‘ಕೃಷ್ಣ’ನಾಮ ಜಪದಲ್ಲಿ…

ಶ್ರೀ ಶ್ರೀಮದ್ ಎ.ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪನಾಚಾರ್ಯ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾಸಂಘ

ಜನವರಿ 1, 1969ರಲ್ಲಿ ಲಂಡನ್ನಿನ ನಾಗರಿಕರಿಗಾಗಿ ನೀಡಿದ ಉಪನ್ಯಾಸ

– ಅನುವಾದ : ಚೇತನಾ ತೀರ್ಥಹಳ್ಳಿ

ಭಗವಾನ್ ಶ್ರೀಕೃಷ್ಣನು ಐದು ಸಾವಿರ ವರ್ಷಗಳ ಹಿಂದೆ ಭೂಮಿಯಲ್ಲಿ ಅವತರಿಸಿ ಬಂದನು ಮತ್ತು ಅದ್ವಿತೀಯ ತತ್ತ್ವಜ್ಞಾನ ಹಾಗೂ ಕೃಷ್ಣಪ್ರಜ್ಞೆಯ ಧಾರ್ಮಿಕ ಆದರ್ಶಗಳನ್ನು ಭಗವದ್ಗೀತೆಯ ರೂಪದಲ್ಲಿ ನಮಗಾಗಿ ನೀಡಿದನು.

ದುರದೃಷ್ಟವಶಾತ್, ಕಾಲಕ್ರಮೇಣ ಭೌತಿಕ ಜಗತ್ತಿನ ಬದಲಾವಣೆ ಹಾಗೂ ಅವನತಿಯ ಕಾರಣದಿ೦ದಾಗಿ ಜನರು ಅಧಃಪತನಕ್ಕೊಳಗಾಗಿ ಕೃಷ್ಣಪ್ರಜ್ಞೆಯ ಕಲೆಯನ್ನೇ ಮರೆತುಹೋದರು. ಆದ್ದರಿಂದ ಶ್ರೀಕೃಷ್ಣನು ಪುನಃ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಹದಿನೈದನೆಯ ಶತಮಾನದ ಅಂತಿಮ ಭಾಗದಲ್ಲಿ ಅವತರಿಸಿಬಂದನು ಮತ್ತು ಮಾನವ ಸಮಾಜದಲ್ಲಿ ಅದೇ ಕೃಷ್ಣಪ್ರಜ್ಞೆಯನ್ನು ಪುನರುಜ್ಜೀವನಗೊಳಿಸಿದನು.

ಕಲಹಯುಗದ ಈ ಕಾಲಘಟ್ಟದ ಪತಿತಾತ್ಮಗಳಿಗೆ ಶ್ರೀಚೈತನ್ಯರ ವಿಶೇಷ ಉಡುಗೊರೆಯೆಂದರೆ, ಎಲ್ಲ ಜನರೂ – ಧಾರ್ಮಿಕ ಪ್ರವೃತ್ತಿಯವರು, ತತ್ತ್ವಜ್ಞರು, ಪ್ರತಿಯೊಬ್ಬರೂ – ಕೃಷ್ಣನ ಪವಿತ್ರನಾಮ ಜಪವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದ್ದು, ಶ್ರೀ ಚೈತನ್ಯರು ನಮಗೆ ಪರಮಸತ್ಯನಾದ ದೇವೋತ್ತಮ ಪರಮ ಪುರುಷನು ಪಾರಮಾರ್ಥಿಕ ಶಬ್ದದ ರೂಪದಲ್ಲಿ ಅವತರಿಸಬಲ್ಲನೆಂದೂ, ನಾವು ದೋಷರಹಿತರಾಗಿ ಹರೇಕೃಷ್ಣ ಮಂತ್ರ ಜಪ ಮಾಡುವ ತತ್ ಕ್ಷಣದಿಂದ ಕೃಷ್ಣ ಹಾಗೂ ಆತನ ಆಂತರಿಕ ಶಕ್ತಿಯೊಡನೆ ಸಂಪರ್ಕ ಹೊಂದುವೆವೆಂದೂ ಸೂಚಿಸಿರುವರು.

ಈ ಬಗೆಯಿಂದ ನಾವು ಶೀಘ್ರವಾಗಿ ನಮ್ಮ ಹೃದಯದ ಕಶ್ಮಲಗಳನ್ನೆಲ್ಲ ಕಳೆದುಕೊಂಡು ಪರಿಶುದ್ಧರಾಗುವೆವು.

ಭೌತಿಕ ಅಸ್ತಿತ್ವದ ನಮ್ಮ ಬದ್ಧ ಬದುಕಿಗೆ ಹೃದಯದಲ್ಲಿನ ಕಲ್ಮಷಗಳೇ ಕಾರಣವಾಗಿವೆ.

ಮೂಲವಾಗಿ ನಾವೆಲ್ಲರೂ ಕೃಷ್ಣಪ್ರಜ್ಞಾವಂತ ಜೀವಿಗಳು. ಆದರೆ ಬಹುಕಾಲದಿಂದ ಭೌತಿಕತೆಯ ಸಾಂಗತ್ಯ ಹೊಂದಿದವರಾಗಿ ಜನನ ಮರಣಗಳ ಯಾತನಾ ಚಕ್ರಕ್ಕೆ ಸಿಲುಕಿ ವಿವಿಧ ಬಗೆಯ ಜೀವಯೋನಿಗಳಲ್ಲಿ (84,00,000 ಬಗೆ) ನಾವೆಲ್ಲರೂ ಒಂದು ದೇಹದಿಂದ ಮತ್ತೊಂದಕ್ಕೆ ವಲಸೆಯೇಳುತ್ತಾ, ವಾಸ್ತವ ಮೂಲವಾಗಿ ಚೇತನಾತ್ಮವಾಗಿದ್ದು, ಆ ಕಾರಣದಿಂದ ಗುಣಾತ್ಮಕವಾಗಿ ಶ್ರೀಕೃಷ್ಣನ ಸಂವಿಧಾನದಲ್ಲಿ ಒಂದೇ ಆಗಿರುವೆವು ಮತ್ತು ನಮ್ಮ ಭೌತಿಕ ದೇಹದೊಂದಿಗೆ ಗುರುತಿಸಿಕೊಳ್ಳುವೆವು.

ಹೀಗೆ ನಾವು ವಿವಿಧ ಬಗೆಯ ಭೌತಿಕ ಯಾತನೆಗಳು, ನಿರ್ದಿಷ್ಟವಾಗಿ ಜನನ, ವೃದ್ಧಾಪ್ಯ, ಕಾಯಿಲೆ ಹಾಗೂ ಮರಣ ಮೊದಲಾದವುಗಳಿಗೆ ಒಳಪಡುವೆವು.

ಇಡಿಯ ಲೌಕಿಕ ನಾಗರಿಕತೆಯು ಜನನ, ವೃದ್ಧಾಪ್ಯ, ರೋಗ ಹಾಗೂ ಮರಣಗಳ ವಿರುದ್ಧ ಕಠಿಣ ಸಂಘರ್ಷವನ್ನು ಹೊಂದಿರುವುದು. ಈ ನಿರಂತರ ಸಮಸ್ಯೆಗಳ ವಿರುದ್ಧ ಮಾನವ ಸಮಾಜವು ಹಲವು ಬಗೆಗಳಿಂದ ವಿಫಲ ಹೋರಾಟ ನಡೆಸಿರುವುದು. ಕೆಲವು ಜನರು ಭೌತಿಕ ಪ್ರಯತ್ನಗಳಲ್ಲಿ ತೊಡಗಿದ್ದರೆ, ಮತ್ತೆ ಕೆಲವರು ಆಂಶಿಕವಾಗಿ ಆಧ್ಯಾತ್ಮಿಕ ಯತ್ನಗಳಲ್ಲಿ ತೊಡಗಿಕೊಂಡಿರುವರು.

ಭೌತವಾದಿಗಳು ಈ ಸಮಸ್ಯೆಗಳನ್ನು ವೈಜ್ಞಾನಿಕ ತಿಳುವಳಿಕೆ, ಶಿಕ್ಷಣ, ತತ್ತ್ವಜ್ಞಾನ, ಸಿದ್ಧಾಂತ, ಸಾಹಿತ್ಯ ಇತ್ಯಾದಿಗಳಿಂದ ಬಗೆಹರಿಸಲು ಯತ್ನಿಸುತ್ತಿರುವರು. ಮುಮುಕ್ಷಗಳು ಈ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಚೇತನಾತ್ಮದಿಂದ ಐಹಿಕ ವಿಷಯವನ್ನು ಬೇರ್ಪಡಿಸಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿರುವರು. ಮತ್ತೆ ಕೆಲವರು ನಿಗೂಢ ಯೋಗಗಳಿಂದ ಜನನ ಮರಣಗಳನ್ನು ಮೀರಲು ಯತ್ನಿಸುತ್ತಿರುವರು.

ಆದರೆ ಈ ಎಲ್ಲ ಜನರು ಭೌತಿಕವಾದಿಗಳು, ಮುಮುಕ್ಷಗಳು ಮತ್ತು ಯೋಗಿಗಳು ಈ ಕಲಿಯುಗದಲ್ಲಿ, ಕಲಹ ಯುಗದಲ್ಲಿ, ಕೃಷ್ಣಪ್ರಜ್ಞೆಯ ಅಂಗೀಕಾರದ ಹೊರತು ಯಶಸ್ಸಿನ ಯಾವುದೇ ಸಾಧ್ಯತೆಯಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಭಾಗವತ ಪುರಾಣದ ವಕ್ತಾರರಾದ ಶುಕಮುನಿಗಳು ಈ ಕಾರಣದಿಂದಲೇ, ನೀವು ಕಾಮ್ಯಕರ್ಮಿಯಾಗಿರಿ, ಮುಮುಕ್ಷುವಾಗಿರಿ ಇಲ್ಲವೇ ನಿಗೂಢ ಯೋಗಿಯಾಗಿರಿ. ನಿಜವಾಗಿಯೂ ನೀವು ಭೌತಿಕ ಅಸ್ತಿತ್ವದ ಪಂಜರಗಳಿಂದ ಬಿಡುಗಡೆ ಬಯಸುವಿರಾದರೆ, ನೀವು ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ / ಹರೇರಾಮ ಹರೇರಾಮ ರಾಮರಾಮ ಹರೇಹರೇ ಮಂತ್ರ ಜಪದ ಪ್ರಕ್ರಿಯೆಯನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದು ಬೋಧಿಸಿರುವರು.

ಕೃಷ್ಣಪ್ರಜ್ಞೆಯೆಂದರೆ, ನಮ್ಮ ಹೃದಯದಿಂದ ಭೌತಿಕ ವಾಂಛೆಗಳ ದೂಳನ್ನೊರಸಿ ಪರಿಶುದ್ಧಗೊಳಿಸಿಕೊಳ್ಳುವ ಕಲೆ, ಜೀವರಾಶಿಗಳಾದ ನಾವು ವಾ೦ಛೆಗಳನ್ನು ನಮ್ಮ ಸ೦ವಿಧಾನದ ಒಂದು ಅಂಗಭಾಗವಾಗಿ ಹೊಂದಿದ್ದೇವೆ. ಆದ್ದರಿಂದ ನಾವು ಬಯಕೆಗಳಿಂದ ಹೊರತಾಗಿರುವುದು ಸಾಧ್ಯವಿಲ್ಲ.

ಆದರೆ ನಾವು ಈ ವಾಂಛೆಗಳನ್ನು ಪರಿಶುದ್ಧಗೊಳಿಸಿಕೊಳ್ಳಬಹುದು. ಬಯಕೆಗಳನ್ನು ಕೊಲ್ಲುವುದು ಪರಿಹಾರವಲ್ಲ, ಆದರೆ ಬಯಕೆಯ ರೋಗಗ್ರಸ್ತ ಸ್ಥಿತಿಯನ್ನು ಸುಧಾರಿಸಿ ಗುಣಪಡಿಸುವುದೇ ಸೂಕ್ತ ಪರಿಹಾರ. ಯಾವಾಗ ಅಪಾರ್ಥದ ದೂಳನ್ನು ನಮ್ಮ ಹೃದಯದಿಂದ ಒರೆಸಲಾಗುವುದೋ, ಆಗ ನಾವು ನಮ್ಮ ನಿಜವಾದ ಸ್ಥಾನವನ್ನು ಕಾಣಬಹುದು ಹಾಗೂ ಜೀವನದ ಆತ್ಯಂತಿಕ ಗುರಿಯತ್ತ ನಮ್ಮ ವೇಗದ ಪ್ರಗತಿಯನ್ನು ಮಾಡಿಕೊಳ್ಳಬಹುದು.

ಭಗವಂತ ಅಥವಾ ಕೃಷ್ಣನೊಂದಿಗೆ ನಮ್ಮ ಸಂಬಂಧವನ್ನು ಪುನರುಜ್ಜೀವನಗೊಳಿಸಿಕೊಳ್ಳುವುದೇ ಜೀವನದ ಆತ್ಯಂತಿಕ ಗುರಿ ಎನ್ನುವುದನ್ನು ನಾವು ಮರೆತುಬಿಟ್ಟಿದ್ದೇವೆ. ಈ ಸಂಬಂಧವನ್ನು ಪುನರುಜ್ಜೀವನಗೊಳಿಸಿಕೊಳ್ಳಲು ನಾವು ಕೃಷ್ಣ ಪ್ರಜ್ಞೆಯ ಎಲ್ಲ ಚಟುವಟಿಕೆಗಳನ್ನೂ ಆಚರಿಸಬೇಕು. ನಾವು ನಿಮಗೆ ನಿಮ್ಮ ವೃತ್ತಿಯನ್ನು ಬಿಡಲು ಹೇಳುವುದಿಲ್ಲ; ಕೃಷ್ಣ ಪ್ರಜ್ಞೆಯ ಎಲ್ಲ ಕರ್ತವ್ಯಗಳನ್ನು ನಿಭಾಯಿಸುವಂತೆ ಹೇಳುತ್ತಿರುವವಷ್ಟೆ.

ಶ್ರೀಚೈತನ್ಯ ಮಹಾಪ್ರಭುಗಳು ಎಂದಿಗೂ ವ್ಯಕ್ತಿಯು ತನ್ನ ಜೀವನದಲ್ಲಿ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಹೇಳಿಲ್ಲ ಅದರ ಬದಲು, ಅವರು ವ್ಯಕ್ತಿಯೊಬ್ಬನು ತನ್ನ ಸ್ಥಾನದಲ್ಲಿದ್ದುಕೊಂಡೇ ಅರ್ಹ ಮೂಲಗಳಿಂದ ಕೃಷ್ಣನನ್ನು ಕುರಿತು ಆಲಿಸಬೇಕೆಂದು ಬಯಸಿದ್ದರು.

ಜೀವನದ ನೈಜ ಗುರಿಯನ್ನು ತಲಪಲು, ವ್ಯಕ್ತಿಯು ತಾತ್ತ್ವಿಕ ಊಹಾಪೋಹಗಳ ಕೃತಕ ಪ್ರಕ್ರಿಯೆಗಳನ್ನು ತೊರೆಯಬೇಕು ಮತ್ತು ಭಾಗವತ-ಭಗವದ್ಗೀತೆಗಳಂತಹ ವೈದಿಕ ಸಾಹಿತ್ಯಗಳಲ್ಲಿ ಹೇಳಲಾಗಿರುವ ಕೃಷ್ಣಪ್ರಜ್ಞಾ ತತ್ತ್ವವನ್ನು ನಿರಂತರವಾಗಿ ಶ್ರವಣ ಮಾಡಬೇಕು.

ವ್ಯಕ್ತಿಯು ನಿರಂತರವಾಗಿ ಮಹಾಮಂತ್ರ (ಹರೇಕೃಷ್ಣ ಮಂತ್ರ) ಜಪಿಸಿದರೆ, ಮತ್ತು ತಪ್ಪು ವ್ಯಾಖ್ಯಾನಗಳಿಲ್ಲದಂತೆ ಭಗವದ್ಗೀತೆಯಲ್ಲಿನ ಕೃಷ್ಣನ ಸಂದೇಶಗಳನ್ನು ಕೇಳುತ್ತಿದ್ದರೆ, ಆಗ ಆ ವ್ಯಕ್ತಿಯು ಯಾವುದೇ ಕೃತಕ ವಿಧದಿಂದ ತನ್ನ ಸ್ಥಾನ ಬದಲಾವಣೆ ಮಾಡಿಕೊಳ್ಳಬೇಕಾಗಿರುವುದಿಲ್ಲ. ಸರಳವಾಗಿ ಕೃಷ್ಣನಾಮಜಪ ಮತ್ತು ಶ್ರವಣ ಮಾಡುವ ಮೂಲಕ, ನೀವು ಪಾರಮಾರ್ಥಿಕ ಸ್ಥಾನವನ್ನು ಹೊಂದುತ್ತೀರಿ. ಮತ್ತು ಇಲ್ಲಿ ನೀವು ಭಗವಂತನನ್ನು ಅವನ ಹೆಸರು, ಸ್ವರೂಪ, ಗುಣಗಳು, ಲೀಲೆಗಳು, ಪರಿವಾರ – ಮತ್ತೆಲ್ಲವನ್ನು ಅರಿಯಬಲ್ಲಿರಿ.

ಇಂದು ನಾವು ಭಗವಂತ ಅಥವಾ ಕೃಷ್ಣನೆಡೆಗೆ ಅತ್ಯಲ್ಪ ಸಂಬಂಧವಿರುವ ನೇತಾರರಿಂದ ತಪ್ಪು ದಾರಿಗೆಳೆಯಲ್ಪಡುತ್ತಿರುವೆವು. ಅವರಲ್ಲಿ ಕೆಲವರು ಭಗವದಸ್ತಿತ್ವವನ್ನೇ ನಿರಾಕರಿಸುವರು. ಮತ್ತೆ ಕೆಲವರು ತಮ್ಮನ್ನು ತಾವು ಭಗವಂತನ ಸ್ಥಾನದಲ್ಲಿರಿಸಿಕೊಳ್ಳುವರು. ಇನ್ನು ಕೆಲವರು ಯಾವುದೇ ಒಂದು ತೀರ್ಮಾನಕ್ಕೆ ಬರಲಾರದೆ ವಿಹ್ವಲರಾಗಿ ತೀವ್ರತರದ ಬುದ್ಧಿಗೇಡಿಗಳಾಗಿ ಚಡಪಡಿಸುವರು ಹಾಗೂ ಜೀವನದ ಗುರಿ ಶೂನ್ಯವೆಂದು ತಿಳಿಯುವರು.

ಆದರೆ ಕೃಷ್ಣಪ್ರಜ್ಞೆಯು ಕೇವಲ ಭಗವಂತನ ಪವಿತ್ರನಾಮ ಜಪದಿಂದ ಅವನನ್ನು ನೇರವಾಗಿ ಅರ್ಥೈಸಿಕೊಳ್ಳಬಹುದಾದ ಭದ್ರನೆಲೆಯಾಗಿರುವುದು.

ಆಧ್ಯಾತ್ಮಿಕವಾಗಿ ಕುರುಡರಾದ ನೇತಾರರಿಂದ ತಪ್ಪು ಹಾದಿಗೆಳೆಸಲ್ಪಟ್ಟ ಜನಸಾಮಾನ್ಯರು, ಸ್ವತಃ ತಾವೇ ಆಧ್ಯಾತ್ಮಿಕವಾಗಿ ಕುರುಡುತನ ಹೊಂದಿದವರಾಗಿದ್ದು, ವಾಂಛಿತ ಯಶಸ್ಸನ್ನು ಪಡೆಯುವಲ್ಲಿ ವಿಫಲರಾಗಿರುವರು. ಆದರೆ ನೇರವಾಗಿ ಕೃಷ್ಣನಿಂದ ನೀಡಲ್ಪಟ್ಟ ಕೃಷ್ಣಪ್ರಜ್ಞಾಪದ್ಧತಿಯು ಇಲ್ಲಿದೆ.

ಭಗವಂತನು ಐದು ಸಾವಿರ ವರ್ಷಗಳ ಹಿಂದೆ ಭಗವದ್ಗೀತೆಯ ಮೂಲಕ ಸರಳವಾಗಿ ತನ್ನ ಸಂದೇಶಗಳನ್ನು ನೀಡಿರುವನು, ಮತ್ತು ಐನೂರು ವರ್ಷಗಳ ಹಿಂದೆ ಶ್ರೀ ಚೈತನ್ಯ ಮಹಾಪ್ರಭುಗಳ ರೂಪದಲ್ಲಿ ಬಂದು ಅದನ್ನು ಅವನು ದೃಢಪಡಿಸಿರುವನು.

ಕೃಷ್ಣಪ್ರಜ್ಞಾ ಚಳವಳಿಯು ಜೀವನದ ಅತ್ಯುನ್ನತವಾದ ಹಾಗೂ ಸುಲಭವಾದ ಕಲೆಯಾಗಿರುವುದು.

ಕೃಷ್ಣಪ್ರಜ್ಞಾ ಚಳವಳಿಯು ನಿಮಗೆ ನೀವು ಬಯಸುವ ಎಲ್ಲವನ್ನೂ ಯಾವುದೇ ಕೃತಕ ಪ್ರಯತ್ನವಿಲ್ಲದೆ ನೀಡುವುದು. ಇದು ಪಾರಮಾರ್ಥಿಕವಾಗಿ ವರ್ಣರಂಜಿತವಾಗಿದ್ದು, ಪಾರಮಾರ್ಥಿಕ ಆನಂದದಿಂದ ಕೂಡಿರುವುದು. ನಾವು ಕೃಷ್ಣಪ್ರಜ್ಞೆಯನ್ನು ಸಂಗೀತ, ನರ್ತನ, ಪ್ರಸಾರ ಹಾಗೂ ಕೃಷ್ಣನಿಂದಾರಂಭಗೊಂಡು ಗುರುಶಿಷ್ಯ ಪರಂಪರೆಯಲ್ಲಿ ಹರಿದುಬಂದಿರುವ ಅಧಿಕೃತ ಆಧ್ಯಾತ್ಮಿಕ ಗುರುಗಳಿಂದ ತತ್ತ್ವಜ್ಞಾನವನ್ನು ಆಲಿಸುವ ಮೂಲಕ ಆಚರಿಸುತ್ತೇವೆ.

ಆದ್ದರಿಂದ ಕೃಷ್ಣಪ್ರಜ್ಞೆಯು ನಮ್ಮ ಸಹಜ ಸ್ವಭಾವದ ಕೃತಕ ಬದಲಾವಣೆಗೆ ಒಳಪಡಿಸದೆ ನಮಗೆ ಸಂಪೂರ್ಣ ಆಧ್ಯಾತ್ಮಿಕ ಯಶಸ್ಸನ್ನು ನೀಡುತ್ತದೆ ಎನ್ನಬಹುದು.

ಪ್ರಜ್ಞೆಯು ಅದಾಗಲೇ ನಿಮಲ್ಲಿದೆ. ನಾವು ಮಾಡಬೇಕಾದುದೆಲ್ಲ, ನಮ್ಮ ಪ್ರಜ್ಞೆಯನ್ನು ಮುಸುಕಿರುವ ಕಶ್ಮಲಗಳನ್ನು ಶುಚಿಗೊಳಿಸಿ ಅದನ್ನು ಪರಿಶುದ್ಧಪ್ರಜ್ಞೆ- ಕೃಷ್ಣಪ್ರಜ್ಞೆಯಾಗಿಸುವುದಷ್ಟೆ. ಮತ್ತು ನಾವಿದನ್ನು ಭಗವಂತನ ವೈಭವದ ಪವಿತ್ರ ನಾಮ ಜಪ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ಹರೇರಾಮ ಹರೇರಾಮ ರಾಮರಾಮ ಹರೇಹರೇ ಮಹಾಮಂತ್ರದ ಆನಂದಕರ ರೀತಿಯಿಂದ ನೆರವೇರಿಸಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi