ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಭಕ್ತರ ಸಂವಾದ, ಸ್ಥಳ: ಮುಂಬೈ, 17ನೇ ಏಪ್ರಿಲ್ 1977
ಪತಿತಾತ್ಮವು ಒಂದು ದೇಹ ಬಿಟ್ಟು ಇನ್ನೊಂದು ದೇಹವನ್ನು ಪ್ರವೇಶಿಸುತ್ತದೆ ಎಂದು ನಮಗೆ ವೈದಿಕ ಸಾಹಿತ್ಯ ಕೃತಿಗಳಿಂದ ತಿಳಿದುಬರುತ್ತದೆ. ಕೆಳಗಿನ ಮಟ್ಟದ ಭೌತ ಶರೀರದಿಂದ ಉನ್ನತ ಜೀವಿಯ ಮಟ್ಟಕ್ಕೆ-ಮೀನಿನಿಂದ ಮರವೋ, ಗಿಡವೋ ಆಗಿ, ಬಳಿಕ ಕ್ರಿಮಿಯಾಗಿ ತರುವಾಯ ಹಕ್ಕಿಯಾಗಿ ಪಶುವಾಗಿ ಹೀಗೆ ಆತ್ಮವು ವಿಕಾಸ ಹೊಂದುತ್ತದೆ. ಇದೆಲ್ಲಾ ಆದ ತರುವಾಯ ಆತ್ಮಕ್ಕೆ ಮನುಷ್ಯ ದೇಹ ದೊರೆಯುತ್ತದೆ. ಮನುಷ್ಯ ದೇಹದಲ್ಲಿ ಅದು ಪೂರ್ಣ ಪ್ರಜ್ಞೆಯುಳ್ಳದ್ದಾಗಿರುತ್ತದೆ. ದೇವರನ್ನು ಅರ್ಥಮಾಡಿಕೊಳ್ಳಲು ಇದು ಸದವಕಾಶ.

ಆದರೆ ಮನುಷ್ಯರು ಪ್ರಾಣಿಗಳಂತೆ ಕತ್ತಲಿನಲ್ಲಿಯೇ ಉಳಿದಿರುವಂತೆ ಬಲಾತ್ಕಾರ ಪಡಿಸಿದರೆ ಅದು ಅಪಾಯಕಾರಿ ನಾಗರಿಕತೆ, ದೈವವನ್ನು ಸಾಕ್ಷಾತ್ಕರಿಸಿಕೊಂಡು ಆಧ್ಯಾತ್ಮಿಕ ಜಗತ್ತಿಗೆ ಮರುಳುವ ಅವಕಾಶವನ್ನು ಆತ್ಮಕ್ಕೆ ನೀಡದಿರುವುದು ಅಪಾಯಕಾರಿ.
ದೈವ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಈ ನಿರಂತರ ವಿಕಾಶ ಪ್ರಕ್ರಿಯೆಯಿಂದ ನೀವು ಪಾರಾಗಬಹುದು. ಇದರಿಂದ ನೀವು ಅಭೌತಿಕವಾದ ವೈಕುಂಠಕ್ಕೆ ಮರಳಬಹುದು. ಅಲ್ಲಿ ತವಕವಿರುವುದಿಲ್ಲ. ಆ ಜಗತ್ತಿನಲ್ಲಿ ನೀವು ವಾಸ್ತವವಾಗಿ ಬದುಕಬಹುದು. ನ ಜಾಯತೇ ಮ್ರಿಯತೇ ವಾ. ಅಲ್ಲಿ ನೀವು ಹುಟ್ಟಬೇಕಾದ್ದಿಲ್ಲ, ಸಾಯಬೇಕಾದ್ದೂ ಇಲ್ಲ. ಅಲ್ಲದೆ ಅಲ್ಲಿ ನೀವು ಕೃಷ್ಣನೊಡನೆ ನರ್ತಿಸಬಹುದು. ಅದೇ ನಿಜವಾದ ಬದುಕು. ನಮಗೆ ಬೇಕಾದ್ದು ಅದು. ನಾವು ಹುಡುಕುತ್ತಿರುವುದು ಅದನ್ನೇ.
ಆದರೆ ನಿರಂತರ ಸುಖದ ಅಂಥ ಬದುಕು ಇಲ್ಲಿ ಈ ಭೌತ ಪ್ರಪಂಚದಲ್ಲಿ ಸಾಧ್ಯವಿಲ್ಲ. ಇಲ್ಲಿ ನೀವು ವಿಕಾಸ ಪ್ರಕ್ರಿಯೆಗೆ ಮೇಲಿನಿಂದ ಮೇಲೆ ಒಳಗಾಗಬೇಕು. ಈ ದೇಹದ ಬಳಿಕ ಇನ್ನೊಂದು ದೇಹ ಹುಟ್ಟು-ಸಾವು. ನೀವು ನಿಮಗೊದಗಿರುವ ವಿಶೇಷ ಮನುಷ್ಯ ಜನ್ಮವನ್ನು ಬಳಸಿಕೊಂಡು ಮರಳಿ ಧಾಮಕ್ಕೆ ಎಂದರೆ ಆಧ್ಯಾತ್ಮಿಕ ಜಗತ್ತಿಗೆ ಮರಳದ ಹೊರತು ಭೌತ ಜಗತ್ತಿನ ಬಾಧೆ ನಿಮಗೆ ತಪ್ಪಿದ್ದಲ್ಲ.
ಈ ಅಮೂಲ್ಯ ಅವಕಾಶವನ್ನು ನೀವು ಕಳೆದುಕೊಂಡಿರೋ ನಿಮ್ಮ ದುರ್ದೈವ ಎಂಥದೆಂಬುದನ್ನು ಹಾಗೇ ಸ್ವಲ್ಪ ಚಿಂತಿಸಿ. ನಮ್ಮ ಇಂದಿನ ಹೆಸರಿಗೆ ಮಾತ್ರದ ಆಧುನಿಕ ನಾಗರಿಕತೆ ಇಡೀ ಮನುಕುಲವನ್ನು ದುರ್ದೈವದ ಕೈಗೆ ಕೊಟ್ಟಿದೆ. ಭಗವಂತನನ್ನು ಅರಿತುಕೊಂಡು ಅವನಿಗೆ ಶರಣಾಗುವ ಅವಕಾಶದಿಂದ ಈ ನಾಗರಿಕತೆ ನಮ್ಮನ್ನು ವಂಚಿಸುತ್ತಿದೆ.
ಪ್ರತಿಯಾಗಿ ಅದು ನಮ್ಮನ್ನು ಜನನ ಮರಣವೆಂಬ ಚಕ್ರವ್ಯೂಹದೊಳಗೆ ಇರಿಸಿದೆ. ಆಧ್ಯಾತ್ಮಿಕ ಜಗತ್ತಿಗೆ ಮರಳುವ ಅವಕಾಶ ನಮಗೆ ಈ ಮನುಷ್ಯ ಜನ್ಮದಲ್ಲಿ ಮಾತ್ರ ಲಭ್ಯವಿದೆ. ಎಂಥ ಅವಕಾಶ! ಆದರೆ ಅವಕಾಶವನ್ನು ಈಗ ನಮ್ಮಿಂದ ಕದ್ದೊಯ್ಯಲಾಗುತ್ತಿದೆ.
ಆದ್ದರಿಂದ ನಾವು ಹಲವು ಜನುಮಗಳು ಕಳೆದರೂ ಜನನ-ಮರಣಗಳ ಯಾತನೆಗೆ ಹಿಂದಿರುಗಿ ಬರುತ್ತಲೇ ಇದ್ದೇವೆ. ಪ್ರಾಣಿ ಜನ್ಮದಿಂದ ಮನುಷ್ಯ ಜನ್ಮ, ಮನುಷ್ಯ ಜನ್ಮದಿಂದ ಪ್ರಾಣಿ ಜನ್ಮ-ಹೀಗೆ ಹತ್ತಿ ಇಳಿಯುವ ಕಾರ್ಯ ಸಾಗಿಯೇ ಇದೆ. ದೇಹಾಂತರ ಪ್ರಾಪ್ತಿಃ ಎನ್ನುವ ಈ ಹವ್ಯಾಸ ಹೊಸ ಭೌತದೇಹಗಳನ್ನು ಪಡೆವ ಈ ಹವ್ಯಾಸ ಬಹು ಅಪಾಯಕಾರಿ.
ಆದರೆ ಈ ಪ್ರಪಂಚದಲ್ಲಿರುವ ತನಕ ನೀವು ನಿಮ್ಮ ದೇಹವನ್ನು ಬದಲಿಸುತ್ತಿರಲೇಬೇಕು. ಆದ್ದರಿಂದ ಈ ಪ್ರಕ್ರಿಯೆಗೆ ಮಂಗಳ ಹಾಡಿ. ನೀವು ನಿಜಕ್ಕೂ ವಿಜ್ಞಾನದಲ್ಲಿ ಆಸಕ್ತಿ ಇದ್ದವರೇ ಆದರೆ, ದೇಹಗಳನ್ನು ಬದಲಿಸುವುದನ್ನು ನಿಲ್ಲಿಸುವುದು ಹೇಗೆ ಎಂಬ ಈ ವಿಜ್ಞಾನವನ್ನು ಕಲಿಯಿರಿ.

“ಇದೆಲ್ಲಾ ಯಾಕೆ? ಶ್ರೀಮಂತ ಹಾಗೂ ಸುಂದರ ದೇಹ ಪಡೆದವನು ನಾನಾಗಿದ್ದೇನಲ್ಲ, ಸಾಲದೆ? ಪುಷ್ಕಳವಾದ ವಿದ್ಯೆಯಿಂದ ಅಲಂಕೃತವಾದ ಅಮೆರಿಕನ್ನನ ದೇಹ ನನ್ನದು” ಎಂದು ನೀವು ಹೇಳಬಹುದು. ಹಾಗೋ? ಸರಿ. ನೀವು ದೊಡ್ಡ ವಿದ್ಯಾವಂತರಾಗಿದ್ದರೆ ಆ ನಿಮ್ಮ ಅಮೆರಿಕನ್ ದೇಹದಲ್ಲೇ ಎಂದೆಂದಿಗೂ ಇರಿ. ಹಾಗೇಕಾಗದು? ನಿಮಗೆ ಸಿಕ್ಕಿರುವ ಹೆಸರಿಗೆ ಮಾತ್ರದ ವೈಜ್ಞಾನಿಕ ಶಿಕ್ಷಣದಿಂದ ನಿಮಗೇಕೆ ಇಷ್ಟು ಹೆಮ್ಮೆ?
ನೀವು ಹತೋಟಿಗೊಳಪಟ್ಟವರು. ವಾಸ್ತವವಾಗಿ ನೀವು ಭಗವಂತನ ನಿಯಮಗಳಿಗೆ ಒಳಪಟ್ಟವರು. “ಈ ಭವ್ಯ ಗಗನಚುಂಬಿ ಕಟ್ಟಡವನ್ನು ನಾನು ಕಟ್ಟಿದ್ದೇನೆ” ಎಂದು ನೀವು ಹೇಳಿಕೊಳ್ಳಬಹುದು. ಬಹಳ ಸಂತೋಷ. ಎಂದೆಂದಿಗೂ ಆ ಕಟ್ಟಡದಲ್ಲೇ ಇದ್ದುಬಿಡಿ. ನೀವು ಮರಣಕ್ಕೆ ಒಳಗಾಗಬೇಕೆಕೆ? ನೀವು ಎಂದೆಂದಿಗೂ ಬದುಕಿರಬಾರದೇಕೆ? ಇಲ್ಲ. ಒಂದು ದಿನ ನಿಮ್ಮನ್ನು ಇಲ್ಲಿಂದ ಹೊರಹೊರಡಿಸಲಾಗುತ್ತದೆ.
ಆದರೆ ನಿಮಗೆ ಈ ಗಗನಚುಂಬಿಯಲ್ಲಿ ಮೋಹವಿದೆಯಾದ್ದರಿಂದ ನಿಸರ್ಗವು ನಿಮ್ಮ ವಿಷಯಕ್ಕೆ ಸ್ವಲ್ಪ ರಿಯಾಯಿತಿ ತೋರಿಸಬಹುದು. “ಸ್ವಾಮಿ ದುರ್ದೈವವಶಾತ್ ನೀವು ನಿಮ್ಮ ಈ ಮನುಷ್ಯ ದೇಹವನ್ನು ದುರುಪಯೋಗಪಡಿಸಿಕೊಂಡಿರಿ. ನೀವು ದೇವರನ್ನೂ ನಿಮ್ಮ ಸ್ವಂತ ಆತ್ಮವನ್ನೂ ಅಲಕ್ಷಿಸಿದಿರಿ. ಈ ಗಗನಚುಂಬಿ ಕಟ್ಟಡದಲ್ಲಿ ಎಂದೆಂದಿಗೂ ಜೀವಸಲು ಮಾತ್ರ ನೀವು ಬಯಸಿದಿರಿ. ಆಯಿತು. ನೀವು ಈ ಗಗನಚುಂಬಿಯಲ್ಲಿ ವಾಸಿಸುವುದನ್ನು ಮುಂದುವರೆಸಬಹುದು. ಆದರೆ ಒಂದು ಜಿರಲೆಯಾಗಿ ಮಾತ್ರ”.
ಈ ಸ್ವಾಭಾವಿಕ ಪ್ರಕ್ರಿಯೆಯನ್ನು ಯಾರು ತಡೆಯಬಲ್ಲರು?
ದೇಹಾಂತರ: ನೀವು ಈ ಭೌತ ಪ್ರಪಂಚದಲ್ಲಿದ್ದರೆ ನಿಮ್ಮ ಈ ಹೊತ್ತಿನ ದೇಹವನ್ನು ಬದಲಿಸಿ ಇನ್ನೊಂದು ದೇಹವನ್ನು ಧರಿಸಬೇಕು ಮತ್ತು ಹೇಗೆ ಆದರೂ ಜಿರಲೆಯ ದೇಹ ಕೂಡ ಒಂದು ದೇಹವೇ ಆಯಿತಲ್ಲ!
ಹೀಗೆ ಗಗನಚುಂಬಿ ಒಡೆಯನು ಅದೇ ಗಗನಚುಂಬಿಯಲ್ಲಿ ಒಂದು ಜಿರಲೆಯಾಗಬಹುದು. ಈಗ ನಾನು ದೊಡ್ಡ ಮಾಲೀಕ. ಮುಂದಿನ ಜನ್ಮದಲ್ಲಿ ಒಂದು ಜಿರಲೆ. ಈ ಪ್ರಕ್ರಿಯೆಯನ್ನು ನೀವು ತಡೆಯಬಲ್ಲಿರಾ? ನಿಮಗೇನು ಮನಸ್ಸಿಗೆ ಬರುತ್ತದೋ ಅದನ್ನು ನೀವು ಹೇಳಿ.
ಪ್ರಕೃತಿ ತನ್ನ ಮನಸ್ಸಿಗೆ ಬಂದಂತೆ ಮಾಡುತ್ತಾಳೆ. “ಒಳ್ಳೆಯದು ಸ್ವಾಮಿ. ಆಧ್ಯಾತ್ಮಿಕ ಜಗತ್ತಿಗೆ ಮರಳುವುದಕ್ಕೆ ಬದಲು ನಿಮ್ಮ ಗಗನಚುಂಬಿಯೇ ನಿಮಗೆ ಇಷ್ಟವಾಗುವ ಸ್ಥಳ. ಆಯಿತು. ನಿಮ್ಮ ಗಗನಚುಂಬಿಯನ್ನು ನೀವೇ ಇಟ್ಟುಕೊಳ್ಳಿ. ಆದರೆ ಅದರಲ್ಲಿ ಒಂದು ಜಿರಲೆಯಾಗಿ ಮಾತ್ರ ಬದುಕಿ.”

ಈ ಗಗನಚುಂಬಿಯನ್ನು ನಿರ್ಮಿಸಿದಾತ ಅದೆಷ್ಟು ಸಮಯವನ್ನು ಹಾಳುಮಾಡಿದ್ದಾನೆ! ತನ್ನ ಬದುಕನ್ನು ದೇವರ ಸಮಯವನ್ನು ಹಾಳುಮಾಡಿದ್ದಾನೆ! ತನ್ನ ಬದುಕನ್ನು ದೇವರ ಮೇಲೆ ಕೇಂದ್ರಿಕರಿಸುವುದು ಬಿಟ್ಟು ಗಾರೆಯ ಒಂದು ದೊಡ್ಡ ರಾಶಿಯ ಮೇಲೆ ಕೇಂದ್ರಕರಿಸಿದ್ದಾನೆ. ಆದರೆ ಈಗ ಕೈಸಾಲೆಯಲ್ಲಿನ ಭಾವಚಿತ್ರದಲ್ಲಿ ಅವನಿದ್ದಾನಾದರೂ ಅವನ ಜೀವ ದಿಟದಲ್ಲಿ ಶೌಚಗೃಹದಲ್ಲಿದೆ.
ಅವನು ಈಗ ಶೌಚಗೃಹದ ಒಂದು ಜಿರಲೆಯಾಗಿಬಿಟ್ಟಿದ್ದಾನೆ. ಇತ್ತ ಕೈಸಾಲೆಯಲ್ಲಿನ ಅವನ ಭಾವಚಿತ್ರವನ್ನು ಜನ ಪೂಜಿಸುತ್ತಿದ್ದಾರೆ. ಅತ್ತ ಅವನು ಶೌಚಗೃಹದಲ್ಲಿ ವಾಸಿಸುತ್ತಿದ್ದಾನೆ!
ಇದನ್ನು ಅಜ್ಞಾನ ಎನ್ನುತ್ತಾರೆ. ಇಂದಿನದು ಎಂಥ ದಾರಿತಪ್ಪಿಸುವ ನಾಗರಿಕತೆ. ಆದ್ದರಿಂದ ನಾವು-ಕೃಷ್ಣ ಪ್ರಜ್ಞಾ ಆಂದೋಲನದವರು- ಈ ಹಾದಿತಪ್ಪಿಸುವ ನಾಗಕರಿತೆಯಿಂದ ಜನರನ್ನು ಪಾರುಮಾಡಲು ಪ್ರಯತ್ನಿಸುತ್ತಿದ್ದೇವೆ. ಸ್ವಯಂ ನಾವೇ ಪರಿಪೂರ್ಣತೆ ಗಳಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ಪರಿಪೂರ್ಣವೂ ಆಧ್ಯಾತ್ಮಿಕವೂ ಆದ ಬದುಕಿನ ಪರಿಯನ್ನು ಇತರರಿಗೆ ಕಲಿಸಲೂ ನಾವು ಪ್ರಯತ್ನಶೀಲರಾಗಿದ್ದೇವೆ.
ಭಗವದ್ಗೀತೆಯಲ್ಲಿ ಕೃಷ್ಣನು ತನ್ನ ಬೋಧನೆಯನ್ನು ಈ ವಚನಗಳಿಂದ ಆರಂಭಿಸುತ್ತಾನೆ. “ನೀವು ನಿಮ್ಮ ಈಗಿನ ಭೌತ ಶರೀರವಲ್ಲ. ನಿಮಗೆ ಈ ಹಿಂದೆ ಬಹುತೆರನ ಭೌತ ಶರೀರಗಳು ಇದ್ದುವು. ನೀವು ಆ ದೇಹಗಳೊಳಗಿದ್ದ ಅಂತರಾತ್ಮ. ನೀವು ಆಧ್ಯಾತ್ಮಿಕ ಜೀವಿ. ನೀವೇನೆಂಬುದನ್ನು ಅರಿತುಕೊಳ್ಳಿ ಹಾಗೂ ನನ್ನೊಡನಿರಲು ಬನ್ನಿ.”
ಇಂದಿನ ಈ ನಾಗರಿಕತೆ ಪ್ರತಿಯೊಬ್ಬರಿಗೂ ಒಂದು ತಿಳಿವಳಿಕೆಯನ್ನು ನೀಡುತ್ತದೆ. ಆಧ್ಯಾತ್ಮಿಕ ಜ್ಞಾನದ ಪ್ರಶ್ನೆ ಇಲ್ಲಿ ಎಲ್ಲಿ ಬರುತ್ತದೆ? ಆತ್ಮಸಾಕ್ಷಾತ್ಕಾರ ಮಾಡಿಕೊಂಡು ಆಧ್ಯಾತ್ಮಿಕ ಲೋಕಕ್ಕೆ ಮರಳಲು ಅವಕಾಶ ಇಲ್ಲೆಲ್ಲಿದೆ? ಜನರೇನೋ ಕೆಲವು ಸಲ ಆಧ್ಯಾತ್ಮಿಕ ಬದುಕಿನ ಬಗೆಗೆ ಮಾತನಾಡಬಹುದು. ಆದರೆ ಅವರು ಈ ಹುಸಿಯಾದ, ದೇಹವೇ ಆತ್ಮವೆಂಬ ಕಲ್ಪನೆಯಲ್ಲಿ ಬದುಕಿದರೆ ಆಧ್ಯಾತ್ಮಿಕ ಜೀವನ, ಆಧ್ಯಾತ್ಮಿಕ ಸಾಕ್ಷಾತ್ಕಾರ ಹಾಗೂ ಆಧ್ಯಾತ್ಮಿಕ ಮೋಕ್ಷ ಮುಂತಾದ್ದನ್ನು ಕುರಿತ ಅವನ ಮಾತೆಲ್ಲಾ ನಿಷ್ಪ್ರಯೋಜಕ.
ಎಲ್ಲದಕ್ಕೂ ಮೊದಲು ವ್ಯಕ್ತಿಯು ಅಹಂ ಬ್ರಹ್ಮಾಸ್ಮಿ – “ನಾನು ಈ ಭೌತ ಶರೀರವಲ್ಲ. ನಾನೊಂದು ಆತ್ಮ” – ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಬಳಿಕ ಅಥಾತೋ ಬ್ರಹ್ಮಜಿಜ್ಞಾಸ – ಎಂಬುದನ್ನು ಅರಿತುಕೊಳ್ಳಬೇಕು. ಬ್ರಹ್ಮನ್ – ಆಧ್ಯಾತ್ಮಿಕ – ಆಗಿದ್ದಲ್ಲಿ ನನ್ನ ನೈಜ ಆಧ್ಯಾತ್ಮಿಕ ಸ್ವರೂಪ ಯಾವುದು? ಈ ತನಕ ನಾನು ದೇಹವೇ ಆತ್ಮವೆಂಬ ತಿಳಿವಳಿಕೆಯಲ್ಲೇ ಬದುಕು ನಡೆಸಿದ್ದೇನೆ.
ಆದರೆ ದಿಟದಲ್ಲಿ ನಾನೊಂದು ಆತ್ಮ, ಪರಮಾತ್ಮನ ಅವಿಚ್ಛಿನ್ನ ಭಾಗ ಎಂದಮೇಲೆ ಆಧ್ಯಾತ್ಮಕ ಜೀವಿಯೊಂದು ಹೇಗೆ ಬದುಕು ನಡೆಸಬೇಕು? ಈ ಜನ್ಮದಲ್ಲಿ ಹಾಗೂ ಮುಂದಿನದರಲ್ಲಿ ನನ್ನ ನೈಜ ಬದುಕು ಹೇಗಿರಬೇಕು?
ಆದ್ದರಿಂದ ನಾವು ಜನರಿಗೆ, “ಮಿತ್ರರೇ, “ಭಗವದ್ಗೀತೆ ಯಥಾರೂಪ” ಎನ್ನುವ ಗ್ರಂಥ ಓದಿ. ನಿಮಗೆ ಬೇಕಾದ ಮಾಹಿತಿಯೆಲ್ಲವೂ ಆ ಗ್ರಂಥದಲ್ಲಿ ದೊರೆಯುತ್ತದೆ” ಎಂದು ಹೇಳಿ ಅವರನ್ನು ಒಪ್ಪಿಸಬೇಕು. ಆ ಗ್ರಂಥದಲ್ಲಿ ಎಲ್ಲ ವಿವರಗಳು ಅವರಿಗೆ ಲಭಿಸುವುದು ಖಂಡಿತ.






Leave a Reply