– ಡಾ.ಬಿ.ಆರ್.ಸುಹಾಸ್
ಸರೋವರೇ ಕಾಲೀಯನಾಗಬದ್ದಂ ಶಿಶುಂ ಯಶೋದಾತನಯಂ ನಿಶಮ್ಯ |
ಚಕ್ರುರ್ಲುಠಂತ್ಯಃ ಪಥಿ ಗೋಪಬಾಲಾ ಗೋವಿಂದ ದಾಮೋದರ ಮಾಧವೇತಿ ||

ಯಶೋದಾತನಯನಾದ ಬಾಲಕೃಷ್ಣನು ಸರೋವರದಲ್ಲಿ ಕಾಳಿಂಗ ಸರ್ಪದಿಂದ ಕಟ್ಟಿ ಹಾಕಲ್ಪಟ್ಟನೆಂದು ದಾರಿಯಲ್ಲಿ ಹೋಗುತ್ತಿದ್ದ ಗೋಪಿಯರು ಕೇಳಿ, ‘ಗೋವಿಂದ, ದಾಮೋದರ, ಮಾಧವ’ ಎಂದು ರೋಧಿಸಿದರು.
ವೃಂದಾವನಸ್ಥಂ ಹರಿಮಾತು ಬುದ್ಧ್ವಾ ಗೋಪೀ ಗತಾ ಕಾಪಿ ವನೇ ನಿಶಾಯಾಮ್ |
ತತ್ರಾಪ್ಯದೃಷ್ಟ್ವಾಽತಿಭಯಾದವೋಚದ್ ಗೋವಿಂದ ದಾಮೋದರ ಮಾಧವೇತಿ ॥
ಒಂದು ದಿನ, ಗೋಪಿಯೊಬ್ಬಳು ಶ್ರೀಕೃಷ್ಣನ ವಿಯೋಗದಿಂದ ಅತ್ಯಂತ ವ್ಯಥಿತಳಾಗಿ ಅವನು ವೃಂದಾವನದಲ್ಲೇ ಇರುವಂತೆ ಕನಸು ಕಂಡಳು. ಅವನನ್ನು ನೋಡಿಯೇ ಬಿಡಬೇಕೆಂದು ಅವಳು ರಾತ್ರಿಯಾಗಿದ್ದರೂ ವನಕ್ಕೆ ಓಡಿದಳು. ಆದರೆ ಅಲ್ಲಿಯೂ ಅವನನ್ನು ಕಾಣದೇ ಅತ್ಯಂತ ಭಯಭೀತಳಾಗಿ, ಗೋವಿಂದ, ದಾಮೋದರ, ಮಾಧವ’ ಎಂದು ಕೂಗಿದಳು.
ಆತ್ಯಂತಿಕವ್ಯಾಧಿಹರಂ ಜನಾನಾಂ ಚಿಕಿತ್ಸಕಂ ವೇದವಿದೋ ವದಂತಿ |
ಸಂಸಾರ ತಾಪತ್ರಯನಾಶಬೀಜಂ ಗೋವಿಂದದಾಮೋದರ ಮಾಧವೇತಿ ||
ವೇದಗಳನ್ನು ಅಧ್ಯಯನ ಮಾಡಿರುವ ಮಹಾವಿದ್ವಾಂಸರು, ಜನರ ದುಃಸಾಧ್ಯ ರೋಗಗಳ ಪರಿಹಾರಕ ಚಿಕಿತ್ಸೆಯೂ, ಸಂಸಾರ ತಾಪತ್ರಯಗಳನ್ನು ನಾಶ ಮಾಡುವ ಬೀಜವೂ ಭಗವಂತನ ನಾಮಗಳಾದ “ಗೋವಿ೦ದ, ದಾಮೋದರ, ಮಾಧವ’ ಎಂದು ಹೇಳುತ್ತಾರೆ. (ಆದ್ದರಿಂದ ಇಂಥ ಭಗವನ್ನಾಮಗಳನ್ನು ಸದಾ ಜಪಿಸುತ್ತಿರಬೇಕು).
ಸುಖಂ ಶಯಾನಾ ನಿಲಯೇ ನಿಜೇಽಪಿ ನಾಮಾನಿ ವಿಷ್ಣೋಃ ಪ್ರವದಂತಿ ಮರ್ತ್ಯಾಃ |
ತೇ ನಿಶ್ಚಿತಂ ತನ್ಮಯತಾಂ ವ್ರಜಂತಿ ಗೋವಿಂದ ದಾಮೋದರ ಮಾಧವೇತಿ ||
ಯಾವ ಮನುಷ್ಯರು ತಮ್ಮ ಮನೆಯಲ್ಲಿ ಸುಖವಾಗಿ ಹಾಸಿಗೆಯ ಮೇಲೆ ಮಲಗಿದ್ದಾಗಲೂ, “ಗೋವಿಂದ, ದಾಮೋದರ, ಮಾಧವ’ ಎಂದು ವಿಷ್ಣುವಿನ ನಾಮಗಳನ್ನು ಉಚ್ಚರಿಸುತ್ತಿರುತ್ತಾರೋ, ಅವರು ನಿಶ್ಚಯವಾಗಿಯೂ ಭಗವಂತನ ತನ್ಮಯತೆಯನ್ನು ಪಡೆಯುತ್ತಾರೆ. (ಭಗವಂತನೇ ಅವರ ಮೈಮನಗಳಲ್ಲಿ ತುಂಬಿಕೊಳ್ಳುತ್ತಾನೆ.)
ಶ್ರೀಕೃಷ್ಣನ ನಾಮಸಂಕೀರ್ತನೆ ಮಾಡಲು ಹೊತ್ತು ಗೊತ್ತುಗಳಾಗಲೀ ಸ್ಥಳ – ನಿರ್ದೇಶನವಾಗಲೀ ಇಲ್ಲ. ಶುದ್ಧವಾದ ಮನಸ್ಸು ಭಕ್ತಿಗಳಿದ್ದರೆ ಸಾಕು; ಊಟ ಮಾಡುವಾಗ, ಸುಖವಾಗಿ ಮಲಗಿದಾಗ, ಸ್ನಾನ ಮಾಡುವಾಗ, ಹೀಗೆ ಯಾವುದೇ ಕೆಲಸ ಮಾಡುವಾಗಲೂ ಎಲ್ಲೇ ಇದ್ದರೂ ಕೃಷ್ಣನ ನಾಮೋಚ್ಛಾರಣೆ ಮಾಡಬಹುದು. ಆದ್ದರಿಂದ, ಕಲಿಯುಗದಲ್ಲಿ ನಾಮಸಂಕೀರ್ತನೆಯೇ ಅತ್ಯಂತ ಸುಲಭವಾದ ಮತ್ತು ಶ್ರೇಷ್ಠವಾದ ಸಾಧನಮಾರ್ಗವಾಗಿದೆ.
ಜಿಹ್ವೇ ರಸಜ್ಞೇ ಮಧುರಪ್ರಿಯಾ ತ್ವಂ ಸತ್ಯಂ ಹಿತಂ ತ್ವಾಂ ಪರಮಂ ವದಾಮಿ ।
ಆವರ್ಣಯೇಥಾ ಮಧುರಾಕ್ಷರಾಣಿ ಗೋವಿಂದ ದಾಮೋದರ ಮಾಧವೇತಿ ||
ಎಲೈ ಜಿಹ್ವೆಯೇ ರಸಜ್ಞೆಯಾದ ನಿನಗೆ ಮಧುರವಾದುದೆಂದರೆ ಬಹಳ ಇಷ್ಟವಲ್ಲವೇ? ಮಧುರಪ್ರಿಯೆ ನೀನು, ಆದ್ದರಿಂದ ನಿನಗೆ ಸತ್ಯವೂ ಪರಮಹಿತವೂ ಆದ ಒಂದು ಮಾತನ್ನು ಹೇಳುತ್ತೇನೆ. ನೀನು ಮಧುರ ಅಕ್ಷರಗಳಾದ ‘ ಗೋವಿಂದ, ದಾಮೋದರ, ಮಾಧವ’ ಎಂಬವುಗಳನ್ನು ಮತ್ತೆ ಮತ್ತೆ ಉಚ್ಚರಿಸುತ್ತಿರು.
ಅಂತರ್ಜಲೇ ಗ್ರಾಹಗೃಹೀತಪಾದೋ ವಿಸೃಷ್ಟವಿಕ್ಲಿಷ್ಟ ಸಮಸ್ತಬಂಧುಃ |
ತದಾ ಗಜೇಂದ್ರೋ ನಿತರಾಂ ಜಗಾದ ಗೋವಿಂದ ದಾಮೋದರ ಮಾಧವೇತಿ ||

ಗಜರಾಜನಾದ ಗಜೇಂದ್ರನು ಒಮ್ಮೆ ನೀರು ಕುಡಿಯಲು ಒಂದು ಸರೋವರವನ್ನು ಪ್ರವೇಶಿಸಿದಾಗ, ಅದರೊಳಗಿದ್ದ ಮೊಸಳೆಯೊಂದು ಅದರ ಕಾಲನ್ನು ಹಿಡಿದುಬಿಟ್ಟಿತು. ಆಗ ಅದರ ಬಂಧು ಆನೆಗಳೆಲ್ಲವೂ ಅದನ್ನು ಬಿಡಿಸಲು ಪ್ರಯತ್ನಿಸಿ ವಿಫಲರಾಗಲು, ಅದು ಬೇರೆ ದಾರಿ ಕಾಣದೇ ತುಂಬು ಮನಸ್ಸಿನಿಂದ, ‘ಗೋವಿಂದ, ದಾಮೋದರ, ಮಾಧವ’ ಎಂದು ಭಗವಂತನನ್ನು ಕೂಗಿತು.
(ಆಗ ಭಗವಾನ್ ವಿಷ್ಣುವು ಬಂದು ತನ್ನ ಚಕ್ರದಿಂದ ಮೊಸಳೆಯ ಶಿರವನ್ನು ಕತ್ತರಿಸಿ ಆನೆಯನ್ನು ಕಾಪಾಡಿದ. ಪೂರ್ವಜನ್ಮದಲ್ಲಿ ಇಂದ್ರದ್ಯುಮ್ನ ರಾಜನಾಗಿದ್ದ ಆನೆ ಮತ್ತು ಗಂಧರ್ವ ಹೂಹೂ ಆಗಿದ್ದ ಮೊಸಳೆ ಶಾಪವಿಮುಕ್ತಿಗೊಂಡವು.) ಭಾಗವತದ ಕಥೆ.
ಹಂಸಧ್ವಜಃ ಶಂಖಯುತೋ ದದರ್ಶ ಪುತ್ರಂ ಕಟಾಹೇ ಪ್ರತಪಂತಮೇನಮ್ |
ಪುಣ್ಯಾನಿ ನಾಮಾನಿ ಹರೇರ್ಜಪಂತಂ ಗೋವಿಂದ ದಾಮೋದರ ಮಾಧವೇತಿ ||
ಒಮ್ಮೆ ಹಂಸಧ್ವಜ ಮಹಾರಾಜನು ಶಂಖಮುನಿಯೊಂದಿಗೆ, ತನ್ನ ಪುತ್ರನು ಕುದಿಯುವ ಎಣ್ಣೆಯು ತುಂಬಿದ್ದ ಕಡಾಯಿಯಲ್ಲಿ ಕುಳಿತಿದ್ದರೂ “ಗೋವಿಂದ, ದಾಮೋದರ, ಮಾಧವ” ಎಂದು ಶ್ರೀ ಹರಿಯ ಪುಣ್ಯನಾಮಗಳನ್ನು ಜಪಿಸುತ್ತಾ ನಿರಾತಂಕವಾಗಿದ್ದುದನ್ನು ನೋಡಿ ಆಶ್ಚರ್ಯಗೊಂಡನು.
ವಿ.ಸೂ. : ಈ ಶ್ಲೋಕಕ್ಕೆ ಪೂರಕವಾದ ಕಥೆ ಜೈಮಿನಿ ಭಾರತದಲ್ಲಿದೆ. ಅರ್ಜುನನು, ಯುಧಿಷ್ಠಿರನು ಮಾಡುತ್ತಿದ್ದ ಅಶ್ವಮೇಧ ಯಾಗದ ಕುದುರೆಯನ್ನು ಪರ್ಯಟನೆಗೆ ಬಿಟ್ಟು ಅದನ್ನು ರಕ್ಷಿಸುತ್ತಾ ಅದರ ಹಿಂದೆ ಹೊರಟಿದ್ದ. ಅಶ್ವವು ವಿವಿಧ ದೇಶಗಳನ್ನು ಸುತ್ತುತ್ತಾ ಚಂಪಕನಗರಿಗೆ ಬಂದಿತು.
ಸುಂದರವಾದ ಈ ಚಂಪಕನಗರಿಯನ್ನು ಹಂಸಧ್ವಜನೆಂಬ ಧಾರ್ಮಿಕನಾದ ರಾಜನು ಆಳುತ್ತಿದ್ದ. ಅವನು ತನ್ನ ಪ್ರಜೆಗಳೆಲ್ಲರೂ ಏಕಪತ್ನಿ ವ್ರತಸ್ಥರಾಗಿರಬೇಕೆಂದೂ ವಿಷ್ಣು ಪೂಜೆ ಮಾಡಬೇಕೆಂದೂ ದಾನಧರ್ಮಗಳನ್ನು ಮಾಡಬೇಕೆಂದೂ ಶಾಸನ ಮಾಡಿದ್ದ. ಅವನಿಗೆ ಶಂಖ, ಲಿಖಿತರೆಂಬ ಇಬ್ಬರು ಪುರೋಹಿತರಿದ್ದರು.

ಅವನು ಮಾಡಿದ್ದ ಇನ್ನೊಂದು ಶಾಸನವೆಂದರೆ, ಯುದ್ಧಕ್ಕೆ ಹೊರಡಬೇಕೆಂದು ದುಂದುಭಿಯನ್ನು ಬಾರಿಸಿದ ಕೂಡಲೇ ಯಾವ ಯೋಧನಾದರೂ ಹೋಗದೇ ಹಿಂದುಳಿದರೆ, ಅವನನ್ನು ಕಾದ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿಸಿಬಿಡುವುದು. ಅವನು ಸ್ವಯಂ ಶ್ರೀಕೃಷ್ಣನ ಭಕ್ತನಾಗಿದ್ದರೂ ಶ್ರೀಕೃಷ್ಣನನ್ನು ಇನ್ನೂ ಭೇಟಿಯಾಗಿರಲಿಲ್ಲ.
ಈಗ ಪಾಂಡವರ ಯಜ್ಞಾಶ್ವವು ಅವರ ಊರಿಗೇ ಬಂದುದರಿಂದ, ಅವನು ಕುದುರೆಯನ್ನು ಕಟ್ಟಿ ಅರ್ಜುನನನ್ನು ಎದುರಿಸಿದರೆ ಶ್ರೀಕೃಷ್ಣನು ಅರ್ಜುನನ ರಕ್ಷಣೆಗೆ ಬರುವನೆಂದೂ ಅದರಿಂದ ಕೃಷ್ಣನೊಡನೆ ಯುದ್ಧ ಮಾಡಿದರೂ ಸರಿ, ಅವನನ್ನು ನೋಡಬಹುದೆಂದೂ ಭಾವಿಸಿ ಕುದುರೆಯನ್ನು ಕಟ್ಟಿ ಯುದ್ಧವನ್ನು ಘೋಷಿಸಿದನು.
ಎಲ್ಲರೂ ಯುದ್ದಕ್ಕೆ ಹೊರಟರೂ ಅವನ ಮೂವರು ಮಕ್ಕಳಲ್ಲಿ ಒಬ್ಬನಾದ ಸುಧನ್ವನು ವಿಳಂಬ ಮಾಡಿದ ಕಾರಣ, ಅವನು ಯುದ್ಧಕ್ಕೆ ಹೊರಟು ನಿಂತಾಗ, ಅವನ ಪತ್ನಿ ಪ್ರಭಾವತಿಯು ತನ್ನನ್ನು ಚೆನ್ನಾಗಿ ಸಿಂಗರಿಸಿಕೊಂಡು ಬಂದು, ಯುದ್ಧದಲ್ಲಿ ಅವನಿಗೆ ಮುಕ್ತಿ ದೊರೆತರೆ, ಅಪುತ್ರವಂತನಾಗಿಬಿಡುವನೆಂದೂ, ಅದಕ್ಕಾಗಿ ಹೋಗುವ ಮುನ್ನ ತನಗೆ ಗರ್ಭಾಧಾನ ಮಾಡಿ ಹೋಗಬೇಕೆಂದೂ ಪ್ರಾರ್ಥಿಸಿದಳು.
ಸುಧನ್ವನು ಬೇಡವೆಂದು ಹೇಳಿದರೂ ಅವಳು ಕೇಳದೇ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡು ಮ೦ಚಕ್ಕೆ ಸೆಳೆದೊಯ್ದಳು. ಪತ್ನಿಯ ಆಸೆಯನ್ನು ಪೂರೈಸುವುದು ಧರ್ಮವೆಂದು ಅವನಿಗೂ ಅನ್ನಿಸಿ ಅವಳೊಡನೆ ರತಿಕ್ರೀಡೆಯಾಡಿ ಅವಳಿಗೆ ಗರ್ಭಾಧಾನ ಮಾಡಿದನು. ಅನಂತರ ಅವಳನ್ನು ಬೀಳ್ಕೊಂಡು ಯುದ್ಧಕ್ಕೆ ಹೊರಟನು.
ಆದರೆ ಬಹಳ ತಡವಾಗಿ ಬಂದುದರಿಂದ ಅವನ ತಂದೆಯು ಅತ್ಯಂತ ಕ್ರೋಧಾವಿಷ್ಟನಾಗಿ, ಅವನ ಮಾತನ್ನು ನಂಬದೇ, ಶಂಖಲಿಖಿತರ ಸಲಹೆಯ ಮೇರೆಗೆ ಅವನನ್ನು ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿಸಿಬಿಟ್ಟ! ಆದರೆ ಸುಧನ್ವನು ಶ್ರೀಕೃಷ್ಣನ ನಾಮಗಳನ್ನು ಜಪಿಸುತ್ತಾ ನಿರಾತಂಕವಾಗಿರಲು, ಕುದಿಯುವ ಎಣ್ಣೆಯು ಅವನ ಪಾಲಿಗೆ ಶೀತಲವಾಯಿತು.
ಇದನ್ನು ನೋಡಿ ಹಂಸಧ್ವಜನೂ ಶಂಖ ಲಿಖಿತರೂ ಆಶ್ಚರ್ಯಗೊಂಡರು ಎಂದು ಈ ಶ್ಲೋಕದಲ್ಲಿ ಬಂದಿದೆ. ಹೀಗೆ, ಕೃಷ್ಣಭಕ್ತಿ ಸುಧನ್ವನನ್ನು ಕಾಪಾಡಿತು. ಇಂಥ ವೈಷ್ಣವಾಗ್ರೇಸರನನ್ನು ಶಿಕ್ಷಿಸಿದ್ದಕ್ಕಾಗಿ ಪಶ್ಚಾತ್ತಾಪಗೊಂಡು ಶಂಖಲಿಖಿತರು ಕ್ಷಮೆ ಕೇಳಿದರು. ಅವರ ಪಾಲಿಗೂ ಕುದಿಯುವ ಎಣ್ಣೆಯು ಶೀತಲವಾಯಿತು.
(ಮುಂದುವರಿಯುವುದು)






Leave a Reply