ಭಾಗ-2
ಆಕರ: ಶ್ರೀವಾಸುದೇವ ಕೇಶವದಾಸ ಇವರ ಆಂಗ್ಲ ಉಪನ್ಯಾಸ, ಸಂಗ್ರಹಾನುವಾದ : ಚೇತನಾ ತೀರ್ಥಹಳ್ಳಿ
“ನಿತ್ಯಂ ಭಾಗವತ ಸೇವಯಾ’ – ನಿತ್ಯವೂ ಭಾಗವತವನ್ನು ಪಠಿಸಬೇಕು. ಇದರಿಂದ ನಮ್ಮ ಹೃದಯದಲ್ಲಿನ ಕಶ್ಮಲಗಳೆಲ್ಲ ಕೊಚ್ಚಿ ಹೋಗುವವು. ಹಾಗೆಯೇ ಶ್ರವಣ ಮಾಡುವಾಗಲೂ ಅರ್ಹವ್ಯಕ್ತಿಯಿಂದ ಹೇಳಲ್ಪಟ್ಟಾಗ ಮಾತ್ರ ಕೇಳಬೇಕು. ಶುಕದೇವ ಗೋಸ್ವಾಮಿಗಳಿಂದ ಒಂದೇ ವಾರದಲ್ಲಿ ಭಾಗವತವನ್ನು ಬೋಧಿಸಲು ಸಾಧ್ಯವಾಯಿತು. ಪರೀಕ್ಷಿತನೂ ಅದನ್ನು ಅರಿಯುವಲ್ಲಿ ಸಫಲನಾದ. ಏಕೆಂದರೆ, ಅವರಿಬ್ಬರೂ ಭಕ್ತ ಭಾಗವತರಾಗಿದ್ದರು, ಕೃಷ್ಣ ಪ್ರಜ್ಞಾವಂತರಾಗಿದ್ದರು. (ಮುಂದೆ ಓದಿ….)”

ಭಾಗವತ ಶ್ರವಣ ಅತ್ಯಂತ ಪ್ರಮುಖವಾದ ಪ್ರಕ್ರಿಯೆ. ಈ ಪುಣ್ಯಗ್ರಂಥವನ್ನು ಸೂಕ್ತ ವ್ಯಕ್ತಿಗಳ ಸಮ್ಮುಖದಿಂದ ಕೇಳಿದ ಮಾತ್ರಕ್ಕೆ ನಮ್ಮ ಪಾಪ ಫಲಗಳೆಲ್ಲವೂ ನಿವಾರಣೆಯಾಗಿಬಿಡುತ್ತವೆ. ಭಗವಂತನ ಅನುಗ್ರಹ ನಮ್ಮ ಮೇಲಾಗುತ್ತದೆ. “ಪುಣ್ಯ ಶ್ರವಣ ಕೀರ್ತನ….” ಭಾಗವತವನ್ನು ಕೇಳುವುದರಿಂದ ಸ್ತುತಿಸುವುದರಿಂದಲೇ ನಮಗೆ ಪುಣ್ಯ ಸಂಚಯವಾಗುತ್ತದೆ.
ನಮ್ಮ ಜೀವನದ ಮೇಲೆ ಜನ್ಮಾಂತರಗಳ ಪಾಪ ಪುಣ್ಯಗಳೆಲ್ಲವೂ ಪ್ರಭಾವ ಬೀರುತ್ತವೆಯೆಂಬುದು ತಿಳಿದುದೇ ಆಗಿದೆ. ಆದರೆ ಭಾಗವತ ಶ್ರವಣ ಮಾಡಿದರೆ ಈ ಯಾವ ಸಂಚಯಗಳೂ ಗಣನೆಗೆ ಬರುವುದಿಲ್ಲ. ನಮ್ಮ ಪಾಲಿಗಂತೂ ಹೃದಯ ಪರಿಶುದ್ಧಗೊಂಡು ಭಗವದ್ಧಾಮದಲ್ಲೊಂದು ನೆಲೆ ಕಟ್ಟಿಟ್ಟ ಬುತ್ತಿಯಾಗುತ್ತದೆ. ಆದ್ದರಿಂದ ‘ಶ್ರವಣ’ ಅತಿ ಮುಖ್ಯ ಸಂಗತಿ ಭಾಗವತ ಶ್ರವಣ ಮಾತ್ರದಿಂದಲೇ ವ್ಯಕ್ತಿಯೊಬ್ಬ ಅತ್ಯಂತ ಪರಿಪೂರ್ಣನಾಗುತ್ತಾನೆ.
ಭಾಗವತ ಶ್ರವಣವು ಅತ್ಯಂತ ಪರಿಣಾಮಕಾರಿ. ಆದರೆ ಅದನ್ನು ಭಕ್ತರ ಸಂಗದಲ್ಲಿ, ಶುದ್ಧಭಕ್ತರ ಸಮುಖದಲ್ಲಿ ಶ್ರವಣ ಮಾಡಿದರೆ ಇನ್ನೂ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.
ಶುಕಮುನಿಗಳು ಪರೀಕ್ಷಿತ ಮಹಾರಾಜನಿಗೆ ಭಾಗವತವನ್ನು ಬೋಧಿಸಿದಾಗ ಅನೇಕಾನೇಕ ಭಕ್ತರು ಅಲ್ಲಿ ನೆರೆದಿದ್ದರು. ಭಕ್ತರ ಸಂಗದಲ್ಲಿ ಭಾಗವತ ಶ್ರವಣವು ಅನೇಕ ಪುಣ್ಯಫಲಗಳನ್ನು ತಂದುಕೊಡುತ್ತದೆ ಎನ್ನುವ ಕಾರಣದಿಂದಲೇ ಇಂದಿನ ದಿನಗಳಲ್ಲಿ ಕೂಡ ಸಾಮೂಹಿಕ ಭಕ್ತವೃಂದಕ್ಕೆ ಭಾಗವತ ಶ್ರವಣದ ಅವಕಾಶ ಕಲ್ಪಿಸಿಕೊಡಲಾಗುತ್ತದೆ.
ಶುಕಮುನಿಗಳು ಭಾಗವತವನ್ನು ಪ್ರವಾಚಿಸುತ್ತಿದ್ದಾಗ ಸೂತ ಮುನಿಗಳು ಕೂಡ ಇತರ ಭಕ್ತರೊಂದಿಗೆ ಶ್ರವಣ ಮಾಡುತ್ತ ಕುಳಿತಿದ್ದರು. ಅವರು ಎಂತಹ ಶ್ರೇಷ್ಠ ಭಕ್ತ ಋಷಿಯೆಂದರೆ, ಮುಂದೆ ಅವರಿಂದ ಭಾಗವತದ ಪುನರ್ ನಿರೂಪಣೆ ಸಾಧ್ಯವಾಯಿತು. ಅವರೊಬ್ಬಪರಿಶುದ್ಧ ಭಕ್ತರಾಗಿದ್ದರಿಂದಲೇ ಇದು ಸಾಧ್ಯವಾಯಿತು.
ಸೂತಮುನಿಗಳು ಶೌನಕ ಮುನಿಗಳಿಗೆ ಭಾಗವತವನ್ನು ಬೋಧಿಸುವಾಗಲೂ ಸಹ ನೈಮಿಷಾರಣ್ಯದಲ್ಲಿ ಅನೇಕ ಭಕ್ತರು ನೆರೆದಿದ್ದರು. ಯಾವಾಗ ಭಾಗವತವು ಮುಕ್ತಾತ್ಮರಿಂದ ಹೇಳಲ್ಪಟ್ಟು, ಶುದ್ಧ ಭಕ್ತರ ಸಾಂಗತ್ಯದಲ್ಲಿ ಕೇಳಲ್ಪಡುವುದೋ ಆಗ ಅದರ ಪರಿಣಾಮವೂ ತೀವ್ರಗೊಳ್ಳುವುದು.
ಆದ್ದರಿಂದ ಭಾಗವತವನ್ನೂ ಗ೦ಭೀರವಾಗಿ ಪರಿಗಣಿಸಬೇಕು. ಭಕ್ತಿಯಿಂದ ಪಠಿಸಬೇಕು, ಸಂಪೂರ್ಣವಾಗಿ ಸ್ವೀಕರಿಸಬೇಕು. ಅದರ ಬದಲಿಗೆ, “ನನಗೆ ಭಾಗವತದ ಈ ಅಧ್ಯಾಯ ಇಷ್ಟ, ಇದನ್ನು ಮಾತ್ರ ಓದುವೆ’ ಎನ್ನುವುದಾಗಲೀ, ”ಭಾಗವತದ ಇಂತಹಾ ಭಾಗ ನನಗೆ ಸೇರಿಕೆಯಾಗದು. ಇದನ್ನು ನಾನು ಸ್ವೀಕರಿಸುವುದಿಲ್ಲ” ಎನ್ನುವುದಾಗಲೀ ಸರಿಯಲ್ಲ.
ಹಾಗೆ ತಿಳಿಯುವುದು ಅಪರಾಧ, ಶ್ರೀಲ ಪ್ರಭುಪಾದರು ಈ ಬಗೆಯ ಚಿಂತನೆಯನ್ನು “ಅರ್ಧ ಕುಕ್ಕುಟ ನ್ಯಾಯ” ಎಂದು ಕರೆಯುತ್ತಾರೆ. ‘ಅರ್ಧಕೋಳಿಯ ತರ್ಕ!’ ರೈತನೊಬ್ಬ ಕೋಳಿ ಕೊಳ್ಳಲು ಹೋದಾಗ ‘ನನಗೆ ಮೊಟ್ಟೆಯಿಡುವ ಕೋಳಿಯ ಹಿಂದಿನ ಅರ್ಧಭಾಗ ಮಾತ್ರ ಕೊಡಿ’ ಎಂದಂತೆ ಇದು ಕೂಡಾ!!
ಮುಂದಿನ ಭಾಗ ಕೊಂಡರೆ, ಅದಕ್ಕೆ ಕಾಳು ತಿನ್ನಿಸಬೇಕಾಗುವುದಲ್ಲ ಎಂಬ ಚಿಂತೆ. ಇದೆಂಥ ಮೊಂಡು ವಾದ! ಭಾಗವತವನ್ನು ವಿಭಜಿಸಿ ‘ಈ ಭಾಗ ಮೆಚ್ಚುಗೆ, ಈ ಭಾಗ ಸೇರದು’ ಎಂದೆಲ್ಲ ಹೇಳುವುದು ಕೂಡ ಅರ್ಧ ಕೋಳಿ ಕೊಳ್ಳಬಯಸುವ ರೈತನ ಮೂರ್ಖತನಕ್ಕೆ ಸಮ! ಮೊಟ್ಟೆ ಇಡುವ ಭಾಗವನ್ನು ಮಾತ್ರ ಕತ್ತರಿಸಿಕೊಡಿ ಎಂದರೆ, ಕೋಳಿಯೇ ಸತ್ತು ಹೋಗುವುದಿಲ್ಲವೇ?

ನಾವು ಭಾಗವತ ಶ್ರವಣ’ ದ ಕುರಿತು ಚರ್ಚಿಸುತ್ತಿದ್ದೇವೆ. ಆದರೆ ಇಂದಿನ ಬಹುಪಾಲು ಜನರಿಗೆ ಭಾಗವತವನ್ನು ಕೇಳುವ ವ್ಯವಧಾನವೇ ಇರುವುದಿಲ್ಲ. ನಮಗೆಲ್ಲರಿಗೂ ಚಿತ್ರಗೀತೆಗಳನ್ನು, ರಾಜಕೀಯ ಚರ್ಚೆಗಳನ್ನು, ಕಾಡುಹರಟೆಗಳನ್ನು ಕೇಳುವ ಸಹನೆ ಇರುತ್ತದೆ. ಆದರೆ ಭಾಗವತ ಶ್ರವಣಕ್ಕೆ ಸಮಯವೇ ಇಲ್ಲ! ಏಕೆ ಹೀಗೆ?
ಏಕೆಂದರೆ ನಮ್ಮ ಮನಸ್ಸು ಕಶ್ಮಲದಿಂದ ತುಂಬಿಹೋಗಿದೆ. ನಮಗೆ ಈ ಬಗೆಯ ಲೌಕಿಕ ರೀತಿಯಿಂದಲೇ ಆನಂದ ದೊರೆಯುವುದೆಂದು ನಾವು ಭಾವಿಸಿದ್ದೇವೆ. ಆದರೆ ಅಂತರದಲ್ಲಿ ನಮಗೂ ತಿಳಿದಿದೆ, ಈ ಯಾವ ಲೌಕಿಕ ಅಂಶಗಳೂ ನಮಗೆ ಪರಿಪೂರ್ಣ ತೃಪ್ತಿಯನ್ನು ನೀಡಲಾರವು ಎಂದು.
ಕೇವಲ ಭಾಗವತ ಮಾತ್ರವೇ ನಮ್ಮೊಳಗಿನ ಖಾಲಿತನವನ್ನು ತುಂಬಬಹುದು. ನಮ್ಮನ್ನು ಕಾಡುತ್ತಿರುವ ಆಧ್ಯಾತ್ಮಿಕ ಖಾಲಿತನವನ್ನು ತುಂಬಿಕೊಡಲು ಆಧ್ಯಾತ್ಮಿಕ ಕೃತಿಗಳಿಂದ ಮಾತ್ರ ಸಾಧ್ಯ. ಅದರಲ್ಲಿಯೂ ಭಾಗವತವು ಮನುಷ್ಯನನ್ನು ಪರಿಪೂರ್ಣನಾಗಿಸುವ ಸಲುವಾಗಿಯೇ ಇದೆ. ನಮ್ಮೊಳಗಿನ ಆತ್ಮವು ಭಾಗವತದಂತಹ ಪಾರಮಾರ್ಥಿಕ ಸಂಗತಿಗಳಿಂದ ಮಾತ್ರ ತೃಪ್ತಿಗೊಳ್ಳಲು ಸಾಧ್ಯ.
ಶುಕಮುನಿಗಳ ಸಮ್ಮುಖದಿಂದ ಭಾಗವತ ಶ್ರವಣ ಮಾಡಿದ ಪರೀಕ್ಷಿತ ಮಹಾರಾಜನು ಎಷ್ಟು ಪ್ರಭಾವಿತನಾಗಿದ್ದನೆಂದರೆ, ಆತನಿಗೆ ನಿದ್ರೆ, ಹಸಿವೆಗಳ ಪರಿವೆಯೂ ಇರಲಿಲ್ಲ! ಅವನ ಆತ್ಮ ಪರಿತೃಪ್ತಗೊಂಡಿದ್ದರಿಂದ ಆತನಿಗೆ ದೇಹಭಾವನೆಯೇ ಹೊರಟು ಹೋಗಿತ್ತು.
ಇಂತಹ ಅನುಭವವನ್ನು ನಾವೂ ಪಡೆಯಲು ಸಾಧ್ಯ. ಆದರೆ ಅದಕ್ಕೆ ಬೇಕಾದ ಅರ್ಹತೆಯನ್ನು ನಾವು ಮೊದಲು ಗಳಿಸಿಕೊಳ್ಳಬೇಕಷ್ಟೆ. ಅಂತಹ ಅರ್ಹತೆ ಸೂತ ಪುರಾಣಿಕರಿಗೂ ಸಿದ್ಧಿಸಿತ್ತು. ಅವರು ಭಾಗವತಾಮೃತವನ್ನು ಕರ್ಣದಿಂದ ಪಾನಮಾಡುತ್ತಿದ್ದರೇನೋ ಎನ್ನುವಷ್ಟು ತಲ್ಲೀನರಾಗಿ ಕುಳಿತಿದ್ದರು.
ಚೈತನ್ಯ ಚರಿತಾಮೃತದಲ್ಲಿಯೂ ಭಾಗವತ ಶ್ರವಣದ ಬಗ್ಗೆ ಸಾಕಷ್ಟು ಹೇಳಲಾಗಿದೆ. ಶ್ರೀ ಚೈತನ್ಯ ಮಹಾಪ್ರಭುಗಳು ಭಾಗವತದ ಹಿರಿಮೆಯನ್ನು ಮತ್ತೆ ಮತ್ತೆ ಸಾರುತ್ತ ಅದರ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದಾರೆ. ‘ಭಾಗವತ ಶ್ರವಣ, ಕೃಷ್ಣಪ್ರೇಮ ಜಗೈಯಾʼ – ಭಾಗವತವನ್ನು ಕೇಳಿದ ಮಾತ್ರದಿಂದಲೇ ಕೃಷ್ಣಪ್ರೇಮವು ಜಾಗೃತವಾಗುತ್ತದೆ. ನಾವು ಶ್ರದ್ಧಾಭಕ್ತಿಗಳಿಂದ ಶ್ರವಣ ಮಾಡಿದಾಗ ಸಾಕ್ಷಾತ್ ಶ್ರೀಕೃಷ್ಣನೇ ನಮ್ಮ ಹೃದಯಗಳಲ್ಲಿ ಒಡಮೂಡುತ್ತಾನೆ.
ಕೆಲವರು ನನಗೆ ಭಾಗವತ ಕೇಳುವ ಅಭಿರುಚಿಯಿಲ್ಲ ಎಂದು ಹೇಳಬಹುದು. ಮೊದಮೊದಲು ಒತ್ತಾಯ ಪೂರ್ವಕವಾಗಿ ಭಾಗವತ ಶ್ರವಣಕ್ಕೆ ನಮ್ಮನ್ನು ಒಪ್ಪಿಸಿಕೊಂಡರೆ, ಅದರಿಂದ ಉಂಟಾಗುವ ಪರಿಶುದ್ಧಿ, ಮುಂದೆ ನಮ್ಮನ್ನು ಆಸಕ್ತಿಯಿಂದ ಅದರಲ್ಲಿ ತೊಡಗುವಂತೆ ಪ್ರೇರೇಪಿಸುತ್ತದೆ.
ಕಾಮಾಲೆ ಕಾಯಿಲೆ ಬಂದಿರುವ ಮನುಷ್ಯನೊಬ್ಬನಿಗೆ ಕಲ್ಲು ಸಕ್ಕರೆಯನ್ನು ನೀಡಹೋದರೆ, ತನಗದು ರುಚಿಸದೆಂದು ಹಿಂತೆಗೆಯುತ್ತಾನೆ. ಅವನಿಗೆ ತನ್ನ ಜಾಡ್ಯದಿಂದಾಗಿ ಸಕ್ಕರೆಯ ಸವಿ ತಿಳಿಯುವುದೇ ಇಲ್ಲ. ಹಾಗೆಯೇ ರೋಗಗ್ರಸ್ತ ಮನಸುಗಳಿಗೆ ಭಾಗವತದ ಸ್ವಾದ ಅರಿವಿಗೆ ಬರುವುದಿಲ್ಲ.
ಆದರೆ, ಮತ್ತೆ ಮತ್ತೆ ರೋಗಿಗೆ ಕಲ್ಲು ಸಕ್ಕರೆಯನ್ನು ನೀಡುತ್ತಲೇ ಇರಬೇಕು. ಇದರಿಂದ ಅವನು ಗುಣಮುಖನಾಗಿ ಸಕ್ಕರೆಯ ಸವಿ ತಿಳಿದಂತಾಗುತ್ತದೆ. ತನ್ನ ರೋಗ ವಾಸಿಯಾಗುವಂತಹದು ಎನ್ನುವ ನಂಬಿಕೆಯೂ ಮೂಡುತ್ತದೆ.

ಇದಕ್ಕೆ ಮತ್ತೊಂದು ಸುಲಭ ಉದಾಹರಣೆಯೆಂದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ವ್ಯಕ್ತಿಯನ್ನು ಭಾಗವತ ಶ್ರವಣಕ್ಕೆ ಪ್ರೇರೇಪಿಸುವುದು. ಮೊದ ಮೊದಲು ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತವೆ, ರಚ್ಚೆ ಹಿಡಿಯುತ್ತವೆ. ಆದರೆ ಒತ್ತಾಯದಿಂದ ಹೋಗಲಾರಂಭಿಸಿದ ಮೇಲೆ ಇದಲ್ಲ ತನ್ನ ಒಳಿತಿಗಾಗಿಯೇ ಎಂಬುದು ಅರಿವಾಗಿ ಶಾಲೆಗೆ ಹೋಗುವುದನ್ನು ಇಷ್ಟಪಡಲಾರಂಭಿಸುತ್ತಾರೆ, ಅದರಲ್ಲಿ ಮಗ್ನರಾಗುತ್ತಾರೆ. ಭಾಗವತವನ್ನು ಒಲ್ಲೆ ಎನ್ನುವವರ ವಿಷಯದಲ್ಲಿಯೂ ಹಾಗೆಯೇ.
ಆದರೆ, ಒಮ್ಮೆ ಅವರಿಗೆ ಅದರ ರುಚಿ ಸಿಕ್ಕಿಬಿಟ್ಟರೆ ಸಾಕು, ಮುಂದೆಂದೂ ಅವರು ಬೇರೇನನ್ನೂ ಬಯಸಲಾರರು. ಅತ್ಯುನ್ನತ ಶಾಸ್ತ್ರಗ್ರಂಥಗಳಾದ ಭಗವದ್ಗೀತೆ ಮತ್ತು ಭಾಗವತಗಳೆರಡೂ ಆರಂಭದಲ್ಲಿ ಕೇವಲ ನಾಲ್ಕು ನಾಲ್ಕು ಶ್ಲೋಕಗಳ ಮೂಲಕ ಹೇಳಲ್ಪಟ್ಟಿದ್ದವು. ಸ್ವತಃ ಭಗವಾನ್ ಶ್ರೀಕೃಷ್ಣನೂ ಇದನ್ನು ಬೋಧಿಸಿದ್ದನು.
