್ಷೇತ್ರವೆಂದೂ ಪ್ರಸಿದ್ಧವಾಗಿದೆ. ಇದು 108 ನರಸಿಂಹ ದೇಗುಲಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ಪಂಚವಟಿ (ರಾಮಚಂದ್ರಪುರಮ್)
ಆಗಸ್ತ್ಯ ಮಹರ್ಷಿಗಳನ್ನು ಭೇಟಿಯಾದ ರಾಮ ಪರಿವಾರ, ಅವರ ಸಲಹೆಯಂತೆ, ಬಂಗಾಳಕೊಲ್ಲಿಯನ್ನು ಕೂಡುವ ತವಕದಿಂದ ಹರಿಯುತ್ತಿರುವ ಗೋದಾವರಿಯ ಐದು ಕವಲುಗಳಿಂದ ಸುತ್ತುವರಿಯಲ್ಪಟ್ಟ ಪಂಚವಟಿ ಕ್ಷೇತ್ರದಲ್ಲಿ ಕುಟೀರ ನಿರ್ಮಿಸಿಕೊಳ್ಳಲು ನಿರ್ಧರಿಸಿತು.
ಸೀತಾದೇವಿಯು ಜಲಕ್ರೀಡೆಗೆ ತೆರಳುತ್ತಿದ್ದ ಸಮುದ್ರದಂಡೆಯನ್ನು ಸೀತಾಸಾಗರ ಎಂದೂ, ಆಕೆಯು ವಿಹರಿಸುತ್ತಿದ್ದ ಗೋದಾವರಿ ತೀರವನ್ನು ಸೀತಾನಗರ ಎಂದೂ ಕರೆಯಲಾಗುತ್ತದೆ. ಅಲ್ಲದೆ, ಆಕೆ ಸ್ನಾನ ಮಾಡಲು ಹೋಗುತ್ತಿದ್ದ ಬಂಡೆಗಲ್ಲನ್ನು ‘ಸೀತಾಘಾಟ್’ ಎಂದು ಕರೆಯುತ್ತಾರೆ.

ರಾಮಚಂದ್ರಪುರ ಎಂದು ಕರೆಯಲ್ಪಡುವ ಪಂಚವಟಿಯು ಒರಿಸ್ಸಾ ಗಡಿಗೆ ಹತ್ತಿರದಲ್ಲಿಯೇ ಇದೆ. ಮಧ್ಯಪ್ರದೇಶದ ಬಸ್ತಾರ್ ಜಿಲ್ಲೆಯಲ್ಲಿ ‘ಲಂಕಾ’ ಹೆಸರಿನ ಚಿಕ್ಕ ಹಳ್ಳಿಯೊಂದಿದೆ. ಇದು “ಜನಸ್ಥಾನದ” ಗಡಿಭಾಗ. ಈ ಪ್ರದೇಶವು ಲಂಕಾಧಿಪತಿ ರಾವಣನ ಹಿಡಿತದಲ್ಲಿದ್ದು, ಅವನ ತಂಗಿ ಶೂರ್ಪನಖಿಯ ವಿಹಾರ ತಾಣವಾಗಿತ್ತು.
ಶೂರ್ಪನಖಿ, ಶ್ರೀರಾಮ ಲಕ್ಷ್ಮಣರನ್ನು ಶೃಂಗಾರಾರ್ತಳಾಗಿ ಬೇಡಿಕೊಂಡಿದ್ದು ಪಂಚವಟಿಯಲ್ಲಿಯೇ.
ಅಹೋಬಲಮ್
ಅಹೋಬಲಮ್ ಅಥವಾ ಸಿಂಗವೇಲ್ಕುಂದ್ರಮ್ ಎಂದು ಕರೆಯಲ್ಪಡುವ ಚಿಕ್ಕ ಪಟ್ಟಣ, ಚೈನ್ನೈ – ಮುಂಬಯಿ ರೈಲು ಮಾರ್ಗದ ತಿರುವಿನಲ್ಲಿ ಬರುವ ಕಡಪದಿಂದ 54 ಮೈಲು ದೂರದಲ್ಲಿರುವ ಅದಲಕಟ್ಟಕ್ಕೆ ಅತಿ ಸಮೀಪದಲ್ಲಿದೆ. ಬೆಟ್ಟದ ಮೇಲಿರುವ ಗುಹಾ ದೇವಾಲಯವು ಮೇಲಿನ “ಅಹೋಬಲ” ಎಂದು ಕರೆಯಲ್ಪಡುತ್ತದೆ. ಬೆಟ್ಟದುದ್ದಕ್ಕೂ ಸುಮಾರು ಆರು ಮೈಲು ಕ್ರಮಿಸಿ ದೇವಾಲಯಕ್ಕೆ ಹೋಗಬೇಕು.

ಘಟ್ಟದ ಕೆಳಗಿನ ಅಹೋಬಲದಲ್ಲಿ ನರಸಿಂಹನ ಒಂಬತ್ತು ಬಗೆಯ ಮೂರ್ತಿಗಳಿವೆ. ಕ್ರೋಧ ನರಸಿಂಹ, ವರಾಹ ನರಸಿಂಹ, ಮಾಲೋಲ ನರಸಿಂಹ, ಯೋಗನರಸಿಂಹ, ಪಾವನ ನರಸಿಂಹ, ಕರಂಜ ನರಸಿಂಹ, ಚಕ್ರವಟಿ ನರಸಿಂಹ, ಭಾರ್ಗವ ನರಸಿಂಹ ಮತ್ತು ಜ್ವಾಲ ನರಸಿಂಹ ಇವೆಲ್ಲವೂ ಇಲ್ಲಿ ಪ್ರತಿಷ್ಠಾಪನೆಗೊಂಡಿವೆ. ಅಹೋಬಲದ ಮೇಲ್ಭಾಗದಲ್ಲಿ ಪ್ರಹ್ಲಾದ ನರಸಿಂಹ, ವರಾಹ ನರಸಿಂಹ ಮತ್ತು ಉಗ್ರನರಸಿಂಹ ದೇವಾಲಯಗಳಿವೆ. ಈ ಕಾರಣದಿಂದ ಅಹೋಬಲವನ್ನು ನವನರಸಿಂಹಕ್ಷೇತ್ರ ಎಂದು ಕರೆಯುತ್ತಾರೆ.
ಸೀತೆಯ ಅಪಹರಣದ ಅನಂತರ, ಆಕೆಯನ್ನು ಅರಸುತ್ತ ಬಂದ ರಾಮಲಕ್ಷ್ಮಣರು ಈ ಕ್ಷೇತ್ರಕ್ಕೂ ಭೇಟಿ ನೀಡಿದ್ದರು. ಶ್ರೀರಾಮನು ಸೀತೆಯ ಪ್ರಾಪ್ತಿಗಾಗಿ ಲಕ್ಷ್ಮೀನರಸಿಂಹನನ್ನು ಪಂಚ ಶ್ಲೋಕಗಳಿಂದ ಸ್ತುತಿಸಿದ್ದನೆಂದು ಹೇಳಲಾಗುತ್ತದೆ.
ವಿನುಕೊಂಡ

ವಿನುಕೊಂಡ, ಗುಂಟೂರಿನಿಂದ 40 ಕಿ.ಮೀ. ದೂರದಲ್ಲಿರುವ ಚಿಕ್ಕ ಹಳ್ಳಿ, ‘ವಿನು’ ಎಂದರೆ ಆಲಿಸುವುದು. ಇಲ್ಲಿನ ಬೆಟ್ಟದ ಮೇಲೆ ಕುಳಿತಿದ್ದ ಜಟಾಯು ರಾವಣನಿಂದ ಅಪಹರಿಸಲ್ಪಡುತ್ತಿದ್ದ ಸೀತೆಯ ಆಕ್ರಂದನವನ್ನು ಆಲಿಸಿದ್ದನು. ಅನಂತರ, ಸೀತಾದೇವಿಯ ರಕ್ಷಣೆಗೆ ಧಾವಿಸಿದ್ದನು.
ವಿನುಕೊಂಡದಲ್ಲಿ ಜಟಾಯು ಮತ್ತು ಸೀತಾದೇವಿಯರ ಪುರಾತನ ದೇವಾಲಯವಿದೆ. ಇಲ್ಲಿ ಜಟಾಯುವಿನ ಹೆಜ್ಜೆಗುರುತುಗಳನ್ನು ಬಿಂಬಿಸಲಾಗಿದೆ.
ಸುರುತ್ತಪಳ್ಳಿ
ಉದುಕೋಟೈ ಮಾರ್ಗವಾಗಿ ಚೆನ್ನೈ-ತಿರುಪತಿಗೆ ಹೋಗುವ ಹಾದಿಯಲ್ಲಿ ಸುರುತ್ತಪಳ್ಳಿ ಗ್ರಾಮವಿದೆ. ಉದುಕೋಟೈನಿಂದ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಈ ಪ್ರದೇಶ, ರಾಮಾಯಣ ಕಾಲಕ್ಕೂ ಬಹಳ ಹಿಂದಿನ, ಪೌರಾಣಿಕ ಹಿನ್ನೆಲೆ ಹೊಂದಿದೆ.
ದೇವಾಸುರರು ಸಮುದ್ರ ಮಥನ ನಡೆಸುವಾಗ, ವಾಸುಕಿಯ ಮುಖದಿಂದ ಚಿಮ್ಮಿದ ಹಾಲಾಹಲವನ್ನು ಶಿವನು ಕುಡಿಯಲೆತ್ನಿಸಿದ. ಆಗ ವಿಷ ಹೊಟ್ಟೆ ಸೇರದಂತೆ ಪಾರ್ವತಿ ಅವನ ಗಂಟಲನ್ನು ಒತ್ತಿ ಹಿಡಿದಳು. ವಿಷ ಗಂಟಲಲ್ಲಿ ಉಳಿದು, ನೀಲಿಗಟ್ಟಿ ಆತ ನೀಲಕಂಠನಾದ, ಈ ಘಟನೆಯ ಅನಂತರ ವಿಶ್ರಾಂತಿ ಪಡೆಯುವ ಬಯಕೆಯಿಂದ ಶಿವ ಸುರುತ್ತಪಳ್ಳಿಗೆ ಬಂದು, ವಾಲಿಕೊಂಡು ಕುಳಿತ. ಹೀಗೆ ಶಿವ ಒರಗಿದ ಭಂಗಿಯಲ್ಲಿ ಪೂಜೆಗೊಳ್ಳುವ ಏಕೈಕ ದೇವಾಲಯ ಇದಾಗಿದೆ.
ಸೀತೆಯ ಶೋಧಕ್ಕೆ ಹೊರಟಿದ್ದ ರಾಮಲಕ್ಷ್ಮಣರು ಇಲ್ಲಿ ಶಿವಪೂಜೆ ನಡೆಸಿದ್ದರೆಂದು ಹೇಳಲಾಗುತ್ತದೆ.
(ಮುಂದುವರಿಯುವುದು)






Leave a Reply