– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಶ್ಯಮಂತಕ
ಕಂಸನ ಮರಣದಿಂದ ಆತನ ಪತ್ನಿಯರಾದ ಅಶ್ತಿ ಮತ್ತು ಪ್ರಾಪ್ತಿ ವಿಧವೆಯರಾದರು. ವೇದಗಳ ಪ್ರಕಾರ, ಮಹಿಳೆಯನ್ನು ಬಾಲ್ಯದಲ್ಲಿ ತಂದೆಯೂ ವಿವಾಹಾನಂತರ ಪತಿಯೂ, ವೃದ್ಧಾಪ್ಯದಲ್ಲಿ ಅಥವಾ ವೈಧವ್ಯದಲ್ಲಿ ಆಕೆಯ ಮಕ್ಕಳೂ ರಕ್ಷಿಸಬೇಕೆಂಬುದು ನಿಯಮ.

ಆದರೆ ಕಂಸನ ಮಕ್ಕಳು ತೀರಾ ಸಣ್ಣವರಾಗಿದ್ದರಿಂದ ಕಂಸನ ಇಬ್ಬರು ಪತ್ನಿಯರೂ ತಮ್ಮ ತಂದೆಯಾದ ಜರಾಸಂಧ ಮಹಾರಾಜನ ಬಳಿಗೆ ಹಿಂದಿರುಗಿದರು. ತಂದೆಯ ಮನೆಯನ್ನು ತಲಪಿ ಇಬ್ಬರು ರಾಣಿಯರು ಕಂಸನ ಸಾವಿನ ಅನಂತರ ತಮ್ಮ ಕ್ಲೇಶಕರ ಸ್ಥಿತಿಯನ್ನು ಹೇಳಿಕೊಂಡರು.
ಮಗಧದ ರಾಜನಾದ ಜರಾಸಂಧನು ತನ್ನ ಇಬ್ಬರು ಹೆಣ್ಣುಮಕ್ಕಳ ಸ್ಥಿತಿಯನ್ನು ಕ೦ಡು ಆಕ್ರೋಶಿತನಾಗಿ, ಕ೦ಸನ ಸಾವಿಗೆ ಕಾರಣನಾದ ಕೃಷ್ಣನ ಸಮೇತ ಯದು ಕುಟು೦ಬದ ಪ್ರತಿಯೊಬ್ಬರನ್ನೂ ಕೊಲ್ಲುವುದಾಗಿ ಪಣ ತೊಟ್ಟನು.
ಈ ಸಮರಕ್ಕಾಗಿ ಜರಾಸಂಧನು 13 ಅಕ್ಷೋಹಿಣಿ ಸೇನೆಯನ್ನು ಸಿದ್ಧಪಡಿಸಿದನು. ಪ್ರತಿಯೊಂದು ಅಕ್ಷೋಹಿಣಿಯಲ್ಲಿ 21870 ರಥಗಳು, 21870 ಆನೆಗಳು, 109650 ಸೈನಿಕರು ಹಾಗೂ 65600 ರಾವುತರಿದ್ದರು. ಈ ತನ್ನ ಅಗಾಧ ಸೈನ್ಯದಿಂದ ಕೃಷ್ಣನ ರಾಜಧಾನಿಯಾದ ಮಥುರೆಯನ್ನು ದ್ವೀಪವು ಸಮುದ್ರದಿಂದ ಆವೃತಗೊಂಡಂತೆ ಎಲ್ಲ ದಿಕ್ಕುಗಳಿಂದಲೂ ಮುತ್ತಿಗೆ ಹಾಕಿದನು.
ತನ್ನ ರಾಜಧಾನಿಯಾದ ಮಥುರಾ ನಿವಾಸಿಗಳು, ಈ ಮುತ್ತಿಗೆಯಿಂದ ಭಯಭೀತರಾದುದನ್ನು ಕಂಡ ಕೃಷ್ಣ ಅವರಿಗೆ ಅಭಯವನ್ನಿತ್ತನು. ಜರಾಸಂಧನ ಸೈನ್ಯ ಶಕ್ತಿಯು ಅವನ ಮುಂದಿತ್ತು. ಜರಾಸಂಧನ ಯೋಧರು ಹಿಂದಕ್ಕೆ ಹೋಗಿ ತಮ್ಮ ಸೈನ್ಯ ಬಲವನ್ನು ಪುನರ್ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶವಾಗದಂತೆ ಜರಾಸಂಧನ ಇಡೀ ಸೈನ್ಯವನ್ನು ಕೊಂದುಹಾಕಲು ಅವನು ನಿರ್ಧರಿಸಿದನು.
ತನ್ನ ಸಹೋದರ ಬಲರಾಮನೊಂದಿಗೆ ಯುದ್ಧಕ್ಕೆ ಸಿದ್ಧನಾದನು. ಆಗ ಆಕಾಶದಿಂದ ಸಾರಥಿ ಹಾಗೂ ಶಸ್ತ್ರಾಸ್ತ್ರಗಳನ್ನೊಳಗೊಂಡ ಎರಡು ಸುಂದರ ರಥಗಳು ಪ್ರತ್ಯಕ್ಷವಾದವು. ಎರಡೂ ರಥಗಳಲ್ಲಿ ಗರುಡ ಹಾಗೂ ತಾಳೆ ಮರಗಳ ಚಿತ್ರಗಳಿಂದ ಕೆತ್ತಲಾಗಿತ್ತು.
ತಮ್ಮ ಪುಟ್ಟ ಸೈನ್ಯವು ಹಿಂಬಾಲಿಸುತ್ತಿರಲು ಕೃಷ್ಣ ಹಾಗೂ ಬಲರಾಮರು ಶಸ್ತ್ರಾಸ್ತ್ರಗಳಿಂದ ಸುಸಜ್ಜಿತರಾಗಿ ಕೋಟೆಯ ಹೆಬ್ಬಾಗಿಲನ್ನು ತೆರೆದು ತಮ್ಮ ತಮ್ಮ ಶಂಖವನ್ನು ಊದಿ, ಶತ್ರು ಸೈನ್ಯದತ್ತ ಮುನ್ನುಗ್ಗಿದರು. ಎದುರು ಪಕ್ಷಕ್ಕೆ ಇದಕ್ಕಿಂತ ಹೆಚ್ಚಿನ ಸೈನ್ಯಶಕ್ತಿ ಇದ್ದರೂ ಕೃಷ್ಣನ ಶಂಖದ ಧ್ವನಿಯನ್ನು ಕೇಳುತ್ತಲೇ ಅವರ ಹೃದಯಗಳು ನಡುಗಿದವು.

ಕೃಷ್ಣ ಬಲರಾಮರಿಬ್ಬರೂ ಜರಾಸಂಧನೆದುರು ನಿಂತಾಗ ಮೊಮ್ಮಕ್ಕಳ ಕರುಳ ಸಂಬಂಧ ಜರಾಸಂಧನನ್ನು ಎಳೆಯಿತಾದರೂ ಸೇಡಿನ ಕಿಚ್ಚಿನಿಂದ ಕೃಷ್ಣನನ್ನು “ಕೀಳು ಮಾನವನೆಂದು” ಜರೆದ. ಬಾಲಕರಿಬ್ಬರ ಮುಂದೆ ತನ್ನ ಪರಾಕ್ರಮ ತೋರುವುದು ತನಗೆ ತಕ್ಕುದಲ್ಲವೆಂದು ಇಬ್ಬರನ್ನೂ ಹೀಯಾಳಿಸಿದ.
ಅದರಲ್ಲೂ ವೈಶ್ಯನಾದ ಮಹಾರಾಜ ನ೦ದನಿಂದ ಬೆಳೆಸಲ್ಪಟ್ಟ ಕೃಷ್ಣನು ಕ್ಷತ್ರಿಯನಾಗಿಲ್ಲದಿರುವುದ ರಿ೦ದ ಯುದ್ಧ ಮಾಡಲು ಯೋಗ್ಯತೆಯಿಲ್ಲದವನು ಎಂದು ಮೂದಲಿಸಿದ. ಅನಂತರ ಬಲರಾಮನತ್ತ ತಿರುಗಿ ನಿನಗೆ ಸಾಯಲು ಇಷ್ಟವಿದ್ದರೆ ಅವನಿಗೆ ಜೊತೆಯಾಗಿರು. ನನ್ನ ಬಾಣಗಳಿಂದ ನಿನ್ನನ್ನೂ ಸ್ವರ್ಗಕ್ಕೆ ಕಳುಹಿಸುವೆ ಎಂದ.
ಭಗವದ್ಗೀತೆಯ ಪ್ರಕಾರ ಕ್ಷತ್ರಿಯನಾದವನಿಗೆ ಕದನದಲ್ಲಿ ಭಾಗವಹಿಸುವುದರಿಂದ ಎರಡು ಬಗೆಯ ಲಾಭವಿರುತ್ತದೆ. ಒಂದು ಕದನದಲ್ಲಿ ಜಯಶಾಲಿಯಾದರೆ, ಗೆಲುವನ್ನು ಪಡೆಯುತ್ತಾನೆ, ಎರಡು ಕದನದಲ್ಲಿ ವೀರಮರಣ ಹೊಂದಿದಲ್ಲಿ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾನೆ. ಈ ರೀತಿಯಲ್ಲಿ ಜರಾಸಂಧನು ತನ್ನ ಮೊಮ್ಮಕ್ಕಳತ್ತ ವಾಗ್ಬಾಣ ಎಸೆದು ಅವರ ಪ್ರತಿಕ್ರಿಯೆಗೆ ಕಾದನು.
ಆಗ ಶ್ರೀಕೃಷ್ಣ ಪರಮಾತ್ಮನು ಹೀಗೆ ಉತ್ತರಿಸುತ್ತಾನೆ: ”ಆದರಣೀಯ ಮಹಾರಾಜ, ವೀರರು ಎ೦ದೂ ಬರೇ ಮಾತನಾಡುವುದಿಲ್ಲ. ಕಾರ್ಯವನ್ನು ಸಾಧಿಸಿ ತೋರುತ್ತಾರೆ. ನಿನ್ನ ಉತ್ಪ್ರೇಕ್ಷೆಯನ್ನು ಕಂಡರೆ ನಿನಗೆ ಮರಣ ಸನ್ನಿಹಿತವಾಗಿರುವುದು ಕಾಣುತ್ತದೆ. ಇನ್ನು ನಿನ್ನ ಮಾತುಗಳನ್ನು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಕಾರಣ, ಸಾಯಲಿರುವ ನಿನ್ನ ಮಾತುಗಳು ಯಾವ ಪ್ರಯೋಜನಕ್ಕೂ ಬರುವುದಿಲ್ಲ.”
ಪ್ರಕಾಶಿಸುವ ಸೂರ್ಯನ ಸುತ್ತಲೂ ಮೋಡವು ಆವರಿಸಿದಂತೆ ಪರಮಾತ್ಮ ಶ್ರೀಕೃಷ್ಣನ ಸುತ್ತಲೂ ಜರಾಸಂಧನ ಸೇನೆಯು ಮುತ್ತಿಕೊಂಡಿತು.
ಈ ಭೀಕರ ಕದನವನ್ನು ವೀಕ್ಷಿಸಲು ಮಥುರೆಯ ಮಹಿಳೆಯರು ಎತ್ತರವಾದ ಗೋಪುರಗಳಲ್ಲಿ ನಿಂತಿದ್ದರು. ಸೇನೆ ಸುತ್ತುವರಿದು ಶ್ರೀಕೃಷ್ಣ ಕಾಣದಾದಾಗ ಅನೇಕರು ಭಯಭೀತರಾಗಿ ಪ್ರಜ್ಞಾಶೂನ್ಯರಾದರು. ಶತ್ರು ಸೇನೆಯು ತನ್ನ ಸಣ್ಣ ಸೇನೆಯನ್ನು ಮುತ್ತಿಕೊಂಡು ಸೈನಿಕರಿಗೆ ಉಪದ್ರವವನ್ನು ಕೊಡುವುದು ಕಂಡಾಗ ಶ್ರೀಕೃಷ್ಣ ಪರಮಾತ್ಮನು ತನ್ನ ‘ಸಾರಾಂಗ’ ಎಂಬ ಬಿಲ್ಲನ್ನು ಕೈಗೆತ್ತಿಕೊಂಡು ಬತ್ತಳಿಕೆಯಿಂದ ಬಾಣಗಳನ್ನೆಳೆದು ಬಿಲ್ಲಿಗೆ ಹೂಡಿ ಶತ್ರು ಪಾಳೆಯದತ್ತ ಪ್ರಯೋಗಿಸಿದಾಗ ಶತ್ರು ಸೇನೆಯಲ್ಲಿ ಕೋಲಾಹಲ ಉಂಟಾಯಿತು.

ಪುಂಖಾನುಪುಂಖವಾಗಿ ಬರುತ್ತಿದ್ದ ಕೃಷ್ಣನ ಬಾಣಗಳು ಜರಾಸಂಧನ ಸೈನ್ಯವನ್ನು ನಾಶಗೊಳಿಸುತ್ತಿದ್ದ ದೃಶ್ಯವು ಧಗಧಗಿಸುವ ಉರಿಯ ಮಾರುತದಂತೆ ಕಾಣುತ್ತಿತ್ತು. ಕೃಷ್ಣನ ಬಾಣಗಳು ಎಷ್ಟು ನಿಖರವಾಗಿದ್ದವೆಂದರೆ ಕೆಲವೇ ಕ್ಷಣಗಳಲ್ಲಿ ಶತ್ರುಗಳ ಅಪಾರ ಸೇನೆ ಧ್ವಂಸವಾಗಿ, ಆನೆ ಕುದುರೆಗಳು ಮರಣವನ್ನಪ್ಪಿ ರಕ್ತದ ಹೊಳೆ ಹರಿಯತೊಡಗಿತು.
ಆ ರಕ್ತದ ಹೊಳೆಯಲ್ಲಿ ಕತ್ತರಿಸಲ್ಪಟ್ಟ ಆನೆ ಕುದುರೆಗಳ ತಲೆಗಳೂ ಬುಡ ಮೇಲಾದ ರಥಗಳೂ, ಸೈನಿಕರ ಮೃತ ದೇಹಗಳೂ ಅಸಂಖ್ಯಾತವಾಗಿ ಕಾಣತೊಡಗಿದವು. ಸೈನಿಕರ ಕತ್ತರಿಸಲ್ಪಟ್ಟ ಕೈಗಳು ಹಾವಿನಂತೆಯೂ, ಕತ್ತರಿಸಲ್ಪಟ್ಟ ತಲೆಗಳು ಆಮೆಗಳಂತೆಯೂ ಕಂಡು ಬಂದರೆ, ದೇಹದಿಂದ ಬೇರೆಯಾದ ಆನೆಗಳ ತಲೆಗಳು ದ್ವೀಪಗಳಂತೆಯೂ, ಕುದುರೆಗಳ ತಲೆಗಳು ತಿಮಿಂಗಿಲಗಳಂತೆಯೂ ಕಂಡು ಬಂದವು.
ಪರಮ ಸಂಕಲ್ಪದ ವ್ಯವಸ್ಥೆಯಿಂದ ಮಹಾರಕ್ತನದಿಯು ಸಾಮಾನು ಸರಂಜಾಮುಗಳಿಂದ ತುಂಬಿ ಹೋಯಿತು. ಕಾಲಾಳುಗಳ ಕೈಗಳು ಮತ್ತು ಕಾಲುಗಳು ತೇಲಾಡುತ್ತಿರುವ ಸಮುದ್ರದ ಜೊಂಡಿನಂತೆ ಕಂಡವು. ಯೋಧರ ಬಿಲ್ಲುಗಳು ತೇಲಾಡುತ್ತಿದ್ದು ನದಿಯ ಅಲೆಗಳಂತೆ ಕಂಡವು, ಸಿಪಾಯಿಗಳು ಮತ್ತು ಸೇನಾನಾಯಕರ ದೇಹಗಳ ಒಡವೆಗಳು ರಕ್ತದ ನದಿಯಲ್ಲಿ ಸಾಗಿ ಹೋಗುತ್ತಿದ್ದ ಸಣ್ಣಕಲ್ಲುಗಳಂತೆ ತೋರಿದವು.
ಈ ಮಧ್ಯೆ ‘ಸಂಕರ್ಷಣ’ ಎಂದೂ ಹೆಸರಾದ ಬಲರಾಮ ಪ್ರಭುವೂ ಯುದ್ಧಕ್ಕೆ ಇಳಿದಾಗ ಶತ್ರು ಸೇನೆ ನುಚ್ಚು ನೂರಾಯಿತು. ತನ್ನ ಗದಾ ಪ್ರಹಾರದಿಂದ ಶತ್ರು ಸೇನೆಯನ್ನು ಶ್ರೀ ಬಲರಾಮ ಧ್ವಂಸ ಮಾಡಿದಾಗ ಶ್ರೀಕೃಷ್ಣ ಬಾಣಗಳಿಂದ ಉಂಟಾದ ನೆತ್ತರಿನ ಹೊಳೆ ಪ್ರವಾಹ ಬಂದು ಉಕ್ಕೇರಿದಂತಾಯಿತು.
ಜರಾಸಂಧನೊಂದಿಗೆ ಸೇನಾ ಸಮುದ್ರವೇ ಇದ್ದರೂ ಕೃಷ್ಣ ಬಲರಾಮರು ಯುದ್ಧ ಮಾಡಿದ ರೀತಿಯಿಂದ ಸನ್ನಿವೇಶವು ಒಂದು ಘೋರ ದೃಶ್ಯವಾಯಿತು. ಹೀಗಾಗಿ ಜರಾಸಂಧನನ್ನು ಹೊರತು ಪಡಿಸಿ ಶತ್ರು ಸೇನೆಯು ಪೂರ್ಣವಾಗಿ ನಿರ್ನಾಮವಾಗಿ ಹೋಯಿತು. ಸೋಲಿನಿಂದ ಅಪಮಾನಿತನಾದ ಜರಾಸಂಧನನ್ನು ಬಲರಾಮ ಬಂಧಿಸಿದಾಗ ಶ್ರೀಕೃಷ್ಣ ತನ್ನ ಮುಂದಾಲೋಚನೆಯಿಂದ ಆತನನ್ನು ಬಂಧನ ಮುಕ್ತಗೊಳಿಸುವಂತೆ ಬಲರಾಮನಿಗೆ ಸೂಚನೆ ಇತ್ತನು.
ಕದನದಲ್ಲಿ ಪರಾಜಿತಗೊಂಡಾದ ಮೇಲೂ ಶತ್ರು ಸೈನಿಕರಿಂದ ಬಂಧನಮುಕ್ತಿ ಪಡೆಯುವುದು ಕ್ಷತ್ರಿಯರಿಗೆ ದೊಡ್ಡ ಅವಮಾನವಾಗಿ ಪರಿಣಮಿಸುತ್ತಿತ್ತು. ಇದೇ ರೀತಿಯಲ್ಲಿ ಅಪಮಾನಗೊಂಡ ಮಹಾರಾಜ ಜರಾಸಂಧನು ರಾಜ್ಯಕ್ಕೆ ಹಿಂದಿರುಗಿ ಸಂನ್ಯಾಸತ್ವ ಕೈಗೊಳ್ಳಲು ನಿರ್ಧರಿಸಿದನು.

ರಾಜ ಪದವಿಯನ್ನು ತ್ಯಾಗ ಮಾಡಲು ಮುಂದಾದಾಗ ಆತನ ಬಂಧು ಮಿತ್ರರು ಆತನಿಗೆ ಪದವಿ ತ್ಯಾಗ ಮಾಡದಂತೆ ಮನವಿ ಮಾಡಿಕೊಂಡು, ಮತ್ತೊಮ್ಮೆ ಶ್ರೀಕೃಷ್ಣನ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಿದರು.
ಜರಾಸಂಧನ ಸೈನ್ಯದ ಗಾತ್ರಕ್ಕೆ ಹೋಲಿಸಿದಲ್ಲಿ ಶ್ರೀಕೃಷ್ಣನ ಸೈನ್ಯವು ಬಹಳ ಸಣ್ಣದಾಗಿದ್ದರೂ ಯಾವ ಒಬ್ಬಸೈನಿಕನಿಗೂ ತೃಣ ಮಾತ್ರದ ಗಾಯವೂ ಸಹ ಆಗಲಿಲ್ಲ. ಆದರೆ ಜರಾಸಂಧನ ಸಂಪೂರ್ಣ ಸೈನಿಕರು ಹತರಾದರು ಮತ್ತು ರಾಜ ಜರಾಸಂಧನು ಅವಮಾನಿತನಾಗಿ ಮನೆಗೆ ಹಿಂದಿರುಗಬೇಕಾಯಿತು.
ಶ್ರೀಕೃಷ್ಣನ ವಿಜಯೋತ್ಸವವನ್ನು ಮಥುರಾ ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಂತೃಪ್ತರಾದ ದೇವತೆಗಳು ಆಕಾಶದಿಂದ ಹೂ ಮಳೆ ಉದುರಿಸಿ ಕೃಷ್ಣನನ್ನು ಆಶೀರ್ವದಿಸಿದರು. ಶ್ರೀಕೃಷ್ಣ ಬಲರಾಮರು, ಯುದ್ಧದಲ್ಲಿ ಗೆದ್ದಂತಹ ನಗನಾಣ್ಯಗಳನ್ನು ಉಗ್ರಸೇನ ಮಹಾರಾಜನಿಗೆ ಒಪ್ಪಿಸಿದರು.
ತನ್ನ ಹಿತೈಷಿಗಳ ಮಾತುಗಳಿಂದ ಪ್ರೇರಿತನಾದ ರಾಜ ಜರಾಸಂಧನು, ಅಷ್ಟೇ ಸೈನಿಕರ ಜೊತೆ ಹದಿನೇಳು ಬಾರಿ ಮಥುರಾ ನಗರದ ಮೇಲೆ ದಾಳಿ ನಡೆಸಿದನು. ಆದರೆ ಪ್ರತಿ ಬಾರಿಯೂ ಸೋಲನ್ನಪ್ಪುತ್ತಿದ್ದ ಜರಾಸಂಧನನ್ನು ಬಲರಾಮ ಬಂಧಿಸಿದಾಗ ಶ್ರೀಕೃಷ್ಣ ಆತನನ್ನು ವಿಮುಕ್ತಿ ಮಾಡುತ್ತಿದ್ದನು. ಇದರಿಂದ ಪ್ರತಿ ಬಾರಿಯೂ ಜರಾಸಂಧನ ಹತಾಶೆ ಹಾಗೂ ಅವಮಾನ ಹೆಚ್ಚುತ್ತಾ ಹೋಯಿತು.
ಜರಾಸಂಧನು ಹದಿನೆಂಟನೆಯ ಬಾರಿಗೆ ಮಥುರೆಯನ್ನು ಮುತ್ತಿದಾಗ ಕಾಲಯವನ ಎಂಬ ಯವನ ರಾಜನು ಯದುಕುಲದ ಶ್ರೀಮಂತಿಕೆಯಿಂದ ಆಕರ್ಷಿತನಾಗಿ ಮಥುರೆಗೆ ಇನ್ನೊಂದು ದಿಕ್ಕಿನಿಂದ ಮುತ್ತಿಗೆ ಹಾಕಿದನು. ಕಾಲಯವನನು ಆಗಲೇ ಮಥುರೆಯನ್ನು ಎಲ್ಲ ಕಡೆಗಳಿಂದ ಮುತ್ತುತ್ತಿದ್ದನು.
ಹಿಂದಿನ 17 ಪ್ರಯತ್ನಗಳಲ್ಲಿ ತಂದ ಸೈನ್ಯದಷ್ಟೇ ದೊಡ್ಡ ಸೈನ್ಯವನ್ನು ತೆಗೆದುಕೊಂಡು ಜರಾಸಂಧ ಬರುವನೆಂದು ನಿರೀಕ್ಷೆಯಿತ್ತು. ಮಥುರೆಯನ್ನು ಕಾಲಯವನನು ಆಕ್ರಮಿಸಿದಾಗ ಜರಾಸಂಧನು ಮಥುರೆಯನ್ನು ವಶಪಡಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುವನೆಂದು ಕೃಷ್ಣನಿಗೆ ತಿಳಿದಿತ್ತು.

ಆದ್ದರಿಂದ ಮಥುರೆಯನ್ನು ರಕ್ಷಿಸಲು ಆಯಕಟ್ಟಿನ ಸ್ಥಳದಲ್ಲಿ ಮುಂಜಾಗ್ರತೆಯ ಕ್ರಮ ತೆಗೆದುಕೊಳ್ಳುವುದು ಬುದ್ಧಿವಂತಿಕೆ ಎಂದು ನಿರ್ಧರಿಸಿದ ಕೃಷ್ಣ ಮತ್ತು ಬಲರಾಮರು ಒಂದು ಕಡೆ ಕಾಲಯವನನೊಂದಿಗೆ ಹೋರಾಡುತ್ತಿರುವಾಗ ಜರಾಸಂಧನು ಇನ್ನೊಂದು ಕಡೆಯಿಂದ ಸೇಡು ತೀರಿಸಿಕೊಳ್ಳಲು ಬರಬಹುದು.
ಜರಾಸಂಧನ ಬಳಿ ಸೈನ್ಯವಿದ್ದುದ್ದರಿಂದ 17 ಬಾರಿ ಸೋತದ್ದರಿಂದ ಯಾದವ ಕುಟುಂಬದವರನ್ನು ಕೊಲ್ಲಬಹುದಾಗಿತ್ತು ಅಥವಾ ಸೆರೆ ಹಿಡಿದು ಅವನ ರಾಜ್ಯಕ್ಕೆ ಕರೆದೊಯ್ಯಬಹುದು. ಆದ್ದರಿಂದ ಕೃಷ್ಣನು ಮನುಷ್ಯರಾಗಲೀ, ರಾಕ್ಷಸರಾಗಲೀ ಎರಡು ಕಾಲಿನ ಯಾವ ಪ್ರಾಣಿಯೂ ಪ್ರವೇಶಿಸಲು ಸಾಧ್ಯವಿಲ್ಲದಂತಹ ಬಹು ಗಟ್ಟಿಯಾದ ಕೋಟೆಯನ್ನು ನಿರ್ಮಿಸಲು ನಿರ್ಧರಿಸಿದನು.
ಒಂದೆಡೆ ಜರಾಸಂಧ, ಮತ್ತೊಂದೆಡೆ ಕಾಲಯವನ. ಯದುಕುಲದ ಸಂಕಟವನ್ನು ಅರಿತ ಶ್ರೀಕೃಷ್ಣ ದೇವತೆಗಳ ಶಿಲ್ಪಿಯಾದ ವಿಶ್ವಕರ್ಮನನ್ನು ಕರೆಯಿಸಿ ಸಮುದ್ರದ ಒಳಗೆ ಒಂದು ಸುಂದರ ನಗರವನ್ನು ನಿರ್ಮಿಸಲು ಆಜ್ಞಾಪಿಸಿದ. ಸಾಮಾನ್ಯ ಶಿಲ್ಪಿಗಳು ಸಮುದ್ರದಲ್ಲಿ ಇಂತಹ ಕೋಟೆಯನ್ನು ನಿರ್ಮಿಸಲು ಸಾಧ್ಯವಿರಲಿಲ್ಲ.
ಹದಿನೆಂಟನೆಯ ದಾಳಿ ನಡೆಸುತ್ತಿದ್ದ ಜರಾಸಂಧನು ಸ್ವಲ್ಪ ಅವಕಾಶಸಿಕ್ಕರೂ ಸಹ ವ್ಯರ್ಥ ಮಾಡದೆ ಮಥುರಾ ನಗರಿಗೆ ನುಗ್ಗಿ, ಯದುಕುಲದವರನ್ನು ಬಂಧಿಸುತ್ತಿದ್ದ ಅಥವಾ ಕೊಲ್ಲುತ್ತಿದ್ದ. ಹೀಗಾಗಿ ತನ್ನವರ ರಕ್ಷಣೆಗೋಸ್ಕರ ಕಟ್ಟಿಸಿದ ಈ ನಗರ ದ್ವಾರಕಾ ಸಮುದ್ರ ತೀರದಲ್ಲಿತ್ತು ಎಂದು ‘ಶ್ರೀಮದ್ಭಾಗವತ’ ದಲ್ಲಿ ಹೇಳಲಾಗಿದೆ. (ಈ ಕೋಟೆಯ ಅವಶೇಷಗಳು ಈಗಲೂ ದ್ವಾರಕಾ ತೀರದಲ್ಲಿ ಇವೆ)
ಮೊದಲನೆಯದಾಗಿ ನಗರದ 96 ಚದುರ ಮೈಲಿಯ ವಿಸ್ತೀರ್ಣದ ಗೋಡೆಯನ್ನು ಸಮುದ್ರದಲ್ಲಿಯೇ ನಿರ್ಮಿಸಲಾಯಿತು. ತದನಂತರ ಈ ಅಭೇದ್ಯ ಕೋಟೆಯೊಳಗೆ ಸುಂದರ ನಗರವು ನಿರ್ಮಾಣಗೊಂಡಿತು. ಈ ನಗರದಲ್ಲಿ ರಸ್ತೆಗಳೂ ಸುಂದರವಾದ ಉದ್ಯಾನಗಳೂ, ನಿರ್ಮಾಣಗೊಂಡವು.
ಪ್ರತಿ ಉದ್ಯಾನದಲ್ಲಿಯೂ ಬೇಡಿದ್ದನ್ನು ನೀಡುವ ಕಲ್ಪವೃಕ್ಷವನ್ನು ನೆಟ್ಟಿದ್ದರು. ನಗರದೊಳಗೆ ಅನೇಕ ಸುಂದರವಾದ ಅರಮನೆಗಳೂ ಹಾಗೂ ಎತ್ತರವಾದ ಗೋಪುರಗಳೂ ಇದ್ದವು. ಪ್ರತಿ ಅರಮನೆಯಲ್ಲಿ ಹಾಗೂ ಗೋಪುರದಲ್ಲಿ ಬಂಗಾರದ ಮಡಕೆಗಳನ್ನು ಸಮೃದ್ಧಿಯ ಸಂಕೇತವಾಗಿ ಇಡಲಾಗಿತ್ತು.

ಹೆಚ್ಚು ಕಡಮೆ ಎಲ್ಲ ಅರಮನೆಗಳೂ ಗಗನ ಚುಂಬಿ ಕಟ್ಟಡಗಳಾಗಿದ್ದವು. ಪ್ರತಿ ವಾಸದ ಮನೆಯ ನೆಲಮಾಳಿಗೆಯಲ್ಲಿ ದವಸ ಧಾನ್ಯಗಳನ್ನು ತುಂಬಿಡಲು ಬಂಗಾರದ ಹಾಗೂ ಬೆಳ್ಳಿಯ ಮಡಕೆಗಳು ಇದ್ದವು.
ಯದು ಕುಲದ ಆರಾಧ್ಯ ದೈವವಾದ ವಿಷ್ಣು ವಿಗ್ರಹವನ್ನು ಎಲ್ಲ ಮನೆಗಳಲ್ಲೂ ಅವರವರ ಕುಲಕ್ಕೆ ತಕ್ಕಂತೆ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಹೀಗೆ ವಿಂಗಡಿಸಲಾಗಿತ್ತು. ನಗರದ ಮಧ್ಯ ಭಾಗದಲ್ಲಿ ರಾಜ ಉಗ್ರಸೇನನ ಅರಮನೆಯನ್ನು ಬಹಳ ಸುಂದರವಾಗಿ ಕಟ್ಟಲಾಗಿತ್ತು.
ಈ ನಗರವು ನಿರ್ಮಾಣಗೊಳ್ಳುತ್ತಿರುವಾಗ ಸ್ವರ್ಗಲೋಕದಿಂದ ಇಂದ್ರನು ಪಾರಿಜಾತ ವೃಕ್ಷವನ್ನು ‘ಸುಧರ್ಮ’ ಎಂದು ಕರೆಯಲ್ಪಡುವ ಶಾಸಕಭವನವನ್ನೂ ಭೂಮಿಗೆ ಕಳುಹಿಸಿಕೊಟ್ಟನು. ಈ ಭವನದೊಳಗೆ ಯಾರು ಪ್ರವೇಶಿಸುವರೋ ಅವರು ವೃದ್ಧಾಪ್ಯದಿಂದ ತಪ್ಪಿಸಿಕೊಳ್ಳುತ್ತಿದ್ದರು.
ವರುಣ ದೇವನು ಕೃಷ್ಣನಿಗೆ ಒಂದು ಅದ್ಭುತವಾದ ಉಡುಗೊರೆಯನ್ನು ಕೊಟ್ಟನು. ಅದೇನೆಂದರೆ ಕಿವಿಯೊಂದನ್ನು ಹೊರತು ಪಡಿಸಿ ದೇಹದ ಎಲ್ಲ ಭಾಗವು ಶ್ವೇತ ಬಣ್ಣದಿಂದ ಕೂಡಿದ್ದ ಒ೦ದು ಸು೦ದರವಾದ ಕುದುರೆ.
ಅದರ ಎರಡು ಕಿವಿಗಳೂ ಕಪ್ಪಾಗಿದ್ದವು. ಈ ಬಲಶಾಲಿ ಕುದುರೆ ಮನಸ್ಸಿನ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿತ್ತು. ಹೀಗೆ ಹೊಸ ನಗರಿಗೆ ಮುವತ್ತ ಮೂರು ಕೋಟಿ ದೇವತೆಗಳು ಒಂದಲ್ಲ ಒಂದು ಕಾಣಿಕೆ ಸಲ್ಲಿಸಿ ಕೃತಾರ್ಥರಾದರು.
ಹೀಗೆ ನಗರ ಪೂರ್ಣಗೊಂಡನಂತರ ಮಥುರಾ ನಗರದ ಎಲ್ಲ ನಿವಾಸಿಗಳನ್ನೂ ಸ್ಥಳಾಂತರಿಸಿ, ಬಲರಾಮನನ್ನು ರಕ್ಷಣೆಗೆ ನಿಲ್ಲಿಸಿದ ಶ್ರೀಕೃಷ್ಣ, ಆಯುಧ ರಹಿತನಾಗಿ ಹೂಮಾಲೆಯನ್ನು ಧರಿಸಲ್ಪಟ್ಟವನಾಗಿ ಮುತ್ತಿಗೆ ಹಾಕಿದ್ದ ಕಾಲಯವನನ ಸೈನ್ಯದತ್ತ ಏಕಾಂಗಿಯಾಗಿ ನಡೆದು ಹೋದನು.






Leave a Reply