– ಆಕರ: ವೈಷ್ಣವಿಸಂ; ಸ್ವೀವನ್ರೋಸನ್ ಹಾಗೂ ವಿವಿಧ ಭಕ್ತ / ವಿದ್ವಾಂಸರ ನಡುವಿನ ಸಂವಾದ ಸಂಕಲನ
ಪಾಶ್ಚಾತ್ಯರಿಗೆ ಭಾರತದ ತತ್ತ್ವಶಾಸ್ತ್ರದ ಬಗ್ಗೆ ಅದಮ್ಯ ಕುತೂಹಲ. ಹೀಗಾಗಿ ಅದರ ಅಧ್ಯಯನಕ್ಕೆ ತೊಡಗಿಸಿಕೊಳ್ಳುವವರ ಸಂಖ್ಯೆಯೂ ಸಾಕಷ್ಟಿದೆ. ಆದರೆ ಹೀಗೆ ತೊಡಗಿಕೊಂಡ ಬಹುತೇಕ ಅಧ್ಯಯನಕಾರರಿಗೆ ಪರಂಪರಾ ಪದ್ಧತಿಯ ಬಗ್ಗೆ ಅರಿವಿರುವುದಿಲ್ಲ.

ಅವರು ಗುರುಶಿಷ್ಯ ಸಂಬಂಧಗಳ ಬಗ್ಗೆ ಕೇಳಿರುತ್ತಾರಾದರೂ ಒಟ್ಟಾರೆಯಾಗಿ ಈ ಪದ್ಧತಿಯ ಬಗ್ಗೆ ಅಧಿಕೃತ ಪರಂಪರೆಯ ಬಗ್ಗೆ ತಿಳಿದಿರುವುದಿಲ್ಲ. ವಿವಿಧ ವೈಷ್ಣವ ಸಂಪ್ರದಾಯಗಳ ಬಗೆಗಾಗಲೀ, ಅದರಲ್ಲಿ ದೀಕ್ಷಿತರಾದವರ ಪ್ರಾಮುಖ್ಯದ ಬಗೆಗಾಗಲೀ ಮಾಹಿತಿಯಿರುವುದಿಲ್ಲ.
ಭಾರತದ ಹೊರಗಿನ ಅಧ್ಯಯನಕಾರರಿಗೆ, ಈ ತಿಳುವಳಿಕೆಗಳ ಕೊರತೆಯಿರುವುದು ಅಚ್ಚರಿಯೇನಲ್ಲ. ಸ್ವತಃ ಭಾರತದ ತತ್ತ್ವಶಾಸ್ತ್ರೀಯ ಅಧ್ಯಯನಕಾರರಿಗೂ ಈ ಕೊರತೆಯಿರುವುದೊಂದು ದುರಂತವೇ ಸರಿ.
‘ಪರಂಪರೆ’ ಎಂಬುದರ ಪದಶಃ ಅರ್ಥ – ‘ಒಬ್ಬರ ಅನಂತರ ಒಬ್ಬರು’ ಎಂದಾಗುತ್ತದೆ. ಇದನ್ನು ನಾವು ಭಗವದ್ಗೀತೆಯ 4ನೇ ಅಧ್ಯಾಯದಲ್ಲಿ ಕಾಣಬಹುದು. ಅದರಲ್ಲಿ ಕೃಷ್ಣನು ತಾನು ಮೂಲತಃ ಭಗವದ್ಗೀತೆಯನ್ನು ಸೂರ್ಯದೇವ ವಿವಸ್ವಾನನಿಗೆ ಬೋಧಿಸಿದುದಾಗಿಯೂ, ಆತನು ಅದನ್ನು ತನ್ನ ಮಗ ಮನುವಿಗೆ ಬೋಧಿಸಿದುದಾಗಿಯೂ ಹೇಳಿರುವನು.
ಮುಂದುವರಿದು ಶ್ರೀಕೃಷ್ಣನು ‘ಏವಮ್ ಪರಂಪರಾ ಪ್ರಾಪ್ತಮ್ ಇಮಾಮ್ ರಾಜರ್ಷ್ಯೋವಿಧುಃ’ ಎಂದು ಹೇಳುವ ಮೂಲಕ ಈ ರಹಸ್ಯ ಜ್ಞಾನವು ಒಬ್ಬರಿಂದ ಒಬ್ಬರಿಗೆ, ಪರಂಪರೆಯಿಂದ ಹರಿದುಬಂದು ಋಷಿ ಸಮಾನರಾದ ರಾಜರು ಅದನ್ನು ಪಡೆದುಕೊಂಡರು ಎಂದು ಸ್ಪಷ್ಟಪಡಿಸಿರುವನು.
ಇಲ್ಲಿ ನಾವು ನಿರ್ದಿಷ್ಟ ಜ್ಞಾನವೊ೦ದು ‘ಅವತೀರ್ಣ’ಗೊಳ್ಳುವ ಬಗೆಯನ್ನು ಗಮನಿಸಬೇಕು. ಅದು ‘ಶಬ್ದ’ – ಆಧ್ಯಾತ್ಮಿಕ ಶಬ್ದದ ಮೂಲಕ ಮೂಲತಃ ಕೃಷ್ಣ ಹಾಗೂ ಆತನ ಪ್ರತಿನಿಧಿಗಳಿಂದ ಗುರುಶಿಷ್ಯ ಪರಂಪರೆಯ ಮೂಲಕ ಹರಿದು ಬಂದಿರುವುದು.
ಪರಂಪರೆಯೆಂದರೆ ಆಧ್ಯಾತ್ಮಿಕ ಜ್ಞಾನ ಅಥವಾ ಸತ್ಯವನ್ನು ವರ್ಷಾನುಗಟ್ಟಲೆ ತಲೆತಲೆಮಾರುಗಳವರೆಗೂ ಕೊಂಡೊಯ್ಯುವ ಒಂದು ಸರಪಳಿಯ ಮೂಲಕ ಕಾಪಿಡುವ ಪ್ರಕ್ರಿಯೆ. ಕೃಷ್ಣನು ಭಗವದ್ಗೀತೆಯ ಅದೇ 4ನೇ ಅಧ್ಯಾಯದಲ್ಲಿ ಈ ಪರಂಪರೆ ಸರಪಳಿಯ ಒಂದು ಕೊಂಡಿ ಕಳಚಿದರೂ ಜ್ಞಾನದ ಹರಿವು ತುಂಡಾಗಿ ನಷ್ಟವಾಗುವುದೆಂದು ಎಚ್ಚರಿಸಿರುವನು. ಇದನ್ನು ಮತ್ತೆ ಸ್ಥಾಪಿಸಲು ಅಥವಾ ಬೆಸೆಯಲು ಸ್ವತಃ ಭಗವಂತನೇ ಅವತರಿಸಿ ಬರುವನು.
ತಾತ್ತ್ವಿಕ ನೆಲೆಗಟ್ಟಿನಲ್ಲಿ ಇದನ್ನು ಅವರೋಹ ಪಂಥ ಎಂದು ಕರೆಯಬಹುದು. ಕೃಷ್ಣನಿಂದ ಹರಿದು ಬರುವ ಜ್ಞಾನವು ಆ ಕಾರಣದಿಂದಲೇ ಪರಿಪೂರ್ಣವಾಗಿರುವುದು. ಪರಂಪರೆಯೊಂದರ, ಧೀಮಂತ ಗುರುವೊಬ್ಬನ ಸಾರ್ಥಕತೆಯು ಪರಿಪೂರ್ಣ ಬೋಧನೆಯನ್ನು ಅಸ್ಖಲಿತ ಹಾಗೂ ಸಂಪೂರ್ಣವಾಗಿ ಉಳಿಸಿಕೊಂಡು ಮುನ್ನಡೆಯುವುದರಲ್ಲಿದೆ.
ಅದಕ್ಕೆ ಹೆಚ್ಚುವರಿ ಸೇರ್ಪಡೆಯನ್ನಾಗಲೀ, ಉತ್ತಮಗೊಳಿಸಲಾಗಲೀ ಮಾಡುವುದಾಗದು, ಏಕೆಂದರೆ ಅದಾಗಲೇ ಪರಿಪೂರ್ಣವಾಗಿದೆ. ಈ ಜ್ಞಾನವನ್ನು ಸಂರಕ್ಷಿಸುವುದು ಮತ್ತು ಬೋಧಿಸುವುದಷ್ಟೆ ಗುರು ಅಥವಾ ಪರಂಪರೆ ಮಾಡಬೇಕಾದ ಕೆಲಸ.
ನಮ್ಮಲ್ಲಿ ನಾವು ಹಲವಾರು ಗುರುಗಳನ್ನು ಕಾಣುತ್ತೇವೆ. ತಮ್ಮನ್ನು ತಾವು ಮೇಲ್ ಸ್ತರಕ್ಕೇರಿಸಿಕೊಳ್ಳಲು ಹವಣಿಸುವ ಸ್ವಘೋಷಿತ ಗುರುಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಸಂಪನ್ನವಾದ ಪರಂಪರಾ ಪದ್ಧತಿಯನ್ನು ಪ್ರತಿನಿಧಿಸುವ ನೈಜ ಗುರು ಯಾರು?

ಅದಕ್ಕಿಂತ ಮುಖ್ಯವಾಗಿ ಯಾವ ಪಂಥವು ವೈಷ್ಣವ ದೃಷ್ಟಿಕೋನದಿಂದ ಅಧಿಕೃತ ಗುರುಪರಂಪರೆಯ ಮಾನ್ಯತೆ ಪಡೆಯುವುದು? ವ್ಯಕ್ತಿಯೊಬ್ಬ ಗುರುವನ್ನು ಅರಸಲು ಹೊರಟರೆ, ಅವನು ಯಾವ ಪ೦ಥದ ಪದ್ಧತಿಯ ಗುರುವನ್ನು ಆರಿಸಿಕೊಳ್ಳಬೇಕು?
ನಮ್ಮಲ್ಲಿ ಹಲವಾರು ಬಗೆಯ ಪರಿಚಿತ ಸಂಪ್ರದಾಯಗಳಿವೆ. ಸಂಪ್ರದಾಯದ ಪದಶಃ ಅರ್ಥ ಸಮುದಾಯವೆಂದಾಗುತ್ತದೆ. ಪದ್ಮ ಪುರಾಣದಲ್ಲಿ ಇಂತಹ ಅಧಿಕೃತ ಸಂಪ್ರದಾಯಗಳ ಬಗ್ಗೆ ವಿವರಿಸಲಾಗಿದೆ.
ಅದು ಹೇಳುವ ಪ್ರಕಾರ, ಸಂಪ್ರದಾಯದ ಒಳಗೆ ಸ್ವೀಕರಿಸಲ್ಪಡದ ಮಂತ್ರಗಳು ನಿಷ್ಫಲವಾಗುತ್ತವೆ; ಅವುಗಳಲ್ಲಿ ಶಕ್ತಿ ಇರುವುದಿಲ್ಲ.” ಇಷ್ಟೇ ಅಲ್ಲದೆ ಪದ್ಮಪುರಾಣವು ನಿರ್ದಿಷ್ಟವಾಗಿ ನಾಲ್ಕು ಸಂಪ್ರದಾಯಗಳನ್ನು ಹೆಸರಿಸುತ್ತದೆ.
ಅದರಂತೆ, “ಕಲಿಯುಗದಲ್ಲಿ ನಾಲ್ಕು ಸಂಪ್ರದಾಯಗಳಿರುತ್ತವೆ.” ಅವು ಬ್ರಹ್ಮ ಸಂಪ್ರದಾಯ, ಬ್ರಹ್ಮನಿಂದ ಮುಂದುವರಿದುದು; ಶ್ರೀ ಸಂಪ್ರದಾಯ, ಲಕ್ಷ್ಮಿಯಿಂದ ಮುಂದುವರಿದುದು; ರುದ್ರ ಸಂಪ್ರದಾಯ, ಶಿವನಿಂದ ಮುಂದುವರಿದುದು ಹಾಗೂ ಸನಕಾದಿಗಳಿಂದ ಮುಂದುವರಿದ ಕುಮಾರ ಸಂಪ್ರದಾಯ.
ಈ ಪ್ರತಿಯೊಂದು ಸಂಪ್ರದಾಯವೂ ಒಬ್ಬ ಪ್ರಮುಖ ಆಚಾರ್ಯನನ್ನು ಹೊಂದಿವೆ. ಅದರಂತೆ ಶ್ರೀ ರಾಮಾನುಜಾಚಾರ್ಯರು ಶ್ರೀಸಂಪ್ರದಾಯಕ್ಕೂ ಶ್ರೀ ಮಧ್ವಾಚಾರ್ಯರು ಬ್ರಹ್ಮಸಂಪ್ರದಾಯಕ್ಕೂ ಶ್ರೀ ವಿಷ್ಣುಸ್ವಾಮಿಯವರು ರುದ್ರ ಸಂಪ್ರದಾಯಕ್ಕೂ ಶ್ರೀ ನಿಂಬಾರ್ಕರು ಕುಮಾರ ಸಂಪ್ರದಾಯಕ್ಕೂ ಪ್ರವರ್ತಕ ಆಚಾರ್ಯರುಗಳಾಗಿದ್ದಾರೆ.
ವೈಷ್ಣವ ತತ್ತ್ವದ ಈ ನಾಲ್ಕು ಪ್ರಮುಖ ಸಂಪ್ರದಾಯಗಳೊಂದಿಗೆ ಗೌಡೀಯ ಸಂಪ್ರದಾಯ ಹೇಗೆ ಬೆಸೆದುಕೊಂಡಿದೆ ಎಂಬುದನ್ನೀಗ ನೋಡೋಣ.
ಗೌಡೀಯ ಸಂಪ್ರದಾಯವನ್ನು ಬ್ರಹ್ಮ ಮಾಧ್ವ ಸಂಪ್ರದಾಯಕ್ಕೆ ಸೇರಿದ್ದೆಂದು ಗುರುತಿಸಲಾಗುತ್ತದೆ. ಇದು ಬಹಳಷ್ಟು ಕಡೆಗಳಲ್ಲಿ ಉಲ್ಲೇಖಗೊಂಡಿದೆ. ಇವುಗಳಲ್ಲಿ ಮುಖ್ಯ ಆಕರಗಳೆಂದರೆ ಶ್ರೀ ಬಲದೇವ ವಿದ್ಯಾಭೂಷಣರ ಗೋವಿಂದಭಾಷ್ಯ ಹಾಗೂ ಪ್ರಮೇಯರತ್ನಾವಳೀ, ಜೊತೆಗೆ ಕವಿ ಕರ್ಣಾಪೂರರ ಗೌರ ಗಣೋದ್ದೇಶ ದೀಪಿಕಾ.
ಇವುಗಳಲ್ಲದೆ, ಶ್ರೀ ಚೈತನ್ಯ ಮಹಾಪ್ರಭುಗಳ ಸಮಕಾಲೀನರಾಗಿದ್ದು, ಬಹಳ ಕಿರಿಯರಾಗಿದ್ದ ಗೋಪಾಲ ಗುರುಗಳ ಕೃತಿಯೊಂದಿದ್ದು, ಪ್ರಸ್ತುತ ಅವರ ಯಾವ ರಚನೆಗಳೂ ದೊರೆಯದಾಗಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅವರ ನಿರ್ವಚನೆಯು ಬೇರೊ೦ದೆಡೆ ಉಲ್ಲೇಖಿತವಾಗಿದೆ.
ಅಧ್ಯಯನಕಾರರಾದ ಬಿ.ಬಿ. ಮಜುಮ್ ದಾರ್ ಅವರು ದಾಖಲಿಸುವಂತೆ ಒಟ್ಟು 8 ಕಡೆಗಳಲ್ಲಿ ಗೌಡೀಯ ಸಂಪ್ರದಾಯ ಹಾಗೂ ಬ್ರಹ್ಮ – ಮಾಧ್ವ ಸಂಪ್ರದಾಯದ ಬಗ್ಗೆ ಪ್ರಸ್ತಾವವಿದೆ. ಅವುಗಳಲ್ಲಿ ಮೇಲ್ಕಾಣಿಸಿದ ಮೂರು ಆಕರಗಳು ಅತಿ ಪ್ರಮುಖವಾದವು. ಗೋಪಾಲ ಗುರು ಶ್ರೀ ವಕ್ರೇಶ್ವರ ಪಂಡಿತರ ಶಿಷ್ಯರಾಗಿದ್ದರು ಹಾಗೂ ಚೈತನ್ಯರ ಕಿರಿಯ ಸಮಕಾಲೀನರಾಗಿದ್ದರು.

ಆದ್ದರಿಂದ ಅವರ ಹೇಳಿಕೆ ಕೂಡ ಪ್ರಾಧಾನ್ಯ ಪಡೆದುಕೊಂಡಿದೆ. ಇವುಗಳೊಡನೆ ಮತ್ತೆರಡು ಮುಖ್ಯ ಆಕರಗಳೆಂದರೆ ಶ್ರೀನರಹರಿ ಚಕ್ರವರ್ತಿಯವರ ಭಕ್ತಿರತ್ನಾಕರ ಹಾಗೂ ಶ್ರೀವಿಶ್ವನಾಥ ಚಕ್ರವರ್ತಿಗಳ ಗೌರಾಂಗ ಸ್ವರೂಪ ತತ್ತ್ವ ಚಂದ್ರಿಕೆ. ಈ ಕೃತಿ ಸ್ವಲ್ಪ ಅನಂತರದ ಕಾಲದ್ದಾಗಿದ್ದರೂ ವಿಶ್ವನಾಥ ಚಕ್ರವರ್ತಿಗಳು ಪ್ರಮುಖ ಆಚಾರ್ಯರಲ್ಲೊಬ್ಬರೆಂದು ಪರಿಗಣಿಸಲ್ಪಡುವುದರಿಂದ, ಅವರ ಉಲ್ಲೇಖವೂ ಪ್ರಾಮುಖ್ಯ ಪಡೆಯುತ್ತದೆ.
ಶ್ರೀ ವಿಶ್ವನಾಥ ಚಕ್ರವರ್ತಿಗಳು ಶ್ರೀ ಬಲದೇವ ವಿದ್ಯಾಭೂಷಣರ ಸಂಗಾತಿಯಾಗಿದ್ದರು. ಬಲದೇವರನ್ನು ಗೌಡೀಯ ಸಂಪ್ರದಾಯದ ಅಧಿಕೃತತೆಯ ಬಗ್ಗೆ ಚರ್ಚಿಸುವ ಸಲುವಾಗಿ ಪ್ರೇರೇಪಿಸಿ ಕಳುಹಿಸಿಕೊಟ್ಟವರೇ ಅವರು. ಮಾಧ್ವ ಸಂಪ್ರದಾಯದೊಂದಿಗೆ ಸಂಪರ್ಕವಿರಿಸಿಕೊಂಡಿದ್ದರಿಂದ ಗೌಡೀಯ ಸಂಪ್ರದಾಯದ ಅಧಿಕೃತತೆಯನ್ನು ಪ್ರಮುಖ ಆಚಾರ್ಯರಿಬ್ಬರೂ ಒಪ್ಪಿಕೊಂಡಿದ್ದರು.
ಇದು ವೃಂದಾವನದ ಭಾಗದಿಂದ ಬಂದುದು. ಅವರೆಲ್ಲರೂ ಗೌಡೀಯ ಸಂಪ್ರದಾಯ ಸ್ವೀಕಾರವನ್ನು ಒಪ್ಪಿಕೊಂಡಿದ್ದರು. ಆದ್ದರಿಂದ ಅಲ್ಲಿ ಏಕರೂಪ ಅಭಿಪ್ರಾಯವಿತ್ತು. ಆದರೆ ಎಲ್ಲರಿಗಿಂತ ಮೊದಲು ಅದನ್ನು ಸ್ವೀಕರಿಸಿದ ಕೃತಿಕಾರರೆಂದರೆ ಕವಿ ಕರ್ಣಾಪೂರರು, ಈ ನಿಟ್ಟಿನಲ್ಲಿ ನಾವು ಈ ಚಿಂತನೆ ಆದಾಗಲೇ ಉತ್ಕಲ ಅಥವಾ ಒರಿಸ್ಸಾದಲ್ಲಿ ಇತ್ತೆಂದು ಹೇಳಬಹುದು. ಹಾಗೆ ನೋಡಿದರೆ ಬಲದೇವರು ಕೂಡ ಮೂಲತಃ ಒರಿಸ್ಸಾ ಪ್ರಾಂತದವರೇ.
ಪ್ರಭಾತ್ ಮುಖರ್ಜಿಯೆಂಬ ಪ್ರಖ್ಯಾತ ಇತಿಹಾಸಕಾರರು ಇದನ್ನು ನಿರೂಪಿಸಿರುವರು. ಮುಖರ್ಜಿಯವರು ಒರಿಸ್ಸಾದ ವೈಷ್ಣವ ಇತಿಹಾಸವನ್ನು ಕುರಿತು ಸಾಕಷ್ಟು ಸಂಶೋಧನೆ ನಡೆಸಿರುವರು, ಹಾಗೂ ‘ಒರಿಸ್ಸಾದಲ್ಲಿ ಚೈತನ್ಯ ಪಂಥದ ಇತಿಹಾಸ’ (The History of the Chaitanya Faith in Orissa) ಎಂಬ ಸಂಶೋಧನಾ ಕೃತಿಯನ್ನು ರಚಿಸಿರುವರು.
ಪ್ರಭಾತ್ ಮುಖರ್ಜಿಯವರು ತಮ್ಮನ್ನು ತಾವು ಚೈತನ್ಯರೊಂದಿಗೆ ಗುರುತಿಸಿಕೊಂಡ, ಮಾಧ್ವ ಗುರುಪರಂಪರೆಯೊಂದಿಗೆ ಅವರನ್ನು ಒಪ್ಪಿಕೊಂಡ ವೈಷ್ಣವರನ್ನು ದಾಖಲಿಸುತ್ತಾರೆ. ಚೈತನ್ಯರು ಅಂತರ್ಧಾನರಾದ ಅನಂತರ ಇದು ಒರಿಸ್ಸಾದಲ್ಲಿ ಅಧಿಕೃತ ಸಮ್ಮತಿ ಪಡೆದಂತೆ ಕಂಡು ಬರುತ್ತದೆ. ಹೀಗಾಗಿ ಚೈತನ್ಯರ ಶಿಷ್ಯ ಪರಂಪರೆಯು ಮಧ್ವಾಚಾರ್ಯರಿಂದ ಅವರೋಹಣಗೊಂಡುದಾಗಿದೆ, ಮತ್ತು ಈ ಕಾರಣದಿಂದಲೇ ಬ್ರಹ್ಮ ಮಾಧ್ವ ಗೌಡೀಯ ಸಂಪ್ರದಾಯವೆಂದು ಕರೆಯಲ್ಪಡುತ್ತದೆ.
ಆದರೆ, ಇಲ್ಲೊಂದು ಪ್ರಶ್ನೆಯೇಳುತ್ತದೆ. ಗೌಡೀಯ ಸಂಪ್ರದಾಯಕ್ಕೂ ಬ್ರಹ್ಮ – ಮಾಧ್ವ ಸಂಪ್ರದಾಯಕ್ಕೂ ಸಂಬಂಧವಿದೆಯೆಂದಾದರೆ, ಇವೆರಡು ಚಿಂತನೆಗಳ ನಡುವೆ ಪರಿಗಣಿಸಬಹುದಾದಷ್ಟು ಭಿನ್ನತೆಗಳೇಕಿವೆ?
ವಾಸ್ತವವಾಗಿ ಈ ಸಂಪ್ರದಾಯಗಳ ನಡುವೆ ಪ್ರಮುಖ ಭಿನ್ನತೆಗಳಿರುವುದು ನಿಜವೇ. ಆದರೆ ಮೂಲ ಬೋಧನೆಗಳಲ್ಲಿ ಬಹುಮುಖ್ಯವಾದ ಸಾಮ್ಯಗಳಿವೆ. ಆಧುನಿಕ ಅಧ್ಯಯನಕಾರರು ಈ ಭಿನ್ನತೆಯನ್ನೆ ಮುಂದಿಟ್ಟುಕೊಂಡು ಇವೆರಡು ಸಂಪ್ರದಾಯಗಳ ನಡುವಿನ ಸಂಬಂಧವನ್ನು ಅನುಮಾನಿಸುತ್ತ ಗೋಜಲುಪಡಿಸುತ್ತಾರೆ.
ಮಾಧವೇಂದ್ರಪುರಿಗಳಿಗೆ (ಮಾಧ್ವ ಸಂಪ್ರದಾಯ) ಚೈತನ್ಯ ಪರಂಪರೆಯ ಶಿಷ್ಯವರ್ಗದವರಲ್ಲಿ ಗೌರವಾದರಗಳು ಇದ್ದೇ ಇವೆ. ಚೈತನ್ಯ ಚರಿತಾಮೃತದ ಒಂದು ಹೇಳಿಕೆ ಹೀಗಿದೆ – ” ಕೃಷ್ಣನತ್ತ ಕೊಂಡೊಯ್ಯುವ ಎಲ್ಲ ಭಕ್ತಿಸೇವೆಯ ಭಂಡಾರ, ಶ್ರೀ ಮಾಧವೇಂದ್ರಪುರೀ ಅವರಿಗೆ ಜಯವಾಗಲಿ.
ಅವರು ಭಕ್ತಿಸೇವೆಯ ಕಲ್ಪವೃಕ್ಷ. ಮತ್ತು ಭಕ್ತಿಸೇವೆಯ ಬೀಜ ಮೊದಲು ಫಲವಂತವಾದದ್ದು ಅವರ ಹೃದಯದಲ್ಲಿ” (ಆದಿಲೀಲಾ:9:10) ಇಲ್ಲಿ ಅವರನ್ನು ಕೃಷ್ಣಪ್ರೇಮದ ಕಣಜವೆಂದು ಹೇಳಲಾಗಿದೆ. ಶ್ರೀಲ ಪ್ರಭುಪಾದರು ಈ ಶ್ಲೋಕಕ್ಕೆ ಬರೆದ ತಾತ್ಪರ್ಯದಲ್ಲಿ ಹೀಗೆ ಹೇಳಿದ್ದಾರೆ: “ಶ್ರೀ ಮಾಧವೇಂದ್ರಪುರೀ, ಶ್ರೀ ಮಾಧವಪುರೀ ಎಂದೂ ಪರಿಚಿತರು.
ಮಧ್ವಾಚಾರ್ಯರ ಶಿಷ್ಯ ಪರಂಪರೆಯನ್ನು ಸೇರಿದವರು ಮತ್ತು ತುಂಬ ಪ್ರಸಿದ್ಧ ಸಂನ್ಯಾಸಿ. ಶ್ರೀ ಚೈತನ್ಯ ಮಹಾಪ್ರಭು ಅವರು ಶ್ರೀ ಮಾಧವೇಂದ್ರಪುರೀ ಅವರ ಮೂರನೆಯ ಶಿಷ್ಯ ಪರಂಪರೆಯವರು. ಮಧ್ವಾಚಾರ್ಯರ ಶಿಷ್ಯ ಪರಂಪರೆಯ ದೈವಾರಾಧನೆಯಲ್ಲಿ ಮತಸಂಬಂಧ ಕರ್ಮಾಚರಣೆಗಳು ತುಂಬಿದ್ದವು – ಭಗವತ್ ಪ್ರೇಮದ ಕುರುಹುಗಳು ಇಲ್ಲವಾಗಿದ್ದವು.

ಶ್ರೀಮಾಧವೇಂದ್ರ ಪುರೀ ಅವರೇ ಈ ಶಿಷ್ಯ ಪರಂಪರೆಯಲ್ಲಿ ಭಗವತ್ ಪ್ರೇಮದ ಕುರುಹುಗಳನ್ನು ಪ್ರದರ್ಶಿಸಿದ ಮೊದಲ ವ್ಯಕ್ತಿ, ಅಲ್ಲದೇ “ಅಯಿ, ದೀನ- ದಯಾರ್ದ್ರನಾಥ’ (‘ಓ, ಅತ್ಯಂತ ಕರುಣಾಶಾಲಿ ದೇವೋತ್ತಮ ಪುರುಷನೆ) ಎಂದು ಪ್ರಾರಂಭವಾಗುವ ಪದ್ಯವನ್ನು ಬರೆದ ಮೊದಲಿಗರು. ಈ ಪದ್ಯದಲ್ಲಿ ಚೈತನ್ಯ ಮಹಾಪ್ರಭು ಅವರು ಕೃಷಿ ಮಾಡಿದ ಭಗವತ್ ಪ್ರೇಮದ ಮೊಳಕೆಯ ಕುರುಹು ಕಾಣುತ್ತದೆ.”
ಅಷ್ಟೇ ಅಲ್ಲ, ವೃಂದಾವನದಾಸ ಠಾಕುರರು ಕೂಡ ತಮ್ಮ ಚೈತನ್ಯ ಭಾಗವತದಲ್ಲಿ ಮಾಧವೇಂದ್ರಪುರಿಯನ್ನು ಬಂಗಾಳದ ಭಕ್ತಿ ಚಳವಳಿಯ ಪ್ರಮುಖ ರೂವಾರಿ ಎಂದು ಕರೆದಿದ್ದಾರೆ. ಕೃಷ್ಣದಾಸ ಕವಿರಾಜರಂತೇ “ಭಕ್ತಿಕಲ್ಪತರುವಿನ ಮೊತ್ತಮೊದಲ ಶಾಖೆ’ ಯೆಂದು ಅವರನ್ನು ಸುತ್ತಿಸಿದ್ದಾರೆ.
ಇದರಿಂದಾಗಿ ಮಾಧವೇಂದ್ರಪುರಿಯವರು ಮಾಧ್ವ ಸಂಪ್ರದಾಯದಲ್ಲಿ ಸಾಮಾನ್ಯವಾದ ನಾರಾಯಣನ ಪೂಜೆಯಿಂದ ಮುಂದುವರಿದು ಭಗವಂತನಲ್ಲಿ ಮಾಧುರ್ಯ ಭಕ್ತಿ ತೋರುವ ವಿಧಾನದೆಡೆಗೆ ನಡೆದುದು ಸಾಬೀತಾಗುತ್ತದೆ. ಅವರು ಹೀಗೆ ‘ವೈಧೀಭಕ್ತಿ’ಯಿಂದ ‘ರಾಗಾನುಗಾಭಕ್ತಿʼಯೆಡೆ ಸಾಗಿದುದಕ್ಕೆ ಹಲವು ಪುರಾವೆಗಳಿವೆ.
ಶ್ರೀಲ ಪ್ರಭುಪಾದರು ವ್ಯಾಖ್ಯಾನದಲ್ಲಿ ಅದನ್ನೇ ಸ್ಪಷ್ಟಪಡಿಸಿದ್ದಾರೆ. ”ಅಯಿದೀನದಯಾರ್ದ್ರನಾಥ ಹೇ ಎಂಬ ಪದಗಳ ಮೂಲಕ ಪದ್ಯ ರಚಿಸಿದ ಪ್ರಥಮರು” ಎಂದು. ಈ ಸಾಲುಗಳು ಚೈತನ್ಯ ಚರಿತಾಮೃತದ ಅಂತ್ಯಲೀಲಾ, ಎಂಟನೇ ಅಧ್ಯಾಯ, ಮೂವತ್ತನಾಲ್ಕನೇ ಶ್ಲೋಕದಲ್ಲಿ ದಾಖಲಾಗಿವೆ.
ಆ ಪದ್ಯದಲ್ಲಿ ಚೈತನ್ಯ ಮಹಾಪ್ರಭುಗಳ ಭಗವತ್ಪ್ರೇಮದ ಬೀಜವಿತ್ತೆಂದೂ ಪ್ರಭುಪಾದರು ಹೇಳುತ್ತಾರೆ. ಆ ಬೀಜವು ಮಾಧವೇಂದ್ರಪುರಿಯವರ ಪದ್ಯದಲ್ಲಿದ್ದು, ಆ ಸಾಲುಗಳು ಕೃಷ್ಣನಿಂದ ಬೇರ್ಪಟ್ಟ ರಾಧಾರಾಣಿಯ ವಿರಹದ ಉತ್ತುಂಗ ಭಾವನೆಗಳನ್ನು ಅಭಿವ್ಯಕ್ತಿಸುತ್ತದೆ.
ಮಾಧವೇಂದ್ರಪುರಿಯವರು ಕೃಷ್ಣಪ್ರೇಮವನ್ನು ಪಡೆಯುವ ಮಾರ್ಗವನ್ನು ಬೋಧಿಸಿದ್ದಾರೆ. ಕೃಷ್ಣ ವಿರಹದಿಂದ ವ್ಯಕ್ತಿಯು ಅಧ್ಯಾತ್ಮದ ಉನ್ನತ ಸ್ತರಕ್ಕೇರುತ್ತಾನೆ. ‘ಮಾಧವೇ೦ದ್ರಪುರಿಯು ಕೃಷ್ಣಪ್ರೇಮದ ಬೀಜವನ್ನು ಈ ಲೌಕಿಕ ಜಗತ್ತಿನಲ್ಲಿ ಬಿತ್ತಿ, ಅಂತರ್ಧಾನರಾದರು.
ಆ ಬೀಜವೇ ಮುಂದೆ ಶ್ರೀ ಚೈತನ್ಯ ಮಹಾಪ್ರಭುಗಳ ರೂಪದ ಹೆಮ್ಮರವಾಗಿ ಬೆಳೆಯಿತು ಎಂದೂ ಶ್ರೀಲ ಪ್ರಭುವಾದರು ತಮ್ಮ ತಾತ್ಪರ್ಯದಲ್ಲಿ ಹೇಳಿದ್ದಾರೆ.
ಶ್ರೀ ಮಧ್ವಾಚಾರ್ಯರ ಸಂಪ್ರದಾಯದಲ್ಲಿ ದೀಕ್ಷಿತರಾಗಿದ್ದ ಮಾಧವೇಂದ್ರಪುರಿಯವರು ಕೃಷ್ಣಪ್ರೇಮವನ್ನು ಸ್ಥಾಪಿಸುವ ಮೂಲಕ ಬೇರೆ ದಿಕ್ಕಿಗೆ ಹೊರಳಿಕೊಂಡರು. ಈ ಮಾರ್ಗವು ಗೌಡೀಯ ವೈಷ್ಣವ ಸಂಪ್ರದಾಯಕ್ಕೆ ಬೆಸೆದುಕೊಂಡು ಮುಂದುವರಿಯಿತು.
ಒಟ್ಟಾರೆಯಾಗಿ ವೈಷ್ಣವ ತತ್ತ್ವದ ನಾಲ್ಕು ಸಂಪ್ರದಾಯಗಳಲ್ಲಿ ನಿರೂಪಣಾ ಕ್ರಮದಲ್ಲಿ ವಿವರಣೆಗಳಲ್ಲಿ ಭಿನ್ನತೆಯಿದ್ದರೂ ಅವು ಪ್ರತಿಪಾದಿಸುವ ಸತ್ಯ ಆತ್ಯಂತಿಕವಾಗಿ ಒಂದೇ ಆಗಿದೆ. ಜೀವಿಗಳೆಲ್ಲರೂ ಭಗವಂತನ ನಿತ್ಯ ಸೇವಕರು ಎಂಬುದು ಈ ಸಂಪ್ರದಾಯಗಳ ಮೂಲತತ್ತ್ವವಾಗಿದೆ.
ಇದನ್ನು ಆಧಾರವಾಗಿಟ್ಟುಕೊಂಡು, ಗೌಡೀಯ ವೈಷ್ಣವ ಆಚಾರ್ಯರ ಹಾಗೂ ಪ್ರಮುಖ ಭಕ್ತರ ಕೃತಿಗಳನ್ನು ಆಧರಿಸಿಕೊಂಡು ಸಂಶೋಧನೆ ನಡೆಸಿರುವ ಅಧ್ಯಯನಕಾರರು ಶ್ರೀ ಚೈತನ್ಯ ಪರಂಪರೆ ಹಾಗೂ ಬ್ರಹ್ಮ-ಮಾಧ್ವ ಸಂಪ್ರದಾಯಗಳ ಬೆಸುಗೆ-ಭಿನ್ನತೆಗಳನ್ನು ಗುರುತಿಸಿದ್ದಾರೆ.






Leave a Reply