ಹಲಸಿನ ವಿವಿಧ ಭಕ್ಷ್ಯಗಳು

ಶ್ರೀ ಕೃಷ್ಣ ಪಾಕಶಾಲೆ

– ಶ್ರೀಮತಿ ಶಾರದಾ ಶೆಣೈ

ಹಲಸಿನ ಇಡ್ಲಿ (ಪಣಸಾ ಮುದ್ದೊ)

ಬೇಕಾಗುವ ಪದಾರ್ಥಗಳು :

ಹಲಸಿನ ತೊಳೆ – 25-30

ಅಕ್ಕಿ – 500 ಗ್ರಾಂ

ತೆಂಗಿನಕಾಯಿ – 1 ಹೋಳು

ಬೆಲ್ಲ – 400 ಗ್ರಾಂ ( ರುಚಿಗೆ ತಕ್ಕಷ್ಟು)

ಏಲಕ್ಕಿಪುಡಿ – 1 ಟೀ ಚಮಚ

ತುಪ್ಪ ಅಥವಾ ಅಡಿಗೆ ಎಣ್ಣೆ – ಇಡ್ಲಿ ತಟ್ಟೆಗೆ ಹಚ್ಚಲು ಬೇಕಾಗುವಷ್ಟು

ಮಾಡುವ ವಿಧಾನ : ಅಕ್ಕಿ ತೊಳೆದು ಬಸಿಯಿರಿ. ಆರಿದನಂತರ ಸಣ್ಣ ರವೆ ಮಾಡಿಟ್ಟುಕೊಳ್ಳಿ. (ಇಡ್ಲಿರವೆ ಹದಕ್ಕೆ) ಹಲಸಿನ ತೊಳೆಯನ್ನು ಹೆಚ್ಚಿಕೊಳ್ಳಿ. ತೆಂಗಿನಕಾಯಿ ತುರಿದಿಟ್ಟುಕೊಳ್ಳಿ.

ನಂತರ ಹಲಸಿನ ತೊಳೆ ಹಾಗೂ ತೆಂಗಿನಕಾಯಿ, ಬೆಲ್ಲದ ಪುಡಿ ಬೆರೆಸಿ ರುಬ್ಬಿ, ಈ ಮಿಶ್ರಣವನ್ನು ಅಕ್ಕಿ ರವೆಯೊಂದಿಗೆ ಬೆರೆಸಿ. ಹಿಟ್ಟು ರವೆ ಇಡ್ಲಿಯ ಹದಕ್ಕೆ ಬರುವಂತಿದ್ದರೆ ಸಾಕು. ಬೇಕಾದರೆ ನೀರು ಸೇರಿಸಿ, ಕೊನೆಯಲ್ಲಿ ಏಲಕ್ಕಿಪುಡಿ ಹಾಕಿ ಚೆನ್ನಾಗಿ ಕಲೆಸಿ.

ಈ ಹಲಸಿನ ಇಡ್ಲಿ ಹಿಟ್ಟನ್ನು ಬೇಕಾದರೆ ಇಡ್ಲಿ ಪಾತ್ರೆಯಲ್ಲಿ ಎಣ್ಣೆಸವರಿ ಹಬೆಯಲ್ಲಿ 15ರಿಂದ 20 ನಿಮಿಷಗಳ ಕಾಲ ಬೇಯಿಸಬಹುದು.

ಇಲ್ಲದಿದ್ದರೆ ಅರಿಶಿನದ ಎಲೆ ದೊರೆತರೆ ಒಂದರ ಮೇಲೊಂದು ಎಲೆಯಿಟ್ಟು (ಒಂದು ಎಲೆಯನ್ನು ಅಡ್ಡ ಹಾಗೂ ಮತ್ತೊಂದು ಎಲೆಯನ್ನು ಉದ್ದವಾಗಿ ಇಟ್ಟು) ಇಲ್ಲಿ ಮಿಶ್ರಣವನ್ನು ಅದರಲ್ಲಿ ಹಾಕಿ ಪೊಟ್ಟಣದಂತೆ ಮಾಡಿ, ಒಂದರ ಮೇಲೊಂದರಂತೆ ಇಡ್ಲಿ ಪಾತ್ರೆಯಲ್ಲಿ ಅಥವಾ ಕುಕ್ಕರಿನಲ್ಲಿ ಹಬೆಯಲ್ಲಿ ಬೇಯಿಸಿ.

ಬಿಸಿ, ಬಿಸಿಯಾಗಿ ಘಮ ಘಮಿಸುವ ಹಲಸಿನ ಹಣ್ಣಿನ ಇಡ್ಲಿಸಿದ್ಧ. ತುಪ್ಪಸವರಿ, ಇದನ್ನು ಶ್ರೀರಾಧಾಕೃಷ್ಣರಿಗರ್ಪಿಸಿ ಸೇವಿಸಿ.

ಸೂಚನೆ: ಇಡ್ಲಿ ಮಾಡುವಾಗ ನಾರಿನಂತಿರುವ ಹಲಸಿನ ತೊಳೆಯನ್ನು ಉಪಯೋಗಿಸದೇ ಸ್ವಲ್ಪ ಗಟ್ಟಿಯೂ, ಸಿಹಿಯೂ ಆಗಿರುವ ತೊಳೆಗಳನ್ನು ಬಳಸಿದರೆ ಹೆಚ್ಚು ಸೂಕ್ತ.

ಹಲಸಿನ ಪಾಯಸ (ಘರಾಯ್)

ಬೇಕಾಗುವ ಪದಾರ್ಥಗಳು :

ಹಲಸಿನ ತೊಳೆ – 20-25

ತೆಂಗಿನಕಾಯಿ – 1

ಬೆಲ್ಲ – 300 ಗ್ರಾಂ ( ರುಚಿಗೆ ತಕ್ಕಷ್ಟು)

ಅಕ್ಕಿರವೆ – 2 ಬಟ್ಟಲು

ಏಲಕ್ಕಿಪುಡಿ – 1 ಟೀ ಚಮಚ

ಬಾದಾಮಿ, ಗೋಡಂಬಿ, ಚೂರಿನ ಮಿಶ್ರಣ – 50 ಗ್ರಾಂ

ತುಪ್ಪ – 2 ಟೇಬಲ್ ಚಮಚ

ಮಾಡುವ ವಿಧಾನ : ಹಲಸಿನ ತೊಳೆಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಮಾಡಿ, ಒಂದು ದಪ್ಪತಳದ ಪಾತ್ರೆಯಲ್ಲಿ ಸ್ವಲ್ಪ ನೀರು ಕುದಿಸಿ ಬೇಯಿಸಿ. ಅದು ಅರ್ಧ ಬೆಂದನಂತರ ಬೆಲ್ಲಪುಡಿ ಹಾಕಿ. ಇದು ಚೆನ್ನಾಗಿ ಬೆರೆಯುವುದರೊಳಗೆ ತೆಂಗಿನಕಾಯಿ ತುರಿಯನ್ನು ರುಬ್ಬಿ ಇದಕ್ಕೆ ಸೇರಿಸಿ.

ಮತ್ತಷ್ಟು ನೀರು ಸೇರಿಸಿ 2-3 ನಿಮಿಷ ಕುದಿಸಿ. ಆನಂತರ ಅಕ್ಕಿರವೆಯನ್ನು ಬೆರೆಸಿ 7-8 ನಿಮಿಷ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ. ಉರಿ, ಆರಿಸುವ ಮೊದಲು ತುಪ್ಪದಲ್ಲಿ ಹುರಿದ ಬಾದಾಮಿ-ಗೋಡಂಬಿ ಚೂರಿನ ಮಿಶ್ರಣ ಬೆರೆಸಿ.

ಬೇಕಾದರೆ ಈ ಪಾಯಸಕ್ಕೆ ನೀರಿಗೆ ಬದಲಾಗಿ ಕಾಯಿಸಿದ ಹಾಲನ್ನು ಸೇರಿಸಬಹುದು.

ಹಲಸಿನಕಾಯಿ ಪುಡಿ ಪಲ್ಯ (ಕಡ್ಗಿಚಕ್ಕೊ)

ಬೇಕಾಗುವ ಪದಾರ್ಥಗಳು :

ಹಲಸಿನಕಾಯಿ ಚಿಕ್ಕದಾದರೆ – 1 ಇಲ್ಲದಿದ್ದರೆ ಸುಮಾರು 500 ಗ್ರಾಂನಷ್ಟು

ಮಸಾಲೆಗೆ:

ತೆಂಗಿನಕಾಯಿ -1

ಒಣಮೆಣಸಿನಕಾಯಿ – 7-8

ಹುಣಸೆಹಣ್ಣು – ಸ್ವಲ್ಪ

ಉದ್ದಿನಬೇಳೆ – 2 1/2 ಟೀ ಚಮಚ

ಕೊತ್ತಂಬರಿ (ಧನಿಯಾ) – 5 ಟೀ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಒಗ್ಗರಣೆಗೆ

ಕರಿಬೇವು – 2 ಎಸಳು

ಸಾಸಿವೆ – 1/2 ಟೀ ಚಮಚ

ಉದ್ದಿನಬೇಳೆ – 1 ಟೀ ಚಮಚ

ಕೊಬ್ಬರಿ ಎಣ್ಣೆ ಅಥವಾ ಅಡಿಗೆ ಎಣ್ಣೆ – 2 ಟೇಬಲ್ ಚಮಚ

ಮಾಡುವ ವಿಧಾನ: ಹಲಸಿನಕಾಯಿ ಅಂಟನ್ನು ತೆಂಗಿನ ನಾರಿನಿಂದ ತೆಗೆದು ಚಿಕ್ಕ ಚಿಕ್ಕ ಚೂರು ಮಾಡಿಟ್ಟುಕೊಳ್ಳಿ. ಅನಂತರ ಹಲಸಿನಕಾಯಿ ಚೂರುಗಳನ್ನು ಉಪ್ಪು ಸೇರಿಸಿ ಬೇಯಿಸಿ. ಅನಂತರ ಸ್ವಲ್ಪ ಎಣ್ಣೆ ಬಿಸಿಮಾಡಿ ಅದರಲ್ಲಿ ಉದ್ದಿನಬೇಳೆ, ಕೊತ್ತಂಬರಿಯನ್ನು ಹುರಿದಿಟ್ಟುಕೊಳ್ಳಿ.

ಈಗ ಮಸಾಲೆಗೆ ತೆಂಗಿನತುರಿ, ಒಣಮೆಣಸಿನಕಾಯಿ ಮತ್ತು ಹುಣಸೇಹಣ್ಣನ್ನು ಹಾಕಿ ರುಬ್ಬಿ, ತೆಂಗಿನ ತುರಿ ಅರ್ಧ ನುಣ್ಣಗಾದಾಗ ಅದರೊಂದಿಗೆ ಹುರಿದಿಟ್ಟ, ಉದ್ದಿನ ಬೇಳೆ ಹಾಗೂ ಕೊತ್ತಂಬರಿಯನ್ನು ಸೇರಿಸಿ ತರಿತರಿಯಾದ ಮಸಾಲೆ ಮಾಡಿಟ್ಟುಕೊಳ್ಳಿ.

ಅನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಜೊತೆಗೆ ಮಸಾಲೆ ಹಾಕಿ ಸ್ವಲ್ಪ ಹುರಿಯಿರಿ.

ಅನಂತರ ಬೆಂದ ಹಲಸಿನಕಾಯಿ ಚೂರಿನ ನೀರು ಬಸೆದು ಪುಡಿಮಾಡಿಕೊಂಡು ಈ ಮಸಾಲೆಗೆ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಚೆನ್ನಾಗಿ ಬೆರೆಯುವಂತೆ 5-6 ನಿಮಿಷ ಬೇಯಿಸಿ. ಪಲ್ಯಕ್ಕೆ ಹೆಚ್ಚು ನೀರು ಬೆರೆಸದೆ ಉದುರಾಗಿರುವಂತೆ ನೋಡಿಕೊಳ್ಳಿ.

ಬೇಕಾದರೆ ತೆಂಗಿನತುರಿ ರುಬ್ಬುವಾಗಲೇ ಬೆಂದ ಹಲಸಿನ ಚೂರುಗಳನ್ನು ತಣ್ಣಗಾದ ನಂತರ ಮಸಾಲೆಯೊಂದಿಗೆ ತರಿತರಿಯಾಗಿ ರುಬ್ಬಿಕೊಂಡು ಆನಂತರ ಒಗ್ಗರಣೆಯಲ್ಲಿ ಬೇಯಿಸಬಹುದು. ಈಗ ಹಲಸಿನಕಾಯಿ ಪುಡಿ ಪಲ್ಯ ಸಿದ್ಧ.

ದಕ್ಷಿಣ ಕನ್ನಡದಲ್ಲಿ ಸಾಮಾನ್ಯವಾಗಿ ಇದರೊಂದಿಗೆ ಕೊಬ್ಬರಿ ಎಣ್ಣೆ ಬೆರೆಸಿ ಸೇವಿಸುತ್ತಾರೆ. ಬೇಕಾದಲ್ಲಿ ತುಪ್ಪ ಅಥವಾ ಬಿಸಿಮಾಡಿದ ಇತರ ಅಡಿಗೆ ಎಣ್ಣೆಯೊಂದಿಗೆ ಅನ್ನದೊಂದಿಗೆ ಇಲ್ಲದಿದ್ದರೆ ಚಪಾತಿ, ದೋಸೆಯೊಂದಿಗೆ ಸೇವಿಸಬಹುದು.

ಸ್ವೀಕರಿಸುವ ಮೊದಲು ರಾಧಾಕೃಷ್ಣರಿಗೆ ಅರ್ಪಿಸುವುದನ್ನು ಮರೆಯದಿರಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi