ಕನಕದಾಸರ ಜನ್ಮದಿನ 1495 ಎಂದು ಗ್ರಹಿಸಿಕೊಳ್ಳಬಹುದು, ಮರಣದ ಕಾಲವನ್ನು 1594 ಎಂದಿಟ್ಟುಕೊಳ್ಳಬಹುದು. ಒಟ್ಟಾರೆ ಕನಕದಾಸರು ಕೃಷ್ಣದೇವರಾಯನ ಪ್ರೋತ್ಸಾಹದಲ್ಲಿ ವಿಜಯನಗರದ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಜೀವಿಸಿದ್ದರೆಂದು ತಿಳಿದುಬರುತ್ತದೆ.

ಕನಕದಾಸರ ಜೀವನಕ್ಕೆ ಸಂಬಂಧಿಸಿದಂತೆ ಹರಿದಾಸರ ಮನೆತನಗಳಲ್ಲಿ ಉಳಿಸಿಕೊಂಡು ಬಂದಿರುವ ದಾಖಲೆಗಳಂತೆ, ಜನ ಜೀವನದಲ್ಲಿ ಕರ್ಣ ಪರಂಪರೆಯಾಗಿ ಬಂದಿರುವ ಐತಿಹ್ಯದಂತೆ ಹಾಗೂ ಡೊಳ್ಳಿನ ಹಾಡಿನಲ್ಲಿ ಸಿಗುವ ಮಾಹಿತಿಯಂತೆ ಅವರ ತಂದೆ ತಾಯಿಗಳ ಹೆಸರು ಬೀರಪ್ಪ ಬಚ್ಚಮ್ಮ.
ಬೀರಪ್ಪ ಬಾಡಬಂಕಾಪುರದ ಸುತ್ತಲ ಪ್ರದೇಶಕ್ಕೆ ನಾಡಗೌಡ ಅಥವಾ ದಣ್ಣಾಯಕನಾಗಿದ್ದನು. ತಿರುಪತಿಯ ತಿಮ್ಮಪ್ಪನ ವರಪ್ರಸಾದದಿಂದ ಹುಟ್ಟಿದ ಮಗನಿಗೆ . ತಿಮ್ಮಪ್ಪ ಎಂದೇ ಹೆಸರಿಟ್ಟರು. ಸಿಕ್ಕಿದ ಕನಕನಿಧಿಯನ್ನು ಜನರಿಗೆ ಹಂಚಿದ್ದರಿಂದ ಕನಕಪ್ಪ ಆದ.
ದಂಡನಾಯಕ ಪದವಿ ದೊರಕಿದ್ದರಿಂದ ಕನಕನಾಯಕನಾದ. ದಾಸ ದೀಕ್ಷೆ ತೆಗೆದುಕೊಂಡ ಮೇಲೆ ಕನಕದಾಸ ಎಂಬ ಹೆಸರು ರೂಢಿಗೆ ಬಂತು. ಆದರೆ ಹುಟ್ಟು ಹೆಸರೇ ಕನಕ ಎಂದಿರಬೇಕು. ಅವರ ಹಲವಾರು ಕೀರ್ತನೆಗಳಲ್ಲಿ ಅಂದರೆ ದಾಸರಾಗುವ ಮೊದಲು ಬರೆದವುಗಳಲ್ಲಿ ಕನಕ, ಕನಕಯ್ಯ, ಕನಕಪ್ಪ ಎಂಬ ಹೆಸರುಗಳೇ ಕಂಡು ಬರುತ್ತವೆಯಾದ್ದರಿಂದ ಕನಕ ಎಂಬುದೇ ಹುಟ್ಟಿದಾಗಿನ ಹೆಸರಾಗಿರಬೇಕು ಎನ್ನಿಸುತ್ತದೆ.
ಚಿಕ್ಕಂದಿನಲ್ಲೇ ಬಂಕಾಪುರದ ಶ್ರೀನಿವಾಸಾಚಾರ್ಯ ಎಂಬುವವರ ಬಳಿ ವಿದ್ಯಾಭ್ಯಾಸವಾಗಿ ತರ್ಕ, ವ್ಯಾಕರಣ, ಮೀಮಾಂಸೆ, ಸಾಹಿತ್ಯಗಳಲ್ಲಿ ಸಿದ್ಧಹಸ್ತನಾದ. ಸಂಸ್ಕೃತದಲ್ಲೂ ಪಾರಂಗತನಾದ. ತಂದೆ ಕ್ಷತ್ರಿಯೋಚಿತ ವಿದ್ಯೆಯನ್ನು ಕಲಿಸಿದ. ಚಿಕ್ಕಂದಿನಿಂದಲೇ ಬಾಡದ ಆದಿಕೇಶವನ ಭಕ್ತನಾಗಿ ಹಾಡುಗಳನ್ನು ರಚಿಸುತ್ತಿದ್ದ.
ಆತನ ದೈಹಿಕ, ಮಾನಸಿಕ ಬೆಳವಣಿಗೆಯನ್ನು ಕಂಡು ಎಲ್ಲರೂ ಬಾಯ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು. ಆತನಿಗೆ 10-12 ವರ್ಷವಾಗಿದ್ದಾಗ ತಂದೆ ತೀರಿಕೊಂಡ. ಅವರ ದಾಯಾದಿ ಇದೇ ಸಮಯವೆಂದು ಸಾಳುವ ನರಸಿಂಹನ ಮಗ ಇಮ್ಮಡಿ ನರಸಿಂಹನ ಬಳಿ ಚಾಡಿ ಹೇಳಿ, ಕುತಂತ್ರ ಮಾಡಿ ನಾಡಗೌಡಿಕೆಯನ್ನು ತಾನು ಪಡೆದುಕೊಂಡು ಅವರನ್ನು ಬಾಡದಿಂದಲೇ ಬುಡಸಹಿತ ಕಿತ್ತೆಸೆಯಬೇಕೆಂದು ಇಲ್ಲದ ಕಿರುಕುಳ ಕೊಟ್ಟ.
ತಾಯಿ ಮಗನನ್ನು ಕರೆದುಕೊಂಡು ತನ್ನ ತೌರೂರಾದ ಕಾಗಿನೆಲೆಗೆ ಬಂದಳು. ನೆಂಟರ ಮನೆಯಲ್ಲಿ ಕನಕ ಕುರಿಗಳನ್ನು ಕಾಯುತ್ತ ಎದೆಗುಂದದೆ ಊರ ಕೆಲಸಗಳಲ್ಲಿ ಭಾಗಿಯಾಗಿ ದುಡಿಯುತ್ತ ತಾನು ಕಟ್ಟಿದ ಹಾಡುಗಳನ್ನು ಹಾಡುತ್ತಾ, ಭಜನಮಂಡಲಿಯನ್ನು ಸ್ಥಾಪಿಸಿ ಊರಿನ ಯುವಕರನ್ನೆಲ್ಲ ಅದರಲ್ಲಿ ಪಾಲುಗೊಳ್ಳುವಂತೆ ಹುರಿದುಂಬಿಸುತ್ತ, ತಾನೇ ರಚಿಸಿದ ಕೆಲವು ಬಯಲಾಟಗಳನ್ನು ಕಲಿಸಿ ಊರಲ್ಲಿ ಅಭಿನಯಿಸುತ್ತ ಎಲ್ಲರ ಕಣ್ಮಣಿಯಾದ.
ದೇವಸ್ಥಾನಗಳನ್ನು ನಿರ್ಮಿಸಿ, ಪೂಜೆ ಪುನಸ್ಕಾರ ಉತ್ಸವಗಳನ್ನು ಏರ್ಪಡಿಸಿ ಸುತ್ತಮುತ್ತಲ ಊರುಗಳ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗಿ ಜನಪ್ರಿಯತೆಯನ್ನು ಗಳಿಸಿದ. ಇದು ದಾಯಾದಿ ಎದೆಯಲ್ಲಿ ಮುಳ್ಳುರಿ ಎಬ್ಬಿಸಿತು. ಕನಕನ ಪ್ರತಿಭೆ, ಸಾಹಸ, ಸಮೂಹ ಹಿತದ ಕೆಲಸ ಕಾರ್ಯಗಳ ಕೀರ್ತಿ 1509 ರಲ್ಲಿ ಅಧಿಕಾರಕ್ಕೆ ಬಂದ ಕೃಷ್ಣದೇವರಾಯನ ಕಿವಿಗೆ ಬಿದ್ದು ಕೂಡಲೇ ಬಾಡಬಂಕಾಪುರ ಕಾಗಿನೆಲೆ ಪ್ರಾಂತ್ಯಕ್ಕೆ ದಂಡನಾಯಕನನ್ನಾಗಿ ನೇಮಿಸಿದ.
ಏಕೆಂದರೆ ವಿಜಯನಗರ ಸಾಮ್ರಾಜ್ಯ ಹಾಗೂ ಗೋವಾ ಹೆದ್ದಾರಿಯಲ್ಲಿರುವ ಬಾಡ ಬಂಕಾಪುರ ಬಹು ಸೂಕ್ಷ್ಮಪ್ರದೇಶವೆಂದು ಪರಿಗಣಿಸಿದ್ದ ಕೃಷ್ಣದೇವರಾಯ ಅದಕ್ಕೆ ಕನಕನಂಥ ಮಾಸಾಳೇ ದಂಡನಾಯಕನಾಗಿರಬೇಕೆಂದು ತೀರ್ಮಾನಿಸಿ ಕ್ರಮ ಕೈಗೊಂಡಿದ್ದ. ಇದನ್ನು ಕಂಡು ತಾಯಿ ಸಂತಸಗೊಂಡು ತನ್ನ ಮನಸ್ಸಿನ ಆಸೆಯನ್ನು ತೋಡಿಕೊಂಡಳು.
ಏಕೆಂದರೆ 14-15 ವರ್ಷಗಳ ಮಗ 20-25 ವರ್ಷಗಳ ಕಟ್ಟರೆಯದ ಕಟ್ಟಾಳುವಿನಂತೆ ಕಂಗೊಳಿಸುತ್ತಿರುವುದನ್ನು ಕಂಡು ಸುಮ್ಮನಿರಲಾಗಲಿಲ್ಲ. ಆ ಆಸೆಯೆಂದರೆ ಮಗನಿಗೆ ಮದುವೆ ಮಾಡಿ ಮೊಮ್ಮಗನನ್ನು ಕಾಣುವ ತವಕವಲ್ಲದೆ ಬೇರೆಯಲ್ಲ. ಮಗ ಒಪ್ಪಿದಾಗ ಬಂಕಾಪುರದ, ಅಲ್ಲಲ್ಲ ಶಿಗ್ಗಾವಿಯ ಶ್ರೀಮಂತ ಮನೆತನದ ಹೆಣ್ಣನ್ನು ತಂದು ಮದುವೆ ಮಾಡಿದಳು.
ಕನಕನ ದಾಯಾದಿ ‘ರಾಜ್ಯದ ಬೊಕ್ಕಸವನ್ನು ದೇವರ ಉತ್ಸವ ಮತ್ತೊಂದು ಮಗದೊಂದಕ್ಕೆ ಅಡ್ಡಾದಿಡ್ಡಿಯಾಗಿ ವ್ಯಯ ಮಾಡುತ್ತಿದ್ದಾನೆ’ ಎಂದು ಅಚ್ಯುತರಾಯನಿಗೆ ಚಾಡಿ ಹೇಳಿದ. ಆ ನಿಮಿತ್ತ ಅಚ್ಯುತರಾಯ ಕನಕನನ್ನು ದಂಡನಾಯಕ ಪದವಿಯಿಂದ ಪದಚ್ಯುತಗೊಳಿಸಿದ. ಅದೇ ಸಮಯದಲ್ಲಿ ತಾಯಿಯೂ ತೀರಿಕೊಂಡಳು.
ಕನಕ ಎದೆಗುಂದದೆ ತನ್ನ ಗರ್ಭಿಣಿ ಹೆಂಡತಿಯೊಡನೆ ಕೆಲವು ಕಾಲ ತನ್ನ ಮಾವನ ಮನೆಯಲ್ಲಿ ಉಳಿದುಕೊಂಡ. ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದಳು. ಆದರೆ ಕೆಲಕಾಲದ ಅನಂತರ ಮಾವನ ಮನೆಯವರ ಚಿಟುಕುಮುಳ್ಳಾಡಿಸುವ ಚುಚ್ಚು ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ಹೆಂಡತಿಯೊಡನೆ ಕಾಗಿನೆಲೆಗೆ ಬಂದು ಆದಿಕೇಶವನ ದೇವಸ್ಥಾನದಲ್ಲೇ ಉಳಿದ.
‘ನಮಗೆಲ್ಲಿ ಮನೆಗಳಯ್ಯಾ ನಾರಾಯಣ’ ಎಂಬ ಕೀರ್ತನೆಯಲ್ಲಿ ಬರುವ ‘ನಿಮ್ಮ ಗುಡಿಯಲಿಪ್ಪೆನು’ ಎಂಬ ಮಾತು ಸಾಕ್ಷಿ ಅಥವಾ ‘ಮಾವನ ಮನೆಯಲ್ಲಿ ಇರಬಹುದೆ ಕೋವಿದರು’ ಎಂಬ ಕೀರ್ತನೆಯಲ್ಲಿ ಬರುವ ‘ ಗೋಪಾಳಬುಟ್ಟಿ ಲೇಸು’ ಎಂಬ ಮಾತು ಇದಕ್ಕೆ ಪುಷ್ಟಿ ನೀಡುತ್ತದೆ.

ಕನಕದಾಸರು ಉಡುಪಿಯ ಕೃಷ್ಣದರ್ಶನಕ್ಕೆ ಬಂದಾಗ ಪೂರ್ವದ ಮುಖ್ಯದ್ವಾರದಿಂದ ದರ್ಶನ ದೊರೆಯಲಿಲ್ಲ. ಆಗ ಪೂರ್ವಾಭಿಮುಖವಾಗಿದ್ದ ಶ್ರೀಕೃಷ್ಣ ಕನಕದಾಸರ ಭಕ್ತಿಯ ದೃಢತೆಗೆ ಮೆಚ್ಚಿ ಪಶ್ಚಿಮಾಭಿಮುಖವಾಗಿ ತಿರುಗಿ, ಗೋಡೆಯಲ್ಲಿ ಬಿರುಕು ಮಾಡಿ ಕನಕದಾಸರಿಗೆ ದರ್ಶನ ನೀಡಿದ. ಅದು ‘ಕನಕನ ಕಿಂಡಿ’ ಎಂದು ಇಂದಿಗೂ ಪ್ರಸಿದ್ಧವಾಗಿದೆ.
ಕನಕದಾಸರು ಸಂಗೀತದ ಒಳಹೊರಗನ್ನು ಬಲ್ಲವರು; ಸಂಗೀತದ ತುಡಿತವನ್ನು ತಮ್ಮ ನಾಡಿಮಿಡಿತವನ್ನಾಗಿ ಮಾಡಿಕೊಂಡಿದ್ದವರು. ಸಾಹಿತ್ಯ ಸಂಗೀತಗಳ ಗುಂಗಿನಿಂದ ಜನ ಸಮೂಹದ ಮನಸ್ಸನ್ನು ಸೆರೆ ಹಿಡಿದವರು: ಭಕ್ತಿಯ ಹೊಳೆಯಲ್ಲಿ ಮೀಯುವಂತೆ ಪ್ರೇರೇಪಿಸಿದವರು; ಆತ್ಮ ವಿಶ್ವಾಸವನ್ನು ಮೂಡಿಸಿದವರು.
ಕನಕದಾಸರು ಕೇವಲ ಕೀರ್ತನಕಾರರಲ್ಲ, ಕವಿಯೂ ಹೌದು; ಕೇವಲ ಕವಿಯಲ್ಲ, ಕಲಿಯೂ ಹೌದು. ಈ ಕಲಿ, ಕವಿ, ಕೀರ್ತನಕಾರ ಕನಕದಾಸರು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆಯನ್ನು ಕೊಟ್ಟಿರುವುದು ಎಲ್ಲರಿಗೂ ತಿಳಿದ ವಿಚಾರ.
ಕನಕದಾಸರ ‘ಹರಿಭಕ್ತಿಸಾರ’ ಎಂಬ ಕೃತಿ ಆಧ್ಯಾತ್ಮ ಸಾಧನೆಯ, ದೈವಭಕ್ತಿ ಬೋಧನೆಯ ಸುಭಗಸುಂದರ ಶೈಲಿಯ ಚಿಕ್ಕ ಹಾಗೂ ಚೊಕ್ಕ ಕೃತಿ, ಪಂಡಿತ ಪಾಮರರ ಹೃದಯವನ್ನು ಆರ್ದ್ರಗೊಳಿಸುವ, ಭಗವದ್ ಭಕ್ತಿ ಅಂಕುರವಾಗುವಂತೆ ಮಾಡುವ ಕೃತಿ. ಶಾಶ್ವತವಾದ ದೇವಾಧಿ ದೇವನ ಗುಣಗಾನ, ಅಶಾಶ್ವತವಾದ ದೇಹದ ಅವಸಾನ, ಇರುವಷ್ಟು ಕಾಲದಲ್ಲಿ ತಾನು ಏರಬೇಕಾದ ಅನುಭಾವದ ಸೋಪಾನಗಳನ್ನು ತುಂಬಿದ ತೊರೆಯಂತೆ ಗಂಭೀರವಾಗಿ ಹೇಳಿರುವ ರೀತಿ ಚಿತ್ತಾಕರ್ಷಕ
ದೀನ ನಾನು ಸಮಸ್ತಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ನರ ಸುಜ್ಞಾನ ಮೂರುತಿ ನೀನು
ನಿನ್ನ ಸಮಾನರುಂಟೇ ದೇವ ರಕ್ಷಿಸು ನಮ್ಮನನವರತ ||
ಎಂಬ ಪದ್ಯವನ್ನು ಒಮ್ಮೆ ಓದಿದವರು ಮತ್ತೆ ಮತ್ತೆ ಮನಸ್ಸಿನಲ್ಲಿ ನೆನೆಸಿಕೊಂಡು ಗುನುಗುನಿಸದಿರರು.
ಅವರ ‘ನಳಚರಿತ್ರೆ’ ಎಂಬ ಕೃತಿ ಸರಳವಾಗಿ, ಬಿಟ್ಟ ಬಾಣದಂತೆ ನೇರವಾಗಿ ಪರಸ್ಪರ ನಿಷ್ಕಲ್ಮಷ ಪ್ರೇಮದ ಗುರಿಯತ್ತ ಸಾಗುವ, ಪರಸ್ಪರ ಪ್ರೇಮದಲ್ಲಿಯೇ ಸುಖಶಾಂತಿಯಿದೆ ಎಂದು ಸಾರುವ ಉತ್ತಮ ಕಾವ್ಯ.
ಇನ್ನು ಅವರ ‘ ರಾಮಧಾನ್ಯ ಚರಿತ್ರೆ’ ಭರತಖಂಡದ ವರ್ಗವರ್ಣ ವ್ಯವಸ್ಥೆಯ ವಿರುದ್ಧ ಖಡ್ಗ ಝಳಪಿಸುವ, ಮೇಲು ಕೀಳು ಜಾತಿ ವ್ಯವಸ್ಥೆಯ ಪೊಳ್ಳುತನವನ್ನು ಬಯಲು ಮಾಡುವ, ಧರಾಮರರು ಧರಾಧಮರಾಗಿ ವರ್ತಿಸದೆ ಶೂದ್ರರೊಡನೆ ಕೂಡಿ ಬಾಳಬೇಕೆಂಬ ರಾಮಸಂದೇಶವನ್ನು ಹೊತ್ತ ಅಣಕು ಮಹಾಕಾವ್ಯ ಎಂದರೆ ತಪ್ಪಾಗದು.
‘ಮೋಹನ ತರ೦ಗಿಣಿ’ – ಕೃಷ್ಣ- ರುಕ್ಮಿಣಿಯರ, ರತಿ- ಮನ್ಮಥರ, ಉಷಾ- ಅನಿರುದ್ಧರ ಪ್ರೇಮಕಥೆಯ ಮೂಲಕ, ಪರಸ್ಪರ ಪ್ರೇಮ ವಿಶ್ವಾಸಗಳಲ್ಲೇ ಮನುಷ್ಯ ಸಮಾಜದ ಸುಖಶಾಂತಿ ಇರುವುದು ಎಂದು ರುಜುವಾತುಪಡಿಸುವ ಹಾಗೂ ಹರಿಹರ ಹಗರಣಕ್ಕೆ ಪರದೆ ಎಳೆಯುವಂತೆ ಹರಿಹರ ಮೈತ್ರಿಯನ್ನು ಸಾದರಪಡಿಸುವ ಮಹಾತ್ವಾಕಾಂಕ್ಷೆಯ ಕೃತಿ.
ಶಿವನ ಭಕ್ತನಾದ ಬಾಣಾಸುರನ ಮಗಳು ಉಷೆಗೂ, ಕೃಷ್ಣನ ಮೊಮ್ಮಗನಾದ ಅನಿರುದ್ಧನಿಗೂ ವಿವಾಹವಾಗುವುದು ಹರಿಹರ ಮೈತ್ರಿಯನ್ನು ಸಾಂಕೇತಿಕವಾಗಿ ಸೂಚಿಸುವ ವಿಧಾನವಷ್ಟೆ. ಅದು ಕೃಷ್ಣನನ್ನು ಕೃಷ್ಣದೇವರಾಯನೊಡನೆ ಸಮೀಕರಿಸಿ ವಿಜಯನಗರ ಸಾಮ್ರಾಜ್ಯದ ಜನಜೀವನದ ದಿಗ್ದರ್ಶನ ನೀಡಿದೆ.
ಕನಕದಾಸರು ಯಾವುದೇ ಒಂದು ಮತಕ್ಕೆ ಕಟ್ಟುಬಿದ್ದವರಲ್ಲ. ಎಲ್ಲ ಮತಧರ್ಮಗಳ ಒಳಿತನ್ನು ಸ್ವೀಕರಿಸಿ ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಾಳಿದವರು; ಉಳಿದವರಿಗೂ ಹಾಗೆ ಬಾಳುವಂತೆ ಹೇಳಿದವರು. ಜನಹಿತ, ಅದರಲ್ಲೂ ನತಜನಹಿತದ ಬಗ್ಗೆ ಬಾಳಿನುದ್ದಕ್ಕೂ ಜೀವ ತೇದವರು.
ತಮ್ಮ ವಿಚಾರಧಾರೆಯ ಸನ್ನೆಗೋಲಿನಿಂದ ಸುಲಿಗೆಗೊಳಗಾದ ಶೋಷಿತರನ್ನು ಮೇಲೆತ್ತಲು ಪ್ರಯತ್ನಿಸಿದಂತೆಯೇ ಸುಲಿಗೆ ಮಾಡುವ ಶೋಷಕರಿಗೆ ಶಂಕರ ರಾಮಾನುಜ ಮಧ್ವ ಧರ್ಮಗಳಿಗಿಂತ ಮಾನವಧರ್ಮ ದೊಡ್ಡದು ಎಂದು ಹೇಳಿ, ಅವರ ಕಣ್ಣಮೇಲಿನ ಪೊರೆ ತೆಗೆಯಲು ಶಸ್ತ್ರಚಿಕಿತ್ಸೆಗೆ ಕೈ ಹಾಕಿದವರು. ಅದಕ್ಕೆ ಅವರ ರಾಮಧಾನ್ಯ ಚರಿತ್ರೆ ಕೀರ್ತನೆಗಳು ಸಾಕ್ಷ್ಯ ಒದಗಿಸುತ್ತವೆ.
‘ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಎಂಬುದೇ ಕನಕದಾಸರ ನಿಲುವು. ತಾರತಮ್ಯ, ಭೇದಭಾವ ಮಾನವತೆಗೆ ಮಾರಕ ಎಂಬುದು ಅವರ ಬಾಳಿನ ಮಂತ್ರ. ಸಮಾಜದಲ್ಲಿ ಬೇರು ಬಿಟ್ಟಿರುವ ಮೇಲು-ಕೀಳು, ಬಡವ-ಬಲ್ಲಿದ ಎಂಬ ವರ್ಗವರ್ಣ ತಾರತಮ್ಯ ಹೋಗಬೇಕು ಎಂಬುದೇ ಅವರ ಹೋರಾಟದ ಗುರಿ.

ಅವರ ರಾಮಧಾನ್ಯ ಚರಿತ್ರೆ ಆ ನಿಲುವನ್ನೇ ಪ್ರತಿಪಾದಿಸುತ್ತದೆ. ”ಕುಲಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ” ”ಹೊಲೆಯ ಹೊರಗಿಹನೆ ಊರೊಳಗಿಲ್ಲವೆ” ಮೊದಲಾದ ಕೀರ್ತನೆಗಳಲ್ಲೂ ಆ ನಿಲುವನ್ನು ಕಾಣುತ್ತೇವೆ.
“ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಕೀರ್ತನೆಯಲ್ಲಿ ಯಾವ ವೃತ್ತಿಯನ್ನು ಮೇಲು ಅಥವಾ ಕೀಳು ಎಂದು ತಾರತಮ್ಯದಿಂದ ಕಾಣುವುದಿಲ್ಲ. ಮೇಲು ವೃತ್ತಿಗೆ ಕೊಟ್ಟಷ್ಟೇ ಪ್ರಾಧಾನ್ಯವನ್ನು ಕೀಳು ವೃತ್ತಿಗೆ ಕೊಟ್ಟು ಗೌರವದಿಂದ ಕಾಣುತ್ತಾರೆ.
“ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ’ ಎಂಬ ಕೀರ್ತನೆಯ ಮೂಲಕ ಸತ್ಯವಂತರ ಸಂಘ ತೀರ್ಥಕ್ಕೆ, ತೀರ್ಥಯಾತ್ರೆಗೆ ಸಮಾನ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಾರೆ. ಇದರಲ್ಲಿ ಬಂದಿರುವ ಒಂದೊಂದು ಮಾತೂ ಕೂಡ ಅಪಾರ ಲೋಕಾನುಭವದಿಂದ, ಮಾಗಿದ ಜೀವನಾನುಭವದಿಂದ ಮೂಡಿದ ಆಣಿ ಮುತ್ತುಗಳು ಎನ್ನಬಹುದು.
ಐಶ್ವರ್ಯ ಒಂದು ಕಡೆ ಶೇಖರಣೆಯಾಗದೆ ವಿತರಣೆಯಾಗಬೇಕು ಎಂಬ ಆಶಯದ “ತಾನು ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆ’ ಎಂಬ ಮಾತಾಗಲೀ, ‘ದೇಹಕ್ಕಿಂತ ಪ್ರಾಣ ದೊಡ್ಡದು, ಏಕೆಂದರೆ ಪ್ರಾಣ ಹೋದ ಮೇಲೆ ದೇಹವಿದ್ದೂ ವ್ಯರ್ಥ’ ; ಪ್ರಾಣಕ್ಕಿಂತ ಮಾನ ದೊಡ್ಡದು, ಏಕೆಂದರೆ ಮಾನ ಹೋದ ಮೇಲೆ ಪ್ರಾಣ ಇದ್ದೂ ವ್ಯರ್ಥ’ ಎಂಬ ಆಶಯದ ‘ಮಾನಹೀನನಾಗಿ ಬಾಳ್ವ ಮನುಜನ್ಯಾತಕೆ’ ಎಂಬ ಮಾತಾಗಲೀ,
ಮನಸೋತ ಹೆಣ್ಣಿನೊಡನೆ ಪ್ರೀತಿಯಿಂದ ನಡೆದುಕೊಳ್ಳುವುದು ಪುರುಷನ ಧರ್ಮ ಎಂಬ ಆಶಯದ ‘ಸೋತ ಹೆಣ್ಣಿಗೆ ಓತು ನಡೆಯದ ಪುರುಷನ್ಯಾತಕೆʼ ಎಂಬ ಮಾತಾಗಲೀ, ಪ್ರೀತಿಯಿರದ ಅಮೃತವೂ ವಿಷಕ್ಕೆ ಸಮಾನ ಎಂಬ ಆಶಯದ ‘ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆ’ ಎಂಬ ಮಾತಾಗಲೀ ಸಮಾಜದಲ್ಲಿ ಉತ್ತಮ ಸಂಸ್ಕೃತಿಯ ಬೀಜವನ್ನು ಬಿತ್ತುವ, ಸಾಂಸ್ಕೃತಿಕ ಬದುಕನ್ನು ರೂಢಿಸುವ ನಿಟ್ಟಿನಲ್ಲಿ ಸನ್ನೆಗೋಲಾಗಿ ಕೆಲಸ ಮಾಡುವಂಥವು; ಆಮಿಷಕ್ಕೊಳಗಾದ, ಸಣ್ಣತನಕ್ಕೀಡಾದ ಜನರನ್ನು ಮತ್ತೆ ಸಂಸ್ಕೃತಿಯ ಹಳಿಯತ್ತ ಸೆಳೆಯುವ ಚುಂಬಕ ಶಕ್ತಿಯುಳ್ಳಂಥವು.
ಕನಕದಾಸರು ಸ್ವಾರ್ಥಕ್ಕಿಂತ ಪರಹಿತಾರ್ಥಕ್ಕೆ ಒತ್ತು ಕೊಟ್ಟವರು. ಆದ್ದರಿಂದಲೇ ‘ಸಜ್ಜನರ ಸಂಗದೊಳಗಿರಿಸೆನ್ನ ರಂಗ’ ಎಂಬ ಕೀರ್ತನೆಯಲ್ಲಿ ಪರಹಿತಾರ್ಥದ ಧರ್ಮವರಿಯದವನ ಸಂಗ ಬಲು ಭಂಗ’ ಎಂದು ಹೇಳುತ್ತಾರೆ. ತನ್ನ ಹಿತದಂತೆಯೇ ಅನ್ಯರ ಹಿತಕ್ಕಾಗಿ ದುಡಿಯದಿದ್ದರೆ ಸಮಾಜದಲ್ಲಿ ಅಸಮಾಧಾನ ಧಗಧಗಿಸುತ್ತದೆ ಎಂದು ಸ್ವಾರ್ಥಿಗಳನ್ನು ಎಚ್ಚರಿಸಿದ್ದಾರೆ.
ಅಷ್ಟೇ ಅಲ್ಲ ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು’ ಎಂದು ಹೇಳುವುದರ ಮುಖಾಂತರ ಕಲುಷಿತ ಮನಸ್ಸಿನ ಜನರಿಂದ ಸಮಾಜದ ಗತಿ ಏನಾಗುತ್ತದೆ ಎಂಬುದರತ್ತ ಗಮನ ಸೆಳೆದಿದ್ದಾರೆ.
ಕನಕದಾಸರು ಕರ್ಮಠರ ಕಂದಾಚಾರಗಳನ್ನು ಅರ್ಥವಿಲ್ಲದ ಆಚರಣೆಗಳನ್ನು ತಮ್ಮ ನಿರ್ಭೀತ ವಿಚಾರಧಾರೆಯಿಂದ ಖಂಡಿಸಿದ ಹಾಗೆ ಬೇರೆ ಯಾವ ದಾಸರೂ ಇಷ್ಟು ಪ್ರಖರ ರೀತಿಯಲ್ಲಿ ಖಂಡಿಸಿಲ್ಲ. ಸನಾತನ ಭದ್ರಕೋಟೆಯ ಭೇದವಾದಿಗಳಿಗೆ ತಮ್ಮ ವಿಚಾರಧಾರೆಯ ಜಾಪಾಳ ಮಾತ್ರೆಯಿಂದ ಸುಸ್ತು ಮಾಡಿದವರು.
ಇವರು ಗಯಾಕ್ಷೇತ್ರಕ್ಕೆ ಹೋಗಿದ್ದಾಗ, ಅಲ್ಲಿ ಸತ್ತವರಿಗೆ ಪಿಂಡ ಹಾಕುವುದನ್ನು ನೋಡಿ ಕಟ್ಟಿದ ಕೀರ್ತನೆ ‘ಆವ ಕರ್ಮವೋ ಇದು ಆವ ಧರ್ಮವೋ’ ಎಂಬುದರಲ್ಲಿ “ಎಳ್ಳು ಮೀನು ನುಂಗಿ ಹೋಯಿತು, ದರ್ಭೆ ನೀರೊಳು ಹರಿದು ಹೋಯಿತು” ಎಂದು ಲೇವಡಿ ಮಾಡಿರುವುದೇ ಅಲ್ಲದೆ ‘ಹೇಳುವವನು ಅವಿವೇಕಿ, ಕೇಳುವವನು ಅಜ್ಞಾನಿ, ಹೇಳುವ ಕೇಳುವ ಇಬ್ಬರ ಸೊಲ್ಲನಮ್ಮ ಆದಿಕೇಶವ ಬಲ್ಲ’ ಎಂದು ಹೇಳುವಲ್ಲಿ ಕನಕದಾಸರ ನಿಶಿತಮತಿ, ನಿರ್ಭೀತ ಪ್ರವೃತ್ತಿ ಎದ್ದು ಕಾಣುತ್ತದೆ.
‘ಪುತ್ರನಿಲ್ಲದೆ ಪರಗತಿಯಿಲ್ಲ’ (ಅಪುತ್ರಸ್ಯ ಗತಿರ್ನಾಸ್ತಿ) ಎಂಬ ಸಾಂಪ್ರದಾಯಿಕ ಸನಾತನ ನಂಬಿಕೆಯನ್ನು ಮೊದಲ ಬಾರಿಗೆ ಪ್ರಶ್ನಿಸಿ ಅದರಲ್ಲಿ ಹುರುಳಿಲ್ಲ ಎಂಬುದನ್ನು ಕನಕದಾಸರು “ಮಗನಿಂದ ಗತಿಯುಂಟೆ ಜಗದೊಳಗೆ! ನಿಗಮಾರ್ಥ ತತ್ತ್ವ ವಿಚಾರದಿಂದಲ್ಲದೆ” ಎಂಬ ಕೀರ್ತನೆಯಲ್ಲಿ ಮಂಥನ ಮಾಡಿದ್ದಾರೆ.
ಕನಕದಾಸರ ಬಹುತೇಕ ಕೀರ್ತನೆಗಳು, ಜಾನಪದ ಸೊಗಡಿನ ಹೊಳೆಯಲ್ಲಿ ಮಿಂದು, ಮಿರಿಮಿರಿ ಮಿಂಚುತ್ತಾ, ಸಹೃದಯರ ಮನಸ್ಸನ್ನು ಸೆರೆಹಿಡಿಯುತ್ತವೆ. ಉದಾಹರಣೆಗೆ ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಡೊಂಕುಬಾಲದ ನಾಯಕರೆ, ನಾವು ಕುರುಬರು, ದೇವಿ ನಮ್ಮ ದ್ಯಾವರು ಬಂದರು ಬನ್ನಿರೆ ಮೊದಲಾದ ಕೀರ್ತನೆಗಳನ್ನು ನೋಡಬಹುದು.
ಸಮಾಜದಲ್ಲಿ ಮೇಲು ಕೀಳು ಎಂಬುದು ಇಲ್ಲದಂತಾಗಿ ಸರ್ವ ಸಮಾನತೆ ಬರಬೇಕು ಎಂಬ ತುಡಿತ ಕನಕದಾಸರಿಗೆ ತುಂಬ ಇದೆ ಎಂಬುದು ಅವರ ಕೃತಿಗಳ ಮುಖೇನ ಮನದಟ್ಟಾಗುತ್ತದೆ. ಎಲ್ಲ ಮಹಾಪುರುಷರೂ ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಕನಕದಾಸರು ಅಂಥ ಮಹಾತ್ಮರಲ್ಲಿ ಒಬ್ಬರು.
– ಆಧಾರ: ಸಮಗ್ರ ದಾಸ ಸಾಹಿತ್ಯ, ಸಂಪುಟ-5, ಭಾಗ-2






Leave a Reply