– ಡಾ.ಬಿ.ಆರ್.ಸುಹಾಸ್
ಪ್ರಾಣೇಶ ವಿಶ್ವಂಭರ ಕೈಟಭಾರೇ ವೈಕುಂಠ ನಾರಾಯಣ ಚಕ್ರಪಾಣೇ ।
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
“ಹೇ ಜಿಹ್ವೇ, ಪ್ರಾಣೇಶ, ವಿಶ್ವಂಭರ, ಕೈಟಭಾರಿ (ಕೈಟಭನ ಶತ್ರು), ವೈಕುಂಠ, ನಾರಾಯಣ, ಚಕ್ರಪಾಣಿ, ಗೋವಿಂದ, ದಾಮೋದರ, ಮಾಧವ ಎಂಬ ನಾಮಾಮೃತವನ್ನು ಪಾನಮಾಡು.

ಹರೇ ಮುರಾರೇ ಮಧುಸೂದನಾಽಽದ್ಯ ಶ್ರೀಕೃಷ್ಣ ಪೀತಾಂಬರ ದೀನಬಂದೋ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
““ಹೇ ಜಿಹ್ವೇ ಹರೇ ಮುರಾರೇ (ಮುರಾರಿ – ಮುರನೆಂಬ ರಾಕ್ಷಸನ ವೈರಿ) ಹೇ ಮಧುಸೂದನ (ಮಧುವೆಂಬ ರಾಕ್ಷಸನನ್ನು ಕೊಂದವನು) ಆದ್ಯಪುರುಷನೇ ( ಎಲ್ಲರಿಗೂ ಮೊದಲು ಇದ್ದ ಪ್ರಥಮ ಪುರುಷ), ಶ್ರೀಕೃಷ್ಣ, ಪೀತಾಂಬರಧಾರಿ, ದೀನಬಂಧು, ಗೋವಿಂದ, ದಾಮೋದರ, ಮಾಧವ ಎಂಬ ಈ ನಾಮಾಮೃತವನ್ನು ಪಾನಮಾಡು.
ಶ್ರೀಯಾದವೇ೦ದ್ರಾಽದ್ರಿಧರಾಽಂಬುಜಾಕ್ಷ ಗೋಗೋಪಗೋಪೀಸುಖಾದನದಕ್ಷ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
”ಹೇ ಜಿಹ್ವೇ, ಶ್ರೀಯಾದವೇಂದ್ರ (ಯಾದವರಲ್ಲಿ ಇಂದ್ರ – ಪ್ರಮುಖ, ಅಥವಾ ಅವರಿಗೆ ನಾಥ), ಅದ್ರಿಧರ (ಗೋವರ್ಧನಗಿರಿಧಾರಿ), ಹೇ – ಅಂಬುಜಾಕ್ಷ (ಕಮಲನಯನ), ಗೋಗೋಪ-ಗೋಪೀಸುಖಾದನದಕ್ಷ (ಗೋವುಗಳಿಗೂ ಗೋಪರಿಗೂ ಗೋಪಿಯರಿಗೂ ಸುಖ ಕೊಡುವುದರಲ್ಲಿ ದಕ್ಷ), ಗೋವಿಂದ, ದಾಮೋದರ, ಮಾಧವ ಎಂಬ ನಾಮಾಮೃತವನ್ನು ನೀನು ಪಾನ ಮಾಡು.”
ನಾರಾಯಣಾಽನಂತ ಹರೇ ನೃಸಿಂಹ ಪ್ರಹ್ಲಾದಬಾಧಾಹರ ಹೇ ಕೃಪಾಲೋ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||

“ಹೇ ಜಿಹ್ವೇ, ನಾರಾಯಣ, ಅನಂತ, ಹರೇನೃಸಿಂಹ, ಪ್ರಹ್ಲಾದನ ಬಾಧೆಯನ್ನು ಕಳೆದವನೇ (ಪ್ರಹ್ಲಾದನಿಗೆ ಹಿರಣ್ಯಕಶಿಪುವು ಕೊಟ್ಟ ಬಾಧೆಗಳನ್ನು ಕಳೆದವನೇ ಹಾಗೂ ಹಿರಣ್ಯ ಕಶಿಪುವನ್ನು ಸಂಹರಿಸಿದವನೇ), ಹೇ ಕೃಪಾಳು, ಗೋವಿಂದ, ದಾಮೋದರ, ಮಾಧವ ಎಂಬ ಈ ನಾಮಾಮೃತವನ್ನು ಪಾನಮಾಡು.”
ಗೋಪೀಜನಾಽಽಹ್ಲಾದಕರ ಬ್ರಜೇಶ ಗೋಚಾರಣಾಽರಣ್ಯಕೃತಪ್ರವೇಶ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
‘ಹೇ ಜಿಹ್ವೇ, ಗೋಪಿಜನರಿಗೆ ಆಹ್ಲಾದವುಂಟುಮಾಡುವವನೇ, ವ್ರಜೇಶ, ಗೋವುಗಳನ್ನು ಮೇಯಿಸಲು ಅರಣ್ಯಕ್ಕೆ ಹೋಗುವವನೇ, ಗೋವಿಂದ, ದಾಮೋದರ, ಮಾಧವ ಎಂಬೆಲ್ಲಾ ನಾಮಾಮೃತವನ್ನು ಪಾನಮಾಡು.”
ಧರಾಭರೋತ್ತಾರಣಗೋಪವೇಷ ವಿಹಾರಲೀಲಾಕೃತಬಂಧುಶೇಷ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
”ಹೇ ಜಿಹ್ವೇ ಧರಾಭರೋತ್ತಾರಣಗೋಪವೇಷ (ಭೂಭಾರವನ್ನು ಇಳಿಸಲು, ಅಂದರೆ ಭೂಮಿಗೆ ಭಾರವಾದ ದುಷ್ಟರನ್ನೂ ರಾಕ್ಷಸರನ್ನೂ ಕೊಲ್ಲಲು ತಾಳಿರುವ ಗೋಪವೇಷ), ವಿಹಾರಲೀಲಾಕೃತಬಂಧುಶೇಷ (ಲೀಲಾವಿಹಾರಗಳಿಗಾಗಿ ನೀನು ಮಲಗುವ ಶೇಷನಾಗನನ್ನು ನಿನ್ನ ಬಂಧುವನ್ನಾಗಿ, ಅಂದರೆ ಅಣ್ಣ ಬಲರಾಮನಾಗಿ ಮಾಡಿಕೊಂಡೆ), ಗೋವಿಂದ, ದಾಮೋದರ, ಮಾಧವ ಎಂಬ ನಾಮಾಮೃತವನ್ನು ಪಾನಮಾಡು.”

ವಕೀಬಕಾಽಘಾಸುರಧೇನುಕಾರೇ ಕೇಶೀತೃಣಾವರ್ತವಿಘಾತದಕ್ಷ
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
“ಹೇ ಜಿಹ್ವೇ! ವಕೀಬಕಾಽಘಾಸುರಧೇನುಕಾರೇ (ಪೂತನೀ, ಬಕಾಸುರ, ಅಘಾಸುರ, ಧೇನುಕಾಸುರರ ವೈರಿ, ಅರ್ಥಾತ್, ಅವರನ್ನು ಕೊಂದವನೆ)! ಕೇಶೀತೃಣಾವರ್ತ ವಿಘಾತದಕ್ಷ (ಕೇಶೀ ಮತ್ತು ತೃಣಾವರ್ತ ಎಂಬ ರಾಕ್ಷರನ್ನು ಕೊಂದವನೇ)! ಗೋವಿಂದ, ದಾಮೋದರ, ಮಾಧವ ಎಂಬ ಈ ನಾಮಾಮೃತವನ್ನು ಪಾನಮಾಡು.”
ಶ್ರೀಕೃಷ್ಣ ಗೋವಿಂದ ಹರೇ ಮುರಾರೇ ಹೇ ನಾಥ ನಾರಾಯಣ ವಾಸುದೇವ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
”ಹೇ ಜಿಹ್ವೇ, ಶ್ರೀಕೃಷ್ಣ, ಗೋವಿಂದ ಹರೇಮುರಾರೇ, ಹೇನಾಥ, ನಾರಾಯಣ, ವಾಸುದೇವ, ಗೋವಿಂದ, ದಾಮೋದರ, ಮಾಧವ ಎ೦ಬ ಈ ನಾಮಾಮೃತವನ್ನು ಪಾನಮಾಡು.”
ವಕ್ತುಂ ಸಮರ್ಥೋಽಪಿ ನ ವಕ್ತಿ ಕಶ್ಚಿದ್ ಅಹೋ ಜನಾನಾಂ ವ್ಯಸನಾಽಭಿಮುಖ್ಯಮ್ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||

“ಅಯ್ಯೋ ಉಚ್ಚರಿಸಲು ಸಮರ್ಥರಾಗಿದ್ದರೂ ಕೆಲವರು ಭಗವಂತನ ನಾಮಗಳನ್ನು ಉಚ್ಚರಿಸುವುದಿಲ್ಲ. ಈ ಜನರಿಗೆ ದುರ್ವ್ಯಸನಗಳೇ ಮುಖ್ಯವಾಗಿವೆಯಲ್ಲಾ ಅಯ್ಯೋ…… ! (ಆದ್ದರಿಂದಲೇ ಅವರಿಗೆ ಭಗವನ್ನಾಮೋಚ್ಚಾರಣೆ ಮಾಡಲು ಮನಸ್ಸಾಗುತ್ತಿಲ್ಲ.) ಎಲೈ ಜಿಹ್ವೆಯೇ, ನೀನು ಮಾತ್ರ ಗೋವಿಂದ, ದಾಮೋದರ, ಮಾಧವ ಎ೦ಬ ಭಗವಂತನ ನಾಮಾಮೃತವನ್ನು ಪಾನಮಾಡು (ತಪ್ಪದೇ ಉಚ್ಚರಿಸು).”
ಭಕ್ತ ಕವಿ ಬಿಲ್ವಮಂಗಲರು ಹೀಗೆ ಗೋವಿಂದದಾಮೋದರ ಸ್ತೋತ್ರ ಎಂಬ ಮಧುರವಾದ ಸುಂದರ ಸ್ತೋತ್ರವನ್ನು ಮುಗಿಸಿ ಕೊನೆಯಲ್ಲಿ ಕೆಲವು ಜನರು ತಮಗೆ ಉಚ್ಚರಿಸಲು ಸಾಮರ್ಥ್ಯವಿದ್ದರೂ ಶ್ರೀಕೃಷ್ಣನ ನಾಮೋಚ್ಚಾರಣೆ ಮಾಡದೇ ಕೇವಲ ದುರ್ವಸನಗಳಲ್ಲೇ ಮುಳುಗುವರಲ್ಲಾ ಎಂದು ಮರುಗಿದ್ದಾರೆ.
ಮಾತನಾಡಲು ಶಕ್ತಿಯಿರುವ ಮಾನವ ಜನ್ಮದಲ್ಲಿ ಒಮ್ಮೊಮ್ಮೆಯಾದರೂ ಕೃಷ್ಣನ ನಾಮೋಚ್ಚಾರಣೆ ಮಾಡಬೇಕು ಎಂಬುದೇ ಈ ಇಡೀ ಸ್ತೋತ್ರದ ಸಾರಾಂಶ. ‘ಮಾನವ ಜನ್ಮ ದೊಡ್ಡದು; ಇದ ಹಾಳುಮಾಡಲುಬೇಡಿ ಹುಚ್ಚಪ್ಪಗಳಿರಾ’ ಎಂದಿರುವ ಪುರಂದರದಾಸರು, “ನರಜನ್ಮ ಬಂದಾಗ, ನಾಲಗೆ ಇರುವಾಗ, ಕೃಷ್ಣ ಎನಬಾರದೇ” ಎಂದೂ ಹೇಳಿದ್ದಾರೆ. ಆದ್ದರಿಂದ ನಾವೆಲ್ಲರೂ ಶ್ರೀಕೃಷ್ಣನ ನಾಮೋಚ್ಚಾರಣೆಯನ್ನು ದಿನವೂ ಮಾಡುತ್ತಾ ನಮ್ಮ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳೋಣ.
ಹರೇಕೃಷ್ಣ ಹರೇ ಕೃಷ್ಣ ಕೃಷಕೃಷ್ಣ ಹರೇಹರೇ
ಹರೇರಾಮ ಹರೇರಾಮ ರಾಮರಾಮ ಹರೇಹರೇ






Leave a Reply