ಭಗವದ್ಗೀತೆಯು ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ಮತ್ತೊಮ್ಮೆ ನೇರವಾಗಿ ಕೃಷ್ಣನಿಂದ ಅರ್ಜುನನಿಗೆ ಹೇಳಲ್ಪಟ್ಟಿತು. ಭಾಗವತವು ಭಗವಂತನ ಅಂಶಾವತಾರ ವೇದವ್ಯಾಸರಿಂದ ಶುಕಮುನಿಗಳಿಗೆ ಬೋಧಿಸಲ್ಪಟ್ಟಿತು. ಭಗವದ್ಗೀತೆಯು ಆಧ್ಯಾತ್ಮಿಕ ಅಧ್ಯಯನದಲ್ಲಿ ಪ್ರೌಢ ಹಂತದ ಅಧ್ಯಯನಕ್ಕೆ ಸಮಾನವೆಂದು ಹೇಳಲಾಗುತ್ತದೆ.
ಭಾಗವತದ ಅಧ್ಯಯನವು ಆದಕ್ಕಿಂತ ಮೇಲಿನ ಹಂತದ್ದು- ಅದು, ಪದವಿ ಅಧ್ಯಯನಕ್ಕೆ ಸಮಾನವಾದುದು. ನಾವು ಹೈಸ್ಕೂಲು – ಪಿ.ಯು.ಸಿ. ಗಳನ್ನು ಮುಗಿಸಿ ಡಿಗ್ರಿ ತರಗತಿಗೆ ಹೋಗುವಂತೆ, ಭಗವದ್ಗೀತೆ ಅಧ್ಯಯನದ ಬಳಿಕ ಭಾಗವತವನ್ನು ಅಧ್ಯಯನ ಮಾಡಬೇಕು.
ಭಗವದ್ಗೀತೆ ಏನು ಹೇಳಿದೆಯೋ, ಭಾಗವತವೂ ಅದನ್ನೇ ಹೇಳುತ್ತದೆ. ಭಗವದ್ಗೀತೆಯು “ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಮ್ ಶರಣಂ ವ್ರಜ” ಎನ್ನುವ ಸಂದೇಶದೊಂದಿಗೆ ಪರಿಸಮಾಪ್ತವಾದರೆ, ಭಾಗವತವು ‘ಧರ್ಮ: ಪ್ರೋಜ್ಝಿತ ಕೈತವೋಽತ್ರ’ ಎನ್ನುವ ಮಾತಿನಿಂದ ಆರಂಭವಾಗುತ್ತದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ” ಎಲ್ಲ ಧರ್ಮಗಳನ್ನು ಪರಿತ್ಯಜಿಸಿ ನನಗೆ ಶರಣಾಗು” ಎಂದು ನಿರ್ದೇಶನ ನೀಡಿದ್ದಾನೆ. ಭಾಗವತದಲ್ಲಿ ಹೇಳಿರುವಂತೆ, “ಧರ್ಮಃ ಪ್ರೋಜ್ಝಿತ ಕೈತವೋಽತ” – ಕೈತವ ಧರ್ಮ…. ಎಲ್ಲ ಧರ್ಮಗಳೂ ಲೌಕಿಕತೆಯ ಸೋಂಕಿನಿಂದ ಮಲಿನಗೊಂಡಿವೆ. ಅದನ್ನು ಹೋಗಲಾಡಿಸಲು ನಿಜವಾದ ಧರ್ಮದಿಂದ ಮಾತ್ರ ಸಾಧ್ಯ.
ಆದರೆ, ಈ “ನಿಜವಾದ ಧರ್ಮ” ಯಾವುದು? ಅದು, ‘ಭಗವಂತನಿಗೆ ಶರಣಾಗುವʼ ಪ್ರಪತ್ತಿ ಧರ್ಮ. ಸರ್ವಶಕ್ತ ಸರ್ವ ಮೂಲನಾದ ದೇವೋತ್ತಮ ಪರಮಪುರುಷನಿಗೆ ಶರಣಾಗುವುದೇ ನಿಜವಾದ ಧರ್ಮ. ಹೀಗೆ ಭಗವಂತನಿಗೆ ಶರಣಾಗುವ ನಿಜವಾದ ಧರ್ಮದ ಪ್ರಸ್ತಾವನೆಯೊಂದಿಗೆ ಭಾಗವತವು ಆರಂಭವಾಗುತ್ತದೆ.
ಭಗವದ್ಗೀತೆಯು ಭಗವಂತನ ‘ಶಬ್ದಾವತಾರ’ವಾಗಿದೆ. ಏಕೆಂದರೆ, ಭಗವಂತನು ಸ್ವತಃ ಇದನ್ನು ಅರ್ಜುನನಿಗೆ ಹೇಳಿದನು. ಹಾಗೆಯೇ, ಭಾಗವತವು ಭಗವಂತನ ಶಾಬ್ದಿಕ ಪ್ರತಿನಿಧಿ. ಏಕೆಂದರೆ ಭಗವಂತನ ಅಂಶಾವತಾರ ವೇದವ್ಯಾಸರಿಂದ ಬರೆಯಲ್ಪಟ್ಟ ಇದನ್ನು ಶುಕಮುನಿಗಳು ಪರೀಕ್ಷಿತನಿಗೆ ಬೋಧಿಸಿದರು.
ಭಗವದ್ಗೀತೆ, ಭಾಗವತಗಳೆರಡೂ ಕೃಷ್ಣನ ಮಹಿಮೆಯನ್ನು ಸಾರುವ “ಕೃಷ್ಣ ಕಥೆಗಳೇ.” ಕೃಷ್ಣ ಕಥಾಶ್ರವಣದಿಂದ ಅಗಣಿತ ಆಧ್ಯಾತ್ಮಿಕ ಪುಣ್ಯಸಂಚಯವಾಗುವುದು. ಆದ್ದರಿಂದ ನಾವು ಪ್ರತಿನಿತ್ಯ ಭಾಗವತ ಪಠಣ-ಶ್ರವಣದಲ್ಲಿ ತೊಡಗಿರಬೇಕು.

ಶ್ರೀಲ ಪ್ರಭುಪಾದರ ಜೀವನವನ್ನು ಅವಲೋಕಿಸಿದಾಗ ಅಚ್ಚರಿಯೆನಿಸುತ್ತದೆ. ಅವರು ತಮ್ಮ ಇಳಿವಯಸ್ಸಿನಲ್ಲಿ ಕೂಡ ಭಾಗವತದ ಮಹಿಮೆಯನ್ನು, ಸಂದೇಶವನ್ನು ಸಾರುವ ಕೆಲಸದಲ್ಲಿ ಪ್ರವೃತ್ತರಾಗಿದ್ದರು. ನಡುರಾತ್ರಿಯಲ್ಲಿ ಎದ್ದು ಕುಳಿತು ಅವರು ಭಾಗವತದ ಅನುವಾದದಲ್ಲಿ ತೊಡಗಿರುತ್ತಿದ್ದರು.
ಹಗಲಿನ ತಿರುಗಾಟ, ಉಪನ್ಯಾಸ, ಸಂಕೀರ್ತನ, ಇರುಳಿನ ಈ ಲೇಖನ ಕಾರ್ಯ… ಈ ಯಾವುದನ್ನೂ ಅವರು ತಪ್ಪಿಸುತ್ತಿರಲಿಲ್ಲ. ಏಕೆಂದರೆ, ಅವರಿಗೆ ಭಾಗವತದ ಪ್ರಾಮುಖ್ಯ ತಿಳಿದಿತ್ತು. ಆದರ ಸಂದೇಶವನ್ನು ಎಲ್ಲೆಡೆ ಹರಡಬೇಕೆಂದು ಅವರು ಬಯಸಿದ್ದರು.
ಪ್ರಭುಪಾದರ ಭಾಗವತದ ಶ್ಲೋಕಗಳ ಭಾವರ್ಥವನ್ನು ನೀಡುವಾಗ ಪ್ರಚಲಿತ ಸಂಗತಿಗಳ ವಿಶ್ಲೇಷಣೆ ನಡೆಸುತ್ತ, ಭಾಗವತದ ಸಾರ್ವಕಾಲಿಕ ಪ್ರಸ್ತುತತೆಯನ್ನು ಮನದಟ್ಟು ಮಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ನಾವು ಜನರು ಆಧ್ಯಾತ್ಮದತ್ತ ಹೆಚ್ಚು ಹೆಚ್ಚು ಮುಖ ಮಾಡುತ್ತಿರುವುದನ್ನು ಕಾಣಬಹುದು. ಇದಕ್ಕೆ ಕಾರಣವೇನು? ವಿಶ್ವಾದ್ಯಂತ ನಾವಿಂದು ಧ್ಯಾನ ಮಂದಿರಗಳನ್ನು ಆಧ್ಯಾತ್ಮಮಂದಿರಗಳನ್ನು ನೋಡುತ್ತಿರುವುದಕ್ಕೆ ಕಾರಣವೇನು? ಜನರು ತಮ್ಮ ನೆಮ್ಮದಿಯ ತಾಣವನ್ನು ಬಹಳ ಉತ್ಸುಕತೆಯಿಂದ ಅರಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಅವರು ಆಧ್ಯಾತ್ಮಿಕತೆಯ ಮೊರೆ ಹೋಗುತ್ತಿದ್ದಾರೆ. ಆದರೆ, ಹೃದಯ ಪರಿಶುದ್ಧವಾಗಲು ಭಾಗವತದಂತಹ ಪುಣ್ಯ ಗ್ರಂಥದ ಶ್ರವಣ ಮಾಡುವುದು ಅತಿಮುಖ್ಯವೆಂದು ಅವರು ಮನಗಾಣಬೇಕು.
ಭಾಗವತವು ನಿತ್ಯ ನೂತನ ಗ್ರಂಥ. ಅದನ್ನು ಎಷ್ಟು ಬಾರಿ ಕೇಳಿದರೂ ನಮಗೆ ಆಯಾಸವನಿಸದು. ಅದು ಪಾರಮಾರ್ಥಿಕ ಕೃತಿಯಾದ್ದರಿಂದ, ಅದನ್ನು ಕೇಳಿದಷ್ಟು ನಮಗೆ ಅದರಡೆಗಿನ ಆಕರ್ಷಣೆ ಹಚ್ಚುವುದು.
ಧೃತರಾಷ್ಟ್ರನು ಲೌಕಿಕ ಬಂಧಗಳ ಬಲೆಯಲ್ಲಿ ಸಿಲುಕಿಕೊಂಡಿದ್ದ. ರಾಜ್ಯ-ಭೋಗವೇ ಮೊದಲಾದ ಸಂಗತಿಗಳು ಅವನನ್ನು ಸುತ್ತಿಕೊಂಡಿದ್ದವು. ಆದರೆ ಮಹಾಭಕ್ತನಾಗಿದ್ದ ವಿದುರನು ತನ್ನ ಉಪದೇಶದಿಂದ ಧೃತರಾಷ್ಟ್ರನಿಗೆ ಕವಿದಿದ್ದ ಪೊರೆಯನ್ನು ಕಳಚಿ ಹಾಕಿದ.
ವೇದವ್ಯಾಸರು ನಾರದ ಮುನಿಯಿಂದ ಉಪದೇಶ ಪಡೆದು ಭಾಗವತವನ್ನು ರಚಿಸಿದರು. ಅರ್ಜುನನಂತೂ ರಣರಂಗದ ಮಧ್ಯದಲ್ಲಿ ಯುದ್ಧದ ಕಾವೇರಿದ್ದ ವಾತಾವರಣದಲ್ಲಿ ತನ್ನ ಕರ್ತವ್ಯ ಯಾವುದೆಂಬ ಬಗ್ಗೆ ಸಂಶಯಾಕುಲನಾಗಿ, ಕೃಷ್ಣನಿಂದ ಉಪದೇಶ ಪಡೆದ. ವೈದಿಕ ಶಾಸ್ತ್ರಗಳ ಉಪದೇಶ ಪಡೆಯುವಾಗ ವ್ಯಕ್ತಿಯು ಶಿಷ್ಯನಂತೆ ಅತ್ಯಂತ ವಿನಮ್ರನಾಗಿರಬೇಕೆಂದು ಹೇಳಲಾಗಿದೆ.
ಆಗ ಮಾತ್ರವೇ ಆ ವ್ಯಕ್ತಿಯು ಜ್ಞಾನದ ಉನ್ನತ ವೇದಿಕೆಗೆ ಏರುತ್ತಾನೆ. ಸ್ವೀಕರಿಸುವ ವ್ಯಕ್ತಿಯು ಸಿದ್ಧನಾಗಿದ್ದರೆ ಸಾಕು, ಯಾವ ಸ್ಥಳ, ಸಮಯ, ಸಂದರ್ಭದಲ್ಲಾದರೂ ಭಾಗವತ ಭಗವದ್ಗೀತೆಯಂತಹ ಪಾರಮಾರ್ಥಿಕ ಕೃತಿಗಳು ತಮ್ಮ ಪರಿಣಾಮವನ್ನು ಬೀರುವಲ್ಲಿ ಸಫಲವಾಗುತ್ತವೆ ಮತ್ತು ವ್ಯಕ್ತಿಯನ್ನು ಉನ್ನತ ಹಂತಕ್ಕೆ ಏರಿಸುತ್ತವೆ.






Leave a Reply