ಶ್ರೀರಂಗಪಟ್ಟಣ

ನಮ್ಮ ದೇಶ ಲಕ್ಷಾಂತರ ಪುಣ್ಯಧಾಮಗಳ ನೆಲವೀಡು. ಈ ಪ್ರತಿಯೊಂದಕ್ಕೂ ಪೌರಾಣಿಕ – ಚಾರಿತ್ರಿಕ ಹಿನ್ನೆಲೆಯ ಮಹತ್ವವಿದೆ.

ಶ್ರೀ ರಂಗಪಟ್ಟಣ, ಮಂಡ್ಯ ಜಿಲ್ಲೆಗೆ ಸೇರಿದ ತಾಲೂಕು ಕೇಂದ್ರ. ಮೈಸೂರಿನಿಂದ ಕೇವಲ 14 ಕಿ.ಮೀ. ಅಂತರದಲ್ಲಿ. ಕಾವೇರಿಯ ಮಡಿಲಲ್ಲಿ ನೆಲೆಯಾಗಿದೆ ಈ ಕ್ಷೇತ್ರ. ಇಲ್ಲಿ ಕಾವೇರಿ ನದಿ, ಎರಡು ಕವಲಾಗಿ ಹರಿದು ದ್ವೀಪ ನಿರ್ಮಿಸಿದೆ.

ಶ್ರೀರ೦ಗಪಟ್ಟಣದಲ್ಲಿ ಶ್ರೀರಂಗನಾಥ ಶೇಷಶಾಯಿಯಾಗಿ ಪವಡಿಸಿದ್ದಾನೆ. ಶ್ರೀರಂಗನಾಥ ದೇವಾಲಯ ಕರ್ನಾಟಕದ ಅತಿದೊಡ್ಡ ದೇವಾಲಯಗಳಲ್ಲೊಂದು.

ಶ್ರೀರಂಗಪಟ್ಟಣದ ಶ್ರೀರಂಗನಾಥನನ್ನು ಗೌತಮ ಋಷಿಗಳು ಪೂಜಿಸುತ್ತಿದ್ದರೆಂದು ಐತಿಹ್ಯವಿದೆ. ಕರ್ನಾಟಕದ ಸುಪ್ರಸಿದ್ಧ ರಾಜವಂಶಗಳಾದ ಹೊಯ್ಸಳ ಮತ್ತು ವಿಜಯನಗರದ ಅರಸರಿಗೆ ಹೊ೦ದಿಕೊ೦ಡ೦ತ, ಶ್ರೀರಂಗಪಟ್ಟಣದ ಚರಿತ್ರೆ ಇದೆ. ಟಿಪ್ಪುಸುಲ್ತಾನನಾದಿಯಾಗಿ ರಾಜ ಮಹಾರಾಜರುಗಳು ಶ್ರೀರಂಗನಾಥ ದೇವಾಲಯಕ್ಕೆ ಹೇರಳ ದಾನ – ದತ್ತಿಗಳನ್ನು ನೀಡಿದ್ದರು.

ಶ್ರೀರಂಗನಾಥ ದೇವಾಲಯದ ಗರ್ಭಗುಡಿಯಲ್ಲಿ 15 ಅಡಿ ಉದ್ದದ ಶ್ರೀರಂಗನಾಥ ಮೂರ್ತಿಯು ಏಳು ಹೆಡೆ ಆದಿಶೇಷನ ಪರ್ಯಂಕದಲ್ಲಿದ್ದು, ವಿರಮಿಸುತ್ತಿದ್ದಾನೆ. ತಲೆ ಮೇಲೆ ಎತ್ತರದ ಗೋಪುರ ಕಿರೀಟ, ಪಾದದ ಬಳಿ ಕಾವೇರಿ, ಗೌತಮ ಮುನಿಗಳ ಮೂರ್ತಿಗಳು, ಇದು ಶ್ರೀರಂಗನ ವೈಭವ.

ದೇವಾಲಯದ ಒಳಗೆ 24 ಕಂಬಗಳಿದ್ದು, ಅವುಗಳಲ್ಲಿ ಭಗವಾನ್ ಶ್ರೀವಿಷ್ಣುವಿನ 24 ರೂಪಗಳನ್ನು ಕಾಣಬಹುದು. ದೇವಾಲಯದ ಪ್ರಾಕಾರದಲ್ಲಿ ಕಂಠೀರವ ನರಸಿಂಹರಾಜ ಒಡೆಯರ್ (1638-59) ನರಸಿಂಹ ದೇವಾಲಯ ನಿರ್ಮಿಸಿದ್ದಾರೆ. ಇದು ವಿಶಾಲವಾಗಿದ್ದು, ಮನಸೆಳೆಯುವಂತಿದೆ.

ಶ್ರೀರಂಗದೇವಾಲಯದ ಮತ್ತೊಂದು ಮುಖ್ಯ ಆಕರ್ಷಣೆ, ಇಲ್ಲಿನ ಹೊಯ್ಸಳ ಶಿಲ್ಪ ಅಂಬೆಗಾಲು ಕೃಷ್ಣ.

ಪುಣ್ಯಕ್ಷೇತ್ರಗಳ ಸಾಲಿನಲ್ಲಿ 3 ಶ್ರೀರಂಗಕ್ಷೇತ್ರಗಳು ಪ್ರಸಿದ್ಧ. ಅವು ಶ್ರೀರಂಗಪಟ್ಟಣ, ಶಿವನಸಮುದ್ರ ಮತ್ತು ಶ್ರೀರಂಗಮ್, ಶ್ರೀರಂಗಪಟ್ಟಣದ ರಂಗನಾಥನನ್ನು ‘ಆದಿರಂಗ’ ಎಂದೂ, ಶಿವನಸಮುದ್ರದಲ್ಲಿ ‘ಮಧ್ಯರಂಗ’ ವೆಂದೂ, ಶ್ರೀರಂಗಮ್‌ನಲ್ಲಿ (ತಮಿಳುನಾಡು) ‘ಅಂತ್ಯರಂಗ’ ವೆಂದೂ ಕರೆಯುತ್ತಾರೆ.

ಕೆಲವು ಭಕ್ತರು, ಒಂದೇ ದಿನದಲ್ಲಿ ಈ ಮೂರು ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಾರೆ.

ಕಾವೇರಿಯ ಕಲರವ, ದಟ್ಟವಾದ ಮರಗಿಡಗಳಿಂದ ಕೂಡಿದ ಹಸಿರು ಪರಿಸರ, ನಡುವೆ ಬೃಹತ್ ದೇವಾಲಯದಲ್ಲಿ ನಸುನಗುತ್ತ ಭಕ್ತರನ್ನು ಅನುಗ್ರಹಿಸುತ್ತಿರುವ ಶೇಷಶಾಯಿ ಶ್ರೀರಂಗಮೂರ್ತಿ. ಇದನ್ನು ನೋಡದ ಕಂಗಳು ವ್ಯರ್ಥ ಎನ್ನುವುದು ಭಕ್ತರ ಅನಿಸಿಕೆ. ಅದಕ್ಕೆ ಹರಿದಾಸರಾದ ಶ್ರೀಪಾದರು,

ಕಂಗಳಿವ್ಯಾತಕೋ,

ಕಾವೇರಿ ರಂಗನ ನೋಡದಾ…” ಎಂದು ಹಾಡಿರುವುದು!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi