ಬಲರಾಮ

– ದರ್ಶನ್ ಕುಮಾರ್‌, ಕಾಸರಗೋಡು

ಕೃಷ್ಣನೆಂದರೆ ಆಕರ್ಷಣೆ. ಆದರೆ ಆ ಆಕರ್ಷಣೆಯೆಡೆಗೆ ಹೆಜ್ಜೆ ಹಾಕಲು ನಮಗೆ ಶಕ್ತಿ ಬೇಕಲ್ಲ?

ಭಗವಂತನ ಮೊದಲ ವಿಸ್ತರಣೆ ಬಲರಾಮ. ‘ಬಲ’ ಎಂದರೆ ಇಲ್ಲಿ ತೋಳ್ಬಲವಲ್ಲ. ಸಂಸಾರದ ಜಂಜಾಟಗಳಲ್ಲಿ ಸುಸ್ತಾದ, ದಿಕ್ಕುತಪ್ಪಿದ ಮನಸ್ಸಿಗೆ ಬೇಕಾದ ನಿಜವಾದ ಆಧ್ಯಾತ್ಮಿಕ ಶಕ್ತಿ. ಶ್ರೀಮದ್ಭಾಗವತವನ್ನು ಓದುತ್ತಾ ಹೋದರೆ ಒಂದು ವಿಚಾರ ಬಹಳ ಸ್ಪಷ್ಟವಾಗುತ್ತದೆ; ಕೃಷ್ಣನ ಸೇವೆಗಾಗಿ ತನ್ನನ್ನು ತಾನು ಸಂಪೂರ್ಣವಾಗಿ, ಅಖಂಡವಾಗಿ ಅರ್ಪಿಸಿಕೊಂಡ ಅಸ್ತಿತ್ವವೇ ಬಲರಾಮ.

ಅವನು ಅಣ್ಣ. ಆದರೂ ಕೃಷ್ಣನ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಿನಂತೆ ಜೊತೆಯಾಗುವ ಸೇವಕ. ಕೃಷ್ಣ ಕೂರಲು ಆಸನವಾಗುತ್ತಾನೆ. ಮಲಗಲು ಹಾಸಿಗೆಯಾಗುತ್ತಾನೆ. ಉಡಲು ವಸ್ತ್ರವಾಗುತ್ತಾನೆ. ಎಲ್ಲಿ ಕೃಷ್ಣನಿದ್ದಾನೋ ಅಲ್ಲೆಲ್ಲಾ ಬಲರಾಮನಿದ್ದಾನೆ.

ಚೈತನ್ಯ ಚರಿತಾಮೃತದಲ್ಲಿ ಒಂದು ಮಾತಿದೆ; ಕೃಷ್ಣನಿಗೆ ಸೇವೆ ಮಾಡುವುದರಲ್ಲೇ ಬಲರಾಮ ತನ್ನ ಅಸ್ತಿತ್ವದ ಪರಮ ಆನಂದವನ್ನು ಕಾಣುತ್ತಾನೆ. ತನ್ನ ಪ್ರಭುವಿನ ಸೇವೆಗಾಗಿ ಎಂತಹ ರೂಪವನ್ನಾದರೂ ತಾಳಲು ಸಿದ್ಧನಿರುವ ಭಕ್ತಿ ಅದು.

ವೃಂದಾವನದ ಕಾಡುಗಳಲ್ಲಿ ಹಸುಗಳನ್ನು ಮೇಯಿಸುತ್ತಾ ಕೃಷ್ಣ ದಣಿದಾಗ, ಬಲರಾಮ ತನ್ನ ತೊಡೆಯನ್ನೇ ದಿಂಬಾಗಿ ನೀಡುತ್ತಾನೆ. ಕೋಟ್ಯಂತರ ಬ್ರಹ್ಮಾಂಡಗಳನ್ನು ತನ್ನ ಹೆಡೆಯ ಮೇಲೆ ಸಾಸಿವೆ ಕಾಳಿನಂತೆ ಹೊತ್ತಿರುವ ಅನಂತಶೇಷನೂ ಅವನೇ ಎಂಬುದು ಆ ಕ್ಷಣದಲ್ಲಿ ನೆನಪಾಗುವುದೇ ಇಲ್ಲ. ವೃಂದಾವನದ ಧೂಳಿನಲ್ಲಿ ಆತ ಕೇವಲ ಬರಿಗಾಲಲ್ಲಿ ನಡೆಯುವ, ಗೋಪಾಲಕರೊಡನೆ ನಗುವ, ತಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುವ ಅಣ್ಣ.

ಅವನ ಕೈಯಲ್ಲಿರುವ ನೇಗಿಲು ಕೇವಲ ಒಂದು ಆಯುಧವಲ್ಲ. ನಮ್ಮ ಹೃದಯವೆಂಬ ಕಠಿಣವಾದ ನೆಲವನ್ನು ಉಳುಮೆ ಮಾಡುವ ಸಾಧನ. ಎಲ್ಲಿಯವರೆಗೆ ಅಹಂಕಾರದ, ಕಲ್ಮಶಗಳ ಗಟ್ಟಿ ಮಣ್ಣು ಸಡಿಲವಾಗುವುದಿಲ್ಲವೋ, ಅಲ್ಲಿಯವರೆಗೆ ಭಕ್ತಿ ಎಂಬ ಬೀಜ ಮೊಳಕೆಯೊಡೆಯಲು ಸಾಧ್ಯವಿಲ್ಲ. ಬಲರಾಮ ತನ್ನ ನೇಗಿಲಿನಿಂದ ಆ ಕಠಿಣ ನೆಲವನ್ನು ಮೃದು ಮಾಡುತ್ತಾನೆ. ನಂತರವಷ್ಟೇ ಅಲ್ಲಿ ಕೃಷ್ಣಪ್ರೇಮ ಚಿಗುರುವುದು.

ತಾಳೆಯ ವನದಲ್ಲಿ ನಡೆಯುವ ಧೇನುಕಾಸುರನ ಪ್ರಸಂಗವನ್ನೇ ನೋಡಿ. ಕತ್ತೆಯ ರೂಪದಲ್ಲಿದ್ದ ಆ ಅಸುರ ನಮ್ಮೊಳಗಿನ ಅಜ್ಞಾನದ ಸಂಕೇತ. ಲೌಕಿಕ ಹೊರೆಗಳನ್ನು ಒಣ ಪ್ರತಿಷ್ಠೆಯಿಂದ ಹೊರುವ ನಮ್ಮ ಮೂರ್ಖತನವನ್ನು ಆ ಕತ್ತೆ ಪ್ರತಿನಿಧಿಸುತ್ತದೆ. ಬಲರಾಮ ಅವನನ್ನು ಬಹಳ ಸುಲಭವಾಗಿ ಎತ್ತಿ ಒಗೆಯುತ್ತಾನೆ. ನಮ್ಮೊಳಗಿನ ಆ ಅಜ್ಞಾನದ ಭಾರವನ್ನು ಇಳಿಸಲು ಬಲರಾಮನೇ ಬರಬೇಕು.

ಗುರುತತ್ವದ ಮೂಲ ಬಲರಾಮ. ಅವನ ಕರುಣೆ ಇಲ್ಲದೆ ವೃಂದಾವನದ ಬಾಗಿಲು ಯಾರಿಗೂ ತೆರೆಯುವುದಿಲ್ಲ. ಇಸ್ಕಾನ್ ಸಂಸ್ಥಾಪಕ ಆಚಾರ್ಯರಾದ ಶ್ರೀಲ ಪ್ರಭುಪಾದರು ಮತ್ತೆ ಮತ್ತೆ ಹೇಳುವುದು ಇದನ್ನೇ. ಆಧ್ಯಾತ್ಮಿಕ ಪಯಣದಲ್ಲಿ ನಮಗೆ ಬೇಕಿರುವುದು ರಮಣೀಯ ಕಲ್ಪನೆಗಳಲ್ಲ. ಭಗವಂತನ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುವ ದೃಢವಾದ ಶಕ್ತಿ. ಆ ಶಕ್ತಿಯೇ ಬಲರಾಮ.

ನಾವು ನೇರವಾಗಿ ಕೃಷ್ಣನ ಬಳಿ ಹೋಗಲು ಸಾಧ್ಯವಿಲ್ಲ. ಕೃಷ್ಣನ ಕೊಳಲಿನ ನಾದ ಕೇಳಬೇಕಾದರೆ ಮೊದಲು ಬಲರಾಮನ ಹೆಜ್ಜೆಯ ಸಪ್ಪಳವನ್ನು ಹಿಂಬಾಲಿಸಬೇಕು. ಬಲರಾಮ ಜಯಂತಿಯಂದು ಭಗವಂತನಲ್ಲಿ ಕೇಳಿಕೊಳ್ಳಬೇಕಾದ್ದು ಇಷ್ಟೇ. ‘ನನ್ನೊಳಗಿನ ಕಠಿಣ ಮಣ್ಣನ್ನು ಮೆತ್ತಗೆ ಮಾಡು. ನಿನ್ನ ತಮ್ಮನ ಸೇವೆಗೆ ನನ್ನನ್ನೂ ಒಂದು ಸಣ್ಣ ಸಾಧನವಾಗಿ ಮಾಡಿಕೊ.’

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi