ಕೃಷ್ಣಪ್ರಜ್ಞೆಯಲ್ಲಿ ಚಟುವಟಿಕೆಗಳು

ಸಾಮಾನ್ಯವಾಗಿ ಜನರು ಕೃಷ್ಣಪ್ರಜ್ಞೆಯನ್ನು ಪ್ರಾಪ೦ಚಿಕ ಕರ್ತವ್ಯ ಹಾಗೂ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ದಾರಿಯೆಂದು ಅಪಾರ್ಥಮಾಡಿಕೊಳ್ಳುತ್ತಾರೆ. ಇಂತಹ ಜನರು ಭಕ್ತರನ್ನು ಪರಾವಲಂಬಿಗಳೆ೦ದೂ ಸಮಾಜದ ಹಣದಲ್ಲಿ ಬದುಕುವವರೆಂದೂ ತಪ್ಪಾಗಿ ಭಾವಿಸುತ್ತಾರೆ.

ಇಂತಹ ತಪ್ಪು ಕಲ್ಪನೆಗಳಿಗೆ, ಧರ್ಮವೆಂದರೆ ಚಟುವಟಿಕೆಗಳಿಂದ ನಿವೃತ್ತರಾಗುವ ಜೀವನ ವಿಧಾನವೆ೦ದೂ ಕೆಲಸಗಳನ್ನು ಮಾಡುವ ಹೊಣೆಗಾರಿಕೆಯಿಲ್ಲದೆ ನಡೆಸುವ ಶಾಂತಿಯುತ ಬದುಕುವ ಪ್ರಯತ್ನವೆಂದೂ ತಿಳಿದಿರುವುದೇ ಕಾರಣವಾಗಿದೆ.

ನಾವು ನಡೆಸುವ ಇಂತಹ ಕೆಲಸ ಕಾರ್ಯಗಳು ಕಾರ್ಮಿಕ ಪ್ರತಿಕ್ರಿಯೆಗಳಿಗೆ ಒಳಪಡುವುದರಿಂದ, ಕೆಲವು ಆಧ್ಯಾತ್ಮಿಕ ಜೀವಿಗಳೆ೦ದು ತಿಳಿಯುವವರು ವಿಶೇಷವಾಗಿ ಮಾಯಾವಾದಿಗಳು ತಮ್ಮ ಚಟುವಟಿಕೆಗಳನ್ನು ತ್ಯಜಿಸಿ, ನೈಷ್ಕರ್ಮದ ವೇದಿಕೆಯಲ್ಲಿ ಉಳಿಯಲು ಯತ್ನಿಸುತ್ತಾರೆ. ಆದರೆ, ಕೃಷ್ಣನು ವ್ಯಕ್ತಿಯೊಬ್ಬನು ಹೀಗೆ ಕೃತಕವಾಗಿ ಚಟುವಟಿಕೆಗಳಿ೦ದ ವಿಮುಖವಾಗುವ ಚಿಂತನೆಯನ್ನೇ ತಿರಸ್ಕರಿಸುತ್ತಾನೆ.

ಚೇತನಾತ್ಮದ ಸ್ವರೂಪವು ಚಟುವಟಿಕೆಯಿಂದ ಕೂಡಿರುವಂತಹದಾಗಿದ್ದು, ಅದು ಕ್ಷಣ ಕಾಲ ಕೂಡ ತಟಸ್ಥವಾಗಿರಲು ಸಾಧ್ಯವಿಲ್ಲ. ಈ ಲೌಕಿಕ ಜಗತ್ತಿನಲ್ಲಿ ನಾವು ಸತ್ತ್ವ, ರಜಸ್ಸು ಹಾಗೂ ತಮಸ್ಸುಗಳೆಂಬ ತ್ರಿಗುಣಗಳ ಪ್ರಭಾವಕ್ಕೆ ಒಳಗಾಗಿದ್ದೇವೆ. ಈ ತ್ರಿಗುಣಗಳ ಪ್ರಭಾವದಿಂದಾಗಿ ವ್ಯಕ್ತಿಯು ಕಾರ್ಯಕ್ಕೆ ಪ್ರಚೋದಿಸುತ್ತಾನೆ ಮತ್ತು ಅವನು ಏನನ್ನಾದರೂ ಮಾಡದೆ ಉಳಿಯುವುದು ಅಸಾಧ್ಯವೇ ಆಗಿರುತ್ತದೆ.

ನಾವು ನಮ್ಮ ಇಂದ್ರಿಯ ತೃಪ್ತಿಗಾಗಿ ಹಪಹಪಿಸುವುದರಿಂದ ನಾವು ಈ ತ್ರಿಗುಣಗಳ ಹಿಡಿತಕ್ಕೆ ಸುಲಭವಾಗಿ ಸಿಲುಕಿಕೊಳ್ಳುತ್ತೇವೆ ಹಾಗೂ ಅದರ ಪರಿಣಾಮವಾಗಿ ಲೌಕಿಕ ಶಕ್ತಿಯು ಪ್ರೇರೇಪಿಸುವ ಮಾರ್ಗದಲ್ಲಿಯೇ ವರ್ತಿಸುವಂತೆ ಬಲಾತ್ಕರಿಸಲ್ಪಡುತ್ತೇವೆ. ಇಂದ್ರಿಯ ಸುಖದ ನಮ್ಮ ನಿರಂತರ ಹುಡುಕಾಟದಲ್ಲಿ ನಾವು ಲೌಕಿಕ ಪ್ರಕೃತಿಯನ್ನೇ ಆಳಲು ಹೊರಡುತ್ತೇವೆ.

ಆದರೆ ಭಗವಂತನ ಲೌಕಿಕ ಶಕ್ತಿಯು ಅದೆಷ್ಟು ಸಶಕ್ತಳೆಂದರೆ, ಆಕೆಯು ನಮ್ಮನ್ನು ಇನ್ನಷ್ಟು ಮತ್ತಷ್ಟು ಬಂಧಿಸುತ್ತ ಸಿಲುಕಿಸುತ್ತ ಹೋಗುತ್ತಾಳೆ. ಶಾಸ್ತ್ರಗಳು ನಮಗೆ ಈ ಲೌಕಿಕ ಜಗತ್ತಿನಲ್ಲಿ ಹೇಗೆ ವರ್ತಿಸಬೇಕು ಮತ್ತು ಈ ಅಶುದ್ಧ ಸೆಳೆತಗಳಿಂದ ಪಾರಾಗಿ ಕ್ರಮೇಣ ನಮ್ಮನ್ನು ನಾವು ಭಗವದ್ಧಾಮಕ್ಕೆ ಮರಳುವ ಜೀವನದ ಆತ್ಯಂತಿಕ ಗುರಿಯೆಡೆಗೆ ಹೇಗೆ ತಿರುಗಿಸಿಕೊಳ್ಳಬೇಕೆಂಬುದರ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಿವೆ.

ಶಾಸ್ತ್ರಗಳು ಸಮಾಜದ ವಿವಿಧ ವರ್ಗಗಳ ಜನರು ಹೇಗೆ ತಮ್ಮ ನಿರ್ದೇಶಿತ ಕರ್ತವ್ಯಗಳನ್ನು ನೆರವೇರಿಸುವ ಮೂಲಕ ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುತ್ತಾ ಅಂತಿಮವಾಗಿ ಲೌಕಿಕ ಜಂಜಾಟದಿಂದ ಮುಕ್ತರಾಗಬಹುದು ಎಂಬುದನ್ನು ವಿವರಿಸುತ್ತವೆ. ನಾವು ನಮಗೆಂದೇ ನಿರ್ದೇಶಿಸಲಾದ ಕರ್ತವ್ಯಗಳನ್ನು ಆಚರಿಸದೆ ಹೋದರೆ ಪರಿಶುದ್ಧರಾಗುವುದು ಸಾಧ್ಯವಿಲ್ಲ ಮತ್ತು ಹೇಗೆ ಕರ್ತವ್ಯ ವಿಮುಖರಾಗುವುದು ಬದುಕಿನ ಅತಿ ದೊಡ್ಡ ತೊಡಕಾಗಿ ಪರಿಣಮಿಸುತ್ತದೆ.

ಈ ಬಗೆಯ ತ್ಯಾಗವು ಜೀವನದ ಪರಿಪೂರ್ಣತೆಯನ್ನು ಗಳಿಸಿಕೊಳ್ಳಲು ಸಹಕರಿಸುವುದಿಲ್ಲ; ಅದಕ್ಕೆ ಬದಲಾಗಿ ಸಾಮಾಜಿಕ ಪ್ರತಿಕ್ರಿಯೆಗಳಿಗೊಂದು ತೊಂದರೆಯೇ ಆಗಿ ಪರಿಣಮಿಸುತ್ತದೆ.

ವ್ಯಕ್ತಿಯೊಬ್ಬನು ನಿರ್ದೇಶಿತ ಕರ್ತವ್ಯಗಳನ್ನು ಮಾಡಿದರೂ, ಚಟುವಟಿಕೆಗಳನ್ನು ತ್ಯಜಿಸಿ ತ್ಯಾಗಿಯಾದರೂ ಆತ್ಯಂತಿಕ ಗುರಿಯು ಆತ್ಮ ಪರಿಶುದ್ಧಿಯಿಂದ ಕ್ರಮೇಣವಾಗಿ ಕೃಷ್ಣಪ್ರಜ್ಞೆಯ ಸ್ತರಕ್ಕೆ ಏರುವುದೇ ಆಗಿರುತ್ತದೆ. ಆದರೆ, ವ್ಯಕ್ತಿಯು ಕೃಷ್ಣಪ್ರಜ್ಞೆಯ ನೇರ ಪ್ರಕ್ರಿಯೆಯನ್ನು ಒಪ್ಪಿಕೊಂಡು ತನ್ನೆಲ್ಲ ಚಟುವಟಿಕೆಗಳನ್ನೂ ಕೃಷ್ಣಪ್ರಜ್ಞೆಯಲ್ಲಿ ನಡೆಸಿದರೆ, ಅದು ನಿರ್ದೇಶಿತ ಕರ್ತವ್ಯಗಳನ್ನು ನಡೆಸುವುದಕ್ಕಿಂತ ಅತ್ಯುತ್ತಮವಾದುದು. ಇದನ್ನು ಭಾಗವತವು ಸ್ಪಷ್ಟಪಡಿಸುವುದು

ಹೀಗೆ:

“ಯಾರಾದರೂ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುವರೆಂದಾದರೆ, ಅವರು ಶಾಸ್ತ್ರೋಕ್ತವಾದ ನಿರ್ದೇಶಿತ ಕರ್ತವ್ಯಗಳನ್ನು ಆಚರಿಸದಿದ್ದರೂ ಭಕ್ತಿಸೇವೆಯನ್ನು ಸಕಾಲಿಕವಾಗಿ ನೆರವೇರಿಸದಿದ್ದರೂ ಹಾಗೂ ಆತನು ತನ್ನ ಶ್ರೇಣಿಯಿಂದ ಪತನಗೊಂಡರೂ ಕೂಡ ಅವನಿಗೆ ಕೆಡುಕಾಗುವುದಿಲ್ಲ ಅಥವಾ ನಷ್ಟವಾಗುವುದಿಲ್ಲ. ಆದರೆ ಅವನು ಶಾಸ್ತ್ರೋಕ್ತವಾದ ಎಲ್ಲ ಶುದ್ಧೀಕರಣ ಪ್ರಕ್ರಿಯೆಗಳನ್ನು ಪಾಲಿಸಿಯೂ ಕೂಡ ಕೃಷ್ಣಪ್ರಜ್ಞೆಯನ್ನು ಹೊಂದಿಲ್ಲವಾದರೆ, ಅದರಿಂದ ಏನುಪಯೋಗ?”

ಕೃಷ್ಣ ಪ್ರಜ್ಞಾವಂತ ಚಟುವಟಿಕೆಗಳು ಸರ್ವ ಮಂಗಳವಾದುದು ಹಾಗೂ ಪ್ರತಿಯೊಬ್ಬರಿಗೂ ಮಂಗಳಕರವಾದುದು. ಇದು ಕೇವಲ ಮಾನವ ಸಮಾಜಕ್ಕಷ್ಟೇ ಅಲ್ಲ, ಮೂರು ಲೋಕದ ಎಲ್ಲ ಜೀವಿಗಳಿಗೂ ಒಳಿತನ್ನು ತಂದುಕೊಡುವಂತಹದು. ಕೃಷ್ಣಪ್ರಜ್ಞಾವಂತ ಚಟುವಟಿಕೆಯು ಅತ್ಯುನ್ನತವಾದ ಜನಹಿತಕಾರವಾಗಿದೆ ಎಂದು ಶ್ರೀಲ ಪ್ರಭುಪಾದರು ಯಾವಾಗಲೂ ನುಡಿಯುತ್ತಿದ್ದರು.

ಪ್ರಭುಪಾದರು ತನ್ನ ಪರಿಚಯದ ಅರಿವು ಕಳೆದುಕೊಂಡ ಶ್ರೀಮಂತನ ಮಗನ ಸಾಮತಿಯನ್ನು ನಿರೂಪಿಸಿರುವರು. ಈ ಕಳೆದುಹೋದ ಮಗನಿಗೆ ಮಾಡಬಹುದಾದ ಅತ್ಯುನ್ನತ ಕಲ್ಯಾಣ ಕಾರ್ಯವೆಂದರೆ, ಅವನಿಗೆ ತನ್ನ ನೈಜ ಪರಿಚಯವನ್ನು ಮಾಡಿಸುವುದು ಮತ್ತು ಅವನ ನೈಜ ತಂದೆ – ಸರ್ವಮಂಗಳಕರವಾದ, ಶ್ರೀಮಂತನಾದ, ಮಹಾನ್ ಶಕ್ತಿಶಾಲಿ, ಸೌಂದರ್ಯಖನಿ, ಸಕಲ ಗುಣಗಣಿ, ಪ್ರಖ್ಯಾತ, ಮಹಾಜ್ಞಾನಿ ಹಾಗೂ ಮಹಾತ್ಯಾಗಿಯಾದ ನಮ್ಮೆಲ್ಲರ ನೈಜ ತಂದೆಯೂ ಆದ ಕೃಷ್ಣನೆಡೆಗೆ ಮರಳಿ ಕರೆದೊಯ್ಯುವುದು.

ಇದನ್ನು ಅರಿಯದ ಜೀವಿಗಳು ಈ ಲೌಕಿಕ ಜಗತ್ತಿನಲ್ಲಿ ಪರಿಪಾಟಲು ಪಡುತ್ತಾ ಸಂಕಟದಲ್ಲಿವೆ. ಅವುಗಳ ಹಿತಕಾಯಲು ಇರುವ ಏಕೈಕ ಮಾರ್ಗವೆಂದರೆ ಮೂಲ ತಂದೆಯಾದ ಕೃಷ್ಣನತ್ತ ಕರೆದೊಯ್ಯುವುದೇ ಆಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi