ಖಳರು, ಅಸುರರು

ಭಾಗವತದ ಪಾತ್ರ ಪರಿಚಯ

(ಆಧಾರ – ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಭಾವಾರ್ಥಗಳು; ಭಾಗವತ; ಪ್ರಥಮ ಸ್ಕಂಧ; 15ನೇ ಅಧ್ಯಾಯ)

ಮಯಾಸುರ

ಖಾಂಡವವನದಲ್ಲಿ ವಾಸಮಾಡುತ್ತಿದ್ದನು. ಆ ಕಾಡಿಗೆ ಬೆಂಕಿಯು ಹೊತ್ತಿಕೊಳ್ಳಲು ಮಯಾಸುರನು ತನ್ನನ್ನು ಕಾಪಾಡಬೇಕೆಂದು ಅರ್ಜುನನಲ್ಲಿ ಮೊರೆಯಿಟ್ಟನು. ಅರ್ಜುನನು ಮಯನ ಜೀವವನ್ನುಳಿಸಿದನು.

ಇದಕ್ಕೆ ಪ್ರತಿಫಲವಾಗಿ ಮಯಾಸುರನು ಪಾಂಡವರಿಗಾಗಿ ಒಂದು ದಿವ್ಯ ಸಭಾಭವನವನ್ನು ನಿರ್ಮಿಸಿ ಕೊಟ್ಟನು. ಅದು ಎಲ್ಲ ರಾಜ ಮಹಾರಾಜರ ವಿಶೇಷ ಗಮನವನ್ನು ಸೆಳೆಯಿತು. ಪಾಂಡವರ ಅಸಾಧಾರಣ ಶಕ್ತಿಯನ್ನು ಅವರು ಅರಿತರು.

ಯಾರೊಬ್ಬರೂ ಗೊಣಗದೆ ಪಾಂಡವರಿಗೆ ಅಧೀನರಾಗಿರಲು ಒಪ್ಪಿಕೊಂಡು ಚಕ್ರವರ್ತಿಗೆ ಕಪ್ಪಕಾಣಿಕೆಗಳನ್ನು ಅರ್ಪಿಸಿದರು. ಅಸುರರಿಗೆ ಭೌತಿಕ ಅದ್ಭುತಗಳನ್ನು ಸೃಷ್ಟಿಸುವ ಆಶ್ಚರ್ಯಕರವೂ ಅಮಾನುಷವೂ ಆದ ಶಕ್ತಿಗಳಿರುತ್ತವೆ.

ಆದರೆ ಅವರು ಯಾವಾಗಲೂ ಸಮಾಜದಲ್ಲಿ ಕ್ಷೋಭೆಯನ್ನೇ ಉಂಟುಮಾಡುತ್ತಾರೆ. ಅಪಾಯಕಾರಿಗಳಾದ ಆಧುನಿಕ ವಿಜ್ಞಾನಿಗಳೇ ಇಂದಿನ ರಾಕ್ಷಸರು. ಅವರು ಸಮಾಜಕ್ಕೆ ಹಾನಿಕರವಾದ ಭೌತಿಕ ಅದ್ಭುತಗಳನ್ನು ಸೃಷ್ಟಿಸಿ ಶಾಂತಿಯನ್ನು ಕದಡುತ್ತಾರೆ.

ಉದಾಹರಣೆಗೆ, ಪರಮಾಣು ಅಸ್ತ್ರಗಳ ತಯಾರಿಕೆಯು ಮಾನವ ಸಮಾಜದಲ್ಲಿ ಕಳವಳವನ್ನುಂಟು ಮಾಡಿದೆ. ಮಯಾಸುರನೂ ಅಂತಹವನೇ ಒಬ್ಬ ಭೌತವಾದಿ. ಅದ್ಭುತಗಳನ್ನು ಸೃಷ್ಟಿಸುವ ಕಲೆ ಅವನಲ್ಲಿತ್ತು. ಆದರೂ ಕೃಷ್ಣನು ಅವನನ್ನು ಕೊಲ್ಲಬಯಸಿದನು.

ಒಂದು ಕಡೆ ಅಗ್ನಿ, ಇನ್ನೊಂದು ಕಡೆ ಶ್ರೀಕೃಷ್ಣನ ಚಕ್ರ ಎರಡೂ ಅಟ್ಟಿಸಿಕೊಂಡು ಬರಲು ಮಯಾಸುರನು ಅರ್ಜುನನ ಮೊರೆಹೊಕ್ಕನು. ಅವನು ಭಗವಾನ್ ಶ್ರೀಕೃಷ್ಣನ ಕೋಪಾಗ್ನಿಯಿಂದ ಮಯನನ್ನು ಕಾಪಾಡಿದನು. ಆದ್ದರಿಂದ ಭಕ್ತರು ಭಗವಂತನಿಗಿಂತಲೂ ಹೆಚ್ಚು ದಯಾವಂತರು.

ಭಕ್ತಿಸೇವೆಯಲ್ಲಿ ಭಕ್ತನ ಕರುಣೆಯು ಭಗವಂತನ ಕರುಣೆಗಿಂತಲೂ ಹೆಚ್ಚು ಬೆಲೆಬಾಳುವಂತಹದು. ಅರ್ಜುನನಂತಹ ಸದ್ಭಕ್ತನು ಮಯನಿಗೆ ಆಶ್ರಯವಿತ್ತುದನ್ನು ನೋಡಿ ಅಗ್ನಿಯೂ, ಕೃಷ್ಣನೂ ಹಿಮ್ಮೆಟ್ಟಿದ್ದರು.

ಅರ್ಜುನನಿಂದ ಜೀವವುಳಿಸಿಕೊಂಡ ಮಯನು ಅವನಿಗೆ ಕೃತಜ್ಞತೆ ತೋರಿಸಲು ಏನಾದರೂ ಒಂದು ಸೇವೆ ಮಾಡಲು ಬಯಸಿದನು. ಆದರೆ ಅರ್ಜುನನು ಹಾಗೆ ಪ್ರತಿಫಲವನ್ನು ಪಡೆಯಲು ನಿರಾಕರಿಸಿದನು.

ಮಯನು ಭಕ್ತನ ಮೊರೆಹೊಕ್ಕುದನ್ನು ಮೆಚ್ಚಿದ ಕೃಷ್ಣನು ಯುಧಿಷ್ಟಿರ ಮಹಾರಾಜನಿಗಾಗಿ ಒಂದು ದಿವ್ಯ ಸಭಾಭವನವನ್ನು ನಿರ್ಮಿಸಿಕೊಡಬೇಕೆಂದು ಸೂಚಿಸಿದನು.

ಭಕ್ತನ ಕೃಪೆಯಿಂದ ಭಗವಂತನ ಕರುಣೆಯು ದೊರಕುತ್ತದೆ, ಭಗವಂತನ ಕರುಣೆಯಿಂದ ಭಕ್ತರಿಗೆ ಸೇವೆ ಸಲ್ಲಿಸುವ ಅವಕಾಶವು ದೊರಕುತ್ತದೆ. ಭೀಮಸೇನನು ಹಿಡಿದ ಗದೆಯೂ ಮಯಾಸುರನು ನೀಡಿದ ಉಡುಗೊರೆಯೇ.

ತ್ರಿಗರ್ತ ಅಥವಾ ಸುಶರ್ಮ

ವೃದ್ಧ  ಕ್ಷತ್ರ ಮಹಾರಾಜನ ಮಗ, ತ್ರಿಗರ್ತ ದೇಶದ ಅರಸ. ದ್ರೌಪದಿಯ ಸ್ವಯಂವರ ಸಂದರ್ಭದಲ್ಲಿ ಇವನೂ ಇದ್ದನು. ದುರ್ಯೋಧನನ ಮಿತ್ರರಲ್ಲಿ ಒಬ್ಬನಾದ ಸುಶರ್ಮನು ಮತ್ಸ್ಯದೇಶವನ್ನು (ದರ್ಭಂಗ) ಮುತ್ತಲು ದುರ್ಯೋಧನನಿಗೆ ಸಲಹೆ ನೀಡಿದನು.

ವಿರಾಟನಗರದಲ್ಲಿ ಗೋಗ್ರಹಣ ಸಮಯದಲ್ಲಿ ವಿರಾಟ ಮಹಾರಾಜನನ್ನು ಸೆರೆಹಿಡಿದನು. ಆದರೆ ಭೀಮಸೇನನು ಅವನನ್ನು ಬಿಡಿಸಿದನು. ಸುಶರ್ಮನು ಕುರುಕ್ಷೇತ್ರ ಯುದ್ಧದಲ್ಲಿ ಬಹು ಪರಾಕ್ರಮದಿಂದ ಹೋರಾಡಿದನು. ಕೊನೆಗೆ ಅರ್ಜುನನಿಂದ ಹತನಾದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi