ಅ-ಸಂಯುಕ್ತ ರಾಷ್ಟ್ರ ಸಂಸ್ಥೆ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ವಿಶ್ವ ಸಂಸ್ಥೆಯ ಮಾಜಿ ಉದ್ಯೋಗಿ ಪಿ. ಶರ್ಮ ಅವರ ನಡುವೆ ಪ್ಯಾರಿಸ್‌ನಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ಈ ಬ್ರಹ್ಮಾಂಡದ ಉದ್ದೇಶವೇನೆಂದು ವಿವರಿಸಲು ಒಂದು ಸಂಸ್ಥೆಯಾಗಿ ವಿಶ್ವ ಸಂಸ್ಥೆಯನ್ನು ಕೇಳಿದರೆ? ನಾನು ಮನುಷ್ಯನಾಗಿ ಸೃಷ್ಟಿಸಲ್ಪಟ್ಟೆ, ಮತ್ತೊಂದು ಆನೆಯಾಗಿ, ಮಗದೊಂದು ಇರುವೆಯಾಗಿ. ಏಕೆ ಇದೆಲ್ಲ? ಕಾಲಾನುಸಾರ ಸೂರ್ಯ ಮತ್ತು ಚಂದ್ರೋದಯವಾಗುತ್ತಿದೆ. ಋತುಗಳು ಬದಲಾಗುತ್ತಿವೆ. ಈ ಎಲ್ಲದರ ಹಿಂದಿನ ಉದ್ದೇಶವೇನು?

ಶರ್ಮ : ಬಹುಶಃ ನಿಮಗೆ ಹೇಳಲು ಅವರಿಗೆ ಏನೂ ತೋಚದಿರಬಹುದು.

ಶ್ರೀಲ ಪ್ರಭುಪಾದ : ಅಂದರೆ ಜನರು ಶಿಕ್ಷಣವಿದ್ದರೂ ಮಂಕಾಗಿಬಿಟ್ಟಿದ್ದಾರೆ.

ಶರ್ಮ : ಓ, ಹೌದು. ಇಂದಿನ ಶಿಕ್ಷಣ ಬರೀ ಪುಸ್ತಕ ಜ್ಞಾನವಾಗಿದೆ.

ಶ್ರೀಲ ಪ್ರಭುಪಾದ : ಅಂತಹ ಜ್ಞಾನವನ್ನು ಶ್ರೀಮದ್‌ ಭಾಗವತದಲ್ಲಿ ಕಾಲ ವ್ಯರ್ಥ ಎಂದು ವಿವರಿಸಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಕರ್ತವ್ಯಗಳನ್ನು ಪರಿಪೂರ್ಣವಾಗಿ ನಿರ್ವಹಿಸಿದರೂ, ಅವನು ಸೃಷ್ಟಿಯ ಉದ್ದೇಶವನ್ನು ಅರ್ಥ ಮಾಡಿಕೊಳ್ಳದಿದ್ದರೆ, ತನ್ನ ಕೃಷ್ಣಪ್ರಜ್ಞೆಯನ್ನು ಎಚ್ಚರಗೊಳಿಸದಿದ್ದರೆ, ಅವನು ಏನು ಮಾಡಿದರೂ ಅದು ಕಾಲಹರಣವಷ್ಟೆ. ಅಂದರೆ, ನಮ್ಮ ಅಭಿಪ್ರಾಯವೆಂದರೆ ವಿಶ್ವ ಸಂಸ್ಥೆಯು ಸುಮ್ಮನೆ ಕಾಲಹರಣ ಮಾಡುತ್ತಿದೆ.

ಪ್ರಾಯೋಗಿಕ ದೃಷ್ಟಿಯಿಂದ ನೋಡಿದರೂ ಅವರು ಏನನ್ನಾದರೂ ನೀಡುವುದರಲ್ಲಿಯೂ ಅಸಮರ್ಥರಾಗಿದ್ದಾರೆ. ಯುದ್ಧ ಸ್ಥಗಿತವು ಮೂಲ ಉದ್ದೇಶವಾಗಿತ್ತು. ಆದರೆ, ಎಷ್ಟೊಂದು ಯುದ್ಧಗಳಾಗುತ್ತಿವೆ. ಅವರಿಗೆ ಅವುಗಳನ್ನು ನಿಯಂತ್ರಿಸಲಾಗಿಲ್ಲ. ಅವರು ತಮ್ಮನ್ನು ತಾವು ಸಂಯುಕ್ತ ರಾಷ್ಟ್ರ ಸಂಸ್ಥೆ ಎಂದು ಕರೆದುಕೊಳ್ಳುತ್ತಾರೆ. ವಾಸ್ತವವಾಗಿ ಅವರು ದಿನೇ ದಿನೇ ಅಸಂಯುಕ್ತ ರಾಷ್ಟ್ರ ಸಂಸ್ಥೆ ಆಗುತ್ತಿದ್ದಾರೆ. ಭಗವದ್ಗೀತೆಯ ಪ್ರಕಾರ, ಅವರಿಗೆ ನಿಜವಾಗಿಯೂ ಶಾಂತಿ ಬೇಕೆಂದರೆ ಅವರು ದೇವೋತ್ತಮ ಪರಮ ಪುರುಷನಾದ ಕೃಷ್ಣನು ಪರಮ ಭೋಕ್ತ, ಪರಮ ಮಾಲೀಕ (ಸರ್ವಲೋಕ ಮಹೇಶ್ವರಂ), ಮತ್ತು ಅವನು ಎಲ್ಲರ ಮಿತ್ರ (ಸುಹೃದಂ ಸರ್ವ-ಭೂತಾನಾಂ) ಎಂಬುವುದನ್ನು ಅರಿಯಬೇಕು. ಇದು ಅವರಿಗೆ ಗೊತ್ತಾದರೆ, ಅಲ್ಲಿ ಶಾಂತಿ ಇರುತ್ತದೆ ಎಂದು ಕೃಷ್ಣ ಹೇಳಿದ್ದಾನೆ. ಇಲ್ಲವಾದರೆ, ದೊಡ್ಡ ಕಚೇರಿಗಳಲ್ಲಿ ಅವರ ದೊಡ್ಡ ಸಮಾವೇಶಗಳು ಎಂದಿಗೂ ಯಶಸ್ವಿಯಾಗದು.

ಶರ್ಮ : ಅಂದರೆ ಎಲ್ಲವೂ ಭಗವಂತನಿಗೆ ಸೇರಿದ್ದು ಎಂದು ಅರ್ಥ. ಆ ಒಂದು ಅಂಶದಿಂದ ತಪ್ಪಿಸಿಕೊಳ್ಳಲೆತ್ನಿಸುತ್ತಾರೆ.

ಶ್ರೀಲ ಪ್ರಭುಪಾದ : ಹೌದು, ಅದು ಅವರ ಅಜ್ಞಾನ. ವಿಶ್ವ ಸಂಸ್ಥೆಯು ವಂಚಕ-ವಂಚಿತರ ಸಂಸ್ಥೆ. ಒಬ್ಬರು ವಂಚಿಸಬೇಕೆಂದಿದ್ದರೆ ಮತ್ತೊಬ್ಬರು ವಂಚನೆಗೆ ಒಳಗಾಗಿರುತ್ತಾರೆ. ಇದು ನಮ್ಮ ಅಭಿಪ್ರಾಯ. ವಂಚಕ-ವಂಚಿತರ ಸಂಸ್ಥೆಯೊಂದು ಮಾನವ ಸಮಾಜಕ್ಕೆ ಏನು ಒಳ್ಳೆಯದು ಮಾಡಬಹುದು? ಶಾಂತಿ ಹೊಂದುವುದು ಹೇಗೆಂದೇ ಅವರಿಗೆ ತಿಳಿಯದು. ಆದರೆ ಅವರು ಜಗತ್ತಿಗೇ ಶಾಂತಿ ತರುವ ಘೋಷಣೆ ಮಾಡುತ್ತಿದ್ದಾರೆ. ಆದುದರಿಂದ ಅವರು ವಂಚಕರು.

ಶರ್ಮ : ಯಾವುದನ್ನು ಸರಿಯಾಗಿ ವಿವರಿಸಲಾಗುವುದೋ ಅದು ಮುಖ್ಯ ಎಂದು ಅನೇಕ ಜನರು ಹೇಳುತ್ತಾರೆ. ಉಳಿದ ಯಾವುದೂ ಕೂಡ ಕಾರಣದಾಚೆ –

ಶ್ರೀಲ ಪ್ರಭುಪಾದ : ಆದರೆ ನಮ್ಮ ವಾದಗಳು ನ್ಯಾಯೋಚಿತ. ಈ ಕೋಣೆಯಲ್ಲಿನ ಎಲ್ಲವನ್ನೂ ಸೃಷ್ಟಿಸಲಾಗಿದೆ ಅಲ್ಲವೇ?

ಶರ್ಮ : ಹೌದು.

ಶ್ರೀಲ ಪ್ರಭುಪಾದ : ಮೇಜನ್ನು ಸೃಷ್ಟಿಸಲಾಗಿದೆ, ದೀಪವನ್ನು ಸೃಷ್ಟಿಸಲಾಗಿದೆ, ಯಾರೋ ಎಲ್ಲವನ್ನೂ ಸೃಷ್ಟಿಸಿದ್ದಾರೆ. ಹಾಗಾದರೆ, ಇಡೀ ವಿಶ್ವವನ್ನು ಯಾರೋ ಸೃಷ್ಟಿಸಿದ್ದಾರೆ ಎಂಬ ಅಂಶವನ್ನು ನೀವು ಹೇಗೆ ನಿರಾಕರಿಸುವಿರಿ? ಅದು ಸ್ವಯಂ ಸೃಷ್ಟಿಯಾಯಿತೆಂದು ನೀವು ಹೇಳಿದರೆ ಅದು ಮೂರ್ಖತನ. ಇದನ್ನು ಯಾರೋ ಸೃಷ್ಟಿಸಿದರು. ಆ ಯಾರೋ ಎಂಬುವವರು ಯಾರು? ನಾವು ಸೃಷ್ಟಿಕರ್ತರಲ್ಲ. ಆದುದರಿಂದ ಬೇರೆ ಯಾರೋ ಈ ವಿಶ್ವವನ್ನು ಸೃಷ್ಟಿಸಿದ್ದಾರೆ ಎಂದು ನಾವು ಅರ್ಥ ಮಾಡಿಕೊಳ್ಳಬಹುದು. ಅನಂತರ ನಾವು ಕೇಳಬೇಕು, ಯಾರು ಮಾಲೀಕರು? ನಾನು ಅಥವಾ ಸೃಷ್ಟಿಕರ್ತ?

ಶರ್ಮ : ಸೃಷ್ಟಿಕರ್ತ, ಸಂದೇಹವೇ ಇಲ್ಲ.

ಶ್ರೀಲ ಪ್ರಭುಪಾದ : ಹಾಗಾದರೆ “ಇದು ನನ್ನ ದೇಶ” ಎಂದು ಯಾಕೆ ಹೇಳಿಕೊಳ್ಳುತ್ತಾರೆ?

ಶರ್ಮ : ಅಂದರೆ, ಉದಾಹರಣೆಗೆ, ವಿಶ್ವ ಸಂಸ್ಥೆಯು ಅಮೆರಿಕಕ್ಕೆ ಸೇರಿಲ್ಲ ಎಂದು ನೀವು ಹೇಳಬಯಸುವಿರಾ?

ಶ್ರೀಲ ಪ್ರಭುಪಾದ : ಹೌದು. ಅದು ಅವರಿಗೆ ಸೇರಿದ್ದಲ್ಲ. “ಇದು ನನ್ನದು, ನನ್ನ ಧ್ವಜ” ಎಂದು ಈ ಮೂರ್ಖರು ಹಾರಾಡುತ್ತಿದ್ದಾರೆ. ಆದುದರಿಂದ ಅವರು ವಂಚಕರು. ಅವರೆಲ್ಲ ಒಟ್ಟಾಗಿ ಬೇರೆಯವರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ. “ರಷ್ಯನ್ನರನ್ನು ಹೇಗೆ ವಂಚಿಸಲಿ?” ಎಂದು ಅಮೆರಿಕನ್ನರು ಯೋಚಿಸುತ್ತಾರೆ. ಅದೇ ರೀತಿ “ಅಮೆರಿಕನ್ನರನ್ನು ಹೇಗೆ ವಂಚಿಸಲಿ,” ಎಂದು ರಷ್ಯನ್ನರು ಯೋಚಿಸುತ್ತಾರೆ. ಇದು ನಾಗರಿಕತೆಯೇ – ವಂಚಕರಾಗುವುದು ಮತ್ತು ಸಮ್ಮೇಳನಗಳಲ್ಲಿ ಕಾಲ ಹರಣ ಮಾಡುವುದು ? ಇದು ನಾಗರಿಕತೆಯೇ ?

ಭಕ್ತ : ಇಲ್ಲ, ಖಂಡಿತ ಅಲ್ಲ.

ಶ್ರೀಲ ಪ್ರಭುಪಾದ : ಅಮೆರಿಕದಲ್ಲಿ, ಅವರು ರೆಡ್‌ ಇಂಡಿಯನ್ನರನ್ನು ವಂಚಿಸಿದರು. ಅವರಿಗೆ ಭೂಮಿ ದೊರೆಯಿತು. ಈಗ ಹೇಳಿಕೊಳ್ಳುತ್ತಿದ್ದಾರೆ, “ಇದು ನನ್ನದು,” ಎಂದು. ಈ ಭೂಮಿ ನಿಮಗೆ ಎಲ್ಲಿಂದ ಬಂತು? ನೀವು ರೆಡ್‌ ಇಂಡಿಯನ್ನರನ್ನು ವಂಚಿಸಿದಿರಿ. ಈಗ ಭೂಮಿ ನನ್ನದೇ ಎಂದು ಹೇಳಿಕೊಳ್ಳುತ್ತಿದ್ದೀರಿ. ಜಗತ್ತಿನಾದ್ಯಂತ ಇದೇ ಕಥೆ. “ಫ್ರಾನ್ಸ್‌ ನನ್ನದು,” ಎಂದು ನೆಪೋಲಿಯನ್‌ ಯೋಚಿಸಿದ. ಈಗ ಫ್ರಾನ್ಸ್‌ ಇದೆ. ಆದರೆ ನೆಪೋಲಿಯನ್‌ ಎಲ್ಲಿದ್ದಾನೆ? ಈಗ ಅವನೆಲ್ಲಿ ಬದುಕಿದ್ದಾನೆ? ಫ್ರಾನ್ಸ್‌, ನರಕ ಅಥವಾ ಸ್ವರ್ಗ? ಎಷ್ಟೊಂದು ಸ್ಥಳಗಳು ಮತ್ತು ಜೀವ ರೂಪಗಳಿವೆ. ಈ ದೇಹದಲ್ಲಿ, ಈ ಬದುಕಿನಲ್ಲಿ ನಾನು ರಾಷ್ಟ್ರೀಯವಾದಿಯಾಗಿ ಕೆಲಸ ಮಾಡುತ್ತಿರಬಹುದು – ನೆಪೋಲಿಯನ್‌ ಆಗಿ ಅಥವಾ ಗಾಂಧೀಜಿಯಾಗಿ ಅಥವಾ ವಿಶ್ವ ಸಂಸ್ಥೆಯಲ್ಲಿ ಒಬ್ಬ ಹೋರಾಟಗಾರನಾಗಿ. ಆದರೆ, ಈ ದೇಹ ಮುಗಿದ ಕೂಡಲೇ, ನನಗೆ ಮತ್ತೊಂದು ದೇಹ ಸಿಗುತ್ತದೆ. ಹೀಗಾಗಿ, ನನ್ನ ಹಿಂದಿನ ಜನ್ಮದ ಅವಧಿಯು ವ್ಯರ್ಥವಾಗಿದೆ.

ಶರ್ಮ : ಓ…

ಶ್ರೀಲ ಪ್ರಭುಪಾದ : ವ್ಯರ್ಥವಾಗಿದೆ. ಅವರು ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ಅವರಿಗೆ ಪರಿಪೂರ್ಣ ಜ್ಞಾನವಿಲ್ಲ – ಕೆಲವು ಆದರ್ಶವಾದ ಸಲಹೆಗಳು. ಅವರು ನಾಗರಿಕತೆಯಲ್ಲಿ ಮುಂದುವರಿದವರೆಂಬಂತೆ ಆಡುತ್ತಿದ್ದಾರೆ. ಬದುಕಿನ ಉದ್ದೇಶವನ್ನು ಅವರು ಅರಿಯಬೇಕು – ಈ ಬ್ರಹ್ಮಾಂಡದ ರೂಪದೊಂದಿಗೆ ಏನು ಸಂಬಂಧ? ಸೃಷ್ಟಿಕರ್ತ ಇರಲೇಬೇಕಲ್ಲವೇ? ಹಾಗಾದರೆ, ಯಾರು ಅದು? ಅವನೊಂದಿಗೆ ನನ್ನ ಸಂಬಂಧವೇನು? ಆದರೆ ಅವರು ಇದನ್ನೆಲ್ಲ ನಿರ್ಲಕ್ಷಿಸುತ್ತಿದ್ದಾರೆ ಮತ್ತು ವಿಶ್ವ ನಾಯಕರಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ.

ಶರ್ಮ : ಅದು ಅತಿ ಕೆಟ್ಟ ಸರಕಾರ. ಪ್ರತಿ ದೇಶವೂ ತನ್ನಷ್ಟಕ್ಕೆ ಮಾತ್ರ ಎಂದು ನೀವು ಹೇಳಿದುದ್ದೇ ಅವರ ಗುಣಮಟ್ಟವಾಗಿರುವಂತೆ ಕಾಣುತ್ತಿದೆ.

ಶ್ರೀಲ ಪ್ರಭುಪಾದ : ಆದರೆ ಮಾನವರು ಈ ಭ್ರಮೆಯಿಂದ ಹೊರಬರಬಹುದು. ಮುಖ್ಯವಾಗಿ, ವೈದಿಕ ಗ್ರಂಥಗಳಲ್ಲಿ ಅಪಾರವಾದ ಜ್ಞಾನವಿದೆ. ಈ ಜ್ಞಾನದ ಸದುಪಯೋಗಪಡಿಸಿಕೊಂಡು ಯಾಕೆ ಅವರ ಬದುಕನ್ನು ಯಶಸ್ವಿಯಾಗುವಂತೆ ಮಾಡಬಾರದು? ಇದು ನನ್ನ ಸಲಹೆ. ಜನರು ಮುಖ್ಯವಾದ ಅಂಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಭ್ರಮಾಲೋಕದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಆದುದರಿಂದ ನಾವು ನಮ್ಮ ಕೃಷ್ಣಪ್ರಜ್ಞೆ ಆಂದೋಲನದ ಮೂಲಕ ಅವರನ್ನು ಕಾಪಾಡಲು ಪ್ರಯತ್ನಿಸುತ್ತಿದ್ದೇವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi