ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು, ನ್ಯೂಜಿಲೆಂಡ್‌ನ
ಆಕ್ಲೆಂಡಿನ ಒಂದು ಕಲಾ ಚಿತ್ರಶಾಲೆಯಲ್ಲಿ 1972ರ ಫೆಬ್ರವರಿಯಲ್ಲಿ ನೀಡಿದ ಉಪನ್ಯಾಸ
ಮಹನೀಯರೆ ಮತ್ತು ಮಹಿಳೆಯರೆ, ತಾವೆಲ್ಲರೂ ಇಲ್ಲಿಗೆ ಆಗಮಿಸಿದ್ದಕ್ಕೆ ಮತ್ತು ಶ್ರೇಷ್ಠ ಕಲಾವಿದರನ್ನು ಕುರಿತು ಮಾತನಾಡಲು ನಮಗೆ ಅವಕಾಶ ನೀಡಿದ್ದಕ್ಕೆ ನಿಮಗೆಲ್ಲ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕೃಷ್ಣನು ಎಂತಹ ಮಹಾನ್ ಕಲಾವಿದ ಎಂದು ವೇದಗಳು ಬಣ್ಣಿಸುತ್ತವೆ: ನ ತಸ್ಯ ಕಾರ್ಯಂ ಕರಣಂ ಚ ವಿದ್ಯತೇ ನ ತತ್ ಸಮಶ್ಚಾಭ್ಯಧಿಕಃ ಚ ದೃಶ್ಯತೇ ದೇವೋತ್ತಮ ಪರಮ ಪುರುಷನಿಗಿಂತ ಶ್ರೇಷ್ಠರಾದವರು ಅಥವಾ ಅವನಿಗೆ ಸಮಾನರಾದವರು ಯಾರನ್ನೂ ಕಾಣಲಾಗದು. ಅವನೇ ಶ್ರೇಷ್ಠ ಕಲಾವಿದನಾಗಿದ್ದರೂ ಅವನೇ ಯಾವ ಕೆಲಸವನ್ನೂ ಸ್ವತಃ ಮಾಡಬೇಕಾಗಿಲ್ಲ.
ಈ ಜಗತ್ತಿನಲ್ಲಿ ನಮಗಿಂತ ಕಡಮೆಯಾಗಿರುವವರು, ನಮಗೆ ಸಮಾನವಾಗಿರುವವರು ಮತ್ತು ನಮಗಿಂತ ಅಧಿಕವಾಗಿರುವವರು ಯಾರೋ ಇದ್ದಾರೆಂದು ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಅದು ನಮ್ಮ ಅನುಭವ. ನೀವು ಎಷ್ಟೇ ಮಹಾನ್ ಆಗಿರಲಿ ನಿಮಗೆ ಸಮಾನವಾಗಿರುವವರು ಮತ್ತು ನಿಮಗಿಂತ ಅಧಿಕವಾಗಿರುವವರು ಯಾರಾದರೂ ಇರುತ್ತಾರೆ ಎನ್ನುವುದನ್ನು ನೀವು ಕಂಡುಕೊಳ್ಳುತ್ತೀರಿ. ಆದರೆ ದೇವೋತ್ತಮ ಪರಮ ಪುರುಷನಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಸಂಶೋಧನೆ ಮತ್ತು ಪ್ರಯೋಗದಿಂದ ಮಹಾಮುನಿಗಳು ನಿರ್ಣಯಕ್ಕೆ ಬಂದಿರುವಂತೆ, ಅವನಿಗೆ ಸಮಾನರಾದವರು ಅಥವಾ ಅಧಿಕರಾದವರು ಯಾರೂ ಇಲ್ಲ.

ದೇವರು ಎಷ್ಟು ಮಹಾನ್ ಎಂದರೆ ಅವನು ಏನೂ ಮಾಡಬೇಕಾಗಿಲ್ಲ. ಯಾವ ಕರ್ತವ್ಯವನ್ನೂ ಅವನು ಮಾಡಬೇಕಾಗಿಲ್ಲ: (ನ ತಸ್ಯ ಕಾರ್ಯಂ ಕರಣಂ ಚ ವಿದ್ಯತೇ). ಏಕೆ? ಪರಾಸ್ಯ ಶಕ್ತಿಃ ವಿವಿಧೈವ ಶ್ರೂಯತೇ ಅವನ ಶಕ್ತಿಗಳು ನಾನಾ ಬಗೆಯದಾಗಿವೆ. ಅವು ಅವನ ಇಚ್ಛೆಯಂತೆ ತಮ್ಮಷ್ಟಕ್ಕೆ ತಾವೇ ಕೆಲಸ ಮಾಡುತ್ತವೆ (ಸ್ವಾಭಾವಿಕೀ ಜ್ಞಾನ ಬಲ ಕ್ರಿಯಾಚ). ನೀವು ಒಬ್ಬರು ಕಲಾವಿದರು ಎಂದಿಟ್ಟುಕೊಳ್ಳಿ. ಒಂದು ಸುಂದರವಾದ ಗುಲಾಬಿಯ ಚಿತ್ರವನ್ನು ನೀವು ಚಿತ್ರಿಸಬೇಕೆಂದರೆ ನಿಮ್ಮ ಕುಂಚವನ್ನು ತೆಗೆದುಕೊಳ್ಳಬೇಕು, ವರ್ಣಫಲಕದಲ್ಲಿ ಬಣ್ಣಗಳನ್ನು ಮಿಶ್ರಣ ಮಾಡಿಕೊಳ್ಳಬೇಕು ಮತ್ತು ಚಿತ್ರವನ್ನು ಸುಂದರವಾಗಿ ಮಾಡಲು ನಿಮ್ಮ ತಲೆಯನ್ನು ಕೆಡಿಸಿಕೊಳ್ಳಬೇಕು. ಆದರೆ ತೋಟದಲ್ಲಿ ಕೇವಲ ಒಂದು ಗುಲಾಬಿಯಲ್ಲ ಸಾವಿರಾರು ಗುಲಾಬಿಗಳು ಅರಳಿ ನಿಂತಿರುವುದನ್ನು ನೀವು ನೋಡಬಹುದು. ಅವುಗಳನ್ನು ಪ್ರಕೃತಿಯು ಅತ್ಯಂತ ಕಲಾತ್ಮಕವಾಗಿ “ಚಿತ್ರಿಸಿದೆ”.
ಆದರೆ ನಾವು ವಿಷಯದ ಇನ್ನೂ ಆಳಕ್ಕೆ ಇಳಿದು ನೋಡಬೇಕು. ಪ್ರಕೃತಿ ಎಂದರೇನು? ಪ್ರಕೃತಿಯು ಒಂದು ಕಾರ್ಯಶೀಲವಾದ ಉಪಕರಣ, ಅಷ್ಟೇ – ಒಂದು ಶಕ್ತಿ. ಯಾವುದೋ ಒಂದು ಶಕ್ತಿಯು ಕೆಲಸ ಮಾಡದೆ ಮೊಗ್ಗಿನಿಂದ ಗುಲಾಬಿಯು ಅಷ್ಟು ಸುಂದರವಾಗಿ ಹೇಗೆ ಅರಳುತ್ತದೆ? ಯಾವುದೋ ಒಂದು ಶಕ್ತಿಯು ಕೆಲಸ ಮಾಡುತ್ತಿರಬೇಕು. ಆ ಶಕ್ತಿಯೇ ಕೃಷ್ಣನ ಶಕ್ತಿ. ಆದರೆ ಅದು ಎಷ್ಟು ಸೂಕ್ಷ್ಮವಾಗಿ ಮತ್ತು ಕ್ಷಿಪ್ರವಾಗಿ ಕೆಲಸ ಮಾಡುತ್ತದೆಂದರೆ ಅದು ಹೇಗೆ ಕೆಲಸ ಮಾಡುತ್ತದೆಂದು ನಮಗೆ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
ಐಹಿಕ ಶಕ್ತಿಗಳು ತಮ್ಮಷ್ಟಕ್ಕೆ ತಾವೇ ಕೆಲಸ ಮಾಡುತ್ತಿರುವಂತೆ ತೋರುತ್ತವೆ. ಆದರೆ ವಾಸ್ತವದಲ್ಲಿ ಅವುಗಳ ಹಿಂದೆ ಒಂದು ಮಿದುಳು ಇದೆ. ನೀವು ಒಂದು ಚಿತ್ರವನ್ನು ರಚಿಸುತ್ತಿರುವಾಗ ನೀವು ಕೆಲಸ ಮಾಡುತ್ತಿರುವುದನ್ನು ಪ್ರತಿಯೊಬ್ಬರೂ ನೋಡಬಹುದು. ಅದೇ ರೀತಿಯಲ್ಲಿ ನಿಜವಾದ ಗುಲಾಬಿಯ “ಚಿತ್ರಣ”ವು ಕೂಡ ಅನೇಕ ಶಕ್ತಿಗಳ ಕಾರ್ಯವಾಗಿದೆ. ಗುಲಾಬಿಯು ತನ್ನಷ್ಟಕ್ಕೆ ತಾನೇ ಸೃಷ್ಟಿಯಾಯಿತು ಎಂದು ಭಾವಿಸಬೇಡಿ. ಇಲ್ಲ. ಯಾವುದೂ ತನ್ನಷ್ಟಕ್ಕೆ ತಾನೇ ಸೃಷ್ಟಿಯಾಗಿಲ್ಲ. ಪರಮ ಪ್ರಭುವಿನ ಶಕ್ತಿಯಿಂದ ಗುಲಾಬಿಯು ಸೃಷ್ಟಿಯಾಗಿದೆ. ಆದರೆ ಈ ಶಕ್ತಿಯು ಎಷ್ಟು ಸೂಕ್ಷ್ಮವೂ ಕಲಾತ್ಮಕವೂ ಆಗಿದೆಯೆಂದರೆ, ಇರುಳು ಕಳೆದು ಬೆಳಗಾಗುವುದರಲ್ಲಿ ಒಂದು ಸುಂದರ ಹೂವು ಅರಳಿರುತ್ತದೆ.

ಆದ್ದರಿಂದ ಕೃಷ್ಣನು ಒಬ್ಬ ಮಹಾನ್ ಕಲಾವಿದ. ವಿದ್ಯುನ್ಮಾನ ಯುಗದ ಇಂದಿನ ದಿನಗಳಲ್ಲಿ ವಿಜ್ಞಾನಿಯು ಒಂದು ಗುಂಡಿಯನ್ನು ಒತ್ತುತ್ತಾನಷ್ಟೆ. ಅವನ ಯಂತ್ರವು ಪರಿಪೂರ್ಣವಾಗಿ ಕೆಲಸ ಮಾಡುತ್ತದೆ. ಅಥವಾ ವಿಮಾನದ ಒಬ್ಬ ಚಾಲಕನು ಕೇವಲ ಒಂದು ಗುಂಡಿಯನ್ನು ಒತ್ತುತ್ತಾನೆ, ಒಂದು ಬೃಹತ್ ಯಂತ್ರವು ಒಂದು ಪುಟ್ಟ ನಗರದ ಹಾಗೆ ಆಕಾಶದಲ್ಲಿ ಹಾರುತ್ತದೆ. ಈ ಜಗತ್ತಿನ ಸಾಮಾನ್ಯ ಜನರು ಕೇವಲ ಕೆಲವು ಗುಂಡಿಗಳನ್ನು ಒತ್ತುವುದರಿಂದಲೇ ಇಷ್ಟು ಅದ್ಭುತವಾದ ಕೆಲಸವನ್ನು ಮಾಡಲು ಸಾಧ್ಯವಾಗುವುದಾದರೆ, ದೇವರ ಕಾರ್ಯ ಸಾಮರ್ಥ್ಯ ಎಷ್ಟೆಲ್ಲ ಮಹಾನ್ ಆಗಿರಬಹುದು? ಸಾಮಾನ್ಯ ಕಲಾವಿದರು ಅಥವಾ ವಿಜ್ಞಾನಿಗಳ ಮಿದುಳಿಗಿಂತ ಅವನ ಮಿದುಳು ಎಷ್ಟು ಫಲವತ್ತಾಗಿರಬಹುದು! ಕೇವಲ ಅವನ ಇಚ್ಛೆಯಂತೆ – “ಸೃಷ್ಟಿಯುಂಟಾಗಲಿ”- ಪ್ರತಿಯೊಂದೂ ಕೂಡಲೇ ಪ್ರಕಟವಾಗುತ್ತದೆ. ಆದ್ದರಿಂದ ಕೃಷ್ಣನು ಶ್ರೇಷ್ಠ ಕಲಾವಿದ.
ಕೃಷ್ಣನ ಕಲಾತ್ಮಕ ಸಾಮರ್ಥ್ಯಕ್ಕೆ ಮಿತಿಯೆಂಬುದೇ ಇಲ್ಲ. ಏಕೆಂದರೆ ಸಕಲ ಸೃಷ್ಟಿಗೂ ಕೃಷ್ಣನೇ ಬೀಜ. (ಬೀಜಂ ಮಾಂ ಸರ್ವ ಭೂತಾನಾಮ್). ನೀವೆಲ್ಲರೂ ಆಲದ ಮರವನ್ನು ನೋಡಿರುತ್ತೀರಿ. ಒಂದು ಸಣ್ಣ ಬೀಜದಿಂದ ಅದು ಬೆಳೆಯುತ್ತದೆ. ಈ ಚಿಕ್ಕ ಬೀಜವು ಎಷ್ಟೊಂದು ಅಂತರ್ಗತ ಸಾಮರ್ಥ್ಯವನ್ನು ಹೊಂದಿರುತ್ತದೆಂದರೆ ಒಂದು ಫಲವತ್ತಾದ ಸ್ಥಳದಲ್ಲಿ ಅದನ್ನು ನೆಟ್ಟು, ನೀರೆರೆದರೆ, ಒಂದು ದಿನ ಅದೊಂದು ದೊಡ್ಡ ಆಲದ ಮರ ಆಗುತ್ತದೆ. ಹಾಗಾದರೆ ಆ ಚಿಕ್ಕ ಬೀಜದಲ್ಲಿ ಅಂತರ್ಗತವಾಗಿದ್ದ ಸಾಮರ್ಥ್ಯಗಳು ಯಾವುವು, ಯಾವ ಕಲಾತ್ಮಕ ಮತ್ತು ವೈಜ್ಞಾನಿಕ ಏರ್ಪಾಡುಗಳು ಆ ಪುಟ್ಟ ಬೀಜದಲ್ಲಿದ್ದು ದೊಡ್ಡ ಆಲದ ಮರವಾಗಿ ಬೆಳೆಯಲು ಆ ಬೀಜಕ್ಕೆ ಅವಕಾಶ ಕೊಟ್ಟವು? ಅಲ್ಲದೆ ಆ ಆಲದ ಮರದಲ್ಲಿ ಸಹಸ್ರಾರು ಹಣ್ಣುಗಳು ಇವೆ ಮತ್ತು ಪ್ರತಿಯೊಂದು ಹಣ್ಣಿನಲ್ಲೂ ಸಾವಿರಾರು ಬೀಜಗಳಿವೆ ಮತ್ತು ಪ್ರತಿಯೊಂದು ಬೀಜದಲ್ಲೂ ಇನ್ನೊಂದು ಮರವಾಗುವ ಅಂತರ್ಗತ ಸಾಮರ್ಥ್ಯವಿದೆ. ಈ ರೀತಿಯಲ್ಲಿ ಸೃಷ್ಟಿ ಮಾಡಬಲ್ಲ ವಿಜ್ಞಾನಿ ಎಲ್ಲಿದ್ದಾನೆ? ಆಲದ ಮರದಷ್ಟು ಹಿತವಾದ ಕಲಾಕೃತಿಯನ್ನು ಸೃಷ್ಟಿಸಬಲ್ಲಂತಹ ಕಲಾವಿದ ಈ ಐಹಿಕ ಜಗತ್ತಿನಲ್ಲಿ ಎಲ್ಲಿದ್ದಾನೆ? ಈ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.

ವೇದಾಂತ ಸೂತ್ರದ ಮೊದಲನೆಯ ಸೂತ್ರವೇ ಅಥಾತೋ ಬ್ರಹ್ಮ ಜಿಜ್ಞಾಸಾ ಎಂಬುದಾಗಿದೆ: “ಈ ಮಾನವ ಜನ್ಮದಲ್ಲಿ ಒಬ್ಬ ವ್ಯಕ್ತಿಯು ಪರಮ ಸತ್ಯವನ್ನು ಕುರಿತು ಜಿಜ್ಞಾಸೆ ಮಾಡಬೇಕು.” ಆದ್ದರಿಂದ ಜೀವಿಯು ಈ ಪ್ರಶ್ನೆಗಳನ್ನು ಜಾಗರೂಕವಾಗಿ ಅಧ್ಯಯನ ಮಾಡಬೇಕು. ತನ್ನಷ್ಟಕ್ಕೆ ತಾನೆ ದೊಡ್ಡ ಆಲದ ಮರವಾಗಿ ಬೆಳೆಯುವಂತಹ ಒಂದು ಯಂತ್ರವನ್ನು ನೀವು ತಯಾರಿಸಲಾರಿರಿ. ಆದ್ದರಿಂದ ಪ್ರಕೃತಿಯ ಹಿನ್ನೆಲೆಯಲ್ಲಿ ಒಂದು ದೊಡ್ಡ ಕಲಾತ್ಮಕವಾದ ಮಿದುಳು, ಒಂದು ಮಹಾನ್ ವೈಜ್ಞಾನಿಕ ಮಿದುಳು ಇರಬೇಕು ಎಂದು ನೀವು ಭಾವಿಸುವುದಿಲ್ಲವೇ? “ಪ್ರಕೃತಿಯು ಕೆಲಸ ಮಾಡುತ್ತದೆ” ಎಂದಷ್ಟೇ ನೀವು ಹೇಳಿದರೆ ಅದು ಸೂಕ್ತವಾದ ವಿವರಣೆಯಾಗುವುದಿಲ್ಲ.
ವೇದಾಂತ ಸೂತ್ರದ ಎರಡನೆಯ ಸೂತ್ರವು ಜನ್ಮಾದಿ ಅಸ್ಯ ಯತಃ – “ಪರಮ ಸತ್ಯನಿಂದಲೇ ಎಲ್ಲವೂ ಸೃಷ್ಟಿಯಾಗಿದೆ.” ನಾವು ನಮ್ಮ ದೃಷ್ಟಿಯನ್ನು ಚಿಕ್ಕ ಸಂಗತಿಗಳಿಂದ ಮಹಾನ್ ಸಂಗತಿಗಳ ಕಡೆಗೆ ವಿಸ್ತರಿಸಿಕೊಳ್ಳಬೇಕು. ಈಗ ನಾವು ಒಂದು ಪುಟ್ಟ ಯಂತ್ರ ಆಕಾಶದಲ್ಲಿ ಹಾರಾಡುತ್ತಿರುವುದನ್ನು ನೋಡಿದರೆ ನಿಬ್ಬೆರಗಾಗುತ್ತೇವೆ. ಅದು ಚಂದ್ರನ ಕಡೆಗೆ ಹಾರುತ್ತಿದೆ. ನಾವು ವಿಜ್ಞಾನಿಗಳಿಗೆ ಎಲ್ಲ ಬಗೆಯ ಪ್ರಶಂಸೆಗಳನ್ನೂ ಸಲ್ಲಿಸುತ್ತೇವೆ. ವಿಜ್ಞಾನಿಗಳು ಪಂಥಾಹ್ವಾನ ನೀಡುತ್ತಾರೆ, “ಎಲ್ಲಿದ್ದಾರೆ ದೇವರು? ವಿಜ್ಞಾನವೇ ಸರ್ವಸ್ವ.”
ಆದರೆ ನೀವು ಕೊಂಚ ಬುದ್ಧಿವಂತರಾಗಿದ್ದರೆ ಈ ಕೃತಕ ಯಂತ್ರವನ್ನು ಲಕ್ಷಾಂತರ, ಕೋಟ್ಯಂತರ ಗ್ರಹಗಳು ಮತ್ತು ನಕ್ಷತ್ರಗಳೊಡನೆ ಹೋಲಿಸುತ್ತೀರಿ. ಈ ಪುಟ್ಟ ಭೂಮಿ ಎಂಬ ಗ್ರಹದ ಮೇಲೆಯೇ ಅನೇಕ ಸಾಗರಗಳು, ಪರ್ವತಗಳು, ಗಗನಚುಂಬಿಗಳು ಇವೆ. ಆದರೆ ಭೂಮಿಯ ಆಚೆಗೆ ಕೆಲವು ಮಿಲಿಯನ್ ಮೈಲಿಗಳಷ್ಟು ದೂರ ಹೋಗಿ ನೀವು ನೋಡಿದರೆ, ಆಕಾಶದಲ್ಲಿರುವ ಒಂದು ಚಿಕ್ಕ ಚುಕ್ಕೆಯಂತೆ ಅದು ನಿಮಗೆ ಕಾಣಿಸುತ್ತದೆಯಷ್ಟೆ . ಈ ರೀತಿ ಹತ್ತಿಯ ಕಣಗಳಂತೆ ಕೋಟ್ಯಂತರ ಗ್ರಹಗಳು ಆಕಾಶದಲ್ಲಿ ತೇಲುತ್ತಿವೆ. ಆದ್ದರಿಂದ ಒಂದು ಕೃತಕ ಯಂತ್ರವನ್ನು ತಯಾರಿಸಿದ ವಿಜ್ಞಾನಿಗಳಿಗೆ ಎಷ್ಟೆಲ್ಲ ಪ್ರಶಂಸೆಯನ್ನು ಸಲ್ಲಿಸುವ, ನಾವು ಈ ಬ್ರಹ್ಮಾಂಡದ ಏರ್ಪಾಡನ್ನು ನಿರ್ಮಿಸಿದ ವ್ಯಕ್ತಿಗೆ ಎಷ್ಟು ಪ್ರಶಂಸೆಯನ್ನು ಸಲ್ಲಿಸಬೇಕು? ಇದೇ ಕೃಷ್ಣಪ್ರಜ್ಞೆ – ಮಹಾನ್ ಕಲಾವಿದ ಮತ್ತು ಮಹಾನ್ ವಿಜ್ಞಾನಿಯನ್ನು ಮೆಚ್ಚುವ ಕ್ರಿಯೆ.

ನಾವು ಅನೇಕ ಜನ ಕಲಾವಿದರನ್ನು ಮೆಚ್ಚಬಹುದು. ಆದರೆ ಕಲಾವಿದರಲ್ಲೆಲ್ಲ ಶ್ರೇಷ್ಠನಾದ ಕೃಷ್ಣನನ್ನು ನಾವು ಮೆಚ್ಚದೆ ಹೋದರೆ ನಮ್ಮ ಜೀವನವೇ ವ್ಯರ್ಥವಾಗುತ್ತದೆ. ಅಂತಹ ಮೆಚ್ಚುಗೆಯನ್ನು ನಾವು ಬ್ರಹ್ಮ ಸಂಹಿತೆಯಲ್ಲಿ, ಈ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನ ಪ್ರಾರ್ಥನೆಯಲ್ಲಿ ಕಾಣುತ್ತೇವೆ. ಗೋವಿಂದ ಅಥವಾ ಕೃಷ್ಣನನ್ನು ಸ್ತುತಿಸುತ್ತ ಅವನು ಹೀಗೆ ಹಾಡುತ್ತಾನೆ –
ಯಸ್ಯ ಪ್ರಭಾ ಪ್ರಭವತೋ ಜಗದ್ ಅಂಡಕೋಟಿ
ಕೋಟಿಶ್ಚಶೇಷ ವಸುಧಾದಿ ವಿಭೂತಿ ಭಿನ್ನಮ್ ।
ತದ್ ಬ್ರಹ್ಮ ನಿಷ್ಕಲಮ್ ಅನಂತಮ್ ಅಶೇಷ ಭೂತಂ
ಗೋವಿಂದಮ್ ಆದಿ ಪುರುಷಂ ತಮ್ ಅಹಂ ಭಜಾಮಿ ॥
(ಬ್ರ.ಸೂ. 5.40)
ಈಗ ನಾವು ನಮ್ಮ ವೈಜ್ಞಾನಿಕ ವಿಧಾನದಿಂದ ಗ್ರಹವ್ಯೂಹ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅತ್ಯಂತ ಹತ್ತಿರದ ಗ್ರಹವಾದ ಚಂದ್ರನನ್ನು ಕುರಿತ ಅಧ್ಯಯನವನ್ನೇ ಪೂರ್ಣಗೊಳಿಸಲು ನಮಗೆ ಸಾಧ್ಯವಾಗಿಲ್ಲ. ಇನ್ನು ಇತರ ಮಿಲಿಯಾಂತರ, ಬಿಲಿಯಾಂತರ ಗ್ರಹಗಳ ವಿಚಾರ ಹೇಳುವುದೇನು? ಆದರೆ ಬ್ರಹ್ಮಸೂತ್ರದಿಂದ ಈ ವಿಚಾರವಾದ ಅರಿವು ನಮಗೆ ದೊರೆಯುತ್ತದೆ: ಯಸ್ಯ ಪ್ರಭಾ ಪ್ರಭವತೋ ಜಗದ್ ಅಂಡ ಕೋಟಿ ಕೋಟಿಃ. ಕೃಷ್ಣನ ಶರೀರದಿಂದ ಹೊರ ಹೊಮ್ಮುತ್ತಿದ್ದ ಕಣ್ಣು ಕೋರೈಸುವಂತಹ ಬೆಳಕಿನಿಂದ ಅಸಂಖ್ಯಾತವಾದ ಬ್ರಹ್ಮಾಂಡಗಳು ಸೃಷ್ಟಿಯಾದವು. ನಾವು ಒಂದು ಬ್ರಹ್ಮಾಂಡವನ್ನು ಕುರಿತು ಕೂಡ ಅಧ್ಯಯನ ಮಾಡಲಾರೆವು. ಆದರೆ ಬ್ರಹ್ಮಸಂಹಿತೆಯಿಂದ ನಮಗೆ ತಿಳಿದು ಬರುವ ಮಾಹಿತಿ ಏನೆಂದರೆ ಅಸಂಖ್ಯಾತವಾದ ಬ್ರಹ್ಮಾಂಡಗಳಿವೆ ಮತ್ತು ಪ್ರತಿಯೊಂದು ಬ್ರಹ್ಮಾಂಡದಲ್ಲೂ ಅಸಂಖ್ಯಾತವಾದ ಗ್ರಹಗಳಿವೆ (ಜಗದ್ ಅಂಡ ಕೋಟಿ ಕೋಟಿಃ). (ಜಗದ್ ಅಂಡ ಎಂದರೆ “ಬ್ರಹ್ಮಾಂಡಗಳು,” ಮತ್ತು ಕೋಟಿ ಕೋಟಿಃ ಎಂದರೆ “ಅಸಂಖ್ಯಾತವಾದ”). ಅಂದರೆ ಅಸಂಖ್ಯಾತವಾದ ಸೂರ್ಯರು, ಅಸಂಖ್ಯಾತವಾದ ಚಂದ್ರರು ಮತ್ತು ಅಸಂಖ್ಯಾತವಾದ ಗ್ರಹಗಳಿಂದ ಕೂಡಿದ ಅಸಂಖ್ಯಾತವಾದ ಬ್ರಹ್ಮಾಂಡಗಳಿವೆ.

ಇವು ಎಲ್ಲವೂ ಕೃಷ್ಣನ ದೇಹದಿಂದ ಹೊರಹೊಮ್ಮುವ ಬೆಳಕಿನಿಂದ ಸಾಧ್ಯವಾದವು. ಆ ಬೆಳಕನ್ನು ಬ್ರಹ್ಮಜ್ಯೋತಿ ಎಂದು ಕರೆಯುತ್ತಾರೆ. ಮಾನಸಿಕ ಊಹಾಪೋಹದಿಂದ, ತಮ್ಮ ಪುಟ್ಟ ಮಿದುಳಿನ ಶಕ್ತಿಯಿಂದ ಪರಮಸತ್ಯವನ್ನು ಸಮೀಪಿಸಲು ಪ್ರಯತ್ನಿಸುತ್ತಿರುವ ಜ್ಞಾನಿಗಳು ಹೆಚ್ಚೆಂದರೆ ಈ ಬ್ರಹ್ಮಜ್ಯೋತಿಯನ್ನು ಸಮೀಪಿಸಬಲ್ಲರು. ಆದರೆ ಆ ಬ್ರಹ್ಮಜ್ಯೋತಿಯು ಕೇವಲ ಕೃಷ್ಣನ ದೇಹದ ಪ್ರಭೆ ಅಷ್ಟೆ. ಉತ್ತಮ ಹೋಲಿಕೆಯೆಂದರೆ ಸೂರ್ಯನ ಬಿಸಿಲು ಅಥವಾ ಸೂರ್ಯಕಿರಣ. ಸೂರ್ಯಕಿರಣವು ಸೂರ್ಯನ ಗೋಳದಿಂದ ಬರುತ್ತದೆ. ಸೂರ್ಯನು ಒಂದು ಕಡೆ ಸ್ಥಿರನಾಗಿದ್ದಾನೆ. ಆದರೆ ಸೂರ್ಯನ ಪ್ರಭೆಯಾದ ಸೂರ್ಯಕಿರಣವು ಬ್ರಹ್ಮಾಂಡದಾದ್ಯಂತ ವಿತರಣೆಯಾಗುತ್ತದೆ. ಚಂದ್ರನು ಸೂರ್ಯನ ಕಿರಣವನ್ನು ಪ್ರತಿಫಲಿಸುವಂತೆ ಸೂರ್ಯನು ಕೂಡ ಬ್ರಹ್ಮಜ್ಯೋತಿಯನ್ನು ಪ್ರತಿಫಲಿಸುತ್ತಾನೆ. ಬ್ರಹ್ಮಜ್ಯೋತಿಯು ಕೃಷ್ಣನ ದೇಹದ ಪ್ರಭೆ.
ಆದ್ದರಿಂದ ಅತ್ಯಂತ ಶ್ರೇಷ್ಠವಾದ ಕಲೆಯೆಂದರೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು. ಅದೇ ಅತ್ಯುನ್ನತವಾದ ಕಲೆ. ನಾವು ನಿಜವಾಗಿಯೂ ಒಬ್ಬ ಕಲಾವಿದನಾಗಬೇಕೆಂದು ಬಯಸಿದ್ದರೆ, ಮಹಾನ್ ಕಲಾವಿದನಾದ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು ಅಥವಾ ನಿಕಟವಾಗಿ ಅವನ ಸಹವಾಸದಲ್ಲಿರಲು ಪ್ರಯತ್ನಿಸಬೇಕು. ಈ ಉದ್ದೇಶಕ್ಕಾಗಿ ನಾವು ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘವನ್ನು ಸ್ಥಾಪಿಸಿದ್ದೇವೆ. ಈ ಸಂಘದ ಸದಸ್ಯರಿಗೆ ಪ್ರತಿಯೊಂದರಲ್ಲೂ ಕೃಷ್ಣನ ಕಲಾತ್ಮಕ ಪ್ರಜ್ಞೆಯ ಪ್ರದರ್ಶನವನ್ನು ಕಂಡುಕೊಳ್ಳಲು ತರಬೇತಿಯನ್ನು ನೀಡಲಾಗಿದೆ. ಅದೇ ಕೃಷ್ಣಪ್ರಜ್ಞೆ – ಕೃಷ್ಣನ ಕಲಾತ್ಮಕ ಕೈಚಳಕವನ್ನು ಎಲ್ಲೆಲ್ಲಿಯೂ ನೋಡುವುದು.
ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ: ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ (10.8): “ನೀವು ಏನೆಲ್ಲವನ್ನು ನೋಡುತ್ತಿದ್ದೀರೋ ಅವೆಲ್ಲವೂ ನನ್ನಿಂದ ಹೊರಸೂಸಿದಂತಹವು. ಪ್ರತಿಯೊಂದೂ ನನ್ನ ಶಕ್ತಿಯಿಂದ ಸೃಷ್ಟಿಯಾಗಿದೆ.” ಪ್ರತಿಯೊಬ್ಬರೂ ಈ ಸತ್ಯಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು – ಅದೆಂದರೆ ಕೃಷ್ಣನೇ ಸಮಸ್ತಕ್ಕೂ ಮೂಲ. ಬ್ರಹ್ಮನು ತನ್ನ ಬ್ರಹ್ಮಸಂಹಿತೆಯಲ್ಲಿ (5.1) ಇದನ್ನು ದೃಢಪಡಿಸಿದ್ದಾನೆ: ಈಶ್ವರಃ ಪರಮಃ ಕೃಷ್ಣಃ “ಕೃಷ್ಣನೇ ಪರಮ ನಿಯಂತ್ರಕ.” ಇಲ್ಲಿ ಈ ಐಹಿಕ ಜಗತ್ತಿನಲ್ಲಿ ನಾವು ಅನೇಕ ನಿಯಂತ್ರಕರ ಅನುಭವವನ್ನು ಪಡೆದಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಒಬ್ಬ ನಿಯಂತ್ರಕರೇ. ನೀವೊಬ್ಬರು ನಿಯಂತ್ರಕರು; ನಾನೊಬ್ಬ ನಿಯಂತ್ರಕ. ಆದರೆ ನಿಮ್ಮ ಮೇಲೆ ಇನ್ನೊಬ್ಬ ನಿಯಂತ್ರಕನಿದ್ದಾನೆ, ಅವನ ಮೇಲೆ ಇನ್ನೊಬ್ಬ ನಿಯಂತ್ರಕನಿದ್ದಾನೆ. ಇತ್ಯಾದಿ. ಹೀಗೆ ನೀವು ಒಬ್ಬರಾದ ಮೇಲೊಬ್ಬರಂತೆ ನಿಯಂತ್ರಕರನ್ನು ಕುರಿತು ಹುಡುಕುತ್ತಾ ಹೋದರೆ ಪರಮ ನಿಯಂತ್ರಕನ ಬಳಿಗೆ ಬರುತ್ತೀರಿ. ಅವನನ್ನು ನಿಯಂತ್ರಿಸುವವರು ಯಾರೂ ಇಲ್ಲ. ಆದರೆ ಅವನೇ ಎಲ್ಲರನ್ನೂ ನಿಯಂತ್ರಿಸುತ್ತಾನೆ – ಅವನೇ ಕೃಷ್ಣ . ದೇವರನ್ನು ಕುರಿತ ನಮ್ಮ ವ್ಯಾಖ್ಯೆ ಅದೇ – ಪರಮ ನಿಯಂತ್ರಕ.

ಇಂದಿನ ಕಾಲದಲ್ಲಿ ಅನೇಕ “ದೇವರು”ಗಳನ್ನು ನೋಡುವುದು ಒಂದು ಅಗ್ಗದ ವ್ಯಾಪಾರವಾಗಿದೆ. ಆದರೆ ಯಾರಾದರೊಬ್ಬರು ದೇವರೇ ಅಲ್ಲವೇ ಎಂದು ನೋಡಲು ನೀವು ಪರೀಕ್ಷಿಸಬಹುದು. ಬೇರೊಬ್ಬರಿಂದ ಅವನು ನಿಯಂತ್ರಿತನಾಗಿದ್ದರೆ ಅವನು ದೇವರಲ್ಲ. ಅವನು ಪರಮ ನಿಯಂತ್ರಕನಾಗಿದ್ದರೆ ಮಾತ್ರ ನೀವು ಅವನನ್ನು ದೇವರೆಂದು ಒಪ್ಪಿಕೊಳ್ಳಬೇಕು. ದೇವರನ್ನು ಕುರಿತ ಸರಳವಾದ ಪರೀಕ್ಷೆ ಅದು.
ದೇವರನ್ನು ಕುರಿತ ಇನ್ನೊಂದು ಗುಣವೆಂದರೆ ಅವನು ಆನಂದಪೂರ್ಣನಾಗಿರುತ್ತಾನೆ. (ಆನಂದಮಯೋಽಭ್ಯಾಸಾತ್). ಸ್ವಭಾವತಃ ದೇವೋತ್ತಮ ಪರಮ ಪುರುಷನು ಆನಂದಮಯ, ಅಂದರೆ ಸಂಪೂರ್ಣವಾಗಿ ಆನಂದಮಯವಾಗಿರುವವನು. ಒಂದು ಪಕ್ಷ ನೀವೊಬ್ಬರು ಕಲಾವಿದ ಎಂದುಕೊಳ್ಳಿ. ಒಂದಿಷ್ಟು ಸಂತೋಷವನ್ನು ಪಡೆಯುವುದಕ್ಕಾಗಿ ಕಲಾಕೃತಿಯ ರಚನೆಯಲ್ಲಿ ನೀವು ತೊಡಗಿಕೊಳ್ಳುತ್ತೀರಿ. ಒಂದು ಚಿತ್ರವನ್ನು ರಚಿಸುವ ಮೂಲಕ ನೀವು ಒಂದು ರಸವನ್ನು ಆಸ್ವಾದಿಸುತ್ತೀರಿ – ಯಾವುದೋ ಒಂದು ಮಧುರವಾದ ಆನಂದ. ಹಾಗಲ್ಲದಿದ್ದರೆ ನೀವು ಅಷ್ಟು ಕಷ್ಟಪಟ್ಟು ಕೆಲಸ ಮಾಡುವುದೇಕೆ? ಚಿತ್ರ ರಚಿಸುವುದರಲ್ಲಿ ಏನೋ ಒಂದು ಆನಂದವಿರಬೇಕು.

ಆದ್ದರಿಂದ ಕೃಷ್ಣನು ರಸೋ ವೈ ಸಃ, ಎಲ್ಲ ಆನಂದ ರಸಗಳ ಭಂಡಾರ. ಅವನು ಸತ್-ಚಿತ್-ಆನಂದ-ವಿಗ್ರಹಃ, ಪೂರ್ಣ ಶಾಶ್ವತಃ ಜ್ಞಾನಿ ಮತ್ತು ಆನಂದ ರೂಪ. ಅವನ ಆನಂದ ಶಕ್ತಿಯು ಶ್ರೀಮತಿ ರಾಧಾರಾಣಿ. ನೀವು ರಾಧಾ ಮತ್ತು ಕೃಷ್ಣರ ಚಿತ್ರಗಳನ್ನು ನೋಡಿದ್ದೀರಿ. ಆದ್ದರಿಂದ ರಾಧಾರಾಣಿಯು ಕೃಷ್ಣನ ಆನಂದ ಶಕ್ತಿಯ ಪ್ರಕಟ ರೂಪ. ನಾನು ಈಗಾಗಲೇ ವಿವರಿಸಿರುವಂತೆ ಕೃಷ್ಣನಿಗೆ ಅಸಂಖ್ಯಾತವಾದ ಶಕ್ತಿಗಳಿವೆ. ಅವುಗಳಲ್ಲಿ ಒಂದು ಅವನ ಆನಂದ ಶಕ್ತಿಯಾದ ರಾಧಾರಾಣಿ.
ಆದ್ದರಿಂದ ದೇವರ ಬಗೆಗೆ ಪ್ರೀತಿಯನ್ನು ಬೆಳೆಸಿಕೊಂಡವರು ಎಲ್ಲೆಲ್ಲೂ ಕೃಷ್ಣನ ಕಲಾತ್ಮಕ ಕೃತಿಯನ್ನು ನೋಡಿ ಪ್ರತಿಕ್ಷಣದಲ್ಲೂ ಲೋಕೋತ್ತರವಾದ ಆನಂದವನ್ನು ಅನುಭವಿಸುತ್ತಾರೆ. ಅದೇ ಒಬ್ಬ ಭಕ್ತನ ಸ್ಥಿತಿ. ಆದ್ದರಿಂದ ಪ್ರತಿಯೊಬ್ಬರೂ ಭಕ್ತರಾಗುವಂತೆ, ಕೃಷ್ಣಪ್ರಜ್ಞಾವಂತರಾಗುವಂತೆ ನಾವು ಪ್ರಾರ್ಥಿಸುತ್ತೇವೆ. ಇದರಿಂದ ನೀವು ಎಲ್ಲೆಲ್ಲಿಯೂ ಕೃಷ್ಣನ ಕಲಾತ್ಮಕ ಕೃತಿಯನ್ನು ನೋಡುತ್ತೀರಿ.
ಕೃಷ್ಣನನ್ನು ಎಲ್ಲೆಲ್ಲಿಯೂ ನೋಡುವುದು ಕಷ್ಟವಲ್ಲ. ಉದಾಹರಣೆಗೆ, ನಿಮಗೆ ಬಾಯಾರಿಕೆಯಾಗಿದೆ ಎಂದಿಟ್ಟುಕೊಳ್ಳೋಣ. ನೀವು ಸ್ವಲ್ಪ ನೀರು ಕುಡಿಯುತ್ತೀರಿ. ಕುಡಿದಾಗ ನಿಮಗೆ ಎಷ್ಟೋ ಆನಂದವಾಗುತ್ತದೆ. ಕೃಷ್ಣನು ಎಲ್ಲ ಆನಂದಗಳ ಭಂಡಾರ (ರಸೋ ವೈ ಸಃ). ಆದ್ದರಿಂದ ನೀರನ್ನು ಕುಡಿಯುವಾಗ ನಿಮಗೆ ಆಗುವ ಆನಂದವು – ಕೃಷ್ಣ. ಭಗವದ್ಗೀತೆಯಲ್ಲಿ (7.8) ಕೃಷ್ಣನು ಹೀಗೆ ಹೇಳುತ್ತಾನೆ: ರಸೋಽಹಮ್ ಅಪ್ಸು ಕೌಂತೇಯ. ನೀರಿನಲ್ಲಿರುವ ರುಚಿಯು ನಾನು.” ಕೃಷ್ಣನನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾಗದ ಸಾಧಾರಣ ವ್ಯಕ್ತಿಗೆ, ನಿಮ್ಮ ನೀರಡಿಕೆಯನ್ನು ಇಂಗಿಸುವ ನೀರಿನಲ್ಲಿರುವ ರುಚಿ ನಾನು ಎಂದು ಕೃಷ್ಣನು ಬೋಧಿಸುತ್ತಾನೆ. ಈ ರುಚಿಯೇ ಕೃಷ್ಣ ಅಥವಾ ದೇವರು ಎಂದು ನೀವು ಅರ್ಥಮಾಡಿಕೊಂಡರೂ ಸಾಕು, ನೀವು ದೈವ ಪ್ರಜ್ಞಾವಂತರಾಗುತ್ತೀರಿ.

ಆದ್ದರಿಂದ ಕೃಷ್ಣ ಪ್ರಜ್ಞಾವಂತರಾಗುವುದು ಅಷ್ಟೇನೂ ಕಷ್ಟವಲ್ಲ. ನಿಮಗೆ ಸ್ವಲ್ಪ ತರಬೇತಿ ಬೇಕು ಅಷ್ಟೆ . ನೀವು ಭಗವದ್ಗೀತಾ ಯಥಾರೂಪವನ್ನು – ಸ್ವತಃ ಕೃಷ್ಣನೇ ನಿರೂಪಿಸಿದ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದು, ಯಾವುದೇ ಧೂರ್ತತನ ಅಥವಾ ಮಿಥ್ಯಾ ವ್ಯಾಖ್ಯಾನವಿಲ್ಲದೆ ಅರ್ಥಮಾಡಿಕೊಳ್ಳುವುದು. ಇದನ್ನು ಓದಿದರೆ ನೀವು ಕೃಷ್ಣಪ್ರಜ್ಞಾವಂತರಾಗುತ್ತೀರಿ. ಹೀಗೆ ನೀವು ಕೃಷ್ಣಪ್ರಜ್ಞಾವಂತರಾದರೆ ನಿಮ್ಮ ಜೀವನವು ಯಶಸ್ವಿಯಾಗುತ್ತದೆ. ನೀವು ಕೃಷ್ಣನೆಡೆಗೆ ಮರಳುತ್ತೀರಿ (ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಮ್ ಏತಿ).
ಆದ್ದರಿಂದ, ಕೃಷ್ಣಪ್ರಜ್ಞಾವಂತರಾಗುವುದರಿಂದ ಯಾವುದೇ ನಷ್ಟವಿಲ್ಲ, ಆದರೆ ದೊರೆಯುವ ಲಾಭವು ಅಪಾರವಾದುದು. ಆದ್ದರಿಂದ ನೀವೆಲ್ಲರೂ ಕೃಷ್ಣಪ್ರಜ್ಞಾವಂತರಾಗಬೇಕೆಂದು ನಾವು ನಿಮ್ಮಲ್ಲಿ ಪ್ರಾರ್ಥಿಸುತ್ತೇವೆ. ಭಗವದ್ಗೀತಾ ಯಥಾರೂಪವನ್ನು ಓದಿ. ಕೃಷ್ಣಪ್ರಜ್ಞಾವಂತರಾಗಲು ನಿಮಗೆ ಅಗತ್ಯವಿರುವ ಎಲ್ಲ ಮಾಹಿತಿಯೂ ನಿಮಗೆ ಅದರಲ್ಲಿ ದೊರೆಯುತ್ತದೆ. ಅಥವಾ ಭಗವದ್ಗೀತೆಯನ್ನು ಓದಲು ನಿಮಗೆ ಇಷ್ಟವಿಲ್ಲದಿದ್ದರೆ ದಯವಿಟ್ಟು ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ / ಹರೇರಾಮ ಹರೇರಾಮ ರಾಮರಾಮ ಹರೇಹರೇ – ಜಪಿಸಿ. ಇದರಿಂದಲೂ ನೀವು ಕೃಷ್ಣಪ್ರಜ್ಞಾವಂತರಾಗುತ್ತೀರಿ.
ವಂದನೆಗಳು.






Leave a Reply