ಶ್ರೀ ಬಿಲ್ವಮಂಗಲರ ಗೋವಿಂದ ದಾಮೋದರ ಸ್ತೋತ್ರ

– ಡಾ.ಬಿ.ಆರ್‌.ಸುಹಾಸ್‌

“ಶ್ರೀ ಬಿಲ್ವಮಂಗಲರು ವೈಷ್ಣವ ಭಾಗವತೋತ್ತಮರೂ ಭಾರತದ ಒಬ್ಬ ಶ್ರೇಷ್ಠ ಸಂಸ್ಕೃತದ ಕವಿಗಳೂ ಆಗಿದ್ದರು. ಲೀಲಾಶುಕನೆಂದು ಪ್ರಸಿದ್ಧರಾಗಿದ್ದ ಇವರ ದೇಶ-ಕಾಲಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಇವರು ಕರ್ನಾಟಕ-ಕೇರಳಗಳ ಅಂಚಿನ ಪ್ರಾಂತ್ಯದವರಾಗಿದ್ದರು.

ಇವರ ಮೇರುಕೃತಿ, ಶ್ರೀಕೃಷ್ಣಕರ್ಣಾಮೃತ. ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿದ್ದ ಇದನ್ನು ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ತೀರ್ಥಯಾತ್ರೆಯ ಸಮಯದಲ್ಲಿ ಸಂಗ್ರಹಿಸಿ, ಉತ್ತರ ಭಾರತದಲ್ಲಿ ಪ್ರಚುರಪಡಿಸಿದರು. ಬಿಲ್ವಮಂಗಲರು ಇದಲ್ಲದೇ, ಬಾಲಕೃಷ್ಣಸ್ತೋತ್ರ, ಬಾಲಗೋಪಾಲ ಸುತ್ತಿ, ಕೃಷ್ಣಬಾಲಚರಿತೆ, ದಕ್ಷಿಣಾಮೂರ್ತಿಸ್ತವ, ಮೊದಲಾದ ಅನೇಕ ವೈಷ್ಣವ-ಶೈವ ಸ್ತೋತ್ರಗಳನ್ನೂ, ಶಂಕರ ಹೃದಯಾಂಗಣ ಎಂಬ ಕೇನೋಪನಿಷತ್ತಿನ ಶಾಂಕರ ಭಾಷ್ಯಕ್ಕೆ ವ್ಯಾಖ್ಯಾನವನ್ನೂ ಬರೆದಿದ್ದಾರೆ.

ಮೊದಲು ಶೈವರಾಗಿದ್ದ ತಾವು, ಬಾಲಕೃಷ್ಣನ ಮುಗ್ಧ ಮೋಹಕರೂಪಿಗೆ ಮನಸೋತು ವೈಷ್ಣವರಾದರೆಂದು ಕೃಷ್ಣಕರ್ಣಾಮೃತದಲ್ಲಿ ಹೇಳಿಕೊಂಡಿದ್ದಾರೆ. ಇವರು ಒಟ್ಟು 28 ಗ್ರಂಥಗಳನ್ನು ರಚಿಸಿದ್ದಾರೆ. ಮಧುರವಾದ ಪದಾವಲಿಗಳಿಂದ ಕೂಡಿರುವ ಇವರ ಗೋವಿಂದ ದಾಮೋದರಸ್ತೋತ್ರವನ್ನು ಇಲ್ಲಿ ಅನುವಾದಿಸಿ ಕೊಡಲಾಗಿದೆ. (ಮುಂದೆ ಓದಿ…)”

ಅಕ್ರೂರಯಾನೇ ಯದುವಂಶನಾಥಂ

ಸಂಗಚ್ಚಮಾನಂ ಮಥುರಾಂ ನಿರೀಕ್ಷ್ಯ |

ಊಚುರ್ವಿಯೋಗಾತ್‌ ಕಿಲ ಗೋಪಬಾಲಾ

ಗೋವಿಂದ ದಾಮೋದರ ಮಾಧವೇತಿ ||

ಯದುವಂಶನಾಥನಾದ ಭಗವಾನ್ ಶ್ರೀಕೃಷ್ಣನು ಅಕ್ರೂರನೊಂದಿಗೆ ರಥದಲ್ಲಿ ಕುಳಿತು ಮಥುರೆಗೆ ಹೊರಡುವುದನ್ನು ಕಂಡ ಗೋಪಿಕಾಸ್ತ್ರೀಯರು ಕೃಷ್ಣವಿಯೋಗದಿಂದ ಅತಿ ದುಃಖಿತರಾಗಿ, ‘ಗೋವಿಂದ, ದಾಮೋದರ, ಮಾಧವ’ ಎಂದು ರೋದಿಸತೊಡಗಿದರು.

ಚಕ್ರಂದ ಗೋಪೀ ನಲಿನೀವನಾಂತೇ

ಕೃಷ್ಣೇನ ಹೀನಾ ಕುಸುಮೇ ಶಯಾನಾ ।

ಪ್ರಫುಲ್ಲನೀಲೋತ್ಪಲಲೋಚನಾಭ್ಯಾಂ

ಗೋವಿಂದ ದಾಮೋದರ ಮಾಧವೇತಿ? ||

ಶ್ರೀಕೃಷ್ಣನು ಇಲ್ಲದೇ ರಾಧೆಯು ವಿಯೋಗವನ್ನು ಸಹಿಸದೇ, ಕಮಲವನದಲ್ಲಿ ಕುಸುಮಶಯ್ಯೆಯಲ್ಲಿ ಮಲಗುತ್ತಾ, ನೈದಿಲೆಗಳಂತೆ ಅರಳಿದ್ದ ತನ್ನ ಸುಂದರ ಕಂಗಳಿಂದ ಕಣ್ಣೀರು ಸುರಿಸುತ್ತಾ ‘ಗೋವಿಂದ, ದಾಮೋದರ, ಮಾಧವ’ ಎಂದು ಅಳತೊಡಗಿದಳು.

ಮಾತಾಪಿತೃಭ್ಯಾಂ ಪರಿವಾರ್ಯಮಾಣಾ

ಗೇಹೇ ಪ್ರವಿಷ್ಟಾ ವಿಲಲಾಪ ಗೋಪೀ ।

ಆಗತ್ಯ ಮಾಂ ಪಾಲಯ ವಿಶ್ವನಾಥ

ಗೋವಿಂದ ದಾಮೋದರ ಮಾಧವೇತಿ ||

ತಾಯ್ತಂದೆಯರು ರಾಧೆಯನ್ನು ಸಮಾಧಾನಪಡಿಸುತ್ತಾ ಅವಳ ವಿರಹದ ಶೋಕವನ್ನು ನಿವಾರಿಸಲು ಯತ್ನಿಸುತ್ತಿದ್ದರೂ, ಅವಳು ಮನೆಯೊಳಗೆ ಓಡಿ ಹೋಗಿ, ಶ್ರೀಕೃಷ್ಣನ ವಿರಹದಿಂದ ಶೋಕಾವಿಷ್ಟಳಾಗಿ, ‘ಹೇ ವಿಶ್ವನಾಥ, ಬೇಗ ಬಂದು ನನ್ನನ್ನು ಕಾಪಾಡು!’ ಎಂದು ಅಳುತ್ತಳುತ್ತಾ, ‘ಗೋವಿಂದ, ದಾಮೋದರ, ಮಾಧವ’ ಎಂದುಸುರಿದಳು.

ಸಾ ನೀರಜಾಕ್ಷೀಮವಲೋಕ್ಯ ರಾಧಾಂ

ರುರೋದ ಗೋವಿಂದವಿಯೋಗಖಿನ್ನಾಮ್ |

ಸಖೀ ಪ್ರಫುಲೋತ್ಪಲಲೋಚನಾಭ್ಯಾಂ

ಗೋವಿಂದ ದಾಮೋದರ ಮಾಧವೇತಿ ||

ಗೋವಿಂದನ ವಿಯೋಗದಿಂದ ಖಿನ್ನಳಾಗಿದ್ದ ಕಮಲನಯನ ರಾಧಾದೇವಿಯನ್ನು ನೋಡಿ ಅವಳ ಸಖಿಯೂ ಅರಳಿದ ಕಮಲಗಳಂಥ ತನ್ನ ಕಂಗಳಿಂದ ನೀರು ಸುರಿಸುತ್ತಾ, ‘ಗೋವಿಂದ, ದಾಮೋದರ, ಮಾಧವʼ ಎಂದು ಅಳತೊಡಗಿದಳು.

ಕಂಸಸ್ಯ ದೂತೇನ ಯದೈವ ನೀತೌ

ವೃಂದಾವನಾಂತಾದ್‌ ವಸುದೇವಸೂನೂ |

ರುರೋದ ಗೋಪೀ ಭವನಸ್ಯ ಮಧ್ಯೇ

ಗೋವಿಂದ ದಾಮೋದರ ಮಾಧವೇತಿ ||

ಕಂಸನ ದೂತನಿ೦ದ ವಸುದೇವಪುತ್ರರಾದ ಕೃಷ್ಣ, ಬಲರಾಮರು ವೃಂದಾವನದಿಂದ ದೂರ ಕರೆದೊಯ್ಯಲ್ಪಟ್ಟಾಗ, ರಾಧೆಯು ಮನೆಯ ಮಧ್ಯದಲ್ಲಿ ನಿಂತು ‘ಗೋವಿಂದ, ದಾಮೋದರ, ಮಾಧವ’ ಎನ್ನುತ್ತ ದುಃಖಿಸಿದಳು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi