ಕೊಲ್ಲುವ ನಾಗರಿಕತೆ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಭಕ್ತರ ನಡುವೆ
1974ರ ಮೇ 30 ರಂದು ರೋಂನಲ್ಲಿ ನಡೆದ ಸಂವಾದದ ಮುಂದುವರಿದ ಭಾಗ
.

ಶ್ರೀಲ ಪ್ರಭುಪಾದರು : ಆಧ್ಯಾತ್ಮಿಕ ಅರಿವಿಗಾಗಿ ಪ್ರಭುವಿನ ಭಕ್ತರತ್ತ ಸಾಗಲು ಜನರಿಗೆ ಇಷ್ಟವಿಲ್ಲದಿದ್ದರೆ ಏನು ಮಾಡುವುದು ಸಾಧ್ಯ? ಈ ಗುಬ್ಬಚ್ಚಿಯನ್ನು ನೋಡಿ. ಲೈಂಗಿಕ ಕ್ರಿಯೆ ಬೇಕೆನಿಸಿದರೆ ಅದಕ್ಕೆ ಅದು ಸದಾ ಲಭ್ಯ. ಯಾವುದೇ ಸಮಯದಲ್ಲಿ ಲೈಂಗಿಕ ಕ್ರಿಯೆ ಅಪೇಕ್ಷಿಸಿದರೆ ಅದು ಸಿದ್ಧವಾಗಿರುತ್ತದೆ. ಪಾರಿವಾಳಗಳಿಗೂ ಅಷ್ಟೆ. ಯಾವಾಗ ಬೇಕೆನಿಸಿದರೂ ಆಗ ಸಂಭೋಗಕ್ಕೆ ಲಭ್ಯ. ವಿಷಯಃ ಕಲು ಸರ್ವತಃ ಸ್ಯಾತ್‌ : ಈ ಲೌಕಿಕ ಲೋಕದೊಂದಿಗೆ ನಮಗಿರುವ ಏಕೈಕ ಆಸಕ್ತಿಯ ವಿಷಯ, ಲೌಕಿಕ ಇಂದ್ರಿಯ ತೃಪ್ತಿ. ವಿಶ್ವಾದ್ಯಂತ ಜನರು ತಮ್ಮ ದೈಹಿಕ ತೃಪ್ತಿಗಾಗಿ ಹೋರಾಟ ನಡೆಸುತ್ತಿದ್ದಾರೆ. “ನನಗೆ ಒಳ್ಳೆಯ ಆಹಾರ ಬೇಕು, ನನಗೆ ಒಳ್ಳೆಯ ನಿದ್ರೆ ಬೇಕು, ನನಗೆ ಒಳ್ಳೆಯ ಲೈಂಗಿಕ ಕ್ರಿಯೆ ಬೇಕು ಮತ್ತು ಬ್ಯಾಂಕಿನಲ್ಲಿನ ದೊಡ್ಡ ಮೊತ್ತ, ಸೈನಿಕರ, ಪ್ರಬಲ ಪೊಲೀಸರ, ಅಣ್ವಸ್ತ್ರಗಳಿಂದ ನಾನು ರಕ್ಷಿಸಲ್ಪಡಬೇಕು.” ಜಗತ್ತಿನ ಎಲ್ಲೆಡೆ ಹೀಗೇ ಇದೆ. ರಕ್ಷಣೆ ವಿಷಯವನ್ನೇ ತೆಗೆದುಕೊಳ್ಳಿ. ಈ ಮೂರ್ಖರಿಗೆ ಅರ್ಥವಾಗುವುದಿಲ್ಲ, “ಈ ಎಲ್ಲ ರಕ್ಷಣಾ ಕ್ರಮಗಳಿದ್ದರೂ, ಈ ಜನ್ಮದ ಅಂತ್ಯದಲ್ಲಿ ನಾನು ನನ್ನ ದೇಹವನ್ನು ಬದಲಿಸಿಕೊಳ್ಳಬೇಕು ಮತ್ತು ನೋವು ಅನುಭವಿಸುವುದು ಮುಂದುವರಿಯುತ್ತದೆ. ಅದೇ ಇಂದ್ರಿಯ ತೃಪ್ತಿ ಪುನಃ ಲಭ್ಯ, ಭಿನ್ನವಾಗಿ ಅಷ್ಟೆ. ಅದೇ ರೀತಿ ಸಂಕಷ್ಟಗಳೂ ಕೂಡ.”

ಈ ಪುಟ್ಟ ಇರುವೆಗಳನ್ನೇ ಗಮನಿಸಿ. ಅವುಗಳಿಗೆ ಅಮಲೆಂದರೆ ತುಂಬ ಇಷ್ಟ. ನಿಮಗದು ಗೊತ್ತೇ? “ಈ ಗಗನಚುಂಬಿಯ ಮೇಲೆ ಸಕ್ಕರೆಯ ಚೂರು ಇದೆ ಎಂದು ತಿಳಿದ ಕೂಡಲೇ ಅವು ಹೋಗುತ್ತವೆ (ನಗು). ಮದ್ಯವನ್ನು ಸಕ್ಕರೆ, ಕಾಕಂಬಿಯಿಂದ ಮಾಡಲಾಗುತ್ತದೆ. ಆದುದರಿಂದ ಸಕ್ಕರೆಯಲ್ಲಿ ಅಮಲಿನ ಶಕ್ತಿ ಇದೆ. ಈ ಕೋಣೆಯಲ್ಲಿ ನೀವು ಸಕ್ಕರೆ ಇಟ್ಟರೆ, ಅತಿ ಶೀಘ್ರದಲ್ಲಿ ಇರುವೆ ಸಾಲುಗಳನ್ನೇ ನೀವು ಇಲ್ಲಿ ನೋಡಬಹುದು. ಇರುವೆಗಳು ಮುತ್ತುತ್ತವೆ.”

ಆದುದರಿಂದ ಅಧ್ಯಯನ ಮಾಡಿ. ಮಾನವ ನಾರಿಕತೆ ಮತ್ತು ಇರುವೆ ನಾರಿಕತೆ, ನಾಯಿ ನಾಗರಿಕತೆ ಮಧ್ಯೆ ಏನಾದರೂ ವ್ಯತ್ಯಾಸವಿದೆಯೇ? ಯಾವ ವ್ಯತ್ಯಾಸವೂ ಇಲ್ಲ. ಇದು ಕೇವಲ ಹೊರಗಿನ ಆಕಾರದ ವಿಷಯವಷ್ಟೆ.

ಭಕ್ತ : ಹೌದು. ರವಿವಾರದ ಸಂತೋಷ ಕೂಟದಲ್ಲಿ ನಾವು ಸಾಮಾನ್ಯವಾಗಿ ಸಕ್ಕರೆ ಮಿಠಾಯಿ ಮಾಡುತ್ತೇವೆ. ಅಲ್ಲಿ ಸ್ವಲ್ಪ ಸಕ್ಕರೆ ದ್ರವ ಉಳಿದಿರುತ್ತದೆ. ಮರುದಿನ ನಾವು ಮುಳುಗಿದ ಇರುವೆಗಳನ್ನು ಅದರಲ್ಲಿ ನೋಡುತ್ತೇವೆ. ಏಕೆಂದರೆ ಸಕ್ಕರೆಗಾಗಿ ನುಗ್ಗಿ ಅವು ಆ ನೀರಿನಲ್ಲಿ ಮುಳುಗಿ ಸತ್ತಿರುತ್ತವೆ.

ಶ್ರೀಲ ಪ್ರಭುಪಾದರು : ವೈದಿಕ ಸಾಹಿತ್ಯವು ನಮಗೆ ಬೋಧಿಸುತ್ತದೆ, “ನನ್ನ ಪ್ರೀತಿಯ ಮಾನವ ಜೀವಿಗಳೇ, ದಯೆಯಿಟ್ಟು ಗಮನಿಸಿ : ಅನೇಕ ಜನ್ಮಗಳ ಅನಂತರ ನೀವು ಈ ಮಾನವ ರೂಪವನ್ನು ಪಡೆದಿರುವಿರಿ. ನೀವು ಜಲಚರಗಳ ಅನೇಕ ರೂಪಗಳನ್ನು ಅನುಭವಿಸಿದ್ದೀರಿ, 9 ಲಕ್ಷ ಜಾತಿಗಳು. ನೀವು ಹಕ್ಕಿಗಳ, ಮರಗಳ ಮತ್ತು ಗಿಡಗಳ ವಿವಿಧ ರೂಪಗಳನ್ನು ತಳೆದಿದ್ದೀರಿ, 20 ಲಕ್ಷ ಜಾತಿಗಳು. ಈ ಮಂದ ಗತಿಯ, ನೋವಿನ ವಿಕಾಸದಲ್ಲಿ ನೀವೆಷ್ಟು ಸಮಯ ಕಳೆದಿರುವಿರಿ ಎಂಬುವುದನ್ನು ಪರಿಶೀಲಿಸಿ. ಈಗ ನೀವು ಮಾನವ ರೂಪದ ಬದುಕಿಗೆ ಬಂದಿರುವಿರಿ. ಇದೂ ಕೂಡ ತಾತ್ಕಾಲಿಕವಾಗಿದ್ದರೂ ನೀವು ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸಬಹುದು. ನೀವು ನೋವಿನ ಈ ತಾತ್ಕಾಲಿಕ ಬದುಕಿನಿಂದ ಪರಮಾನಂದದ ಶಾಶ್ವತ ಲೋಕದ ಬದುಕಿಗೆ ವಿಕಸನ ಹೊಂದಬಹುದು. ಆದುದರಿಂದ, ಈ ಲೋಕದಲ್ಲಿ ನಿಮ್ಮ ಮುಂದಿನ ಸಾವಿಗೆ ಮೊದಲು ಆಧ್ಯಾತ್ಮಿಕ ಪರಿಪೂರ್ಣತೆಯ ನಿಪುಣ ವಿದ್ಯಾರ್ಥಿಯಾಗಿ ಮತ್ತು ಅದನ್ನು ಸಾಧಿಸಿ.”

ಭಕ್ತ : ಹಾಗಾದರೆ, “ನನ್ನ ಇಂದ್ರಿಯ ಸುಖದ ಗತಿ ಏನು?” ಎಂದು ಜನರು ಕೇಳಬಹುದು.

ಶ್ರೀಲ ಪ್ರಭುಪಾದರು : ಚಿಂತಿಸಬೇಡಿ. ವಿಷಯಃ ಖಲು ಸರ್ವತಃ ಸ್ಯಾತ್‌ : ಯಾವುದೇ ಜಾತಿಯ ಜನ್ಮದಲ್ಲಿ ನಿಮಗೆ ಇಂದ್ರಿಯ ಸುಖ ಲಭ್ಯ ಆದರೆ ಈ ಮಾನವ ರೂಪದ ಜನ್ಮವನ್ನು ನೀವು ಈ ಉನ್ನತ ಉದ್ದೇಶದೊಂದಿಗೆ ಕಳೆಯುವಿರಿ. ಇದನ್ನು ಇಂದ್ರಿಯ ಸುಖಕ್ಕಾಗಿಯೇ ಹಾಳು ಮಾಡಬೇಡಿ. ಈ ಇಂದ್ರಿಯ ತೃಪ್ತಿಯು ನಿಮಗೆ ನೀವು ಬೆಕ್ಕು ಅಥವಾ ನಾಯಿಯಾದರೂ ದೊರೆಯುತ್ತದೆ. ಆದರೆ ಬೆಕ್ಕು ಅಥವಾ ನಾಯಿಯ ದೇಹದಲ್ಲಿ ನಿಮಗೆ ಈ ಲೌಕಿಕ ಅಸ್ತಿತ್ವದಿಂದ ಮುಕ್ತಿ ದೊರೆಯುವ ಅವಕಾಶವಿಲ್ಲ. ಮಾನವ ಜೀವನದಲ್ಲಿ ತಮಗಿರುವ ಈ ವಿಶೇಷ ಅವಕಾಶವನ್ನು ಅರ್ಥಮಾಡಿಕೊಳ್ಳುವ ಜ್ಞಾನ ಈ ಆಧುನಿಕ ಮೂರ್ಖರಿಗಿಲ್ಲ. ಆದುದರಿಂದ ನಾವು ಈ ಶಿಕ್ಷಣ ನೀಡಬೇಕು. ಈ ಅಲೌಕಿಕ ಪುಸ್ತಕಗಳನ್ನು ಅವರ ಶಾಲಾ ಕಾಲೇಜುಗಳಲ್ಲಿ ಓದುವಂತೆ ನಾವು ಅವರ ಮನವೊಲಿಸಬೇಕು. ಇಲ್ಲವಾದರೆ, ಈ ಮೂರ್ಖರಿಗೆ ಈ ಅಲೌಕಿಕ ಅರಿವನ್ನು ಓದಲು ಪುಸ್ತಕಗಳೇ ಇಲ್ಲ. ಅವರ ಬಳಿ ಫ್ರಾಯ್ಡ್‌ನ ಲೈಂಗಿಕ ಸಿದ್ಧಾಂತ ಮತ್ತು ಡಾರ್ವಿನ್ನನ ಮಂಗ ಸಿದ್ಧಾಂತ ಮಾತ್ರ ಇವೆ. ಎಲ್ಲಾ ಮೂರ್ಖತನ. ಅವರು ಈ ಅಲೌಕಿಕವಾದ ಪುಸ್ತಕಗಳನ್ನು ಓದಲಿ.

ಭಕ್ತ : ಸಾಮಾನ್ಯ ಜನರು ಉತ್ತಮ ಸುಖದ ಭರವಸೆ ನೀಡುವ ಸಿದ್ಧಾಂತಗಳನ್ನು ಸ್ವೀಕರಿಸುತ್ತಿದ್ದಾರೆ. “ನಿಮಗೆ ಉತ್ತಮ ಇಂದ್ರಿಯ ಸುಖ ಸಿಗುತ್ತದೆ” ಎಂದು ಯಾರಾದರೂ ಭರವಸೆ ನೀಡುವುದನ್ನು ಕೇಳಲು ಜನರು ಇಷ್ಟಪಡುತ್ತಾರೆ.

ಶ್ರೀಲ ಪ್ರಭುಪಾದರು : ರಾಜಕಾರಣಿಗಳು, “ನೀವು ಈ ಸಿದ್ಧಾಂತ, ಆ ಸಿದ್ಧಾಂತವನ್ನು ಸ್ವೀಕರಿಸಿ” ಎಂದು ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ಯಾರಿಗೂ ಕೂಡ ನಿಜವಾದ ಸುಖ ಏನೆಂದು ಗೊತ್ತಿಲ್ಲ. ನ ತೇ ವಿದುಃ ಸ್ವಾರ್ಥ ಗತಿಂ ಹಿ ವಿಷ್ಣುಂ ದುರಾಶಯಾ ಯೇ ಬಹಿರ್‌ ಅರ್ಥ ಮಾನಿನಃ – ಜನರು ಇಂದ್ರಿಯ ಸುಖದಿಂದ, ಲೌಕಿಕ ದೇಹದ ಸುಖದಿಂದ ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ ದುರಾಶಯಾ : ಇದು ಎಂದೂ ನೆರವೇರದ ಆಶಯವಾಗಿದೆ. ಆಶಯಾ ಎಂದರೆ “ಅಪೇಕ್ಷೆ.” ದುರ್‌ ಎಂದರೆ “ತುಂಬ ಕಷ್ಟ.” ಅದಾಗುವುದಿಲ್ಲ.

ಕೃಷ್ಣ ಪ್ರಜ್ಞೆಯು ಸೂಕ್ತ ಮಾರ್ಗದಲ್ಲಿ ನಿಮಗೆ ಎಲ್ಲವನ್ನೂ ನೀಡುತ್ತದೆ. ಇದರಿಂದ ನಿಮಗೆ ನಿಮ್ಮ ಸಮಯ ಉಳಿತಾಯವಾಗುತ್ತದೆ ಮತ್ತು ಲೌಕಿಕ ಸುಖದಲ್ಲಿ ಕಾಲಹರಣಮಾಡಬೇಕಾಗಿಲ್ಲ. ಇದರಿಂದ ನೀವು ಆಧ್ಯಾತ್ಮಿಕ ಜ್ಞಾನದಲ್ಲಿ ಮುನ್ನಡೆಯಬಹುದು. ಅದೇ ಅಗತ್ಯವಾಗಿರುವುದು. “ತಿನ್ನುವುದನ್ನು ನಿಲ್ಲಿಸಿ” ಎಂದು ನಾವು ಹೇಳುವುದಿಲ್ಲ. ನೀವು ಸೇವಿಸಿ. ಸ್ವಲ್ಪ ಕೃಷ್ಣನ ಪ್ರಸಾದವನ್ನು ತೆಗೆದುಕೊಳ್ಳಿ. “ನಿದ್ರಿಸಬೇಡಿ” ಎಂದು ನಾವು ಹೇಳುವುದಿಲ್ಲ. ನೀವು ನಿದ್ರಿಸಿ. ಆದರೆ ಮುಂಜಾನೆಯೇ ಎದ್ದು ಹರೇ ಕೃಷ್ಣ ಮಂತ್ರವನ್ನು ಜಪಿಸಿ. ಇದು ನಮ್ಮ ಸಿದ್ಧಾಂತ. ಖಂಡಿತವಾಗಿಯೂ ನಾವು ಜನರಿಗೆ ತಿನ್ನಲು, ನಿದ್ರಿಸಲು ಮತ್ತು ಲೈಂಗಿಕ ಕ್ರಿಯೆಗೆ ಅವಕಾಶ ನೀಡುತ್ತೇವೆ. “ಲೈಂಗಿಕ ಜೀವನ ಇಲ್ಲ” ಎಂದು ನಾವು ಹೇಳುವುದಿಲ್ಲ. ನಿಮಗೆ ಲೈಂಗಿಕ ಜೀವನ ಇರುತ್ತದೆ. ಅಧಿಕೃತ ಪತ್ನಿಯನ್ನು ಪಡೆದುಕೊಳ್ಳಿ ಮತ್ತು ಶಾಂತಿಯುತವಾಗಿ ಬಾಳಿ. ರಕ್ಷಣೆ ಕೂಡ ನಮ್ಮಲ್ಲಿ ಉಂಟು. “ನೀವು ಇವೆಲ್ಲವನ್ನೂ ಬಿಟ್ಟುಬಿಡಬೇಕು” ಎಂದು ನಾವು ಎಂದಿಗೂ ಹೇಳುವುದಿಲ್ಲ. ಅದು ನಮ್ಮ ತತ್ತ್ವವಲ್ಲ. ಆದರೆ, ಅದೇ ವೇಳೆ, ನಿಮಗೆ ಎಷ್ಟು ಅಗತ್ಯವೋ ಅಷ್ಟೇ ಲೌಕಿಕ ಸುಖವನ್ನು ಪಡೆಯಿರಿ. ಅಗತ್ಯಕ್ಕಿಂತ ಹೆಚ್ಚು ಬೇಡ. ನಿಮ್ಮ ಉಳಿದ ಸಮಯವನ್ನು ಆಧ್ಯಾತ್ಮಿಕ ಮುನ್ನಡೆಗಾಗಿ ಉಳಿಸಿಕೊಳ್ಳಿ.

ದುರದೃಷ್ಟವಶಾತ್‌, ಜನರು ಈಗ ಸುಮ್ಮನೆ ತಿನ್ನುವುದು, ಮಲಗುವುದು, ಲೈಂಗಿಕ ಕ್ರಿಯೆ ಮತ್ತು ರಕ್ಷಣೆಯಲ್ಲಿಯೇ ತೊಡಗಿದ್ದಾರೆ. ಅವರಿಗೆ ಕೃಷ್ಣ ಪ್ರಜ್ಞೆಗಾಗಿ ಸಮಯವಿಲ್ಲ. ಅವರಿಗೆ ಆಧ್ಯಾತ್ಮಿಕ ಜ್ಞಾನಕ್ಕಾಗಿ ಸಮಯವಿಲ್ಲ. ಈ ಖಂಡನಾರ್ಹ ನಾಗರಿಕತೆಯನ್ನು ನಿಲ್ಲಿಸಬೇಕು. ಇದು ಕೊಲ್ಲುವ ನಾಗರಿಕತೆ – ಸಂಹರಿಸುವ ನಾಗರಿಕತೆ. ಈ ಲೌಕಿಕ ಬಂಧನದಿಂದ ಹೊರಬರುವ ಅವಕಾಶವನ್ನು ಮಾನವ ಜೀವಿಗೆ ನೀಡಲಾಗಿದೆ. ಆದರೆ ಈ ವಿಶೇಷ ಮಾನವೀಯ ಆಯ್ಕೆಯನ್ನು ತೋರಲು ಅವರಿಗೆ ಅವಕಾಶ ನೀಡಿಲ್ಲ. ಬದಲಿಗೆ, ಅವರು ಇಂದ್ರಿಯ ಸುಖದ ಪ್ರಾಣಿ ಬದುಕಿನಲ್ಲಿಯೇ ಹೆಚ್ಚು ತೊಡಗಿದ್ದಾರೆ. ಈ ಕೊಲ್ಲುವ ನಾಗರಿಕತೆಯು ಮಾನವ ಜೀವಿಗಳನ್ನು ಪ್ರಾಣಿ ಜಾತಿಯಲ್ಲಿ ಪುನರಪಿ ಜನನ, ಮರಣಕ್ಕೆ ತಳ್ಳುತ್ತಿದೆ. ಆದರೆ ತ್ಯಾಗ ಮತ್ತು ಆಧ್ಯಾತ್ಮಿಕ ಜ್ಞಾನದ ಕೃಷ್ಣ ಪ್ರಜ್ಞೆಯ ವಿಧಾನದಲ್ಲಿ ಅನೇಕ ಜನರು ಪರಿಶುದ್ಧಗೊಂಡಿದ್ದಾರೆ ಮತ್ತು ಮನೆಗೆ, ಭಗವದ್ಧಾಮಕ್ಕೆ, ಆಧ್ಯಾತ್ಮಿಕ ಲೋಕಕ್ಕೆ ಹಿಂದಿರುಗಿದ್ದಾರೆ.

ಈ ಎಲ್ಲ ಮಾಹಿತಿಗಳೂ ಲಭ್ಯ. ಆದರೆ ಜನರು ಅರಿತಿಲ್ಲ. ಆದುದರಿಂದ ಅವರಿಗೆ ಶಿಕ್ಷಣ ನೀಡುವುದೇ ಕೃಷ್ಣ ಪ್ರಜ್ಞಾ ಆಂದೋಲನದ ಉದ್ದೇಶವಾಗಿದೆ. ಅಷ್ಟೇ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi