ಒಂದಾನೊಂದು ಊರು. ಆ ಊರಿನ ತುದಿಯಲ್ಲೊಂದು ಪುಟ್ಟ ಹಳ್ಳಿ. ಆ ಹಳ್ಳಿಯಲ್ಲೊಬ್ಬ ಶಾಣ್ಯಾ – ರಾಮು. ಅವನ ಜಾಣತನ ಆ ಹಳ್ಳಿಗೆ ಮಾತ್ರ ಅಲ್ಲ ಅಕ್ಕಪಕ್ಕದ ಹಳ್ಳಿಗಳಿಗೂ ಚಾಚಿತ್ತು. ತನ್ನ ಅತಿ ಬುದ್ಧಿವಂತಿಕೆಯಿಂದ ಫಜೀತಿಗೆ ಸಿಲುಕೋದು ಅವನಿಗೆ ರೂಢಿಯಾಗಿ ಹೋಗಿತ್ತು!
ರಾಮು, ದಿನಾ ಬೆಳಗ್ಗೆ ಎದ್ದು ಜಗಲಿಯ ಮೇಲೆ ಕೂರುತ್ತಿದ್ದ. ಪ್ರತಿ ಬೆಳಗ್ಗೆ ಹಾಗೆ ಸ್ವಲ್ಪ ಹೊತ್ತು ಕೂತು ಕಾಲ ಕಳೆಯೋದು ಅವನ ಅಭ್ಯಾಸ. ಅವನು ಹಾಗೆ ಕೂತ ಒಂದು ದಿನ ಸುಂದರವಾದ ಒಂದು ಹಸು ಅಲ್ಲಿ ಬ೦ದು ಮೇಯಲಾರಂಭಿಸಿತು.
ಆದರೆರಡು ಕೊಂಬುಗಳು ಸಮ ದೂರದಲ್ಲಿ ಸಮ ಪ್ರಮಾಣದಲ್ಲಿದ್ದು, ನಯವಾಗಿ ಹೊಳೆಯುತ್ತಿದ್ದವು. ರಾಮುವಿಗೆ ಆ ಕೊಂಬುಗಳು ಬಹಳ ಇಷ್ಟವಾದವು. ಹಸುವಿನ ಕೊ೦ಬುಗಳ ನಡುವಿನ ಅಂತರದಲ್ಲಿ ನನ್ನ ತಲೆ ಬಹಳ ಚೆನ್ನಾಗಿ ತೋರುತ್ತದೆ ಎಂದು ಅವನು ಯೋಚಿಸಿದ.
ಮರುದಿನ ಬೆಳಗ್ಗೆ ಕೂಡ ಹಾಗೆಯೇ ಆಯಿತು. ರಾಮು ಜಗಲಿಯಲ್ಲಿ ಕುಳಿತ ಸಮಯಕ್ಕೆ ಹಸು ಅಲ್ಲಿ ಬಂದು ಮೇಯುತ್ತಿತ್ತು. ರಾಮು ಮತ್ತೆ ಅದರ ಕೊಂಬುಗಳನ್ನು ನೋಡುತ್ತ ‘ಆಹಾ! ಇವುಗಳ ನಡುವೆ ನನ್ನ ತಲೆ ಸರಿಯಾಗಿ ತೂರುವುದು” ಎಂದು ಕೊಂಡ.
ಹೀಗೆ ಪ್ರತಿದಿನವೂ ಹಸು ಬರುವುದು, ರಾಮು ಯೋಚಿಸುವುದು ನಡೆಯುತ್ತಿತ್ತು. ನೋಡುತ್ತ ನೋಡುತ್ತ 6 ತಿಂಗಳು ಕಳೆದು ಹೋದವು. ಕೊನೆಗೊಂದು ದಿನ ರಾಮು ಹಸುವಿನ ಕೊಂಬುಗಳ ನಡುವೆ ತಲೆಯನ್ನು ತೂರಿಸಿಯೇ ಬಿಡುವೆ ಎಂದು ನಿಶ್ಚಯಿಸಿದ.

ಹಸು ಮೇಯುತ್ತಿರುವಾಗ ಮೆಲ್ಲನೆ ಎದ್ದು ಹಿಂದಿನಿಂದ ಅದರ ಕೊಂಬುಗಳ ನಡುವೆ ತಲೆ ತೂರಿಸಿದ. ಅವನ ತಲೆಯೇನೋ ಕೊಂಬುಗಳ ನಡುವೆ ಸರಿಯಾಗಿ ಸಿಲುಕಿಕೊಂಡಿತು. ಆದರೆ ಪಾಪ! ಗಾಬರಿ ಬಿದ್ದ ಹಸು ಭಂಗನೆ ನೆಗೆದು ಓಟ ಕಿತ್ತಿತು!!
ಕೊಂಬುಗಳ ನಡುವೆ ಸಿಲುಕಿಕೊಂಡ ರಾಮುವನ್ನು ಅದು ಎಳೆದುಕೊಂಡೇ ಸಾಗಿತು. ಈ ರಭಸದಲ್ಲಿ ಅವನ ಮೈ ಕೈ ತರಚಿ ರಂಪವಾಯಿತು. ಕೊನೆಗೆ ಹಳ್ಳಿಯ ಜನ ಹಸುವನ್ನು ತಡೆದು ನಿಲ್ಲಿಸಿ, ರಾಮುವನ್ನು ಬಿಡಿಸಿದರು.
ಹಿರಿಯ ಹಳ್ಳಿಗನೊಬ್ಬ ರಾಮುವಿಗೆ ಬಯ್ದು, “ನಿನಗೆ ಸ್ವಲ್ಪವೂ ಬುದ್ಧಿಯೇ ಇಲ್ಲವೇ? ಏನಾದರೂ ಮಾಡುವ ಮುಂಚೆ ಆಲೋಚಿಸಿ ಕೆಲಸಕ್ಕೆ ಕೈ ಹಾಕಬಾರದೆ?” ಎಂದ. ಅವನೊಟ್ಟಿಗೆ ಉಳಿದವರೂ ದನಿ ಸೇರಿಸಿದರು.
ನೋವಿನಿಂದ ನರಳುತ್ತಿದ್ದ ರಾಮು, “ನಾನು ಖಂಡಿತ ಆಲೋಚಿಸಿದ್ದೆ. ಒಂದೆರಡಲ್ಲ, ಕಳೆದ ಆರು ತಿ೦ಗಳಿಂದ ಹಸುವಿನ ಕೊಂಬುಗಳ ನಡುವೆ ತಲೆ ತೂರಿಸಬೇಕೆಂದು ಬಹಳ ಗಂಭೀರವಾಗಿಯೇ ಆಲೋಚಿಸಿದ್ದೆ’ ಎಂದ!
ಹೌದು, ರಾಮು ಆಲೋಚಿಸಿದ್ದೇನೋ ಹೌದು. ಆದರೆ, ಹಾಗೆ ಕೊಂಬುಗಳ ನಡುವೆ ತಲೆ ತೂರಿಸುವ ಅವನ ಚಿಂತನೆಯೇ ತಪ್ಪಾಗಿತ್ತಲ್ಲ!? ಈ ಬಗೆಯ ಸಲ್ಲದ ಕೆಲಸಗಳನ್ನು ಮಾಡುವ ಮುನ್ನ ಆಲೋಚಿಸಿದರೂ, ಆಲೋಚಿಸದೆ ಹೋದರೂ ವ್ಯತ್ಯಾಸವೇನೂ ಆಗುವುದಿಲ್ಲ.
ಆದ್ದರಿಂದ ನಾವು ಯಾವಾಗಲೂ ಸರಿಯಾದುದರ ಬಗ್ಗೆಯೇ ಚಿಂತನೆ ನಡೆಸಬೇಕು. ಅಲ್ಲವೇ?
ಮು೦ದೆ ರಾಮುವಿಗೆ ಗಾಯಗಳಿಂದ ಗುಣಮುಖನಾಗಿ ನಡೆದಾಡುವಂತಾಗಲು ಹಲವು ತಿಂಗಳುಗಳೇ ಬೇಕಾದವು. ಇನ್ನೆಂದೂ ಅಂತಹ ಕೆಲಸಗಳಿಗೆ ಕೈ ಹಾಕಲಾರೆನೆಂದು ಅವನು ತೀರ್ಮಾನಿಸಿದ.






Leave a Reply