ಶ್ರೀ ಕಾಶೀಶ್ವರ ಪಂಡಿತರು ಶ್ರೀ ಈಶ್ವರ ಪುರಿಗಳ ಶಿಷ್ಯರು. ಅವರ ತಂದೆಯ ಹೆಸರು ವಾಸುದೇವ ಭಟ್ಟಾಚಾರ್ಯ. ಪಂಡಿತರು ಶ್ರೀ ಚೈತನ್ಯ ಮಹಾಪ್ರಭುಗಳ ಶ್ರೇಷ್ಠ ಭಕ್ತರಾಗಿದ್ದರು.
ಮಹಾಪ್ರಭುಗಳು ಪುರಿ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿದಾಗಲೆಲ್ಲ ಅಪಾರ ಜನಸ್ತೋಮ ನೆರೆದುಬಿಡುತ್ತಿತ್ತು. ಭಕ್ತಜನರಿಂದ ಮಹಾಪ್ರಭುಗಳನ್ನು ರಕ್ಷಿಸಲು ಕಾಶೀಶ್ವರ ಪಂಡಿತರು ಮುಂದಾಗುತ್ತಿದ್ದರು.
ಗಟ್ಟಿ ಮುಟ್ಟಾದ ಮೈಕಟ್ಟು ಹೊಂದಿದ್ದ ಅವರು ಮಹಾಪ್ರಭುಗಳ ಮೇಲೆ ಜನರು ಮುಗಿ ಬೀಳದಂತೆ ತಡೆಗೋಡೆಯಾಗಿ ನಿಲ್ಲುತ್ತಿದ್ದರು. ಇದರ ಜೊತೆ, ಕೀರ್ತನೆಯ ಅನಂತರ ಪ್ರಸಾದ ವಿತರಿಸುವ ಕೆಲಸವನ್ನೂ ಕಾಶೀಶ್ವರ ಪಂಡಿತರು ವಹಿಸಿಕೊಂಡಿದ್ದರು.

ಶ್ರೀ ಈಶ್ವರ ಪುರಿಗಳ ಶಿಷ್ಯರಾಗಿದ್ದ ಕಾಶೀಶ್ವರ ಮತ್ತು ಗೋವಿಂದರು ತಮ್ಮ ಗುರುಗಳ ಆದೇಶದಂತೆ ಶ್ರೀ ಚೈತನ್ಯ ಮಹಾಪ್ರಭುಗಳ ಸೇವೆಗೆಂದು ಪುರಿಗೆ ಬಂದಿದ್ದರು. ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಇವರಿಬ್ಬರೂ ದೈವ ಸಹೋದರರು. ಮಹಾಪ್ರಭುಗಳು ಅವರ ಬಗ್ಗೆ ಅಪಾರ ಗೌರವ ಭಾವನೆ ಇರಿಸಿಕೊಂಡಿದ್ದರು. ಆದರೆ ತಮ್ಮ ಗುರುಗಳ ನಿರ್ದೇಶನದಂತೆ ಅವರು ತಮ್ಮ ದೈವ ಸಹೋದರರ ಸೇವೆ ಸ್ವೀಕರಿಸಬೇಕಾಯಿತು.
ಮಹಾಪ್ರಭುಗಳು ಕಾಶೀಶ್ವರರನ್ನು ರೂಪಗೋಸ್ವಾಮಿಗಳ ಆರಾಧ್ಯ ದೈವ “ಗೋವಿಂದಜಿ” ಅರ್ಚನೆಗಾಗಿ ಕಾಶೀಶ್ವರರು ವೃಂದಾವನಕ್ಕೆ ತರಳಬೇಕೆಂದು ಕೇಳಿಕೊಂಡರು. ಆದರೆ ಮಹಾಪ್ರಭುಗಳ ಅಗಲಿಕೆಯಿಂದ ತಮ್ಮ ಹೃದಯ ಬಿರಿದು ಹೋಗುವುದೆಂದು ಪಂಡಿತರು ವೇದನೆ ವ್ಯಕ್ತಪಡಿಸಿದರು. ಅವರ ದಿವ್ಯ ಪ್ರೇಮದಿಂದ ಸಂತುಷ್ಟರಾದ ಗೌರ ಸುಂದರರು ಸಂಪೂರ್ಣವಾಗಿ ತಮ್ಮನ್ನೇ ಹೋಲುವ ಮೂರ್ತಿಯೊಂದನ್ನು ಕೊಟ್ಟು, ತಾನು ಸದಾ ಅವರೊಡನೆ ಇರುವುದಾಗಿ ಖಚಿತಪಡಿಸಿದರು.
ಕೊಳಲೂದುತ್ತಿರುವ ಬಂಗಾರದ ಈ ಕೃಷ್ಣಮೂರ್ತಿಗೆ “ಗೌರ ಗೋವಿಂದ” ಎನ್ನುವ ಹೆಸರು. ವೃಂದಾವನಕ್ಕೆ ತೆರಳಿದ ಪಂಡಿತರು – ಗೋವಿಂದ, ಗೌರಗೋವಿಂದರ ಅರ್ಚನೆಯಲ್ಲಿ ತಮ್ಮ ಜೀವಿತಾವಧಿಯನ್ನು ಕಳೆದರು.
ಈ ಮೂರ್ತಿಗಳು ಇಂದು ರಾಜಸ್ಥಾನದ ಜೈಪುರದಲ್ಲಿ ಪೂಜೆಗೊಳ್ಳುತ್ತಿವೆ.






Leave a Reply