ಇಡ್ಲಿ, ದೋಸೆ, ರೊಟ್ಟಿ, ಪೂರಿ, ಚಪಾತಿ, ವಡೆ, ಪೊಂಗಲ್ ಏಕೆ ಅನ್ನವನ್ನು ಕಲಸಿಕೊಂಡು ಮೆಲ್ಲಲು ಚಟ್ನಿ ಬೇಕೇ ಬೇಕು. ಅನೇಕ ವಿಧವಾದ ಚಟ್ನಿಗಳಿವೆ: ಸೊಪ್ಪು ಬಳಸುವ, ಬೇಳೆಗಳನ್ನು ಹಾಕಿ ಮಾಡುವ ರುಚಿಯಾದ ಚಟ್ನಿಗಳು. ಈ ಬಾರಿ ನಮ್ಮ ಓದುಗರಿಗೆ ವಿವಿಧ ಬಗೆಯ ಚಟ್ನಿಗಳನ್ನು ತಯಾರಿಸುವ ಬಗೆಗೆ ತಿಳಿಸಿದ್ದೇವೆ. ಇದನ್ನು ಶ್ರದ್ಧೆಯಿಂದ ಮಾಡಿ ಕೃಷ್ಣನಿಗೆ ಅರ್ಪಿಸಿ ಸವಿಯಿರಿ.
ಟೊಮಾಟೊ ಚಟ್ನಿ

ಬೇಕಾಗುವ ಸಾಮಾನುಗಳು
ಹಸಿರು ಟೊಮಾಟೊ – 3
ಹಣ್ಣಾದ ಟೊಮಾಟೊ – 1
ತಾಜಾ ಕೊತ್ತಂಬರಿ ಸೊಪ್ಪು – ಅರ್ಧ ಕಪ್
ಎಣ್ಣೆ – 1 ಟೇಬಲ್ ಸ್ಪೂನ್
ಹಸಿ ಮೆಣಸಿನಕಾಯಿ – 4
ಸಣ್ಣ ನಿಂಬೆ ಹಣ್ಣಿನ ಗಾತ್ರದ ಹುಣಿಸೆಹಣ್ಣು (ಚೆನ್ನಾಗಿ ತೊಳೆದದ್ದು)
ಶುಂಠಿ (ಸಣ್ಣ ಚೂರು ಮಾಡಿದ್ದು) – 1
ಚಿಟಿಕೆ ಅರಿಶಿಣ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ : 1 ಟೇಬಲ್ ಸ್ಪೂನ್ ಎಣ್ಣೆ, ಅರ್ಧ ಟೇಬಲ್ ಸ್ಪೂನ್ ಜೀರಿಗೆ, ಅರ್ಧ ಟೇಬಲ್ ಸ್ಪೂನ್ ಸಾಸಿವೆ, 1 ಒಣ ಮೆಣಸಿನಕಾಯಿ, ಸ್ವಲ್ಪ ಕರಿಬೇವಿನ ಸೊಪ್ಪು ಮತ್ತು 1 ಚಿಟಿಕೆ ಇಂಗು.
ಮಾಡುವ ವಿಧಾನ : ಹಸಿರು ಮತ್ತು ಹಣ್ಣಾದ ಟೊಮಾಟೊಗಳನ್ನು ತಲಾ ನಾಲ್ಕು ಭಾಗವಾಗಿ ಚೂರು ಮಾಡಿ. 1 ಟೇಬಲ್ ಸ್ಪೂನ್ ಎಣ್ಣೆಯನ್ನು ಕಾಯಿಸಿ ಅದಕ್ಕೆ ಟೊಮಾಟೊ ಚೂರುಗಳನ್ನು ಹಾಕಿ. ಹುಣಿಸೆ ಹಣ್ಣು ಮತ್ತು ಹಸಿರು ಮೆಣಸಿನಕಾಯಿಗಳನ್ನು ಅದಕ್ಕೆ ಹಾಕಿ ಮುಚ್ಚಿ. ಸಣ್ಣ ಉರಿಯಲ್ಲಿ ಸುಮಾರು 10 ನಿಮಿಷ ಅಥವಾ ನೀರು ಇಂಗುವವರೆಗೂ ಬೇಯಿಸಿ ಒಲೆ ಆರಿಸಿ ಬೆಂದ ಪದಾರ್ಥ ಆರಲು ಬಿಡಿ. ಅದಕ್ಕೆ ಅರಿಶಿಣ ಮತ್ತು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಲೆಯ ಮೇಲೆ ಪ್ಯಾನ್ ಇಟ್ಟು ಎಣ್ಣೆ ಕಾಯಿಸಿ ಅದಕ್ಕೆ ಜೀರಿಗೆ, ಸಾಸಿವೆ ಹಾಕಿ. ಅದು ಸಿಡಿದಾಗ ಕೆಂಪು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಹಾಕಿ ಎರಡು ನಿಮಿಷ ಕರಿಯಿರಿ. ರುಬ್ಬಿದ ಚಟ್ನಿಗೆ ಹಾಕಿ ಕಲಸಿ. ಇಡ್ಲಿ, ದೋಸೆ, ಚಪಾತಿ ಅಥವಾ ಅನ್ನದ ಜೊತೆ ಸವಿಯಿರಿ.
ತೆಂಗಿನ ಚಟ್ನಿ

ಬೇಕಾಗುವ ಸಾಮಾನುಗಳು
ತೆಂಗಿನ ತುರಿ – 4 ಟೇಬಲ್ ಸ್ಪೂನ್
ಕಡಲೆ ಬೇಳೆ – 2 ಟೇಬಲ್ ಸ್ಪೂನ್ ಹುರಿದದ್ದು
ಶುಂಠಿ ಒಂದು ಚೂರು ಸಿಪ್ಪೆ ತೆಗೆದದ್ದು
ತಾಜಾ ಕೊತ್ತಂಬರಿ ಸೊಪ್ಪು, ಕತ್ತರಿಸಿದ್ದು – 4 ಟೇಬಲ್ ಸ್ಪೂನ್
ಹಸಿ ಮೆಣಸಿನಕಾಯಿ ಚೂರು ಮಾಡಿದ್ದು – 4
ಸಾಸಿವೆ ಮತ್ತು ಉದ್ದಿನ ಬೇಳೆ – ತಲಾ 1 ಟೇಬಲ್ ಸ್ಪೂನ್
ಚಿಟಿಕೆ ಇಂಗಿನ ಪುಡಿ
ಕರಿಬೇವಿನ ಸೊಪ್ಪು – 4
ಕೆಂಪು ಮೆಣಸಿನಕಾಯಿ – 1
ಎಣ್ಣೆ – 2 ಟೇಬಲ್ ಸ್ಪೂನ್
ನಿಂಬೆ ರಸ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ : ತೆಂಗಿನಕಾಯಿ, ಹುರಿದ ಕಡಲೆಬೇಳೆ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಶುಂಠಿಯನ್ನು ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಚಟ್ನಿಯನ್ನು ಒಂದು ಬಟ್ಟಲಿಗೆ ಹಾಕಿಡಿ. ಪ್ಯಾನ್ನಲ್ಲಿ ಎರಡು ನಿಮಿಷ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಹಾಕಿ. ಅದು ಸಿಡಿದ ಮೇಲೆ ಉದ್ದಿನ ಬೇಳೆ, ಒಣ ಮೆಣಸಿನಕಾಯಿ ಚೂರು, ಕರಿ ಬೇವಿನ ಸೊಪ್ಪು ಮತ್ತು ಇಂಗನ್ನು ಹಾಕಿ. ಬೇಳೆ ಕೆಂಪಾಗುವವರೆಗೂ ಕರಿದು ಅದನ್ನು ಚಟ್ನಿಗೆ ಹಾಕಿ. ಅನಂತರ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಚಟ್ನಿಯನ್ನು ಚೆನ್ನಾಗಿ ಕಲಸಿ. ಚಪಾತಿ, ದೋಸೆ, ಇಡ್ಲಿ ಮುಂತಾದ ತಿನಿಸುಗಳ ಜೊತೆ ಸವಿಯಿರಿ.
ತಾಜಾ ಪುದೀನ ಚಟ್ನಿ

ಬೇಕಾಗುವ ಸಾಮಾನು
ತಾಜಾ ನಿಂಬೆ ರಸ ಮತ್ತು ಕಿತ್ತಳೆ ರಸ – ತಲಾ 2 ಟೇಬಲ್ ಸ್ಪೂನ್
ಸಿಪ್ಪೆ ತೆಗೆದ, ಒಣಗಿಸಿದ ಪಪ್ಪಾಯ ಅಥವಾ ಜೇನು ತುಪ್ಪ – 2 ಟೇಬಲ್ ಸ್ಪೂನ್
ನೀರು – 4 ಟೇಬಲ್ ಸ್ಪೂನ್
ತಾಜಾ ಪುದೀನ, ಶುದ್ಧ ಪಡಿಸಿದ್ದು – ಒಂದೂ ಮುಕ್ಕಾಲು (1 3/4 ) ಕಪ್
ಹಸಿ ಮೆಣಸಿನಕಾಯಿ, ಕತ್ತರಿಸಿದ್ದು – 1-2
ತೆಂಗಿನ ತುರಿ – 1/4 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ : ಎಲ್ಲ ಸಾಮಾನುಗಳನ್ನೂ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಒಂದು ಬಟ್ಟಲಿಗೆ ಹಾಕಿಡಿ. ಚಪಾತಿ, ದೋಸೆ, ಇಡ್ಲಿ, ರೊಟ್ಟಿ ಜೊತೆಗೆ ಮೆಲ್ಲಿರಿ.
ಒಣ ದ್ರಾಕ್ಷಿಯೊಂದಿಗೆ ಸಕ್ಕರೆ ಬಾದಾಮಿ ಚಟ್ನಿ

ಬೇಕಾಗುವ ಸಾಮಾನು
ಒಣಗಿದ ಸಕ್ಕರೆ ಬಾದಾಮಿ – 230 ಗ್ರಾಂ
(ಹಿಂದಿನ ರಾತ್ರಿ 3 ಟೇಬಲ್ ಸ್ಪೂನ್ ನಿಂಬೆ ರಸ ಮತ್ತು 2 ಕಪ್ ಬಿಸಿ ನೀರಿನಲ್ಲಿ ನೆನೆಸಿದ್ದು)
ನಿಂಬೆ ರಸ – 3 ಟೇಬಲ್ ಸ್ಪೂನ್
ನೀರು – ಅರ್ಧ ಕಪ್
ತುಪ್ಪ ಅಥವಾ ಬೆಣ್ಣೆ – 2 ಟೇಬಲ್ ಸ್ಪೂನ್
ಚಕ್ಕೆ – 3 ಇಂಚಿನ ಚೂರು
ಕರಿ ಎಳ್ಳು – ಅರ್ಧ ಟೇಬಲ್ ಸ್ಪೂನ್
ಸಿಪ್ಪೆ ತೆಗೆದ ಶುಂಠಿ – ಅರ್ಧ ಟೇಬಲ್ ಸ್ಪೂನ್
ಒಣ ದ್ರಾಕ್ಷಿ – 2/3 ಕಪ್
ಬ್ರೌನ್ ಶುಗರ್ – ಅರ್ಧ ಕಪ್
ಉಪ್ಪು – 1/4 ಟೇಬಲ್ ಸ್ಪೂನ್
ಮೆಣಸು – 1/4 ಟೇಬಲ್ ಸ್ಪೂನ್
ಮಾಡುವ ವಿಧಾನ : ನೆನೆಸಿದ ಸಕ್ಕರೆ ಬಾದಾಮಿಯನ್ನು ಚೆನ್ನಾಗಿ ಕಿವುಚಿ ಸೋಸಿ. ರಸವನ್ನು ಬಟ್ಟಲಿನಲ್ಲಿ ಹಾಕಿಟ್ಟುಕೊಳ್ಳಿ. ತುಪ್ಪ ಅಥವಾ ಬೆಣ್ಣೆಯನ್ನು ಪ್ಯಾನ್ನಲ್ಲಿ ಕಾಯಿಸಿ. ಅದಕ್ಕೆ ಚಕ್ಕೆ, ಎಳ್ಳು ಮತ್ತು ಶುಂಠಿಯನ್ನು ಹಾಕಿ. ಅರ್ಧ ನಿಮಿಷ ಕರಿಯಿರಿ. ಉಳಿದ ಪದಾರ್ಥಗಳನ್ನೂ ಹಾಕಿ ಕರಿಯಿರಿ. ಅದೆಲ್ಲ ಕುದಿಯಲಿ. ಅನಂತರ ಸಣ್ಣ ಉರಿಯಲ್ಲಿ ಚೆನ್ನಾಗಿ ಕಲಕುತ್ತ ಇರಿ. ಅದು ಚಟ್ನಿಯ ಹದಕ್ಕೆ ಬಂದ ಮೇಲೆ ಕೆಳಗಿಳಿಸಿ. ಎರಡು ಮೂರು ದಿನ ಫ್ರಿಡ್ಜ್ನಲ್ಲಿಡಬಹುದು. ಚಪಾತಿ, ದೋಸೆ, ಇಡ್ಲಿ, ರೊಟ್ಟಿ ಮುಂತಾದವುಗಳ ಜೊತೆ ಬಲು ರುಚಿ…






Leave a Reply