ಆತ್ಮಾನ್ವೇಷಣೆಯ ಪಯಣ

ಮಾನವನ ಈ ಐಹಿಕವಾದ ಬದುಕು ಒಂದು ಒಗಟು; ಒಂದು ಸಮಸ್ಯೆ; ಪ್ರಶ್ನೆಗಳ ಮಾಲೆ.

ಅದರಲ್ಲೂ ಆಧುನಿಕ ಜೀವನವೊಂದು ದಿಗ್ಭ್ರಮೆಗೊಳಿಸುವ ಗೊಂದಲದ ಗೂಡಾಗಿದೆ; ಅಶಾಂತಿ, ಅಸುಖ, ಅನಾಮಕತೆಗಳ ಬೀಡಾಗಿದೆ. ಬದುಕಿನ ಈ ಒಗಟನೊಡೆಯಲು ಪ್ರಯತ್ನಿಸಿದ ಮಹಾನುಭಾವರು ಜಗತ್ತಿನ ಇತಿಹಾಸದಲ್ಲಿ ಹಲವರು. ಅವರಲ್ಲಿ ಅಗ್ರಗಣ್ಯರಾದವರ ಪಂಕ್ತಿಯಲ್ಲಿ ನಿಲ್ಲುತ್ತಾರೆ ಶ್ರೀಲ ಪ್ರಭುಪಾದರು.

ಅವರು “ಭಾರತೀಯ ಆಧ್ಯಾತ್ಮಿಕ ಪರಂಪರೆಯ ಮಹಾನ್‌ ಪ್ರವರ್ತಕರು.” ತಮ್ಮ ಪ್ರಾಚೀನವೂ ಆರ್ಷೇಯವೂ ಆದ ಭವ್ಯ ಭದ್ರ ಪರಂಪರೆಯನ್ನು ಆಧರಿಸಿ, ಕರ್ಮ, ಹುಟ್ಟು, ಸಾವು, ಪುನರ್ಜನ್ಮ ಮುಂತಾದ ಜೀವನ ಪ್ರಶ್ನೆಗಳಿಗೆ ಉತ್ತರವಾಗಿ ಈ “ಆತ್ಮಾನ್ವೇಷಣೆಯ ಪಯಣ” ಎಂಬ ತಾರಕ ಪುಸ್ತಕವನ್ನು ಅವರು ಬರೆದಿದ್ದಾರೆ. ಇದು ಬರಿಯ ಪುಸ್ತಕವಲ್ಲ, “ಮಾರ್ಗದರ್ಶಕ ಮಂತ್ರ ದೀಪ.”

ಮರ್ತ್ಯ ಪ್ರಜ್ಞೆಯನ್ನು ಅಳಿಸಿ, ಅದರ ಸ್ಥಾನದಲ್ಲಿ ಕೃಷ್ಣ ಪ್ರಜ್ಞೆಯನ್ನು ಅರಳಿಸುವ, ದಿವ್ಯ ಪ್ರಜ್ಞೆಯನ್ನು ಪ್ರತಿಷ್ಠಾಪಿಸುವ ಮಹೋದ್ದೇಶ, ಶ್ರೀಲ ಪ್ರಭುಪಾದರದು. ಇಲ್ಲಿ ಅನುಸ್ಯೂತವಾಗಿ ಆತ್ಮವಿಚಾರವಿದೆ; ಆತ್ಮ ಶೋಧನೆಯ ಊರ್ಧ್ವ ಯಾತ್ರೆಯಿದೆ, ಆನಂದ ಸೌಖ್ಯ ಶಾಂತಿಗಳ ಮತ್ತು ಸಾಂತ್ವನದ ಪಥ ಪ್ರದರ್ಶನವಿದೆ.

ಇದರ ವಿಶಿಷ್ಟವಾದ ಬೆಳಕಿನಲ್ಲಿ ವ್ಯಕ್ತಿ ಮತ್ತು ಸಮಾಜ ಸ್ವಸ್ವರೂಪವನ್ನು ಕಂಡುಕೊಂಡು ಸ್ವಸ್ಥತೆಯನ್ನೂ ನಿತ್ಯತೆಯನ್ನೂ ಪಡೆದುಕೊಳ್ಳಬಹುದು; ಆತ್ಮಸಾಕ್ಷಾತ್ಕಾರ, ಉದ್ಧಾರಗಳನ್ನು ಗಳಿಸಿಕೊಳ್ಳಬಹುದು.

ಇದೊಂದು ಆಧ್ಯಾತ್ಮಿಕ ಕೈಪಿಡಿಯಾಗಿದೆ; ಸಾಧಕರ ಒಡನಾಡಿಯಾಗಿದೆ; ಅಮೃತದ ಬುತ್ತಿಯಾಗಿದೆ. ಅಕ್ಷರ ಅಕ್ಷರದಲ್ಲೂ “ಯೋಗಕ್ಷೇಮ ವಹಾಮ್ಯಹಂ” ಎಂಬ ಅಭಯ ಸಂದೇಶ ಸುಧೆಯನ್ನು ಸೂಸುತ್ತಿರುವ ಈ ಅದ್ಭುತ ಗ್ರಂಥ “ಭುವನದ ಭಾಗ್ಯ” ಲೋಕಕ್ಕೆ ಭಾರತ ಬೀರಿದ ಪ್ರಕಾಶ; ಮರುಳುಗಾಡಿನಲ್ಲೊಂದು “ಓಯಸಿಸ್‌”; ಬಂಧನದ ನಡುವೆ ನಂದನ.

ಇದನ್ನು ಕೊಟ್ಟ ಶ್ರೀಲ ಪ್ರಭುಪಾದರು ಎಲ್ಲ ಪರಮಾರ್ಥಾಸಕ್ತರ ಕೃತಜ್ಞತೆಗೆ ಹಾಗೂ ಪೂಜೆಗೆ ನಿಸ್ಸಂದೇಹವಾಗಿ ಭಾಜನರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi