ದ್ರೌಪದಿ
(ಆಧಾರ – ಶ್ರೀ ಶ್ರೀಮದ್ ಎ.ಸಿ.ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರ ಭಾವಾರ್ಥಗಳು; ಭಾಗವತ ಪ್ರಥಮ ಸ್ಕಂಧ; 13ನೇ ಅಧ್ಯಾಯ)
ದ್ರುಪದ ಮಹಾರಾಜನ ಪುತ್ರಿ; ಅತಿ ಶ್ರೇಷ್ಠ ಪತಿವ್ರತೆ ಮತ್ತು ಆಂಶಿಕವಾಗಿ ಇಂದ್ರಪತ್ನಿಯಾದ ಶಚೀದೇವಿಯ ಅವತಾರ. ದ್ರುಪದ ಮಹಾರಾಜನು ಯಜನೆಂಬ ಋಷಿಯ ನೇತೃತ್ವದಲ್ಲಿ ಮಹಾಯಾಗವನ್ನು ಕೈಗೊಂಡನು. ಮೊದಲ ಆಹುತಿಯಿಂದ ಧೃಷ್ಟದ್ಯುಮ್ನ ಜನಿಸಿದನು; ಎರಡನೆಯ ಆಹುತಿಯಿಂದ ದ್ರೌಪದಿ ಹುಟ್ಟಿದಳು.

ಆದ್ದರಿಂದ ಅವಳು ಧೃಷ್ಟದ್ಯುಮ್ನನ ತಂಗಿಯಾಗಿದ್ದಾಳೆ. ಅವಳಿಗೆ ಪಾಂಚಾಲಿ ಎಂಬ ಹೆಸರೂ ಇದೆ. ಐದೂ ಜನ ಪಾಂಡವರು ಅವಳನ್ನು ಮದುವೆಯಾಗಿ ಸಮಾನ ಸಹಧರ್ಮಿಣಿಯನ್ನಾಗಿಸಿಕೊಂಡರು. ಒಬ್ಬೊಬ್ಬರೂ ಅವಳಲ್ಲಿ ಒಬ್ಬೊಬ್ಬ ಮಗನನ್ನು ಪಡೆದರು. ಮಹಾರಾಜ ಯುಧಿಷ್ಠಿರನು ಪ್ರತಿಭಿತ್ ಎಂಬ ಮಗನನ್ನು ಪಡೆದನು.
ಭೀಮಸೇನನು ಸುತಸೋಮನೆಂಬ ಮಗನನ್ನು ಪಡೆದನು. ಅರ್ಜುನನು ಶ್ರುತಕೀರ್ತಿಯನ್ನು ಪಡೆದನು. ನಕುಲನು ಶತಾನೀಕನನ್ನು ಪಡೆದನು. ಸಹದೇವನು ಶ್ರುತಕರ್ಮನನ್ನು ಪಡೆದನು. ಅವಳು ಅವಳ ಅತ್ತೆಯಾದ ಕುಂತಿಯಷ್ಟೇ ಪರಮ ಸುಂದರಿ ಎಂದು ವರ್ಣಿಸಲಾಗಿದೆ. ಅವಳನ್ನು ಕೃಷ್ಣೆಎಂದು ಕರೆಯಬೇಕೆಂದು ಅವಳ ಜನನ ಕಾಲದಲ್ಲಿ ಅಶರೀರವಾಣಿ ಕೇಳಿಸಿತ್ತು.

ಅದೇ ಅಶರೀರವಾಣಿ ಆಕೆ ಅನೇಕ ಕ್ಷತ್ರಿಯರನ್ನು ಕೊಲ್ಲಲು ಹುಟ್ಟಿದ್ದಾಳೆಂದೂ ಘೋಷಿಸಿತ್ತು. ಶಂಕರನಿಂದ ದೊರೆತ ಆಶೀರ್ವಾದದ ಪ್ರಭಾವ ಅವಳಷ್ಟೇ ಅರ್ಹರಾದ ಐವರು ಗಂಡಂದಿರನ್ನು ಅವಳಿಗೆ ಕರುಣಿಸಿತ್ತು. ಅವಳು ತನ್ನ ಪತಿಯನ್ನು ಸ್ವಯಂ ವರಿಸಬೇಕಾಗಿ ಬಂದಾಗ ಜಗತ್ತಿನ ಎಲ್ಲ ದೇಶಗಳಿಂದ ರಾಜಕುಮಾರರೂ ರಾಜರೂ ಆಹ್ವಾನಿತರಾಗಿದ್ದರು.
ಪಾಂಡವರು ರಾಜ್ಯಭ್ರಷ್ಟರಾಗಿ ಕಾಡಿನಲ್ಲಿದ್ದ ಕಾಲದಲ್ಲಿ ಅವಳನ್ನು ಮದುವೆಯಾದರು. ಆದರೆ ಅವರು ತಮ್ಮ ಮನೆಗೆ ಮರಳಿದಾಗ ದ್ರುಪದ ಮಹಾರಾಜನು ಅವರಿಗೆ ವರದಕ್ಷಿಣೆಯಾಗಿ ಅಪಾರ ಸಂಪತ್ತನ್ನು ನೀಡಿದನು. ಧೃತರಾಷ್ಟ್ರನ ಎಲ್ಲ ಸೊಸೆಯಂದಿರು ಆಕೆಯನ್ನು ಆದರದಿಂದ ಬರಮಾಡಿಕೊಂಡಿದ್ದರು.
ಜೂಜಾಟದಲ್ಲಿ ಅವಳನ್ನೂ ಕಳೆದುಕೊಂಡಾಗ, ಅವಳನ್ನು ಆಸ್ಥಾನಕ್ಕೆ ಬಲಾತ್ಕಾರದಿಂದ ಎಳೆತರಲಾಯಿತು. ಭೀಷ್ಮ, ದ್ರೋಣರಂತಹ ಹಿರಿಯ ವ್ಯಕ್ತಿಗಳು ಆಸ್ಥಾನದಲ್ಲಿ ಇದ್ದರೂ ಕೂಡ ದುಃಶ್ಯಾಸನನು ಅವಳ ನಗ್ನ ಸೌ೦ದರ್ಯವನ್ನು ನೋಡಲು ಪ್ರಯತ್ನಪಟ್ಟನು. ಆಕೆ ಭಗವಾನ್ ಕೃಷ್ಣನ ಮಹಾ ಭಕ್ತೆ.

ದ್ರೌಪದಿಯ ಪ್ರಾರ್ಥನೆಯಿಂದಾಗಿ, ಅವಳನ್ನು ಅವಮಾನದಿಂದ ಪಾರುಮಾಡಲು ಸ್ವಯಂ ಭಗವಂತನೇ ಅಪರಿಮಿತ ಉಡುಗೆಯಾದನು. ಜಟಾಸುರನೆಂಬ ರಾಕ್ಷಸ ಅವಳನ್ನು ಅಪಹರಿಸಿದ. ಆದರೆ ಅವಳ ಎರಡನೆಯ ಗಂಡ ಭೀಮಸೇನನು ರಾಕ್ಷಸನನ್ನು ಕೊಂದು ಅವಳನ್ನು ಕಾಪಾಡಿದ. ಭಗವಾನ್ ಕೃಷ್ಣನ ಅನುಗ್ರಹದಿಂದ ಅವಳು, ಮಹರ್ಷಿ ದುರ್ವಾಸರ ಶಾಪದಿಂದ ಪಾಂಡವರನ್ನು ಕಾಪಾಡಿದಳು.
ವಿರಾಟನ ಅರಮನೆಯಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಕೀಚಕನು ಅವಳ ಅತಿಶಯವಾದ ರೂಪಕ್ಕೆ ಮೋಹಿತನಾದ. ಭೀಮನ ಒಡಂಬಡಿಕೆಯಿಂದಾಗಿ ಆ ದೈತ್ಯ ಹತನಾದ; ಆಕೆ ರಕ್ಷಿತಳಾದಳು. ಅವಳ ಐದೂ ಮಕ್ಕಳನ್ನು ಅಶ್ವತ್ಥಾಮನು ಕೊಂದಾಗ, ಆಕೆ ತುಂಬ ದುಃಖಪಟ್ಟಳು.
ಕಟ್ಟಕಡೆಯ ಸ್ಥಿತಿಯಲ್ಲಿ ಯುಧಿಷ್ಠಿರ ಮತ್ತು ತನ್ನ ಇತರ ಗಂಡಂದಿರಿಂದೊಡಗೂಡಿದ ಆಕೆ ದಾರಿಯಲ್ಲಿ ಬಿದ್ದಳು. ಯುಧಿಷ್ಠಿರನು ಅವಳ ಪತನಕ್ಕೆ ಕಾರಣವನ್ನು ವಿವರಿಸಿದನು; ಆದರೆ ಯುಧಿಷ್ಠಿರನೇ ಸ್ವರ್ಗ ಲೋಕವನ್ನು ಪ್ರವೇಶಿಸಿದಾಗ, ದ್ರೌಪದಿ ಸ್ವರ್ಗಲೋಕದಲ್ಲಿ ಭಾಗ್ಯದ ಅಧಿದೇವತೆಯಾಗಿ ವೈಭವದಿಂದಿರುವುದನ್ನು ಕಂಡನು.






Leave a Reply