ಭಾಗವತದ ಪಾತ್ರ ಪರಿಚಯ : ಭಕ್ತ ಮಹಾಶಯರು
(ಆಧಾರ – ಶ್ರೀ ಶ್ರೀಮದ್ ಎ.ಸಿ.ಭಕ್ತವೇದಾಂತ ಸ್ವಾಮಿ ಪ್ರಭುಪಾದರ ಭಾವಾರ್ಥಗಳು: ಭಾಗವತ; ಪ್ರಥಮ ಸ್ಕಂಧ; 12, 15ನೇ ಅಧ್ಯಾಯಗಳು)
ಬಲಿಮಹಾರಾಜ

ಭಗವಂತನ ಭಕ್ತಿಸೇವೆಯಲ್ಲಿ ಹನ್ನೆರಡು ಮಂದಿ ಅಧಿಕಾರಿಗಳಲ್ಲಿ ಒಬ್ಬನು. ಬಲಿಮಹಾರಾಜನು ಭಕ್ತಿಸೇವೆಯಲ್ಲಿ ಮಹಾಧಿಕಾರಿ. ಏಕೆಂದರೆ ಅವನು ಭಗವಂತನನ್ನು ಪ್ರಸನ್ನಗೊಳಿಸಲು ಸರ್ವಸ್ವವನ್ನೂ ತ್ಯಾಗಮಾಡಿದನು.
ಭಗವತ್ಸೇವೆಗಾಗಿ ಎಲ್ಲವನ್ನೂ ಬಲಿಗೊಡುವ ಹಾದಿಯಲ್ಲಿ ಅಡ್ಡಿಯುಂಟುಮಾಡಿದ ಗುರುವಿನ ಸಂಬಂಧವನ್ನು ಕಡಿದುಕೊಂಡನು. ಧರ್ಮಜೀವನದ ಅತ್ಯುನ್ನತಿ ಎಂದರೆ ಯಾವುದೇ ಕಾರಣವಿಲ್ಲದೆ ಅಥವಾ ಯಾವುದೇ ಬಗೆಯ ಪ್ರಾಪಂಚಿಕವಾದ ಹಂಗಿಲ್ಲದೆ, ಭಗವಂತನ ಭಕ್ತಿಸೇವಾ ಹಂತವನ್ನು ಮುಟ್ಟುವುದು.
ಬಲಿಮಹಾರಾಜನು ಭಗವಂತನ ತೃಪ್ತಿಗಾಗಿ ಎಲ್ಲರನ್ನೂ ತ್ಯಜಿಸಲು ದೃಢ ಮನಸ್ಸು ಮಾಡಿದನು. ಯಾವುದೇ ಬಗೆಯ ಅಡಚಣೆಯನ್ನು ಅವನು ಲಕ್ಷ್ಯ ಮಾಡಲಿಲ್ಲ. ಬಲಿಯು ಭಗವಂತನ ಭಕ್ತಿ ಸೇವೆಯಲ್ಲಿ ಇನ್ನೊಬ್ಬ ಪ್ರಮಾಣ ಪುರುಷನಾದ ಪ್ರಹ್ಲಾದ ಮಹಾರಾಜನ ಮೊಮ್ಮಗ.
ವಿಷ್ಣುವಾಮನದೇವನೊಂದಿಗಿನ ಅವನ ವ್ಯವಹಾರಗಳ ಚರಿತೆಯು ಶ್ರೀಮದ್ಭಾಗವತದ ಎಂಟನೆಯ ಸ್ಕಂಧದಲ್ಲಿ (ಅಧ್ಯಾಯ 1124) ವರ್ಣಿತವಾಗಿದೆ.
ನಪ್ತಾ ಅಥವಾ ಭೂರಿಶ್ರವ

ಭೂರಿಶ್ರವನು ಸೋಮದತ್ತನ ಮಗ, ಕುರುವಂಶಕ್ಕೆ ಸೇರಿದವನು. ಅವನ ಇನ್ನೊಬ್ಬ ಸಹೋದರನೇ ಶಲ್ಯ. ತಂದೆಯೂ ಇಬ್ಬರು ಸೋದರರೂ ದ್ರೌಪದಿಯ ಸ್ವಯಂವರಕ್ಕೆ ಹೋಗಿದ್ದರು. ಶ್ರೀಕೃಷ್ಣನ ಆಪ್ತ ಸಖನೂ ಭಕ್ತನೂ ಆಗಿ ಅರ್ಜುನನು ಪಡೆದುಕೊಂಡಿದ್ದ ಅದ್ಭುತ ಶಕ್ತಿಯನ್ನು ಅವರೆಲ್ಲರೂ ಮೆಚ್ಚಿದರು.
ಹಾಗಾಗಿ ಪಾಂಡವರೊಂದಿಗೆ ಕಲಹ ಮಾಡಬಾರದೆಂದು ಧೃತರಾಷ್ಟ್ರನ ಮಕ್ಕಳಿಗೆ ಭೂರಿಶ್ರವನು ಬುದ್ಧಿ ಹೇಳಿದನು. ಯುಧಿಷ್ಠಿರನು ಮಾಡಿದ ರಾಜಸೂಯ ಯಾಗಕ್ಕೂ ಎಲ್ಲರೂ ಹೋಗಿದ್ದರು. ಅವನ ಬಳಿ ಹಸ್ತಿ, ಅಶ್ವ, ರಥ, ಪದಾತಿಗಳಿಂದ ಕೂಡಿದ ಒಂದು ಅಕ್ಷೌಹಿಣಿ ಸೇನೆಯಿದ್ದಿತು.
ಅದನ್ನು ಅವನು ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಪರವಾಗಿ ಯುದ್ಧ ಮಾಡಲು ತಂದನು. ಭೀಮನು ಭೂರಿಶ್ರವನನ್ನು ಯೂಥಪತಿಗಳಲ್ಲಿ ಒಬ್ಬನಾಗಿ ಪರಿಗಣಿಸಿದನು. ಕುರುಕ್ಷೇತ್ರ ಯುದ್ಧದಲ್ಲಿ ಭೂರಿಶ್ರವನೊಡನೆ ಕಾದಲು ವಿಶೇಷವಾಗಿ ಸಾತ್ಯಕಿಯನ್ನು ನಿಯೋಜಿಸಲಾಯಿತು.
ಭೂರಿಶ್ರವನು ಸಾತ್ಯಕಿಯ ಹತ್ತು ಜನ ಪುತ್ರರನ್ನು ವಧಿಸಿದನು. ಅರ್ಜುನನು ಭೂರಿಶ್ರವನ ಎರಡೂ ಕೈಗಳನ್ನು ಕತ್ತರಿಸಿದನು, ಸಾತ್ಯಕಿಯು ಅವನನ್ನು ಕೊಂದನು. ಮರಣಾನಂತರ ಭೂರಿಶ್ರವನು ವಿಶ್ವದೇವನಲ್ಲಿ ಐಕ್ಯವಾದನು.






Leave a Reply