ಶ್ರೀ ನಾಮಾಮೃತ ಧಾರೆ…

ಭಗವಂತನ ಪ್ರೇಮಾನುಭೂತಿ

ಭಗವತ್ಪ್ರಜ್ಞೆಯ ಗ್ರಹಿಕೆಯು ಪ್ರೇಮಭಕ್ತಿಯಾಗಿ ಹೊರಹೊಮ್ಮುತ್ತದೆ. ಕೃಷ್ಣದಾಸ ಕವಿರಾಜ ಗೋಸ್ವಾಮಿಯವರು ಬರೆಯುವಂತೆ, ”ಕೃಷ್ಣನ ಪವಿತ್ರನಾಮವು ಅದೆಷ್ಟು ಆಕರ್ಷಕವಾಗಿದೆಯೆಂದರೆ, ಅದನ್ನು ಜಪಿಸಿದ ಯಾರೇ ಆಗಲಿ, ಅವನು ಕೃಷ್ಣಪ್ರೇಮದಲ್ಲಿ ಸಂಪೂರ್ಣ ಮುಳುಗಿ ಹೋಗುತ್ತಾನೆ. ಇದು ಹರೀಕೃಷ್ಣಮಂತ್ರ ಜಪದ ಪ್ರಭಾವ.”

ಶ್ರೀ ಚೈತನ್ಯ ಮಹಾಪ್ರಭುಗಳು ಕೂಡ ಸನಾತನ ಗೋಸ್ವಾಮಿಗಳನ್ನು ಕುರಿತು ”ಭಕ್ತಿಸೇವೆಯ ಒಂಬತ್ತು ವಿಧಾನಗಳಲ್ಲಿ ಅತ್ಯಂತ ಪ್ರಮುಖವಾದುದು ಭಗವಂತನ ನಿತ್ಯನಾಮ ಸ್ಮರಣೆ. ಹತ್ತು ಬಗೆಯ ಅಪರಾಧಗಳಿಂದ ದೂರವಿದ್ದು ಇದನ್ನು ನಡೆಸುವುದೇ ಆದಲ್ಲಿ ವ್ಯಕ್ತಿಯು ಅತ್ಯಂತ ಸುಲಭವಾಗಿ ಅನರ್ಘ್ಯವಾದ ಪರಮ ಪ್ರಭುವಿನ ಪ್ರೇಮವನ್ನು ಪಡೆಯುವನು” ಎಂದು ಹೇಳುತ್ತಾರೆ.

ಕೃಷ್ಣನೆಡೆಗಿನ ಪರಿಶುದ್ಧ ಪ್ರೇಮವು ಆತ್ಮದಲ್ಲಿ ಅವ್ಯಕ್ತವಾಗಿರುವ ಉನ್ನತ ಮತ್ತು ಪರಮೋದಾತ್ತ ಭಾವನೆಗಳನ್ನು ಹೊರಗೆಳೆಯುವುದು. ಮುಕ್ತಿ ಅಥವಾ ಆಧ್ಯಾತ್ಮಿಕ ಪರಿಪೂರ್ಣತೆಯೆಂದರೆ ಭಾವನೆಗಳನ್ನು ಇಲ್ಲವಾಗಿಸಿಕೊಳ್ಳುವುದಲ್ಲ, ಅವನ್ನು ಅತ್ಯುನ್ನತ ಪರಿಪೂರ್ಣತೆಯ ಹಂತಕ್ಕೆ ಒಯ್ಯುವುದು.

ಆತ್ಮದೊಳಗೆ ಈ ಮೇಲೆ ಹೇಳಿದ ಅಲೌಕಿಕ ಭಾವನೆಗಳಿದ್ದು, ಅವು ಭೌತಿಕ ಭ್ರಮೆಯ ಮಾಯೆಯ ಕಾರಣದಿಂದ ನಿದ್ರಿಸುತ್ತಿರುವ ಆತ್ಮದಲ್ಲಿ ಸುಪ್ತವಾಗಿರುತ್ತವೆ. ಆದರೆ ಈ ಬಗೆಯ ಉದಾತ್ತ ಭಾವಗಳು ಪರಿಶುದ್ಧ, ಆಧ್ಯಾತ್ಮಿಕ ಪ್ರಜ್ಞೆಯು ಜಾಗೃತವಾದೊಡನೆ ತಾವೂ ಜಾಗೃತಗೊಳ್ಳುತ್ತವೆ.

ಬದ್ಧಾತ್ಮಗಳು ಅನುಭವಿಸುವ ಸುಖ-ದುಃಖ, ರಾಗ-ದ್ವೇಷ ಮುಂತಾದ ಭಾವನೆಗಳೆಲ್ಲವೂ ಪರಮ ಸತ್ಯದಲ್ಲಿ ಅಡಕವಾಗಿರುವ ತಮ್ಮ ಆಧ್ಯಾತ್ಮಿಕ ಪ್ರತಿರೂಪಗಳ ಅತ್ಯಂತ ಮಂದವಾದ ಮತ್ತು ಸೀಮಿತವಾದ ಪ್ರತಿಬಿಂಬಗಳಾಗಿವೆ. ಮತ್ತು, ಅವು ಸಂಪೂರ್ಣ ಜ್ಞಾನೋದಯ ಹೊಂದಿದ ಆತ್ಮಗಳಿಗೆ ಭಗವಂತನ ಜೊತೆಗಿನ ಸಂಬಂಧದಲ್ಲಿ ಅನುಭವಕ್ಕೆ ಬರುತ್ತವೆ.

ಆತ್ಮವು ಕೃಷ್ಣಪ್ರೇಮದೆಡೆಗೆ ತೆರೆದುಕೊಂಡಾಗ ಭಾವನೆಗಳ ಅತ್ಯಂತ ಮಧುರವಾದ ರಸವನ್ನು ಆಸ್ವಾದಿಸುತ್ತದೆ, ಮತ್ತು ಅವೆಲ್ಲವೂ ಆಧ್ಯಾತ್ಮಿಕ ಆನಂದಾನುಭೂತಿಯಿಂದ ಹೊಮ್ಮಿದವುಗಳಾಗಿರುತ್ತವೆ. ಶುದ್ಧಭಕ್ತರ ಹೃದಯ ಮತ್ತು ಮನಸ್ಸುಗಳು ಈ ಬಗೆಯ ಅಲೌಕಿಕ ಆನಂದಮಯ ಭಾವನೆಗಳು ಅದೆಷ್ಟು ಬಲಯುತವಾಗಿರುತ್ತವೆಯೆಂದರೆ, ಅವು ಸದಾ ದೈಹಿಕ ಸಾಮ್ರಾಜ್ಯದ ಮೇಲೆ ಚಿಮ್ಮಲು ಹವಣಿಸುತ್ತಿರುತ್ತವೆ.

ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಗುರುಗಳ ಆದೇಶದ ಮೇರೆಗೆ ಶ್ರೀ ಕೃಷ್ಣನಾಮ ಜಪದ ಪಥವನ್ನು ಪ್ರವೇಶಿಸಿದರು. ಈ ಬಗೆಯ ನಿರಂತರ ಜಪದಿಂದ ಆಧ್ಯಾತ್ಮಿಕ ಅನುಭೂತಿಯು ಉದ್ದೀಪನಗೊಂಡಾಗ, ಅವರು ಅಚ್ಚರಿಗೊಂಡು, ತಮಗೆ ಚಿತ್ತಭ್ರಮಣೆಯಾಗಿರಬಹುದೆಂದು ತಮ್ಮ ಗುರುಗಳಾದ ಈಶ್ವರ ಪುರಿಯವರನ್ನು ಪ್ರಶ್ನಿಸಿದರು. ಅದಕ್ಕೆ ಅವರು ನೀಡಿದ ವಿವರಣೆ ಹೀಗಿದೆ –

”ದೇವೋತ್ತಮನನ್ನು ಕುರಿತ ಪ್ರೇಮದ ಲಕ್ಷಣವೇ ಅದು. ತನ್ನ ಸ್ವಭಾವದಿಂದಲೇ ಅದು ವ್ಯಕ್ತಿಯ ದೇಹದಲ್ಲಿ ದಿವ್ಯ ಚಹರೆಗಳನ್ನು ಮೂಡಿಸುತ್ತದೆ. ಪ್ರಭುವಿನ ಪಾದಕಮಲಗಳ ಆಶ್ರಯವನ್ನು ಪಡೆಯಲು ವ್ಯಕ್ತಿಯು ಹೆಚ್ಚು ಹೆಚ್ಚು ಆಸೆ ಪಡುವಂತೆ ಮಾಡುತ್ತದೆ.

”ವ್ಯಕ್ತಿಯು ದಿಟವಾಗಿಯೂ ದೇವೋತ್ತಮನ ಬಗೆಗೆ ಪ್ರೇಮವನ್ನು ಬೆಳೆಸಿಕೊಂಡಾಗ, ಸಹಜವಾಗಿಯೇ ಕೆಲವು ಸಲ ಆಳುತ್ತಾನೆ, ಕೆಲವು ಸಲ ನಗುತ್ತಾನೆ, ಕೆಲವು ಸಲ ಸಂಕೀರ್ತನೆ ಮಾಡುತ್ತಾನೆ, ಮತ್ತೆ ಕೆಲವು ಸಲ ಹುಚ್ಚನಂತೆ ಅತ್ತ ಇತ್ತ ಓಡುತ್ತಾನೆ.

‘ಬೆವರುವುದು, ಕಂಪಿಸುವುದು, ರೋಮಾಂಚನಗೊಳ್ಳುವುದು, ಧ್ವನಿ ಗದ್ಗದಿತಗೊಳ್ಳುವುದು, ಬಣ್ಣಗೆಡುವುದು, ಉನ್ಮತ್ತನಾಗುವುದು, ವಿಷಣ್ಣನಾಗುವುದು, ತಾಳ್ಮೆಯಿಂದಿರುವುದು, ಗರ್ವ ಪಡುವುದು, ಉಲ್ಲಾಸಗೊಳ್ಳುವುದು, ವಿನೀತನಾಗುವುದು – ಇವೆಲ್ಲ ದೇವೋತ್ತಮನನ್ನು ಕುರಿತ ದೈವೋನ್ಮಾದದ ಸಹಜವಾದ ಬಗೆಬಗೆಯ ಚಹರೆಗಳು. ಭಕ್ತನು ಹರೇ ಕೃಷ್ಣ ಮಂತ್ರವನ್ನು ಸಂಕೀರ್ತನೆ ಮಾಡುವಾಗ ಇವೆಲ್ಲ, ದಿವ್ಯ ಆನಂದ ಸಾಗರದಲ್ಲಿ ನರ್ತಿಸುವಂತೆ ಮತ್ತು ತೇಲಾಡುವಂತೆ ಮಾಡುತ್ತವೆ.

‘ಖಂಡಿತವಾಗಿಯೂ ಈ ಬಗೆಯ ಆಧ್ಯಾತ್ಮಿಕ ಅನುಭೂತಿಗಳನ್ನು ಕೆಲವರಿಂದಷ್ಟೆ ಸಾಧಿಸಲಾಗುತ್ತದೆ. ಅವು ಕೇವಲ ಭಗವಾನ್ ಶ್ರೀಕೃಷ್ಣನೊಂದಿಗೆ ಅತ್ಯಂತ ಆಪ್ತವಾದ, ರಹಸ್ಯವಾದ ಸಂಬಂಧ ಹೊಂದಿರುವವರ ಅನುಭವಕ್ಕೆ ಮಾತ್ರ ಗೋಚರಿಸುತ್ತವೆ. ಈ ಅನುಭವಗಳು ಭಗವಂತನನ್ನು ಮಹಾತ್ಮ, ಶಕ್ತಿಶಾಲಿ ಮತ್ತು ಅತ್ಯುನ್ನತನಾದವನು ಎಂದು ತಿಳಿದು ದುಃಖದಲ್ಲಿ ದೈನ್ಯದಿಂದ ಪೂಜಿಸುವವರ ಅನುಭವಕ್ಕೂ ಬರುವುದಿಲ್ಲ.

ಈ ಬಗೆಯ ದಿವ್ಯ ಆಧ್ಯಾತ್ಮಿಕ ಅನುಭೂತಿಗಳು ಯಾರು ಭಗವಂತನನ್ನು ಆತನ ಪಾರಮ್ಯತೆಯ ಆಚೆಗೂ ದಿಟ್ಟಿಸಿ ನೋಡಿ, ಆತನೊಂದಿಗೆ ಸತತವಾಗಿ ಪ್ರೇಮ ತುಂಬಿದ ಆಪ್ತತೆಯಿಂದ ವ್ಯವಹರಿಸುತ್ತಾರೋ ಅಂಥವರಿಗೆ ಮಾತ್ರ ನಿಲುಕುತ್ತದೆ. ಚೈತನ್ಯ ಚರಿತಾಮೃತದಲ್ಲಿ ಹೇಳಿರುವಂತೆ, ಪರಿಶುದ್ಧ ಭಕ್ತಿಭಾವದಿಂದ ಶ್ರೀಕೃಷ್ಣನ ಹೆಸರುಗಳನ್ನು ಜಪಿಸಿದರೆ, ಅದು ಭಕ್ತನನ್ನು ಭಗವಂತನ ವೈಯಕ್ತಿಕ ಅಸ್ತಿತ್ವದ ಅನುಭೂತಿ ಮತ್ತು ಅತ್ಯಾನಂದದ ಹೊಂಬೆಳಕಿನತ್ತ ಕೊಂಡೊಯುತ್ತದೆ.

”ದೇವೋತ್ತಮ ಪರಮ ಪುರುಷನೊಡನೆ ಆಪ್ತತೆಯಿಂದ ವ್ಯವಹರಿಸುವ ಮೂಲಕ ದುಃಖ-ದುಮ್ಮಾನಗಳಿಂದ ಕೂಡಿದ ಮನಃಸ್ಥಿತಿಯಲ್ಲಿ ವ್ಯವಹರಿಸಿದಾಗ ಸಿಗುವ ಸಂತೋಷಕ್ಕಿಂತಲೂ ಕೋಟಿ ಪಾಲು ಹೆಚ್ಚು ಆನಂದವು ದೊರೆಯುವುದು. ಸರಳವಾಗಿ ಹೇಳುವುದಾದರೆ, ಭಗವಂತನ ಪವಿತ್ರನಾಮವನ್ನು ಕೇಳುವ ಮೂಲಕವೇ ಭಕ್ತನು ಅಲೌಕಿಕ ಆನಂದದಲ್ಲಿ ಬೆರೆತು ಹೋಗಿಬಿಡುವನು.”

ಮರಣದ ಆಚೆ

ತನ್ನ ಜೀವಮಾನವಿಡೀ ಭಗವಂತನ ಪವಿತ್ರನಾಮ ಜಪ ಮಾಡುವ ಮೂಲಕ, ಭಕ್ತನು ಮರಣಾನಂತರದಲ್ಲಿ ಕೃಷ್ಣನೆಡೆಗೆ ಮರಳಿ ಹೋಗುವನು. ಇದನ್ನು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳಿರುವನು:

ಅಂತ್ಯಕಾಲದಲ್ಲಿ ನನ್ನನ್ನು ಸ್ಮರಿಸುತ್ತ ಯಾವನು ದೇಹವನ್ನು ಬಿಡುವನೋ ಅವನು ಕೂಡಲೇ ನನ್ನ ಸ್ವಭಾವವನ್ನು ಹೊಂದುತ್ತಾನೆ. ಇದರಲ್ಲಿ ಸಂಶಯವೇ ಇಲ್ಲ.

ಕುಂತಿಯ ಮಗನಾದ ಅರ್ಜುನನೇ, ವ್ಯಕ್ತಿಯು ತನ್ನ ದೇಹವನ್ನು ಬಿಡುವಾಗ ಯಾವ ಭಾವವನ್ನು ಸ್ಮರಿಸುವನೋ ಅದೇ ಭಾವವನ್ನು ನಿಶ್ಚಯವಾಗಿಯೂ ಪಡೆಯುವನು.

ಪಾರ್ಥನೇ, ದೇವೋತ್ತಮ ಪರಮ ಪುರುಷನಂತೆ ನನ್ನನ್ನು ಯಾರು ಧ್ಯಾನಿಸುತ್ತಾರೋ, ಬೇರೆ ಯಾವ ಕಡೆಗೂ ಮನಸ್ಸು ಚಲಿಸದಂತೆ ಯಾರ ಮನಸ್ಸು ಸದಾ ನನ್ನಲ್ಲಿ ತನ್ಮಯವಾಗಿರುವುದೋ ಅವನು ಖಂಡಿತವಾಗಿಯೂ ನನ್ನ ಬಳಿಗೆ ಬರುವನು.

ಹೀಗೆ ಬದುಕಿನುದ್ದಕ್ಕೂ ಕೃಷ್ಣನ ಪವಿತ್ರನಾಮಜಪದ ಅಭ್ಯಾಸ ಮಾಡುತ್ತ ಬಂದ ವ್ಯಕ್ತಿಯು ಅಂತ್ಯಕಾಲದಲ್ಲಿಯೂ ಕೃಷ್ಣಸ್ಮರಣೆ ಮಾಡುವ ಮೂಲಕ ಜನನ-ಮರಣಗಳ ನಿರಂತರ ಚಕ್ರದಿಂದ ಪಾರಾಗಿ ವೈಕುಂಠಕ್ಕೆ ತೆರಳಿ ಭಗವಂತನ ಪ್ರೇಮಪೂರ್ವಕ ಭಕ್ತಿಸೇವೆಯಲ್ಲಿ ತೊಡಗುತ್ತಾನೆ.

ದೈವ ನಿಯಾಮಕ

ವೈಯಕ್ತಿಕ ಆಧ್ಯಾತ್ಮಿಕ ಸಂಪೂರ್ಣತೆಗಾಗಿ ಪವಿತ್ರನಾಮದ ಮಹತ್ವದ ಜೊತೆಗೆ, ವೈಷ್ಣವ ಸಾಹಿತ್ಯವು ಪವಿತ್ರ ನಾಮದಿಂದ ಉಂಟಾದ ಮಹಾನ್ ಜಾಗತಿಕ ಐತಿಹಾಸಿಕ ಪರಿಣಾಮಗಳ ಬಗೆಗೂ ವಿವರ ನೀಡುತ್ತದೆ. ಪವಿತ್ರನಾಮ ಜಪವು ಇಂದಿನ ಯುಗದಲ್ಲಿ – ಕಲಿಯುಗದಲ್ಲಿ ಜಾಗತಿಕ ಧರ್ಮದ ಅರಿವನ್ನು ಮೂಡಿಸುತ್ತದೆ.

ಕಲಿಯುಗವು ಭೌತಿಕವಾದದ ‘ಕಲಹಯುಗ’ ಎಂದೇ ವಿವರಿಸಲ್ಪಟ್ಟಿದೆ. ನಾಲ್ಕು ಯುಗಗಳಲ್ಲಿ ಕೊನೆಯದಾಗಿದೆ. ಈ ಯುಗದಲ್ಲಿ ಮಾನವರು ವೈಶಾಲ್ಯ ಮರೆಯುತ್ತಾರೆ. ಆತ್ಮವನ್ನು ಮರೆಯುತ್ತಾರೆ. ತಮ್ಮನ್ನು ತಾವು ದೇಹದೊಂದಿಗೆ ಗುರುತಿಸಿಕೊಂಡು ಭೌತಿಕ ಭೋಗಗಳಿಗೆ ಅಂಟಿಕೊಳ್ಳುತ್ತಾರೆ. ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ ಕಲಿಯುಗದ ಜನರು ಜಗಳಗಂಟರು, ಸೋಮಾರಿಗಳು, ಪಥಭ್ರಷ್ಟರೂ, ದುರದೃಷ್ಟವಂತರೂ ಮತ್ತು ಚಂಚಲಚಿತ್ತರೂ ಆಗಿರುತ್ತಾರೆ.”

ಈ ಬಗೆಯ ದುರದೃಷ್ಟವಂತ ವ್ಯಕ್ತಿಗಳು ಆಧ್ಯಾತ್ಮಿಕ ಪ್ರಗತಿ ಸಾಧನೆಗೆ ಉತ್ಸುಕರಾಗಿರುವುದಿಲ್ಲ. ಆದ್ದರಿಂದ ಅವರನ್ನು ಸಾವಿನ ಸಮಾನವಾಗಿರುವ ಜಡತೆಯಿಂದ ಪಾರುಮಾಡಲು ಮತ್ತು ಆಧ್ಯಾತ್ಮಿಕ ಸಾಧನೆಯ ಅವಕಾಶ ದೊರಕಿಸಿಕೊಡಲು ಅತ್ಯಂತ ಸರಳ ಮಾರ್ಗದ ಅವಶ್ಯಕತೆಯಿದೆ.

ಇದಕ್ಕೆ ಸರಿಯಾದ ಪರಿಹಾರವೆಂದರೆ ‘ಪವಿತ್ರನಾಮ’ವೊಂದೇ. ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಹೇಳುವಂತೆ, “ಕಲಿಯುಗದಲ್ಲಿ ಭಗವಾನ್ ಶ್ರೀಕೃಷ್ಣನು ‘ಪವಿತ್ರನಾಮ’ದ ಅವತಾರವೆತ್ತಿ ಬಂದಿರುವನು. ಈ ಕಲುಷಿತ ಯುಗದಲ್ಲಿ ಪವಿತ್ರನಾಮವೊಂದೇ ನೈಜ ಸತ್ತ್ವವಾಗಿದೆ. ಅದೊಂದೇ ರಕ್ಷಣೆಯ ಮಾರ್ಗವೂ ಆಗಿದೆ.

” ಶುಕದೇವ ಗೋಸ್ವಾಮಿಗಳು ಪರೀಕ್ಷಿತ ಮಹಾರಾಜನಿಗೆ ಹೀಗೆ ಹೇಳಿರುವರು ”ನನ್ನ ಪ್ರೀತಿಯ ರಾಜನೇ, ಕಲಿಯುಗವು ದೋಷಗಳ ಒಂದು ಸಾಗರ. ಆದರೂ ಈ ಯುಗದಲ್ಲಿ ಒಂದು ಒಳ್ಳೆಯ ಗುಣವಿದೆ. ಕೇವಲ ಹರೇಕೃಷ್ಣ ಮಹಾಮಂತ್ರವನ್ನು ಜಪಿಸುವುದರಿಂದ ವ್ಯಕ್ತಿಯು ಲೌಕಿಕ ಬಂಧನದಿಂದ ಬಿಡುಗಡೆಯನ್ನು ಹೊಂದಿ ದಿವ್ಯ ಧಾಮಕ್ಕೆ ಆರೋಹಣ ಮಾಡಬಹುದು.”

ಹಿಂದಿನ ಯುಗದಲ್ಲಿ ಆಚರಿಸಲಾಗುತ್ತಿದ್ದ ವಿವಿಧ ಆಧ್ಯಾತ್ಮಿಕ ಪ್ರಕ್ರಿಯೆಗಳನ್ನು ಕಲಿಯುಗದಲ್ಲಿ ಪತಿತರಾದ ಮಾನವರು ತಪ್ಪಾಗಿ ಆಚರಿಸುತ್ತಿರುವರು. ಇಂದಿನ ದಿನಕ್ಕೆ ಪವಿತ್ರನಾಮ ಜಪವೇ ಎಲ್ಲ ಬಗೆಯ ಆಧ್ಯಾತ್ಮಿಕ ಪ್ರಕ್ರಿಯೆಗಳ ಸಾರವಾಗಿದೆ.

“ಸತ್ಯಯುಗದಲ್ಲಿ ವಿಷ್ಣುವಿನ ಧ್ಯಾನ, ತ್ರೇತಾಯುಗದಲ್ಲಿ ಯಜ್ಞಗಳ ಆಚರಣೆ, ದ್ವಾಪರಯುಗದಲ್ಲಿ ಪ್ರಭುವಿನ ಪಾದಕಮಲಗಳ ಸೇವೆ ಇವುಗಳಿಂದ ಯಾವ ಫಲಗಳನ್ನು ಪಡೆಯಬಹುದೋ ಅವನ್ನೇ ಕಲಿಯುಗದಲ್ಲಿ ಕೇವಲ ಹರೇಕೃಷ್ಣ ಮಹಾಮಂತ್ರವನ್ನು ಜಪಿಸುವುದರಿಂದ ಪಡೆಯಬಹುದು.”

ಪವಿತ್ರನಾಮ ಜಪದ ಉತ್ಕೃಷ್ಟತೆಯು ಬ್ರಹ್ಮನಾರದೀಯ ಪುರಾಣದ ಈ ಶ್ಲೋಕಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಹೇಳಲ್ಪಟ್ಟಿದೆ: “ಕಲಿಯುಗದಲ್ಲಿ ಪವಿತ್ರನಾಮದ ಹೊರತಾಗಿ ಬೇರೆ ಗತಿಯಿಲ್ಲ. ಇಲ್ಲ, ಇಲ್ಲ. ಭಗವಂತನ ಪವಿತ್ರನಾಮವೊಂದೇ, ಪವಿತ್ರನಾಮವೊಂದೇ, ಪವಿತ್ರನಾಮವೊಂದೇ, ಪವಿತ್ರನಾಮವೊಂದೇ ನಮಗೆ ದಾರಿ.”

ವತ್ರನಾಮಜಪವು ‘ಯುಗಧರ್ಮ’ ಎಂದು ಶಾಸ್ತ್ರಗಳು ಹೇಳಿವೆ. ಈ ಯುಗದ ಜಾಗತಿಕ ಮತ್ತು ಪರಮಧರ್ಮವೂ ಇದೇ ಆಗಿದೆ. ಇದು ಎಲ್ಲ ನಂಬಿಕೆಗಳನ್ನೂ ಪರಮಪ್ರಭುವಿನ ಸ್ತುತಿಯ ಒಂದೇ ಸೂತ್ರದಡಿ ತಂದು ಸೇರಿಸುತ್ತದೆ.

ಭಾರತದಲ್ಲಿ ಪವಿತ್ರನಾಮ ಜಪವು ಲಕ್ಷಾಂತರ ವರ್ಷಗಳಿಂದ ಆಚರಣೆಯಲ್ಲಿದ್ದರೂ ಅದನ್ನು ಜನಪ್ರಿಯಗೊಳಿಸಿ ಎಲ್ಲರಿಗೂ ತಲಪುವಂತೆ ಮಾಡಿದವರು ಶ್ರೀ ಚೈತನ್ಯ ಮಹಾಪ್ರಭುಗಳು. ಅವರು ಎಲ್ಲ ಜಾತಿ-ಪಂಥಗಳ, ವರ್ಗಗಳ ಜನರನ್ನು ‘ನಾಮಧರ್ಮ’ದ ಸೂತ್ರದಲ್ಲಿ ಒಂದಾಗಿಸಿದರು.

ಪವಿತ್ರನಾಮವನ್ನು ಜನಪ್ರಿಯಗೊಳಿಸಿದ ಮಹಾಪ್ರಭುಗಳು ‘ಕಲಿಯುಗ ಅವತಾರ’ ಎಂದೇ ಪೂಜಿಸಲ್ಪಡುವರು. ಅವರು ಸಾಕ್ಷಾತ್ ಶ್ರೀಕೃಷ್ಣನ ಅವತಾರವಾಗಿದ್ದಾರೆ. ಅವರು ಕೃಷ್ಣಭಕ್ತಿಯ ಮಹದಾನಂದವನ್ನು ಎಲ್ಲರಿಗೂ ಉಣಬಡಿಸಿದರು. ಅವರು “ಕಲಿಸಂತಾರಣ ಉಪನಿಷತ್ತಿನಲ್ಲಿ ಕಲಿಯುಗದ ಬವಣೆಗಳನ್ನು ನಿವಾರಿಸುವ ಸಲುವಾಗಿ ಸೂಚಿಸಲಾಗಿರುವ ‘ಮಹಾಮಂತ್ರ’ವನ್ನು ಎಲ್ಲರಿಗೂ ಪರಿಚಯಿಸಿದರು.

“ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣಕೃಷ್ಣ ಹರೇಹರೇ/ ಹರೇರಾಮ ಹರೇರಾಮ ರಾಮರಾಮ ಹರೇಹರೆ” ಎಂಬ ಮೂವತ್ತೆರಡು ಅಕ್ಷರಗಳ ಈ ಹದಿನಾರು ಹೆಸರುಗಳು ಮಾತ್ರವೇ ಕಲಿಯುಗದ ದುಷ್ಪರಿಣಾಮಗಳಿಂದ ನಮ್ಮನ್ನು ಪಾರುಮಾಡಬಲ್ಲವು. ಭವಸಾಗರವನ್ನು ದಾಟಲು ಪವಿತ್ರನಾಮ ಜಪಕ್ಕಿಂತ ಅನ್ಯಮಾರ್ಗವಿಲ್ಲವೆಂದು ವೇದಗಳು ಸಾರಿವೆ.

ಪವಿತ್ರನಾಮ ಜಪವು ಮಾನವ ಕುಲದ ಮೇಲೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಅತ್ಯುನ್ನತ ಲಾಭವನ್ನು ತಂದುಕೊಡುವುದು ಮಾತ್ರವಲ್ಲದೆ, ಅದು ಅತ್ಯಂತ ಕೆಳಮಟ್ಟದ ಜೀವರಾಶಿಗಳನ್ನು ಶುದ್ಧೀಕರಿಸುತ್ತದೆ. ಯಾವುದೇ ಜೀವಿಯಾದರೂ ಭಗವಂತನ ಅಲೌಕಿಕ ಶಬ್ದಾವತಾರವಾದ ಈ ದಿವ್ಯ ಮಂತ್ರವನ್ನು ಆಲಿಸಿದರೂ ಸಾಕು ಅದು ತೀವ್ರವಾದ ಆಧ್ಯಾತ್ಮಿಕ ಫಲವನ್ನು ಗಳಿಸುತ್ತದೆ.

ಶ್ರೀ ಚೈತನ್ಯ ಮಹಾಪ್ರಭುಗಳು ಪವಿತ್ರನಾಮವು ಕೇವಲ ಭಾರತಕ್ಕೆ ಸೀಮಿತವಾಗಬೇಕೆಂದು ಉದ್ದೇಶಿಸಿರಲಿಲ್ಲ. ಅವರು ಅದು ಪ್ರತಿ ನಗರ ಮತ್ತು ಹಳ್ಳಿಗಳಲ್ಲಿ ಧ್ವನಿಸುವುದೆಂಬುದನ್ನು ಮುನ್ನುಡಿದಿದ್ದರು. ಅವರ ಅನಂತರ ನಾಲ್ಕು ಶತಮಾನಗಳ ಬಳಿಕ ವಿಚಾರವನ್ನು ಗುರುಶಿಷ್ಯ ಪರಂಪರೆಯ ಒಂಬತ್ತನೆಯ ಆಚಾರ್ಯ ಭಕ್ತಿವಿನೋದ ಠಾಕುರರು ಮತ್ತೆ ಪ್ರಚುರಪಡಿಸಿದರು. 1885ರಲ್ಲಿ ಅವರು ತಮ್ಮ ‘ಸಜ್ಜನತೋಷಣಿ’ ಪತ್ರಿಕೆಯಲ್ಲಿ ಪ್ರವಾದ ನುಡಿದಂತೆ ಹೀಗೆ ಬರೆದಿರುವರು :

/

“ಶ್ರೀ ಚೈತನ್ಯ ಮಹಾಪ್ರಭುಗಳು ಭಾರತದ ಕೆಲವೇ ಮಂದಿಗೆ ಮುಕ್ತಿ ಕರುಣಿಸುವ ಸಲುವಾಗಿ ಅವತಾರವೆತ್ತಲಿಲ್ಲ. ಅವರ ಮುಖ್ಯ ಉದ್ದೇಶವು ವಿಶ್ವದ ಎಲ್ಲ ರಾಷ್ಟ್ರಗಳ, ಎಲ್ಲ ಜೀವಿಗಳನ್ನೂ ತಲಪಿ ಅವರಿಗೆ ಪಾರಮಾರ್ಥಿಕ ಧರ್ಮವನ್ನು ಬೋಧಿಸಬೇಕೆನ್ನುವುದಾಗಿತ್ತು. ಅವರ ಈ ಪ್ರಶ್ನಾತೀತ ಆದೇಶವು ನೆರವೇರುತ್ತದೆಯೆನ್ನುವುದರಲ್ಲಿ ಸಂಶಯವೇ ಇಲ್ಲ.

ಅತೀ ಶೀಘ್ರದಲ್ಲಿಯೇ ಸರಿಸಾಟಿಯಿಲ್ಲದ ಹರಿನಾಮ ಪಥವು ಜಗದಾದ್ಯಂತ ಪರಿಚಯಿಸಲ್ಪಡುವುದು. ಓಹ್! ಅದೃಷ್ಟವಂತ ಆಂಗ್ಲ ಫ್ರೆಂಚ್, ರಶಿಯನ್, ಜರ್ಮನ್ ಮತ್ತು ಅಮೆರಿಕನ್ ಜನರು ಘೋಷಣಾ ಪತ್ರ ಮೃದಂಗ-ಕರತಾಲಗಳನ್ನು ಹಿಡಿದುಕೊಂಡು ತಮ್ಮ ನಗರದ ಬೀದಿಗಳಲ್ಲಿ ಸಂಕೀರ್ತನೆ ನಡೆಸುವರು…! ಆದಿನ ಎಂದು ಬರುವುದು?… ಆದಿನವು ಏಕೈಕ ಧರ್ಮವಾದ ವೈಷ್ಣವ ಧರ್ಮವೆ೦ಬ ಸಾಗರಕ್ಕೆ ಇತರೆಲ್ಲ ಧರ್ಮಗಳೆಂಬ ನದಿಗಳು ಸೇರಿ ಐಕ್ಯವಾಗುವುದರ ಸಾಕ್ಷಿಯಾಗುವುದು. ಆದಿನ ಬರುವುದು ಎಂದು!?”

ಮುಂದಿನ ಎಂಬತ್ತು ವರ್ಷಗಳ ನಂತರ ಶ್ರೀಲಭಕ್ತಿವಿನೋದ ಠಾಕುರರ ಮಗನ ಶಿಷ್ಯ ( ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ) ರಾದ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಭಾರತದಿಂದ ಅಮೆರಿಕೆಗೆ ತೆರಳಿ ಅವರ ಕನಸನ್ನು ನನಸಾಗಿಸಿದರು.

1966 ರಲ್ಲಿ ಅವರು ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಕೇಂದ್ರವನ್ನು ಸ್ಥಾಪಿಸಿ, ಆ ಮೂಲಕ ಮಹಾಮಂತ್ರವನ್ನು ಪ್ರಚುರ ಪಡಿಸಿದರು. ಈ ಕಾರಣದಿಂದಲೇ ಅವರು ಆರಂಭಿಸಿದ ಚಳವಳಿಯು ‘ಹರೇಕೃಷ್ಣ ಆಂದೋಲನ’ ಎಂದು ಖ್ಯಾತವಾಯಿತು. ಈ ಚಳವಳಿಯ ಮೂಲ ಉದ್ದೇಶವೇ ಪವಿತ್ರನಾಮ ಜಪ ಮತ್ತು ಪ್ರಚಾರ.

ಶ್ರೀಲ ಪ್ರಭುಪಾದರು ಒಮ್ಮೆ ಹೀಗೆ ಬರೆಯುತ್ತಾರೆ – ‘ಶ್ರೀ ಚೈತನ್ಯ ಮಹಾಪ್ರಭುಗಳು ಪ್ರತಿಯೊಬ್ಬರಿಗೂ ಕೃಷ್ಣನ ಪವಿತ್ರನಾಮದ ಶ್ರವಣಭಾಗ್ಯ ದೊರೆಯಲೆಂದೇ ಸಾಮೂಹಿಕ ಸಂಕೀರ್ತನೆಯನ್ನು ಪರಿಚಯಿಸಿದರು. ಪವಿತ್ರನಾಮದ ಶ್ರವಣ ಮಾತ್ರದಿಂದಲೇ ವ್ಯಕ್ತಿಯು ಶುದ್ಧನಾಗಿ ಬಿಡುತ್ತಾನೆ.

ಆದ್ದರಿಂದ ನಮ್ಮ ಕೃಷ್ಣಪ್ರಜ್ಞಾಂದೋಲನವು ಜಗದಾದ್ಯಂತ ಹರೇಕೃಷ್ಣ ಮಹಾಮಂತ್ರವನ್ನು ಪಠಿಸುವುದಕ್ಕೆಂದೇ ನಿಯುಕ್ತವಾಗಿದೆ.” ಅವರು ಹೇಳುತ್ತಾರೆ, ” ಕೃಷ್ಣ ಪ್ರಜ್ಞಾಂದೋಲನವು ನಿಂತಿರುವುದು ಇದೇ ತತ್ತ್ವದ ಮೇಲೆ. ಪ್ರತಿಕ್ಷಣವೂ, ಮಂದಿರದ ಒಳಗೂ-ಹೊರಗೂ ಎಷ್ಟು ಸಾಧ್ಯವೋ ಅಷ್ಟು ಬಾರಿ ಹರೇಕೃಷ್ಣ ಮಂತ್ರ ಜಪಿಸಿ.

ಈ ಆಂದೋಲನವು ಜನರು ಸುಲಭವಾಗಿ ಹರೇಕೃಷ್ಣ ಮಂತ್ರವನ್ನು ಜಪಿಸಲು ಅನುಕೂಲಕರ ವಾತಾವರಣ ಕಲ್ಪಿಸುವುದಕ್ಕೆಂದೇ ಉದ್ದೇಶಿತವಾಗಿದೆ.” ಇಂದು ಶ್ರೀಲ ಪ್ರಭುಪಾದರ ಅನುಯಾಯಿಗಳು ವೈಷ್ಣವ ಉಡುಗೆ ತೊಟ್ಟು ಮಹಾಮಂತ್ರ ಜಪದಲ್ಲಿ ನಿರತರಾಗಿರುವುದನ್ನು ನಾವು ಎಲ್ಲೆಡೆ ನೋಡಬಹುದಾಗಿದೆ.

ಈವರೆಗೂ ಕೇವಲ ಭಾರತದೊಳಗೆ ಬಂದಿಯಾಗಿದ್ದ ಕೃಷ್ಣನ ಪವಿತ್ರನಾಮವು ಇಂದು ಪಾಶ್ಚಾತ್ಯ ನಾಗರಿಕತೆ ಮುಖ್ಯವಾಹಿನಿಯನ್ನು ಪ್ರವೇಶಿಸಿದೆ. ಇದು ಅಲ್ಲಿನ ಸಾಮಾನ್ಯ ಜನಜೀವನದಲ್ಲಿ ಹಾಸುಹೊಕ್ಕಾಗುವಷ್ಟು ಪರಿಚಿತವಾಗಿದೆ. ಆದರೆ, ಸಾರ್ವಜನಿಕರ ದೃಷ್ಟಿಯಲ್ಲಿ ಇದು ಎಲ್ಲರಿಗೂ ಲಭ್ಯವಾಗುವ ಮಂತ್ರವಾದರೂ ಮಾರುಕಟ್ಟೆಯಲ್ಲಿ ಕೊಳ್ಳುವ ಸಾಧಾರಣ ವಸ್ತುವಿನಂತೆ ಭಾವಿಸಲಾಗದು. ಇದೊಂದು ಅತ್ಯಮೂಲ್ಯ ನಿಗೂಢ ನಿಧಿ. ಇದನ್ನು ಕಾಣಲು ವಿಶೇಷ ಅಂತರ್ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು.

ಯಾರಾದರೊಬ್ಬ ವ್ಯಕ್ತಿಯು ಸರಳವಾಗಿ ಅದನ್ನು ಸಮೀಪಿಸಿ, ಕಿವಿಗಳ ಮೂಲಕ ಆಲಿಸಿ, ಹೃದಯಕ್ಕಿಳಿಸಿಕೊಂಡರೆ, ವಿಶೇಷವಾಗಿ ಆತನು ಈ ದಿವ್ಯನಾಮವನ್ನು ತನ್ನ ಪ್ರಾಣವೆಂದು ಭಾವಿಸಿದನಾದರೆ ಆತನು ಖಂಡಿತವಾಗಿಯೂ ಉಳಿದೆಲ್ಲ ಆಧ್ಯಾತ್ಮಿಕ ಸ್ವಾರಸ್ಯಗಳಿಗಿಂತಲೂ ತೀವ್ರವಾದ, ಅತ್ಯುದಾತ್ತವಾದ, ವಿಶಿಷ್ಟವಾದ ಅನುಭವವನ್ನು ಹೊಂದುವನು.

“ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ / ಹರೇರಾಮ ಹರೇರಾಮ ರಾಮರಾಮ ಹರೇಹರೇ”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi